Poem

ಇರುವುದೊಂದೇ ಭೂಮಿಯ ಮೇಲೆ

ಇರುವುದೊಂದೇ
ಭೂಮಿಯ ಮೇಲೆ
ಇರುವವರು ಒಬ್ಬಿಬ್ಬರಲ್ಲ;
ಕೋಟ್ಯನುಕೋಟಿ ಜನರಿಂದ
ಗಿಜಿಗಿಡುವ ಜಗದಲ್ಲಿ
ನಾನು ನೀನು ಸಂಧಿಸಿದ್ದು
ಕೇವಲ ಆಕಸ್ಮಿಕವೇ!?

ಯಾವ ಜನುಮದ
ಪಿತನೋ, ಸುತನೋ,
ಮಾತೆಯೋ, ಮಗಳೋ,
ಮಡದಿಯೋ, ಮನದನ್ನೆಯೋ,
ಅನುಜನೋ, ಅಗ್ರಜನೋ,
ಮಿತ್ರನೋ, ಶತ್ರುವೋ,
ನೆನಪರಿಯದ ಕಾಲದಿಂದ
ನೆನೆನೆನೆದು ಬಂದ
ಸಂಬಂಧಿ!

ಮತ್ತೆ ಬಂಧಿಸೆ ಬಂದೆಯೋ,
ಬಂಧ ಬೆಸೆಯೆ ನಿಂತೆಯೋ,
ನಿಲುಕದು
ಕೊಡುಕೊಳ್ಳುವ,
ಮುಯ್ಯಿಗೆ ಮುಯ್ಯಿ ತೀರಿಸುವ,
ಗಣಿತದ ವ್ಯಾಕರಣ.

ಬೇಡ ಬಿಡು
ಪ್ರೀತಿಯ ದ್ವೇಷ,
ಕಾಡಿ ಕಾಡಿ
ತುಷ್ಟಿಗುಣ ಕಳೆದುಕೊಂಡಿದೆ;
ಬೇಡ ಬೇಡ
ದ್ವೇಷದ ಪ್ರೀತಿ,
ಕಾರಿ ಕಾರಿ
ನೀರಸವಾಗಿದೆ.

ಹತ್ತಿರ ಸೆಳೆದೂ
ದೂರ ನಿಲ್ಲುವ,
ದೂರ ಸರಿದೂ
ಹತ್ತಿರವಾಗುವ,
ಮೋಡಿಯೀಗ
ಸಾಕೆನಿಸಿದೆ.

ಹಾಗೆ ಬಂದುದು,
ಇಂತು ನಿಂದುದು,
ಇಲ್ಲಿಗೇ ಅಂತ ಕಾಣುವುದೇ?
ಕಾಲ ದೇಶಗಳ ಮೀರಿ
ಬೆಂಬತ್ತಿ ಬರುವುದೇ?

ಅಂಟು ಆರಿ,
ನಂಟು ಕಳಚಿ,
ಸೂಕ್ಷ್ಮದೇಹಿಯಾದರಿಲ್ಲ
ಭವದ ಬಂಡು;
ಜಾರುವುದೇ ಆಗಿದೆ
ಸ್ಥೂಲದೇಹಕ್ಕೆ
ಜೋತುಬಿದ್ದು!

- ರೇವಣಸಿದ್ದಪ್ಪ ಜಿ.ಆರ್

ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author