Story

ತೀರ್ಪು

ಒಡಲುಗೊಂಡವ ಹಸಿವ 
ಒಡಲುಗೊಂಡವ ಹುಸಿವ 
ಒಡಲುಗೊಂಡವನೆಂದು, ನೀನೆನ್ನ
ಜರಿದೊಮ್ಮೆ ನುಡಿರದಿರ! ನೀನೆನ್ನಂತೆ
ಒಮ್ಮೆ ಒಡಲುಗೊಂಡು ನೋಡ.     
ದಾಸಿಮಯ್ಯನ ವಚನದ ಈ ಸಾಲುಗಳಿಗೆ ನಂದು ಜೀವಂತ ಸಾಕ್ಷಿಯಾಗಿದ್ದನು. ಹಸಿವಿನ ಭಾದೆ ಅವನನ್ನು ಕಿತ್ತು ತಿನ್ನತೊಡಗಿತ್ತು. ನಾಲ್ಕು ದಿನಗಳಿಂದ ತುತ್ತು ಅನ್ನವನ್ನೂ ತಿಂದಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಸಿವು ರಣಕೇಕೆ ಹಾಕುತ್ತಿತ್ತು. ಅನ್ನಕ್ಕಾಗಿ ಬೀದಿ ಬೀದಿ ಅಲೆದು ಸುಸ್ತಾಗಿದ್ದನು. ಅಲ್ಲೊಬ್ಬ ದಢೂತಿ ಹೆಂಗಸು ನಾಯಿಗೆ ಅನ್ನ ಹಾಕುತ್ತಿರುವುದನ್ನು ಕಂಡನು. ಅತ್ತ ಹೆಜ್ಜೆ ಹಾಕಿದನು. ಅಮ್ಮಾ....! ನನಗೂ ಒಂದು ತುತ್ತು ಅನ್ನ ಹಾಕಮ್ಮಾ.... ಎಂದು ದೈನೇಸಿಯಾಗಿ ಬೇಡಿದನು. ನಿನಗೇನು ಧಾಡಿ ದುಡಕ್ಕಂಡು ತಿನ್ನ ಹೋಗು ಅಂದಳು ಆ ಹೆಂಗಸು. ಅವಳ ನಾಯಿ ಹಳಸಿದ ಅನ್ನಕ್ಕೆ ಬಾಯಿ ಹಾಕಿತು. ನನ್ನ ಅನ್ನ ಕಸಿದುಕೊಳ್ಳಲು ಬಂದ್ರ ನಾನು ಸುಮ್ನಿರಲ್ಲ ನೋಡು ಎನ್ನುವಂತೆ ನಾಯಿ ಗೊರ್ ಎಂದಿತು. ನಂದು ನಾಯಿ ಅನ್ನ ತಿನ್ನುವುದನ್ನೇ ನೋಡುತ್ತ ಮುಂದಕ್ಕೆ ಹೆಜ್ಜೆ ಹಾಕಿದನು. ನಿನಗೇನು ಧಾಡಿ ದುಡಕ್ಕಂಡು ತಿನ್ನ ಹೋಗು ಅಂದ ಆ ಹೆಂಗಸಿನ ಮಾತು ಅವನ ಕಿವಿಯಲ್ಲಿ ಮರುಧ್ವನಿಸಿತು. ನನಗೆ ಕೆಲ್ಸ ಇದ್ದಿದ್ರ ನಾನ್ಯಾಕ ದೈನೇಸಿಯಾಗಿ  ಬೇಡ್ತಿದ್ದೆ, ನಾನೂ ರಟ್ಟೆಮುರ್ದು. ಹೊಟ್ಟೆ ತುಂಬಿಸಿಕೊಳ್ಳುತಿದ್ದವನು. ತನ್ನ ಕೆಲಸಾನ ಯಾರು ಕಸ್ಗಂಡ್ರು. ತಾನು ಯಾಕೆ ಹಿಂಗ ಬೀದಿಗೆ ಬಿದ್ದೆ ಎಂಬುದು ಅವನಿಗೆ ಗೊತ್ತಿರಲಿಲ್ಲ. ಯಾವ್ದೋ ಬರಬಾರ್ದ ರೋಗ ಬಂದು ಜನ ಸಾಯಾಕತ್ತಾರಂತ. ನಾಳೆಯಿಂದ ಕೆಲ್ಸಕ್ಕೆ ಬರಬ್ಯಾಡ ಅಂತ ಮೇಸ್ತ್ರಿ ಹೇಳಿದ್ದು ಅಷ್ಟೇ ಅವನಿಗೆ ಗೊತ್ತು. ರಟ್ಟೆ ಮುರುದ್ರ ಹೊಟ್ಟೆಗೆ ಹಿಟ್ಟು. ಈಗ ರಟ್ಟೆಗೆ ಕೆಲ್ಸನೂ ಇಲ್ಲ ಹೊಟ್ಟೆಗೆ ಹಿಟ್ಟೂ ಇಲ್ಲ. ಏನು ಮಾಡೋದು! ಎಂದು ವ್ಯಸನ ಮಾಡುತ್ತಾ ಸೋತ ಕಾಲುಗಳನ್ನು ಎಳೆದು ಹಾಕತೊಡಗಿದ್ದನು. ನಂದು ಆ ಓಣಿಯನ್ನು ದಾಟಿ ಮುಖ್ಯರಸ್ತೆಗೆ ಕಾಲಿರಿಸಿದನು.

ನಿರ್ಜನವಾಗಿದ್ದ ರಸ್ತೆ ಬಿಕೋ..ಎನ್ನುತ್ತಿತ್ತು. ಒಂದು ನರಪಿಳ್ಳೆಯೂ ಇರಲಿಲ್ಲ. ವಾಹನಗಳ ಓಡಾಟವಿಲ್ಲದೆ ನಿಶ್ಯಬ್ಧವಾಗಿತ್ತು. ಲಾಕ್‍ಡೌನ್ ಆದಾಗಿನಿಂದ ಅಂಗಡಿಗಳು, ಮಾಲ್‍ಗಳು, ಹೋಟೆಲ್, ಸಿನಿಮಾ ಮಂದಿರ, ವೈನ್‍ಶಾಪ್, ಬಂಗಾರ ಅಂಗಡಿಗಳನ್ನೆಲ್ಲಾ ಬಂದ್ ಮಾಡಿ ಬೀಗ ಜಡಿಯಲಾಗಿತ್ತು. ರಸ್ತೆ ಸತ್ತ ಹೆಬ್ಬಾವಿನಂತೆ ಮಲಗಿತ್ತು. ಸಂತೆ ಖಾಲಿಯಾಗಿ ಬಣ ಬಣ ಎನ್ನುತ್ತಿತ್ತು. ತನ್ನ ಲವಲವಿಕೆಯನ್ನೆಲ್ಲಾ ಕಳೆದುಕೊಂಡ ನಗರ ಉಸಿರಾಟವನ್ನು ನಿಲ್ಲಿಸಿದಂತೆ ಕಾಣುತ್ತಿತ್ತು. ನಂದು ಸುತ್ತಲೂ ಕಣ್ಣಾಡಿಸಿದನು. ನಾಯಿ, ಹಂದಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದವು. ನೆತ್ತಿಯ ಮೇಲಿದ್ದ ಸೂರ್ಯ ಕೆಂಡದಂತ ಬಿಸಿಲು ಸುರಿಸುತ್ತಿದ್ದನು. ನಂದುವಿಗೆ ಅದಾವುದರ ಪರಿವೆ ಇರಲಿಲ್ಲ. ಅವನಿಗಿರುವುದೊಂದೇ ಚಿಂತೆ ಹಸಿವು... ಹಸಿವು.... ಹಸಿವು.... ಹಸಿವಾದೊಡೆ ಭಿಕ್ಷಾನ್ನಗಳುಂಟು. ತೃಷೆಯಾದೊಡೆ ಕೆರೆಬಾವಿಗಳುಂಟು ಎಂಬುದು ಅಕ್ಕನ ಮಾತು. ಆದರೆ ಲಾಕ್‍ಡೌನ್ ಅವನಿಗೆ ಭಿಕ್ಷಾನ್ನವೂ ಸಹ ದೊರಕದಂತಹ ಹೀನ ಸ್ಥಿತಿಯನ್ನು ತಂದೊಡ್ಡಿತ್ತು. ಅನ್ನ ಗಳಿಕೆಯ ದಾರಿ ಯಾವುದೂ ಅವನ ಮುಂದಿರಲಿಲ್ಲ. ನಿತ್ರಾಣದಿಂದ ಬವಳಿ ಬಂದಂತಾಗಿ ಕಣ್ಣು ಮಸುಕಾದವು. ಬೀಗ ಹಾಕಿದ ಹೋಟೆಲ್‍ನ ಮುಂದೆ ಒಂದು ಕ್ಷಣ ಕುಸಿದುಕುಳಿತನು. ಸಾವರಿಸಿಕೊಂಡು ನಿಧಾನಕ್ಕೆ ಕಣ್ಣು ತೆರೆದನು. ಎದುರಿಗಿರುವ ಕಿರಾಣಿ ಅಂಗಡಿ ಕಣ್ಣಿಗೆ ಬಿತ್ತು. ಅದು ಅವನಿಗೆ ಪರಿಚಯವಿರುವ ರಾಜಾರಾಮ್ ಜನರಲ್ ಸ್ಟೋರ್ಸ್. ಮಂಗಳವಾರ ಬಟವಾಡೆ ದಿನ ತನಗೆ ಬೇಕಾದ ಕಿರಾಣಿ ಸಾಮಾನುಗಳನ್ನು ಆ ಅಂಗಡಿಯಲ್ಲಿ ಖರೀದಿಸುತ್ತಿದ್ದನು. ತೂಕ ಮತ್ತು ಗುಣಮಟ್ಟಕ್ಕೆ ಹೆಸರಾಗಿದ್ದ ರಾಜಾರಾಮ್ ಸ್ಟೋರ್ಸ್‍ನಲ್ಲಿ ಹೋಲ್‍ಸೇಲ್ ಬೆಲೆಯಲ್ಲಿ ಸಾಮಾನುಗಳು ದೊರೆಯುತ್ತಿದ್ದವು. ಹಾಗಾಗಿ ಆ ಅಂಗಡಿಯ ಮುಂದೆ ಜನ ಕಿಕ್ಕಿರಿದು ನಿಂತಿರುತ್ತಿದ್ದರು. ಬೆಳ್ಳಿಗೆಯಿಂದ ರಾತ್ರಿಯ ತನಕ ತುಂಬಾ ಭರಾಟೆಯಿಂದ ವ್ಯಾಪಾರ ವಹಿವಾಡು ನಡೆಯುತ್ತಿತ್ತು. ನಂದು ಕಳೆದ ಮೂರು ವರ್ಷಗಳಿಂದ ಆ ಅಂಗಡಿಯ ಖಾಯಂ ಗಿರಾಕಿಯಾಗಿದ್ದನು. ಬೀಗ ಹಾಕಿದ್ದ ಅಂಗಡಿಯನ್ನು ತದೇಕ ಚಿತ್ತದಿಂದ ನೋಡಿದನು. ಹೊಟ್ಟೆಯನ್ನು ಸವರಿಕೊಂಡನು. ಗುಳಿ ಬಿದ್ದ ಕಣ್ಣುಗಳಲ್ಲಿ ಮಿಂಚಿನ ಸಂಚಾರವಾಯಿತು. ಅನ್ನ ಬೇಕೆಂದರೆ ಕನ್ನ ಹಾಕು ಎಂದು ಅವನ ಮನಸ್ಸು ಹೇಳಿತು. ಕನ್ನ ಹಾಕುವ ಯೋಚನೆ ಅವನ ಬಡಕಲು ದೇಹಕ್ಕೆ ಕಸುವು ತುಂಬಿತು. ಮೈ ಕೊಡವಿ ಮೇಲೆದ್ದನು. ಸುತ್ತಲೂ ಒಮ್ಮೆ ಕಣ್ಣಾಡಿಸಿದನು. ಯಾರೂ ಇರಲಿಲ್ಲ. ಇದೇ ಸರಿಯಾದ ಸಮಯ ಎಂದುಕೊಂಡು ಅಂಗಡಿಯ ಕಡೆಗೆ ಹೆಜ್ಜೆ ಹಾಕಿದನು. ಬೀಗ ಮುರಿದು ಒಳಹೊಕ್ಕನು. ತನಗೆ ಬೇಕಾದ ಸಾಮಾನುಗಳನ್ನು ಚೀಲದಲ್ಲಿ ತುಂಬಿಕೊಂಡನು. ಇನ್ನೇನು ಪರಾರಿಯಾಗಬೇಕೆನ್ನುವಷ್ಟರಲ್ಲಿ ಪೊಲೀಸ್ ಜೀಪೊಂದು ಅಂಗಡಿಯ ಮುಂದೆ ಬಂದು ನಿಂತಿತು. ಪೋಲೀಸರು ಮಾಲು ಸಮೇತ ಅವನನ್ನು ಹಿಡಿದರು. ತಪ್ಪಿಸಿಕೊಳ್ಳಲು ಕೊಸರಾಡಿದನು. ಮೈ ಮೇಲೆ ಲಾಠಿ ಏಟುಗಳು ಬಿದ್ದ ಮೇಲೆ ನಂದು ಕೊಸರಾಡುವುದನ್ನು ನಿಲ್ಲಿಸಿದನು. ಬಡ್ಡೀ... ಮಗನೇ ಕಳ್ಳತನ ಮಾಡ್ತೀಯಾ... ಆರು ತಿಂಗ್ಳು ಕಂಬಿ ಎಣಸಂಗ ಮಾಡ್ತೀವಿ ಬಾ ಎಂದು ಪೊಲೀಸರು ನಂದುವನ್ನು ಎಳೆದೊಯ್ದರು.         

ನಂದು ಅಪ್ರಾಪ್ತ ವಯಸ್ಕನಾಗಿದ್ದುದರಿಂದ ಪೊಲೀಸರು ಅವನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಅವನನ್ನು ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿದರು. ನಡು ಬಗ್ಗಿಸಿ ಕೈಕಟ್ಟಿಕೊಂಡು ನಿಂತಿದ್ದ ಅವನು ಬೆದರಿದ ಬೆಕ್ಕಿನಂತೆ ಕಾಣುತ್ತಿದ್ದನು. ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ಆಕಡೆ ಈಕಡೆ ನೋಡುತ್ತಿದ್ದನು. ಅವನ ಹಾವಭಾವನನ್ನು ನ್ಯಾಯಾಧೀಶರು ಸೂಕ್ಷ್ಮವಾಗಿ ಗಮನಿಸದರು. ಅವರು ಮಕ್ಕಳ ಮನಶಾಸ್ತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಕಣ್ಣ ನೋಟದಲ್ಲೇ ಮನಸ್ಸನ್ನು ಓದಬಲ್ಲವರಾಗಿದ್ದರು. ಅಷ್ಟೇ ಅಲ್ಲ ಅವರೊಬ್ಬ ಹೃದಯ ಶ್ರೀಮಂತಿಕೆಗೆ ಹೆಸರಾದ ವ್ಯಕ್ತಿಯಾಗಿದ್ದರು. ಸತ್ಯದ ತಳಹದಿಯ ಮೇಲೆ ನ್ಯಾಯಪರಿಪಾಲನೆ ಮಾಡುತ್ತಾ ಬಂದಿದ್ದರು. ಅವರೆಂದೂ ಸಾಕ್ಷಿಗಳನ್ನು ನಂಬಿ ನ್ಯಾಯ ನಿರ್ಣಯ ಮಾಡಿದವರಲ್ಲ. ಸತ್ಯದ ಆಧಾರದಲ್ಲಿ ನ್ಯಾಯ ನಿರ್ಣಯ ಮಾಡುತ್ತಿದ್ದರು. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಬಾಲಚಂದರ್ ಸಾಹೇಬರು ಇಲಾಖೆಯಲ್ಲಿ ಮಾತ್ರವಲ್ಲ, ಸಮಾಜದಲ್ಲಿಯೂ ಗೌರವ ಸ್ಥಾನ ಗಳಿಸಿದ್ದರು. ನಂದುವಿನ ಮುಖ ಚರ್ಯೆಯನ್ನು ನೋಡಿದರೆ ಅವನೊಬ್ಬ ಕಸಬುದಾರ ಕಳ್ಳನಲ್ಲ. ಪರಿಸ್ಥಿತಿಯ ಒತ್ತಡದಿಂದ ಇಂತಹ ಕೃತ್ಯ ಎಸಗಿರಬಹುದು ಎಂದು ಬಾಲಚಂದರ್ ಊಹಿಸಿದರು. ತಮ್ಮ ಊಹೆಯನ್ನು ಖಾತ್ರಿ ಪಡಿಸಿಕೊಳ್ಳಲು ಪೊಲೀಸರು ಸಲ್ಲಿಸಿದ ಚಾರ್ಜ್‍ಶೀಟ್ ಮೇಲೆ ಕಣ್ಣಾಡಿಸಿದರು. ಮಹಜರು ವರದಿಯನ್ನು ಪರಿಶೀಲಿಸಿದ ಮೇಲೆ ಬಾಲಚಂದರ್ ಸಾಹೇಬರ ಕಣ್ಣಲ್ಲಿ ಮಿಂಚೊಂದು ಸಂಚರಿಸಿತು. ಹೌದು...! ತಾನು ಅಂದುಕೊಂಡದ್ದು ಸರಿಯಾಗಿದೆ ಅಂದುಕೊಂಡರು. ಅವರ ಮುಖ ಗೆಲುವಾಯಿತು. ಸ್ಥಳ ಪಂಚನಾಮೆಯನ್ನು ಮತ್ತೊಮ್ಮೆ ಮಗದೊಮ್ಮೆ ಪರಿಶೀಲಿಸಿದರು.

ನಂದು ಕಳ್ಳತನ ಮಾಡಿದ ಕಿರಾಣಿ ಅಂಗಡಿಯ ಎಡಗಡೆ ಬಂಗಾರದ ಅಂಗಡಿ ಇದೆ. ಬಲಗಡೆ ಟಿ.ವಿ. ಅಂಗಡಿ, ಎದುರುಗಡೆ ಹೋಟೆಲ್ ಇದೆ ಎಂದು ಬರೆದಿದ್ದ ಚಕ್ಕು ಬಂದಿಯ ಮೇಲೆ ಮತ್ತೆ ಮತ್ತೆ ಕಣ್ಣಾಡಿಸಿದರು. ಬೆಲೆಬಾಳುವ ವಸ್ತುಗಳಿರುವ ಅಂಗಡಿಗಳನ್ನು ಬಿಟ್ಟು ನಂದು ಕಿರಾಣಿ ಅಂಗಡಿಯನ್ನೇ ಕನ್ನ ಹಾಕಲು ಕಾರಣವೇನು? ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಮೂಡಿತು. ತಮ್ಮ ಅನುಮಾನವನ್ನು ಖಾತ್ರಿಪಡಿಸಿಕೊಳ್ಳಲು ನಂದುವನ್ನು ಪ್ರಶ್ನಿಸಿದರು. ನೀನು ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ ಸಕ್ಕರೆ ಇಂತಹ ಅಗ್ಗದ ಸಾಮಾನುಗಳನ್ನು ಕದಿಯುವ ಬದಲು ಪಕ್ಕದಲ್ಲಿದ್ದ ಬಂಗಾರದ ಅಂಗಡಿಗೆ ಕನ್ನ ಹಾಕಿದ್ದರೆ, ಶ್ರೀಮಂತನಾಗಬಹುದಿತ್ತಲ್ಲವೇ? ಎಂಬ ಜಡ್ಜ್ ಸಾಹೇಬರ ಪ್ರಶ್ನೆಯನ್ನು ಕೇಳಿ ನಂದು ತಲೆಕೆರೆದುಕೊಂಡನು. ತನ್ನ ಅಂಗಿಯನ್ನು ಮೇಲೆತ್ತಿ ಹೊಟ್ಟೆಯನ್ನು ತೋರಿಸಿ, ಮೂರು ದಿನಗಳಿಂದ ಊಟ ಮಾಡಿಲ್ಲ ಎಂದು ದೈನ್ಯದಿಂದ ನುಡಿದನು. ನಂದುವಿನ ಹೊಟ್ಟೆ ಬೆನ್ನಿಗಂಟಿತ್ತು. ಅವನ ಮಾತುಗಳನ್ನು ಕೇಳಿ ಬಾಲಚಂದರ್ ಬೆಚ್ಚಿಬಿದ್ದರು. ಅವನ ಧಾರುಣ ಸ್ಥಿತಿಯನ್ನು ಕಂಡು ಅವರ ಕರುಳು ಚುರ್ರೆಂದಿತು. ಆ ಕ್ಷಣದಲ್ಲಿ ಅವರ ಕಣ್ಣ ಮುಂದೆ ತಮ್ಮ ಮಗ ಪ್ರಸೂದ್‍ನ ಮುಖ ಮೂಡಿಬಂದಿತು. ರಸಭರಿತ ಟೊಮ್ಯಾಟೋ ಹಣ್ಣಿನಂತೆ ಪ್ರಸೂದ್‍ನ ಮುಖ ದುಂಡು ದುಂಡಾಗಿತ್ತು. ಸುಖದಿಂದ ಮೈಕೈ ತುಂಬಿಕೊಂಡು ನಳನಳಿಸುತ್ತಿದ್ದ ಪ್ರಸೂದ್‍ನೊಡನೆ ನಂದುವಿನ ದೇಹವನ್ನು ಹೋಲಿಸಿನೋಡಿದರು. ಎಷ್ಟೊಂದು ವ್ಯತ್ಯಾಸ. ಯಾವ ಕೊರತೆಯೂ ಇಲ್ಲದೆ ಸುಖದ ಸುಪ್ಪತ್ತಿಗೆಯಲ್ಲಿದ್ದ ಪ್ರಸೂದ್ ಎಲ್ಲಿ! ನಂದು ಎಲ್ಲಿ. ನಂದುವಿನ ಗುಳಿಬಿದ್ದ ಕಣ್ಣುಗಳಲ್ಲಿ ಜೀವಕಳೆಯೇ ಇರಲಿಲ್ಲ. ಬಾಲಚಂದರ್‍ರವರ ಕಣ್ಣಿಗೆ ಅವನು ಜೀವಂತ ಶವದಂತೆ ಕಂಡನು. ನಂದು ಮತ್ತು ಪ್ರಸೂದ್ ಎರಡು ವಿರೋಧಾಭಾಸದ ಪ್ರತೀಕಗಳಂತೆ ಬಾಲಚಂದರ್ ಅವರಿಗೆ ಗೋಚರಿಸಿದರು. ಎರಡು ಭಾರತಗಳ ಪ್ರತೀಕ ಅವರಾಗಿದ್ದರು. ಒಂದು ಭವ್ಯ ಭಾರತ. ಮತ್ತೊಂದು ನತದೃಷ್ಟ ಭಾರತ. ಪ್ರಸೂದ್ ಭವ್ಯ ಭಾರತದ ಪ್ರತೀಕದಂತೆ ಕಂಡರೆ, ನಂದು ನತದೃಷ್ಟ ಭಾರತದ ಪ್ರತೀಕದಂತೆ ಕಂಡನು. ಬಾಲಚಂದರ್ ಅಂತರ್ಮುಖಿಯಾಗಿ ಯೋಚನೆಯಲ್ಲಿ ಮುಳುಗಿದರು. ಏನೋ.... ನೆನಪು ಮಾಡಿಕೊಂಡು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ನಂದುವನ್ನು ನೋಡಿದರು. ಪೋಲೀಸರಿಗೆ ಹೇಳಿ ಊಟ ತರಿಸಿಕೊಟ್ಟು, ಊಟ ಮಾಡು ಎಂದರು. ನಂದು ಒಲ್ಲೆ ಎಂದು ತಲೆಯಲ್ಲಾಡಿಸಿದನು. ಲೇ ಬೋಳಿ ಮಗನೇ... ಊಟ ಮಾಡ್ಲೇ ಅಂದ್ರೆ ಒಲ್ಲೆ ಅಂತೀಯಾ, ಮೈಯ್ಯಾಗ ಸೊಕ್ಕೇನ್ಲೇ ಎಂದು ಗದರುತ್ತಾ ಅವನ ಕಡೆಗೆ ಧಾವಿಸಿದ ಪೋಲೀಸರನ್ನು ಜಡ್ಜ್ ಸಾಹೇಬರು ತಡೆದರು. ನಂದುವಿನ ವರ್ತನೆ ಅವರಿಗೆ ವಿಚಿತ್ರವೆನಿಸಿತು. ಯಾಕೆ ಊಟ ಮಾಡುವುದಿಲ್ಲವೇ? ಎಂದರು. ಮನ್ಯಾಗ ಅವ್ವ, ತಮ್ಮ ಉಪಾಸ ಮಲಗ್ಯಾರ. ಇಲ್ಲಿ ನಾನೊಬ್ನೆ ಹ್ಯಂಗ ಉಣ್ಲಿ ಅಂದನು. ನಂದುವಿನ ಆ ಮಾತುಗಳು ಬಾಲಚಂದರ್‍ರವರ ಹೃದಯಕ್ಕೆ ಮುಳ್ಳಿನಂತೆ ಚುಚ್ಚಿದವು. ಅವರಿಗೆ ತಮ್ಮ ಕುರ್ಚಿ ಒಂದು ಕ್ಷಣ ಅಲುಗಾಡಿದಂತೆ ಭಾಸವಾಯಿತು. ತಲೆ ಗಿರ್ರೆಂದು ತಿರುಗಿದಂತಾಯಿತು. ಸಾವರಿಸಿಕೊಂಡು ನಿಧಾನಕ್ಕೆ ಮೇಲೆದ್ದರು. ನಂದುವಿನ ಹತ್ತಿರ ಬಂದು ಅವನ ತಲೆಯನ್ನು ನೇವರಿಸಿದರು. ನಂದು ಬಾಯಿ ತೆರೆದುಕೊಂಡು ಅವರ ಮುಖ ನೋಡಿದನು. ನಿನ್ನ ಮನೆ ಎಲ್ಲಿದೆ ಹೋಗೋಣ ನಡೆ ಎಂದರು. ಪೋಲೀಸರು ಬೆರಗಾಗಿ ನೋಡತೊಡಗಿದರು. 

ವಿಜಯನಗರ ಕಾಲೊನಿ ಎಂಬ ಹೆಸರಿನ ಸ್ಲಂನಲ್ಲಿರುವ ನಂದುವಿನ ಗುಡಿಸಲಿನ ಮುಂದೆ ಜಡ್ಜ್ ಸಾಹೇಬರ ಕಾರು, ಪೋಲೀಸರ ಜೀಪು ಬಂದು ನಿಂತಿದ್ದನ್ನು ಕಂಡು ಜನ ಹೆದರಿದರು. ಪುತಪುತನೆ ತಮ್ಮ ತಮ್ಮ ಗುಡಿಸಲುಗಳಲ್ಲಿ, ಜೋಪಡಿಗಳಲ್ಲಿ ಅವಿತುಕೊಂಡರು. ನಂದು ಕಾರಿನಿಂದ ಇಳಿದು ಬರುತ್ತಿರುವುದನ್ನು ನೆರಿಕೆಯ ಸಂದುಗಳಿಂದ ಇಣಿಕಿ ನೋಡಿದ ಜನರು ಅವ್ವಾ....! ಎಂದು ಬಾಯಿಯ ಮೇಲೆ ಬೆರಳಿಟ್ಟುಕೊಂಡರು. ಯಾರಿಗಾದ್ರೂ ಕೊರೊನಾ ಬಂದತೇನು ಎಂದು ತಮ್ಮ ತಮ್ಮಲ್ಲೇ ಗುಸುಗುಸು, ಪಿಸಿಪಿಸಿ ಮಾತಾಡಿಕೊಂಡರು. ಯವ್ವಾ.... ಯವ್ವಾ.... ಎಂದು ಗುಡಿಸಲಿನ ಒಳಗೆ ಧಾವಿಸಿದ ನಂದುವನ್ನು ಜಡ್ಜ್ ಸಾಹೇಬರು ಹಿಂಬಾಲಿಸಿದರು. ಕಡ್ಡಿ ಚಾಪೆಯ ಮೇಲೆ ಮಲಗಿದ್ದ ನಂದುವಿನ ತಾಯಿ ತನ್ನಷ್ಟಕ್ಕೆ ತಾನು ಏನೇನೋ... ವಟಗುಟ್ಟುತ್ತಿದ್ದಳು. ಅವಳನ್ನು ನೋಡಿದ ತಕ್ಷಣ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂಬುದು ಜಡ್ಜ್ ಸಾಹೇಬರಿಗೆ ಅರ್ಥವಾಯಿತು. ಯಾವಾಗಿನಿಂದ ಹಿಂಗ ಆಗ್ಯಾಳ ಎಂದು ಕೇಳಿದರು.ಅಪ್ಪ ಸತ್ತಾಗಿನಿಂದ ಅವ್ವ ಹಿಂಗ್ಯ ಆಗ್ಯಾಳ ಅಂದನು. ಒಂದೊಂದು ಸನ್ನಿವೇಶವೂ ಒಂದೊಂದು ಮುಳ್ಳಿನಂತೆ ಅವರನ್ನು ಚುಚುತ್ತಿದ್ದವು. ಅವರಿಗೆ ಮುಂದೆ ಏನೂ ಮಾತನಾಡಲಾಗಲಿಲ್ಲ. ಹೆದರಿ ಮೂಲೆಯಲ್ಲಿ ಅವಿತುಕೊಂಡಿದ್ದ ನಂದುವಿನ ತಮ್ಮ ಓಡಿಬಂದು ಅವನನ್ನು ತಬ್ಬಿಕೊಂಡು ಅಳತೊಡಗಿದನು. ಜಡ್ಜ್ ಸಾಹೇಬರು ತಮಗರಿವಿಲ್ಲದೆ ಅವರಿಬ್ಬರ ತಲೆ ನೇವರಿಸಿದರು. ಪೋಲೀಸರ ಕೈಯಿಂದ ಊಟದ ಪೊಟ್ಟಣಗಳನ್ನು ಇಸಿದುಕೊಂಡು ನಂದುವಿನ ಕೈಗೆ ಕೊಟ್ಟರು. ಅವಸರದಿಂದ ಬಿಚ್ಚಿಕೊಂಡು ತಾಯಿ, ಮಕ್ಕಳು ಗಬಗಬನೆ ಅನ್ನ ತಿನ್ನತೊಡಗಿದರು. ಜಡ್ಜ್ ಸಾಹೇಬರು ಭಾರವಾದ ಹೆಜ್ಜೆಹಾಕುತ್ತಾ ಹೊರನಡೆದರು.   

ರಾತ್ರಿ ಹನ್ನೆರಡು ಗಂಟೆಯಾದರೂ ಬಾಲಚಂದರ್‍ರವರ ಹತ್ತಿರ ನಿದ್ರಾದೇವಿ ಸುಳಿಯಲಿಲ್ಲ. ಕಣ್ಣು ಮುಚ್ಚಿದರೆ ಸಾಕು! ನಂದು ಎದುರಿಗೆ ಬಂದು ನಿಂತಂತಾಗುತ್ತಿತ್ತು. ಎದ್ದು ಕುಳಿತು ದೀರ್ಘವಾಗಿ ನಿಟ್ಟುಸಿರು ಬಿಟ್ಟರು. ಪಕ್ಕದಲ್ಲಿ ಮಲಗಿದ್ದ ಹೆಂಡತಿಯ ಕಡೆ ದೃಷ್ಠಿ ಹರಿಸಿದರು. ಬೆಡ್‍ಲೈಟ್‍ನ ಮಂದವಾದ ಬೆಳಕಿನಲ್ಲಿ ಸರೋಜಳ ಮುಖವನ್ನೊಮ್ಮೆ ನೋಡಿದರು. ಅವಳು ನಿಶ್ಚಿಂತೆಯಿಂದ ಮಲಗಿದ್ದಳು. ಸರೋಜ ಅನುಪಮ ಸುಂದರಿ. ಪ್ರಕೃತಿಯ ಚೆಲುವೆಲ್ಲವೂ ಅವಳ ಮುಖದಲ್ಲಿ ಲಾಸ್ಯವಾಡುತ್ತಿರುವಂತೆ ಕಂಡಿತು. ಬಾಲಚಂದರ್ ಅವಳ ಸೌಂದರ್ಯವನ್ನು ಸದಾ ಆರಾಧಿಸುತ್ತಿದ್ದರು. ಬೆಳದಿಂಗಳ ಬಾಲೆ ಎಂದು ಸರೋಜಳನ್ನು ರೇಗಿಸುತ್ತಿದ್ದರು. ಅವಳ ಸೌಂದರ್ಯದ ಸುಖದಲ್ಲಿ ಸ್ವಗರ್ವನ್ನೇ ಕಂಡಿದ್ದರು. ಆದರೆ ಇಂದು ಏಕೋ...! ಅವಳ ಆ ಚೆಲುವು ಬಾಲಚಂದರ್ ರವರ ಕಣ್ಣಿಗೆ ಆಕರ್ಷಕವೆನಿಸಲಿಲ್ಲ. ಮನಸ್ಸಿಗೆ ಹಿತವೂ ಅನ್ನಿಸಲಿಲ್ಲ. ಇಪ್ಪತ್ತು ವರ್ಷದ ದಾಂಪತ್ಯ ಜೀವನದಲ್ಲಿ ಇದೇ ಮೊದಲು ಅವರಿಗೆ ಹೀಗನ್ನಿಸಿತ್ತು. ಅವರ ಮನಸ್ಸು ತುಂಬಾ ಕಸಿವಿಸಿಗೊಂಡಿತ್ತು. ಅವರ ಮನಸ್ಸಿನ ತುಂಬಾ ನಂದು ತುಂಬಿಕೊಂಡಿದ್ದನು. ಬೆಡ್‍ರೂಮ್‍ನಿಂದ ಹಾಲ್‍ಗೆ ಬಂದು ಸೋಫಾದ ಮೇಲೆ ಕುಳಿತುಕೊಂಡರು. ಹಾಲ್‍ನಲ್ಲಿ ಪ್ರಸೂದ್ ಮಲಗಿದ್ದನು. ಅವರಿಗೆ ಮಗನ ಇರುವಿಕೆಯ ಕಡೆಗೆ ಲಕ್ಷ್ಯವಿರಲಿಲ್ಲ. ಅವರ ಮನಸ್ಸು ಭಾರವಾಗಿತ್ತು. ನಂದು ಗಬಗಬನೆ ಅನ್ನ ತಿನ್ನುವ ದೃಶ್ಯ ಅವರ ಕಣ್ಣ ಮುಂದೆ ಸುಳಿಯಿತು. "ಹಸಿವು ಎಷ್ಟೊಂದು ಕ್ರೂರ ಎಂದು ತಮ್ಮಷ್ಟಕ್ಕೆ ತಾವೇ ಉದ್ಘರಿಸಿದರು. ಕುಳಿತ ಭಂಗಿಯಲ್ಲಿಯೇ ಕಣ್ಣು ಮುಚ್ಚಿಕೊಂಡು ಅಂತಮುರ್ಖಿಯಾದರು. ಗಾಢ ಚಿಂತನೆಯಲ್ಲಿ ಮುಳುಗಿದ್ದ ಅವರಿಗೆ ಪರಿಹಾರದ ದಾರಿ ಹೊಳೆಯಿತು. ಮುಚ್ಚಿದ ಕಣ್ಣು ತೆರೆದರು. ಕಣ್ಣಲ್ಲಿ ಮಿಂಚೊಂದು ಸಂಚರಿಸಿತು. ಲಗುಬಗೆಯಿಂದ ಎದ್ದು ಪೆನ್ನು ಹಾಳೆ ತೆಗೆದುಕೊಂಡು ತೀರ್ಪು ಬರೆಯತೊಡಗಿದರು.                   

ಸಿರಿ ಸಂಪತ್ತಿನಿಂದ ತುಂಬಿ ತುಳುಕುತ್ತಿರುವ ಭಾರತದಲ್ಲಿ ಕೃತಕವಾಗಿ ಸೃಷ್ಠಿಸಲಾಗಿರುವ ಹಸಿವು ಮಹಾಕ್ರೌರ್ಯವಾಗಿದೆ. ಕೋವಿಡ್-19 ವಿರುದ್ಧದ ಈ ಸಮರದ ಸಂದರ್ಭದಲ್ಲಿ ಸೋಂಕು ಪಸರಿಸದಂತೆ ತಡೆಯುವುದು, ಸೋಂಕು ತಗುಲಿದವರ ಜೀವಗಳನ್ನು ಸಂರಕ್ಷಿಸುವುದು ನಮಗೊಂದು ಸವಾಲಾಗಿದೆ. ಇದೇ ಸಂದರ್ಭದಲ್ಲಿ ಹಸಿವಿನ ಸಮಸ್ಯೆಯೂ ನಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ದೇಶದಾದ್ಯಂತ ಹಸಿವಿನಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ನಂದು ಇಂತಹ ಕೃತ್ಯವೆಸಗಲು ಹಸಿವು ಮುಖ್ಯ ಕಾರಣವಾಗಿದೆ. ಲಾಕ್‍ಡೌನ್ ಘೋಷಣೆಯ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಕೆಲವರಿಗೆ ಅನ್ನದ ದಾರಿಗಳೂ ಇಲ್ಲವಾಗಿವೆ. ನಂದುವಿನ ಕಳ್ಳತನದ ಪ್ರಕರಣವು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ನಂದು ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದವನಲ್ಲ. ಹಸಿವು ಅದಕ್ಕೆ ಪ್ರೇರಣೆಯಾಗಿದೆ. ಇದು ವ್ಯವಸ್ಥೆಯ ದೌರ್ಬಲ್ಯವೂ ಹೌದು. ನಂದು ಎಸಗಿದ ಈ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿರುವುದಿಲ್ಲ. ಹಾಗಾಗಿ ಅವನಿಗೆ ಮತ್ತು ಅವನ ಕುಟುಂಬಕ್ಕೆ ಆರ್ಥಿಕ ಸವಲತ್ತುಗಳನ್ನು ನೀಡುವುದು ಔಚಿತ್ಯಪೂರ್ಣವಾಗಿದೆ. ಮಾನಸಿಕ ಅಸ್ವಸ್ಥಳಾಗಿರುವ ನಂದುವಿನ ತಾಯಿಗೆ ಉಚಿತವಾಗಿ ಸರ್ಕಾರವು ಚಿಕಿತ್ಸೆ ನೀಡಬೇಕು. ವಿಧವಾ ವೇತನ ಮಂಜೂರು ಮಾಡಬೇಕು. ಅವರಿಗೆ ವಾಸಯೋಗ್ಯವಾಗಿರುವ ಮನೆಯನ್ನು ನಿರ್ಮಿಸಿಕೊಡಬೇಕು. ನಂದುವಿಗೆ ಉದ್ಯೋಗವೊಂದನ್ನು ಒದಗಿಸಬೇಕು. ಅಲ್ಲಿಯತನಕ ಅವರಿಗೆ ಅಗತ್ಯವಿರುವ ಆಹಾರ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಬೇಕು. ತಾತ್ಕಾಲಿಕವಾಗಿ ಅವರ ಜೀವನ ನಿರ್ವಹಣೆಗಾಗಿ 10000/- ರೂಪಾಯಿಗಳನ್ನು ನೀಡತಕ್ಕದ್ದು ಎಂದು ಈ ನ್ಯಾಯಾಲಯವು ತೀರ್ಪು ನೀಡುತ್ತದೆ ಎಂದು ಜಡ್ಜ್ ಸಾಹೇಬರು ಓದಿದ ತೀರ್ಪನ್ನು ಕೇಳಿ ಪೋಲೀಸರು ತಲೆ ಕೆರೆದುಕೊಂಡರು. ನಂದುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನು ಅಲ್ಲಿಯೇ ಕುಣಿದು ಕುಪ್ಪಳಿಸಿದನು. 

ಕಲಾಕೃತಿಗಳು: ಡಾ. ಅಶೋಕ ಶೆಟಕಾರ

ಹುಲಿಕಟ್ಟಿ ಚನ್ನಬಸಪ್ಪ

ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರು ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯವರು. ತಂದೆ- ಲಕ್ಷ್ಮಣ, ತಾಯಿ- ಲಕ್ಷ್ಮಮ್ಮ. ಮೊಳಕಾಲ್ಮೂರು ತಾಲೂಕಿನ ಅಮುಕುಂದಿ ಹಾಗೂ ಭೈರಾಪುರದಲ್ಲಿಪ್ರಾಥಮಿಕ ಶಿಕ್ಷಣ, ಹೂವಿನಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ  ಮತ್ತು ಪಿ.ಯು.ಸಿ, ಪದವಿ, ಶಿಕ್ಷಕರ ತರಬೇತಿಯನ್ನು ಹರಪನಹಳ್ಳಿಯಲ್ಲಿ ಪೂರೈಸಿದರು.

ವಿದ್ಯಾರ್ಥಿಯಾಗಿದ್ದಾಗಲೇ ಭಾರತ ವಿದ್ಯಾರ್ಥಿ ಸಂಘಟನೆ(ಎಸ್.ಎಫ್.ಐ), ರೈತಸಂಘಟನೆ, ಸಮುದಾಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. 1986ರಲ್ಲಿ ಅಣು ಸಮರದ ವಿರುದ್ಧ ಜನಜಾಗೃತಿಗಾಗಿ ರಾಜ್ಯದಾದ್ಯಂತ ನಡೆದ ಚಳವಳಿಯಲ್ಲಿ ಜನಪ್ರಿಯವಾಗಿದ್ದ ಹಾಡು ‘ತಲೆಗಳು ಉರುಳ್ಯಾವೊ’ ಇವರೇ ರಚಿಸಿದ್ದು. 

1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಗೌರವ ಶಿಕ್ಷಕರ ಸಂಘಟನೆ, ಸಮುದಾಯ, ಭಾರತ ವಿಜ್ಞಾನ ಸಮಿತಿ, ಸರಕಾರಿ ನೌಕರರ ಒಕ್ಕೂಟ, ಕನ್ನಡಸಾಹಿತ್ಯ ಪರಿಷತ್ತಿನ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ‘ಅವ್ವ ಹಚ್ಚಿದ ದೀಪ’, ‘ಬೆಳಕಿನ ಹಣತೆ’, ‘ಬಾವುಟದ ಬಟ್ಟೆ’, ‘ಎದೆಯೊಳಗಿನ ಹಾಡು’ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕವನಗಳನ್ನು ಸಂಗ್ರಹಿಸಿ ‘ಸತ್ತಾವೋ ಹರೆಯಗಳು’ ಶೀರ್ಷಿಕೆಯಡಿ ಪ್ರಕಟಿಸಿದರು. ‘ಹೆಣದ ಮೇಲೆ’ ಶೀರ್ಷಿಕೆಯ ಕತಾ ಸಂಕಲನವೂ ರಚಿಸಿದ್ದಾರೆ. 2019ರಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2018ರಲ್ಲಿ ಸೇವೆಯಿಂದ ನಿವೃತ್ತರಾಗಿ ಸದ್ದಯ ಹರಿಹರದಲ್ಲಿ ನೆಲೆಸಿದ್ದಾರೆ.

More About Author