2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ದೆಯ ತೃತೀಯ ಬಹುಮಾನ ವಿಜೇತ ಸಂದೀಪ ನಾಯಕ ಅವರ ‘ಚಂದ್ರಶಾಲೆಯಲ್ಲಿ ನಿಂತ ತೇರು’ ಕತೆ ನಿಮ್ಮ ಓದಿಗಾಗಿ..
ಬೆಂಗಳೂರಿನ ಜನಸಂದಣಿಯನ್ನು ಹತ್ತು ಹನ್ನೆರಡು ವರ್ಷಗಳ ಕೆಳಗೆ ಹೊಕ್ಕ ಪರೀಕ್ಷಿತ ಅಲ್ಲಿನ ಗಜಿಬಿಜಿಯನ್ನು ತಪ್ಪಿಸಿಕೊಂಡು ಊರ ಕಡೆಗೆ ಆಗೀಗ ಹಾಯುತ್ತಾನೆ. ಹಾಗೆ ಹೋದಾಗ ಅವಕಾಶ ಇದ್ದರೆ ಉಷಾ ಚಿಕ್ಕಮ್ಮಳನ್ನು ಭೇಟಿ ಮಾಡಿ, ಅಡುಗೆಮನೆಯಲ್ಲಿ ಕೂತು ಒಂದೆರಡು ಪಟ್ಟಾಂಗ ಹೊಡೆದು ಬರುವುದುಂಟು. ಇದನ್ನು ಬಿಟ್ಟರೆ ಅವಳ ನೇರ ಸಂಪರ್ಕ ಅವನಿಗೆ ಅಪರೂಪವಾಗುತ್ತ ಹೋಗಿತ್ತು. ಮೊನ್ನೆ ದೊಡ್ಡಪ್ಪನ ಮಗಳು ದೇವಯಾನಿಯ ಮೆಸೇಜ್ ನೋಡಿದಾಗಲೇ ಚಿಕ್ಕಮ್ಮನ ಗಂಡ ಎದುರಾಜ ಸತ್ತಿದ್ದು ಗೊತ್ತಾಗಿದ್ದು. ಕೆಳಗೆ ಸರಿದುಹೋಗಿದ್ದ ಮೆಸೇಜು ಎರಡು ದಿನಗಳ ಬಳಿಕ ಕಣ್ಣಿಗೆ ಬಿದ್ದಿತ್ತು. ವಾಟರ್ ಫಿಲ್ಟರ್‌ಗಳನ್ನು ತಯಾರು ಮಾಡುವ ತನ್ನ ಕಂಪನಿಯ ಮೀಟಿಂಗುಗಳಲ್ಲಿ ಅವನು ವಾರದಿಂದ ಮುಳುಗಿ ಹೋಗಿದ್ದ. ಕೆಲವು ಶಹರಗಳಲ್ಲಿ ಅವುಗಳ ಮಾರಾಟ ಸುಧಾರಣೆಯಾಗದ ಕಾರಣ ಆ ಮೀಟಿಂಗುಗಳು ಬೆಳಗ್ಗಿನಿಂದ ಸಂಜೆಯ ತನಕ ಎಳೆಯುತ್ತಿದ್ದವು. ಮೆಸೇಜ್‌ಗಳನ್ನು, ಮಿಸ್‌ಕಾಲ್‌ಗಳನ್ನು ನೋಡಲೂ ಅವನಿಗೆ ಸವುಡು ಸಿಕ್ಕಿರಲಿಲ್ಲ. ರಾತ್ರಿ ಹನ್ನೊಂದರ ಸುಮಾರಿಗೆ ‘ಎದುರಾಜ ಚಿಕ್ಕಪ್ಪ ಬೆಳಗ್ಗೆ ಹೋದ. ಅವನ ಕ್ರಿಯಾಕರ್ಮ ಸಂಜೆ ಮುಗಿಯಿತು’ ಎಂಬ ಎರಡು ಸಾಲಿನ ಸಂದೇಶವನ್ನು ದೇವಯಾನಿ ಕಳಿಸಿದ್ದಳು. ಪರೀಕ್ಷಿತನಿಗೆ ಊರಿನ ಯಾವುದಾದರೂ ಸುದ್ದಿಯನ್ನು ತಕ್ಷಣಕ್ಕೆ ಹೇಳುವವಳು, ಅದನ್ನು ವಿಸ್ತರಣೆ ಮಾಡಿ ಅದಕ್ಕೆ ತನ್ನ ಟಿಪ್ಪಣಿಯನ್ನು ಕೊಡುವವಳು ಅವಳೇ ಆಗಿದ್ದಳು. ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಮಗನೊಂದಿಗೆ ಅಪ್ಪನ ಮನೆ ಸೇರಿದ್ದ ಅವಳು ಊರಿನ ಸುದ್ದಿಗಳನ್ನು ಮುಟ್ಟಿಸದ ದಿನವೇ ಇರುತ್ತಿರಲಿಲ್ಲ. ಅದರಲ್ಲಿ ಆಕಳು ಕರುಹಾಕಿದ್ದು, ಅಮ್ಮನ ಮಂಡಿ ನೋವು, ಕಾಲೇಜಿಗೆ ಹೋಗುವ ವೆಂಕಮ್ಮನ ಮಗಳು ನಾಪತ್ತೆಯಾದದ್ದು, ಅಂಗಳದ ಮಾವಿನ ಮರ ಹೂ ಬಿಟ್ಟಿದ್ದು ಕೂಡ ಸೇರಿರುತ್ತಿತ್ತು. ಪರೀಕ್ಷಿತನ ಹೆಂಡತಿ ಸುಲಭಾಗೆ ಎದುರಾಜನ ಸಾವಿನ ಸಂಗತಿ ಬೇರೆ ಯಾರೋ ಹೇಳಿ ಗೊತ್ತಾಗಿತ್ತಾದರೂ ಅದನ್ನು ಗಂಡನಿಗೆ ಹೇಳಲು ಮರೆತಿದ್ದಳು. ತಡವಾಗಿ ವಿಷಯ ಗೊತ್ತಾಯಿತಲ್ಲ ಎಂದು ಪೇಚಾಡುತ್ತಲೇ, ಫೋನ್ ಬಳಸದ ಉಷಾ ಚಿಕ್ಕಮ್ಮನಿಗೆ ದೇವಯಾನಿಯ ಮೂಲಕ ಅವನು ಸಮಾಧಾನ ಹೇಳಬೇಕಾಗಿ ಬಂದಿತ್ತು.
ಪರೀಕ್ಷಿತನಿಗೆ ಎದುರಾಜ ದಾಯಾದಿ ಸಂಬಂಧಿಕ. ಅವನ ಸಂಬಂಧದಿಂದಾಗಿ ಪರೀಕ್ಷಿತ–ದೇವಯಾನಿಯರಿಗೆ ಅವನ ಹೆಂಡತಿ ಉಷಾ ಚಿಕ್ಕಮ್ಮನಾಗಿದ್ದಳು. ಪರೀಕ್ಷಿತನ ಮನೆಗೆ ಸನಿಹದಲ್ಲೇ ಅವರ ಮನೆಯೂ ಇತ್ತು. ಮನೆ ಮುಂದಿನ ದೂಳು ರಸ್ತೆ ಕೊನೆಯಾಗುವಲ್ಲಿ ಹುಲಿದೇವರ ಗುಡಿ, ಅರಳಿಕಟ್ಟೆ ಇತ್ತು. ಅದರ ಸನಿಹದಲ್ಲೇ ಎದುರಾಜ ಚಿಕ್ಕಪ್ಪನ ಮನೆ. ಅದಕ್ಕೂ ಮುಂದೆ, ಎರಡು ಮನೆಗಳನ್ನು ದಾಟಿದರೆ ದೇವಯಾನಿಯ ಮನೆ ಸಿಗುತ್ತಿತ್ತು. ಹಾಗೆ ನೋಡಿದರೆ, ಊರನ್ನು ಒಂದು ಸಾರಿ ಸುತ್ತಿಸುಳಿದರೆ ಅವನ ದಾಯಾದಿ ಸಂಬಂಧಿಕರ ಮನೆಗಳು ಹತ್ತಾದರೂ ಸಿಗುತ್ತಿದ್ದವು. ಬೆಂಗಳೂರಿನ ಪೀಣ್ಯದಲ್ಲಿರುವ ನೀರಿನ ಪಂಪ್‌ಸೆಟ್‌ಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದ ಎದುರಾಜ. ಅವನು ನೌಕರಿಗೆ ಸೇರಿದ ಕೆಲವು ವರ್ಷಗಳಲ್ಲಿ ನಿರ್ದೇಶಕನೊಬ್ಬನ ದೋಖಾದಿಂದಾಗಿ ಕಂಪನಿ ದಿವಾಳಿಯಾಗಿತ್ತು. ಕಂಪನಿ ಬಾಗಿಲು ಮುಚ್ಚಿದ್ದರಿಂದ ಎದುರಾಜ ಒಂದಷ್ಟು ದುಡ್ಡು ಹಿಡಿದುಕೊಂಡು ಊರಿಗೆ ಮರಳಿದ್ದ. ಅವನಿಗೆ ಮನೆ, ಗದ್ದೆ, ಮಾವಿನ ತೋಟವಿತ್ತು. ಅವನು ನಿತ್ಯದ ಬದುಕಿಗೆ ಚಿಂತೆ ಮಾಡುವ ಅವಶ್ಯಕತೆ ಇರಲಿಲ್ಲ. ಆದರೂ ಊರಿಗೆ ಬಂದ ಬಳಿಕ ಸುಮ್ಮನೆ ಕೂತುಕೊಳ್ಳಲು ಆಗುವುದಿಲ್ಲ ಎಂದು ತನಗೆ ಗೊತ್ತಿರುವ ಪಂಪ್‌ಸೆಟ್ ಮತ್ತು ನೀರಿನ ಟ್ಯಾಂಕುಗಳನ್ನು ಮಾರುವ ಅಂಗಡಿಯನ್ನು ಹೆದ್ದಾರಿಯ ಬದಿಗೆ ಇದ್ದ ತನ್ನ ಜಾಗೆಯಲ್ಲಿ ತೆರೆದಿದ್ದ. ಅದನ್ನು ಒಂದೆರಡು ವರ್ಷ ನಡೆಸಿ, ವ್ಯಾಪಾರ ಕುದುರದಿದ್ದುದರಿಂದ ಮುಚ್ಚಬೇಕಾಗಿ ಬಂದಿತ್ತು. ಅಂಗಡಿಯನ್ನು ಮುಚ್ಚಿದ್ದು ಸಿಡಿಯುವ ಹರೆಯದ ಉಷಾ ಚಿಕ್ಕಮ್ಮನ ಸಲುವಾಗಿ ಎಂಬುದು ಪರೀಕ್ಷಿತನ ಈಗಿನ ಅಂದಾಜಾಗಿತ್ತು.
ಎದುರಾಜ ಚಿಕ್ಕಪ್ಪನಿಗಿಂತ ಉಷಾ ಚಿಕ್ಕಮ್ಮ ಅವನಿಗೆ ಹೆಚ್ಚು ಸನಿಹದವಳು. ಅವಳನ್ನು ಅವನ ಹೈಸ್ಕೂಲು, ಕಾಲೇಜು ಕಾಲದ ಗೆಳತಿ, ಮಾರ್ಗದರ್ಶಿ ಎನ್ನಬಹುದಾಗಿತ್ತು. ಆಗೀಗ ಅಮ್ಮನ ಕಣ್ಣು ತಪ್ಪಿಸಿ ಅವರ ಮನೆಗೆ ಎಲ್ಲರಿಗಿಂತ ಹೆಚ್ಚಾಗಿ ಹೋಗುತ್ತಿದ್ದವನು ಪರೀಕ್ಷಿತನೇ. ಎದುರಾಜ ಚಿಕ್ಕಪ್ಪ ಎದುರಿಗೆ ಸಿಕ್ಕರೆ, ‘‘ಏನೋ ರಾಜಕುಮಾರ, ಇವತ್ತು ಶಾಲೆಗೆ ಹೋಗಿಲ್ಲವೇನೊ? ಇಂಗ್ಲಿಷ್, ಗಣಿತ ವಿಷಯಗಳನ್ನು ಸರಿಯಾಗಿ ಕಲಿಯುತ್ತಿದ್ದೀಯಾ? ಪೇಟೆಯಲ್ಲಿ ನೀನು ದೋಸ್ತರ ಪಂಗಡ ಕಟ್ಟಿಕೊಂಡು ತುಂಡುಗುಪ್ಪು ಹೊಡೆಯುವುದು ನನಗೆ ಗೊತ್ತು. ನಾಟಕ, ಕ್ರಿಕೆಟ್ ಎಂದು ನೀನು ತಿರುಗಾಡುವುದು ಹೆಚ್ಚಾಗುತ್ತಿದೆ; ಅವನ್ನು ಕಡಿಮೆ ಮಾಡಿ ಕಲಿಯುವುದರ ಕಡೆ ಲಕ್ಷ್ಯ ಕೊಡು’’ ಎಂದು ಹೇಳುವಾಗ ಅವನ ಕಣ್ಣು ಇನ್ನು ಹೆಚ್ಚು ಕೆಂಪಗಾಗುತ್ತಿತ್ತು, ಮೂಗಿನ ಹೊಳ್ಳೆಗಳು ದೊಡ್ಡದಾಗುತ್ತಿದ್ದವು. ಹಾಗಾಗಿ, ಪರೀಕ್ಷಿತ ಚಿಕ್ಕಪ್ಪನ ನೆರಳ ಅಂಚು ತಾಕಿದರೂ ದೂರ ಸರಿಯುತ್ತಿದ್ದ.
ಗಂಡಹೆಂಡತಿಯ ನಡುವಿನ ಹಲವು ಬಿರುಕುಗಳಿಂದಾಗಿ ಯಾವುದೂ ಸರಿಯಿಲ್ಲ ಎನ್ನುವ ಭಾವನೆ ಪರೀಕ್ಷಿತನಿಗೆ ಚಿಕ್ಕಮ್ಮನನ್ನು ಕಾಣಲು ಹೋದಾಗ ಬಂದುಹೋಗುತ್ತಿತ್ತು. ಕುತ್ತಿಗೆ ಬಿಗಿದು ಕಟ್ಟಿದ ತುಂಬಿದ ಭತ್ತ ಚೀಲದ ಬಿಗಿತ ಅಲ್ಲಿದ್ದುದನ್ನು ಅವನು ಕಂಡಿದ್ದ. ಹೋದಷ್ಟೇ ಬೇಗ ಅಲ್ಲಿಂದ ಪಾರಾಗಿ ಬರಬೇಕೆಂದು ಅವನಿಗೆ ಅನಿಸುತ್ತಿತ್ತು. ಚಿಕ್ಕಮ್ಮನ ತಿಳಿಗಾಳಿ ಸುಳಿದಂತಹ ಮಾತು, ಎಚ್ಚರ ತಪ್ಪುವಂತಹ ಚೆಂದ ಅವನನ್ನು ಗೋಡೆಗೆ ಹೊಡೆದ ಮೊಳೆಯಂತೆ ಅಲ್ಲಿ ನಿಲ್ಲಿಸುತ್ತಿದ್ದವು. ಕಪ್ಪು ಶಿಲೆಯಂತಿರುವ ಪ್ರಧಾನ ಬಾಗಿಲ ಮೇಲಿನ ಗಿಳಿ, ಬಳ್ಳಿ, ಹೂವಿನ ಕೆತ್ತನೆಯ ಹಾಗೆ ಅವಳು ತನ್ನ ಮನೆಯಲ್ಲಿ ಶಾಶ್ವತವಾಗಿದ್ದಳು. ಅವಳಿದ್ದಲ್ಲಿ ಉಜ್ವಲ ಪ್ರಭಾವಳಿ ಬೆಳಗಿರುತ್ತಿತ್ತು. ಅದರಲ್ಲಿ ತಾನಾಗಿಯೇ ಸಿಲುಕಿಕೊಂಡಿರುವ ಸುಖ ಪರೀಕ್ಷಿತನದು. ನೋಡದೆಯೂ ಅವಳ ಇರುವಿಕೆ, ಚಲನೆ ಅವನ ಅರಿವಿಗೆ ಬರುತ್ತಿತ್ತು. ಚೈತನ್ಯದ ಮಿಂಚನ್ನು, ಅದರ ಸುಳಿದಾಟವನ್ನು ಅವನು ಕಂಪಿಸುತ್ತ ನೋಡುತ್ತ ನಿಂತಿರುತ್ತಿದ್ದ. ಇದಲ್ಲದೇ, ನಾಗೊಂದಿಗೆಯ ಮೇಲೆ ಸಾಲಾಗಿ ಇಟ್ಟ ಪಾತ್ರೆಗಳು, ಭರಣಿಗಳು, ಕಿಟಕಿ–ಬಾಗಿಲುಗಳ ಶುಭ್ರ ಪರದೆಗಳು ಅವಳ ಇರುವನ್ನು ಸಾರುತ್ತಿದ್ದವು. ಮನೆಯಲ್ಲಿ ಅವಳದೇ ವಾತಾವರಣ, ಆವರಣ. ಹೊರಗೆ ಬಳ್ಳಿಯ ಮೇಲೆ ಹರಗಿದ ಕಮ್ಮಗಿನ ವಾಸನೆ ಹೊಮ್ಮುವ ಒಣ ಬಟ್ಟೆಗಳನ್ನು ಬಂದಾಗಲೆಲ್ಲ ತೆಗೆದುಕೊಡುತ್ತಿದ್ದ ಪರೀಕ್ಷಿತ, ಅವಳು ಹೇಳುವ ಬೇರೆ ಕೆಲಸ ಮಾಡಿಕೊಡಲು ಕಾಯುತ್ತಿದ್ದ.
ಎದುರಾಜ ಚಿಕ್ಕಪ್ಪ ಮನೆಯಲ್ಲಿದ್ದರೆ, ಗಂಡಹೆಂಡತಿಯ ನಡುವಿನ ಧುಮುಗುಡುವಿಕೆ, ಒಲೆಯ ಮೇಲೆ ಬೇಯುವ ಅನ್ನದ ರೀತಿಯ ಕುದಿತ ಅವನನ್ನು ಅಲ್ಲಿಂದ ಹೊರ ದೂಡುತ್ತಿದ್ದವು. ಅವರ ನಡುವಿನ ಮುಸುಕಿನ ಪರದೆಯಿಂದ ಹೊರಬರುವ ನಿಟ್ಟುಸಿರುಗಳು, ಒಂದೆರಡು ತುಂಡು ಪದಗಳ ಮಾತುಗಳು ಅವನಿಗೆ ಸಂದರ್ಭವನ್ನು ಸರಿಯಾಗಿಯೇ ವರದಿ ಮಾಡುತ್ತಿದ್ದವು. ಮದುವೆಯದಾಗಿನಿಂದಲೂ ಉಷಾಳ ಉಕ್ಕುವ ಚೆಂದಕ್ಕೆ ಎದುರಾಜ ಒಡ್ಡು ಕಟ್ಟಲು ಪ್ರಯತ್ನಿಸುತ್ತಲೇ ಬಂದಿದ್ದ. ಅವನು ಚುಚ್ಚಿದ ನಿಶಾನೆಗಳ ಅಡ್ಡ ಗಡಿಗಳು ಅವಳನ್ನು ಸುತ್ತುವರಿದಿದ್ದವು. ಯಾವ ಮೋಹಕ ಸೌಂದರ್ಯ ಅವನನ್ನು ಮರಳುಮಾಡಿ ಮದುವೆಯಾಗುವಂತೆ ಮಾಡಿತ್ತೋ, ಅದು ಅಷ್ಟೇ ಬೇಗ ಸುಸ್ತನ್ನೂ ಹುಟ್ಟಿಸಿತ್ತು. ನಿರಂತರ ದಾವರ ಹುಟ್ಟಿಸುವ ಆ ಉಪ್ಪುಗಾಳಿಯಿಂದ ಅವನು ತತ್ತರಿಸಿದ್ದ. ಉಷಾ ಚೆಂದಗಾತಿ ಮಾತ್ರವಲ್ಲ, ಹಲವು ಕುಶಲ ಕಲೆಗಳನ್ನು ಬಲ್ಲ ಜಾಣೆ. ಇಂತಹ ಹುಡುಗಿ, ಗಂಡನ ಅದನ್ನು ಮಾಡಬೇಡ, ಇದನ್ನು ಮಾಡು, ಹೀಗಿರು–ಹಾಗಿರು ಎಂಬ ಆಜ್ಞೆಗಳನ್ನು ಮೊದಲಿನಿಂದಲೂ ತುಟಿ ಒಡೆಯದೆ ಅನುಸರಿಸಿಕೊಂಡು ಬಂದಿದ್ದಳು ಎಂಬುದನ್ನು ಪರೀಕ್ಷಿತ ಅವರಿವರು ಹೇಳುವುದನ್ನು, ಸ್ವತಃ ಮನೆಯಲ್ಲಿ ಅಮ್ಮ ಹೇಳಿದ್ದನ್ನು ಕೇಳಿದವನು; ಅದನ್ನು ಆಗೀಗ ಕಂಡವನು. ಹಾಗಿದ್ದರೂ, ಎತ್ತರದ ಸಂಬಂಧ ಆಳು ಎದುರಾಜನಲ್ಲಿರಬಹುದಾದ ಒಂದೆರಡು ಜೀವಂತ ಸೆಲೆಗಳನ್ನು ಆಕೆ ಅವನತ್ತ ತಣ್ಣಗೆ ಎಸೆಯುವ ‘ಎಂದಿಗೂ ನೀನು ನನ್ನನ್ನು ಗೆಲ್ಲಲಾರೆ’ ಎಂಬ ಅವ್ಯಕ್ತ ಸಂದೇಶದಿಂದಲೇ ಒಣಗಿಸಬಲ್ಲ ಹೆಣ್ಣಾಗಿದ್ದಳು.
‘‘ಆ ಪುರಸಣ್ಣನ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಬೇಡವೋ. ನಿನ್ನ ಪಗಾರು ಮದುವೆಯಾದವಳ ಪೌಡರು, ಚಪ್ಪಲಿಗೂ ಸಾಕಾಗುವುದಿಲ್ಲ ಮಗನೆ’’ ಎಂದು ಶಾರದಕ್ಕ ಮದುವೆಯಾಗಲು ಹೊರಟಿರುವ ತನ್ನ ಏಕೈಕ ಸುಪುತ್ರ ಎದುರಾಜನಿಗೆ ಪರಿಪರಿಯಾಗಿ ವಿನಂತಿ ಮಾಡಿದ್ದಳು. ಆಗಾಗ ಮಗನಿಗೆ ಕೇಳುವಂತೆ ಅವಳ ‘ಪುರಸಣ್ಣನ ಮಕ್ಕಳ ವಿವಿಧ ವಿಲಾಸ’ದ ಆಲಾಪವಿರುವ ಹಿನ್ನೆಲೆ ಗಾಯನವೂ ಸಾಗಿತ್ತು. ಅವರು ಮಾಡಿಕೊಳ್ಳುವ ಹಲಬಗೆಯ ಶೃಂಗಾರಗಳು ಅವಳ ಆಲಾಪದ ಪಲ್ಲವಿ ಅನುಪಲ್ಲವಿಯಾಗಿದ್ದವು. ಹರೆಯದ ಉಕ್ಕಿನಲ್ಲಿದ್ದ, ದೊಡ್ಡ ಪಗಾರದ ಹಮ್ಮಿನಲ್ಲಿದ್ದ, ಪುರಸಣ್ಣನ ಮನೆಯ ಮದುವೆ ಪ್ರಸ್ತಾಪವೇ ತನಗೆ ಸಿಕ್ಕ ದೊಡ್ಡ ಕಿರೀಟ, ಬಿರುದು ಬಾವಲಿ ಎಂದು ತಿಳಿದಿದ್ದ ಮಗ, ತಾಯಿಯ ಅನುಭವದ ಅಮೃತವಾಕ್ಕುಗಳಿಗೆ ಹೊನ್ನಪ್ಪಣ್ಣನ ಅಂಗಡಿಯ ಹೊಗೆಸೊಪ್ಪಿನ ವಾಸನೆಯ ಚಹಕ್ಕಿರುವ ಬೆಲೆಯನ್ನೂ ಕೊಡಲಿಲ್ಲ. ಪಾಗಾರದ ಮೇಲೆ ನಿದ್ರೆ ಮಾಡುವ ಬೆಕ್ಕನ್ನು ಕೆಳಕ್ಕೆ ದೂಡಿ ಓಡಿಸಿದಷ್ಟೇ ಸುಲಭದಲ್ಲಿ ಅವನ್ನು ಬದಿಗೆ ಸರಿಸಿದ್ದ. ಪಿಯುಸಿ ಫೇಲ್ ಉಷೆಯ ಅಂದ ತನ್ನ ದೊಡ್ಡ ಪಗಾರದ ಕೆಲಸಕ್ಕೆ ಸರಿಸಮಾನವಾದದ್ದು ಎಂಬುದು ಅವನ ನಂಬಿಕೆ. ಬಬ್ರುವಾಡೆಯ ಪುರಸಣ್ಣನ ಎರಡನೆ ಕನ್ಯಾರತ್ನ, ಪಿಯುಸಿ ಪರೀಕ್ಷೆಯನ್ನು ಮೂರನೇ ಬಾರಿ ಕಟ್ಟಿರುವ ಉಷೆಯೊಂದಿಗೆ ಅವನ ಕಲ್ಯಾಣ ತಾಯಿಯ ಇಚ್ಛೆಗೆ ವಿರುದ್ಧವಾಗಿ ನೆರವೇರಿತ್ತು. ಮಗ ಇನ್ನೇನು ದಿವಾಳಿಯಾಗುವುದು ಶತಃಸಿದ್ಧ ಎಂದು ಖಚಿತವಾದ ತಾಯಿ, ತೊಡೂರಿನ ಅಣ್ಣನ ಮನೆಗೆ ಹೋಗಿ, ಅಲ್ಲಿ ತನ್ನ ದುಗುಡವನ್ನು ರಾಗವಾಗಿ ತೋಡಿಕೊಂಡು, ಅನ್ನ ನೀರು ಬಿಟ್ಟು ನಾಲ್ಕುದಿನ ಶೋಕಾಚರಣೆ ಮಾಡಿದ್ದಳು.
ಉಷೆಯ ಕುರಿತ ಶಾರದಕ್ಕನ ತಿಳಿವಳಿಕೆಯಲ್ಲಿ ಒಂದು ಗುಂಜಿಯಷ್ಟೂ ತಪ್ಪಿರಲಿಲ್ಲ. ಅವಳ ಮಾತುಗಳಿಗೆ ಅವಳೇ ಕಂಡ ಉಷೆಯ ತಾಯಿ ಹೇಮಾವತಕ್ಕನ ಷೋಕಿ ಅಡಿಪಾಯವಾಗಿತ್ತು. ಮಕ್ಕಳೂ ಅಮ್ಮನ ರೀತಿರಿವಾಜುಗಳನ್ನು ತಪ್ಪದೇ ಮುಂದುವರಿಸಿದ್ದಾರೆ ಎಂಬುದನ್ನು ಶಾರದಕ್ಕ ಕಂಡವರಿಂದ ಕೇಳಿ ತಿಳಿದಿದ್ದಳು. ಮನೆಯನ್ನು ಬಿಟ್ಟು ಹೊರಗೆಲ್ಲೂ ಹೋಗದ ಆಕೆಗೆ, ಹಕ್ಕಲದಲ್ಲಿ ಬೆಳೆದು ಕಡಿಮೆ ಬೆಲೆಗೆ ಮಾರುವ ಪಂಜರಗಡ್ಡೆ, ಹೀರೇಕಾಯಿ, ಹರಿವೆ ಸೊಪ್ಪುಗಳಿಂದಾಗಿ ಅಸಂಖ್ಯ ಅಭಿಮಾನಿಗಳಿದ್ದರು. ಈ ಅಭಿಮಾನಿಗಳು ಮತ್ತು ಅಪಾರ ಸಂಖ್ಯೆಯ ಗೆಳತಿಯರ ಮೂಲಕ ಸುತ್ತಲಿನ ಊರಿನ ಜನರ ಕುರಿತಂತೆ ಅಪಾರ ಲೋಕಜ್ಞಾನವನ್ನು ಸಂಪಾದಿಸಿದ್ದಳು. ಅದು ಮಗನ ಮದುವೆಯ ಸಮಯಕ್ಕೆ ಏನೇನೂ ಉಪಯೋಗಕ್ಕೆ ಬರಲಿಲ್ಲ. ಮದುವೆಯ ಬಳಿಕ ಊರಲ್ಲಿದ್ದರೆ ಪ್ರತಿಕ್ಷಣ ಅವ್ವನ ಕಿಟಿಕಿಟಿ ಮಾತುಗಳನ್ನು ಕೇಳಬೇಕಾಗುತ್ತದೆ ಎಂದು ಆದಷ್ಟು ಬೇಗ ಬೆಂಗಳೂರಿನ ಬಸ್ಸಿಗೆ ರಿಸರ್ವೇಶನ್ ಮಾಡಿಸಿದ್ದ.
ಊರಲ್ಲಿ ಕೇಳಿದ ತಾಯಿಯ ಅಮೃತವಾಕ್ಕುಗಳು ಎದುರಾಜನ ಕಣ್ಣುಗಳನ್ನು ದೂರದ ಬೆಂಗಳೂರಿನಲ್ಲಿ ತಡವಾಗಿಯಾದರೂ ತೆರೆಸದೇ ಇರಲಿಲ್ಲ. ಉಷೆಯ ಖರೀದಿಗಳು, ಅವಳ ಓಡಾಟ ಅವನು ಅಂದುಕೊಂಡದ್ದಕ್ಕಿಂತ ಹೆಚ್ಚಾಗಿಯೇ ಇದ್ದವು. ಇದನ್ನು ಹೀಗೆಯೇ ಬಿಟ್ಟರೆ ಆಗುವುದಿಲ್ಲ ಎಂದು ಅವನಿಗೆ ಬಹುಬೇಗ ಅನುಭವಕ್ಕೆ ಬರತೊಡಗಿತು. ಅವಳು ತನ್ನ ಸೌಂದರ್ಯವರ್ಧಕ ಕಾರ್ಯಗಳಿಗೆ ಮಾಡುವ ಖರ್ಚುಗಳ ಮೇಲೆ ಹಿಡಿತ ಮಾಡತೊಡಗಿದ. ‘‘ಮನೆಯಲ್ಲಿರುವ ನಿನಗೆ ಯಾಕೆ ಇಷ್ಟೆಲ್ಲ ಸೀರೆಗಳು? ನೀನು ಎಲ್ಲಿಗೂ ಹೋಗುವುದಿಲ್ಲ ಎಂದಮೇಲೆ ಅಷ್ಟೆಲ್ಲ ಬೇಕಾಗಿಲ್ಲ. ಸದ್ಯ ಎರಡು ನೈಟಿ, ನಾಲ್ಕು ಸೀರೆ ಸಾಕು. ಮುಖಕ್ಕೆ ಹಚ್ಚಿದ್ದು ಬೆವರಿನಲ್ಲಿ ಒರಸಿ ಹೋಗುತ್ತದೆ. ಅವಕ್ಕೆಲ್ಲ ದುಡ್ಡು ಖರ್ಚು ಮಾಡಬಾರದು’’ ಅನ್ನಲು ಶುರು ಮಾಡಿದನಂತೆ. ದೊಡ್ಡ ಪಗಾರದ ಗಂಡನ ಮನೆಯಲ್ಲಿ, ಅದೂ ಬೆಂಗಳೂರಿನಲ್ಲಿ ರುಬಾಬಿನ ಜೀವನ ನಡೆಸಬಹುದು ಎಂದು ಉಷಾ ಅಂದುಕೊಂಡ ಕನಸು ಎರಡೇ ತಿಂಗಳಲ್ಲಿ ಮಕ್ಕಳ ಕೈಯಲ್ಲಿನ ಬರ್ಫದ ತುಂಡಿನಂತೆ ಕರಗಿತ್ತು. ಪೌಡರು, ಲಿಪ್‌ಸ್ಟಿಕ್ಕು, ನೇಲ್ ಪಾಲಿಶ್ ಹೋಗಲಿ, ಒಳ್ಳೆಯ ಸೀರೆಗಳಿಗೂ ಅವಳು ಗಂಡನನ್ನು ಕೇಳಬೇಕಾಗಿ ಬಂದಿತ್ತು. ಅವನ್ನೂ ತೆಗೆಸಿಕೊಡದೆ ಎದುರಾಜ ಅತಿಗೆ ತೆಗೆದುಕೊಂಡು ಹೋದನೆಂದು ಊರಿನ ಹೆಂಗಸರು ತಮ್ಮ ಕಥಾಕಾಲಕ್ಷೇಪದಲ್ಲಿ ಆಗಾಗ ಅತಿಶಯದ ಬಣ್ಣನೆಗಳನ್ನು ಮಾಡುತ್ತಿದ್ದರು.
ಇವೆಲ್ಲವನ್ನು ಪರೀಕ್ಷಿತ ಕಂಡುಕೇಳಿ ತಿಳಿದವನಲ್ಲ. ಚೆಂದ ಮಾಡಿಕೊಳ್ಳುವ, ಮಾಡಿಕೊಂಡು ಪೇಟೆ, ಸಿನಿಮಾ, ಮದುವೆ, ನಾಟಕ, ಬಂಡಿಹಬ್ಬ ಎಂದು ಓಡಾಡುವ ಅವಳ ಮನೆಯಿಂದ ಬಂದ ರಿವಾಜನ್ನು ಬಿಡಿಸಬೇಕೆಂದೇ ಎದುರಾಜ ಹಾಗೆ ಮಾಡಿದ್ದ ಎನ್ನುವವರೂ ಊರಲ್ಲಿದ್ದರು. ಅವನ ನೌಕರಿ ಹೋದದ್ದರಿಂದ ಹೀಗಾಯಿತು ಎನ್ನುವವರ ಪಂಗಡವೂ ಬೇರೆ ಇತ್ತು. ಇದರೊಂದಿಗೆ ಅವರಿವರು ಹಾಗೆ ಹೀಗೆ ಅಂದದ್ದು ಅವನ ಮನಸ್ಸಿನಲ್ಲಿ ಸೇರಿತ್ತು. ಅದರಲ್ಲಿ ‘ಅವಳಿಗೆ ಒಂದಿಬ್ಬರು ಹುಡುಗರೊಂದಿಗೆ ದೋಸ್ತಿ ಇತ್ತು. ಯಾರೊಂದಿಗೋ ಓಡಿಹೋಗುವ ಪ್ರಯತ್ನದಲ್ಲಿದ್ದಳು. ಅದಕ್ಕಾಗಿ ಎದುರಾಜ ಆದಷ್ಟು ಬೇಗ ಊರಿಗೆ ತಿರುಗಿ ಬಂದ’ ಎಂಬಂತಹ ಸಡಿಲ ಮಾತುಗಳೂ ಅಲ್ಲಲ್ಲಿ ಇದ್ದವು. ಅವು ಚೆಂದದ ಹೆಣ್ಣುಮಕ್ಕಳನ್ನು ನೋಡಿ ಊರ ತುಂಬ ಪುಕ್ಕವಿಲ್ಲದೆ ಹಾರಾಡುವ ಮಾತುಗಳು ಎಂಬುದನ್ನು ಪರೀಕ್ಷಿತ ಬಲ್ಲ. ಇಷ್ಟು ವರ್ಷಗಳ ಬಳಿಕ ಇದೇ ಸರಿ ಎಂದು ಅವನಿಗೆ ಪ್ರಮಾಣಿಸಿ ಹೇಳುವವರು ಯಾರೂ ಇರಲಿಲ್ಲ. ‘‘ಸುರಪುರ ರಾಣಿಯನ್ನು ಮದುವೆಯಾಗಿ ಮಗ ಯಾವ ಸುಖವನ್ನೂ ಸುರಿದುಕೊಳ್ಳಲಿಲ್ಲ. ಅದನ್ನೇ ಕಾಣದಿದ್ದ ಮೇಲೆ ಹೆಂಡತಿ ಅನ್ನುವ ಹೆಣ್ಣು ಯಾಕೆ? ಸಂಸಾರ ಯಾಕೆ?’’ ಎಂದು ದಿನಕ್ಕೆರಡು ಸಲ ಪುತ್ರ ಸಂಸಾರ ರಾಗವನ್ನು ಅವರಿವರ ಮುಂದೆ ಪಾಡುತ್ತಿದ್ದ ಶಾರದಕ್ಕ, ಮಗ ಊರಿಗೆ ಬಂದು ನೆಲೆಯಾಗುವಷ್ಟರಲ್ಲಿ ತನ್ನ ಬಾಯಿಯನ್ನು ಶಾಶ್ವತವಾಗಿ ಮುಚ್ಚಿದ್ದಳು.
ಹೈಸ್ಕೂಲಿಗೆ ಹೋಗುವ ತನ್ನ ಬಳಿ ಯಾರಿಗೂ ಹೇಳಬೇಡ, ತೋರಿಸಬೇಡ ಎಂದು ದುಡ್ಡು ಕಿಸೆಯಲ್ಲಿ ಹಾಕಿ ಆಗಾಗ ಪೇಟೆಯಿಂದ ಪೌಡರು, ಕ್ಲಿಪ್ಪು, ಕಾಡಿಗೆ ಎಂದು ಹಲವು ವಸ್ತುಗಳನ್ನು ತರಿಸಿದ್ದು ಪರೀಕ್ಷಿತನ ನೆನಪಿನಲ್ಲಿತ್ತು. ಹಾಗೆ ತಂದುಕೊಟ್ಟಾಗ ಅವಳೊಂದು ಸಲ ತನ್ನ ಕೆನ್ನೆಯ ಮೇಲೆ ಒಂದು ಹಸಿ ಮುತ್ತು ಒತ್ತಿದ್ದನ್ನು, ಅದರ ರೋಮಾಂಚನ ಇದುವರೆಗೂ ಆರದೆ ಉಳಿದಿರುವುದನ್ನು ಪರೀಕ್ಷಿತ ಮರೆಯಲಾರ. ಸಮುದ್ರದ ಅಲೆಗಳಂತೆ ತಾಕುವ ಆ ಮುತ್ತಿನ ಉಗುರು ಬೆಚ್ಚಗಿನ ನವಿರು ಎದುರಾಜನಿಗೆ ಸಿಕ್ಕಿರಬಹುದೆ ಎಂಬುದಕ್ಕೆ ಉತ್ತರವಾಗಲಿ, ದಾಖಲೆಯಾಗಿ ಪರೀಕ್ಷಿತನಿಗೆ ಇಷ್ಟು ವರ್ಷಗಳಲ್ಲಿ ಯಾವತ್ತೂ ಸಿಕ್ಕಿರಲಿಲ್ಲ. ಅವಳು ಆಗಾಗ ಬೊಬ್ರುವಾಡೆಯಲ್ಲಿರುವ ತನ್ನ ತಾಯಿಯ ಮನೆಗೆ ಅವನನ್ನು ಕಳುಹಿಸುತ್ತಿದ್ದಳು. ಅಲ್ಲೇ ಪರೀಕ್ಷಿತನ ಹೈಸ್ಕೂಲು ಇದ್ದುದರಿಂದ ಅವನಿಗೆ ಅಲ್ಲಿಗೆ ಹೋಗಿಬರುವುದು ತ್ರಾಸಿನ ಮಾತಾಗಿರಲಿಲ್ಲ. ಅವನು ಉಮೇದಿಯಿಂದ ಸೈಕಲ್ಲು ತುಳಿದುಕೊಂಡು ಅಲ್ಲಿಗೆ ಹೋಗುವುದಕ್ಕೆ ಇನ್ನೊಂದು ಕಾರಣವಿತ್ತು. ಅಲ್ಲಿ ಕಣ್ಣಲ್ಲೇ ನಗು ಚಿಮ್ಮಿಸುವ ಉಷಾಳ ಅಕ್ಕನ ಮಗಳು ಬಬಿತಾ ಸಿಗುತ್ತಿದ್ದಳು. ಬಿರಿದ ಅಡಿಕೆಗೊನೆಯ ಸಿಂಗಾರದಂತಿರುವ ಅವಳ ಯೌವ್ವನದ ಘಮ ಅವನನ್ನು ನಾಲ್ಕಾರು ದಿನಗಳ ಕಾಲ ಒಂದು ನಮೂನೆಯ ಗುಂಗಿನಲ್ಲಿ ತೇಲಾಡಿಸುತ್ತಿತ್ತು. ಉಷಾಳ ಅಕ್ಕ ಲಲಿತಾ ಕೊಟ್ಟ ಪೆಟ್ಟಿಕೋಟು, ಲಂಗ, ದುಡ್ಡು, ಕಾದಂಬರಿ, ಪತ್ರಿಕೆ, ಹೇರ್‌ಬ್ಯಾಂಡ್, ಶಿಂಗಾರ್ ಕುಂಕುಮಗಳನ್ನು ಪುಸ್ತಕಗಳ ಚೀಲದಲ್ಲಿ ಹಾಕಿಕೊಂಡು ಅಲ್ಲಿಂದ ಮರಳುತ್ತಿದ್ದ. ಎದುರಾಜ ಚಿಕ್ಕಪ್ಪ ಇಲ್ಲದ ಹೊತ್ತನ್ನು ನೋಡಿ ಅವನ್ನು ಚಿಕ್ಕಮ್ಮನ ಕೈಗೆ ದಾಟಿಸಿದಾಗಲೇ ಅವನಿಗೆ ಸಮಾಧಾನ. ಹಾಗೆ ಒಂದು ಸಾರಿ ಕೊಟ್ಟು, ‘‘ಚಿಕ್ಕಿ, ಮತ್ತೆ ಏನಾದರೂ ತರುವುದಿದ್ದರೆ ಹೇಳು, ಹೋಗಿ ಬರುತ್ತೇನೆ” ಎಂದು ಅಂದಿದ್ದ. ಅವನ ಗುಟ್ಟನ್ನು ಜಪ್ತಿ ಮಾಡಿದವಳಂತೆ, ‘‘ಓಹೋ, ನೀನು ನನ್ನ ಸಲುವಾಗಿ ಅಲ್ಲಿಗೆ ಹೋಗುವುದಲ್ಲ. ನಿನ್ನನ್ನು ಹಗ್ಗ ಹಾಕಿ ಎಳೆಯುತ್ತಿರುವುದು ಏನೋ ಇದೆ ಅಲ್ಲಿ; ಅದೇನೆಂದು ಈ ಚಿಕ್ಕಮ್ಮನೂ ತಿಳಿದುಕೊಳ್ಳಬೇಕಲ್ಲ?” ಎಂದು ಒಡೆದ ತೆಂಗಿನ ಕಾಯಿಯ ಕಡಿಗಳನ್ನು ಕೈಯಲ್ಲಿ ಹಿಡಿದು, ಮೆಟ್ಟುಗತ್ತಿಯ ಎರಡೂ ಕಡೆ ಕಾಲುಚಾಚಿ, ಸೀರೆಯನ್ನು ಮಂಡಿಯ ವರೆಗೆ ಮೇಲಕ್ಕೆ ಎಳೆದು ಕೂತ ಅವಳು ದೊಡ್ಡದಾಗಿ ನಗುತ್ತಿದ್ದಳು. ಗುಗ್ಗು ಹಲ್ಲೊಂದು ಮೊದಲಿಗೇ ಹೊಳೆಯುವ ಅವಳ ಅಗಲ ನಗೆಗೆ ತೆಂಗಿನ ಕಡಿಯ ಬಿಳುಪು, ಕಾಯಿ ನೀರಿನ ತಂಪಿರುತ್ತಿತ್ತು.
‘‘ಹೇ, ಅಂಥದ್ದೇನೂ ಇಲ್ಲ ಚಿಕ್ಕಿ, ನೀನು ಏನೇನೊ ಕಲ್ಪನೆ ಮಾಡಿಕೊಂಡು ಮಸ್ಕರಿ ಮಾಡುತ್ತೀ...’’ ಎಂದು ಅಲ್ಲಿಂದ ಓಡಿದ ಪರೀಕ್ಷಿತ ಬಂದು ನಿಂತಿದ್ದು ಮನೆಯ ದಣಪೆ ಬಂದಾಗಲೇ.
‘‘ನಿಮ್ಮ ಚಿಕ್ಕಪ್ಪ ಎಂಥದಕ್ಕೂ ಉಪಯೋಗ ಇಲ್ಲ ನೋಡು. ಅವಶ್ಯಕತೆ ಇದ್ದಾಗ ಮಾಡಬೇಕಾದದ್ದನ್ನು ಮಾಡುವುದಿಲ್ಲ. ತಾನು ಮಾತ್ರ ಬೇಡದ್ದನ್ನು ಮಾಡಿಕೊಂಡು ಓಡಾಡುತ್ತಾನೆ. ನಾನು ಮದುಮಗಳಿಗೆ ಅಲಂಕಾರ ಮಾಡಿ, ಮದುವೆಗೆ ತಯಾರು ಮಾಡುವ ಕೆಲಸ ಮಾಡುತ್ತೇನೆ ಎಂದರೆ ಅದಕ್ಕೂ ಕೊಕ್ಕೆ ಹಾಕಿದ್ದಾನೆ. ಅನಂತಪ್ಪನ ಮಗಳು ಪ್ರತಿಮಾ ಇದ್ದಾಳಲ್ಲ, ಅವಳನ್ನು ಮದುವೆಗೆ ತಯಾರಿ ಮಾಡುತ್ತೇನೆ ಎಂದು ಮೊನ್ನೆ ಅಂದುದಕ್ಕೆ ಬೇಡ ಅಂದ’’ ಎಂದು ಒಂದು ಸಾರಿ ಮನೆಗೆ ಹೋದಾಗ ಚಿಕ್ಕಮ್ಮ ತಕರಾರಿನ ದನಿಯಲ್ಲಿ ಪರೀಕ್ಷಿತನಿಗೆ ಹೇಳಿದ್ದಳು. ಹುರಿಯಕ್ಕಿ ಉಂಡೆ, ಶೇವುಬೀಜವನ್ನು ಗೋಲ ನೀಲಿ ಪಟ್ಟಿಗಳಿರುವ ಸಣ್ಣ ಬಸಿಯಲ್ಲಿ ಹಾಕಿಕೊಟ್ಟು, ‘‘ನೀನು ಹೆಂಡತಿಗೆ ಹಾಗೆಲ್ಲ ತ್ರಾಸು ಕೊಡಬೇಡ. ಅವಳನ್ನು ಚೆಂದಾಗಿ ನೋಡಿಕೊಳ್ಳಬೇಕು ಗೊತ್ತಾಯ್ತೆ? ನಾನು ಹೇಳಿದ್ದು ನಿನ್ನ ಕಿವಿಯೊಳಗೆ ಹೋಯ್ತೋ ಹೇಗೆ? ಈ ಗಂಡಸರಿಗೆ ಹೆಂಗಸರು ಜೀವನ ಪೂರ್ತಿ ಹೇಳುತ್ತಲೇ ಇರಬೇಕಾಗುತ್ತದೆ. ಅವರು ಅಷ್ಟು ಮಳ್ಳರೂ, ದಡ್ಡರೂ, ಕೆಪ್ಪರೂ ಆಗಿರುತ್ತಾರೆ. ಜವಾಬ್ದಾರಿಯನ್ನಂತೂ ಊಹ್ಞೂಂ, ಕೇಳಲೇ ಬೇಡ’’ ಎನ್ನುತ್ತಿದ್ದಳು. ಚಿಕ್ಕಪ್ಪ ಏನು ಮಾಡಬೇಕಿತ್ತು, ಏನು ಮಾಡಬಾರದಾಗಿತ್ತು ಎಂಬ ವಿವರಗಳು ಸರಳುಗಳ ನಡುವೆ ಉದ್ದಕೆ ಸೀಳಿದಂತೆ ಅಡ್ಡ ಬೆಳಕು ಹಾಯುವ ಕಿಟಕಿಗೆ ಆತು ಕೂತಿದ್ದ ಪರೀಕ್ಷಿತನಿಗೆ ಆಗ ಸ್ಪಷ್ಟವಾಗಿರಲಿಲ್ಲ. ಗಂಡನಾದವನು ಹೆಂಡತಿಯರ ಮುಂದೆ ಹೇಗೆ ವರ್ತಿಸಿದರೆ ಸರಿಹೋಗುತ್ತದೆ, ಯಾವ ಹೊತ್ತಿಗೆ ಎಂತಹ ಸುಳ್ಳು ಪೋಣಿಸಬೇಕು ಎಂಬ ಅಂದಾಜು ಈಗ ಅವನಿಗಿತ್ತು. ಚಿಕ್ಕಪ್ಪ ಊರಲ್ಲಿ ಇಲ್ಲ ಎಂದಾದರೆ ಉಷಾ ಚಿಕ್ಕಮ್ಮನ ನಡಿಗೆಯಲ್ಲಿ ಬಾರೀಕು ಒನೆದಾಟ, ಬಳುಕು ಇರುತ್ತಿತ್ತು, ಒಂದೆರಡು ಸಿನಿಮಾ ಹಾಡುಗಳು ತುಟಿಯನ್ನು ಅರಳಿಸುತ್ತಿದ್ದವು ಎಂಬುದನ್ನು ಪರೀಕ್ಷಿತ ಬಲ್ಲವನಾಗಿದ್ದ. ಆದರೂ ಚಿಕ್ಕಪ್ಪನ ಅವ್ಯಕ್ತ ಹಾಜರಿ ಅವಳ ಚಲನೆಯನ್ನು ನಿರ್ದೇಶಿಸುತ್ತಿತ್ತು. ಹಾಗಾಗಿದ್ದರೂ ಕಣ್ಣಿಗೆ ಹೌದೋ ಅಲ್ಲವೋ ಎನ್ನುವಷ್ಟಿರುವ ತೆಳುವಾದ ಕಾಡಿಗೆ, ತಕ್ಷಣಕ್ಕೆ ಒರೆಸಬಹುದಾದಷ್ಟು ಕುಟಿಕ್ಯುರಾ ಪೌಡರು ಮುಖದ ಮೇಲೆ ಇಲ್ಲದೇ ಇರುತ್ತಿರಲಿಲ್ಲ. ಅವುಗಳ ಪರಿಮಳದ ಎಸಳನ್ನು ಪರೀಕ್ಷಿತ ಮೂಗಿನಲ್ಲಿ ಮುಡಿದುಕೊಂಡು ಮನೆಗೆ ಮರಳುತ್ತಿದ್ದ. ಬಣ್ಣ ಬಳಿದೇ ತಯಾರಾದ ಗೊಂಬೆಯಂತಿರುವ ಈ ಚಿಕ್ಕಿ ತನ್ನ ಚೆಂದಕ್ಕೆ ಮತ್ತೆ ರಂಗು ತುಂಬಬೇಕೆ ಎಂದು ಆಗ ಅವನು ಕೇಳಿಕೊಳ್ಳುವುದಿತ್ತು.
ಮನೆಯ ಕೆಲಸಗಳನ್ನು ಚಿಕ್ಕಮ್ಮ ಬೆಳಗ್ಗೆಯೇ ಮುಗಿಸಿರುತ್ತಿದ್ದಳು. ಬಾವಿಯಿಂದ ನೀರು ತಂದು ತುಂಬುವುದು, ಅಬ್ಬಲಿಗೆ ಓಳಿಗೆ, ಕೋಲುಸಂಪಿಗೆ ಗಿಡಗಳಿಗೆ ನೀರು ಹಾಕುವುದೂ ಆಗಲೇ. ಎರಡು ಓಣಿ ದಾಟಿದರೆ ಸಿಗುವ ಕಾಂತಣ್ಣನ ಬಾವಿಯಿಂದ ನೀರು ತರಬೇಕಾದ್ದರಿಂದ ಬೇಗಬೇಗ ಅಲ್ಲಿಂದ ನೀರು ತಂದು ಹಂಡೆಗೆ ತುಂಬುತ್ತಿದ್ದಳು. ಅಲ್ಲಿಗೆ ನೀರು ಸೇದಲು ಬೇರೆ ಹೆಂಗಸರು ಗಂಡಸರು ಬರುವುದರಿಂದ ಯಾರೊಂದಿಗಾದರೂ ಮಾತಿಗೆ ನಿಲ್ಲುವುದು ಅಪರೂಪದಲ್ಲಿ ಅಪರೂಪವಾಗಿತ್ತು. ಗಂಡ ಹೇಳಿದನೆಂದೋ, ಅಥವಾ ಹೇಳಿದ್ದು ಒಂದಕ್ಕೆರಡಾಗುತ್ತದೆ ಎಂದೋ ಹೆಚ್ಚು ಜನರನ್ನು ದಣಪೆಯಿಂದ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಆಗಾಗ ಅಕ್ಕನ ಮನೆಗೆ ಬರುತ್ತಿದ್ದವನು ಹುಬ್ಬಳ್ಳಿಯಲ್ಲಿ ನೌಕರಿ ಮಾಡುತ್ತಿದ್ದ ಅವಳ ತಮ್ಮ ಸುಕೇಶ. ಬಂದವನು ಊಟಕ್ಕೂ ನಿಲ್ಲದೆ ಹೋಗುತ್ತಿದ್ದ. ಅವಳ ತಮ್ಮನ ಹಾಗೆ ತಾಯಿ, ಅಕ್ಕತಂಗಿಯರು, ಅವರ ಮಕ್ಕಳು ಅಜಿಬಾತ್ ಬರುತ್ತಿರಲಿಲ್ಲ. ಇದನ್ನು ಬಿಟ್ಟರೆ, ಪರೀಕ್ಷಿತನ ಸಂಬಂಧಿಕರಲ್ಲಿ ಬಹಳಷ್ಟು ಜನರು ಅವರ ಗುರುತಿನವರು. ಹಾಗಾಗಿ, ಯಾವುದಾದರೂ ಕಾರ್ಯದ ಹೇಳಿಕೆಗೆ ಅವರ ಮನೆಗೂ ಬಂದುಹೋಗುತ್ತಿದ್ದರು. ಆಗೆಲ್ಲ ಮನೆಯಲ್ಲಿದ್ದರೆ ಅವರನ್ನು ಮಾತನಾಡಿಸಿ ಕಳಿಸುವವನು, ಅವರಿಗೆ ಒಳಗಿನಿಂದ ಚಹ ತಂದುಕೊಡುವವನು ಚಿಕ್ಕಪ್ಪನೇ. ಅಂತಹ ವೇಳೆಯಲ್ಲಿ ಚಿಕ್ಕಮ್ಮ ಹೊರಗೆ ಪ್ರಕಟವಾಗುವುದು ಕಡಿಮೆ. ಆದರೆ, ಕಾರ್ತಿಕದಲ್ಲಿ ಅರಳೀಕಟ್ಟೆಯ ಮೇಲೆ ಬಂದು ಕೂರುವ ದೇವರ ಪಲ್ಲಕ್ಕಿಗಳಿಗೆ ಮಾತ್ರ ಅವಳು ವರ್ಷಕ್ಕೊಮ್ಮೆ ಕರ್ಪೂರದಾರತಿಯನ್ನು ತಪ್ಪದೇ ಕೊಡುತ್ತಿದ್ದಳು. ಊರಿನ ಸಮಸ್ತರಿಗೆ ಹಿಲಾಲುಗಳ ಹಳದಿ ಬೆಳಕಿನಲ್ಲಿ ಪ್ರಜ್ವಲಿಸುವ ಬಂಗಾರದ ಬಣ್ಣದ ದೇವಿಯ ದರ್ಶನ ಭಾಗ್ಯ ಆಗ ಸಿಗುತ್ತಿತ್ತು.
‘‘ಮೊನ್ನೆ ನೀನು ಸಿನಿಮಾಕ್ಕೆ ಹೋಗಿದ್ದೀಯಂತಲ್ಲ. ಹೆಂಗಿದೆಯೋ ಸಿನಿಮಾ? ಮೂಲೆಯಲ್ಲಿ ಕೂತಿರುವ ಈ ಚಿಕ್ಕಮ್ಮನಿಗೂ ಅದರ ಕತೆ ಹೇಳು’’ ಎಂದು ಆಗಾಗ ಹತ್ತಿರ ಕೂರಿಸಿಕೊಂಡು ಕೇಳುತ್ತಿದ್ದಳು. ತಾನು ದೊಸ್ತರೊಂದಿಗೆ ಸಿನಿಮಾಕ್ಕೆ ಹೋದದ್ದು ಇವಳಿಗೆ ಹೇಗೆ ಗೊತ್ತಾಗುತ್ತದೆ ಎಂಬುದು ಪರೀಕ್ಷಿತನಿಗೆ ತಿಳಿಯದೆ ಗೊಂದಲವಾಗುತ್ತಿತ್ತು. ‘‘ನೀನು ಕಾಲೇಜಿಗೆ ಹೋಗದೆ ಸಿನಿಮಾ ನೋಡಿದ್ದನ್ನು ನಾನು ಯಾರಿಗೂ ಹೇಳುವುದಿಲ್ಲ, ಹೇಳು’’ ಎಂದು ಸಿನಿಮಾ ಕತೆಯನ್ನು ಮೊದಲಿನಿಂದ ಕೊನೆಯ ತನಕ ಕೇಳಿಯೇ ಅವನನ್ನು ಕಳಿಸುತ್ತಿದ್ದಳು. ಮಾಧವಿ ಯಾವ ಬಣ್ಣದ ಸೀರೆ ಉಟ್ಟಿದ್ದಳು, ಗೀತಾ ಯಾವ ರೀತಿ ಕೂದಲು ಬಾಚಿದ್ದಳು, ಸುಧಾರಾಣಿಯ ಮೇಕಪ್ಪು ಹೇಗಿತ್ತು ಎಂಬುದನ್ನೆಲ್ಲ ಅವಳಿಗೆ ವಿಸ್ತಾರವಾಗಿ ಹೇಳಬೇಕಿತ್ತು. ಅವನಿಗೆ ಅವೆಲ್ಲ ನೆನಪಿಲ್ಲದೆ, ‘‘ನೋಡಿದ್ದೆ, ಗೊತ್ತಿಲ್ಲ’’ ಎನ್ನುತ್ತಿದ್ದ. ‘‘ನಿನಗೆ ಹೆಣ್ಣುಮಕ್ಕಳನ್ನು ನೋಡುವುದಕ್ಕೇ ಬರುವುದಿಲ್ಲ. ಬರೀ ಅವರ ಮುಖ, ತುಟಿ, ಸೊಂಟ ಎಂದು ನೋಡಬಾರದು. ಅವರು ಯಾವ ರೀತಿ ಸ್ಟೈಲ್ ಮಾಡಿದ್ದಾರೆ, ಯಾವ ಡ್ರೆಸ್ ಹಾಕಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ನಿಮಗೆ ಖುಷಿಯಾಗಲಿ ಎಂದೇ ಅವರು ಚೆಂದದ ಡ್ರೆಸ್ ಹಾಕಿಕೊಂಡು, ಮೇಕಪ್ ಮಾಡಿಕೊಂಡು ಕಲರ್ ಕಲರ್ ಆಗಿ ಬಂದಿರುತ್ತಾರೆ. ಆದರೆ ನಿಮಗೆ, ಒಳಗೆ ಹಾಲು ಉಕ್ಕುವ ಹೊಂತಕಾರಿ ಹುಡುಗರಿಗೆ ಕಾಣುವುದೇ ಬೇರೆ’’ ಎಂದು ಚುಡಾಯಿಸುತ್ತಿದ್ದಳು. ಹುಡುಗಿಯರನ್ನು ಹೇಗೆ ನೋಡಬೇಕು ಎನ್ನುವ ಮೊದಲ ಮಾರ್ಗದರ್ಶನ ಉಷಾ ಚಿಕ್ಕಮ್ಮನಿಂದ ಅವನಿಗೆ ಸಿಕ್ಕಿತ್ತು. ಮುಂದಿನ ಸಲ ಪರೀಕ್ಷಿತ ಸಿನಿಮಾ ನೋಡಲು ಹೋದಾಗ ನಾಯಕಿಯರ ಸೀರೆ, ರವಿಕೆ, ತುರುಬು, ಕಿವಿಯ ಓಲೆ ಇತ್ಯಾದಿಗಳ ಬಣ್ಣ, ವಿನ್ಯಾಸವನ್ನು ನೆನಪಿಟ್ಟುಕೊಳ್ಳುವುದನ್ನು ಕಲಿತ. ಚಿಕ್ಕಮ್ಮನಿಗೆ ಕತೆ ಹೇಳುವಾಗ ಅದರಲ್ಲಿ ಇರುವುದನ್ನು ಮರೆತರೂ ತನ್ನದೇ ವಿನ್ಯಾಸದ ಉಡುಪುಗಳನ್ನು ಅವಳ ಮುಂದೆ ಬಣ್ಣಿಸುತ್ತಿದ್ದ. ಹೇಗೂ ಅವಳು ಆ ಸಿನಿಮಾಕ್ಕೆ ಹೋಗುವುದಿಲ್ಲ ಎಂಬ ಖಾತ್ರಿ ಅವನಿಗಿತ್ತು. ಮದುವೆಗೆ ಮೊದಲು ತಾನು ಸಿನಿಮಾ ಟಾಕೀಸಿನೊಳಗೆ ಕಾಲಿಟ್ಟಿದ್ದು ಎಂದು ಅವಳೇ ಹೇಳಿದ್ದಳು. ಕತೆ ಹೇಳುವುದು ಅವನು ಹೋಗುವ, ಆದರೆ ಅವಳು ನೋಡದ ನಾಟಕ, ಯಕ್ಷಗಾನಗಳಿಗೂ ಲಾಗೂ ಆಗುತ್ತಿತ್ತು.
ಹೊರಗಿನ ತೆಣೆಯಲ್ಲಿ ಕೂತು, ಚಕ್ಕೆ ಹಾರಿದ ತುಳಸಿಮನೆಯ ಬಾಗಿಲ ಕದಕ್ಕೆ ಕನ್ನಡಿ ಸಿಕ್ಕಿಸಿ, ತಲೆ ಕೂದಲಿಗೆ, ಪೊದೆಯಂತಿರುವ ಗಡ್ಡ, ಪೊತ್ತೆ ಮೀಸೆಗೆ ಬಣ್ಣ ಹಚ್ಚಿಕೊಳ್ಳುತ್ತಿದ್ದ ಚಿಕ್ಕಪ್ಪನನ್ನು ನೋಡುತ್ತ ಮನೆಯೊಳಗೆ ಬಂದ ಪರೀಕ್ಷಿತ, ‘‘ಚಿಕ್ಕಪ್ಪ ಕೂದಲಿಗೆ ಬಣ್ಣ ಹಾಕುತ್ತಾನೆ. ನೀನೂ ಹಾಕಿಕೊಳ್ಳುವುದಿಲ್ಲವೆ?’’ ಎಂದು ಚಿಕ್ಕಮ್ಮನನ್ನು ಕೇಳಿದ್ದ. ಬಸಲೆಸೊಪ್ಪಿನ ಎಲೆಗಳನ್ನು ದಂಟಿನಿಂದ ಬಿಡಿಸುತ್ತಿದ್ದ ಅವಳು, ‘‘ಯಾರಿಗಾಗಿ ಹಾಕುವುದೋ ಮಾರಾಯ. ನಮ್ಮ ಜೀವನದಲ್ಲಿ ಮೊದಲು ಬಣ್ಣಗಳು ಇರಬೇಕು. ಕೂದಲಿನಲ್ಲಿ ಅಲ್ಲ’’ ಎಂದು ಧ್ವನಿಯನ್ನು ಕೇಳಬೇಕಾದವರಿಗೆ ಕೇಳಲಿ ಎಂದೇ ಏರಿಸಿದ್ದಳು. ಮಸೆದ ಕತ್ತಿಯನ್ನೇನೋ ಅವಳು ತಾಗಿದರೆ ತಾಗಲಿ ಎಂದು ಬೀಸಿದಂತಿತ್ತು. ಅದು ಅಡುಗೆಮನೆಯ ನಸುಕತ್ತಲನ್ನು ಹಾದು, ಎರಡು ಕೋಣೆಗಳನ್ನು ದಾಟಿ, ಸರಿಯಾದ ಜಾಗದಲ್ಲಿ ಕಚ್ಚಿಕೊಂಡಿತೇ ಇಲ್ಲವೇ ಎಂಬುದು ಗೊತ್ತಾಗಲಿಲ್ಲ. ಅವಳ ಕೂದಲು ಅಲ್ಲಲ್ಲಿ ಕಪ್ಪು ಕಸೂತಿಯ ವಸ್ತ್ರಕ್ಕೆ ನೇಯ್ಗೆ ಮಾಡಿದಂತೆ ಬೆಳ್ಳಿಯ ಪಟ್ಟಿಗಳಾಗಿ ಹೊಳೆಯುತ್ತಿರುವುದು ಅವಳಿಗೆ ಬೇರೊಂದು ರೀತಿಯ ಗತ್ತಿನ ಪ್ರಬುದ್ಧ ಕಳೆ ಕೊಟ್ಟಿದ್ದು ಪರೀಕ್ಷಿತನ ನದರಿವಿಗೆ ಬರುತ್ತಿತ್ತು. ಉಷಾ ಚಿಕ್ಕಮ್ಮ ಹುಡುಗುತನದ ಚೆಂದದಿಂದ ಮುಂದಿನ ಹಂತಕ್ಕೆ ದಾಟುತ್ತಿರುವುದನ್ನು, ತನ್ನ ಚೆಂದದ ಬಗೆಗಿನ ಅರಿವನ್ನು ಅರಿವೆ ಕಳಚಿ ಬಿಸಾಕಿದಂತೆ ನಿರ್ಲಕ್ಷ್ಯದಿಂದ ಇರುವುದನ್ನೂ ಮನಗಂಡಿದ್ದ. ಆಕೆ ತುಸು ದಪ್ಪಗಾಗುತ್ತಿದ್ದಳು. ಅದರ ಗುರುತುಗಳು ಅವಳ ಸಡಿಲ ತೋಳುಗಳಲ್ಲಿ, ಮುಂದಕ್ಕೆ ಬರುತ್ತಿರುವ ಹೊಟ್ಟೆಯಲ್ಲಿ, ಅಗಲವಾಗುತ್ತಿರುವ ಸೊಂಟದಲ್ಲಿ ಇದ್ದವು. ಆ ಸುರಲೋಕದ ನದಿ ತನ್ನ ಹರಿಯುವಿಕೆಯಲ್ಲಿ ಬೇರೊಂದು ಬಳುಕನ್ನು, ತಿರುವನ್ನು ಪಡೆದಿತ್ತು; ಅದರ ಉಕ್ಕುವಿಕೆ ಇಳಿದಿತ್ತು. ಒಂದು ಋತುಮಾನ ಮುಗಿದು ಮತ್ತೊಂದು ಶುರುವಾದ ಕುರುಹುಗಳು ಕಾಣುತ್ತಿದ್ದವು. ಅದನ್ನು ಗಮನಿಸುವ, ಆಸ್ವಾದಿಸುವ ಆಯ್ಕೆಯನ್ನು ಚಿಕ್ಕಪ್ಪ ತಾನಾಗಿಯೇ ಬಿಟ್ಟುಕೊಟ್ಟಿದ್ದ. ಸುತ್ತಲಿನ ಹಳ್ಳಿಗಳ ಹುರುಪಿನ ಹುಡುಗರನ್ನು ತನ್ನ ಕಬಡ್ಡಿ ತಂಡದಲ್ಲಿ ಆಡಿಸುವ, ರಾತ್ರಿ ಇಸ್ಪೀಟು ಎಲೆಗಳನ್ನು ಅಲಾಯಿದವಾಗಿ ಜೋಡಿಸುವ ಅವನಿಗೆ ಇದೆಲ್ಲ ಮರೆತೇ ಹೋಗಿತ್ತು. ತಾನು ಆಡಬೇಕಾದ ಆಟದ ಮೈದಾನದಿಂದಲೇ ಅವನು ಹೊರ ನಡೆದಿದ್ದ. ಹೆಂಡತಿಯಿಂದ ತಪ್ಪಿಸಿಕೊಳ್ಳಲೆಂದೇ ಬೇಡದ ಉಸಾಬರಿಗಳಲ್ಲಿ ಮುಳುಗಿರುತಿದ್ದ ಎನ್ನುವ ಅನುಮಾನ ಪರೀಕ್ಷಿತನದು. ಕಾಡ್ಗಿಚ್ಚಿನ ಜ್ವಾಲೆಯಂತಿರುವ ಹೆಂಡತಿಯ ಸೌಂದರ್ಯದ ಜಳದಿಂದ ದೂರವೇ ಉಳಿಯಲು ಅವನು ಪ್ರಯತ್ನಿಸುತ್ತಿದ್ದಂತಿತ್ತು. ಅಥವಾ ಏನನ್ನೂ ಬೆಳೆಯಲು ಬಿಡದ ಕಲ್ಲು ಬಂಡೆಯಿಂದ ಬೇರೆಯಾಗಿ, ತಾನೇ ಚಿಗುರಿ ಹಸಿರಾಗಲು ಚಿಕ್ಕಮ್ಮ ಪರದಾಡುತ್ತಿದ್ದಳು.
ಕಾಲೇಜು ಮುಗಿದ ಎರಡು ಮೂರು ವರ್ಷಗಳಲ್ಲಿ ಪರೀಕ್ಷಿತ ನೌಕರಿ ಹುಡುಕಿಕೊಂಡು ಊರು ಬಿಟ್ಟಾಗ ಕಣ್ಣಂಚಿನಲ್ಲಿ ನೀರು ತಂದುಕೊಂಡವಳಲ್ಲಿ ಚಿಕ್ಕಮ್ಮನೂ ಒಬ್ಬಳು. ‘‘ಊರಿಗೆ ಬಂದಾಗ ಇಲ್ಲಿಗೂ ಬಂದುಹೋಗು. ಇದೂ ನಿನ್ನ ಮನೆಯೇ’’ ಎಂಬ ಮಾತು ಅವಳಿಂದ ಬಂದಿತ್ತು. ಯಾರ ಮದುವೆಗೂ ಹೋಗದ ಅವಳು ಗಂಡನೊಂದಿಗೆ ಅವನ ಮದುವೆಗೆ ಬಂದಿದ್ದಳು. ಬಂದು, ಯಾರೊಂದಿಗೂ ಮಾತನಾಡದೆ ಮದುಮಕ್ಕಳನ್ನೆ ಆಗಾಗ ನೋಡುತ್ತ, ಎರಡು ತಾಸು ಕೂತಿದ್ದು ಹೋಗಿದ್ದಳು.
ಕಬಡ್ಡಿ ಪಂದ್ಯಾವಳಿಗೆಂದು ಕುಮಟೆಯ ಹೆಗಡೆ ಊರಿಗೆ ಹೋದಾಗ ಚಿಕ್ಕಪ್ಪ ಆಟ ನಡೆಯುತ್ತಿರುವಾಗಲೇ ಕುಸಿದಿದ್ದ. ಆಡಲು ಕರೆದುಕೊಂಡು ಹೋದ ಹುಡುಗರು ಅವನನ್ನು ಕುಮಟೆಯ ಆಸ್ಪತ್ರೆಗೆ ತೋರಿಸಿ, ಅಲ್ಲಿಂದ ಮಂಗಳೂರಿನ ದೊಡ್ಡ ಆಸ್ಪತ್ರೆಗೆ ಹಾಕಿದ್ದರು. ಗಂಡನಿಗೆ ಅರ್ಧಾಂಗವಾಯು ಎಂಬ ಸುದ್ದಿ ತಿಳಿದ ಚಿಕ್ಕಮ್ಮ, ತನಗೆ ಏಕಾಏಕಿ ಎದುರಾದ ದುರ್ಬರ ಸನ್ನಿವೇಶದಿಂದ ದಿಕ್ಕೆಟ್ಟಳು.
ತಮ್ಮ ಸುಕೇಶನನ್ನು ಮಂಗಳೂರಿಗೆ ಕರೆಸಿ, ಅಲ್ಲಿನ ಔಷಧವನ್ನು ಗಂಡನಿಗೆ ಮಾಡಿಸಿದಳು. ಮನೆಯಲ್ಲಿ ನೋಡಿಕೊಂಡರೆ ಸರಿಯಾಗುತ್ತದೆ ಎಂದಾದಾಗ ಕರೆದುಕೊಂಡು ಬಂದು ಬೆಳಂಬಾರದ ತೈಲ ತಿಕ್ಕಿಸಿ, ಹೊತ್ತುಹೊತ್ತಿಗೆ ಅವನ ದೇಖರೇಖಿ ನೋಡಿಕೊಂಡಳು. ಎಡಭಾಗವನ್ನು ಅಲುಗಾಡಿಸಲಾಗದೆ ಹಾಸಿಗೆಯ ಮೇಲೆ ಬಿದ್ದಾಗ ಅವನ ಸ್ಥಿತಿ ಭೀಕರವಾಯಿತು. ಕೈ ಕಾಲು ಸರಿಯಾಗಿ ಆಡದೇ ಎಲ್ಲದಕ್ಕೂ ಹೆಂಡತಿಯ ಮೇಲೆ ಅವಲಂಬಿತನಾದ. ಗಂಡನನ್ನು ಸಣ್ಣಮಕ್ಕಳನ್ನು ನೋಡಿಕೊಳ್ಳುವಂತೆ ಆರೈಕೆ ಮಾಡಬೇಕಾಯಿತು. ಆಗ ದಿನ ಕಳೆದಂತೆ ಹುಶಾರಾಗ ಹತ್ತಿದ. ಎಲ್ಲ ಸರಿಯಾಗುತ್ತಿದೆ ಎನ್ನುವಾಗ ಉಷಾ ಚಿಕ್ಕಮ್ಮ ಪ್ರತಿ ದಿನ ಅವನ ಮುಂದೆ ರಂಗಿನ ಸೀರೆ ಉಟ್ಟುಕೊಂಡು, ಕಣ್ಣಿಗೆ ಕಾಡಿಗೆ ಬಳಿದು, ತುಟಿಗೆ ಲಿಪ್‌ಸ್ಟಿಕ್ಕು ಹಚ್ಚಿಕೊಂಡು ಓಡಾಡಲು ಶುರು ಮಾಡಿದಳಂತೆ. ಅದು ಸಂಕಟ, ಸಿಟ್ಟಿಗಿಂತ ಅವನ ಅಸಹಾಯಕತೆಯನ್ನು ಹೆಚ್ಚು ಮಾಡಿತು. ಚಿಕ್ಕಪ್ಪ ತೊದಲುತ್ತ, ಅವಳು ಮೊದಲಿನಂತೆ ಇರಬೇಕು ಎಂದು ಸನ್ನೆ ಮಾಡುತ್ತಿದ್ದನಂತೆ ಎಂದು ದೇವಯಾನಿ ಹೇಳಿದ್ದಳು. ಹಾಗೆ ಸನ್ನೆ ಮಾಡಿದ್ದನ್ನು ದೇವಯಾನಿ ಕಣ್ಣಾರೆ ಕಂಡಿದ್ದಳೇ ಇಲ್ಲವೇ ಎಂಬುದನ್ನು ಪರೀಕ್ಷಿತ ಅವಳಿಗೆ ತಿರುಗಿ ಕೇಳಲು ಹೋಗಲಿಲ್ಲ.
ಚಿಕ್ಕಪ್ಪನಿಗೆ ತಿನ್ನಲು ಕಲಗನ ಪುಡಿ ಕೊಟ್ಟು, ಅವನನ್ನು ನೋಡಿಕೊಂಡು ಬರುವಾ ಎಂದು ದೇವಯಾನಿ ಸಂಜೆ ಹೋದಾಗ ಅವಳು ಕಂಡಿದ್ದು ಇದೇ ವಿಷಯಕ್ಕೆ ಸಂಬಂಧಿಸಿದ ನಿಜವಾಗಿತ್ತು. ಇವಳು ಹೋದಾಗ ಚಿಕ್ಕಪ್ಪ ಮಲಗಿದ್ದನಂತೆ. ಕೋಣೆಯಲ್ಲಿ ಅವನ ಮೈಯಿಗೆ ತಿಕ್ಕಿದ ಅರ್ಧಾಂಗವಾಯುವಿನ ಔಷಧದ ವಾಸನೆ ಗಾಳಿಯಲ್ಲಿ ಕಟ್ಟಿಕೊಂಡಿತ್ತಂತೆ. ಇಸ್ತ್ರಿ ಮಾಡಿದ ಸೀರೆ ಉಟ್ಟು, ಬಣ್ಣ ಬಳಿದ ಕೂದಲಿಗೆ ಸಂಪಿಗೆ ಹೂ ಮುಡಿದು, ಚಿಟ್ಟೆಯ ಮೇಲಿನ ಕಲ್ಲು ಕಂಬಕ್ಕೆ ಆತು ನಿಂತಿದ್ದ ಚಿಕ್ಕಮ್ಮನನ್ನು, ‘‘ಹೊರಗೆ ಎಲ್ಲಿಗಾದರೂ ಹೋಗುವುದು ಇದೆಯೆ?’’ ಎಂದು ದೇವಯಾನಿ ಕೇಳಿದಳಂತೆ. ಅದಕ್ಕೆ ಅವಳು, ‘‘ಎಲ್ಲಿಗೂ ಇಲ್ಲ. ಹೀಗೇ ಹಳೆಯ ವಸ್ತ್ರದಲ್ಲಿ ಓಡಾಡಿಕೊಂಡು ಇರಲು ಬೇಜಾರಾಯ್ತು, ದೇವೀ. ಹೊತ್ತು ಹೋಗಲಿ ಎಂದು ಹೊಸ ಸೀರೆ ಉಟ್ಟುಕೊಂಡಿದ್ದೆ. ಕಪಾಟಿನಲ್ಲಿ ಇನ್ನೂ ಗಳಿಗೆ ಮುರಿಯದ ರಾಶಿರಾಶಿ ಹೊಸ ಸೀರೆಗಳಿವೆ. ಅವನ್ನೆಲ್ಲ ಇಟ್ಟುಕೊಂಡು ಮಾಡುವುದೇನು ಹೇಳು’’ ಎಂದು ಯಾವ ಸಿಗ್ಗೂ ಇಲ್ಲದೆ ಹೇಳಿದಳಂತೆ. ‘‘ಆರಾಮ ಇಲ್ಲದ ಗಂಡ ಮನೆಯಲ್ಲಿ ಇರುವಾಗ, ಯಾರಾದರೂ ಹೊತ್ತು ಕಳೆಯಲು ತಲೆಗೆ ಹೂ ಮುಡಿದು, ಕುತ್ತಿಗೆಗೆ ನಾಲ್ಕು ಚಿನ್ನದ ಸರ, ಕೈಗಳಿಗೆ ಕರಿಮಣಿ ಬಳೆ ಹಾಕಿಕೊಂಡು ಮದುವೆ ಹೆಣ್ಣಿನಂತೆ ಇರುತ್ತಾರೆಯೇ? ವೇಷ ಹಾಕಿಕೊಂಡು ಓಡಾಡಲು ಅವಳೇನು ಕಂಪನಿ ನಾಟಕದ ನಟಿಯೆ? ಇದು ಮೈಮೇಲೆ ಚಿನ್ನ– ಬಣ್ಣ ಹೇರಿಕೊಳ್ಳುವ ಹೊತ್ತಲ್ಲವಲ್ಲ. ಈ ಹಗಲು ವೇಷವನ್ನು ಸದಣ್ಣನ ಹೆಂಡತಿ ಶಾಂತಲಕ್ಕ ಮೊದಲೇ ನೋಡಿದ್ದಳಂತೆ. ಅವಳು ಹೇಳಿದಾಗ ನಾನು ಅಜಿಬಾತ್ ನಂಬಿರಲಿಲ್ಲ. ನಿನ್ನ ಚಿಕ್ಕಮ್ಮನಿಗೆ ತಲೆ ಸರಿ ಇದ್ದಂತೆ ನನಗೆ ಕಾಣುವುದಿಲ್ಲ’’ ಎಂದ ದೇವಯಾನಿಯ ದನಿ ರಾತ್ರಿ ಕೂಗುವ ತೀತೇ (ಟಿಟ್ಟಿಭ) ಹಕ್ಕಿಯ ಕೂಗಿನಂತೆ ಆಳವಾಗಿತ್ತು, ಅಷ್ಟೇ ಚೂಪಾಗಿತ್ತು. ದೂರದಲ್ಲಿದ್ದೂ ಸನಿಹದಲ್ಲೇ ಕೇಳಿದಂತೆ ಭ್ರಮೆ ಹುಟ್ಟಿಸುವ ದನಿ ಅದು. ಅದರಲ್ಲಿ ಚಿಕ್ಕಮ್ಮ ಏನೋ ತಪ್ಪು ಮಾಡಿದ ಧಾಟಿ ಸೇರಿದಂತಿತ್ತು; ಅವಳು ಈ ಹಿಂದೆ ಹಾಗೆ ಮಾಡಿದವಳಲ್ಲ, ಈಗ ಯಾಕೆ ಹೀಗಾಗಿದ್ದಾಳೆ ಎಂಬ ಬೇಸರದ ಎಳೆಯೂ ಹಣಕಿತ್ತು. ಇದೆಲ್ಲದರ ಅಡ್ಡ ಹೊಡೆತ ಎಂಬಂತೆ ಎದುರಾಜ ಚಿಕ್ಕಪ್ಪ ಹುಶಾರು ತಪ್ಪಿದ ನಾಲ್ಕೇ ತಿಂಗಳಲ್ಲಿ ಸತ್ತು ಹೋದ. ವಿಷಯ ತಿಳಿದ ಬಳಿಕ, ಅವನು ಹಾಸಿಗೆಯ ಮೇಲೆ ಬಿದ್ದಾಗಲೇ ನೋಡಿಕೊಂಡು, ಚಿಕ್ಕಮ್ಮನನ್ನು ಮಾತನಾಡಿಸಿಕೊಂಡು ಬರಬೇಕಿತ್ತೆಂದು ಪರೀಕ್ಷಿತನಿಗೆ ಬಹಳ ಸಾರಿ ಅನ್ನಿಸಿತ್ತು. ಅದನ್ನು ಆಗಾಗ ಹೆಂಡತಿ ಸುಲಭಾಳ ಮುಂದೆ ಅಂದೂ ಇದ್ದ.
‘‘ಅವನ ಸಾವು ಚಿಕ್ಕಮ್ಮನ ತುಟಿಗೆ ಹಚ್ಚಿದ ಕೆಂಪು ಲಿಪ್‌ಸ್ಟಿಕ್ಕು, ಮೈಗೆ ಪೂಸಿಕೊಂಡ ಅತ್ತರಿನಿಂದ ಆಗಿದ್ದು. ಗೆಜ್ಜೆ ಸಪ್ಪಳ ಮಾಡಿಕೊಂಡು ದೆವ್ವದ ಹಾಗೆ ರಾತ್ರಿಯೆಲ್ಲ ಓಡಾಡಿರಬೇಕು. ಅವನ್ನೆಲ್ಲ ತಡೆಯಲು, ನೋಡಿಕೊಂಡು ಇರಲು ಚಿಕ್ಕಪ್ಪನಿಗೆ ಆಗಲಿಲ್ಲ. ಸಿಂಗಾರ ಮಾಡಿಕೊಂಡು ಕುಣಿಯಬೇಕೆಂದಾಗ ಅವನು ಕೊಡಲಿಲ್ಲ, ಬೇಡದಿದ್ದಾಗ ಇವಳು ಬಿಡಲಿಲ್ಲ. ಹೆಂಡತಿಯರು ಬಹಳ ಕೊಮಣೆ ಮಾಡಿದರೂ ಗಂಡಸರಿಗೆ ಕಿರಿಕಿರಿಯೇ. ಅವರು ಹದ್ದುಬಸ್ತಿನಲ್ಲಿದ್ದರೆ ಮನೆಯವರ ಜೀವಕ್ಕೆ ಅಗದಿ ಶಾಂತಿ, ನೆಮ್ಮದಿ ಇರುತ್ತದೆ’’ ಎಂದು ಕೊನೆಗೆ ದೇವಯಾನಿ ಶರಾ ಬರೆದಿದ್ದಳು. ಪರೀಕ್ಷಿತನೂ, ‘‘ಇರಬಹುದು ಬಿಡು. ನೀನು ಅವಳ ಮೇಲೇ ಎಲ್ಲ ತಪ್ಪು ಹೊರೆಸಬೇಡ. ಚಿಕ್ಕಮ್ಮ ಅನುಭವಿಸಿದ್ದು ನಮಗ್ಯಾರಿಗೂ ಗೊತ್ತಿಲ್ಲ. ಊರಿಗೆ ಬಂದಾಗ ಅವಳನ್ನು ನೋಡಿ, ಮಾತಾಡಿಸಿಕೊಂಡು ಬರುತ್ತೇನೆ” ಎಂದು ಅವಳ ಮಾತು ನಿಲ್ಲಿಸಲು ಹೇಳಿದ್ದ.
‘‘ಅವರಿವರು ಆಡಿಕೊಳ್ಳುತ್ತಿರುವುದನ್ನು ನಿನಗೆ ಮುಟ್ಟಿಸಿದೆ. ನಮಗೆ ಅವಳು ಹತ್ತಿರದ ಸಂಬಂಧ ಎಂದು ಜನರು ನಾವು ಕಂಡಾಗಲೆಲ್ಲ ನೆತ್ತಿಗೆ ಹೊಡೆಯುವಂತೆಯೇ ಮಾತನಾಡುತ್ತಾರೆ. ನಿನ್ನ ಚಿಕ್ಕಿಯ ಸಹವಾಸ ನನಗ್ಯಾಕಪ್ಪ. ಆ ತ್ರಿಲೋಕ ಸುಂದರಿಯ ಬಿಂಗಲಾಟ ನಿನಗೇ ಇರಲಿ. ನೋಡಿ ನೀನೇ ಖುಷಿಪಡು” ಎಂದು ಸಿಟ್ಟಾದ ದೇವಯಾನಿ ಮಾತು ತುಂಡು ಮಾಡಿದ್ದಳು.
ಪರೀಕ್ಷಿತ ಊರಿಗೆ ಬಂದ ಕಾರಣವೇ ಉಷಾ ಚಿಕ್ಕಮ್ಮನನ್ನು ಕಾಣುವುದಕ್ಕಾಗಿತ್ತು. ಬಂದ ದಿನವೇ ಅವಳಿದ್ದಲ್ಲಿಗೆ ಹೋಗಿದ್ದ. ಮುಖದಲ್ಲಿನ ಕೊಂಚ ಉದಾಸ ಭಾವವನ್ನು ಬಿಟ್ಟರೆ ಅದೇ ಕಳೆಕಳೆಯ, ಅಡುಗೆಮನೆಯಲ್ಲಿ ಆಗತಾನೆ ಬೆಳಗಿಟ್ಟ ಪಾತ್ರೆಯ ಸಮೂಹದಂತೆ ಚಕಚಕ ಹೊಳೆಯುವ ಉಷಾ ಚಿಕ್ಕಮ್ಮ. ತುಸುವೂ ಬಾಡದ, ರಕ್ತಚಂದನದ ತೆಳುಗಂಧ, ರಂಗು ಉಕ್ಕುವ ಅದೇ ಹೆಂಗಸು. ಊರಿನಲ್ಲಿರುವ ಮನೆಯನ್ನು ಬಿಟ್ಟು, ಮಾವಿನ ತೋಟದಲ್ಲಿರುವ ಇನ್ನೊಂದು ಸಣ್ಣ ಮನೆಯಲ್ಲಿದ್ದಳು. ಪರೀಕ್ಷಿತ ಹೋದಾಗ ಮಧ್ಯಾಹ್ನದ ಬಿಸಿಲಿತ್ತು; ನೆಲಕ್ಕೆ ಮಾವಿನ ಮರಗಳ ನೆರಳ ಜಾಳಿಗೆ ಹಾಸಿತ್ತು. ಮನೆಯ ಹೊರ ತೆಣೆಯಲ್ಲಿ ಆರಾಮ ಕುರ್ಚಿಯ ಮೇಲೆ ಕೂತು, ಮರದ ಕಟಾಂಜನಕ್ಕೆ ಕಾಲು ಚಾಚಿದ್ದ ಅವಳು ಗಂಡ ಸತ್ತ ಬೇಸರದ ಎಳೆ ಹೊರಗೆಲ್ಲೂ ತೋರದಂತಿದ್ದಳು. ಅವಳ ಹಿಂಬದಿಗೆ ಭತ್ತ, ಶೇಂಗಾದ ಚೀಲಗಳನ್ನು ಗೋಡೆಗೆ ತಾಕಿದಂತೆ ಒಂದರಮೇಲೊಂದು ಆನಿಸಿಡಲಾಗಿತ್ತು. ಪರೀಕ್ಷಿತನನ್ನು ಕಂಡು, ‘‘ಯಾವಾಗ ಬಂದೆಯೊ ಪೋರಾ? ಬಾ ಬಾ. ದಿನಹೋದಂತೆ ನಿನ್ನ ಮೈಯಲ್ಲಿ ಮಾಂಸವೇ ಕಡಿಮೆಯಾಗುತ್ತಿದೆಯಲ್ಲೋ’’ ಎಂದ ಅವಳ ಬಳಿ, ಒಳಬಾಗಿಲ ಮೆಟ್ಟಿಲ ಮೇಲೆ ಕೂತ. ಅವನು ಕೂತ ಬಲಗಡೆ ಸುಲಿದ ತೆಂಗಿನ ಕಾಯಿಗಳ ರಾಶಿ. ಚಿಕ್ಕಮ್ಮ ಹಸೆಯ ಬಿಳಿ ಚಿತ್ತಾರವಿರುವ, ಕಪ್ಪು ಅಂಚಿನ ಮಣ್ಣಿನ ಬಣ್ಣದ ಸಾದಾ ಸೀರೆ ಉಟ್ಟಿದ್ದಳು. ಕೂದಲು ಕೆಂಪು, ಕಪ್ಪು, ಬಿಳಿ ಬಣ್ಣಗಳ ಮಿಶ್ರಣವಾಗಿತ್ತು. ಎಣ್ಣೆ ಹಚ್ಚಿದ ಸಡಿಲ ಜಡೆಯನ್ನು ಎದೆಯ ಮೇಲೆ ಎಳೆದುಕೊಂಡಿದ್ದಳು. ನೋಟದಲ್ಲಿ ಹಿಂದಿನ ತಡವರಿಕೆಯ ಬದಲಾಗಿ ಚುರುಕುತನವಿತ್ತು. ‘‘ಹೇಗಿದ್ದೀ ಚಿಕ್ಕಮ್ಮ?’’ ಎಂದು ಪರೀಕ್ಷಿತ ಅವಳ ಬೆಚ್ಚಗಿನ ಹಸ್ತ ಮುಟ್ಟಿ ಕೇಳಿದ. ‘‘ಇದ್ದೇನೋ ಮೊದಲಿನ ಹಾಗೆಯೇ. ಯಾರೂ ಎಳೆಯದ, ಚಂದ್ರಶಾಲೆಯಲ್ಲಿ ನಿಂತ ತೇರಿನಂತೆ ಇದ್ದೇನೆ. ತೇರಿನ ಕಳಸ, ಪತಾಕೆಯೆಲ್ಲ ತೆಗೆದಾಯ್ತು. ನನ್ನ ಬದುಕಿನಲ್ಲಿ ಏನೂ ಫರಕಿಲ್ಲ.” ಅದು ಪರೀಕ್ಷಿತನಿಗೂ ನಿಚ್ಚಳವಾಗಿ ಕಾಣುತ್ತಿತ್ತು. ಅವಳು ಹೇಳದೇ ಬಿಟ್ಟಿರಬಹುದಾದ, ಊರಲ್ಲಿ ತೇಲಾಡುವ ಪದಗಳನ್ನು ಅವಳ ಮುಖದಲ್ಲಿ ಪರೀಕ್ಷಿತ ಹೆಕ್ಕಿ ಓದಲು ಪ್ರಯತ್ನಿಸಿದ. ಅದು ಪದವೊಂದು ಬಿಟ್ಟುಹೋದ ವಾಕ್ಯದಂತಿತ್ತು. ಅವನ ಹೆಂಡತಿ ಮಕ್ಕಳು, ಮಾವು–ತೆಂಗಿನ ಬೆಳೆ ಎಂದು ತುಸು ಹೊತ್ತು ಮಾತನಾಡಿದರೂ ಎದುರಾಜ ಚಿಕ್ಕಪ್ಪನ ಪ್ರಸ್ತಾಪ ನಡುವೆ ಬರಲಿಲ್ಲ; ಅವನನ್ನು ನೆನಪಿಸುವ ಕುರುಹುಗಳು ಸುತ್ತ ಕಾಣಲಿಲ್ಲ. ಅವನ ಪ್ರಸ್ತಾಪ ಬರಬಾರದು ಎಂಬುದು ಪರೀಕ್ಷಿತನ ಉದ್ದೇಶವೂ ಆಗಿತ್ತು. ಅದನ್ನು ಅಮ್ಮ ಮನೆಯಿಂದ ಹೋಗುವಾಗಲೇ ಹೇಳಿ ಕಳಿಸಿದ್ದಳು. ‘‘ಯಾವುದಕ್ಕೂ ಎದುರಾಜನ ಬಗ್ಗೆ ಅವಳನ್ನು ಕೇಳಬೇಡ. ಒಳ್ಳೆಯದು ಕೆಟ್ಟದ್ದು ಅವರವರಿಗೆ ಬಿಟ್ಟಿದ್ದು. ನೀನು ನಾಲ್ಕೇ ನಾಲ್ಕು ಮಾತಾಡಿ ಬಂದುಬಿಡು’’ ಎಂದವಳು, ‘‘ನಿಮ್ಮ ಚಿಕ್ಕಪ್ಪನ ಕಾರ್ಯದ ದಿವಸ ನಾನು, ದೇವಯಾನಿ ಅವಳಿಗೆ ಸೀರೆ ತಂದುಕೊಟ್ಟಿದ್ದೇವೆ. ನೀನು ಮತ್ತೆ ಕೊಡುವುದೇನೂ ಬೇಡ. ಬೇರೆ ಯಾರಿಗಾದರೂ ಉಡುವುದಕ್ಕಾಗುತ್ತದೆ, ಕೊಡಿಲ್ಲಿ’’ ಎಂದು ಅವನು ಚಿಕ್ಕಮ್ಮನಿಗೆಂದು ತಂದ ಸೀರೆಯನ್ನು ತಕ್ಕೊಂಡು ಒಳಗಿಟ್ಟಿದ್ದಳು.
‘‘ಅಂಕೋಲೆಪೇಟೆಗೆ ಹೋಗಿ ಒಂದಷ್ಟು ಖರೀದಿ ಮಾಡುವುದಿದೆ. ನಾಳೆ ನಿನಗೆ ಹೊತ್ತು ಇದ್ದರೆ ಇಬ್ಬರೂ ಹೋಗಿ ಬರುವ. ನಾನು ಪೇಟೆಗೆ ಹೋಗದೆ ಯಾವ ಕಾಲವಾಯಿತೋ” ಎಂದಳು ಚಿಕ್ಕಮ್ಮ. ಅವನ ಉತ್ತರಕ್ಕೆ ಕಾಯದೆ, ಕುರ್ಚಿಯ ಕೈಗಳನ್ನು ಹಿಡಿದು ಏಳುತ್ತ, ‘‘ಈಗ ನಿನಗೆ ಆಸರಿಗೆ ಏನು ಕೊಡಲಿ’’ ಎನ್ನುತ್ತ ಒಳಗೆ ಹೋದಳು. ಅವಳ ನಡಿಗೆಯಲ್ಲಿ ಬೇರೊಂದು ಬಗೆಯ ಲಯ, ಛಂದಸ್ಸು ಇರುವುದು ಪರೀಕ್ಷಿತನ ಗ್ರಹಿಕೆಗೆ ಬರತೊಡಗಿತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರು. ಅಂಕೋಲೆ, ಕಾರವಾರಗಳಲ್ಲಿ ವಿದ್ಯಾಭ್ಯಾಸ. ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಪ್ರಸ್ತುತ ‘ಮಯೂರ’ ಮಾಸ ಪತ್ರಿಕೆಯ ಮುಖ್ಯ ಉಪ ಸಂಪಾದಕ.
ಪ್ರಕಟಿತ ಕೃತಿಗಳು: ‘ಅಗಣಿತ ಚಹರೆ’ (ಕವನ ಸಂಗ್ರಹ), ‘ಗೋಡೆಗೆ ಬರೆದ ನವಿಲು’ (ಕಥಾಸಂಕಲನ)
More About Author