ಈಗ ಕೆಲವು ವರ್ಷಗಳಿಂದ ಧರಣಿಯ ದಿನಚರಿ ಬದಲಾಗದ ಪಠ್ಯದಂತಿದೆ. ಬೆಳಿಗ್ಗೆ ಬೆಳಕು ಕಣ್ಣು ಬಿಡುವುದರ ಜೊತೆಗೆ ತಾನೂ ಕಣ್ಬಿಟ್ಟು ಎದ್ದು ಮುಖ ತೊಳೆದುಕೊಂಡು ಬಂದು ಕಿಟಕಿಯ ಕರ್ಟನ್ ಜರುಗಿಸುತ್ತಾಳೆ. ಕೂಡಲೇ ಇನ್ನಷ್ಟು ಬೆಳಕು ಅವಸರದಿಂದ ಒಳಗೆ ಹೆಜ್ಜೆ ಇಟ್ಟಿದ್ದು ಕಂಡು ಅವಳಿಗೆ ಗೆಲುವು ಪುಟಿಯುತ್ತದೆ. ಇಷ್ಟಾದರೂ ಮಗ್ಗುಲು ಬದಲಿಸುವ ನಾರಾಯಣನಿಗೆ ಭುಜ ಅಲ್ಲಾಡಿಸಿ ಏಳುವಂತೆ ಸೂಚಿಸಿ ತನ್ನ ಎಂದಿನ ಕೆಲಸಗಳಿಗೆ ಅವಸರ ಪಡುವುದು ಈಗ ಕೆಲವು ವರ್ಷಗಳಿಂದ ನಡೆದುಕೊಂಡು ಬಂದ ವಾಡಿಕೆ. ಆ ವೇಳೆಗಾಗಲೇ ಕೊಂಚ ಸ್ಥೂಲ ಕಾಯದ ಅತ್ತೆ ಸೀತಮ್ಮ ಮಂಡಿನೋವಿಗೆ ಸಣ್ಣಪುಟ್ಟ ಆರೈಕೆ ಮಾಡಿಕೊಂಡು ಹೋಗಿ ಕೂಪನ್ನುಗಳನ್ನು ಕೊಟ್ಟು ಹಾಲು-ಮೊಸರು ತರುವುದರ ಜೊತೆಗೆ ಗೀಸರ್ ಗೆ ಸ್ವಿಚ್ ಹಾಕಿ, ಕಾಫಿ ಡಿಕಾಕ್ಷನ್ ರೆಡಿ ಮಾಡುತ್ತಾರೆ. ಅನಂತರ ಉಳಿದ ಕೆಲಸಗಳಲ್ಲಿ ಒಂದು ನಿಗದಿತ ಕ್ರಮ. ಒಬ್ಬೊಬ್ಬರದು ಒಂದೊಂದು ಬಗೆ. ಸೀತಮ್ಮಳಿಗೆ ತಿಂಡಿ ಹಾಗೂ ಮಧ್ಯಾಹ್ನದ ಡಬ್ಬಿಗೆ ಸಿದ್ಧಮಾಡುವುದರ ಕಡೆ ಗಮನ ಮತ್ತು ಅದಕ್ಕೆ ಒದಗುವ ಧರಣಿಯ ನೆರವು. ನಾರಾಯಣನಿಗೆ ಒಂದೆರಡು ನಿಮಿಷವಾದರೂ ತನ್ನನ್ನು ಪಿಕಪ್ ಮಾಡಲು ಕಾರು ಬರುವುದರೊಳಗೆ ಗೊತ್ತಾದ ಸ್ಥಾನದಲ್ಲಿರಬೇಕೆಂಬ ಒತ್ತಡ. ಅದಕ್ಕಾಗಿ ಹಿಂದಿನ ದಿನ ಬಾಕಿ ಇರುವ ಕೆಲಸವನ್ನು ಮುಗಿಸಲು ತನ್ನಷ್ಟಕ್ಕೇ ದ್ವೀಪ ಸೃಷ್ಟಿಸಿಕೊಂಡು ಲ್ಯಾಪ್ ಟಾಪ್ ನಲ್ಲಿ ಮುಳುಗುವ ಅನಿವಾರ್ಯತೆ. ಇಷ್ಟಾದರೂ ಸಮಯ ಪಾಲಿಸಲೇ ಬೇಕಾದ ಅಗತ್ಯ. ಸಾಧಾರಣ ಮೈಕಟ್ಟಿನ ಅವನು ಬಾಯಿಗಿಂತ ಹೆಚ್ಚಾಗಿ ಕೈಸನ್ನೆಯಿಂದ ಬೇಕು- ಬೇಡಗಳನ್ನು ತಿಳಿಸಿ ಬ್ಯಾಗ್ ಹಿಡಿದು ಹೊರಟ ಮೇಲಷ್ಟೇ ಸುತ್ತ ಬಿಗಿದ ಗಾಳಿ ಸಡಿಲವಾಗುತ್ತದೆ. ಅನಂತರ ಅಷ್ಟು ಧಾವಂಥವಿಲ್ಲ. ಇದಕ್ಕೆ ಕಾರಣ ನಸುಗೆಂಪು ಬಣ್ಣದ ನೀಳಕಾಯದ ಧರಣಿಗಿರುವ ಸ್ವಾತಂತ್ರ. ಅವಳು ಈಗ ಎರಡು ವರ್ಷಗಳಿಂದ ಸ್ವಂತವಾಗಿ ಡೆಂಟಲ್ ಕ್ಲಿನಿಕ್ ನಡೆಸುತ್ತಿರುವುದು ಕಾರಣ. ಕ್ಲಿನಿಕ್ಕಿನ ಬಾಗಿಲು ತೆಗೆಯುವುದು ಹಾಗೂ ಮತ್ತಿತರ ಕೆಲಸ ಮಾಡುವುದಕ್ಕೆ ಅಟೆಂಡರ್ ನರಸಿಂಹ ಇದ್ದಾನೆ. ಮನೆಯಿಂದ ಮೂರು ಕಿಲೋಮೀಟರ್ ದೂರದಷ್ಟು ಇರುವ ಕ್ಲಿನಿಕ್ಕಿಗೆ ಹೋಗಲು ಅವಳಿಗೆ ಹೆಚ್ಚಿನ ಸಮಯ ಬೇಕಾಗುತ್ತಿರಲಿಲ್ಲ. ಸಾಕಷ್ಟು ಆಯಕಟ್ಟಿನ ಸ್ಥಳದಲ್ಲಿ ಕ್ಲಿನಿಕ್ ಇರುವುದರಿಂದ ಜನರ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಕಡಿಮೆ. ಅವಳು ಊಟದ ವೇಳೆಗೆ ಮನೆಗೆ ಬಂದರೆ ಮತ್ತೆ ಹೋಗುತ್ತಿದ್ದದ್ದು ಸಂಜೆಗೆ. ರಾತ್ರೆಯೂಟಕ್ಕೆ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿದ್ದರೂ ಕೆಲವೊಮ್ಮೆ ನಾರಾಯಣ ಕತ್ತಲು ಹೆಗಲೇರಿ ಹಲವು ಗಂಟೆಗಳ ಬಳಿಕ ಬರುತ್ತಾನೆ. ಆಗ ಎಲ್ಲ ಕಡೆ ಶಬ್ದಕ್ಕಿಂತ ಮೌನದ್ದೆ ಕಾರುಬಾರು. ಮನೆಯೊಳಗಿನ ಮಂದ ಬೆಳಕು ಹಾಗೂ ಸೋತ ಗಾಳಿಗೂ ತೂಕಡಿಸುವ ಹೊತ್ತು. ಧರಣಿಯ ಕಣ್ಣುಗಳು ಆ ವೇಳೆಗೆ ಕಳೆ ಕುಗ್ಗಿದಂತೆ ಇದ್ದರೆ ಸೀತಮ್ಮನಿಗೆ ನಿದ್ದೆಯ ಹೊತ್ತು. ಅವನ ಕೆಲಸದ ವೇಳೆಯಲ್ಲಿರುವ ಏರುಪೇರು ತೀರ ಸಹಜವೆಂಬಂತೆ ಅವರು ಸ್ವೀಕರಿಸಿದ್ದರು.
ಸೀತಮ್ಮಳ ದಿನಚರಿಗೆ ಈ ಬಗೆಯ ಏರುಪೇರುಗಳಿಲ್ಲ. ಮಂಡಿ ನೋವಿದೆ ನಿಜ. ಅವರು ಅದನ್ನು ಒಂದಿಷ್ಟೂ ಮನಸ್ಸಿಗೆ ಹಚ್ಚಿಕೊಳ್ಳದೆ ಮನೆಯೊಳಗೆಲ್ಲಾ ಓಡಾಡುತ್ತಾ ಚಿಕ್ಕದು ದೊಡ್ಡದು ಎಂದು ಅಲಕ್ಷ್ಯ ಮಾಡದೆ ಒಂದಾದ ಮೇಲೊಂದರಂತೆ ಕೆಲಸ ಮಾಡುತ್ತಲೇ ಇರುತ್ತಾರೆ. ʻʻಒಂದಿಷ್ಟು ರೆಷ್ಟು ಕೊಡದೆ ಸ್ಟ್ರೇನ್ ಮಾಡ್ಕೊಂಡ್ರೆ ನೋವು ಹೆಚ್ಚಾಗುತ್ತೆʼʼ ಎಂದು ಹೇಳಿದರೆ, ʻʻನಿಮಿಷಗಳು ರೆಸ್ಟಿಲ್ದೆ ಓಡುತ್ತಲೇ ಇರುತ್ವೆ, ಅಲ್ವಾ? . . ಇಷ್ಟಕ್ಕೂ ರೆಸ್ಟ್ ಕೇಳೋದು ಮನಸ್ಸು ತಾನೆ? . . ಮಂಡಿನೂ ಬಾಯಿಬಿಟ್ಟು ಕೇಳಲಿ ನೋಡೋಣಂತೆʼʼ ಎಂದು ಅರ್ಥವಾಗದೆ ಹೇಳಿ ನಗು ಹುಟ್ಟಿಸುತ್ತಾರೆ. ಮಂಡಿ ನೋವಿಗೆ ಒಂದಿಲ್ಲೊಂದು ಬಗೆಯ ಔಷಧಿ ತೆಗೆದುಕೊಳ್ಳುತ್ತಿದ್ದರೂ ಅದರಿಂದ ಉಂಟಾಗುವ ಪರಿಣಾಮವನ್ನು ಏನೇನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಮನೆಗೆ ಅರ್ಧ ಕಿಲೋಮೀಟರ್ ದೂರದ ಪಾರ್ಕಿಗೆ ತಪ್ಪದೆ ಪ್ರತಿದಿನ ಹೋಗುವುದು ಅಭ್ಯಾಸ. ಅಲ್ಲಿ ಅವರು ಇಪ್ಪತ್ತು ರೌಂಡ್ ಹಾಕಿದರೆ ಅಲ್ಲಿಗೆ ಹೋದದ್ದು ಅರ್ಧ ಮುಗಿದಂತೆ. ಇನ್ನರ್ಧ ಪರಿಚಿತರ ಜತೆ ಮಾತುಗಳು. ಇವೆಲ್ಲಕ್ಕೂ ಸಾಕ್ಷಿ ಪಾರ್ಕಿನಲ್ಲಿ ಮುಖವರಳಿಸಿ ಆಗೀಗ ಗಾಳಿಯೊಂದಿಗೆ ಜೊತೆಗೂಡಿ ಉಯ್ಯಾಲೆಯಾಡುವ ಹೂ-ಗಿಡಗಳು. ಜೊತೆಗೆ ಸುತ್ತಾಡುವಾಗ ತಪ್ಪದೆ ಸ್ಪರ್ಶಿಸಿ ಅವತ್ತಿನ ಹಾಜರಿಗೆ ಗುರುತು ಹಾಕುವಂತೆ ನಸುನಗು ಬೀರುವ ನೆಲಹಾಸುಗಳು. ಇಷ್ಟೇ ಸಾಲದೆಂಬಂತೆ ಪಾರ್ಕಿಗೆ ಹೋಗಿ - ಬರುವಾಗ ರಸ್ತೆಯ ಬದಿಯಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಮಾಡುವವರು ಬೀರುವ ಮಂದಸ್ಮಿತದ ಸೇತುಗಳು. ಇವೆಲ್ಲದರ ಪರಿಣಾಮ ಹೆಚ್ಚಿಸುವಂತೆ ಭಾನುವಾರಗಳಂದು ಒಮ್ಮೊಮ್ಮೆ ಸೀತಮ್ಮಳ ಜೊತೆ ಧರಣಿಯೂ ಸೇರಿಕೊಳ್ಳುವುದುಂಟು.
ತೀರ ಇತ್ತೀಚೆಗೆ ತನ್ನ ಮೇಲೆ ಸವಾರಿ ಮಾಡುತ್ತಿರುವ ವಿಷಯ ಮನಸ್ಸನ್ನು ಕದಡಿದರೆ ಆಲೋಚನೆಗಳು ಯಾವ ದಿಕ್ಕಿನಲ್ಲಿದೆ ಎಂದು ತಿಳಿಯದೆ ತಳಮಳಗೊಳ್ಳುವ ಧರಣಿಗೆ ನಿಮಿಷಗಳು ಗಂಟೆಗಳಾಗುವುದುಂಟು. ಅಷ್ಟು ದೂರದ ವಸ್ತು ಇತ್ಯಾದಿಗಳು ಕ್ರಮೇಣ ಕರಗುತ್ತಾ ಕೊನೆಗೆ ತನ್ನೊಬ್ಬಳನ್ನು ಬಿಟ್ಟು ಬೇರೆ ಯಾವುದೂ ಅರಿವಿಗೆ ಬಾರದಂತಾಗುತ್ತಾಳೆ. ಅದರಿಂದುಂಟಾದ ತೀವ್ರತೆಯಿಂದ ತಾನು ಕೆಲವು ಕ್ಷಣ ಕಣ್ಣುಮುಚ್ಚಿಕೊಂಡಿದ್ದೆನೆಂದು ಕೂಡ ಅವಳಿಗೆ ತಿಳಿದಿರುವುದಿಲ್ಲ. ಅನಂತರ ಮತ್ತೆ ಸಕಲವೂ ಮೊದಲಿನ ಸ್ಥಿತಿಗೆ ಬರುವ ಹವಣಿಕೆ. ಅವಳು ಗಡಿಯಾರದ ಕಡೆ ದೃಷ್ಟಿ ಹಾಯಿಸುವುದು ಪಾರ್ಕಿಗೆ ಹೋಗಲು ಸಿದ್ಧರಾಗುವ ಸೀತಮ್ಮಳ ಕಣ್ಣು ತಪ್ಪಿಸುವುದಕ್ಕೆ. ತನ್ನ ಸ್ನೇಹಿತೆ ನರ್ಸಿಂಗ್ ಹೋಮ್‌ನಲ್ಲಿ ಡ್ಯೂಟಿ ಆಫೀಸರ್ ಆಗಿರುವ ಶರ್ಮಿಳಾಗೆ ಅಥವ ಮತ್ತಾರಿಗೋ ಫೋನ್ ಮಾಡುವುದಿದೆ ಎಂದು ಇಲ್ಲದ ಕಾರಣ ಹೇಳುತ್ತಾಳೆ. ಏನನ್ನು ಮಾಡಿದರೂ ಅರೆಮನಸ್ಸಿನಿಂದ ಅಥವ ಹಿಂಜರಿಕೆಯಿಂದ ಮಾಡಿ ಅಭ್ಯಾಸವಿಲ್ಲದ ಧರಣಿ ಹಿತ-ಅಹಿತ ಭಾವನೆಗಳನ್ನು ಮಿಶ್ರಣ ಮಾಡುವುದನ್ನು ಒಪ್ಪುವುದಿಲ್ಲ. ತನ್ನ ಮಾತಿನ ಲಯದ ಏರಿಳಿತದಿಂದ ಸೀತಮ್ಮಳಿಗೆ ಉಂಟಾಗಿರಬಹುದಾದ ಅನುಮಾನದ ನಿವಾರಣೆಗೆ ಅವಳು ಫೋನ್ ಕೈಗೆತ್ತಿಕೊಳ್ಳುತ್ತಾಳೆ. ಆದರೆ ಧರಣಿಯನ್ನು ತೆಳುವಾಗಿ ಸುತ್ತುವರೆದು, ಅವಳ ಮನೋಲೋಕವನ್ನು ಅರಿತಿರುವ ಮೆಲುನಡಗೆಯ ಗಾಳಿ ಅವಳನ್ನು ಬಿಟ್ಟುಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸೀತಮ್ಮ ಒಬ್ಬಳೇ ಹೋಗುವುದುಂಟು.
ʻಈಗ ಸಂದರ್ಭ ಸಂಪೂರ್ಣ ಬದಲಾಗಿದೆ. ಪಾರ್ಕ್ ಮುಚ್ಚಿರುವುದಷ್ಟೇ ಏಕೆ? ಎಲ್ಲ ಅಂಗಡಿ-ಮುಂಗಟ್ಟುಗಳು ಇತ್ಯಾದಿ ಎಲ್ಲ ವ್ಯವಹಾರಗಳು ಕ್ಲೋಸ್. ಅಷ್ಟೇಕೆ ತುರ್ತು ಸಂದರ್ಭ ಅಲ್ಲದಿದ್ರೆ ಯಾರೂ ಮನೆಯಿಂದಾಚೆ ಬರಬೇಡಿ ಎನ್ನುವ ನಿರ್ಬಂಧ. ಎಲ್ಲದಕ್ಕೂ ಒಂದು ರೀತಿ ಅಡ್ಡಗೋಡೆ. ಗುರುತಿನವರ ಜೊತೆ ಮಾತನಾಡುವಂತಿಲ್ಲ. ಮುಖಕ್ಕೆ ಅದೆಂತದೋ ಮಾಸ್ಕ್ ಹಾಕಿಕೊಳ್ಳಬೇಕಂತೆ. ಅದನ್ನ ನೋಡಿದರೆ ನಮ್ಮ ಕಾಲದಲ್ಲಿ, ಅಷ್ಟೇಕೆ ಈಗಲೂ, ಸಿನಿಮಾದಲ್ಲಿ ತೋರಿಸ್ತಾರಲ್ಲ, ಕಳ್ಳತನ ಮಾಡೋರು ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ ಥರ ಇದೆ ಅನ್ನಿಸತ್ತೆ. ಅಲ್ದೆ ಅದನ್ನ ಹಾಕಿಕೊಂಡರೆ ಉಸಿರಾಡೋದಕ್ಕೇ ಕಷ್ಟವಾಗತ್ತೆ. ಇನ್ನು ಒಬ್ಬರಿಂದೊಬ್ಬರು ಮಾರು ದೂರ ನಿಂತುಕೊಳ್ಳಬೇಕಂತೆ . . ಹೀಗಾದ್ರೆ ಕಿವಿ ಮಂದ ಇರೋರು ಏನು ಮಾಡ್ಬೇಕು? ಈಗ ಮೊದಲಿನ ಥರ ಒಬ್ಬಿಗೊಬ್ರು ಕೈ ಕುಲುಕೋದು, ಪಿಸಪಿಸ ಅಂತ ಕಿವೀಲಿ ಪಿಸುಗುಟ್ಟೋದು, ಅಷ್ಟೇ ಯಾಕೆ? . . ಎಳೆ ಮಕ್ಕಳನ್ನೂ ಮುಟ್ಟೋ ಹಾಗಿಲ್ಲ. ಇನ್ನು ಅವಕ್ಕೆ ಮುತ್ತು ಕೊಡೋದಂತೂ ಮುಗಿದೇ ಹೋಯ್ತು. ಇದರ ಜೊತೆ ಒಬ್ಬರನ್ನ ಕಂಡ್ರೆ ಇನ್ನೊಬ್ಬರಿಗೆ ಅನುಮಾನ . ಏನಾದ್ರೂ ಕರೊನಾ ಅಮರಿಕೊಂಡಿದೆಯೋ ಏನೋ ಅಂತ . .ಅವ್ರು ಹೇಳೋದನ್ನು ಬಿಟ್ಟು ಬೇರೆ ಕಾಯಿಲೆ-ಕಸಾಲೆ ಬಂದ್ರೆ ಎಲ್ಲಿಗೆ ಹೋಗ್ಬೇಕು? ಒಂದೂ ಗೊತ್ತಾಗ್ತಿಲ್ಲ . .ಅದೆಲ್ಲ ಯಾಕೆ? . . ಒಂದಷ್ಟು ಸೀನೋದು, ಕೆಮ್ಮೋದು ಅಂತಾದ್ರೆ, ಯಾರು ದಿಕ್ಕು? . . ಎಲ್ರಿಗೂ ಭಯ ಮುತ್ತಿಕೊಳ್ಳತ್ತೆ . . ಬೆಳಿಗ್ಗೆ ಬೆಳಿಗ್ಗೇನೆ ಹಾಲು-ಮೊಸರು ತರುವಾಗಲೇ ಈ ಮಾಸ್ಕ್ ಅನ್ನೋದನ್ನ ಮುಖಕ್ಕೆ ಹಾಕಿಕೊಂಡಿರ್ಬೇಕು. . . ಒಂದೆರಡು ಸಲ ಮಾಸ್ಕ್ ಇಲ್ದೆ ಹಾಗೇ ಹೋಗಿದ್ದಕ್ಕೆ ಅವ್ನು ಹಾವು ಕಂಡೋನ ಥರ ಅಷ್ಟು ದೂರಕ್ಕೆ ಹೋಗಿ, ಕೂಪನ್ ಅಲ್ಲಿಟ್ಟು ತೊಗೊಂಡು ಹೋಗಿ ಅಂದುಬಿಟ್ಟ. . . ಇದು ನಡೆದೇ ಇದೆ. . . . ಇಂಥ ಗ್ರಹಚಾರ ಬಂತಲ್ಲ! . ಅದೇನೊ ಕೊರೊನಾ ಅಂತೆ . ಸೋಂಕಂತೆ . . ದಿನಾ ಅಷ್ಟಿಷ್ಟು ಹೆಚ್ಚಾಗ್ತಿದೆಯಂತೆ . .ಅಲ್ದೆ ದಿನಾ ಅದಕ್ಕೆ ಬಲಿಯಾಗೋರು ಒಂದಷ್ಟು ಜನ . . ಏನೋ ಬಂತು, ಏನೋ ಹೋಯ್ತು ಅಂದ್ಕೊಂಡ್ರೆ . . ಇದರದ್ದೇನು ಅವತಾರ . ಇದೊಂದು ಥರ ಆದ್ರೆ, ಇನ್ನು ಅದು ಅಂಟಿಕೊಂಡೋರ ಪರಿಸ್ಥಿತಿಯಂತೂ . . ನೆನೆಸಿಕೊಂಡರೇ ನಡುಕ ಹುಟ್ಟತ್ತೆ . . ಅದೇನೋ . ಹಾಂ .. ಕ್ವಾರಂಟೈನ್ ಅಂತೆ . . ಅದೊಂದು ಥರ ಜೈಲು. ಆಸ್ಪತ್ರೇನೂ ಅಲ್ಲ, ಮನೇನೂ ಅಲ್ಲ. ದಿನ- ಎರಡು ದಿನ ಅಲ್ಲ, ಹದಿನಾಲ್ಕು ದಿನಾನೋ, ಇಪ್ಪತ್ತೆಂಟು ದಿನಾನೋ . ಅವ್ರು ಹೇಳಿದ ಕಡೆ ಒಬ್ಬೊಬ್ರೇ ಇರ್ಬೇಕಂತೆ . . ಮನೆಯವರು ಯಾರೂ ಜೊತೆಗಿರೋ ಹಾಗಿಲ್ಲ ಬೇರೆ . . ಅವರೇನು ಕೊಟ್ರೆ ಅದನ್ನ ಬಾಯಿ ಮುಚ್ಕೊಂಡು ತಿಂದುಕೊಂಡು, ಯಾರನ್ನೂ ಮುಟ್ದೆ, ಒಬ್ಬರಿಂದ ಮತ್ತೊಬ್ರು ಎರಡೆರಡು ಮಾರು ದೂರ ಬಿದ್ಕೊಂಡು ಸುಮ್ನೆ ಇರ್ಬೇಕಂತೆ. ಇಷ್ಟಲ್ಲದೆ ಒಂದಾದ ಮೇಲೊಂದು ಥರಾವರಿ ಟೆಸ್ಟುಗಳಂತೆ . . ರಾಮ . . ರಾಮ . .. . ʼ ಎಂದು ತಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ಅವಲೋಕಿಸಿ ಸೀತಮ್ಮ ಹೇಳುತ್ತಾರೆ. ಅವರ ಅಸಮಾಧಾನ ಈಗ ಪಾರ್ಕ್ ಮುಚ್ಚಿರುವುದಷ್ಟಕ್ಕೇ ಅಲ್ಲ. ಮುಂದೇನು ಎಂದು ಸ್ಪಷ್ಟವಿಲ್ಲದೆ ಉಂಟಾಗಿರುವ ಪರಿಸ್ಥಿತಿಗಾಗಿ. ಎಲ್ಲರನ್ನೂ ಭಯ, ತಲ್ಲಣ ಮುತ್ತಿರುವುದಕ್ಕಾಗಿ. . . ತಾವು ಹಿಂದೆಂದೂ ಕಂಡಿರದ, ಹೆಚ್ಚೆಂದರೆ ತಮ್ಮ ಅಪ್ಪ ಅಮ್ಮ ಇದ್ದಾಗ ಅವರು ಹೇಳುತ್ತಿದ್ದ ಪ್ರಸಂಗಗಳು ಗೊತ್ತು. ಅವೆಂದರೆ ಪ್ಲೇಗ್ ಬಗ್ಗೆ ಅವರು ಕಂಡ ಊರಿನ ಸಂಗತಿ ಮತ್ತು ಅದು ಉಂಟುಮಾಡಿದ ಮಿತಿಯಿಲ್ಲದ ಸಾವು-ನೋವು ಹಾಗೂ ಇನ್ನಿಲ್ಲದ ಸಂಕಟದ ವಿಷಯಗಳೇ. ಮಾತುಗಳಿಗೆ ಕೊನೆಯೇ, ಮೊದಲೇ? ಯಾವುದೂ ತಿಳಿಯದಾಗಿತ್ತು. ತಮಗೆ ತಿಳಿದವರೇ ಹಲವಾರು ಜನ ಅದರ ಬಾಯಿಗೆ ತುತ್ತಾದದ್ದನ್ನು ಹೇಳುತ್ತಲೇ ತಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದದ್ದನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ಕೊರೊನಾ ಅಂತೂ ಅದೆಲ್ಲವನ್ನೂ ಮೀರಿದೆ. ಅಕ್ಕಪಕ್ಕದ ಮನೆಯವರ ಜೊತೆ ತಾನು ಟೀವೀಲಿ ನೋಡಿದ್ದನ್ನು ಪೇಪರಲ್ಲಿ ಓದಿದ್ದನ್ನು, ದೂರದಲ್ಲಿರುವ ಮಗಳು ಸುಗಂಧಿ ಜೊತೆ ಫೋನ್ ನಲ್ಲಿ ಮಾತನಾಡುವಾಗ ಹೇಳುತ್ತಾರೆ. ಈಗ ಅವರಿಗೆ ಜಗತ್ತಿನಲ್ಲಿ ಅದರ ಆಕ್ರಮಣ ಇತ್ಯಾದಿ ವಿಷಯಗಳು ತಿಳಿದಿದೆ. ಜೊತೆಗೆ ನಾರಾಯಣ ಹಾಗೂ ಧರಣಿ ಕೂಡ ತಿಳಿಸುತ್ತಿರುತ್ತಾರೆ. ಇಷೆಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ ನಾರಾಯಣನಿಗೆ ಬಿಡುವು ಸಿಗುವುದೇ ಕಷ್ಟ. ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ದೊಡ್ಡ ಕೆಲಸದಲ್ಲಿರುವ ಅವನಿಗೆ ಈಗ ವರ್ಕ್ ಫ್ರಂ ಹೋಮ್. ಆಫೀಸಿಗೆ ಹೋಗೋದೂ ಇಲ್ದೆ, ಮನೇಲಿದ್ರೂ ಬಾಗಿಲು ಹಾಕಿಕೊಂಡು ರೂಮಿನಿಂದಾಚೆ ಬರದೆ, ಮೂರುಹೊತ್ತು ಲ್ಯಾಪ್‌ಟಾಪ್‌ಗೆ ಅಂಟಿಕೊಂಡಿರುತ್ತಾನೆ. ಆದರೆ ಶನಿವಾರ, ಭಾನುವಾರಗಳು ಮಾತ್ರ ಅವನಿಗೆ ಸುಗ್ಗಿ. ಆ ದಿನಗಳಲ್ಲಿ ಆಫೀಸಿನ ವಿಷಯ ದಫನ್ ಆಗಿ ಕೇವಲ ಊಟ, ತಿಂಡಿ, ನಗು. ಮಾತಂತೂ ಸರಿಯೇ ಸರಿ. ಅವನ್ನು ಮೂಟೆಗಳಲ್ಲಿ ತುಂಬುವುದಕ್ಕೆ ಸಾಧ್ಯವಾಗಿದ್ದರೆ ಇಡೀ ಮನೆ ಅದರಿಂದಲೇ ತುಂಬಿ, ಮನೆ ಖಾಲಿ ಮಾಡುವಷ್ಟು ಆಗುತ್ತಿತ್ತು. ಅವನ ಮಾತಿಗೆ ಧರಣಿ ಮೂಕಳಂತಾಗುತ್ತಾಳೆ. ಅವನ ಮುಖಚಹರೆ, ಧ್ವನಿಯಲ್ಲಿನ ಏರಿಳಿತದಲ್ಲಾಗುವ ವ್ಯತ್ಯಾಸ ಇತ್ಯಾದಿಗಳನ್ನು ತಾನು ಹಿಂದೆಂದೋ ನೋಡಿದ ನಾಟಕದ ದೃಶ್ಯದಲ್ಲಿ, ಅದರಲ್ಲಿನ ಮುಖ್ಯ ಪಾತ್ರಕ್ಕೆ ಹೋಲಿಸಿ ಹೇಳಿ ಅವನನ್ನು ಬೆರಗುಗೊಳಿಸುತ್ತಾಳೆ, ಹುರಿದುಂಬಿಸುತ್ತಾಳೆ. ಆಗ ಸುತ್ತಲಿನ ಗಾಳಿ, ಬೆಳಕು ಹುಚ್ಚೆದ್ದು ಕುಣಿದಂತಾಗುತ್ತದೆ.
ಕಳೆದ ಆರೆಂಟು ವರ್ಷಗಳಲ್ಲಿ ಸೀತಮ್ಮಳಿಗೆ ವಿಶೇಷ ಎನಿಸಿದ ಘಟನೆಗಳು ಕೆಲವಿವೆ. ಮನೆಯಾತ ವಿಶ್ವೇಶ್ವರಯ್ಯ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಎಲ್ಲಾ ಬರಿದಾದಂತೆ ಸಾಕಷ್ಟು ಸಮಯ ಖಿನ್ನರಾಗಿದ್ದ ಅವರ ಮುಖದಲ್ಲಿ ಮತ್ತೆ ಮಂದಹಾಸಕ್ಕೆ ಕಾರಣವಾದದ್ದು ಸುಗಂಧಿಯ ಮದುವೆ ಮತ್ತು ಅಷ್ಟೇ ಮುಖ್ಯವಾದ ನಾರಾಯಣನಿಗೆ ಸಿಕ್ಕ ಕೆಲಸ ಮತ್ತು ಧರಣಿಯ ಜೊತೆ ಅವನ ಮದುವೆ. ಅದೂ ಕೂಡ ಒಂದು ವಿಚಿತ್ರ ಮತ್ತು ನಿಜಕ್ಕೂ ವಿಶೇಷವೇ. ಅದು ನಾರಾಯಣ ಯಾವುದೋ ನಾಟಕ ನೋಡಲು ಹೋದಾಗ ನಡೆದದ್ದು. ಅವನು ಅಲ್ಲಿ ಸ್ನೇಹಿತನಿಗೆ ಕಾಯುತ್ತ ನಿಂತಿದ್ದಾಗ ಅಷ್ಟು ದೂರದಲ್ಲಿ ಧರಣಿ ಇನ್ಯಾವುದೋ ನಾಟಕದ ವಸ್ತು, ಪ್ರಯೋಗ ಇತ್ಯಾದಿಗಳನ್ನೆಲ್ಲ ಚಿಂದಿ ಮಾಡುತ್ತಿದ್ದನ್ನು ಕಂಡು ಬೆರಗಾಗಿದ್ದ. ಅನಂತರ ತಾನು ಕಾಯುತ್ತಿರುವ ವ್ಯಕ್ತಿಗಾಗಿಯೇ ಅವಳಿದ್ದ ಗುಂಪಿನವರೂ ಕಾಯುತ್ತಿದ್ದರೆಂದು ತಿಳಿಯಿತು. ಇದರಿಂದ ಉಂಟಾದ ಪರಿಚಯ ಮುಂದುವರಿದು ಮದುವೆಯಲ್ಲಿ ಕೊನೆಗೊಂಡಿತ್ತು.
ಮನೆಯಿಂದ ಆಚೆ ಕಾಂಪೌಂಡಿನ ಹೊರಗೆ ಎಲ್ಲವೂ ಬಿಗಿ. ಕರೊನಾದಿಂದ ಜೀವಕ್ಕೆ ಇರುವ ಅಪಾಯ ಮತ್ತು ಅದು ಹಬ್ಬುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್ ಕ್ರಮ ತೆಗೆದುಕೊಂಡಿದ್ದು ಸರಿಯಿದ್ದರೂ ಬಹಳಷ್ಟು ಜನರಿಗೆ ಇದು ತುಂಬಾ ಅವಸರದ ಮತ್ತು ಸಾಕಷ್ಟು ತಯಾರಿ ಇಲ್ಲದ ಕ್ರಮ ಎಂದು ಅನಿಸಿದ್ದು ಕೂಡ ಸರಿಯೆ. ಕಾರ್ಮಿಕರು, ಕೆಲಸಗಾರರು, ಹೊರರಾಜ್ಯಗಳಿಂದ ಬಂದವರಿಗೆ ಮುಂದೇನು ಮಾಡಬೇಕು ಎಂದು ಯೋಚನೆ ಮಾಡುವುದಕ್ಕೆ ಅಥವ ತಮ್ಮತಮ್ಮ ಊರುಗಳಿಗೆ ಹೋಗುವುದಕ್ಕೆ ಅವಕಾಶವಿಲ್ಲದೆ ಹೋಯಿತು. ಇಲ್ಲಿನ ಒತ್ತಡ ಅಲ್ಲಿಗೆ ಹೋಗಲಾರದ ಪರಿಸ್ಥಿತಿ ಇವುಗಳಿಂದ ಒಟ್ಟಾರೆ ಉಂಟಾದ ದಿಗ್ಭಂಧನ ಎಲ್ಲರನ್ನೂ ಆಲೋಚನೆಗೆ ಒಳಪಡಿಸಿತ್ತು. ಸೀತಮ್ಮಳಿಗೆ ತಮ್ಮ ಮನೆಯ ಕಾಂಪೌಂಡಿನಾಚೆ ಇರುವ ರಸ್ತೆ ಕೂಡ ಮೊದಲಿನಂತೆ ಕಾಣುವುದಿಲ್ಲ. ಎಷ್ಟೇ ಹಳಬರಾದರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುವವರನ್ನು ನೋಡಿದರೆ ಏನೋ ಬದಲಾದಂತೆ, ಅಪರಿಚಿತರು ಎನ್ನಿಸುತ್ತಿದ್ದರು. ಇನ್ನು ಮಾತಾಡಿದರಂತೂ ಸರಿಯೇ ಸರಿ. ಮಾಸ್ಕ್ ಒಳಗಿಂದ ಹೊರಬರುವ ಶಬ್ದ ಯಾವುದೋ ಮೆಷಿನ್‌ನಿಂದ ಬಂದಂತೆ ಕೇಳಿಸುತ್ತಿತ್ತು. ಹೇಗೋ, ಏನೋ ಮೊದಲು ಮನೆಗೆಲಸದವಳನ್ನು ಒಳಗೆ ಸೇರಿಸಬೇಡಿ, ಎಂದು ಸಾಕಷ್ಟು ಜನರು ಎಚ್ಚರಿಕೆ ಕೊಟ್ಟ ಹಾಗೆಯೇ ಸೀತಮ್ಮ ಮಾಡಿದ್ದರಿಂದ ಮನೆಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗಿತ್ತು. ಇದು ಉಳಿದವರ ಆಲೋಚನೆಯಾದರೆ ಧರಣಿ ತನ್ನ ಕ್ಲಿನಿಕ್ಕಿಗೆ ಹೋಗುವಂತಿರಲಿಲ್ಲ. ಕಾರಣ ಡೆಂಟಲ್ ಆಸ್ಪತ್ರೆಗಳನ್ನು ಲಾಕ್ ಡೌನ್‌ನಲ್ಲಿ ಮುಚ್ಚುವಂತೆ ಹೇಳಲಾಗಿತ್ತು. ಹೀಗಾಗಿ ಇಡೀ ದಿನ ಒಂದು ರೀತಿಯ ಆಂತರಿಕ ಒತ್ತಡದಲ್ಲಿ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿಗೆ ಧರಣಿ ಒಳಗಾಗಿದ್ದಳು. ಸೀತಮ್ಮ, ʻʻಕ್ಲಿನಿಕ್ಕಿಗೆ ಹೋಗೋ ಹಾಗಿಲ್ಲ ಅಂತ ಇಷ್ಟೊಂದು ಬೇಜಾರು ಪಟ್ಟುಕೊಂಡರೆ ಹೇಗೆʼʼ ಎಂದರೆ ಅವಳು ಸುಮ್ಮನೆ ನಕ್ಕ ಹಾಗೆ ಮಾಡುತ್ತ, ʻʻಹಾಗೇನಿಲ್ಲʼʼ ಎನ್ನುತ್ತಾಳೆ. ನಿಜ ಹೇಳಲು ಅವಳಿಗೆ ಇಷ್ಟವಾಗುವುದಿಲ್ಲ. ಅವರು ಒಳಗೆ ಹೋದಂತೆ ಧರಣಿ ರೂಮಿನ ಬಾಗಿಲು ಹಾಕಿಕೊಳ್ಳುತ್ತಾಳೆ. ಅದೆಷ್ಟೋ ಬಾರಿ ಹೇಳಿಬಿಡಲೆ ಎಂದು ಅವಳಿಗೆ ಮನಸ್ಸಾಗುತ್ತದೆ. ಆದರೆ ಡೋಲಾಯಮಾನ ಸ್ಥಿತಿಯಿಂದ ಸುಮ್ಮನಾಗುತ್ತಾಳೆ. ರೂಮಿನ ಡ್ರೆಸ್ಸಿಂಗ್ ಟೇಬಲ್ ಎದುರು ನಿಂತು ಕನ್ನಡಿಯಲ್ಲಿ ತನ್ನ ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುತ್ತಾಳೆ. ಅಷ್ಟೇ ಸಾಲದೆಂಬಂತೆ ಅಲ್ಲೇ ಡ್ರಾನಲ್ಲಿದ್ದ ಟೇಪ್ ತೆಗೆದುಕೊಂಡು ಹೊಟ್ಟೆಯ ಅಳತೆಯನ್ನು ನೋಡಿಕೊಳ್ಳುತ್ತಾಳೆ. ಕಳೆದ ಒಂದೆರಡು ವಾರಗಳಿಂದ ಈಗಲೂ ಏನಾದರೂ ವ್ಯತ್ಯಾಸ ಕಾಣುತ್ತಿದೆಯೇ ಎನ್ನುವ ಅನುಮಾನ ಅವಳಿಗೆ. ಕಳೆದ ಬಾರಿಗೆ ಹೋಲಿಸಿಕೊಂಡು ಗಂಭೀರವಾಗುತ್ತಾಳೆ. ಕಣ್ಣುಗಳು ಅರೆಮುಚ್ಚುತ್ತವೆ. ಒಂದು ಪಕ್ಷ ಅತ್ತೆಗೆ ಗೋಚರಿಸಿ ಅವರೇ ಕೇಳಿಬಿಟ್ಟರೆ ಹೇಗೆ? ತಾನು ನಿಜ ಹೇಳುವುದೋ ಅಥವ ಸುಳ್ಳು ಹೇಳುವುದೋ, ಎರಡೂ ಕಷ್ಟವೆ. ಅವಳಿಗೆ ಗೊಂದಲವುಂಟಾಗುತ್ತದೆ. ಮೆಲ್ಲನೆ ರಕ್ತದ ಒತ್ತಡ ಹೆಚ್ಚಾಗಿ ಸುಮ್ಮನೆ ಮಾತಿಲ್ಲದೆ ಕುಳಿತುಕೊಳ್ಳುತ್ತಾಳೆ. ಈಗ ಕೆಲವು ವಾರಗಳಿಂದ ನಾರಾಯಣ ಪೀಡಿಸುವುದು ಹೆಚ್ಚಾಗಿದೆ.
ಅವಳು ರೂಮಿನಲ್ಲಿದ್ದಾಗ ಬಳಿಗೆ ಬರುತ್ತಾನೆ. ಅವನ ನಡಿಗೆಯ ಲಯದ ವ್ಯತ್ಯಾಸದಿಂದ ಅವಳು ತಲೆ ಎತ್ತುತ್ತಾಳೆ.
ʻʻಹೀಗೆ ವಾರ ವಾರ ಮುಂದಕ್ಕೆ ಹಾಕ್ತಾ ಬಂದ್ರೆ ಇನ್ನೂ ಕಷ್ಟ ಆಗಲ್ವಾ? . . . ನೋಡು ನಾನು ಹೇಳಿದ್ದು ಮಾಡಿದರೆ ನಮ್ಮ ಕೆಲ್ಸದ ರೀತೀನೇ ಮೇಲಕ್ಕೆ ಹೋಗತ್ತೆ . . ನೀನೇನು ದಡ್ಡೀನಾ, ಅಷ್ಟೂ ಗೊತ್ತಾಗಲ್ವಾ?ʼʼ
ʻʻಬರಿ ನಿಮ್ಮ ಮೂಗಿನ ನೇರಕ್ಕೇ ಮಾತಾಡ್ತೀರಲ್ಲ . . ಅಷ್ಟು ಬಿಟ್ರೆ ನಿಮ್ಗೆ ಬೇರೆ ಇನ್ನೇನೂ ತಲೇಲಿ ಬರಲ್ವಾ?ʼʼ
ʻʻಅಲ್ವೇ . . ಈಗ ನಾವಿರೋ ಲೆವೆಲ್ ಹೆಚ್ಗೆ ಆಗೋದಕ್ಕಿಂತ ಇನ್ಯಾವುದು ಮುಖ್ಯ ಹೇಳು?ʼʼ
ʻʻಅಷ್ಟು ಮಾತ್ರ ಮುಖ್ಯಾನಾ? . . ಇಂಥಾ ವಿಷ್ಯಾನೂ ತಿಳೀದಿದ್ರೆ ಮಂಕುದಿಣ್ಣೆ ಅನ್ನಬೇಕಾಗತ್ತಷ್ಟೆ.ʼʼ
ʻʻಒಳ್ಳೆ ಬಿರುದು ಕೊಟ್ಟೆ ನನ್ನ ಮೂತಿ ನೋಡಿ . . . ಥಿಂಕ್ ಫಾಸ್ಟ್ ಅಂಡ್ ಡಿಸೈಡ್ʼʼ ಎಂದು ಹೊರಡುತ್ತಾನೆ.
ಅವಳು ಕಿಟಕಿಯ ಬಳಿ ಹೋಗಿ ನಿಲ್ಲುತ್ತಾಳೆ. ಹೊರಗೆ ರಣಬಿಸಿಲು. ಬೀಸಿದ ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.
ಸೀತಮ್ಮ ಆ ದಿನ ತರಕಾರಿ ಕೊಳ್ಳಲು ಹೋಗಿ ವಾಪಸು ಬರಲು ಹೆಚ್ಚು ಸಮಯ ತೆಗೆದುಕೊಂಡರು. ಬಂದಾಗ ಅವರು ಕುದಿಯುತ್ತಿದ್ದಂತೆ ಕಂಡರು ಧರಣಿಗೆ. ಅಭ್ಯಾಸದಂತೆ ಅದನ್ನು ತೊಳೆದು ಉಪಯೋಗಿಸುತ್ತಿದ್ದರಿಂದ ತಂದದ್ದನ್ನು ಮೂಲೆಯಲ್ಲಿಟ್ಟು ಕೈಯನ್ನು ಸ್ಯಾನಿಟೈಸರ್‌ನಿಂದ ಒರೆಸಿಕೊಳ್ಳುತ್ತ, ʻʻಇದೇನು ಹಿಂಗೆ ರಾಕ್ಷಸರಾಗಿದಾರೆ ದರಿದ್ರ ಮುಂಡೇ ಮಕ್ಳು . . ಹೀಗೂ ಉಂಟೆ ಎಲ್ಲಾದ್ರೂ . .ʼʼ ಎಂದದ್ದಕ್ಕೆ ಏನು ಸಮಾಚಾರ ಎನ್ನುವಂತೆ ಧರಣಿ ಅವರ ಕಡೆ ನೋಡಿದಳು. ʻʻಅಲ್ಲಾ, ಕಸದ ಟಬ್ನಲ್ಲಿ ಆಗಷ್ಟೆ ಹುಟ್ಟಿದ ಕೂಸನ್ನ ಎಸೆಯೋದೇ . . ಎಂಥ ಕಾಲ ಬಂತು ಅಂತೀನಿ. . . ಹುಟ್ಟಿಸೋದು ಯಾಕೆ, ತಿಪ್ಪೆಗೆ ಬಿಸಾಕೋಕಾ? ಬೇಡ ಅನ್ನೋದಾದ್ರೆ ಹುಟ್ದೇ ಇರೋಥರ ನೋಡ್ಕೋ ಬೇಕು. . ಏನೂ ಮಾಡಿಲ್ಲದವನ್ನ ಹೀಗೆ ಬಲಿ ಕೊಡೋದೇ . . . ʼʼ ಎಂದರು. ʻʻಅಯ್ಯೋ ಹೀಗಾ . . ಜೀವ ಇತ್ತ, ಇಲ್ವಾ? . .ʼʼ ಎಂದಳು ಒಳಗೇನೋ ಹಿಂಡಿದಂತಾಗಿ. ʻʻಎಲ್ಲಿ ಬಂತು . . ಬಟ್ಟೇಲಿ ಸುತ್ತಿ ಎಸೆದ ಮೇಲೆ ಇನ್ನೇನಿರತ್ತೆ . . ಹೀಗೆ ಮಾಡಿದೋರನ್ನ ಹಿಡಿದು ನೇಣಿಗೆ ಹಾಕ್ಬೇಕುʼʼ ಎಂದು ಕಟುವಾಗಿ ಹೇಳಿದರು. ಧರಣಿಗೆ ಏನೋ ಮುತ್ತಿಕೊಂಡಂತಾಗಿ ಉತ್ತರ ಕೊಡಲು ಸಾಧ್ಯವಾಗದೆ ಬೇರೆತ್ತಲೋ ಮುಖ ಮಾಡಿದಳು.
ಇತ್ತೀಚೆಗೆ ಒಂದೊಂದು ದಿನ ಧರಣಿಗೆ ಮನೆಯೊಳಗಿನ ಉಷ್ಣಾಂಶ ಹೆಚ್ಚಾದಂತೆ ಭಾಸವಾಗುತ್ತದೆ. ಅವತ್ತು ನಾರಾಯಣ ಇದ್ದ ರೂಮಿನ ಬಾಗಿಲ ಮೇಲೆ ಸಣ್ಣಗೆ ಶಬ್ದ ಮಾಡಿದಳು. ಅವನು ಕಾಣಿಸಿಕೊಂಡಾಗ ಹತ್ತಿರ ಹೋಗಿ ಮೆಲ್ಲನೆ, ʻʻಟೆಂಪರೇಚರ್ ಎಷ್ಟು ಅಂತ ತಿಳಿಯಕ್ಕೆ ಥರ್ಮಾಮೀಟರ್ ತೊಗೊಂಡು ಬಾ . .ʼʼ ಎಂದಾಗ ಅವನು, ʻʻಅಷ್ಟೂ ಗೊತ್ತಿಲ್ವಾ? . ಮನೇಲೆ ಇದ್ಯಲ್ಲ . ಆ ಡ್ರಾ ಎಳೀ ಸಿಗತ್ತೆ . . ಜ್ವರಾನಾ ಏನು?ʼʼ ಎಂದದ್ದಕ್ಕೆ, ʻʻಮೈಗೇನೂ ಆಗಿಲ್ಲ . ಮನಸ್ಸಿಂದೂ ತೋರಿಸಬೇಕು ಅಂಥಾದ್ದು ಬೇಕು.ʼʼ ಎಂದಳು. ಅವನು ದುರುಗುಟ್ಟಿ ನೋಡಿ ಹಿಂತಿರುಗಿದ. ಅನಂತರ ಅವಳು ಸೋಫಾದಲ್ಲಿ ಕುಳಿತು ಟೀವಿ ಹಾಕಿದರೆ ಎಲ್ಲ ಚಾನಲ್‌ಗಳಲ್ಲೂ ಕರೊನಾಗೆ ಸಂಬಂಧಿಸಿದ ಸುದ್ದಿ ಬಿಟ್ಟರೆ ಬೇರಾವುದೂ ಇಲ್ಲ. ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ, ಸತ್ತವರ ಸಂಖ್ಯೆ, ಒಟ್ಟಾರೆ ರಾಜ್ಯದಲ್ಲಿ ಹೆಚ್ಚಳ, ದೇಶ-ವಿದೇಶಗಳ ವಿವರ.
ಕಾಲಿಂಗ್‌ಬೆಲ್ ಶಬ್ದ ಮಾಡಿತು. ಸಣ್ಣ ಕಿಟಕಿಯಲ್ಲಿ ಬಂದವನು ದಿನಸಿ ಅಂಗಡಿಯ ಹುಡುಗ ಎಂದು ಗೊತ್ತಾಯಿತು. ಎದ್ದು ಹೊರಟ ಧರಣಿಯನ್ನು ಕಂಡು ಸೀತಮ್ಮ, ʻʻಅದೇನು ಮಾಸ್ಕ್ ಹಾಕ್ಕೊಳ್ದೇ ಬಾಗಿಲು ತೆಗಿಯಕ್ಕೆ ಹೋಗ್ತಿದೀಯಾ? . . ಕುತ್ತಿಗೇಗೆ ಸುತ್ತಿಕೊಂಡಿದಾನೆ . . ಸರಿಯಾಗಿ ಹಾಕ್ಕೊಳಕ್ಕೆ ಹೇಳು ಅವನ್ಗೆ . . ʼʼ ಎಂದರು. ಅವನು ಹೊರಟ ಮೇಲೆ ಸಾಮಾನಿನ ಬ್ಯಾಗುಗಳನ್ನು ಧರಣಿ ಒಳಗೆ ಇಟ್ಟಳು. ಆಮೇಲೆ ಕೈಗಳನ್ನು ಸ್ಯಾನಿಟೈಸರ್ ಹಾಕಿಕೊಂಡು ಒರೆಸಿಕೊಂಡಳು. ಸೀತಮ್ಮ ಅವಳತ್ತ ನಗು ಬೀರಿದರು.
ಧರಣಿಗೆ ಅವನು ತನ್ನ ಹಠ ಬಿಡುವ ಲಕ್ಷಣ ತೋರುತ್ತಿಲ್ಲ.
ʻʻನಾವು ಮೊದ್ಲು ನಮ್ಮ ಬುಡಾನ ಆದಷ್ಟೂ ಭದ್ರ ಮಾಡ್ಕೊಳ್ಳೋಣ . . ನಮ್ಮ ಸೋಷಿಯಲ್ ಸ್ಟೇಟಸ್‌ನ ಗ್ರಾಫ್ ಮೇಲಕ್ಕೆ ಹೋಗತ್ತೆ . . ದೊಡ್ಡ ಮನುಷ್ಟರ ಜೊತೆ ಓಡಾಟ, ಒಡನಾಟ ಶುರುವಾಗತ್ತೆ . .ʼʼ
ʻʻಇಷ್ಟೆಲ್ಲ ಆಗಕ್ಕೆ ತುಟಿಪಿಟಕ್ ಅನ್ದೆ, ನೀನು ಹೇಳಿದ್ದನ್ನ ಕೇಳ್ಬೇಕು ಅಲ್ವಾ?ʼʼ
ʻʻಅದನ್ನೇ ನಾನು ಮತ್ತೆ ಮತ್ತೆ ಹೇಳ್ತಿರೋದು.ʼʼ
ʻʻಅಂದ್ರೆ ನಾನು ಹೇಳೋದೇನೂ ಇಲ್ಲ ಅಂತ ನೀನಂತಿರೋದು . .ʼʼ
ʻʻಸಿಟ್ಟು ತರಿಸ್ಬೇಡ ನಂಗೆ . . ಇದನ್ನ ನಾವಾಗ್ಲೇ ಡಿಸ್‌ಕಸ್ ಮಾಡಾಗಿದೆ . . . ನೀನಾಗ್ಲೆ ಮಾಸ್ಟರ್ಸ್ ಡಿಗ್ರಿ ಮಾಡಕ್ಕೆ ಒಪ್ಪಿಕೊಂಡಿದೀಯಲ್ಲ. . ಅಬ್ಬಾಬ್ಬಾ ಅಂದ್ರೆ ನಿನ್ನ ಕ್ಲಿನಿಕ್ ಕ್ಲೋಸ್ ಮಾಡ್ಬಹುದಷ್ಟೇ . .ʼʼ
ʻʻಈ ವಿಷ್ಯಾನ ನಾವು ಮಾತಾಡಿದ್ದು, ನಾನು ಆಗ್ಲಿ ಅಂದದ್ದು ಯಾವಾಗ ಅಂತ ಸಾಹೇಬ್ರಿಗೆ ಮರ್ತು ಹೋಗಿದೆ ಅಂತ ಕಾಣತ್ತೆ.ʼʼ
ʻʻಮರೀಲಿಕ್ಕೇನು ನಂಗೆ ತಲೆ ಕೆಟ್ಟಿಲ್ಲ . . ಟೆಸ್ಟ್ ಮಾಡ್ತಿದೀಯ? ಅದೂ ಆಗ್ಲಿ . . ನಮ್ಮ ಮದುವೇದು ಫಸ್ಟ್ ಆನಿವರ್ಸರಿ ಆದ್ಮೇಲೆ . . ಪ್ರಶ್ನೇಗೆ ಸರಿ ಉತ್ತರ ಇದ್ರೆ ಹತ್ತಕ್ಕೆ ಹತ್ತು ನಂಬರ್ . ʼʼ
ʻʻಪಾಯಿಂಟ್ ಗೆ ಸಂಬಂಧವಿಲ್ಲದ ಆನ್ಸರ್ . ನಂಬರ್ ಬಿಗ್ ಜೀ಼ರೋ . .ʼʼ
ʻʻನಂಬರ್ ಮನೆ ಹಾಳಾಯ್ತು . . ಪಾಯಿಂಟ್‌ಗೆ ಬಾ . . ನೀನು ಎಲ್ಲದಕ್ಕೂ ಒಪ್ಪಿಕೊಂಡಿದ್ಯೋ ಇಲ್ವೋ . . ಡೋಂಟ್ ಇವೇಡ್ ಆನ್ಸರ್ ಅಂಡ್ ಟ್ರೈ ಮೈ ಪೇಷನ್ಸ್ . .ಇದ್ಯಾಕೋ ಬರ್ತಾ ಬರ್ತಾ ಅತಿಯಾಗ್ತಿದೆʼʼ
ಅವನು ಮುಖ ಕೆಂಪಗೆ ಮಾಡಿಕೊಂಡು ಹೊರಟ ಮೇಲೆ ಹೊರಗೆ ಬಂದು ನೋಡಿದರೆ ಒಂದಿಷ್ಟೂ ಜೀವ ರಸವಿಲ್ಲದ ಬಿಕೋ ಎನ್ನುವ ರಸ್ತೆ ಕಾಣುತ್ತದೆ.
ನಿಜ. ಮೊದಲಿಗೆ ಅವನ ಅಪೇಕ್ಷೆಯನ್ನು ತೀರಾ ಸಂಭ್ರಮದಿಂದ ಒಪ್ಪಿದ್ದುಂಟು. ಕನಸು ಕಟ್ಟಿದ್ದುಂಟು. ಆದರೆ ಏನಾಯಿತು? ತನ್ನ, ಅಷ್ಟೇಕೆ ತಮ್ಮ ಯೋಜನೆಗಳೆಲ್ಲ ತಲೆಕೆಳಗಾದದ್ದು ಅನಿರೀಕ್ಷಿತವೆಂದೇ ಹೇಳಬೇಕು. ಹಾಗೆಂದು ಉಂಟಾದ ಪರಿಸ್ಥಿತಿಯನ್ನು ತಿರಸ್ಕರಿಸುವುದಕ್ಕೆ ಆಗುತ್ತದೆಯೇ. ಅದೂ ಅವನು ಹೇಳುವ ಅಪ್ಪಟ ಲೌಕಿಕ ಕಾರಣಕ್ಕಾಗಿ. ಇದು ಅವನಿಗೆ ಅರ್ಥವಾಗುವುದಿಲ್ಲ ಎಂದರೆ ನಂಬುವುದು ಕಷ್ಟ. ಹಾಗಿದ್ದರೂ ಕೂಡ ಅವನು ಒತ್ತಾಯಿಸುತ್ತಿದ್ದಾನೆ. ಇದು ಅವನ ಹುಂಬತನವೂ, ಭಂಡತನವೋ ಏನನ್ನಬೇಕು ಅವಳಿಗೆ ತಿಳಿಯುವುದಿಲ್ಲ.
``ನೋಡು, ನನ್ನ ಅರ್ಥ ಮಾಡ್ಕೋ . . ಇದೊಂದು ಸಲ ಬೇಡ ಅಷ್ಟೇ . . ಈಗ ಬೇಡ ಅಂದ್ರೆ, ಎಂದೆಂದಿಗೂ ಬೇಡ ಅಂತ ಅರ್ಥ ಅಲ್ವಲ್ಲ . . ನಮ್ಮ ವಿಷ್ಯ ಎಲ್ಲ ಸೆಟಲ್ ಆದ ಮೇಲೆ ಅಚ್ಚುಕಟ್ಟಾಗಿ ಪ್ಲಾನ್ ಮಾಡಬಹುದಲ್ವ? . .ʼʼ ಎಂದು ಪುಸಲಾಯಿಸುವ ಧಾಟಿಯಲ್ಲಿ ಹೇಳುತ್ತಾನೆ.
ತನ್ನನ್ನು ನಿಜವಾಗ್ಲೂ ದಡ್ಡಿ ಅಂದುಕೊಂಡೇ ಹೀಗೆ ಅವನು ಹೀಗೆಲ್ಲ ಪ್ರಯತ್ನಿಸೋದು. ಮುಂದೆಂದೋ ಎಲ್ಲ ಸರಿ ಹೋದ ಮೇಲೆ ನೋಡೋಣ ಅಂದರೆ ಏನು? ಎಲ್ಲವೂ ನಮ್ಮ ನಿಯಂತ್ರಣದಲ್ಲಿದೆ. ಅದನ್ನು ಹೇಗೆ ಬೇಕಾದರೆ ಹಾಗೆ ನಿಯಂತ್ರಿಸಬಹುದು ಎನ್ನುವ ಅಹಂಕಾರ . ಅದೇನಿದ್ದರೂ ಈಗಿನದು ಅದಕ್ಕೆ ಬಲಿಯಾಗಬೇಕೆಂದು ಅವನ ಮಾತಿನ ಸೂಕ್ಷ್ಮ. ಇದಕ್ಕೆ ಏನನ್ನಬೇಕು. ದಡ್ಡರು ಯಾರು ಅಂತ ಗೊತ್ತಾಗದಷ್ಟು ದಡ್ಡತನವೇ . . ಛೇ . .ಛೇ. .
ಧರಣಿಗೆ ಅಂದು ತನ್ನ ದೇಹಪ್ರಕೃತಿಯ ಬಗ್ಗೆ ಅನುಮಾನ ಬಂದಾಗ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಶರ್ಮಿಲಾಳ ನರ್ಸಿಂಗ್ ಹೋಮ್‌ಗೆ ಹೋದಳು. ಅದೆಂಥದೋ ಮೀಟಿಂಗ್ ಎಂದು ನಾರಾಯಣ ಜೊತೆಗಿರಲಿಲ್ಲ. ಪರೀಕ್ಷೆಯ ನಂತರ ಫಲಿತಾಂಶ ಹೇಳುವುದರ ಬದಲು ಶರ್ಮಿಳಾ ಧರಣಿಯ ಎರಡೂ ಗಲ್ಲಗಳನ್ನು ಒಟ್ಟಿಗೇ ಕೈಗಳಿಂದ ಹಿಂಡಿ, ʻʻಅಮ್ಮಯ್ಯ, ಭರ್ಜರಿ ಟ್ರೀಟ್ ಕೊಡ್ಸುʼʼ ಎಂದು ನಗುತ್ತ ಹೇಳಿದ ಕೂಡಲೆ ಫಕ್ಕನೆ ಎಲ್ಲ ಹೊಳೆದು ಅವಳಿಗೆ ಮೈಯೆಲ್ಲ ಕಾಮನಬಿಲ್ಲಿನಲ್ಲಿ ಮಿಂದಂತೆ ಭಾಸವಾಗಿತ್ತು. ಅದನ್ನು ನಾರಾಯಣನಿಗೆ ತಿಳಿಸುವ ಆತುರಕ್ಕೆ ಮಿತಿಯಿರಲಿಲ್ಲ. ಕಂಡ ಬೆಳಕಿಗೆ ಬೆಳ್ಳಿಯ ವಿಸ್ತಾರ. ನಿಂತ ನೆಲ ಕಚಗುಳಿ ಇಡುತ್ತಿದ್ದರೆ ಮನಸ್ಸು ಮುಗಿಲಿನ ನಕ್ಷತ್ರಗಳಲ್ಲಿ. ಮನೆಗೆ ಹೋದ ಮೇಲೆ ಅವನು ಮಾಡುತ್ತಿದ್ದ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುವುದನ್ನೇ ಕಾದಿದ್ದು ಅವನನ್ನು ಏಕಾಂತಕ್ಕೆ ಅವಸರಿಸಿ ವಿಷಯ ತಿಳಿಸಿದ್ದಳು. ʻʻಹೌದಾ . ʼʼ ಎಂದು ಕಣ್ಣರಳಿಸಿ ತನ್ನ ಕಣ್ಣುಗಳೊಳಗೆ ತೂರಿದ್ದ. ಆ ಒಂದು ಕ್ಷಣಕ್ಕಾಗಿ ತಾನು ಕಾದಿದ್ದೆಷ್ಟು ಎಂದು ಅವಳಿಗೆ ಗೊತ್ತಿತ್ತು. ತನ್ನ ಸಂಭ್ರಮದ ಜೊತೆ ಅವನ ಸಂಭ್ರಮವೂ ಜೊತೆಗೂಡಿತ್ತು. ಮುಂದಿನ ದಿನಗಳೆಲ್ಲ ಹೀಗೆಯೇ ಸಂತೋಷದಿಂದ ಇರುತ್ತವೆಂದು ಭಾವಿಸಿದ್ದಳು. ಆದರೆ ಕೆಲವೇ ತಿಂಗಳಲ್ಲಿ ಅವನ ಅನ್ನಿಸಿಕೆ ಇಷ್ಟೊಂದು ಬದಲಾದದ್ದು ಹೇಗೆ, ಅರ್ಥವಾಗುವುದಿಲ್ಲ. ʻʻಅಲ್ಲ, ಈಗ ಹೀಗೆ ಹೇಳೋನು ಮುಂಚೆನೇ ಕೇರ್ ಫುಲ್ ಆಗಿರಬೇಕಿತ್ತು . . ನಂಗೆ ಸರಿಯಾಗಿ ಅರ್ಥವಾಗೋ ಥರ ಹೇಳಿದ್ದಿದ್ರೆ ನಾವು ಪ್ಲಾನ್ ಮಾಡೋದನ್ನ ಏಕ್‌ದಂ ಪರ್‌ಫೆಕ್ಟ್ ಮಾಡಬಹುದಿತ್ತುʼʼ ಎಂದು ಅವನ ಕಡೆ ನೋಡಿದರೆ, ʻʻನನ್ನ ಲೆಕ್ಕಾಚಾರ ಸರಿಯಾಗೇ ಇತ್ತು . ..ʼʼ ಎಂದು ಕೊಂಚ ದನಿ ತಗ್ಗಿಸಿ ಹೇಳಿದರೂ, ʻʻಅದಕ್ಕೇನೀಗ . .ದೆರ್ ಈಸ್ ಆಲ್ವೇಸ್ ಎ ವೇ ಔಟ್ . .ʼʼ ಎಂದು ತನ್ನ ಕಣ್ಣು ತಪ್ಪಿಸಿ ದನಿಯನ್ನು ಸ್ವಲ್ಪ ಎತ್ತರಿಸುತ್ತಾನೆ. ʻʻಹೌದು . . ಇರತ್ತೆ ನಿಜ . . ಆದ್ರೆ ಎಲ್ಲಾನೂ ಕಾಂಪ್ರಹೆನ್ಸಿವ್ ಆಗಿ ನೋಡ್ಬೇಕು . ಆಗ ತಿಳಿಯುತ್ತೆ . . ʼʼ ಎನ್ನುತ್ತಾಳೆ.
ಕ್ಲಿನಿಕ್‌ನಲ್ಲಿ ತನ್ನ ಕೆಲಸಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನರಸಿಂಹ ಎಲ್ಲಿಂದಲೋ ಬಂದು ಪರಿಚಯದವರೊಬ್ಬರು ಹೇಳಿದ ಕಾರಣ ಬಂದು ಸೇರಿಕೊಂಡಿದ್ದ. ಹುಟ್ಟಿದೂರು ಮತ್ತು ಹೆತ್ತವರ ಹೆಸರನ್ನು ಬಿಟ್ಟರೆ ಉಳಿದ ಯಾವ ಮಾತನ್ನೂ ಅವನು ತನ್ನ ಬಾಲ್ಯದ ದಿನಗಳ ಬಗ್ಗೆ ಆಡುವುದಿರಲಿ ನೆನಪು ಮಾಡಿಕೊಳ್ಳಲೂ ಇಷ್ಟಪಡುತ್ತಿರಲಿಲ್ಲ. ಹಿಂದೆಂದೋ ಯಾವುದೋ ಸಂದರ್ಭದಲ್ಲಿ ಅವನೇ ಬಾಯಿ ಬಿಟ್ಟ ಹಾಗೆ ಬಡಸಂಸಾರದ ಅವರಪ್ಪ ಅನುಕೂಲಸ್ಥರ ಅಂಗಡಿಯೊಂದರಲ್ಲಿ ಲೆಕ್ಕ ಬರೆಯುತ್ತಿದ್ದ ಮತ್ತು ಅವನ ಪ್ರಾಮಾಣಿಕತೆಯೇ ಅವನಿಗೆ ಕೇಡಾಗಿ ದುಡ್ಡು ಕದ್ದ ಆಪಾದನೆಗೆ ಗುರಿಯಾದ ಮೇಲೆ ಎಲ್ಲದರ ಹದ ತಪ್ಪಿತ್ತು. ಅವನ ಓದಿಗೆ ಹತ್ತನೇ ಸ್ಟಾಂಡರ್ಡ್‌ಗೆ ಫುಲ್ ಸ್ಟಾಪ್ ಬಿದ್ದಿತ್ತು. ಇದು ಹಾಗಿರಲಿ ಒಟ್ಟಾರೆ ಪರಿಸ್ಥಿತಿಯ ಕಾರಣ ಒಡನಾಡಿಗಳ ಅಪಹಾಸ್ಯ ಮತ್ತು ನಿಂದನೆಗಳಿಂದ ಸೋತು ಇನ್ನೆಂದೂ ಆ ಊರಿಗೆ ಕಾಲಿಡುವುದಿಲ್ಲವೆನ್ನುವ ಹಠದಿಂದ ಮನೆಯಲ್ಲಿ ಯಾರಿಗೂ ಹೇಳದೆ ಹೊರಬಿದ್ದವನು ತನ್ನಲ್ಲಿಗೆ ಬಂದಿದ್ದ. ಅದು ಅವಳಿಗೆ ಕಾಣದ ಕಡೆಯಿಂದ ಕಾಣಿಕೆಯಂತೆ ಬಂದಂತಾಗಿತ್ತು. ಅವನಪ್ಪ ಪ್ರಾಮಾಣಿಕನಾದರೆ ಇವನು ಅವನಪ್ಪ! ಬೇರೆಲ್ಲೂ ಜಾಗ ಹುಡುಕದೆ ಕ್ಲಿನಿಕ್ಕಿನಲ್ಲಿಯೇ ಇರಲು ಧರಣಿ ಅವಕಾಶ ಮಾಡಿಕೊಟ್ಟಿದ್ದು ಇದೇ ಕಾರಣಕ್ಕಾಗಿಯೇ. ಅಷ್ಟೇ ಅಲ್ಲದೆ ಅಲ್ಲಿಗೆ ಬರುವ ಪೇಷಂಟುಗಳ ತೊಂದರೆಯ ವಿಷಯವನ್ನು ಮತ್ತು ಅವಳು ಟ್ರೀಟ್ಮೆಂಟ್ ಕೊಟ್ಟ ಮೇಲೆ ತಪಾಸಣೆ ಬಂದಾಗ ಅದರ ಪ್ರಗತಿ ಇತ್ಯಾದಿಗಳ ವಿವರ ಬರೆದಿಟ್ಟುಕೊಳ್ಳದೆ ವಿಷಯಯಗಳನ್ನು ನೆನಪಿಟ್ಟುಕೊಳ್ಳುತ್ತಿದ್ದ. ಈಗ ಲಾಕ್‌ಡೌನಿನಿಂದಾಗಿ ಕ್ಲಿನಿಕ್ಕಿನ ಬಾಗಿಲು ಹಾಕಿದರೆ ಗವ್ ಎನ್ನುವ ಮೌನ ಮತ್ತು ತೆರೆದರೆ ಹಾಳು ಸುರಿದಂತಿರುವ ರಸ್ತೆ ಹಾಗೂ ರಸ್ತೆಯಲ್ಲಿ ಅಲ್ಲಲ್ಲಿ ನಡುಹಗಲಿನಲ್ಲಿಯೇ ಮಲಗಿ ಗಮ್ಮತ್ತಿನಿಂದ ನಿದ್ದೆ ಹೊಡೆಯುವ ನಾಯಿಗಳನ್ನು ನೋಡುತ್ತಲೇ ನೆರಳುಗಳು ಸರಿಯುವುದನ್ನು ನೋಡುತ್ತಿದ್ದ. ಪ್ರಾರಂಭದಲ್ಲಿ ʻʻಟೀವಿ ಬಾಯಿ ಜೋರು . .ʼʼ ಎನ್ನುತ್ತಿದ್ದವನು ಇತ್ತೀಚೆಗೆ, ʻʻಟೀವಿ ಬಲು ಬೋರು . .ʼʼ ಎನ್ನುತ್ತಿದ್ದ.
ತನ್ನ ಕ್ಲಿನಿಕ್ಕಿಗೆ ಜಾಗ ದೊರಕಿಸಿಕೊಟ್ಟ ಗುರುಪಾದಪ್ಪ ಕಾಲೇಜಿನಲ್ಲಿ ಇದ್ದಾಗಿನಿಂದಲೂ ಪರಿಚಯವಿದ್ದವರು. ರೆವಿನ್ಯೂ ಆಫೀಸರ್ ಆಗಿದ್ದ ಅವರು ತಾನು ನಾಟಕವೊಂದರಲ್ಲಿ ಅಭಿನಯಿಸಿದ್ದನ್ನು ಮೆಚ್ಚಿಕೊಂಡವರು. ಅದರಲ್ಲಿ ಸ್ವಾರ್ಥಕ್ಕಾಗಿ ದೇವಿಗಳು ಪ್ರಸನ್ನವಾಗಲಿ ಎಂದು ಪ್ರಾಣಿಗಳನ್ನು ಬಲಿಕೊಡುವುದನ್ನು ವಿರೋಧಿಸುವ ಆಂದೋಲನಕ್ಕೆ ಮುಂದಾಳಾಗಿ ನಟಿಸಿದ್ದಳು. ನಾಟಕ ಮುಗಿದ ಮೇಲೆ ಮಾತನಾಡುತ್ತ ಅವರು, ʻʻಇದೆಲ್ಲ ಸರಿ ಹೋಯ್ತು. ಆದ್ರೆ ಈ ದೇವಿಗೆ, ಆ ದೇವಿಗೆ ಅಂತ ಎಳೆ ಮಕ್ಕಳನ್ನ ಬಲಿ ಕೊಡ್ತಾರಲ್ಲ. ಅದನ್ನೂ ಸೇರಿಸಿದ್ರೆ ಇನ್ನೂ ಚೆನ್ನಾಗಿರ್ತಿತ್ತುʼʼ ಎಂದಿದ್ದರು. ಅವರು ಲಾಕ್‌ಡೌನ್ ಕಾರಣ ದಿಢೀರ್ ಕೆಲಸವಿಲ್ಲದಾದ ಕಾರ್ಮಿಕರು, ವಲಸೆಗಾರರಿಗೆ ಅಗತ್ಯವಾದ ಧಾನ್ಯ ಹಾಗೂ ತಕ್ಷಣ ತಿನ್ನಲು ಯೋಗ್ಯವಾದಂತವುಗಳ ಕಿಟ್ ಹಂಚುವ ಯೋಜನೆಯನ್ನು ಅವರ ಬಗ್ಗೆ ಅನುಕಂಪ ಹೊಂದಿರುವವರನ್ನು ಒಗ್ಗೂಡಿಸಿ ಕೈಗೆತ್ತಿಕೊಂಡರು. ತಮ್ಮ ಸುಪರ್ದಿಯಲ್ಲಿರುವ ಹೈಸ್ಕೂಲು ಮೈದಾನದಲ್ಲಿ ಅವುಗಳನ್ನು ವಿತರಿಸುವ ಏರ್ಪಾಡು ಮಾಡಿದರು. ಅವರು ಧರಣಿಗೆ ಸಹಕರಿಸುವಂತೆ ಕೇಳುವುದನ್ನು ಪೂರೈಸುವ ಮುಂಚೆಯೇ, ʻʻಇದ್ರಲ್ಲಿ ಕೇಳೋದೇನು ಸರ್ʼʼ ಎಂದು ಒಪ್ಪಿದ್ದಲ್ಲದೆ ಕಿಟ್‌ಗಳಲ್ಲಿ ತನ್ನ ಪಾಲು ಸೇರಿಸಿಕೊಳ್ಳಲು ಉತ್ಸಾಹದಿಂದ ಹೇಳಿದಳು. ಆಗ ದೊರೆತ ಜನರ ಜೊತೆಯ ಒಡನಾಟ ಅವಳಿಗೆ ಗಂಟಲು ಒಣಗಿದಂತಾಗಿಸಿತ್ತು. ಎಣಿಕೆಗೆ ಸಿಗದಷ್ಟು ಸೋತು ಸೊರಗಿದ ಅರೆಬರೆ ಬಟ್ಟೆಯ, ನೆಲ ಕಚ್ಚಿದ ಕಳೆಯ ಜನರು ತಲೆಯೆತ್ತಿ ಎರಡೂ ಕೈಗಳನ್ನು ಮೇಲೆತ್ತಿ ನಿಂತ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸುತ್ತಿತ್ತು.
ಕಿಟ್ ವಿತರಿಸುವುದರ ಬಗ್ಗೆ ಧರಣಿ ಸೀತಮ್ಮನಿಗೆ ಹೇಳಿದಾಗ ಅವರು, ʻʻಏನು? . . ನೀನೂ ಹೋಗ್ತಿದಿಯಾ? . . ಹುಷಾರಾಗಿರಮ್ಮ . . ಯಾರ್ಯಾರು ಬರ್ತಾರೋ. . ಹೊಟ್ಟೆಗಿಲ್ದೋರು ಬಂದ್ರೆ ಪರವಾಗಿಲ್ಲ. ಆದ್ರೆ ಈ ದರಿದ್ರ ರೋಗದೋರೂ ಇರ್ತಾರೋ ಏನೋ . . ನಮ್ಮ ಹುಷಾರಲ್ಲಿ ನಾವಿರಬೇಕು ಅಲ್ಲವೇʼʼ ಎಂದರು. ʻʻಇಲ್ಲ . ಇಲ್ಲ. ಸರಿಯಾದ ವ್ಯವಸ್ಥೆ ಮಾಡಿದೀವಿʼʼ ಎಂದಳು. ಇದೇ ವಿಷಯದ ಬಗ್ಗೆ ನಾರಾಯಣ ಸಾಕಷ್ಟು ಉತ್ಸಾಹ ತೋರಿಸಿದ. ಜೊತೆಗೆ, ʻʻಅದೆಲ್ಲಾ ಸರಿ. ನಿನ್ನ ಪರಿಸ್ಥಿತಿ ಗೊತ್ತು ತಾನೆ? ಗಡಿಬಿಡಿಯಲ್ಲಿ ಅದನ್ನು ಮರ್ತು ಬಿಟ್ಟೀಯʼʼ ಎಂದ. ಅದಕ್ಕೆ, ʻʻಎಲ್ಲಾದರೂ ಉಂಟೆ. ಫಸ್ಟ್ ಅದುʼʼ ಎಂದು ನಸುನಗೆ ತೂರಿದಳು. ಕಿಟ್ ವಿತರಿಸುವ ದಿನವಂತೂ ಅವಳಿಗೆ ವಿಶೇಷವೆನಿಸಿತ್ತು. ಏಕೋ ಮೈ-ಮನಸ್ಸೆಲ್ಲ ಹಗುರು. ಮನಸ್ಸಿನೊಳಗೆ ಒಟ್ಟಿದ್ದ ಮೂಟೆಗಳನ್ನು ಹೊರಗೆ ಹಾಕಿದ ಹಾಗೆ. ಕಾಲು ನೆಲ ಬಿಟ್ಟು ಮೇಲೇರಿದ ಹಾಗೆ.
ಈ ಎಲ್ಲ ಕೆಲಸಗಳಿಗೆ ಧರಣಿ ನರಸಿಂಹನನ್ನು ಜೊತೆಗಿರಲು ಹೇಳಿದ್ದಳು. ಅವನಂತೂ ಉತ್ಸಾಹದ ಚಿಲುಮೆಯಂತಿದ್ದ. ಇಂಥದೊಂದು ಕಾರ್ಯಕ್ರಮದಲ್ಲಿ ತಾನು ಪಾಲ್ಗೊಳ್ಳುತ್ತಿರುವುದು ವಿಶೇಷವೆಂದು ಅವನ ತಿಳಿವಳಿಕೆ. ಕಿಟ್ ಹತ್ತಿರ ಬರುವ ಜನರನ್ನು ತಡೆಯುವಲ್ಲಿ ಮತ್ತು ಅವರ ಅಬ್ಬರವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುವುದಕ್ಕೆ ಶ್ರಮಿಸುತ್ತಿದ್ದ. ನಮ್ಮ ಜನರ ನಡವಳಿಕೆಗಳಿಂದ, ಶಿಸ್ತು ಕಾಪಾಡದ ವರ್ತನೆಗಳಿಂದ ಗುರುಪಾದಪ್ಪನವರು ಕೊಂಚ ಬೇಸರಗೊಂಡಿದ್ದರೂ ಕೇಳಿದವರಿಗೆ, ʻʻಏನಂದ್ರೂ ನಮ್ಮ ಜನ ಅಲ್ವೇನಪ್ಪ . . ಒಂದೀಟು ಸರೀಗೆ ನಡ್ಕಂಡ್ರೆ ಆಯ್ತದಷ್ಟೇʼʼ ಎಂದು ಹೇಳಿದರು. ಅಂದಿನ ಕಾರ್ಯಕ್ರಮ ಮುಗಿದ ನಂತರ ಮತ್ತೊಮ್ಮೆ ಸೇರುವ ವಿಚಾರವನ್ನು ಆಲೋಚನೆಯನ್ನು ಎಲ್ಲರಿಗೂ ತಿಳಿಸಿ ಹೇಳಿದರು. ಅನಂತರ ಹದಿನೈದು ದಿನಗಳಾದ ಮೇಲೆ ನಡೆದ ಇಂಥದೇ ಕಾರ್ಯಕ್ರಮದಲ್ಲಿ ಎಲ್ಲವೂ ಸಾಕಷ್ಟು ಹತೋಟಿಯಲ್ಲಿತ್ತು. ಅದರಲ್ಲಿ ಪಾಲ್ಗೊಂಡವರು ವಹಿಸಿದ ಕೆಲಸ ಮಾಡುತ್ತ ಮಂದಹಾಸ ವಿನಿಮಯ ಮಾಡಿಕೊಂಡಿದ್ದರು. ಇದೇ ಸಂಗತಿಯನ್ನು ಧರಣಿ ಸೀತಮ್ಮನಿಗೆ ತಿಳಿಸಿದಾಗ, ʻʻಮೈ-ಕೈ ಗಟ್ಟಿಯಾಗಿ ಉಳ್ಕೊಂಡಿದೆ ತಾನೆ? . . ಬಂದವರನ್ನೆಲ್ಲ ಮುಂಚೇನೇ ಪರೀಕ್ಷೆ ಮಾಡಿಸಿದ್ರಿ, ಹೌದೋ- ಅಲ್ವೋ?ʼʼ ಎಂದದ್ದಕ್ಕೆ ಹೆಚ್ಚೇನೂ ಹೇಳದೆ ಅವರ ಸಮಾಧಾನಕ್ಕಾಗಿ ಸುಮ್ಮನೆ ತಲೆ ಹಾಕಿ ತನ್ನೊಳಗೆ ನಕ್ಕಳು. ಕಾರಣ ಅಷ್ಟೆಲ್ಲ ಮಾಡಲು ಸಾಧ್ಯವೂ ಇರಲಿಲ್ಲ, ಅನುಕೂಲವೂ ಇರಲಿಲ್ಲ. ನಾರಾಯಣ ಅವಳನ್ನು ಬಡಪಟ್ಟಿಗೆ ಬಿಡಲಿಲ್ಲ. ʻʻನಿಂದು ಅತಿಯಾಯ್ತು. ಇನ್ನೇನಾದ್ರೂ ಹೆಚ್ಚುಕಮ್ಮಿ ಆಗಿದ್ರೆ ಯಾರನ್ನ ಕೇಳ್ಬೇಕಾಗಿತ್ತು . . ಆಯ್ತಲ್ಲ . . ಇನ್ನಾದ್ರೂ ಇಂಥದಕ್ಕೆಲ್ಲ ಹೋಗ್ಬೇಡ . ತಿಳೀತಾʼʼ ಎಂದು ಗದರಿದ.
ಆ ದಿನ ನಾರಾಯಣ ಎದ್ದದ್ದು ವಿಪರೀತ ತಡವಾಗಿ. ಎಂದಾದರೊಮ್ಮೆ ಹೀಗಾಗುತ್ತಿದ್ದರಿಂದ ಕೆಲಸದ ಒತ್ತಡವಿಲ್ಲ ಎಂದು ಅದರರ್ಥ ಎಂದು ಧರಣಿಗೆ ತಿಳಿದ ಸಂಗತಿ. ಏನಾದರೂ ಕುಡಿಯುತ್ತಲೋ ತಿನ್ನುತ್ತಲೋ ಇರುವಾಗ ಟೀವಿ ನೋಡುವುದು ಅವನ ಅಭ್ಯಾಸವಾಗಿದ್ದರೂ ಅದರ ತಂಟೆಗೆ ಹೋಗದೆ ಧರಣಿ ತಂದು ಕೊಟ್ಟ ಕಾಫಿ ಕಪ್ಪನ್ನು ತೆಗೆದುಕೊಂಡ. ಅವಳೇ ಟೀವಿ ಆನ್ ಮಾಡಲು ರಿಮೋಟ್ ಕೈಗೆತ್ತಿಕೊಳ್ಳುತ್ತಿದ್ದಂತೆ ತಡೆದು ಯಾವುದೋ ನಾಟಕದಲ್ಲಿನ ಸಾಲುಗಳನ್ನು ಹೇಳುವಂತೆ ಮೆಲುದನಿಯಲ್ಲಿ ಗಂಭೀರವಾಗಿ, ʻʻನಿನ್ನ ಡಿಸಿಷನ್ ಏನೂಂತ ಇನ್ನೂ ಹೇಳ್ಲೇ ಇಲ್ಲ . . ಬಟ್ ಟೈಂ ಈಸ್ ರನ್ನಿಂಗ್ ಔಟ್ . .ಇನ್ನು ಕಾಯಕ್ಕಾಗಲ್ಲ . . ಪ್ರೈಮರಿಲಿ ಇನ್ ಯುವರ್ ಇಂಟೆರೆಸ್ಟ್ʼʼ ಎಂದ. ಅವಳು ಟೀವಿಯಿಂದ ಬರುತ್ತಿದ್ದ ಶಬ್ದ ಹೆಚ್ಚಾಯಿತೆಂದು ಕಡಿಮೆ ಮಾಡಿ, ʻʻಬೆಳಿಗ್ಗೆ, ಬೆಳಿಗ್ಗೇನೆ ಏನಿದು . . ಹೇಳ್ತೀನಿ ಬಿಡು . ನಂಗೊತ್ತಿದೆ ʼʼ ಎಂದು ಕೊಂಚ ಗಡುಸಾಗಿಯೇ ಹೇಳಿದಳು. ಅವನು ಮುಖ ಸಿಂಡರಿಸಿದ್ದನ್ನು ಗಮನಿಸಿ, ʻʻಅದು ಇಬ್ಬರ ಇಂಟೆರೆಸ್ಟ್‌ನಲ್ಲೂ ಇರಬೇಕಲ್ವಾ?ʼʼ ಎಂದು ಹೇಳಿ ಉತ್ತರಕ್ಕೆ ಕಾಯದೆ ಮುಂದೆ ಹೋದಳು. ಎಲ್ಲವೂ ನಿಗದಿತ ಸಮಯದಲ್ಲಿ ಇತ್ಯರ್ಥವಾಗಬೇಕು ಎಂದು ಅವನ ಒತ್ತಡ ಅವಳ ಮನಸ್ಸನ್ನು ಕದಡಿತ್ತು. ತಾನು ಎಂ.ಡಿ ಮಾಡಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಿದರೆ ಬರುವ ಹೆಚ್ಚುಗಾರಿಕೆ ನಿಜಕ್ಕೂ ಇರುವುದೇ ಎನ್ನುವುದರಲ್ಲಿ ಅವಳಿಗೆ ಅನುಮಾನ. ತನಗೆ ಈಗಿರುವ ಸ್ವಾತಂತ್ರ್ಯ ದೊಡ್ಡ ಸಂಸ್ಥೆಯನ್ನು ಸೇರಿದ ಮೇಲೆ ಇರುವುದೇ ಹೇಗೆ ಎನ್ನುವುದರ ಬಗ್ಗೆ ಕೂಡ ಅನುಮಾನ. ಇದಲ್ಲದೆ ಎಲ್ಲದಕ್ಕಿಂತ ಮುಖ್ಯವಾಗಿ ಅದನ್ನು ಪಡೆಯುವುದಕ್ಕೋಸ್ಕರ ತನ್ನ ಹೊಟ್ಟೆಯೊಳಗೆ ಇರುವುದನ್ನು ಮುಗಿಸಬೇಕೆಂದು ಅವನು ಕೊಡುವ ಹಿಂಸೆ ಎಳ್ಳಷ್ಟೂ ಹಿಡಿಸಲಿಲ್ಲ.
ತೀರಾ ಏಕಮುಖವಾಗಿ ಆಲೋಚಿಸುವ ಅವನನ್ನು ತಹಬಂದಿಗೆ ತರುವುದು ಹೇಗೆ? ತಾನು ಅವನ ಇಷ್ಟದ ಪ್ರಕಾರ ನಡೆದುಕೊಂಡರೆ ನಡುಗತ್ತಲಲ್ಲಿ ಎಳೆಯ ಕಂದಮ್ಮಗಳನ್ನು ಬಲಿಕೊಡುವವರಿಗಿಂತ ಹೇಗೆ ಭಿನ್ನವಾಗುತ್ತದೆ? ಆಪರೇಷನ್ ಥಿಯೇಟರ್‌ನಲ್ಲಿ ನಡೆಯುವ ಕಣ್ಣು ಬಿಡದ ಕಂದನನ್ನು ಕೊಲ್ಲುವುದು ಕತ್ತಲೆಯ ಮುಸುಕಿನಲ್ಲಿ ನಡೆಯುವ ಆ ಕ್ರಿಯೆಗಿಂತ ಹೇಗೆ ಭಿನ್ನ, ಅವನಿಗೇಕೆ ತಿಳಿಯುವುದಿಲ್ಲ? ಇತ್ತೀಚೆಗೆ ಅವನು ಬೇರೆ ರೀತಿಯ ಬಾಣಗಳನ್ನ ಬಿಡುತ್ತಿದ್ದಾನೆ. ಈ ಮೊದಲು ಮುಖ ಊದಿಸಿಕೊಳ್ಳುವುದಷ್ಟೇ ಅದರ ಬಗೆಯಾಗಿತ್ತು ಈಗ ಅದು ಬಿಟ್ಟು ಹೊಸ ರೀತಿಯಲ್ಲಿ ಅಂದ್ರೆ ಸುಳ್ಳು ಕಾರಣ ಹೇಳಿ ನನ್ನ ಕಡೆ ನೋಡುತ್ತಾ, ʻʻಊಟ ಮಾಡುವುದಿಲ್ಲ ಇವತ್ತುʼʼ ಅಂತ ಅತ್ತೆಯವರಿಗೆ ಹೇಳುತ್ತಾನೆ. ಏನೂ ಗೊತ್ತಿರದ ಅವರು, ʻʻನಿನಗೋಸ್ಕರ ಮಾಡಿರೋದಲ್ಲೋʼʼ ಎಂದರೆ ʻʻನನ್ನ ಕೇಳಿ ಮಾಡಿದೀಯಾ?ʼʼ ಎನ್ನುತ್ತಾನೆ. ಹೀಗೆ ಸುಖಾಸುಮ್ಮನೆ ಹುಡುಗಾಟವಾಡುವ ಅವನನ್ನು ನೋಡಲು ಆಗುವುದಿಲ್ಲ. ಇದರಿಂದ ನಾನು ಶರಣಾಗಿ ಅವನು ಹೇಳಿದ್ದಕ್ಕೆ ಸುಮ್ಮನೆ ತಲೆ ಹಾಕಿ ಬಿಡುತ್ತೇನೆ ಎಂದು ಅವನ ಅಭಿಪ್ರಾಯ. ಅದು ಗೊತ್ತಾಗಿ ನನಗೆ ಸಿಟ್ಟು ಬರುತ್ತದೆ. ಮರುದಿನ ಅತ್ತೆಯವರು ಅವನಿಗೆ ಹೆಚ್ಚಿನ ತಿಂಡಿಯನ್ನು ಕೊಡುತ್ತಾರೆ. ತನ್ನ ವರಸೆ ಸುಲಭವಾಗಿ ಗೊತ್ತಾಗಿ ಬಿಡುತ್ತದೆ ಎಂದು ಆ ದಿನವೇ ನನ್ನನ್ನು ಒತ್ತಾಯಿಸಿ ಕೇಳುವುದಿಲ್ಲ. ಮರುದಿನ ಮತ್ತೆ ನಸು ಮುಖದಿಂದ, ʻʻಏನಂತಾರೆ ಅಮ್ಮಾವ್ರುʼʼ ಎಂದು ಕೇಳುತ್ತಾನೆ. ಆಗ ನಾನು ಮುಖ ಸಿಂಡರಿಸಿ, ʻʻಇದ್ಯಾವ ನಾಟಕದ್ದುʼʼ ಎಂದು ಎನ್ನುತ್ತೇನೆ. ಏನಾಗಲಿ ಇಂಥದನ್ನು ಸುಲಭವಾಗಿ ನಿಭಾಯಿಸಬಹುದು ಅನ್ನಿಸಿತ್ತು. ಆದರೆ ನಾನು ನಿರೀಕ್ಷಿಸಿರದ ಮನಸ್ಸಿಗೆ ಘಾಸಿಗೊಳಿಸುವಂಥ ವರಸೆಯನ್ನು ಹೊರತೆಗೆದ. ʻʻನೀನು ನನ್ನ ದಾರಿಗೆ ಬರುವ ತನಕ ನಿನ್ನ ಜೊತೆ ಮಾತಾಡಲ್ಲʼʼ ಎಂದು ರಪ್ ಎಂದು ಬಾರಿಸುವ ಧ್ವನಿಯಲ್ಲಿ ಹೇಳಿದಾಗ ನಾನು ತಮಾಷೆಗೆ ಎಂದು ತಿಳಿದಿದ್ದೆ. ಆದರೆ ಅವನು ಅದರ ಬಗ್ಗೆ ಇನ್ನಿಲ್ಲದಷ್ಟು ಗಂಭೀರವಾಗಿದ್ದ. ಇಷ್ಟು ಅತಿರೇಕವಾದದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಎರಡೇ ದಿನದಲ್ಲಿ ಕರಗಿ ಅವನ ಕಾಲ ಬಳಿ ಬೀಳುತ್ತೇನೆಂದು ಕಲ್ಪಿಸಿಕೊಂಡಿದ್ದನೆಂದು ಕಾಣುತ್ತದೆ. ಹಿಂದೆಂದಿಗಿಂತಲೂ ಇದು ನನಗೆ ದೊಡ್ಡ ಸವಾಲಾಗಿ ಕಂಡಿತು. ಇಬ್ಬರೂ ಹಠ ಹಿಡಿದಿದ್ದರಿಂದ ಮುಖ್ಯವಾದ ವಿಷಯ ಎಲ್ಲೋ ಅಡಗಿ ಹೋಯಿತು. ನನಗೆ ಎಲ್ಲಿಲ್ಲದ ಹಿಂಸೆ, ಒತ್ತಡ ಶುರುವಾಯಿತು. ನಮ್ಮ ಪರಿಸ್ಥಿತಿ ಈ ಮಟ್ಟಕ್ಕೆ ಬರಬೇಕಾಯಿತೆ ಎಂದು ಸಂಕಟವಾಗುತ್ತದೆ. ರಾತ್ರಿ ಬಹಳ ಹೊತ್ತಾದರೂ ನಿದ್ದೆ ಬರುವುದಿಲ್ಲ. ಇದರಿಂದ ನನ್ನ ಆರೋಗ್ಯದ ಗತಿ ಏನು ಎನ್ನಿಸುತ್ತದೆ. ಆದರೆ ಅವನು ಏನೂ ಆಗದವನಂತೆ ಬೆಳಿಗ್ಗೆ ತನ್ನ ಎಂದಿನ ದಿನಚರಿ ಪ್ರಾರಂಭಿಸುತ್ತಾನೆ. ಇದರಿಂದ ನಾನು ಬಹಳ ಬೇಗ ಮಣಿಯುತ್ತೇನೆ ಎಂದು ಅವನ ನಿರೀಕ್ಷೆ. ಆದರೆ ಅವನ ಈ ಹೊಸ ಬಾಣಗಳಿಗೆ ನಾನು ಮತ್ತಷ್ಟು ಬಿಗಿಯಾಗುತ್ತಾ ಹೋಗುವ ಮನಸ್ಸಾಗುತ್ತದೆ. ಹೊರನೋಟಕ್ಕೆ ಏನೂ ಗೊತ್ತಾಗದೆ ಈ ಬಗೆಯ ಬದಲಾವಣೆಗಳು ಸಾಧ್ಯವಾಗುವುದು ಸೋಜಿಗವೆನಿಸಿತು. ಆದರೆ ಸುತ್ತಲಿನ ಗಾಳಿ- ಬೆಳಕು, ಮನೆಯಲ್ಲಿನ ಸೋಫಾ, ಕುರ್ಚಿ, ಟೀವಿ ಇತ್ಯಾದಿಗಳು ಮೊದಲಿನಂತೆ ತೋರುವುದಿಲ್ಲ. ಸೂಕ್ಷ್ಮ ತಿಳಿದ ಅವು ಪ್ರಶ್ನಿಸಿದಂತೆ ನೋಡುತ್ತಿರುತ್ತವೆ.
ಅವಳಿಗೆ ತನ್ನ ಕ್ಲಿನಿಕ್, ಅಲ್ಲಿರುವ ಒಂದೊಂದು ವಸ್ತು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನರಸಿಂಹ ನೆನಪಾದ. ಸಾಂಪ್ರದಾಯಿಕವಾದ ಯಾವ ಬಗೆಯ ನಂಟೂ ಇಲ್ಲದ ಈ ಪೋರ ತನಗಿಷ್ಟು ಹತ್ತಿರವಾದದ್ದು ಹೇಗೆ? ನಿರ್ಗತಿಕನಾಗಿದ್ದವನು ಎಲ್ಲ ಆವರಿಸಿ ಬೆಳೆದದ್ದು ಅವಳಿಗೆ ಅಚ್ಚರಿ ಹುಟ್ಟಿಸುತ್ತದೆ. ತಾನು ತನ್ನದೆನ್ನುವುದರ ಬಗ್ಗೆ ಬೇರೆ ರೀತಿಯಲ್ಲಿ ನಿಬ್ಬೆರಗಾಗುವಂತೆ ತಿಳಿಸಿ ಹೇಳುವ ಅವನ ಬಗ್ಗೆ ಹೆಮ್ಮೆ ಎನಿಸುತ್ತದೆ. ಅವಳಿಗೆ ಅರಿವಿಲ್ಲದೆಯೇ ಕಿರುನಗು ತುಟಿಯ ತುದಿಯಲ್ಲಿ ಇಣುಕಿ ಅತ್ತಿಂದಿತ್ತ ಓಲಾಡುತ್ತದೆ. ಎದ್ದು ಟೀವಿ ಹಾಕಿದಳು. ವಲಸೆಗಾರರು ಊರಿಗೆ ಹಿಂತಿರುಗುವ ಹೋರಾಟದ ವಿವರಗಳ ಜೊತೆಗೆ ಪ್ರಚಾರ ಹಾಗೂ ಪ್ರಸಿದ್ದಿಗೆಂದು ಜನ ನಾಯಕರೆನ್ನುವವರು ಮಾಡುವ ಅಟಾಟೋಪಗಳನ್ನು ಕಂಡು ಆಫ್ ಮಾಡಿದಳು. ಹೊರಗೆ ಬಂದು ನಿಂತಾಗ ಬಿಸಿಲಿನ ಶಾಖ ಹೆಚ್ಚಾಗಿದೆ ಎನ್ನಿಸಿತು. ಅದು ಈಗಿರುವುಕ್ಕಿಂತ ನೂರು ಪಟ್ಟು ಹೆಚ್ಚಾಗಿ ತನ್ನನ್ನು ಆವರಿಸುವಂತಾದರೆ ಎಷ್ಟು ಚೆನ್ನ ಎಂದುಕೊಂಡಳು.
ಮೊಬೈಲ್ ರಿಂಗಾಗುತ್ತದೆ. ಎತ್ತಿಕೊಂಡರೆ ನರಸಿಂಹ. ಅವನು, ʻʻಬೇಗ ಬನ್ನಿ ಮೇಡಂ . .ತುಂಬ ಅರ್ಜೆಂಟು . . ಇವರು ಯಾರೋ ಏನೋ . . ಬಂದಾಗಲಿಂದ ನರಳ್ತಾ ಇದಾರೆ . . ಅವರ ಜೊತೇಲಿ ಇರೋರ ಗೋಳಂತೂ ಹೇಳೋ ಹಾಗೇ ಇಲ್ಲ . .ʼʼ ಎಂದು ಉಸಿರುಗಟ್ಟಿ ಹೇಳುತ್ತಿದ್ದವನು ಕೊನೆಯಲ್ಲಿ, ʻʻಬನ್ನಿ ಮೇಡಂ ಬೇಗ . . ಆಯಮ್ಮ ಬಸಿರಿ ಕಾಣ್ತದೆ . . ಪೂರಾ ಟೈಂ ಆದಂಗಿದೆ . ಜೊತೆಗಿರೋರೂ ಒದ್ದಾಡ್ತಿದಾರೆ. . ʼʼ ಎಂದ. ಅವಳಿಗೆ ತಕ್ಷಣ ಶಾಕ್ ಹೊಡೆದಂತಾಯಿತು. ಅಲ್ಲಿಗೆ ಬಂದಿರುವುದು ದಿನ ತುಂಬಿದ ಗರ್ಭಿಣಿ. ಅದು ಅವನು ಮಾತನಾಡುವ ರೀತಿ. . . ತನ್ನದು ಡೆಂಟಲ್ ಕ್ಲಿನಿಕ್. ಹಲ್ಲಿಗೆ ಸಂಬಂಧಪಟ್ಟಿದ್ದನ್ನು ಟ್ರೀಟ್ ಮಾಡುವ ಸ್ಥಳ. . ಓದಿದ್ದು, ಮಾಡ್ತಿರೋದು ಅದೇ . . ಈಗ ಅಲ್ಲಿ ದಿನ ತುಂಬಿದವಳು! ತಾನೆಂದೂ ಹೆರಿಗೆ ಮಾಡಿದವಳಲ್ಲ. . . ಇದೇ ವಿಷಯವನ್ನು ತಿಳಿಸಿ ಬೇರೆಲ್ಲಾದರೂ ಹೋಗುವಂತೆ ಅವರಿಗೆ ಹೇಳುವಂತೆ ನರಸಿಂಹನಿಗೆ ಹೇಳಲೇ. . ಹೀಗನಿಸಿದಾಗ ಅವಳಿಗೆ ತನ್ನ ಮೇಲೆಯೇ ಸಿಟ್ಟು ಬಂತು. ಜೊತೆಗೆ ತಾನು ಕುಗ್ಗುತ್ತಿದ್ದೇನೆಯೋ ಹೇಗೆ ಎನ್ನುವ ಭಾವನೆ ಕೂಡ. ಅದೇಕೋ ಅವಳಿಗೆ ಇಲ್ಲೆಲ್ಲೋ ಕುಳಿತು ಸುಮ್ಮನೆ ಸೋಲು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲ. ಅದನ್ನು ಹೊರದಬ್ಬುವ ಹಾಗೆ ಕೆಲವು ಕ್ಷಣ ಉಸಿರು ಬಿಗಿ ಹಿಡಿದು, ಎದುರಿಗೆ ನೋಡಿದರೆ ಎಲ್ಲ ತಿಳಿಯುತ್ತದೆ ಎಂದು ಹೊರಟಳು. ತನ್ನ ಕ್ಲಿನಿಕ್ಕಿನ ಬಳಿಗೆ ಬರುವಷ್ಟರಲ್ಲಿ ಅಲ್ಲಿ ಹತ್ತಾರು ಜನರ ಗುಂಪು. ಅಷ್ಟು ದೂರದಿಂದಲೇ ಅವಳಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು. ಹತ್ತಿರ ಹೋಗುತ್ತಿದ್ದಂತೆ ನರಸಿಂಹ, ʻʻನಾನು ಎಷ್ಟೋ ಹೇಳ್ದೆ. . ಆದ್ರೂ ಅವರು ಕೇಳ್ಲಿಲ್ಲ . . ಡಾಕ್ಟರ್ ಅಲ್ವಾ, ಬೇಗ ಕರೀರಿ . . ಏನಾದ್ರೂ ಮಾಡ್ತಾರೆ ಅಂತ ಗೋಳಿಟ್ಟರುʼʼ ಎಂದ. ಅವನ ಮಾತಿನ ಜೊತೆಗೆ ಆ ಗರ್ಭಿಣಿ ಹೆಂಗಸು ನರಳಾಡುತ್ತಿರುವ ಶಬ್ದ ಜೊತೆಗೂಡಿತು. ಧರಣಿಗೆ ಹೆಚ್ಚು ಆಲೋಚಿಸಲು ಸಮಯ ಇರಲಿಲ್ಲ. ಎದುರಿಗೆ ತನ್ನ ಕಡೆ ಇನ್ನಿಲ್ಲದಷ್ಟು ನೋಡುತ್ತಿದ್ದ ಜೋಡಿ, ಜೋಡಿ ಅಸಹಾಯಕ ಕಣ್ಣುಗಳು ತಾನು ಇಲ್ಲಿಯ ತನಕ ಕೈಗೊಳ್ಳದ ಕೆಲಸಕ್ಕೆ ಹುರಿದುಂಬಿಸುತ್ತಿದ್ದವು. ತನ್ನ ಮೈಯೊಳಗಿನ ನರಗಳು ಹಾಗು ಮನಸ್ಸಿನ ಶಕ್ತಿಗಳು ಒಗ್ಗೂಡಿ, ಹೌದು, ಅವರು ಹೇಳಿದ್ದು ಸರಿ, ಏನೆಂದರೂ ತಾನೊಬ್ಬಳು ಡಾಕ್ಟರ್. ಆಕಸ್ಮಿಕವಾದರೂ ಸರಿಯೆ ಒದಗಿದ ಅವಕಾಶವನ್ನು ಎದುರಿಸುವ ಶಕ್ತಿ ತನಗೆ ಬರಲಿ ಎಂದು ಒಂದೆರಡು ಕ್ಷಣ ಕಣ್ಮುಚ್ಚಿದಳು. ಅನಂತರ ಇಡೀ ಪ್ರಸಂಗದ ಮೇಲ್ವಿಚಾರಣೆಯನ್ನು ಅದು ತಲುಪಬೇಕಾದ ಹಂತವನ್ನು ಮತ್ತು ಅದಕ್ಕೆ ಎದುರಿಸಲು ಬೇಕಾಗುವ ಎಲ್ಲ ಕ್ರಮಗಳನ್ನು ಅನುಸರಿಸಲು ಸಿದ್ದಳಾದಳು.
ಗರ್ಭಿಣಿ ಹೆಂಗಸಿನೊಡನೆ ಇದ್ದವರು ಗಂಡಸರು, ಹೆಂಗಸರು. ಧರಣಿ ಯಾರನ್ನೂ ಮಾತಾಡಿಸದೆ ಗರ್ಭಿಣಿ ಹೆಂಗಸಿನ ಹತ್ತಿರ ಹೋಗಿ, ʻʻನಾನಿದೀನಿ, ಭಯಪಡಬೇಡ. ಎಲ್ಲಾ ಸರಿಹೋಗುತ್ತೆʼʼ ಎಂದಳು. ಅವಳು ತಾನು ಹೇಳಿದ್ದು ಅರ್ಥವಾಗದಂತೆ ಪಕ್ಕದವಳನ್ನು ನೋಡಿದಳು. ಅವಳು ಹಿಂದಿಯಲ್ಲಿ, ʻʻಶಾಯದ್ ಕೆಹೆರಹೀ ಹೈ, ಸಬ್ ಕುಚ್ ಠೀಕ್ ಹೋ ಜಾಯೆಗಾʼʼ ಎಂದಳು. ಆಗ ಬಂದಿದ್ದವರಿಗೆ ಕನ್ನಡ ಬರುವುದಿಲ್ಲ ಎಂದು ಧರಣಿಗೆ ಗೊತ್ತಾಯಿತು. ಅನಂತರ ತನಗೆ ಬರುವ ಅಲ್ಪಸ್ವಲ್ಪ ಹಿಂದಿಯನ್ನು ಬೆರೆಸಿ ಹೆಚ್ಚಾಗಿ ಕೈಸನ್ನೆಯಲ್ಲಿಯೇ ಮೊದಲು ಗರ್ಭಿಣಿ ಹೆಂಗಸನ್ನು ಒಳಗೆ ತರಲು ಆಕೆಯ ಕಡೆ ಬೆಟ್ಟು ಮಾಡಿ ʻʻಉಸ್ಕೋ ಅಂದರ್ ಲೇ ಆಯಿಯೇʼʼ ಎಂದು ಸೂಚನೆ ಕೊಟ್ಟಳು. ಅನಂತರ ಜೊತೆಗಿದ್ದ ಹೆಂಗಸರು ಒಂದೆರಡು ಸೀರೆಗಳನ್ನು ತಂದರು. ಅದನ್ನು ಉಪಯೋಗಿಸಿಕೊಂಡು ಗರ್ಭಿಣಿ ಹೆಂಗಸಿಗೆ ಬೇಕಾದ ಏಕಾಂತವನ್ನು ತಯಾರು ಮಾಡಿದಳು. ಅನಂತರ ಅಲ್ಲಿದ್ದವರಿಗೆ ಸೂಚನೆ ಕೊಡುತ್ತ ಕಾರ್ಯಪ್ರವೃತ್ತಳಾದಳು.
ಅವಳು ಹಾಗೆ ತೊಡಗಿದ್ದರೂ ಗಂಡಸರಲ್ಲೊಬ್ಬ ನರಸಿಂಹನಿಗೆ ಹೇಳುತ್ತಲೇ ಇದ್ದ. ಅವನ ಮಾತಿನ ಅರ್ಥ ಇಷ್ಟೆ: ಬಿಹಾರಿನಲ್ಲಿರುವ ತಮ್ಮೂರಿಗೆ ಹೊರಟಿದ್ದ ಅವರನ್ನು ಇತರರೊಂದಿಗೆ ಸಾಲಾಗಿ ನಿಲ್ಲಿಸಿ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ನಂತರ ಅಧಿಕಾರಿಗಳಲ್ಲಿ ಒಬ್ಬ ತಮ್ಮ ಜೊತೆಗಿದ್ದ ಗರ್ಭಿಣಿ ಹೆಂಗಸನ್ನು ಮತ್ತಿಬ್ಬರನ್ನು ಕ್ವಾರಂಟೈನ್ ಗೆ ಹೋಗಲು ಬಲವಂತ ಮಾಡಿದ. ತಾವು ತಮ್ಮ ಸಂಕಟವನ್ನು, ಗರ್ಭಿಣಿಯ ಅವಸ್ಥೆಯನ್ನು ಯಾವ ರೀತಿಯಲ್ಲಿ ಹೇಳಿದರೂ ಅವರು ಕೇಳಲಿಲ್ಲ. ಕೊನೆಗೆ ಅಕಸ್ಮಾತ್ ಕಂಡ ಉನ್ನತ ಅಧಿಕಾರಿಗಳ ಬಳಿ ತಮ್ಮ ಮೊರೆಯಿಟ್ಟ ಮೇಲೆ ಈ ಮೊದಲಿನ ಅಧಿಕಾರಿ ತಪ್ಪು ಮಾಡಿದ್ದಾಗಿ ಕಂಡಿತು. ಹೀಗಾಗಿ ಅವರು ತಮ್ಮ ಪಾಡಿಗೆ ತಮ್ಮನ್ನು ಬಿಟ್ಟರು. ಇಲ್ಲದಿದ್ದರೆ ತಾವು ಅಲ್ಲೆಲ್ಲೋ ಒದ್ದಾಡುತ್ತ ಬಿದ್ದಿರಬೇಕಿತ್ತು. ತಮ್ಮ ಮಾತನ್ನು ಕೇಳಿಸಿಕೊಳ್ಳುವವರು ಯಾರೂ ಇರುತ್ತಿರಲಿಲ್ಲ. ಗರ್ಭಿಣಿಯ ಪಾಡಂತೂ ಹೇಳುವ ಹಾಗೇ ಇರಲಿಲ್ಲ. ಏನು ಮಾಡುವುದು? . . ಅವಳು ನೋವಿನಿಂದ ಗೋಳಾಡುತ್ತಾ ಇದ್ದರೂ ಹಾಗೇನೇ ಕರೆದುಕೊಂಡು ರಸ್ತೆರಸ್ತೆ ಹುಡುಕುತ್ತಾ ಬಂದೆವು. ಯಾವ ಆಸ್ಪತ್ರೇನೂ ಸಿಗಲಿಲ್ಲ. ಯಾರೋ ಈ ಆಸ್ಪತ್ರೆ ಕಡೆ ಕೈ ಮಾಡಿದರು . . ಏನಾದರೂ ಆಗೋದಿದ್ದರೆ ಇಲ್ಲೇ ಆಗಲಿ ಅಂತ ಬಂದೆವು. . ನೀವು ಸಿಕ್ಕಿದಿರಿ . . ಡಾಕ್ಟರಮ್ಮ ಕೂಡ ಬಂದಿದಾರೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ನಮ್ಮ ಗತಿ ಏನಾಗುತ್ತಿತ್ತೋ ಏನೋ. ಎಂದೆಂದಿಗೂ ನಾವು ನಿಮಗೆ ಋಣಿಯಾಗಿರುತ್ತೇವೆ. . . . . .
ಧರಣಿಗೆ ಭರವಸೆ ಇದ್ದರೂ ಒಂದು ರೀತಿಯ ಒತ್ತಡವಿತ್ತು. ಅದನ್ನು ನಿಭಾಯಿಸುತ್ತಲೇ ತನ್ನ ಬಳಿಯಿದ್ದ ಪರಿಕರಗಳಿಂದಲೇ ಹೊಕ್ಕುಳ ಬಳ್ಳಿ ಕತ್ತರಿಸುವುದರಿಂದ ಹಿಡಿದು ಹೆರಿಗೆಯ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿದಳು. ವಾತಾವರಣ ತಿಳಿಯಾಯಿತು. ಅದು ಸಾಮಾನ್ಯ ರೀತಿಯ ಹೆರಿಗೆಯಾದ್ದರಿಂದ ಅವಳಿಗೆ ಹೆಚ್ಚು ಕಷ್ಟವೆನಿಸಲಿಲ್ಲ. ಅನಂತರ ಅಳಿದುಳಿದ ಸ್ವಚ್ಛತೆ ಮತ್ತು ಒಪ್ಪ ಮಾಡುವುದನ್ನು ಇತರ ಹೆಂಗಸರು ಮಾಡಿದರು. ಎಲ್ಲ ಸ್ಥಿಮಿತಕ್ಕೆ ಬಂದ ಮೇಲೆ ಅವಳು ಕೆಲವು ಕ್ಷಣ ಮಗುವಿನ ಕಡೆಗೆ ಹಾಗೂ ಅದರ ತಾಯಿಯ ಕಡೆ ರೆಪ್ಪೆ ಅಲುಗಿಸದೆ ನೋಡಿದಳು. ಮಗುವಿನ ತಾಯಿಯ ಸಂತೋಷವೆಷ್ಟು, ತನ್ನ ಸಂತೋಷವೆಷ್ಟು? ಅವಳ ನೋವು ಒಂದು ಬಗೆಯದಾದರೆ, ತನ್ನ ನೋವು ಎಂಥದು? ಇವುಗಳು ಪಟ್ಟಿ ಮಾಡಲು ಸಿಗುತ್ತವೆಯೇ? ಅಲ್ಲಿದ್ದ ಹೆಂಗಸರು ಕೈಯಿಂದ ಕೈಗೆ ಮಗುವನ್ನು ಬದಲಾಯಿಸುತ್ತ, ʻʻಬಹುತ್ ನಸೀಬ್ ಕ ಬಚ್ಚಾʼʼ, ʻʻಕ್ಯಾ ಕಹೆನಾ ಬೋಲ್ ನಹಿ ಸಕ್ತಾʼʼ ಎಂದು ಸಂತೋಷ ವ್ಯಕ್ತಪಡಿಸುತ್ತ ಅದರ ಕಡೆಗೊಮ್ಮೆ ಮತ್ತು ಧರಣಿಯ ಕಡೆಗೊಮ್ಮೆ ನೋಡಿ ತಲೆಯಾಡಿಸಿ ನಕ್ಕರು. ಉಳಿದವರೆಲ್ಲರೂ ಪರಸ್ಪರ ಮೆಲುವಾಗಿ ಭುಜ ತಟ್ಟಿದರು.
ಅಲ್ಲಿಗೆ ಬಂದಿದ್ದವರು ಗಂಡಸರು ಹೆಂಗಸರೆನ್ನದೆ ನಾಮುಂದು ತಾಮುಂದು ಎನ್ನುವ ಭರಾಟೆಯಲ್ಲಿ ಧರಣಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡಲು ಮೊದಲಾದರು. ʻಅರೆ! ಏ ಕ್ಯಾ ಕರ್ ರಹೇ ಹೋʼʼ ಎಂದು ಮತ್ತೆ ಮತ್ತೆ ಹೇಳುತ್ತ ನರಸಿಂಹ ಅವರನ್ನು ತಡೆಯಲು ನೋಡಿದ. ಅದರೆ ಅವನ ಮಾತನ್ನು ಯಾರೂ ಕೇಳಿಸಿಕೊಳ್ಳಲೇ ಇಲ್ಲ. ಅವಳಾದರೋ ಸಂಕೋಚದ ಮುದ್ದೆಯಾಗಿದ್ದಳು. ತಮ್ಮ ಕೆಲಸ ಪೂರೈಸಿದ ನಂತರ ಬಂದವರು ಗುಂಪುಗಳಲ್ಲಿ ಸೇರಿ ಮುಂದೇನು ಎಂದು ಮಾತನಾಡಿಕೊಳ್ಳುತ್ತಿದ್ದರು. ರಸ್ತೆ ಹಾಗೂ ಸುತ್ತಮುತ್ತ ಇನ್ನಿತರ ಸದ್ದು ಗದ್ದಲ ಶುರುವಾದವು. ಇವೆಲ್ಲದರ ನಡುವೆ ಧರಣಿ ಕ್ರಮೇಣ ಏಕಾಂತಕ್ಕೆ ಹೋದಳು. ಅವಳಲ್ಲಿ ಇಷ್ಟು ದಿನ ತಾನು ನಡೆದು ಬಂದ ದಾರಿ, ತನ್ನ ಅನುಭವಗಳು, ತನ್ನ ನಿರೀಕ್ಷೆ, ಆಲೋಚನೆಗಳು, ಎಲ್ಲದರ ದೃಶ್ಯದ ತುಣುಕುಗಳು ಸಾಲು ಹಿಡಿದು ಸಾಗಿದವು. ಸದ್ಯದ ಸಮಸ್ಯೆಯ ಪರಿಸ್ಥಿತಿಗೆ ಬಂದಾಗ ಅವಳಿಗೆ ನೋಡುವುದಕ್ಕೇ ಭಯವಾಗುವಂತೆ ಅಷ್ಟೆತ್ತರದ ರಾಕ್ಷಸ ಕಂಡ. ಪ್ರಾರಂಭದಲ್ಲಿ ಕೆಲವು ಕ್ಷಣ ಅದರ ಮುಂದೆ ಅವಳು ಅಂಜಿ ಕುಳಿತ ಮೊಲದಂತಾದಳು. ಕ್ರಮೇಣ ಅವಳಿಗೆ ಇತ್ತೀಚಿನ ಆಲೋಚನೆ ಧೈರ್ಯವನ್ನು ತಂದುಕೊಟ್ಟಿತು. ಆ ಘಟ್ಟವೂ ದಾಟಿ ಮುಂದುವರಿದು ಇಂದಿನ ಅನುಭವಕ್ಕೆ ಬಂದಾಗ ನೋಡನೋಡುತ್ತಿದ್ದಂತೆ ರಾಕ್ಷಸ ಕುಗ್ಗಿದ. ಮತ್ತಷ್ಟು ಕುಗ್ಗಿದ. ಕೊನೆಯಲ್ಲಿ ಅವಳ ಕೈಯಲ್ಲಿ ಆಗಷ್ಟೇ ಕಣ್ತೆರೆದ ಮಗುವಾದ. ಹಸನ್ಮುಖಳಾಗಿ ಎದ್ದ ಅವಳು ಅದನ್ನೆತ್ತಿಕೊಂಡು ಹುಟ್ಟಿದ ಮಗುವಿನ ಹತ್ತಿರ ಹೋದಳು. ಅವಳು ಎತ್ತಿಕೊಂಡು ಬಂದದ್ದು ಮಗುವಿನೊಡನೆ ಬೆರೆಯಿತು. ಈಗ ಅವಳಿಗೆ ಎಲ್ಲ ನಿಚ್ಚಳವಾಗಿತ್ತು. ಎಲ್ಲದಕ್ಕೂ ಈಗ ಹೊಸತನದ ಛಾಯೆ. ಮತ್ತೆ ಹುಟ್ಟಿದ ಹುರುಪು. ಅವಳು ತನ್ನ ವೈಯಕ್ತಿಕ ಪರಿಸ್ಥಿತಿಯ ನಿರ್ಧಾರವನ್ನು ಹೇಳುವ ಸಂಕಲ್ಪ ಮಾಡಿದಳು. ಅದಕ್ಕಾಗಿ ತಡಮಾಡದೆ ನಾರಾಯಣನಿಗೆ ಫೋನ್ ಮಾಡಲು ಮೊಬೈಲ್ ಎತ್ತಿಕೊಂಡಳು
*************
ಚಿತ್ರಕಲೆ : ಕಂದನ್ ಜಿ
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ.
ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ಕಾಡಿನಲ್ಲಿ (ಮಕ್ಕಳ ನಾಟಕ : ಬಾಲಭವನ ಪ್ರಶಸ್ತಿ), ಗಾಡೋ (ನೊಬೆಲ್ ಪ್ರಶಸ್ತಿ ವಿಜೇತ ಸ್ಯಾಮುಯಲ್ ಬೆಕೆಟ್‌ನ 'ವೇಟಿಂಗ್ ಫಾರ್ ಗಾಡೋ), ಬೆಕೆಟ್ (ಜಾ ಆನ್ವಿಯ 'ಬೆಕೆಟ್ ಮುಂತಾದ ನಾಟಕಗಳ ಅನುವಾದ). ಚಿತ್ರ-ಕಥೆ, ಚಿತ್ರಪ್ರಪಂಚ (ಅಂತರರಾಷ್ಟ್ರೀಯ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳು) ಹಾಗೂ ಚಿತ್ರಕಥೆಯ ಸ್ವರೂಪ(ಚಿತ್ರಕಥೆ ಬರೆಯಲು ಮಾರ್ಗದರ್ಶಿ), ಸಂಬಂಧಗಳು (ದೂರದರ್ಶನ ಧಾರಾವಾಹಿ), ಅಪ್ಪ-ಮಗ(ಟೆಲಿ-ಫಿಲ್ಮ್ ಮತ್ತು ಹಾರು ಹಕ್ಕಿಯನೇರಿ (ಚಲನಚಿತ್ರ ನಿರ್ದೇಶನ) ಮತ್ತು 6ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಏಷಿಯನ್ ಫಿಲ್ಮ್ ಪ್ರಶಸ್ತಿ ತೀರ್ಪುಗಾರ ಮಂಡಲಿಯ ಸದಸ್ಯರು.
More About Author