Date: 05-04-2025
Location: ಉಡುಪಿ
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏ.30 ಹಾಗೂ ಮೇ 1ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 17ನೇ ಸಮ್ಮೇಳನ ನಡೆಯಲಿದ್ದು, ಸರ್ವಾಧ್ಯಕ್ಷರಾಗಿ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ಟ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1956ರ ಫೆ.6ರಂದು ಬಂಟ್ವಾಳ ತಾಲೂಕಿನ ಕರೋಪಾಡಿಯ ಪಾದೇಕಲ್ಲು ಎಂಬಲ್ಲಿ ಜನಿಸಿದ ಅವರು ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಹಾಗೂ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಸಂಶೋಧನೆ ಪೂರೈಸಿದರು. ಬಳಿಕ ಉಡುಪಿ ಹಾಗೂ ಮಂಗಳೂರಿನ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2016ರ ಫೆ. 29ರಂದು ನಿವೃತ್ತರಾಗಿದ್ದಾರೆ.
ಸಂಶೋಧನಾ ಕ್ಷೇತ್ರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿರುವ ವಿಷ್ಣು ಭಟ್ಟ ಅವರು, ತುಳು ನಿಘಂಟು ಯೋಜನೆಯಲ್ಲಿ ಸಹಾಯಕ ಸಂಪಾದಕ, ತುಳುವ ತೆಮಾಸಿಕ ಪತ್ರಿಕೆಯ ಸಹ ಸಂಪಾದಕರಾಗಿ ಗುರುತಿಸಿಕೊಂಡಿದ್ದಾರೆ. ಸೇಡಿಯಾಪು, ಸೇಡಿಯಾಪು ಕೃಷ್ಣ ಭಟ್ಟರು, ಪಂಡಿತವರೇಣ್ಯ, ಶ್ರೀಭಾಗವತೋ, ಪ್ರಸಂಗ ವಿಶ್ಲೇಷಣೆ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಸೇರಿದಂತೆ 21ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 50ಕ್ಕೂ ಅಧಿಕ ಸಂಪಾದಿತ, ಸಹಸಂಪಾದಿತ ಪುಸ್ತಕ ಪ್ರಕಟಿಸಿದ್ದಾರೆ.
ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ, ಆಕಾಶವಾಣಿಯಲ್ಲಿ ಚಿಂತನ ಮೊದಲಾದ ಕಾರ್ಯಕ್ರಮಗಳಲ್ಲಿ ಉಪನ್ಯಾಸಕರಾಗಿ ಗುರುತಿಸಿಕೊಂಡಿದ್ದು, ಆಕಾಶವಾಣಿಯ ಯಕ್ಷಗಾನದಲ್ಲಿಯೂ ಹಲವಾರು ಪಾತ್ರ ನಿರ್ವಹಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರ ಗಳಿಸಿದ್ದು, ಇವರ ಯಕ್ಷಗಾನಾಧ್ಯಯನ ಕೃತಿಗೆ 2017ರಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಸಾಹಿತ್ಯ ಕಮ್ಮಟ ಮತ್ತು ಸಮ್ಮೇಳನಗಳ ಅಧ್ಯಕ್ಷತೆ ವಹಿಸಿರುವ ಹಿರಿಮೆ ಗಳಿಸಿದ್ದಾರೆ.
ಬೆಂಗಳೂರು: ಪ್ರಗತಿ ಪ್ರಕಾಶನದಿಂದ ಪ್ರಕಟವಾದ ಲೇಖಕಿ ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣ...
ಬೆಂಗಳೂರು: ಸಾಹಿತಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಷ...
ಬಸವಕಲ್ಯಾಣ: "ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ...
©2025 Book Brahma Private Limited.