Poem

ತೆರೆದ ಪೆಟ್ಟಿಗೆ

ಎಲ್ಲವನ್ನು ಅಮೂರ್ತವಾಗೇ
ಕಾಣುವ ನನ್ನ ನೋಟ
ನಿಮಗೆ ಅಪಾಯ‌‌‌-ಅಸಹ್ಯ
ಎಂದನಿಸಿದಾಗ ನಾನು ನಿಮ್ಮ
ಮುಂದೆ ತೆರೆದ ಪೆಟ್ಟಿಗೆ
ಇಡುವೆ ಅಲ್ಲಿ ನಿಮ್ಮ
ಅಸೂಯೆ-ಆರೋಪ
ಎಲ್ಲವನ್ನೂ ಒಗೆಯಿರಿ
ಮುಚ್ಚಳದ ಸಮೇತ
ನಿಮ್ಮ ವ್ಯಕ್ತಿತ್ವದ
ಪ್ರದರ್ಶನವನ್ನೇ ನಿಮ್ಮ
ಕೈಗೆ ನೀಡುವೆ
ಎಂದಿಗೂ ಅದನ್ನು
ತೆರೆಯಬೇಡಿ ತೆರೆದರೂ
ಅದರೊಳಗಿನ ನಿಮ್ಮ
ಎಲ್ಲವೂ ನಿಮ್ಮ ಕಣ್ಣುಗಳಿಗೆ
ರಾಚುತ್ತವೆ ಕಾಡುತ್ತವೆ
ಎಂದಾದರೊಂದು ದಿನ
ನನ್ನ ಹಾಡಿಗೂ ತಲೆದೂಗಿ
ನನ್ನ ರೇಖೆಗೆ ಬಣ್ಣ ತುಂಬಿರಿ
ನನ್ನೀ ಹಾಡು- ಗೆರೆಗಳು ನಿಮಗಾಗೆ
ಉಲಿಯುತ್ತವೆ..ಆಗ ನಾನೂ
ನಿಮ್ಮಂಥೆ ಆಗಸ ನೀಲಿಯಾಗೆ ಇದೆ
ನೀರಿಗೆ ಬಣ್ಣವೇ ಇಲ್ಲ
ಗಾಳಿಗೆ ರೂಪವಿಲ್ಲ ಎಂಬೆಲ್ಲಾ
ನಗ್ನ ಸತ್ಯಗಳ ನಂಬುವೆ
ಕಲ್ಪನೆಗಳ ಮೀರಿ ವಾಸ್ತವದಲ್ಲಿ
ಬದುಕುವೆ..ನಾನು ಮಾದರಿಯಾಗುವೆ..

- ಸಂಘಮಿತ್ರೆ ನಾಗರಘಟ್ಟ

ಆಡಿಯೋಟ್ಟ

ಸಂಘಮಿತ್ರೆ ನಾಗರಘಟ್ಟ

ಮೂಲತಃ ತಿಪಟೂರಿನವರು. ತಂದೆ ಎನ್.ಕೆ ಹನುಮಂತಯ್ಯ, ತಾಯಿ ಶೈಲಜ ನಾಗರಘಟ್ಟ. ಆಂಗ್ಲ ಭಾಷೆಯಲ್ಲಿ ಎಂ.ಎ ಪದವಿ ಪಡೆದಿರುವ ಇವರು ರೇಖಾಚಿತ್ರ, ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರೊಟ್ಟಿಗೆ ಹಿಮಪಕ್ಷಿ ಎಂಬ ಮುಖ ಸಂಪುಟ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ.

More About Author