Poem

ಪಯಣ!

ಒಂದೇ ದಾರಿ,
ಕವಲೊಡೆಯುತ್ತದೆ ಅಸಂಖ್ಯವಾಗಿ;
ಕೊನರುತ್ತದೆ ಅನಂತವಾಗಿ.
ಆದಿಯಿಂದ ಇದೇ ಹಾದಿ ಹಿಡಿದೂ ಹಿಡಿದೂ
ಹಣ್ಣಾಗಿ ಮಣ್ಣಾದ ನಮ್ಮವರನ್ನೂ ಕಾಡಿದ್ದ
ಅವೇ ಹಳೆಯ ಪ್ರಶ್ನೆಗಳು ನಮ್ಮನ್ನೂ ಕಾಡುತ್ತವೆ:
ಎತ್ತ ಸಾಗುತ್ತಿದ್ದೇವೆ?
ಏಕೆ ಹೋಗುತ್ತಿದ್ದೇವೆ?
ನಮಗೆ ನಮ್ಮದೇ ಸಮಜಾಯಿಷಿ ನೀಡಿಕೊಂಡು
ತನ್ಮಯರಾಗುತ್ತೇವೆ
ನಮ್ಮ ನಮ್ಮ ನಡಿಗೆಯ ಶೈಲಿಯಲ್ಲಿ.

ಪಾದ ಬೆಳೆಸಿದಂತೆ,
ಅಳುವ ಕಂದನ ಕೂಗು;
ಆಟವಾಡುವ ಮಕ್ಕಳ ದಂಡು;
ದಿಬ್ಬಣಕ್ಕೆ ಹೊರಟ ಮದುಮಕ್ಕಳ ಮೆರಗು;
ಬಾಗು ಮುದುಕರ ಭಾರವಾದ ಹೆಜ್ಜೆಗಳು;
ವಿಷಣ್ಣ ವೈಭವದ ಚಟ್ಟಾಭಿಷೇಕ;
ನಿತ್ಯನೂತನ ನೋಟಗಳು.

ಜೊತೆಯಲ್ಲಿ ಬಂದವರು;
ಹಂಚಿಕೊಂಡು ಉಂಡವರು;
ಕಸಿದುಕೊಂಡು ತಿಂದವರು;
ಮುಂದೆ ಹೋದವರು;
ಹಿಂದೆಯೇ ಉಳಿದವರು;
ಕಣ್ಣಿಂದ ಮರೆಯಾದವರು;
ಮನಸ್ಸಿಂದ ಮರೆಯಾಗದವರು;
ಹಲವರ ಜತೆಗೆ ಹಲಬಗೆಯ
ನಂಟುಗಳು,ಕಗ್ಗಂಟುಗಳು.

ಯಾವ ದಾರಿ ಮುಚ್ಚಿದರೂ
ಒಂದು ದಾರಿ
ತನ್ನೆಡೆಗೆ ಸೆಳೆಯುತ್ತದೆ
ಎಲ್ಲರನು ಕೊನೆಗೆ.
ಏನೆಲ್ಲಾ ಗಂಟುಮಾಡಿ
ಎಲ್ಲಾ ಬಿಟ್ಟು ಹೋಗುತ್ತೇವೆ
ಮರಳಿ ಬರಲು ಬಿಡದ ಬೀಡಿಗೆ!

ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author