`ದಮಯಂತಿ ಮೇಡಂ ಹೇಗಿದ್ದೀರಿ? ಡಿ.ಸಿ. ಆಫೀಸಿನ ಕಂಟ್ರೋಲ್ ರೂಂ ನಿಂದ ಮಾತಾಡುತ್ತಿರೋದು ಆರೋಗ್ಯ ಹೇಗಿದೆ ಹೇಳಿ' ಅಂದ ಸಂಗಮನಾಥ.
`ಬದುಕಿದೀನಿ ಸಾರ್... ಸತ್ತಿಲ್ಲ' ಆಕಡೆಯಿಂದ, ಆತನಿಗೆ ತಲ್ಲಣವಾಯಿತು ಭಯಕೂಡ, ಸಾವರಿಸಿಕೊಂಡ. `ಆಗೆಲ್ಲಾ ಮಾತಾಡಬೇಡಿ.. ಇದೇನು ವಾಸಿಯಾಗಲಾರದ ಖಾಯಿಲೆಯೇನಲ್ಲಾ. ಚೆನ್ನಾಗಿ ಊಟ ಮಾಡಿ, ಒತ್ತೊತ್ತಿಗೆ ಮಾತ್ರೆ ತಗೊಂಡು ವಿಶ್ರಾಂತಿ ಪಡೀರಿ. ವಾರಕ್ಕೆಲ್ಲಾ ಆರಾಮಾತೀರಿ. ಸಾಯೋ ಮಾತಾಡಬಾರದು. ಬದುಕು ಕಲಿಸುವ ಪಾಠ ದೊಡ್ಡದು. ಎಲ್ಲವನ್ನು ಎದುರಿಸಿ ಗೆಲ್ಲಬೇಕು ಮೇಡಂ' ತಮ್ಮ ವೃತ್ತಿ, ಊರು ಮುಂತಾದ ಪ್ರಶ್ನೆಗಳನ್ನು ಸಂಗಮನಾಥ ಸಾಂತ್ವನದ ಧ್ವನಿಯಲ್ಲಿ ಕೇಳತೊಡಗಿದ.
ಆಕೆ ಮೆಲ್ಲನೆ ದುಃಖದಿಂದ ತಡವರಿಸಿಕೊಂಡು ಹೇಳತೊಡಗಿದಳು. `ಸಾರ್ ನಂದು ಚಿತ್ರದುರ್ಗ, ಇಲ್ಲೆ. ನರ್ಸಿಂಗ್ ಕೋರ್ಸ್ ಮುಗಿಸಿದ್ದೆ, ಪತ್ರಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್ ಹುದ್ದೆ ಖಾಲಿಯಿದೆ ಅಂತಾ ಜಾಹೀರಾತು ನೋಡಿದೆ... ಅರ್ಜಿ ಹಾಕಿದೆ. ದೊಡ್ಡಾಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಊರು ಬಿಟ್ಟು ನೂರಾರು ಮೈಲು ದೂರ ಬಂದೆ. ಮನೆ ಪರಿಸ್ಥಿತಿ ಸರಿಯಿಲ್ಲ ಸಾರ್, ಐದಾರು ತಿಂಗಳ ಹಿಂದೆ ಸುರಿದ ಭಾರಿ ಮಳೆಯಲ್ಲಿ ಮನೆಕುಸಿದು, ತೊಲೆ ಕಂಬಗಳು ಮುರಿದು ಮೈಮೇಲೆ ಬಿದ್ದು ಅಪ್ಪ ಮಲಗಿದಲ್ಲೇ ತೀರಿಕೊಂಡರು. ಅಮ್ಮ ಊರ ಮುಂದಿನ ಹೊಲ ಮಾರಿ ಅಪ್ಪ ತೀರಿದ ವರುಷದೊಳಗೆ ಮದುವೆ ಮಾಡಿದರು ಪಕ್ಕದೂರಿಗೆ, ಅಪ್ಪ ತೀರಿದ ರಾತ್ರಿ ಅಮಾವಾಸ್ಯೆ ಅಮ್ಮ ಅಂಗವಿಕಲ ತಮ್ಮನನ್ನು ಕರೆದುಕೊಂಡು ಗವಿಮಲ್ಲೇಶ್ವರನ ಗುಡಿಯಲ್ಲಿ ಪೂಜೆ ಸಲ್ಲಿಸಿ ಅಲ್ಲೆ ಮಲಗಿದ್ದಳು. ಸುದ್ದಿ ತಿಳಿದು ಓಡೋಡಿ ಬಂದು ನಡುರಾತ್ರಿ ಅಪ್ಪನನ್ನು ಕಾಣದೇ ಹುಡುಕಿ ತಂದೆಗಾಗಿ ಆಕಾಶಭೂಮಿ ಒಂದಾಗಿ ಹೋಗುವಂತೆ ಅತ್ತಿದ್ದಳು. ಅಪ್ಪ ಸುರಿದ ಮಳೆಯ ಮಣ್ಣಲ್ಲಿ ಮುದ್ದೆಯಾಗಿ ಹೋಗಿದ್ದ. ಜನ ಹೊರತಂದು ಮಣ್ಣು ಮಾಡಿದರು. ಅಪ್ಪ ತೀರಿದ ಅರ್ಧ ಮನೆಯಲ್ಲಿ ಅಮ್ಮ, ತಮ್ಮ, ಅಣ್ಣಾ ಬದುಕು ತಳ್ಳುತ್ತಿದ್ದಾರೆ ' ದಮಯಂತಿ ದುಃಖದ ನಿಟ್ಟುಸಿರು ಬಿಟ್ಟು ಮಾತು ನಿಲ್ಲಿಸಿದಳು.
ಸಂಗನಾಥನಿಗೆ ದುಃಖ ಮಡುಗಟ್ಟಿ ಬಂತು. ಸುತ್ತ ಮುತ್ತ ನೋಡಿ ಕಣ್ಣೀರೊರಸಿಕೊಂಡು. ಅಳಬೇಡಮ್ಮಾ ದೇವರು ದೊಡ್ಡೋನು. ಅಮ್ಮ, ತಮ್ಮ ಉಳುಕೊಂಡರು. ನೀವು ಅವತ್ತೆಲ್ಲಿದ್ದಿರಿ ಅಂದ.
‘ನಾನು.. ಮನೆಯ ಪಕ್ಕದ ಗೆಳತಿಯ ಮನೆಯಲ್ಲಿ ಓದುತ್ತಾ.. ಅಲ್ಲೇ ಮಲಗಿದ್ದೆ. ಇಲ್ಲವಾದರೆ ನಾನು.. ಅಪ್ಪನ ಜೊತೆ ಮಣ್ಣಲ್ಲಿ ಮಣ್ಣಾಗಿ...’ ಮಾತು ದುಃಖದಲ್ಲಿ ತಡವರಿಸಿ ಬಂತು.
`ಹಾಗೆಲ್ಲಾ... ಮಾತಾಡಬೇಡಿ.. ದೇವರು ದೊಡ್ಡೋನು.. ಬಾಳಿ ಬದುಕಬೇಕಾದ ನೀನು ಉಳಿದುಕೊಂಡೆ ನಾನುಳಿದು ಸಾಧಿಸುವುದಾದರೂ..’
ಏನಣ್ಣಾ.. ಗಂಡನ ಮನೆಯಲ್ಲಿ ಬಾಳಿ ಬದುಕಿದೆ... ಮಗಳು ಹುಟ್ಟಿದಳು. ಗಂಡನೂ ಜಿಲ್ಲಾ ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್. ಮೊದಮೊದಲು ಒಳ್ಳೆರಂತೆ ಕಂಡರು. ಮಾವನಿಲ್ಲ, ಅತ್ತೆ ಕಾಟ. ಅಷ್ಟರಲ್ಲಿ.. ನನಗೆ ಈ ನರ್ಸಿಂಗ್ ಪೋಷ್ಟ್ ಸಿಕ್ಕಿತು. ನನ್ನ ಗೆಳತಿಗೂ ಕೂಡ. ಮಗಳಿಗೆ ಎರಡು ವರುಷ ತುಂಬಿತು. ‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದರೆ ಮುಂದೆ ಪರ್ಮೆಂಟ್ ಮಾಡ್ತಾರ ಕೆಲಸಕ್ಕೆ ಸೇರಿಕೊ.. ಮುಂದೆ ನೋಡೋನಾ.. ಅಂತ ಗಂಡ ಕಳುಹಿಸಿಕೊಟ್ಟ. ಗೆಳತಿಯ ಜೊತೆಯಲ್ಲಿ ಬಂದು ಸೇರಿಕೊಂಡೆ. ಬಾಡಿಗೆ ರೂಮು ಹಿಡಿದು ಬದುಕು ಕಟ್ಟಿಕೊಂಡೆ. ಅದೇನೋ ಖಾಯಿಲೆನೋ ಕೊರೋನಾಽ ಕೊರೊನಾ ವೈರಸ್ ಅಂತ ರಾತ್ರಿ, ಹಗಲು ನಾಲ್ಕು ತಿಂಗಳು ರಜೆಯಿಲ್ಲದೆ.. ರೋಗಿಗಳ ಆರೈಕೆಗೆ ನಿಂತೆ. ನಿತ್ರಾಣಗೊಂಡೆ. ಕೊನೆಗೆ ನನಗೂ ಕೊರೊನಾ ವೈರಸ್ ತಗಲಿಕೊಂಡಿತು. ಜ್ವರ ಬಂದಾಗ ರಜೆಕೊಟ್ಟರು. ಬರುತ್ತಿದ್ದ ಸಂಬಳದಲ್ಲಿ ಅರ್ಧ ತಾಯಿಗೆ ಕಳುಹಿಸಿ ಬದುಕು ಕಟ್ಟಿಕೊಳ್ಳುವಾಗ’॒ ಬಿಕ್ಕಳಿಸತೊಡಗಿದಳು. ಸಂಗಮನಾಥ ಮೊಬೈಲ್ನಲ್ಲಿ ಸಾಂತ್ವನ ಹೇಳುತ್ತಾ.. ಕಂಟ್ರೋಲ್ ರೂಂನಿಂದ ಹೊರಬಂದು.. ನಾಲ್ಕು ಹೆಜ್ಜೆ ಹಾಕಿದ. ಮರದ ಕೆಳಗೆ ಕಲ್ಲು ಬೆಂಚು ಕಂಡಿತು. ಅಲ್ಲೆ ಕೂತ. ಗಾಳಿ ತಣ್ಣಗೆ ಬೀಸುತ್ತಿತ್ತು.
ದಮಯಂತಿ ಮಾತನಾಡುತ್ತಲೇಯಿದ್ದಳು.
“ಅಮ್ಮನಿಗೆ... ಅರ್ಧ ಸಂಬಳ ಕಳುಹಿಸುವುದರಿಂದ, ಗಂಡನ ಮನಸ್ಸು ಸರಿಯಿಲ್ಲ. ಸದಾ ಗೊಣಗಾಟ... ರಂಪಾಟ.. ತಾಯಿಯ ಮಾತು ಕೇಳ್ತಾನೆ ಅಣ್ಣಾ... ಮಗಳು ಪೋನಿನಲ್ಲಿ ಊರಿಗೆ ಬಾ ಅಂತಾ ಅಳುತಾಳ. ಹೇಗೆ ಹೋಗುವುದು? ನಿಲ್ಲಲು ಶಕ್ತಿಯಿಲ್ಲ. ಗೆಳತಿ ನನಗೆ ಕೊರೋನಾ ವೈರಸ್ ತಗಲಿದ ಮೆಲೆ ರೂಮು ಖಾಲಿ ಮಾಡಿದ್ದಾಳೆ. ಬಿಟ್ಟು ಬಿಟ್ಟು ಜ್ವರ, ನೆಗಡಿ ಕೆಮ್ಮು.. ಸುಸ್ತು.. ಉಟ ಬಾಯಿಗೆ ರುಚಿಸ್ತಾಯಿಲ್ಲ. ಆಕೆ ದೂರದಲ್ಲಿ ಮತ್ತೊಬ್ಬ ಗೆಳತಿ ನರ್ಸ್ ಜೊತೆಯಿದ್ದಾಳೆ. ಊಟ ತಂದು ರೂಮಿನ ಮುಂದಿಟ್ಟು ಹೋಗುತ್ತಾಳೆ. ಮಾತಿಲ್ಲ ಕತೆಯಿಲ್ಲ. ಎಲ್ಲಾ ಹೋರಾಟದ ಬದುಕು ನಮ್ಮಂತವರು ಯಾರಿಗಾಗಿ ಬದುಕಬೇಕಣ್ಣಾ... ಸಣ್ಣಗೆ ಅಳತೊಡಗಿದಳು. ಸಂಗಮನಾಥನಿಗೆ ದಮಯಂತಿಯ ಮಾತುಗಳಿಂದ ನಿಟ್ಟುಸಿರು ಹೊರಬಂದು. ಆಗಸ ದಿಟ್ಟಿಸಿದ. ಅಲ್ಲೊಂದು ಇಲ್ಲೊಂದು ಚುಕ್ಕೆಗಳು.. ಮೋಡಕಟ್ಟತೊಡಗಿತ್ತು. ಆಗೊಂದು ಇಗೊಂದು ಮಳೆಹನಿಗಳು ಉದುರುತ್ತಿದ್ದವು, ಸುಳಿಗಾಳಿ. ಮರದಲ್ಲಿ ಗೂಡುಕಟ್ಟಿದ ಹಕ್ಕಿಗಳ ಚಿಲಿಪಿಸಿ ಸದ್ದುಬಿಟ್ಟರೆ ಡಿ.ಸಿ. ಕಚೇರಿಯ ಕಲ್ಲು ಕಟ್ಟಡಗಳ ಮೇಲೆ ಮಂಕಾಗಿ ಉರಿಯುತ್ತಿದ್ದ ನಿಯಾನ್ ಬೆಳಕು ಮಬ್ಬಾಗತೊಡಗಿತ್ತು...
ಅಳಬೇಡಮ್ಮಾ... ಊಟ ಬಂದಿದಿಯಾ... ಅಂದ.
ಬಂದಿದೆಯಣ್ಣಾ... ಗೆಳತಿ ರೂಮಿನ ಬಾಗಿಲ ಬಳಿಯಿಟ್ಟು ಹೋಗಿದ್ದಾಳೆ. ಕೊರೊನಾ ವೈರಸ್ ಆಕೆಗೆ ತಗುಲುವ ಭಯ. ಮಾತಿಲ್ಲ, ಪೋನಲ್ಲೇ.. ಸಮಾಧಾನದ ಮಾತಾಡುತ್ತಾಳೆ. ಪಾಪ ಒಳ್ಳೇಳು... ಅಂದಳು.
ಸರಿ ಮೊದಲು ಊಟ ಮಾಡಿ ಮಾತ್ರೆ ನುಂಗಿ ಚಿಂತೆ ಬಿಟ್ಟು ಗುಣಮುಖವಾಗುವುದರ ಕಡೆ ಮಾತ್ರ ಗಮನ ಕೊಡಿ ತಿಳಿತಾ. ನಾಳೆ ಕರೆಮಾಡುವೆ. ಗೆಲುವಾಗಿರಬೇಕು. ನೀವು ಮೆಡಿಕಲ್ ಡಿಪಾರ್ಟ್ಮೆಂಟ್ನಲ್ಲಿರೋರು. ಧೈರ್ಯ ಹೇಳುವವರು ನೀವೇ ಹೀಗಾದರೇ...? ಅಂದ.
ಇಲ್ಲಣ್ಣಾ.. ಯಾಕೋ.. ನಿಮ್ಮ ಸಾಂತ್ವನಕ್ಕೆ, ಕಾಳಜಿಗೆ ದುಃಖದ ಬುತ್ತಿ ಬಿಚ್ಚಿಕೊಂಡೆ ಸಾರಿ.. ಅಂದಳು.
ಸಾರಿ- ಹೇಳಬೇಡಮ್ಮಾ.. ನಿನಗೆ ಸಮಾಧಾನ ಮಾಡುವುದೇ ನಮ್ಮಂತವರಿಗೆ ಸವಾಲು. ನಿಮ್ಮ ಬದುಕಿನಲ್ಲಿ ಏನೆಲ್ಲಾ ನಡೆದಿದೆಯಲ್ಲಾ... ನಿನ್ನ ಒಡಲ ದುಃಖ ಕೇಳಿ ನನಗೆ ಅಪ್ಪ ಓದುತ್ತಿದ್ದ ಕಷ್ಟಕಾರ್ಪಣ್ಯದ ’ನಳದಮಯಂತಿ’ ಕತೆ ನೆನಪಾಯಿತು. ಸರಿ ಹೊತ್ತಾಗುತ್ತದೆ. ಊಟ ಮಾಡಿ.. ನಾಳೆ ಮಾತಾಡಿಸುವೆ’ ಅಂತಂದು ಮಾತು ನಿಲ್ಲಿಸಿದ. ‘ಸರಿಯಣ್ಣಾ’ ಅಂತ ಆಕೆಯೂ ಮಾತನ್ನು ಮೌನಕ್ಕೆ ಸರಿಸಿದಳು.
ಒಳಗೆ ಕಂಟ್ರೋಲ್ರೂಂನಲ್ಲಿ ನೂರಾರು ಕರೆಗಳು... ಸಿಬ್ಬಂದಿ ಮಾತನಾಡುತ್ತಲೇ ಇದ್ದರು. ಮೆಲ್ಲನೆದ್ದು ಬೈಕಿನಲ್ಲಿದ್ದ ಬಿಸಿನೀರು ಕುಡಿದು ದುಃಖ ನುಂಗಿಕೊಂಡ. ಬಿಸಿ ನೀರಿನಿಂದ ಕೊರೋನಾ ವೈರಸ್ ಗಂಟಲಲ್ಲೇ ಸಾಯುತ್ತವೆಯೆಂಬ ಟಿ.ವಿ.ಯಲ್ಲಿ ದಿನವಿಡೀ ತೋರಿಸುತ್ತಿದ್ದ ಜಾಹೀರಾತಿಗೆ ತಕ್ಕಂತೆ ಬದುಕು ರೂಪಿಸಿಕೊಳ್ಳತೊಡಗಿದ್ದ. ಮೆಲ್ಲನೆ ಒಳಬಂದು ನಿತ್ಯ ಕೂಡುತ್ತಿದ್ದ ಕುರ್ಚಿಯಲ್ಲಿ ಕೂತ. ಮನಸ್ಸು ನೋವಿನಲ್ಲಿ ಅದ್ದಿಹೋಗಿತ್ತು. ನೂರಾರು ಯೋಚನೆಗಳು ಬೆನ್ನಿಡಿದು ಬಾಧಿಸತೊಡಗಿದವು.
*
ಹಗರಿದಂಡೆಯ ಊರು ಸಂಗಮನಾಥನದು. ತಂದೆ ತೀರಿ ಹತ್ತು ವರುಷದ ಮೇಲಾಗಿತ್ತು. ಆತ ಇಡೀ ಮನೆಯ ಬದುಕನ್ನು ನೆಮ್ಮದಿಯಲ್ಲಿಟಿದ್ದು ನೆನಪಾಯಿತು. ಅಪ್ಪ ತೀರಿದ ಮೇಲೆ ತಾಯಿ ದುಃಖದಲ್ಲಿ ಮುಳುಗಿ ಕಣ್ಣೀರಾಕುತ್ತಾ ಅನ್ನ ನೀರು ಬಿಟ್ಟು ಮೂಲೆಸೇರಿ ಮಲಗಿದ್ದಳು. ಓಣಿಯ ಮಂದಿ ಆಕೆಗೆ ಸಮಾಧಾನ ಮಾಡಿ ಉಣಿಸಿ ಬದುಕ ಬಂಡಿಯನ್ನೆಳೆಯಲು ಸಾಂತ್ವನ ತುಂಬಿದ್ದು ನೆನಪಾಯಿತು. ನಂತರ ಆಕೆ ಸದಾಪೇಚಾಡುತ್ತಲೇ ಹೊಲ-ಮನೆ ತೋಟಗಳಲ್ಲಿ ಮುಪ್ಪಿನ ವಯಸ್ಸಿನಲ್ಲೂ ಆಯಾಸಗೊಂಡು ದುಡಿಯುತ್ತಿದ್ದಳು. ತಮ್ಮ, ಅಪ್ಪ ತೀರಿದ ಮೇಲೆ ಸಾಲಿಬಿಟ್ಟು ಒಕ್ಕಲುತನವನ್ನು ಪ್ರೀತಿಸಿದ ಮಗನೊಂದಿಗೆ ಬೆವರು ಸುರಿಸಿ ಹೊಲಗಳಲ್ಲಿ ದುಡಿದು ಊರು-ಕೇರಿಯಲ್ಲಿ ಸೈಯೆನಿಸಿಕೊಂಡಿರುವುದು ಮನಕೆ ನೆಮ್ಮದಿ ತಂದಿತ್ತು.
ಹೊರಗೆ ತುಂತುರು ಮಳೆ ಮೆಲ್ಲನೆ ಬೀಸಿದ ತಂಗಾಳಿ ಕಿಟಕಿಯ ಮೂಲಕ ಕಂಟ್ರೋಲ್ ರೂಂನ ಕಿಟಿಕಿಯ ಮೂಲಕ ಒಳಬಂದು ಸಂಗಮನಾಥನ ಮುಖಕ್ಕೆ ಚುಂಬಿಸಿ ತಂಪು ತಂದಿತು. ಕಲ್ಲುಕಟ್ಟಡದ ಗೋಡೆಗೆ ನೇತಾಡುತ್ತಿದ್ದ ನಿಯಾನ್ ಬೆಳಕನ್ನು, ತುಂತುರು ಮಳೆಯನ್ನು ನೋಡುತ್ತಲೇ ಭಾವಪರವಶನಾದ.
ಅಪ್ಪ, ಮಳೆ ಬಾರದ ದಿನಮಾನಗಳಲ್ಲಿ ಊರಜನ ಆತಂಕಕ್ಕೆ ಒಳಗಾಗುತ್ತಿದ್ದಾಗ ಮೇಟಿ ಶರಣಪ್ಪ ತಾತನ ಬಂಕದ ಕಟ್ಟೆಯ ಮೇಲೆ ಕೂತು ನಡುರಾತ್ರಿಯವರೆಗೆ.. ‘ನಳದಮಯಂತಿ’ಯ ಕಾವ್ಯವನ್ನು ಗಮಕದಲ್ಲಿ ಓಣಿಯ ಜನರ ಮನಸೂರೆಗೊಳ್ಳುವಂತೆ ಓದುತ್ತಿದ್ದ ನೆನಪು ಬಾಲ್ಯದಿಂದ ಸಂಗಮನಾಥನ ಮನದಲ್ಲಿ ಸದಾ ಹಚ್ಚಹಸಿರಾಗಿ ಉಳಿದುಕೊಂಡು ಬಿಟ್ಟಿತ್ತು. ಅಪ್ಪನಿಗೂ ಅಷ್ಟೆ. ಸಂಗಮನಾಥನೆಂದರೆ ಎಲ್ಲಿಲ್ಲದ ಮೋಹ. ಮದುವೆಯಾಗಿ ಎಂಟು ವರುಷದ ಮೇಲೆ ಹುಟ್ಟಿದವನೆಂದು. ಅಪ್ಪ ಅಮ್ಮ ಕೂಡಲ ಸಂಗಮನಾಥನಿಗೆ ಹರಕೆಯೊತ್ತು ಊರಿಂದ ಸಂಗಮಕ್ಕೆ ಪಾದಯಾತ್ರೆ ಮಾಡಿ.. ಪೂಜೆ ಮಾಡಿಸಿ ಹರಕೆ ತೀರಿಸಿದ್ದು, ನಂತರದ ದಿನಗಳಲ್ಲಿ ತಾಯಿ ತನಗೆ ಜನ್ಮಕೊಟ್ಟಿದ್ದು, ತದನಂತರ ತಮ್ಮ, ತಂಗಿ ಹುಟ್ಟಿದ್ದು ಎಲ್ಲಾ ಸಂಗಮನಾಥನ ಹರಕೆಯ ಫಲವೆಂದು ಅಮ್ಮ ಈಗಲೂ ಹೇಳುತ್ತಾಳೆ.
ತಾನು ಹುಟ್ಟಿದಾಗ ತಾತನ ಸಂಭ್ರಮ ಹೇಳತೀರದು. ಇಡೀ ಓಣಿಯ ಜನಕ್ಕೆ ಸಿಹಿ, ಹೋಳಿಗೆ ಮಾಡಿಸಿ ಉಣಿಸಿದ್ದು... ತಾತನೊಂದಿಗೆ ಹೊಲಗದ್ದೆ ತೋಟಗಳಲ್ಲಿ ತಿರುಗಾಡುತ್ತಾ ಬೆಳೆದಿದ್ದು ನೆನಪಾಗತೊಡಗಿತು.
ನಳದಮಯಂತಿಯ ಕತೆಯೆಷ್ಟು ಸುಂದರ ಕಾವ್ಯ? ಅಪ್ಪ ತ್ರಿತಾಳ ಜಂಪೆ, ಆದಿತಾಳ.. ಮುಂತಾದ ರಾಗಗಳಲ್ಲಿ ಕಾವ್ಯವನ್ನು ಮನಕರಗುವಂತೆ ಗಮಕದಲ್ಲಿ ಓದುತ್ತಿದ್ದ. ದಮಯಂತಿ ಅಪ್ರತಿಮ ಸೌಂದರ್ಯವತಿ. ನಳರಾಜನೂ ಅಷ್ಟೇ. ಇಬ್ಬರಿಗೂ ಹಂಸಪಕ್ಷಿಯು ಪ್ರೇಮಾಂಕುರವಾಗುವಂತೆ ಮಾಡಿದ್ದು, ದಮಯಂತಿಯ ತಂದೆ ಮಗಳಿಗೆ ಸ್ವಯಂವರವನ್ನು ಏರ್ಪಡಿಸಿದ್ದು, ಮಗಳು ಯಾರನ್ನು ಮೆಚ್ಚಿ ಪುಷ್ಪಹಾರವನ್ನಾಕುತ್ತಾಳೋ ಅವರಿಗೆ ಮಗಳನ್ನು ಧಾರೆಯೆರೆದು ಕೊಡುವುದಾಗಿ ತಂದೆ ಭೀಮರಾಯ ಹೇಳಿದ್ದು, ಆಕೆಯ ರೂಪ ಸೌಂದರ್ಯಕ್ಕೆ ಮರುಳಾದ ದೇವಾನುದೇವತೆಗಳು ಸ್ವಯಂವರಕ್ಕೆ ಬರುವುದು ಶನಿರಾಜನ ದಮಯಂತಿಯನ್ನು ಮದುವೆಯಾಗುವ ಹಂಬಲದಲ್ಲಿ ಬರುವುದು, ಹಂಸ ಪಕ್ಷಿಯು ಹೇಳಿದ ಸುಂದರಾಂಗನ ನೆನಪನ್ನೇ ಮನದಲ್ಲಿಟ್ಟುಕೊಂಡು ದಮಯಂತಿ ನಳರಾಜನಿಗೆ ಹೂವಿನ ಹಾರಹಾಕಿ ಪತಿಯಾಗಿ ಸ್ವೀಕರಿಸಿದ್ದು, ಇದನ್ನು ಕಂಡ ಶನಿದೇವ.. ‘ನೀವೇಗೆ ದಂಪತಿಗಳಾಗಿ ದಾಂಪತ್ಯ ಜೀವನ ನಡೆಸುತ್ತೀರಿ ನೋಡುವೆ’ ಯೆಂದು ಶಪಥ ಹಾಕಿ ಹೋಗಿದ್ದು, ಅವರಿಗೆ ಕೊಡಬಾರದ ಕಷ್ಟಕಾರ್ಪಣ್ಯಗಳನ್ನು ನೀಡುತ್ತಲೆ ಹೋಗುವುದು.. ನಳರಾಜ ಶನಿಕಾಟದಿಂದ ಜೂಜಾಟ ರಾಜ್ಯ ಕೋಶ ಕಳೆದುಕೊಳ್ಳುವುದು. ಗಂಡ-ಹೆಂಡತಿ ಕಾಡು ಪಾಲಾಗುವುದು, ಎಲ್ಲವನ್ನೂ ಛಲದಿಂದ ಎದುರಿಸಿ ಗೆಲ್ಲುತ್ತಾರೆ. ನಂತರ ನಳದಮಯಂತಿಯರ ಅಮರ ದಾಂಪತ್ಯಕ್ಕೆ ಶನಿರಾಜನೇ ಸೋಲೊಪ್ಪಿಕೊಂಡು ಅವರಿಗೆ ಶುಭ ಹಾರೈಸುವುದು, ಎಂತಹ ಅರ್ಥಗರ್ಭಿತ ಕಾವ್ಯವದು?
ಅಪ್ಪ ಶ್ರಾವಣಮಾಸದ ನೀರವ ರಾತ್ರಿಯಲ್ಲಿ ಮನಕಲಕುವಂತೆ ಗಮಕದಲ್ಲಿ ರಾಗಬದ್ಧವಾಗಿ ಕಾವ್ಯ ಓದುವುದನ್ನು ತಾನು ನಿದ್ದೆಗೆಟ್ಟು ಕುಳಿತು ಕೇಳಿದ ನೆನಪು.. ಸಂಗಮನಾಥನಿಗೆ ತುಂತುರು ಮಳೆಯ ರಾತ್ರಿಯಲ್ಲಿ ನೆನಪಾಗತೊಡಗಿತು. ಅದೇನೋ ಊರ ಜನರ ನಂಬಿಕೆ ತಿಳಿಯದು. ನಳದಮಯಂತಿ ಕಾವ್ಯ ಓದಿದರೆ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಈಗಲೂ ಓಣಿಯ ಜನರ ನಾಲಿಗೆಯ ಮೇಲಿದೆ. ಆದರೆ ಅಪ್ಪ ತೀರಿದ ಮೇಲೆ ಶ್ರಾವಣದ ರಾತ್ರಿಯಲ್ಲಿ ಗಮಕ ಕಾವ್ಯದ ಓದು ನಿಂತು ಹೋಯಿತು. ತನಗೆ ಅಪ್ಪನೇ ದೊಡ್ಡ ರೋಲ್ಮಾಡಲ್ಯೆನಿಸಿತು ಸಂಗಮನಾಥನಿಗೆ.
ರಾತ್ರಿ ಸರಿಯತೊಡಗಿತ್ತು...!
ಅಪ್ಪನಿಗೆ ಕಾಣಿಸಿಕೊಂಡ ಕುತ್ತಿಗೆಯ ನೋವು ತಾಳಲಾರದೆ ಹಾಸಿಗೆ ಹಿಡಿದಿದ್ದ, ತನಾಗ ಪದವಿ ಮುಗಿಸಿ ಉಪಾಧ್ಯಾಯ ವೃತ್ತಿಗೆ ಸೇರಿಕೊಂಡಾಗ ಅಪ್ಪ ಹಾಸಿಗೆಯಿಂದಲೇ ಮೆಲ್ಲನೆ ಮೇಲೆದ್ದು ತಲೆ ನೇವರಿಸಿ ಆಶೀರ್ವದಿಸಿದ್ದು.. ನೆನಪಾಗತೊಡಗಿತು.
ಕಂಟ್ರೋಲ್ರೂಂನ ಅಗಣಿತ ಕರೆಗಳ ಗದ್ದಲದ ನಡುವೆ ಮನಸ್ಸು ಖಿನ್ನತೆಗೆ ಒಳಗಾಗತೊಡಿತು. ಮತ್ತೆ ಮೆಲ್ಲನೆದ್ದು. ಹೊರಬಂದು ಡಿ.ಸಿ.ಕಚೇರಿಯ ಆವರಣದಿಂದ ಹೊರನಡೆದು ಬಂದು ಎದುರಿಗೆ ಕಾಣುತ್ತಿದ್ದ ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದ ರೈಲ್ವೆ ನಿಲ್ದಾಣದ ಕಡೆಗೆ ಹೆಜ್ಜೆ ಹಾಕತೊಡಗಿದ. ತುಂತುರು ಮಳೆ ಕಡಿಮೆಯಾಗಿತ್ತು. ಕೊರೊನಾ ವೈರಸ್ ಕಾಟಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಹಂತ ಹಂತವಾಗಿ ಲಾಕ್ಡೌನ್ ಘೋಷಣೆ ಮಾಡಿತ್ತು. ಎರಡು ತಿಂಗಳಿಂದ ರೈಲುಗಳ ಓಡಾಟ ನಿಂತು ಹೋಗಿತ್ತು. ಇಡೀ ರೈಲ್ವೆ ನಿಲ್ದಾಣ ಬಣಗುಟ್ಟತೊಡಗಿತ್ತು. ರೈಲು ಹಳಿಗಳನ್ನೇ ದಿಟ್ಟಿಸಿ ನೋಡಿದ. ಸದ್ದಿಲ್ಲದೆ ಮಲಗಿದ್ದವು. ಎಲ್ಲೆಲ್ಲಿಗೋ ಸಾಗುವ ಜನರನ್ನೊತ್ತು ಸಾಗಿಸಿದ ಹಳಿಗಳು ಸದ್ದಿಲ್ಲದೆ ಮಲಗಿದ್ದವು. ರೈಲ್ವೆ ಪ್ಲಾಟ್ಫಾರಂ ಮೇಲೆ ಒಂದು ಸುತ್ತಾಕಿ ಕಲ್ಲುಬೆಂಚಿನ ಮೇಲೆ ಕೂತ. ಜನರಿಲ್ಲದ ನಿರ್ಜನವಾದ ನಿಲ್ದಾಣ ಮನಸ್ಸಿಗೆ ಹಿತವೆನಿಸತೊಡಗಿತು.
ಊರು ನೆನಪಾಗತೊಡಗಿತು.!
ಅಪ್ಪನಿಗೆ ತಾನು ಉಪಾಧ್ಯಾಯ ವೃತ್ತಿಗೆ ಸೇರಿದ್ದು ಹೆಮ್ಮೆಯಾಗಿತ್ತು. ಎಲ್ಲರೂ ಅಕ್ಷರವಂತರಾಗಬೇಕೆಂಬ ಕನಸು ಆತನಲ್ಲಿತ್ತು. ಅದರಲ್ಲೂ ಹಳ್ಳಿಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ತಾನೇ ಎಷ್ಟೋ ಮಕ್ಕಳನ್ನು ಊರ ಶಾಲೆಗೆ ಸೇರಿಸಿ ಫೀಜು ಕಟ್ಟಿ, ಪಾಠಿಪುಸ್ತಕಗಳನ್ನು ಕೊಡಿಸುತ್ತಿದ್ದ. ಊರಾಳ ಮಕ್ಕಳಿಗೆ ಅಪ್ಪನೆಂದರೆ ಭಯ, ತಮ್ಮನ್ನು ಹಿಡಿದು ಶಾಲೆಗೆ ಸೇರಿಸುತ್ತಾನೆಂದು. ಅಪ್ಪನಿಗೆ ಮಹಾಭಾರತ, ರಾಮಾಯಣ ಕಾವ್ಯಗಳೆಂದರೆ ಅಚ್ಚುಮೆಚ್ಚು. ನಡುಮಧ್ಯಾಹ್ನದವರೆಗೆ ಹೊಲಗದ್ದೆಗಳಲ್ಲಿ ದುಡಿದು ಬಂದು, ಸಂಜೆ ಬಂಕದಲ್ಲಿ ಕೂತು ಓದುತ್ತಿದ್ದ. ಅಪ್ಪನ ಆಸೆಯಂತೆ ತಾನು ಉಪಾಧ್ಯಾಯನಾದೆ. ಮದುವೆಯಾದೆ ಮಕ್ಕಳಾದವು. ಅಪ್ಪ ಎಲ್ಲವನ್ನೂ ಕಂಡು.. ಸಂಭ್ರಮಿಸಿ, ಹಾಸಿಗೆ ಹಿಡಿದು ಕಾಯಿಲೆಯಿಂದ ಮೇಲೇಳಲೇ ಇಲ್ಲ. ಅದೇ ಶ್ರಾವಣದ ನಡುಮಧ್ಯಾಹ್ನದಲ್ಲಿ ಪಡಸಾಲಿಯಲ್ಲಿ ಎಲ್ಲರೊಂದಿಗೆ ಕಿರುಧ್ವನಿಯಲ್ಲಿ ಮಾತನಾಡುತ್ತಲೇ ಪ್ರಾಣಬಿಟ್ಟಿದ್ದ. ಅಪ್ಪನ ಸಾವು ಇಂದಿಗೂ ಸಂಗಮನಾಥನನ್ನು ದುಃಖದ ಪ್ರಪಾತಕ್ಕೆ ತಳ್ಳುತ್ತಿತ್ತು. ಕಣ್ಣು ಹನಿಗೂಡತೊಡಗಿತ್ತು. ರೈಲ್ವೆ ಪ್ಲಾಟ್ಫಾರಂ ಮೇಲೆ ವಿಷಲ್ ಊದುತ್ತಾ ಪಿ.ಸಿ. ಬಂದ, ಬಂದಾತ ‘ತಾವ್ಯಾರು.. ಇಲ್ಲೇಕೆ ಕುಂತೀರಿ’ ಅಂದ.
‘ನಾನು ಡಿ.ಸಿ. ಆಫೀಸಿನ ಕೊರೋನಾ ಕಂಟ್ರೋಲ್ ರೂಂನ ನೋಡಲ್ ಆಫೀಸರ್... ಬೇಷರವಾಗಿ ಬಂದು ಕೂತಿರುವೆ’ನೆಂದ ಸಂಗಮನಾಥ
‘ಕತ್ತಲಾಯಿತು.. ಹೋಗಿ ಸಾರ್.. ಕೊರೊನೊ ವೈರಸ್ ಮುಳ್ಳಿನ ಚೆಂಡುಗಳು ತಂಪೊತ್ತಿನಲ್ಲಿ ಗಾಳಿಯಲ್ಲಿ ಹಾರಿ ಬಂದು ತಾಕುತ್ತವೆ. ಡೇಂಜರಸ್, ಒಂದೋಗಿ ಒಂದಾಗಬಾರದು. ಎದ್ದೇಳಿ... ಎರಡು ತಿಂಗಳಿಂದ ರೈಲುಗಳಿಲ್ಲದೆ.. ಜನರನ ಕಾಯೋದೆ ಡ್ಯೂಟಿ ಆಯಿತು.. ಎದ್ದೇಳಿ... ಸಾರ್..’ ಆತನ ಮಾತಿಗೆ ಮಿಟ್ಟಿಬಿದ್ದ. ಮೆಲ್ಲನೆ ಕಲ್ಲು ಬೆಂಚಿನಿಂದೆದ್ದು ನಿಲ್ದಾಣದಿಂದ ಹೊರಬಂದ. ಆಟೋ-ವಾಹನಗಳಿಲ್ಲದ ರೈಲ್ವೆ ನಿಲ್ದಾಣದ ಆವರಣ ಬಯಲು ಬಯಲಾಗಿತ್ತು. ಎಲ್ಲಾ ಕೊರೊನಾ ವೈರಸ್ ಕಾಟವೆಂದು ಮರುಗುತ್ತಾ ಕಂಟ್ರೋಲ್ ರೂಂ ಕಡೆ ನಡೆಯ ತೊಡಗಿದ. ಡಾಂಬರು ರಸ್ತೆಯಲ್ಲಿ ವಾಹನಗಳ ದಟ್ಟಣೆಯಿರಲಿಲ್ಲ.
ಮೆಲ್ಲನೆ ರಸ್ತೆ ದಾಟಿ ಡಿ.ಸಿ. ಕಚೇರಿಯ ಆವರಣದೊಳಕ್ಕೆ ಬಂದ. ದೂರದ ಕಂಟ್ರೋಲ್ರೂಂನಲ್ಲಿ ಅನೇಕ ಉಪಾಧ್ಯಾಯರು ಹೋಂ ಐಸೋಲೇಷನ್ನಲ್ಲಿದ್ದ ಕೊರೊನ ಪೀಡಿತರೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಸದ್ದು ಕಿವಿಗೆ ಕೇಳಿಸುತ್ತಲೇ ಇತ್ತು. ಸಮಯಸದ್ದಿಲ್ಲದೆ ಸರಿಯುತ್ತಿತ್ತು. ತನ್ನಂತೆ ಅನೇಕ ಮೇಷ್ಟ್ರುಗಳನ್ನು ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಮನೆಯ ನಿಗಾದಲ್ಲಿರುವ ರೋಗಿಗಳೊಂದಿಗೆ ಸಾಂತ್ವನ ಹೇಳಲು ಜಿಲ್ಲಾಧಿಕಾರಿಗಳು, ಅಧ್ಯಾಪಕರೇ ಧೈರ್ಯದ ಮಾತಾಡಿ ರೋಗಿಗಳಿಗೆ ಸಾಂತ್ವನ, ಸಮಾಧಾನ ಮಾಡುತ್ತಾರೆಂದು ನೇಮಕ ಮಾಡಿದ್ದರು. ಕೊರೊನಾ ವಿರುದ್ಧ ಹೋರಾಡಲು ಅನೇಕ ಇಲಾಖೆಯ ಸಿಬ್ಬಂದಿಗಳು ಕಂಕಣಕಟ್ಟಿ ದುಡಿಯುತ್ತಿದ್ದರು. ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದವು. ದಿನೇ ದಿನೆ ಕೊರೋನಾ ಪೀಡಿತರ ಸಂಖ್ಯೆ ಟಿ.ವಿ. ಪರದೆಯಲ್ಲಿ ಹೆಚ್ಚುತ್ತಾ ಹೋಗುವುದು ಸಂಗಮನಾಥನ ಅರಿವಿಗೆ ಬಂತು. ದೇಶ ಎಂದೂ ಕಂಡರಿಯದ ರೋಗಕ್ಕೆ ತುತ್ತಾಗಿ ದಿನೆ ದಿನೇ ಸಾವಿನ ಸಂಖ್ಯೆಯು ಹೆಚ್ಚಾಗತೊಡಗಿತ್ತು. ಮನಸ್ಸು ನೋವಿನಲ್ಲಿ ಅದ್ದಿತೆಗೆದಂತಾಗಿತ್ತು.
ನೆನಪುಗಳು ಜಾರತೊಡಗಿದ್ದವು.
ಅಪ್ಪ ಕಷ್ಟಕಾಲದಲ್ಲಿ ಮನೆಯ ಮಂದಿಯನ್ನು ಸುಖವಾಗಿಟ್ಟಿದ್ದ. ತನಗೆ ತಮ್ಮನಿಗೆ ತನ್ನ ಕಷ್ಟ ಕಾರ್ಪಣ್ಯಗಳನ್ನು ತೋರಿಸಿಕೊಳ್ಳದೇ, ಸದಾ ಲವಲವಿಕೆಯಲ್ಲಿ ಹೊಲ-ಗದ್ದೆಗಳಲ್ಲಿ ಬೆವರು ಸುರಿಸಿ ದುಡಿದು ತಮ್ಮನ್ನೆಲ್ಲಾ ಬೆಳೆಸಿದ್ದು ನೆನೆದು ಸಂಗಮನಾಥನಿಗೆ ದುಃಖ ತಡಿಯಲಾಗಲಿಲ್ಲ. ಕಣ್ಣಂಚಿನಲ್ಲಿ ಮೂಡಿದ ಕಣ್ಣೀರನ್ನೊರೆಸಿಕೊಂಡು ಕಂಟ್ರೋಲ್ರೂಂ ಒಳಬಂದು ನಿತ್ಯ ಕೂಡುತ್ತಿದ್ದ ಜಾಗದಲ್ಲಿ ಬಂದು ಕೂತ. ಮೊಬೈಲ್ ರಿಂಗಾಗತೊಡಗಿತ್ತು. ಕೊರೊನಾ ವೈರಸ್ಗಾಗಿ ಎಲ್ಲಾ ರಿಂಗ್ಟೋನ್ಗಳಲ್ಲಿ ಬರುವ ಎಚ್ಚರಿಕೆಯ ಸಂದೇಶ ‘ಮನೆಯೊಳಗೆಯಿರಿ ಕೊರೊನಾ ವೈರಸ್ ದಿನದಿನೆ ವೇಗವಾಗಿ ಹರಡುತ್ತಿದೆ. ಬಾರಿ ಬಾರಿ ತೊಂದರೆ ಕೊಡುತ್ತದೆ. ಮಾಸ್ಕ್ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಅಂತ ಕೇಳಿ ಕೇಳಿ ತಲೆಚಿಟ್ಟು ಹಿಡಿಸುತ್ತಿತ್ತು. ಕಣ್ಣು ಮುಚ್ಚಿ ಹಾಗೇ ಕೂತ.
ನಂತರ ಬಂದ ಕರೆ.. ‘ಸಾರ್ ನಾವು ಬೊಮ್ಮನಹಳ್ಳಿಯಿಂದ ಮಾತನಾಡ್ತಿರೋದು..’ ಅಂದ. ಆತನ ಧ್ವನಿಯಲ್ಲಿ ನಿತ್ರಾಣದ ಸ್ಥಿತಿಯಲ್ಲಿತ್ತು.
ಸಂಗಮನಾಥ ಮನೆಯ ನೆನಪುಗಳ ಜಾತ್ರೆಯಿಂದ ಹೊರಬಂದ.
‘ಹೇಳಿ.. ಕೊರೊನಾ ಕಂಟ್ರೋಲ್ ರೂಂ ಏನು ಬೇಕಿತ್ತು’ ಸಂಗಮನಾಥ ನೋವಿನಿಂದ ಕೇಳಿದ.
‘ಸಾರ್.. ನಮಗೆ ಹೊಟ್ಟೆಗೆ ಅನ್ನ ಬೇಕಿತ್ತು... ಹಸಿದು ಸಾಯುತ್ತಿದ್ದೇವೆ’ ಅಂದಿತು ಆ ವ್ಯಕ್ತಿ.
‘ಏನಂದ್ರೀ.. ಅನ್ನನಾ.. ಇಲ್ಲೆಲ್ಲಿ ಅನ್ನ ಸಿಗುತ್ತೆ..? ನೀವು ಹೋಂ ಕ್ವಾರಂಟೈನ್ನಲ್ಲಿದ್ದೀರಿ ಗೊತ್ತಾ..’
ಸಂಗಮನಾಥನ ಮಾತಿಗೆ.. ‘ಹೌದು ಸ್ವಾಮಿ.. ನಾವು.. ಮನೆಯಲ್ಲೇಯಿರೋದು.. ಕಾರ್ಪಂಟರಿ ಕೆಲಸ ಮಾಡಿಕೊಂಡು ಎರಡು ತುತ್ತು ದುಡಿದು ತಿನ್ನುತ್ತಿದ್ದೇವು. ಅದೇನೋ ಕೊರೊನಾ ರೋಗ ಅಂತ. ಮೂಗಿನಲ್ಲಿ ಸಿಂಬಳ ತೆಗೆದು ನಿಮ್ದು ಪಾಜಿಟಿವ್ ರಿಪೋರ್ಟ್ ಬಂದದ. ಹದಿನಾಲ್ಕು ದಿನ ಮನೆಯಲ್ಲಿರಿ ಅಂತ ನಾಕು ಗುಳಿಗೆ ಕೊಟ್ಟು, ಮನೆಗೆ ಸೀಲ್ ಹಾಕಿ ಹೋದರು. ದುಡಿಮೆಯಿಲ್ಲ.. ಗೋಮೆಂಟು ಆಸ್ಪತ್ರೆ ಕ್ವಾರಂಟೈನ್ ತೆಗೆದು ಹೋಂ ಐಸೋಲೇಷನ್ನಲ್ಲಿರಿ ಅಂತಾ ಕಾನೂನು ಮಾಡ್ಯಾರಲ್ಲಾ.. ನಮುಗ ಅನ್ನನೀರು ಯಾರು ಕೊಡ್ತಾರೆ ಸ್ವಾಮಿ.? ನಮುಗ ಜ್ವರ-ಕೆಮ್ಮು, ನೆಗಡಿ ಯಾವುದೂ ಇಲ್ಲ. ಕೊರೊನಾ ಹೆಸರಿಟ್ಟು ಹೋಗ್ಯಾರ.. ಹಸಿವೆಯಿಂದ ಮೊನ್ನೆ ಮುಪ್ಪಾದ ತಾಯಿ ಚಿಂತ್ಯಾಗ ಪ್ರಾಣಬಿಟ್ಟಳು. ತಾಯಿಗೆ ಮಣ್ಣು ಮಾಡಾಕ ಬಿಡಲಿಲ್ಲ. ಅಂಬುಲೆನ್ಸ್ನ್ಯಾಗ ತಗೊಂಡೊಗಿ ಎಲ್ಲ್ಯಾಕಿದರೋ.. ಏನೋ ಹೆಂಡತಿಗೆ ಭಯ ಬಂದದ. ಹಸಿವಿನ್ಯಾಗ ನಾವು ಸತ್ತೋತಿವಿ ಸಾರ್.. ನಮ್ಮುನ್ನ ಕರಗೊಂಡೊಗಿ ಅನ್ನ ನೀರು.. ಕೊಟ್ಟು ಕೆಲ್ಸ ಕೊಡಿರಿ. ಇಲ್ಲುದ್ರೆ ಪ್ರಾಣ ಬಿಡುತೀವಿ..’ ಅಂದಿದ್ದು ಕೇಳಿ ಸಂಗಮನಾಥನಿಗೆ ವ್ಯವಸ್ಥೆಯ ಕರಾಳ ಮುಖ ಅರಿವಾಗಿ ಸಿಟ್ಟು ದುಃಖ ಒಟ್ಟೊಟ್ಟಿಗೆ ಬಂತು. ಪತ್ರಿಕೆಯಲ್ಲಿ ಬಂದ ಜಾಹೀರಾತು ವಿವರ ನೆನಪಿಗೆ ಬಂತು. ಜೇಬಿನಿಂದ ಬರೆದಿಟ್ಟಕೊಂಡಿದ್ದ ಚೀಟಿ ತೆಗೆದ. ಕೊರೊನಾ ಪೀಡಿತರ ಮನೆ ಬಾಗಿಲಿಗೆ ಅಹಾರ, ಹಣ್ಣು ಸಾಮಾಗ್ರಿ ಒದಗಿಸುವ ಸಂಸ್ಥೆಯ ಹೆಸರಿಗೆ ಪೋನಾಯಿಸಿ ‘ಸಾರ್.. ಈ ನಂಬರ್ ತಗೊಳ್ಳಿರೀ.. ಗಂಡ- ಹೆಂಡತಿ ಹಸಿವೆಯಿಂದ ಸಾಯ್ತಿದಾರ.. ಅವರ ಹಸಿವಿಗೆ..’ ಅನ್ನುವಾಗ ದುಃಖ ಒತ್ತರಿಸಿ ಬಂತು. ‘ಸಾರ್ ಈಗಿಂದೀಗಲೇ ಅವರಿಗೆ ಊಟ, ಹಣ್ಣು ಹಂಪಲು ದಿನಸಿ ಕಳುಹಿಸಿಕೊಡುತ್ತೇವೆ. ಚಿಂತೆ ಬಿಡಿ’ ಎಂದು ಪೋನಿಟ್ಟರು. ಸಂಗಮನಾಥನಿಗೆ ನಿರಾಳವೆನಿಸತೊಡಗಿತ್ತು. ದೇಶದಲ್ಲಿ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರು ನೂರಾರು ಮೈಲು ಬರಿಗಾಲಲ್ಲಿ ನಡೆದು ಹಸಿವೆಯಿಂದ ಸತ್ತವೆರೆಷ್ಟೋ ಎಂದು ತಲ್ಲಣಗೊಂಡ. ಬರುವ ಅಗಣಿತ ಕರೆಗಳಿಗೆ ಸಾಂತ್ವನ ಹೇಳುವ ಧ್ವನಿಯೂ ಆತನಲ್ಲಿ ಹಿಂಗಿಹೋಗಿತ್ತು. ದಿನಗಳು, ವಾರಗಳು, ತಿಂಗಳುಗಳು ಗತಿಸುತ್ತಲೇ ಹೋಗಿದ್ವು. ಸುದ್ದಿಮಾಧ್ಯಮಗಳು ಕೊರೋನಾ ವೈರಸ್ ವಿರಾಟ್ ಸ್ವರೂಪವನ್ನು ನಿತ್ಯ ನಿತ್ಯ ಪೈಪೋಟಿಯಲ್ಲಿ ಪ್ರಸಾರ ಮಾಡುತ್ತಲೇ ಟಿ.ಆರ್.ಪಿ. ಹೆಚ್ಚಿಸಿಕೊಂಡು ಜನರನ್ನು ಆತಂಕದಲ್ಲಿ ನೂಕಿದ್ದವು. ವ್ಯವಸ್ಥೆ ಜಾಗೃತಗೊಳ್ಳಬಹುದೆಂಬ ಕಾಳಜಿ ಅವುಗಳಿಗಿರಬಹುದು. ಆದರೆ ದಪ್ಪ ಚರ್ಮದ ಪ್ರಭುತ್ವಕ್ಕೆ ಅರಿವಾಗುತ್ತಲೇ ಇಲ್ಲ. ಅನ್ನ ನೀರು ಕೊಡದ ಪ್ರಭುತ್ವ ಹೋಂ-ಐಸೋಲೇಷನ್ ಹೊಸ ನಿಯಮ ಜಾರಿಗೆ ತಂದು ಬಡವರ ಹಸಿದ ಹೊಟ್ಟೆಗೆ ಕಾನೂನು ಬರೆ ಎಳೆದಿತ್ತು. ನಿತ್ಯ ಖಾಯಿಲೆ ಪೀಡಿತರ ಸಂಖ್ಯೆ ಘೋಷಣೆ ಮಾಡಿಕೊಂಡು.. ಸಾವಿನ ಲೆಕ್ಕಕೊಡುತ್ತಾ ನೆಮ್ಮದಿಯ ಉಸಿರಾಟಕ್ಕೆ ಭಂಗ ತಂದು ಬೀಗುವ ವ್ಯವಸ್ಥೆ ಬಗ್ಗೆ ಕಡು ಕೋಪ ಬಂತು. ಮೆಲ್ಲನೆ ಮಾಸ್ಕ್ ತೆಗೆದು ಸಂಗಮನಾಥ ಗೋಡೆಯ ಮೇಲಿನ ಗಡಿಯಾರವನ್ನು ದಿಟ್ಟಿಸಿ ನೋಡಿದ. ಹತ್ತು ಗಂಟೆಯಾಗತ್ತಲಿತ್ತು. ತನ್ನ ಪಾಳಿಯ ಕೆಲಸದ ಅವಧಿ ಮುಗಿದಿತ್ತು. ಬೇರೆ ಪಾಳಿಯವರು ಬಂದು ದುಃಖದ ಕರೆಗಳಿಗೆ ಧ್ವನಿಗೂಡಿಸುತ್ತಾರೆಂದು.. ಮೆಲ್ಲನೆ ಹೊರಬಂದು ಬೈಕಿನಲ್ಲಿದ್ದ ಬಿಸಿನೀರು ಕುಡಿದು, ಧಣಿವಾರಿಸಿಕೊಂಡು ಮನೆಯತ್ತ ಹೊರಡಲು ಸಿದ್ಧವಾಗಿ ಗಾಡಿಯ ಮೇಲೆ ಕೂತ.
ಕತ್ತಲು ಹೆಪ್ಪುಗಟ್ಟತೊಡಗಿತ್ತು..!
ಸಂಗಮನಾಥ ದುರ್ಗಿ ಗಡಿ ದಾಟಿ ಮನೆಯ ಮುಂದೆ ಬಂದು ಗಾಡಿ ನಿಲ್ಲಿಸಿದಾಗ ಮಗಳು ಸ್ಯಾನಿಟೈಸರ್ ಬಾಟಲಿ ಹಿಡಿದು ಜಗುಲಿಯಲ್ಲಿ ನಿಂತಿದ್ದಳು. ಆಕೆ ಅಂಗೈಗೆ ಹಾಕಿದ ದ್ರವರೂಪದ ಎಣ್ಣೆಯನ್ನು ಬೆರಳು, ಅಂಗೈಗಳಿಗೆ ತಿಕ್ಕಿತಿಕ್ಕಿ ತೊಳೆದ. ಜಗುಲಿಯ ಕೆಳಗಿದ್ದ ಬಚ್ಚಲು ಮನೆಯಲ್ಲಿ ಬಿಸಿನೀರು ಸ್ನಾನ ಮಾಡಿದ. ಬಿಸಿ ನೀರೇ ಕೊರೊನಾ ವೈರಸ್ಗೆ ರಾಮಬಾಣವೆಂದು ವೈದ್ಯರು ಸಲಹೆಯನ್ನು ತಪ್ಪದೇ ಪಾಲಿಸುತ್ತಿದ್ದ. ಸ್ನಾನ ಮಾಡಿ ದೇವರ ಕೋಣೆಯ ಮುಂದೆ ನಿಂತು ಕೈಮುಗಿದು ಹಜಾರಕ್ಕೆ ಬಂದ. ಕೊರೊನಾ ದೇಶದಲ್ಲಿ ತಂದಿಟ್ಟ ಆಪತ್ತುಗಳನ್ನು ಟಿ.ವಿ.ಪರದೆಯಲ್ಲಿ ತೋರಿಸುತ್ತಲೇ ಇದ್ದರು. ಚಾನಲ್ ಬದಲಾಯಿಸಿ ಹಾಡುಗಳನ್ನು ಹಾಕಿದ. ಗಾಯಕಿಯೊಬ್ಬಳು ಸೊಗಸಾಗಿ ಹಳ್ಳಿ ಸೊಗಡಿನ ಜನಪದ ಹಾಡುಗಳನ್ನು ಹಾಡುತ್ತಿದ್ದಳು. ಮನಕೆ ತಂಪೆನಿಸತೊಡಗಿತು. ಮಾಳಿಗೆಯ ಮೇಲಿದ್ದ ಅಮ್ಮ ಕೆಳಗೆ ಬಂದಳು. ಅಮ್ಮ ತನ್ನನ್ನು ಕಾಯುತ್ತಾ ಉಂಡಿರಲಿಲ್ಲ. ಎಲ್ಲಾರೂ ಹಾಲಿನಲ್ಲಿ ಊಟಕ್ಕೆ ಕೂತರು. ಅಮ್ಮ ಮಂಕಾಗಿದ್ದಳು. ಊರು ನೆನಪಾಗಿರಬೇಕೆಂಬ ಸಂಗಮನಾಥ ತಾಯಿಯ ಮುಖಭಾವದಿಂದ ಅರಿತುಕೊಂಡ. ‘ಅಮ್ಮ ಆರಾಮದೀಯಾ.. ಯಾಕ ಮಂಕಾಗಿದಿಯಿ?’ ಅಂದ. ತಾಯಿ ತಟ್ಟನೆ ಊರು-ಹೊಲ ಮನೆಯ ಚಿಂತೆಯಿಂದ ಹೊರಬಂದು ‘ನಮಗೇನು ಆಗೈತಪಾ ಉಷಾರಿದಿನಿ ಚಿಂತೆ ಮಾಡಬ್ಯಾಡ..’ ಅಂದಳು. ಎಂಬತ್ತರ ಗಡಿ ದಾಟುತ್ತಿದ್ದ ಅಮ್ಮ, ಅಪ್ಪ ತೀರಿ ಹತ್ತು ವರುಷದ ಮೇಲಾಗತೊಡಗಿತ್ತು. ಸದಾ ಅಪ್ಪನ ನೆನಪಲ್ಲಿ ಹೊಲ-ಮನೆಗಳಲ್ಲಿ ದಣಿದು ದುಡಿಯುವ ಅಮ್ಮ ಪೇಟೆಗೆ ಬಂದು ವಾರವಾಗುತ್ತಿದ್ದಂತೆ, ಊರು ದನಕರು ತೋಟ ಮನೆಗಳ ಪೇಚಾಟ ಸುರು ಮಾಡಿಕೊಂಡು ಹಗರಿ ದಂಡೆಯ ಊರಿಗೆ ಕಾತರಿಸಿ ಹೊರಟೇ ಬಿಡುತ್ತಾಳೆ.
‘ನಾಳೆ.. ಊರಾಳ ಬಸ್ಸಿಗೆ ನನ್ನ ಕೂಡಿಸಿ ಬಿಡಪಾ ಆಕಳು ಇಯೆಂಗಾಗಿತ್ತು. ಹೆಣ್ಣು ಕರುಯೆತ್ತರೆ ಅದರ ವಂಶ ಬೆಳಿತದ. ನಾನೇ ಆರೈಕೆ ಮಾಡಬೇಕು. ನಿಮ್ಮ ತಮ್ಮನ ಹೆಂಡ್ತಿ ಹಾಲು- ಹೈನ ಮುಟ್ಟಂಗಿಲ್ಲ..’ ಮೆಲ್ಲನೆ ಆಕಳಿಸುತ್ತಾ ನುಡಿದಳು. ‘ಇನ್ನೊಂದು ವಾರ ಇರಮ್ಮಾ’ ಮಗ ಸಂಗಮನಾಥನ ಮಾತನ್ನು ನಯವಾಗಿ ತಳ್ಳಿ ಹಾಕಿದ ತಾಯಿ.. ‘ನನುಗ ಈ ಪ್ಯಾಟೆ ಜೀವ್ನ ಒಗ್ಗೋದಿಲ್ಲ. ಅದೇನೋ ಕೊರೊನಾ ರೋಗಂತ ಜನ ಮನ್ಯಾಗ ಬಾಗಿಲಾಕ್ಕೊಂಡು ಇರ್ತಾರ. ಇದೇನು ಊರಪ್ಪಾ’ ಅಂದಳು. ತಾಯಿಗೆ ವಯಸ್ಸಾಗುತ್ತಿದೆ. ಕೊರೊನಾ ವೈರಸ್ ತಗುಲದಂತೆ ನೋಡಿಕೊಳ್ಳಬೇಕು. ಈಗ ಹಳ್ಳಿಗಳೇ ಸುರಕ್ಷಿತ ಜಾಗವೆಂದುಕೊಂಡ. ಎಲ್ಲಾರೂ ಮಾತನಾಡಿಸುತ್ತಲೇ ಊಟ ಮುಗಿಸಿದರು. ಅಮ್ಮ ಮಾಳಿಗೆ ಮೇಲೆ ಮಲಗಲು ಹೋದಳು. ಸಂಗಮನಾಥನೂ ತಾಟಿನಲ್ಲಿ ಕೈತೊಳೆದು ಮಾಳಿಗೆ ಮೇಲೆ ಬಂದ. ತಾಯಿ ಚಾಪೆ ಹಾಸಿಕೊಂಡು ಮಲಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಅಲ್ಲಿಯೇ ಇದ್ದ ಕಟ್ಟಿಗೆಯ ಕುರ್ಚಿಯ ಮೇಲೆ ಕುಳಿತ. ಗಾಳಿ ತಣ್ಣಗೆ ಬೀಸುತ್ತಿತ್ತು. ದೇಹಕ್ಕೆ ಮನಸ್ಸಿಗೆ ಹಿತವೆನಿಸತೊಡಗಿತು. ಆಗಸದ ತುಂಬೆಲ್ಲಾ ಚುಕ್ಕೆಗಳು ಕಾಣಿಸುತ್ತಿದ್ದವು. ಮಗಳು ಮೇಲೇರಿ ಬಂದು ಎಲ್ಲಾರಿಗೂ ಹಾಸಿದಳು. ತಾಯಿ ಜೊತೆ ಮಾತಾಡಬೇಕೆನಿಸಿತು. ‘ಅಮ್ಮಾ ನನ್ನಿಂದೆ ಒಬ್ಬ ತಂಗಿ ಹುಟ್ಟಿದ್ದಳಂತೆ ಆಕೆಯ ಹೆಸರು ಆಕೆ ಸಾಯಲು ಕಾರಣವೇನಮ್ಮಾ’ ಅಂದ. ತಾಯಿ ಎಲೆ ಅಡಿಕೆ ಹಾಕಿಕೊಂಡು ಮುಗಿಲಲ್ಲಿ ಮೆಲ್ಲನೆ ಏರುತ್ತಿದ್ದ ಚಂದಿರನನ್ನು ನೊಡುತ್ತಾ.. ‘ಅದೊಂದು ದೊಡ್ಡ ಕತೆಯಪ್ಪಾ. ಆಕೆಗೆ ಜ್ವರ ಬಿಟ್ಟು ಬಿಟ್ಟು ಬರುತ್ತಿತ್ತು. ವಿಪರೀತ ಕೆಮ್ಮು, ನಿಮ್ಮಪ್ಪ ಎಲ್ಲಾ ಕಡೆ ಆಕೆನ ಹೆಗಲಮ್ಯಾಲ ಎತ್ತಿಕೊಂಡೋಗಿ ತೋರಿಸ್ತಿದ್ದ. ಕುತ್ತಿಗೆ ಕೆಳಗ ಕುಂಕುಮದಾಂಗ್ಹ ಮಚ್ಚೆಯಿತ್ತು. ನೋಡಾಕ ಚೆಂದ ಇದ್ದಳು. ಆಗ ಊರಿಗೆ ಬಸ್ಸಿರಲಿಲ್ಲ. ಜ್ವರ ನಿಲ್ಲಲಿಲ್ಲ. ಅದೇನು ಖಾಯಿಲೆನೋ ಒಂದಿನ ಮಧ್ಯಾಹ್ನದ ಹೊತ್ತು ಮೈಕೆಂಡವಾಗಿ ಉಸಿರಾಟ ನಿಂತು ನಿಮ್ಮ ತಂಗಿ ಶಿವನ ಪಾದ ಸೇರಿದಳಪಾ’ ಅಕೆಗೆ ದಮಯಂತಿ ಅಂತ ಹೆಸರಿಟ್ಟಿದ್ದೀವಿ. ನಿಮ್ಮಪ್ಪ ಶ್ರಾವಣದಾಗ ಓದುತ್ತಿದ್ದನಲ್ಲಾ ನಳರಾಜನ ಕತ್ಯಾಗ ಬರೋ ಆತನ ಹೆಂಡತಿ ಹೆಸರು. ದಮಯಂತಿ ಅಂತಾ. ದಮಯಂತಿ ಅಂದ್ರೆ ನಿಮ್ಮಪ್ಪನಿಗೆ ಬಲು ಪ್ರೀತಿ ಮಗಾ. ಮಗಳು ತೀರಿದ ಮ್ಯಾಗ.. ಆಕ್ಯಾನ ತಾನೇ ಅಂಗೈಯಾಗ ತಗೊಂಡು ಹೋಗಿ ಮಣ್ಣು ಮಾಡಿದ್ದ. ತಿಂಗಳು ಕಾಲ ನಿಮ್ಮಪ್ಪ ಸರಿಯಾಗಿ ಉಣ್ಣದೇ ಚಿಂತ್ಯಾಗ ಹಾಸಿಗೆ ಹಿಡಿದ್ದ.’ ಅಮ್ಮ ಮಾತು ನಿಲ್ಲಿಸಿ ಕಣ್ಣೀರೊರಸಿಕೊಂಡಳು. ‘ದಮಯಂತಿ.. ನನ್ನ ತಂಗಿ’ ಸಂಗಮನಾಥ ಉದ್ಗಾರ ತೆಗೆದ. ಕೊರೊನಾ ಕಂಟ್ರೋಲ್ರೂಂನಲ್ಲಿ ಕರೆ ಮಾಡಿದ ನರ್ಸ್ ಕೂಡ ದಮಯಂತಿ ಅಲ್ಲವೆ? ನಾಕಾರು ಬಾರಿ ಪೇಚಾಡಿಕೊಂಡ. ತೀರಿದ ತಂಗಿ.. ಇಂದು ಎಲ್ಲೋ ಹುಟ್ಟಿ, ಕರುಳ ಬಳ್ಳಿಗೆ ಹೊಸ ಜೀವ ತುಂಬುತ್ತಿರಬಹುದೇ?ಯೆಂದು ಪೇಚಾಡಿಕೊಂಡ. ಅಮ್ಮ ಮಲಗಿದಳು. ಸಂಗಮನಾಥ ಚಾಪೆಯ ಮೇಲೆ ಅಡ್ಡಾದ. ಒಮ್ಮೆ ದಮಯಂತಿಯನ್ನು ಭೇಟಿಯಾಗಬೇಕೆಂದು ಕನವರಿಸಿದ. ನಿದ್ದೆ ಕಣ್ಣುಗಳನ್ನು ಮುಚ್ಚತೊಡಗಿತ್ತು.
**
ಮೂಡಲು ಹರಿದು ಮಾರೊತ್ತೇರಿದರೂ ಸಂಗಮನಾಥನಿಗೆ ಎಚ್ಚರವಾಗಿರಲಿಲ್ಲ. ಮನೆಯ ಮುಂದಿನ ರಸ್ತೆಯಲ್ಲಿ ಮುನಿಸಿಪಾಲಿಟಿಯ ಕಸದ ಲಾರಿಯ ಕರ್ಕಶವಾದ ಮೈಕಿನ ‘ಮನೆಯಲ್ಲಿದ್ದರೆ.. ಜನ ಬರೋದಿಲ್ಲ ಕೊರೊನಾ’ ಎಂಬ ಕಿವಿಗಡಚಿಕ್ಕುವ ಸದ್ದಿಗೆ ದಿಗ್ಗನೆದ್ದು ಕೂತ. ಬಿಸಿಲು ಚುರುಗುಟ್ಟತೊಡಗಿತ್ತು. ಮಾಳಿಗೆಯಿಂದ ಕಣ್ಣು ತಿಕ್ಕಿಕೊಳ್ಳುತ್ತಾ ಕೆಳಗಿಳಿದು ಬಂದ. ನಿತ್ಯಕರ್ಮ ಮುಗಿಸಿ ಸ್ನಾನ ಮಾಡಿ ಹಜಾರಕ್ಕೆ ಬಂದು ಕುಳಿತ. ಟಿ.ವಿ. ಪರದೆಯ ಮೇಲೆ ಕೊರೋನಾ ವೈರಸ್ ವಿರಾಟ್ ಸ್ವರೂಪವನ್ನು ಬಿತ್ತರಿಸುತ್ತೇ ಯಿತ್ತು. ಸಿಟ್ಟು ರವ್ವನೆಯೇರತೊಡಗಿತು. ಓ.ವಿ. ಬಂದ್ ಮಾಡಿದ. ಹೊರಗೆ ಅಂಗಳದಲ್ಲಿ ಅರಳಿನಿಂತ ಹೂಗಿಡಗಳನ್ನು ನೋಡುತ್ತಾ ಮನಕ್ಕೆ ಆಹ್ಲಾದವನ್ನು ತುಂಬಿಕೊಳ್ಳತೊಡಗಿದ. ಅಡಿಗೆ ಮನೆಯಲ್ಲಿ ಹೆಂಡತಿಯ ರೊಟ್ಟಿ ಬಡಿಯುವ ಸದ್ದು ಕೇಳಿಸುತ್ತಲೇ ಇತ್ತು. ಅಮ್ಮ ಹೊರಗೆ ಹೂಗಿಡಗಳ ಕೆಳಗೆ ಬೆಳೆದ ಹುಲ್ಲು-ಕಸಕಡ್ಡಿ ತೆಗೆಯುವ ಕಾಯಕದಲ್ಲಿ ನಿರತಳಾಗಿದ್ದಳು. ಅಮ್ಮ ಸದಾ ಏನಾದರೊಂದು ಕೆಲಸದಲ್ಲಿ ತಲ್ಲೀನವಾಗಿರುತ್ತಾಳೆ. ಅಪ್ಪ ತೀರಿದ ಮೇಲೆ ‘ದುಡಿದೇ ತಿನ್ನಬೇಕೆಂಬ’ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಳು. ಊರಲ್ಲಿಯೂ ಅಷ್ಟೇ. ಊರ ಮುಂದಿನ ತೋಟದಲ್ಲಿ ಸದಾ ಹಣ್ಣಿನ ಗಿಡಗಳ ಕೆಳಗೆ ಕಳೆ ತೆಗೆಯುತ್ತಾ ದನ ಕರುಗಳಿಗೆ ಮೇವು-ನೀರು ಹಾಕುತ್ತಾ ತನ್ನದೇ ಲೋಕದಲ್ಲಿ ಮುಳುಗಿ ಹೋಗುತ್ತಿದ್ದರ ನೆನೆದು ಹೃದಯ ತುಂಬಿ ಬಂತು. ‘ಅಮ್ಮಾ ರೊಟ್ಟಿ ತಿನ್ನೋಣ ಬಾರಮ್ಮಾ’ ಅಂತ ಕರೆದ. ‘ನಂದು ಆಯಿತು ಸಂಗಮ ನೀನು ಧಣಿದು ಮಲಗಿದ್ದಿ ಎಬ್ಬಿಸಾಕ ಹೋಗಲಿಲ್ಲ. ನೀನು ರೊಟ್ಟಿ ತಿನ್ನು ಅಂಗ್ಹಾ ನನ್ನ ಸಂಜಿ ಬಸ್ಸಿಗೆ ಊರಿಗೆ ಕಳುಸಪಾ’ ಅಂದಳು.
‘ಆಯಿತಮ್ಮಾ ನಿನ್ನಿಚ್ಚಾ’ ಅಂದು ಮಡದಿ ತಾಟಿನಲ್ಲಿ ತಂದುಕೊಟ್ಟ ರೊಟ್ಟಿ ಗುಗ್ಗರಿ ತಿನ್ನತೊಡಗಿದ. ಹಾಗೇ ಹೆಂಡತಿಗೆ ‘ಅಮ್ಮನಿಗೆ ಊರು ನೆಪ್ಪಗಿದೆ. ಮಧ್ಯಾಹ್ನ ಸಿಹಿ ಅಡುಗೆ ಮಾಡು’ ಅಂದ. ಹೆಂಡತಿ ತಲೆ ಹಾಕಿದಳು. ಒಳಕೋಣೆಯಲ್ಲಿ ಮಗ-ಮಗಳು ಆನ್ಲೈನ್ ಕ್ಲಾಸ್ ಅಂತ ಒಬ್ಬರು ಮೊಬೈಲ್, ಮತ್ತೊಬ್ಬರು ಲ್ಯಾಪ್ಟಾಪ್ನಲ್ಲಿ ಕಿವಿಗೆ ಏರ್ಪೋನಿಟ್ಟುಕೊಂಡು ಮೌನವಾಗಿದ್ದರು. ರೊಟ್ಟಿ ತಿನ್ನುತ್ತಲೇ ಸಂಗಮನಾಥ ಯೋಚನೆಯ ಆಳಕ್ಕೆ ಇಳಿದಿದ್ದ. ದಮಯಂತಿಯನ್ನು ಕಾಣಲೇಬೇಕೆಂದುಕೊಂಡ. ಆದರೆ ಹೋಂ ಐಸೋಲೇಷನ್ನಲ್ಲಿದ್ದಾಳೆ. ಆದರೂ ದೂರದಲ್ಲಿ ನಿಂತು ಆಕೆಯನ್ನು ಮಾತನಾಡಿಸಬೇಕೆನಿಸಿತು. ತನ್ನ ಕೈಲಾದಷ್ಟು ಸಹಾಯ ಮಾಡಬೇಕೆಂದುಕೊಂಡ. ರೊಟ್ಟಿ ತಿಂದು ತಾಟಿನಲ್ಲಿ ಕೈತೊಳೆದೆದ್ದು ಅಂಗಳದಲ್ಲಿಯ ಕಟ್ಟೆಗೆ ಬಂದು ಕೂತ. ಗಾಳಿ ತಣ್ಣಗೆ ಬೀಸುತ್ತಿತ್ತು. ಬೇಸಿಗೆಯ ದಿನಗಳ ಬಿಸಿಲು ಕಣ್ಣಿಗೆರಾಚುತ್ತಿತ್ತು. ಪ್ರತಿ ಬೇಸಿಗೆಯ ದಿನಗಳಲ್ಲಿ ಊರಿನ ತೋಟ ಸದಾ ನೆನಪಾಗುತ್ತಿತ್ತು.
ಶಾಲಾ-ಕಾಲೇಜು ರಜೆ ದಿನಗಳಲ್ಲಿ ತನಗೆ ಪ್ರಿಯವಾದ ಪುಸ್ತಕಗಳೊಂದಿಗೆ ಊರು ಸೇರಿ, ಊರ ಮುಂದಿನ ಮಾವಿನ ಮರದ ಕೆಳಗೆ ತಂಪಾದ ಮರಳಿನ ಮೇಲೆ ಓದುತ್ತಾ ಕೂತು. ಮೈಮರೆಯುತ್ತಿದ್ದ ದಿನಗಳು ನೆನಪಾಗತೊಡಗಿದವು. ಊರಿಗೆ ಹೋಗದೆ ಎರಡು ತಿಂಗಳು ಮೇಲಾಗಿತ್ತು. ಕೊರೊನಾ ವೈರಸ್ ಕಾಟದಿಂದ ಇಡೀ ಪೇಟೆ ತಲ್ಲಣಗೊಂಡಿತ್ತು. ಹಳ್ಳಿಯ ಮಂದಿ ಪೇಟೆ ಮಂದಿಯನ್ನು ಊರೊಳಗೆ, ಮನೆಯೊಳಗೆ ಬಿಟ್ಟುಕೊಳ್ಳಲು ಅನುಮಾನದಿಂದ ನೋಡುತ್ತಿರುವುದು ಗೆಳೆಯರಿಂದ ತಿಳಿದುಕೊಂಡಿದ್ದ. ತಾನು ಬೇರೆ ಕೊರೊನಾ ಕಂಟ್ರೋಲ್ರೂಂ ಡ್ಯೂಟಿಯಲ್ಲಿರುವುದು ಅರಿತು ಊರ ಕಡೆ ಮುಖಮಾಡಿರಲಿಲ್ಲ.
ಅಮ್ಮ ಬಂದು ತಾನು ಕುಳಿತು ಎದುರು ಕಟ್ಟೆಗೆ ಕುಳಿತಳು. ಆಕೆಯೊಂದಿಗೆ ಹೊಲ-ಮನೆ, ತೋಟ ಊರ ಸುದ್ದಿಗಳನ್ನು ಮಾತನಾಡುತ್ತಲೇ ಮನಸ್ಸನ್ನು ಹಗುರ ಮಾಡಿಕೊಂಡ.
ಹೊತ್ತು ಮಧ್ಯಾಹ್ನದ ಕಡೆಗೆ ಹೊರಳುತ್ತಿತ್ತು..!
ನಡು ಮದ್ಯಾಹ್ನ ಜಾರುತ್ತಿರುವಾಗ ಮನೆಯ ಪಡಸಾಲೆಯಲ್ಲಿ ಕೂತು ಶಾವಿಗೆ ಪಾಯಸ, ಸಂಡಿಗೆ ಹಪ್ಪಳ, ಅನ್ನ, ಸಾರು, ಉಂಡು ಹೊಟ್ಟೆ ತುಂಬಿಸಿಕೊಂಡರು. ಮಗಳು ಟಿ.ವಿ. ಸ್ವಿಚ್ ಹಾಕಿದಳು. ಕರುಳು ಕಿವುಚುವ ದೃಶ್ಯ. ಕೊರೊನಾ ವೈರಸ್ ಕಾಟದಿಂದ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಹೆಣ್ಣು ಮಗಳು ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ನೂರಾರು ಮೈಲು ದಿನಗೂಲಿ ನೌಕರಿ ಕಳೆದುಕೊಂಡು ಸುಡು ಡಾಂಬರು ರಸ್ತೆಯಲ್ಲಿ ಬರಿಗಾಲಲ್ಲಿ ತನ್ನೂರಿಗೆ ನಡೆದು ಹೋಗುವ ದೃಶ್ಯವದು. ಕಾಲುಗಳಲ್ಲಿ ಚರ್ಮ ಕಿತ್ತಿ ರಕ್ತ ಒಸರುತ್ತಿತ್ತು. ಕಂಕುಳಲ್ಲಿ ಕಂದಮ್ಮ ಹಸಿವಿನಿಂದ ಚೀರುವ ದೃಶ್ಯ. ಮನಕಲಕಿ ಬಿಟ್ಟಿತು. ಆಕೆ ಬಿಸಿಲಲ್ಲಿ ನಡೆದು ಹೋಗುವ ಪರಿಗೆ ತಲ್ಲಣಗೊಂಡ. ಅಮ್ಮ ‘ಯಪ್ಪೋ ಶಿವನೇ.. ಬಡವರ ಬದುಕು ಮೂರಬಟ್ಟೆಯಾಯಿತಲ್ಲಾ.. ಭಗವಂತ’ ಅಂತ ನಿಟ್ಟುಸಿರು ಬಿಟ್ಟಳು. ಬಸ್ಸು.. ವಾಹನಗಳ ಸಂಚಾರ ನಿಂತು ತಿಂಗಳ ಮೇಲಾಗಿತ್ತು. ಕೂಲಿಯಿಲ್ಲದೆ ಜನರ ಹೊಟ್ಟೆಗೆ ಅನ್ನವೂ ಸಿಗದಂತಾಗಿತ್ತು. ಎಷ್ಟೋ ಮಂದಿ ನಡೆಯುತ್ತಲೇ ದಾರಿಯಲ್ಲಿ ಜೀವ ಕಳೆದುಕೊಂಡಿದ್ದರು. ಸತ್ತ ಜನರ ಲೆಕ್ಕ ಮಾಧ್ಯಮಗಳು ಬಿತ್ತರಿಸುತ್ತಲೇ ಇದ್ದವು. ಲಾಕ್ಡೌನ್ನಿಂದ ಬಡ ಜನರ ಬದುಕು ನೋವಿನ ಪ್ರಪಾತಕ್ಕೆ ತಳ್ಳಲ್ಪಟ್ಟಿತ್ತು. ಪ್ರಭುತ್ವ ಲಾಕ್ಡೌನ್ ಮಾಡುವ ಮುಂಚೆ ಮುಂದಾಲೋಚನೆ ಮಾಡದೇ ಇದ್ದಕ್ಕಿದ್ದಂತೆ ಘೋಷಣೆ ಮಾಡಿದ್ದರಿಂದ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರು ನೆಲೆಯಿಲ್ಲದೆ ದಾರಿಯಲ್ಲೇ ಜೀವಬಿಟ್ಟಿದ್ದ ವರದಿಗಳು ಕಣ್ಣ ಮುಂದೆ ಬರತೊಡಗಿದಂತಾಗಿ ನಿಟ್ಟುಸಿರು ಬಿಟ್ಟ. ಅಷ್ಟರಲ್ಲಿ ಊರಿನಿಂದ ತಮ್ಮ ಬಂದ. ಆತನೂ ಹೊಲಮನೆ ಸುದ್ಧಿ ಮಾತಾಡುತ್ತಲೇ ಊಟ ಮಾಡಿದ. ಹೊತ್ತು ಸಂಜೆಯ ಕಡೆ ಹೊರಳುತ್ತಿರುವಾಗ ತಾಯಿಯನ್ನು ಕರೆದುಕೊಂಡು ತಮ್ಮ ಊರಿಗೆ ಹೊರಟ. ಸಂಗಮನಾಥನಿಗೆ ಅವರು ಹೊರಟು ಹೋದ ಮೇಲೆ ಮನಸ್ಸು ನೂರಾರು ಯೋಚನೆಗಳಲ್ಲಿ ತಾಕಲಾಡತೊಡಗಿತ್ತು. ಒಳಕೋಣೆಗೆ ಹೋಗಿ ಮಂಚದ ಮೇಲೆ ಅಡ್ಡಾದ. ನಿದ್ದೆಯ ಜೊಂಪು ಮೆಲ್ಲನೆ ಆವರಿಸತೊಡಗಿತು.
ಸಂಜೆ ಸಂಗಮನಾಥ ಎಚ್ಚರಗೊಂಡಾಗ ತಲೆ ನೋವಿನಿಂದ ದಿಮಿಗುಟ್ಟತೊಡಗಿತ್ತು. ಮುಖತೊಳೆದು, ಮನೆಯ ಮುಂದಿನ ವರಾಂಡದಲ್ಲಿ ಕುಳಿತ ಮಳೆ ಬಂದು ಹೋದ ಸಂಜೆ ಮನಕೆ ತಂಪೆನಿಸತೊಡಗಿತ್ತು. ಮಡದಿ ಚಹಾ ತಂದು ಕೊಟ್ಟಳು. ಮೆಲ್ಲನೆ ಚಹಾ ಹೀರುತ್ತಲೇ, ಮೊಬೈಲ್ ತೆಗೆದು ಫೇಸ್ಬುಕ್ ನೋಡಿದ. ಅನೇಕ ಪ್ರೇಂಡ್ಸ್ ರಿಕ್ವೆಸ್ಟಗಳು ಬಂದಿದ್ದವು. ಯಾರ ಸ್ನೇಹವೂ ಬೇಡವೆನಿಸಿತು. ಹಾಗೇ ವಿವರಗಳನ್ನು ಪರಿಶೀಲಿಸುತ್ತಲೇ ಹೋದ. ಹಲವಾರು ಹಿರಿಕಿರಿಯ ಬರಹಗಾರರು ಕೊರೊನಾ ಕುರಿತು ಬರೆದ ಕಾಮೆಂಟ್ಸ್ಗಳು, ಕವಿತೆಗಳು ಒಂದೊಂದಾಗಿ ಓದುತ್ತಾ ಹೋದಂತೆ ಮನಕ್ಕೆ ಹಿಂಸೆಯೆನಿಸತೊಡಗಿತು. ಉದ್ಯೋಗ ವಂಚಿತರ ಗೋಳುಗಳು, ವಲಸೆ ಕಾರ್ಮಿಕರ ಹಸಿವಿನ ಆಕ್ರಂದನಗಳು ಅನೇಕರು ಫೇಸ್ಬುಕ್ಗೆ ಪೇಸ್ಟ್ ಮಾಡಿ ಕೈತೊಳೆದುಕೊಂಡಿದ್ದರು. ಕೊರೊನಾ ವೈರಸ್ ಬರೆಯುವ ಮಂದಿಗೆ ಸರಕಾಗುತ್ತಿರುವುದು ಮನವರಿಕೆಗೆ ಬರತೊಡಗಿತು. ಕಾಲ ಪಕ್ಷಿಯ ನೆಗೆತ ಕುರಿತ. ಬೇಂದ್ರ ಅಜ್ಜನ ‘ಹಕ್ಕಿ ಹಾರುತಿದೆ ನೋಡಿದರಾ’ ಕವಿತೆ ನೆನಪಾಗತೊಡಗಿತು. ತಲೆ ದಿಮಿಗುಟ್ಟತೊಡಗಿತು. ಚಹಾ ಕುಡಿಯುವುದು ಮುಗಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಮಾಳಿಗೆ ಮೇಲತ್ತಿ ತಂಗಾಳಿಗೆ ವಾಕ್ ಮಾಡತೊಡಗಿದ. ಸುತ್ತಲ ಗಿಡಮರಗಳ ಕೊಂಬೆರಂಬೆಗಳಲ್ಲಿ ಗೂಡುಕಟ್ಟಿದ ಹಕ್ಕಿಗಳ ಚಿಲಿಪಿಲಿ ಸದ್ದು ನಿಧಾನವಾಗಿ ಕೇಳಿಸುತ್ತಲೇ ಇತ್ತು. ಕತ್ತಲ ಕಡೆ ಸಂಜೆ ಜಾರುತ್ತಿತ್ತು. ಮಾಳಿಗೆಯ ಸಮತಟ್ಟದ ಕುಂಬೆಯ ಮೇಲೆ ಹಾಗೆ ಮಲಗಿದ. ಆಗಸದಲ್ಲಿದ್ದ ಅಸಂಖ್ಯಾತ ನಕ್ಷತ್ರ ರಾಶಿ ನೋಡುತ್ತಲೇ ಭಾವಪರವಶನಾದ. ಮಗಳು ಊಟಕ್ಕೆ ಬಂದು ಕರೆದಾಗ ಎಚ್ಚರವಾಗಿ ನೆನಪುಗಳ ಜಾತ್ರೆಯಿಂದ ಹೊರಬಂದ. ಬೆಳದಿಂಗಳು ಮೂಡತೊಡಗಿತ್ತು. ಮಗಳಿಗೆ ‘ಮಾಳಿಗೆ ಮೇಲೆ ಊಟ ಮಾಡವಾ’ ಅಂದ. ಎಲ್ಲರೂ ಹುಟ್ಟುತ್ತಿದ್ದ ಎಳೆಯ ಬೆಳದಿಂಗಳಲ್ಲಿ ಪಕ್ಕದ ಬೀದಿಯ ಕಂಬದ ಬೆಳಕಿನಲ್ಲಿ ಊಟ ಮುಗಿಸಿದರು. ತಂಗಿ ದಮಯಂತಿಯ ನೆನಪು ಮತ್ತೆ ಕಾಡತೊಡಗಿತು. ಆಕೆ ಬದುಕಿದ್ದರೆ ಎಷ್ಟೋ ಚಂದದ ಸಡಗರವಿರುತ್ತಿತ್ತೋ ಮನೆಯೊಳಗೆ? ಪ್ರತಿ ಗೌರಿ ಹುಣ್ಣಿಮೆಗೆ ಆಕೆಯನ್ನು ತವರಿಗೆ ಕರೆತರುವ ಸಂಭ್ರಮದ ಕ್ಷಣಗಳು ಮನದಂಗಳದಲ್ಲಿ ಮೂಡತೊಡಗಿದವು. ಆಕೆಯ ಅಕಾಲಿಕ ಸಾವಿಗೆ ಮರುಗಿದ. ಆಗ ತಾನಿನ್ನು ಸಣ್ಣೋನಿರಬೇಕು. ಆಕೆಯ ಸಾವು ಆಗ ಅಷ್ಟಾಗಿ ಕಾಡಿರಲಿಲ್ಲ. ಅಪ್ಪ ಮಗ ಬೇಸು ಓದಿ ಉಪಾಧ್ಯಾಯನಾಗಬೇಕೆಂಬ ಕನಸಿಗೆ ದೂರದೂರಿನ ವಸತಿಶಾಲೆಗೆ ಸೇರಿಸಿದ್ದು, ತಂಗಿ ತೀರಿದ್ದು ಹೇಳಿರಲಿಲ್ಲ. ದಸರೆಯ ರಜೆಗೆ ಊರಿಗೆ ಬಂದಾಗ ಅಮ್ಮಾ ದಮಯಂತಿಯ ಸಾವಿನ ಸುದ್ದಿ ಹೇಳಿ ಸೀರೆ ಸೆರಗಿನಿಂದ ಕಣ್ಣೀರೊರಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಳು. ತಂಗಿ ದಮಯಂತಿಯೊಂದಿಗೆ ಅಜ್ಜನ ಎಂಟಂಕಣದ ಮನೆಯಲ್ಲಿ ಆಟವಾಡಿದ. ಜಗಳವಾಡಿದ ದಿನಗಳು ನೆನಪಾಗಿ ಕಾಡಿದವು. ಮೆಲ್ಲನೆ ಚಾಪೆ ಹಾಸಿಕೊಂಡು ಮಲಗಿದ ದುಃಖ ಉಮ್ಮಳಿಸಿ ಬಂತು. ಕಣ್ಣಿನಿಂದಿಳಿಯುತ್ತಿದ್ದ ಕಣ್ಣೀರನ್ನೊರಸಿಕೊಂಡ. ಮಡದಿ, ಮಗಳು ಅಡಿಗೆ ಸಾಮಾನುಗಳನ್ನು ಕೆಳಗೆ ತೊಳೆದಿಟ್ಟು ಮೇಲೆ ಬಂದರು. ಮಗಳು ‘ಅಪ್ಪಾ ನಿದ್ದೆ ಬಂತಾ..’ ಅಂದಳು. ದಮಯಂತಿಯ ನೆನಪಿನಿಂದ ಹೊರಬಂದು.. ‘ಇಲ್ಲಮ್ಮಾ ಮಧ್ಯಾಹ್ನ ಮಲಗಿದ್ದೆ ನಿದ್ದಿ ಬರ್ತಿಲ್ಲ..’ ಅಂತ ಮಗ್ಗಲು ಮಲಗಿ ಕಣ್ಣು ಮುಚ್ಚಲು ಯತ್ನಿಸಿದ. ಮತ್ತೆ ಅಂಗಾತ ಮಲಗಿ ಕಣ್ಣು ತೆರೆದ. ಆಗಸದ ತುಂಬೆಲ್ಲಾ ಚೆಲ್ಲಿದ ನಕ್ಷತ್ರ ರಾಶಿಯನ್ನು ನೋಡುತ್ತಲೇ ಕಣ್ತುಂಬಿಕೊಳ್ಳತೊಡಿಗಿದ. ‘ಸತ್ತವರು ಚುಕ್ಕಿಗಳಾಗುತ್ತಾರೆ’ ಎಂಬ ತಾತ ಹೇಳುತ್ತಿದ್ದ ಕತೆ ನೆನಪಾಗತೊಡಗಿತು. ಆಗಸದಲ್ಲಿ ಮಿನುಗುತ್ತಿದ್ದ ‘ಚನ್ನಮ್ಮನ ದಂಡೆ’ ಕಂಡು ದಮಯಂತಿಯೂ ಆ ದಂಡೆಯಲ್ಲಿ ಚುಕ್ಕಿಯಾಗಿ ಸೇರಿಕೊಂಡಿರಬಹುದೇ ಎಂದು ಊಹಿಸಿ ನೋಡು ನೋಡುತ್ತಾ ತಂಗಿಯ ಮುಖವನ್ನು ಮನಸ್ಸಿನಂಗಳದಲ್ಲಿ ಚಿತ್ರಿಸಿಕೊಂಡು ನಿದ್ದೆಯ ಮಬ್ಬಿನೊಳಗೆ ಹೋಗತೊಡಗಿದ. ಎಲ್ಲಡೆ ನೀರವ ಮೌನ ದೂರದ ಡಾಂಬರು ರಸ್ತೆಯಲ್ಲಿ ಹೊರಟ ವಾಹನಗಳ ಸದ್ದು ಮೆಲ್ಲಗೆ ಕಿವಿಗೆ ಅಪ್ಪಳಿಸುತ್ತಿತ್ತು. ಮೆಲ್ಲನೆ ನೋವಿನ ನೆನಪುಗಳಲ್ಲಿ ನರಳುತ್ತಿದ್ದ ಸಂಗಮನಾಥನನ್ನು ನಿದ್ದೆಯ ಮಬ್ಬು ಆವರಿಸಿಕೊಂಡಿತು.
***
ನಿದ್ದೆಯ ಮಬ್ಬು ಸಂಗಮನಾಥನನ್ನು ನಡುರಾತ್ರಿ ದಾಟುವವರೆಗೆ ಹಿಡಿದಿಟ್ಟುಕೊಂಡಿತ್ತು. ನಂತರ ನಿಧಾನಕ್ಕೆ ನಿದ್ದೆಯ ಮಬ್ಬುಯಿಳಿದು ಅವನ ಸುತ್ತ ತಿರುಗುತ್ತಿದ್ದ ಯೋಚನೆಗಳು ತಟ್ಟನೆ ಒಂದೊಂದಾಗಿ ಮನಸ್ಸಿನಂಗಳಕ್ಕೆ ಲಗ್ಗೆ ಹಾಕಿ ಕುಣಿಯತೊಡಗಿದವು. ಕಣ್ಣು ಬಿಟ್ಟ ಸ್ವಚ್ಛಂದ ಆಗಸ. ಅದೇ ಹೊಳೆಯುತ್ತಿದ್ದ ತಾರಾಮಂಡಲ. ಮೆಲ್ಲನೆದ್ದು ಬಚ್ಚಲು ಮನೆಗೆ ಹೋಗಿ ಕಾಲುಮಡಿದು ಬಂದು ಪಕ್ಕದ ಚೆಂಬಿನಲ್ಲಿದ್ದ ನೀರು ಕುಡಿದು ಮಲಗಿದ. ನಿದ್ದೆ ಹತ್ತಿರ ಸುಳಿಯಲಿಲ್ಲ. ಆದರೂ ಕಣ್ಣು ಆಕಡೆ ಈ ಕಡೆ ಹೊರಳಾಡಿ ರಗ್ಗನ್ನು ತುಂಬಾ ಹೊದ್ದುಕೊಂಡು ಮನಸ್ಸನ್ನು ಬೇರೆಡೆಗೆ ತಿರುಗಿಸಿ ನಿದ್ದೆಯನ್ನು ಸೆಳೆಯಲು ಯತ್ನಿಸಿದ. ಅದು ಹತ್ತಿರ ಬಂದು ಆತನೊಂದಿಗೆ ಹಗ್ಗಾಜಗ್ಗಾಟ ಮಾಡಿ ಒಂದಿಷ್ಟು ಸೋತಂತೆ ಕಂಡಿತು. ಆಗೂ ಹೀಗೂ ಮೂಡಲಲ್ಲಿ ಬೆಳ್ಳಿಚುಕ್ಕಿ ಮೂಡಿ ಮೂಡಣ ಬಯಲು ಕೆಂಪಾನುಕೆಂಪಗಾಗುವಾಗ ಎಚ್ಚರವಾಗಿ ಮೆಲ್ಲನೆದ್ದು ನಿತ್ಯಕರ್ಮ ಮುಗಿಸಿ ನಗರದಾಚೆ - ಬೆಟ್ಟಗಳವರೆಗೆ ವಾಕಿಂಗ್ ಹೊರಟ. ಬೆಳ್ಳಂಬೆಳಗಾಗತೊಡಗಿತ್ತು. ಸುಗ್ಗಿಯ ಕಾಲ ಮುಗಿದು ಹೊಲಗಳು ಬಯಲು ಬಯಲಾಗಿ ಕಾಣುತ್ತಿದ್ದವು. ಬೆಟ್ಟದ ಕೆಳಗಿದ್ದ ಬೇವಿನ ಮರದ ಕೆಳಗೆ ನಿಂತಿದ್ದ. ನಿತ್ಯದಂತೆ ರೂಢಿಯಲ್ಲಿದ್ದ ಕೆಲ ಯೋಗಾಸನಗಳನ್ನು ಮಾಡಿ, ಪ್ರಾಣಾಯಾಮ ಮಾಡಿದ. ಹೀಗೆ ಪದ್ಮಾಸನ ಭಂಗಿಯಲ್ಲಿ ಹುಟ್ಟುವ ಸೂರ್ಯನಿಗೆ ಮುಖಮಾಡಿ ಮೌನ ಮುದ್ರೆಯಲ್ಲಿ ಧ್ಯಾನಕ್ಕೆ ಕೂತ. ಎಲ್ಲಡೆ ನಿಶಬ್ದ. ದೂರದಲ್ಲಿ ಹಕ್ಕಿಗಳ ಕಲರವ ಬಿಟ್ಟರೆ ಎಲ್ಲೆಡೆ ಮೌನ ನಿಧಾನಕ್ಕೆ ಎಚ್ಚರಗೊಂಡು ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಮನೆಗೆ ಬಂದ. ಬಂದನವನೆ ಕಷಾಯ ಕುಡಿದು ದಿನಪತ್ರಿಕೆ ಮೇಲೆ ಕಣ್ಣಾಡಿಸಿದ. ಕೊರೊನಾ ಹಾವಳಿಯ ಸುದ್ದಿಗಳು ಜನರ ಸಂಕಟದ ಕಥೆಗಳನ್ನು ಓದಿ ನಿಟ್ಟುಸಿರು ಬಿಟ್ಟ. ದಮಯಂತಿಯನ್ನು ಕಾಣುವ ಹಂಬಲ ಹೆಚ್ಚಾಗತೊಡಗಿತು. ಅಡುಗೆ ಮನೆಯಲ್ಲಿದ್ದ ಹೆಂಡತಿಯನ್ನು ಕರೆದು ‘ಊರ ಕಡೆಯ ಗೆಳೆಯ ಆಸ್ಪತ್ರೆಯಲ್ಲಿದ್ದಾನೆ. ಅಡಿಗೆ ಮಾಡಿ ಬುತ್ತಿಕಟ್ಟಿಕೊಡು ಅವರಿಗೆ ಸಮಾಧಾನದ ಮಾತೇಳಿ ಬರುತ್ತೇನೆ. ಗಂಡನ ಮಾತಿಗೆ ಮಡದಿ ಸರಿ ಅಂದಳು. ಬಾತ್ರೂಂಗೆ ಹೋಗಿ ಸೆವರ್ ಆನ್ ಮಾಡಿ ತುಂತುರು.. ತುಂತುರಾಗಿ ಬೀಳುತ್ತಿದ್ದ ಬಿಸಿನೀರ ಹನಿಗಳಿಗೆ ಮೈಯೊಡ್ಡಿ ನಿಂತು ಸಾಬೂನಿನಿಂದ ಅಂಗಾಂಗಳನ್ನು ತಿಕ್ಕಿ ತಿಕ್ಕಿ ಹಗುರಮಾಡಿಕೊಂಡ. ಹೆಂಡತಿ ಅಡುಗೆ ಮನೆಯಲ್ಲಿ ರೊಟ್ಟಿ ಬಡಿಯುವ ಸದ್ದು ಕಿವಿಗೆ ಕೇಳಿಸುತ್ತಲೇ ಇತ್ತು. ಸ್ನಾನ ಮುಗಿಸಿ, ದೇವರ ಕೋಣೆಗೆ ಹೋಗಿ ವಿಭೂತಿ ಧರಿಸಿ ಜಗುಲಿ ಮೇಲಿದ್ದ ಎಲ್ಲ ದೇವರ ಪಟಗಳಿಗೆ ಕೈಮುಗಿದು ಗೋಡೆಯ ಮೇಲೆ ನೇತುಹಾಕಿದ್ದ ಪ್ರೀತಿಯ ಅಪ್ಪನ ಪೋಟೋಗೆ ಕೈಮುಗಿದ. ಅತನನ್ನು ನೋಡುತ್ತಲೇ ಭಾವ ಪರವಶನಾದ. ಅಪ್ಪನ ನೆನಪುಗಳೇ ಹಾಗೇ ಸಂಗಮನಾಥನನ್ನು ಸದಾ ಲವಲವಿಕೆಯಲ್ಲಿಡುತ್ತಲೇ ಬಂದಿದ್ದವು. ಎಷ್ಟೋ ಬಾರಿ ಆತನಿಗೆ ಬೇಸರವಾದಾಗಲೆಲ್ಲಾ ಮೊಬೈಲ್ನಲ್ಲಿದ್ದ ಅಪ್ಪನ ಫೋಟೋ ನೋಡುತ್ತಲೇ ಚೈತನ್ಯದ ಚಿಲುಮೆಯಾಗಿ ಬಿಡುತ್ತಿದ್ದ. ಹೊಸ ಭರವಸೆಯ ದಿಕ್ಕಿನ ಕಡೆಗೆ ಹೆಜ್ಜೆ ಹಾಕುತ್ತಿದ್ದ.
ಹೆಂಡತಿ ತಾಟಿನಲ್ಲಿ ರೊಟ್ಟಿ ಹೀರೇಕಾಯಿ ಪಲ್ಯ ತಂದು ‘ತಗಳ್ರೀ.. ರೊಟ್ಟಿ ತಿನ್ರೀ’ ಅಂದಾಗ ಎಚ್ಚರ. ಅಪ್ಪನ ಮಧುರ ನೆನಪುಗಳಿಂದ ಹೊರ ಬಂದು, ರೊಟ್ಟಿ ತಿಂದು ನೀರು ಕುಡಿದು ಮೆಲ್ಲನೆ ಡೇಗಿದ. ನಂತರ ಒಳಕೋಣೆಗೆ ಹೋಗಿ ಪ್ಯಾಂಟು ಶರ್ಟು ತೊಟ್ಟು ಹೊರ ಬಂದ ಮಗಳು ಟೀ ತಂದು ಕೊಟ್ಟಳು. ಸೋಪಾದ ಮೂಲೆಯಲ್ಲಿ ಕೂತು ಮನೆಯ ಮುಂದಿನ ಮೂಲೆಯಲ್ಲಿ ಕಾಣುತ್ತಿದ್ದ ತೆಂಗಿನ ಮರವನ್ನು ಕಣ್ಣಲ್ಲಿ ತುಂಬಿಕೊಳ್ಳತೊಡಗಿದ.
ಆತ ಸೋಪಾದ ಮೂಲೆಯಲ್ಲಿ ಕೂತರೆ ಮನ ಅರಳುತ್ತಿತ್ತು. ದೂರದ ನೀಲ ಆಗಸ, ಬಳಕುವ ತೆಂಗಿನ ಮರ. ಸಾಲು ಸಾಲಾಗಿ ಹಾರುವ ಹಕ್ಕಿಗಳ ದಿಂಡು ನೋಡುತ್ತಲೇ ಮಂತ್ರ ಮುಗ್ಧನಾಗುತ್ತಿದ್ದ. ಟೀ ಕುಡಿದು ಮುಗಿಸಿದ. ಮಡದಿ ಬುತ್ತಿ ಕಟ್ಟಿ ಚೀಲದಲ್ಲಿಟ್ಟು ತಂದು ಆತ ಕುಳಿತ ಡೈನಿಂಗ್ ಟೇಬಲ್ ಮೇಲಿಟ್ಟಳು. ಭಾವಲೋಕದಿಂದ ಹೊರಬಂದ.
ದಮಯಂತಿಯನ್ನು ಕಂಡು ಬುತ್ತಿಕೊಟ್ಟು ಆಕೆಯನ್ನು ಕಣ್ತುಂಬಾ ನೋಡಬೇಕೆಂಬ ಉಮೇದು ಕ್ಷಣಕ್ಷಣಕ್ಕೂ ಜಾಸ್ತಿಯಾಗತೊಡಗಿತ್ತು. ಹೊರಗಡೆ ಬಂದು ಬುತ್ತಿಯ ಚೀಲವನ್ನು ಸ್ಕೂಟಿಯ ಮುಂದಿಟ್ಟುಕೊಂಡು ಗಾಡಿ ಸ್ಟಾರ್ಟ್ ಮಾಡಿಕೊಂಡು ಪಡವಣ ದಿಕ್ಕಿನ ಕಡೆಗೆ ಹೊರಟ. ದುರ್ಗಿ ಗುಡಿ ಸರ್ಕಲ್ನಲ್ಲಿ ಗಾಡಿ ನಿಲ್ಲಿಸಿ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಹೂ-ಹಣ್ಣು ಕೊಂಡುಕೊಂಡ. ತಂಗಿ ದಮಯಂತಿಯನ್ನು ಕಾಣುವ ಸಂಭ್ರಮದಲ್ಲಿತ್ತು ಮನಸ್ಸು. ಜೇಬಿನಲ್ಲಿದ್ದ ಮೊಬೈಲ್ ತೆಗೆದು ದಮಯಂತಿಗೆ ಪೋನಾಯಿಸಿದ. ರಿಂಗಾಗತೊಡಗಿತು.
ಆ ಕಡೆಯಿಂದ ‘ಯಾರು ತಾವು?’ ಕಳೆಗುಂದಿದ ಧ್ವನಿ
‘ನಾನಮ್ಮ ಸಂಗಮನಾಥ ಡಿ.ಸಿ.ಆಫೀಸ್ ಕಂಟ್ರೋಲ್ ರೂಂನಿಂದ ನಿನ್ನೆ ರಾತ್ರಿ ಕರೆ ಮಾಡಿದ್ದೆನಲ್ಲಾ..’ ಅಂದ ಕರುಳ ಕುಡಿಯಂತೆ.
’ನಮಸ್ಕಾರಣ್ಣಾ ನೀವಾ ಅಂದಳು. ಕುತೂಹಲದಿಂದ
ನೀನಿರುವ ಜಾಗ ಹೇಳಮ್ಮಾ ಮಾಹಿತಿ ನೀಡಬೇಕಿದೆ ಅಂದ ತೊದಲುತ್ತಾ.
ಹೌದೇನಣ್ಣಾ ದೊಡ್ಡಾಸ್ಪತ್ರೆಯ ಹಿಂಭಾಗದಲ್ಲಿ ಶಾಂತಿನಗರ ಸರ್ಕಲ್ ಪಕ್ಕ ಇರುವ ಶಾಂತಿಧಾಮ’ ಅಂತ ಮನೆ ಹೆಸರಿದೆ. ಮನೆ ಮುಂದೆ ಮಾವಿನ ಮರವಿದೆಯಣ್ಣಾ’ ಸಂಗಮನಾಥ ಕೇಳಿಸಿಕೊಂಡು ಮೊಬೈಲ್ ಕಟ್ ಮಾಡಿದ. ಆ ಕಡೆಗೆ ಸಂತೋಷದಿಂದ ಸ್ಕೂಟಿ ಓಡಿಸತೊಡಗಿದ. ಬಾಲ್ಯದ ತಂಗಿ ದಮಯಂತಿಯ ರೂಪವನ್ನು ಮನದಂಗಳದಲ್ಲಿ ಚಿತ್ರಿಸಿಕೊಳ್ಳತೊಡಗಿದ. ಬಾಲ್ಯದ ಕ್ಷಣಗಳಿಗೆ ಮರಳಿದ. ಆದರೆ ತಂಗಿಯ ಚಿತ್ರ ಪೂರ್ಣ ಮನದ ಪರದೆಯಲ್ಲಿ ಮೂಡಿ ಕುತೂಹಲ ಹೆಚ್ಚಾಗತಡಗಿತ್ತು. ರಸ್ತೆಯಲ್ಲಿ ಜನ ಸಂಚಾರ ಕಡಿಮೆಯಿತ್ತು. ಕೊರೊನಾ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಮುಂಜಾನಿಯೇ ಎದ್ದು. ತರಕಾರಿ ದಿನಸಿಕೊಂಡು ಮನೆ ಸೇರಿ ದುಗುಡದಲ್ಲಿ ಬದುಕುತ್ತಿದ್ದರು. ಎಲ್ಲೋ ಹುಟ್ಟಿದ ವೈರಸ್ ದೇಶವ್ಯಾಪಿಯಾಗಿ ಮುಳ್ಳಿನ ಉಂಡೆಯಂತೆ ವೇಗವಾಗಿ ಸುತ್ತುತ್ತಾ ಜನರ ಸಾವು ಬದುಕಿನ ಮೇಲೆ ಚಲ್ಲಾಟವಾಡತೊಡಗಿತ್ತು. ಯಾರ ಮುಖದ ಮೇಲೆ ನೋಡಿದರೂ ಬಣ್ಣ ಬಣ್ಣಧ ವಿವಿಧ ನಮೂನೆಯ ಮಾಸ್ಕ್ಗಳು ರಾರಾಜಿಸತೊಡಗಿದ್ದವು. ಸಾಮಾಜಿಕ, ಮಾನಸಿಕ ಅಂತರಗಳನ್ನು ಕೊರೋನ ತಂದಿಟ್ಟಿತ್ತು. ಯೋಚಿಸುತ್ತಲೇ ಶಾಂತಿನಗರ ಸರ್ಕಲ್ಗೆ ಬಂದಿದ್ದ. ಪಕ್ಕದಲ್ಲಿ ಸ್ಕೂಟಿ ನಿಲ್ಲಿಸಿ ಸುತ್ತಲೂ ಕಣ್ಣಾಡಿಸಿದ. ದೂರದಲ್ಲಿ ಬೃಹದಾಕಾರದ ದೊಡ್ಡಾಸ್ಪತ್ರೆ ಕಾಣಿಸಿತು. ಜನ ಜಾತ್ರೆಯಂತೆ ಅತ್ತಿಂದಿತ್ತ ಇತ್ತಿಂದತ್ತ ಮಾಸ್ಕ್ ಧರಿಸಿ ತಿರುಗಾಡುತ್ತಿದ್ದರು. ಗಂಟಲು ದ್ರವ ಪರೀಕ್ಷೆಗೆ ಜನ ಸಾಲುಗಟ್ಟಿ ನಿಂತಿರುವುದು ಕಾಣಿಸಿತು. ಮನಸ್ಸು ನೋವಿಗೆ ಒಳಗಾಗತೊಡಗಿತು.
ನಾಲ್ಕು ಹೆಜ್ಜೆ ಹಾಕಿದ. ಎಡಭಾಗದಲ್ಲಿ ಮಾವಿನ ಮರ ಕಂಡಿತು. ಸ್ಕೂಟಿ ತಳ್ಳಿಕೊಂಡು ಆ ಕಡೆ ಹೊರಟ. ಶಾಂತಿಧಾಮ ಮನೆ ಕಾಣಿಸಿತು. ಬಾಗಿಲು ಮುಚ್ಚಿತ್ತು. ಮೊಬೈಲ್ನಿಂದ ಕಾಲ್ ಮಾಡಿದ. ಮನೆಯ ಬಾಗಿಲು ಮೆಲ್ಲನೆ ತೆರೆಯಿತು. ನೀಳಕಾಯದ ದುಂಡು ಮುಖದ ದಮಯಂತಿ ಅದೇ ತಾನೇ ಸ್ನಾನ ಮುಗಿಸಿ ತಲೆ ಕೂದಲನ್ನೊರಸಿಕೊಳ್ಳುತ್ತಾ ಹೊರಬಂದಳು. ಮಾಸ್ಕ್ ಧರಿಸಿರಲಿಲ್ಲ. ಮೆಲ್ಲನೆ ತಳ್ಳಿಕೊಂಡು ಬಂದ ಸ್ಕೂಟಿಯನ್ನು ವಿಶಾಲವಾದ ಮಾವಿನ ಮರದ ಕೆಳಗೆ ನಿಲ್ಲಿಸಿದ.
ಬುತ್ತಿ -ಹೂ-ಹಣ್ಣು ಚೀಲವನ್ನು ಕೈಯಲ್ಲಿಡಿದು ಮಾವಿನ ಮರದ ನೆರಳಿನಲ್ಲಿದ್ದ ಕಾಂಪೋಂಡು ಗೇಟು ತೆಗೆದು ಒಳಬಂದ ಆತನನ್ನು ಆಕೆ ನೋಡಿಯೇ ನೋಡಿದಳು. ಸಂಗಮನಾಥ ಹೂ-ಹಣ್ಣು ಚೀಲವನ್ನು ಆಕೆ ನಿಂತಿದ್ದ ಜಗುಲಿಯ ಮುಂದಿನ ಮೆಟ್ಟಿಲ ಮೇಲಿಟ್ಟು ಮೆಲ್ಲನೆ ಹಿಂದೆ ಸರಿದು ಅಲ್ಲೇ ಇದ್ದ ಕಲ್ಲು ಕಟ್ಟೆಯ ಮೇಲೆ ಕೂತು ಧಣಿವಾರಿಸಿಕೊಂಡ. ನಂತರ ನಿಧಾನಕ್ಕೆ ‘ಹೇಗಿದ್ದೀಯಾ ದಮಯಂತಿ’ ಅಂದ. ‘ಅರಾಮಿದ್ದೀನಿ ಅಣ್ಣಾ, ನೀವ್ಯಾಕ ಬರಾಕೋದಿರಿ? ಬುತ್ತಿ ಹಣ್ಣು ಹಂಪಲು ತಂದೀರಿ.. ಯಾಕಣ್ಣಾ’ ಅಂದಳು. ಆಕೆಯ ಮಾತನನ್ನು ಕೇಳಿಸಿಕೊಳ್ಳುತ್ತಲೇ ಮೌನವಾಗಿ ದಮಯಂತಿಯನ್ನು ಕಣ್ಣಲ್ಲೇ ತುಂಬಿಕೊಳ್ಳತೊಡಗಿದ. ಆಕೆ ತಲೆ ಕೂದಲನ್ನು ಮಡಚಿ ತುರುಬು ಕಟ್ಟಿಕೊಂಡಳು. ಆಕೆಯ ಕುತ್ತಿಗೆಯ ಕೆಳಭಾಗದಲ್ಲಿ ಕುಂಕುಮ ಬೊಟ್ಟಿನಾಕಾರದ ಕಪ್ಪನೆಯ ಮಚ್ಚೆಕಾಣಿಸಿತು. ಚಕಿತಗೊಂಡ. ತನ್ನ ತಂಗಿಗೂ.. ಮಚ್ಚೆಯಿದ್ದದ್ದು ತಾಯಿ ಹೇಳಿದ್ದು ನೆನಪಿಗೆ ಬಂತು. ಕಣ್ಣು ಹನಿಗೂಡತೊಡಗಿತು. ಸಾವರಿಸಿಕೊಂಡು. “ನಿನ್ನ ಹೆಸರಿನ ತಂಗಿ ಇದ್ದಳಮ್ಮಾ ನನಗೆ, ಬಾಲ್ಯದಲ್ಲೇ ತೀರಿಕೊಂಡಳು. ಜ್ವರ, ಕೆಮ್ಮು ಅದೆಂತದೋ ಖಾಯಿಲೆಯಿಂದ ದುಃಖ ಒತ್ತರಿಸಿ ಬಂದು ಹೇಳಿದ. ದಮಯಂತಿಗೂ ಅಳು ಬಂತು. ‘ಅಣ್ಣಾ’ ಅಂದಳು. ಮಾತು ಮೌನದೊಳಗೆ ಸರಿಯಿತು. ದುಃಖ ತಬ್ಬಿಹಿಡಿದಿತ್ತು. ಇಬ್ಬರ ಕಣ್ಣಲ್ಲಿ ಕಣ್ಣೀರು ಧಾರಾಕಾರವಾಗಿ ಇಳಿಯತೊಡಗಿತು. ಮಾತುಗಳನ್ನು ಮೌನ ತಬ್ಬಿ ಹಿಡಿದಿತ್ತು. ಇಬ್ಬರು ಒಬ್ಬರನ್ನೊಬ್ಬರು ನೋಡುತ್ತಲೇ ದುಃಖದ ಕಡಲೊಳಗೆ ಮುಳುಗಿದರು. ಸುತ್ತಲೂ ನೀರವ ಮೌನ. ಸಂಗಮನಾಥ ಮಾವಿನ ಮರದ ಕೊಂಬೆ ಹಿಡಿದು ’ತಂಗೀ ದಮಯಂತಿ’ ಅಂತ ಅಳತೊಡಗಿದ. ದಮಯಂತಿಗೂ ದಿಕ್ಕುತೊಚದೆ ಜಗಲಿಯ ಬಾಗಿಲು ಹಿಡಿದು ರೊದಿಸುತ್ತಾ ಕೂತಳು.
****
ಕಲೆ: ಜಿ. ಕಂದನ್
ಲೇಖಕ ಸಂಪಿಗೆ ನಾಗರಾಜ ಅವರು ಮೂಲತಃ ಬಳ್ಳಾರಿ ತಾಲ್ಲೂಕಿನ ದಾಸರ ನಾಗೇನಹಳ್ಳಿಯವರು. ಬಾಲ್ಯದಿಂದಲೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿ, ನಂತರ ಪದವಿ ಶಿಕ್ಷಣವನ್ನು ಬಳ್ಳಾರಿಯಲ್ಲಿ, . ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ.
`ಖಾಲಿ ಕಣ್ಣಿನ ನಾನು' (ಕತಾ ಸಂಕಲನ), 20ನೇ ಶತಮಾನದ ಕೊನೆಯ ದಶಕಗಳಲ್ಲಿ ಸಂಸ್ಕೃತಿ ಪ್ರಶ್ನೆ (ಸಣ್ಣಕತೆಗಳನ್ನು ಆಧರಿಸಿ) ಸಂಶೋಧನಾ ಕೃತಿಗಳು ಕೂಡ ಬೆಳಕು ಕಂಡಿವೆ.
ಸದ್ಯ ಬಳ್ಳಾರಿಯ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ವೇದಾವತಿ ತೀರದಲ್ಲಿ’ ಅವರ ಇತ್ತಿಚಿನ ಕಾದಂಬರಿ.