ಅದೇ ವ್ಯಥೆ
ಅದೇ ಕಥೆ
ಪುನರಾವರ್ತನೆ
ಮುತ್ತಾಗಿಬೇಕಿದ್ದ ಕಣ್ಣೀರ ಬಿಂದು
ಯಾರದೋ ಸೊತ್ತಾಗಿ
ಆವಿಯಾಗುವುದು
ಭವಿಷ್ಯ ನಿರ್ಣಯ
ಹಲವು ಹೊಲಸಾದ ಮನಸುಗಳು ಸೇರಿ,
ಕಾಗೆಗಳ ಕಲರವಕೆ
ಸೋತು ಸೊರಗಿರುವ
ಕೆಲವೇ ಕೋಗಿಲೆಗಳ
ಉಗ್ರ ಹೋರಾಟ
ತೀರ್ಪುನೀಡುವವರ
ಯಾಜಮಾನ್ಯ ಮಾಡುವವವರ
ಅಸಹನೀಯ ಮೌನ
ಒಮ್ಮೊಮ್ಮೆ ಒಪ್ಪಿತವಾದೀತು
ಅದೇ ಗೆಲುವೆಂದು ಭ್ರಮಿಸಿ
ಸಂಭ್ರಮಿಸಿ, ಎತ್ತಿದ ತಲೆಗಳ
ಬಿಲಕ್ಕೆ ತಳ್ಳಿ ಮತ್ತೆ ಮುಚ್ಚಿಬಿಡುವುದು
ಸತ್ಯಕ್ಕೆ ಜಯ, ಧರ್ಮಕ್ಕೆ ಜಯ
ಎಂಬ ಹಳೇ ಸ್ಲೋಗನ್ನುಗಳ
ಪ್ರದರ್ಶಸಿ, ಹರ್ಷಿಸಿ
ಕೊನಗೇನು ಮಾಡಲಾಗದೆ ಚಡಪಡಿಸಿ
ಸೌಹಾರ್ದ ಸಮಾಜಕ್ಕೆ ನನ್ನದೊಂದು
ಕೊಡುಗೆ ಎಂದು ತೃಪ್ತಿಹೊಂದುವುದು
ಗೆಲುವೊಂದೇ ಮಾನದಂಡ
ಕೈಗೊಂದು ದೊಡ್ಡ ದಂಡ
ಬೀಸುವುದು ಎಲ್ಲ ಕಡೆ
ಮಿಂಚು ಬರಿಸುವುದು
ಮಳೆ ಎಂಬ ಭ್ರಮೆಯಲಿ
ಮುಳುಗಿಸುವುದು
ಅದೇ ಆತ್ಮವಿಶ್ವಾಸ
ಎದೆಯಲ್ಲಿ ತುಂಬಿ
ದಾರಿಕಾಯುವುದು
ಮುಂದಿನ ಪೀಳಿಗೆಗೆ
ದಾಟಿಸುವುದು
ಎಂ.ವಿ. ಶಶಿಭೂಷಣ ರಾಜು
ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.
ಕೃತಿಗಳು: ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,
More About Author