ತಾಳಮದ್ದಲೆಯೆಂಬ ಮೋಹಕ ಲೋಕ ‘ಉಲಿಯ ಉಯ್ಯಾಲೆ’


ತಾಳಮದ್ದಲೆ ಎಂಬ ರಂಗಭೂಮಿಯಲ್ಲಿ ಲೇಖಕರು ಕಂಡ ಏರಿಳಿತಗಳ ಪಯಣ ಕಥನವಿದು. ರಾಧಾ ಕೃಷ್ಣ ಕಲ್ಚಾರ್ ಅವರು ಬಹುವಾಗಿ ಪ್ರೀತಿಸಿದ ತಾಳಮದ್ದಲೆಯ ಅರ್ಥಗಾರಿಕೆ ಅವರ ವ್ಯಕ್ತಿತ್ವವನ್ನು ರೂಪಿಸಿದಶಕ್ತಿಯೂ ಹೌದು. ಇದು ಅವರ ವೈಯುಕ್ತಿಕ ಅನುಭವ ಸಂಗ್ರಹವಷ್ಟೇ ಅಲ್ಲ,ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಬೆಳೆಯಬೇಕಾದರೆ ಆತಂಕಗಳು, ಎದುರಿಸಬೇಕಾಗುವ ಸನ್ನಿವೇಶಗಳು, ಆದರಿಸಬೇಕಾದ ಕೈಗಳು, ಇವುಗಳಿಗೆಲ್ಲಾ ಇದೊಂದು ಸಂಕೇತ ಎನ್ನುತ್ತಾರೆ ಬರಹಗಾರ್ತಿ ವರಲಕ್ಷ್ಮಿ ಪರ್ತಜೆ. ಅವರು ರಾಧಾ ಕೃಷ್ಣ ಕಲ್ಚಾರ್ ಅವರ ಉಲಿಯ ಉಯ್ಯಾಲೆ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಹೆಸರ - ಉಲಿಯ ಉಯ್ಯಾಲೆ
ಲೇಖಕರು -ರಾಧಾ ಕೃಷ್ಣ ಕಲ್ಚಾರ್
ಪ್ರಕಾಶನ - ಅಕ್ಷರಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ.
ಬೆಲೆ ರೂ -170

ರಾಧಾಕೃಷ್ಣ ಕಲ್ಚಾರ್ ಅವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಚಾರ್ ಎಂಬಲ್ಲಿ ಜನಿಸಿದರು...ತಂದೆಮಾಣಿಪ್ಪಾಡಿ ಕೇಶವ ಭಟ್ಟ,ತಾಯಿ ಕನಕಲಕ್ಷ್ಮಿ...ಪ್ರಸ್ತುತದಲ್ಲಿ ವಿಟ್ಲದಲ್ಲಿ ವಾಸವಾಗಿದ್ದಾರೆ ನಾಡಿನ ಸುಪ್ರಸಿದ್ಧ ಅರ್ಥದಾರಿ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರ್ ಉಪನ್ಯಾಸಕ,ಅಂಕಣಕಾರ,ಸಾಹಿತಿ, ವಿಮರ್ಶಕ, ಭಾಷಣಕಾರ,ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ಕೂಡು ಮನೆ, ( ಕಾದಂಬರಿ)ಅವರವರ ದಾರಿ (ಕಥಾಸಂಕಲನ) ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ,ಅವರ ಕೃತಿಗಳು.

ಜೊತೆಗೆ ತರಂಗ,ಉತ್ತಾನಗಳಲ್ಲಿ ಅಂಕಣಕಾರರಾಗಿದ್ದರೆ ಹೊಸದಿಗಂತಪತ್ರಿಕೆಯಲ್ಲಿ* ಆಲೋಚನ* ಹಾಗೂ ತುಷಾರ ಪತ್ರಿಕೆಯಲ್ಲಿ*ಉಲಿಯ ಉಯ್ಯಾಲೆ *ಅಂಕಣದ ಲೇಖಕರಾಗಿದ್ದಾರೆ.. ಸಿರಿಬಾಗಿಲು ಪ್ರತಿಷ್ಠಾನದ *ಅರ್ಥತರಂಗ* ಸರಣಿ ಪ್ರಾತ್ಯಕ್ಷಿಕೆ ಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ.  

ಈ ಪುಸ್ತಕದಲ್ಲಿ 30 ಅದ್ಯಾಯಗಳಿವೆ. ಇವೆಲ್ಲವೂ ಕನ್ನಡ ಪ್ರಸಿದ್ದ ಮಾಸಿಕ ಪತ್ರಿಕೆ ತುಷಾರದಲ್ಲಿ ಅಂಕಣ ರೂಪದಲ್ಲಿ ಬಂದಿದೆ...

ಪರಿವಿಡಿ -1)ಲೇಖಕನ ಮಾತು 2)- ತಾಳಮದ್ದಳೆ ಎಂಬ ಮೋಹಕ ಲೋಕ 3)-ಪಂಬೆತ್ತಾಡಿಯ ಪ್ರಜ್ಞೆ 4)- ಕಲ್ಮಡ್ಕದ ಕಲರವ ಗಳು 5)- ಘಟಾನು ಘಟಿಗಳ ದರ್ಶನ 6)- ನಾರಾಯಣಜ್ಜ ಎಂಬ ಕಥೆಗಾರ 7)- ಸಂಘಗಳ ಸಂಗದಲ್ಲಿ 8)- ರಂಗಪ್ರವೇಶ ಪ್ರಸಂಗ 9)-ಕಾಯರ್ತೋಡಿಯ ಕಲಾಪಗಳು 10)-ಇತ್ತಲಿಂತಿರುವಾಗ 11)- ಯಕ್ಷಲೋಕದ ಪಲ್ಲಟಗಳು 12)- ಹೊಸಗಾಳಿ ಸುಳಿಸುಳಿದು 13)- ಸಂಪಾಜೆ ಎಂಬ ತಂಪಿನೂರು 14)- ರಂಗದಲ್ಲಿ ಕಲಿತ ಪಾಠಗಳು 15)- ಅರ್ಥಗಾರಿಕೆಯಲ್ಲಿ ಆಕ್ರಮಣ ಇತ್ಯಾದಿ 16)- ಉಭಯಸಂಕಟಗಳು 17)- ರಂಗದಿಂದ ಹೊರಗೆ ನಿಂತು 18)- ಮತ್ತೆ ಮಾತಿನ ಮನೆಗೆ 19)- ಮಂಗಳಗಂಗೋತ್ರಿಯಲ್ಲಿ ಯಕ್ಷಗಂಧ 20)-ಆ ನಾಲ್ಕು ತಾಳಮದ್ದಳೆಗಳು 21)- ದಾಸ ನಿವಾಸದ ವಾಸ 22)- ಬೆಳೆಯುವ ದಿಕ್ಕಿನಲ್ಲಿ 23)- ಗರಿಗೆದರಿದ ಕಾಲ 24)- ವಿಸ್ತಾರದ ವಿಹಾರ 25)- ತಿರುಗಿ ನಿಂತು ನೋಡಿದಾಗ 26)- ಒಳಸುಳಿಗಳ ಒಡಲು 27)- ಉತ್ತರವಿಲ್ಲದ ಪ್ರಶ್ನೆಗಳು 28)- ಹೊಸ ನೀರಿನ ಹರಿವು 29)- ಕದಡಿದ ಸಲಿಲಂ 30)- ಮನ್ನಿಸೆನ್ನಪರಾಧವ....168 ಪುಟಗಳನ್ನೊಳಗೊಂಡ ಪುಸ್ತಕವಿದು...

ಯಕ್ಷಗಾನ ತಾಳಮದ್ದಲೆ ಲೋಕದ ಪರಿಚಯದ ಹೂರಣವನ್ನು ಒಳಗೊಂಡ ಪುಸ್ತಕವಿದು...ಯಕ್ಷಗಾನ ಅನ್ನುವುದು ಜಾನಪದ ಕಲೆ...ಅದರಲ್ಲೊಂದು ಪ್ರಕಾರ ಯಕ್ಷಗಾನ ಬಯಲಾಟ, ಹಾಗೂ ಇನ್ನೊಂದು ತಾಳಮದ್ದಳೆ... ಯಕ್ಷಗಾನದಲ್ಲಿ ಚಂಡೆ ಜಾಗಟೆ ಮದ್ದಲೆಯೊಂದಿಗೆ ಭಾಗವತರು ಶ್ರುತಿಬದ್ಧವಾಗಿ ಹಾಡಿದ ಹಾಡಿಗೆ ಅರ್ಥಧಾರಿಗಳು ಆ ಹಾಡಿನ ಸಾರಾಂಶವನ್ನು ಹೇಳ್ತಾ ಪದ್ಯದಲ್ಲಿ ಬಂದ ಕಥೆಗಳನ್ನು ಕಟ್ಟಿಕೊಡುವುದು ಪದ್ಧತಿ. ಅವರನ್ನು ಅರ್ಥದಾರಿಗಳು ಎನ್ನುವರು. ವೇಷಭೂಷಣಗಳೊಂದಿಗೆ ನೃತ್ಯ ಸಹಿತ ಅರ್ಥಧಾರಿಗಳು ಕಥೆಯನ್ನು ಪ್ರಸ್ತುತಪಡಿಸುವುದು ಬಯಲಾಟದ ಪ್ರಕಾರ..

ಸಾಮಾನ್ಯರಂತೆ ಕುಳಿತು ತಮ್ಮ ಮಾತಿನ ಸಾಮರ್ಥ್ಯದಿಂದ ಕೇಳುಗರನ್ನು ಇನ್ನೊಂದು ಲೋಕಕ್ಕೆ ಕರೆದೊಯ್ಯುವ ಪ್ರಕಾರ ತಾಳಮದ್ದಳೆ....ತಾಳಮದ್ದಳೆಯ ಅರ್ಥದಾರಿಯ ನಿರ್ವಹಣೆ ಬಲುಕಷ್ಟದ್ದು. ಸಾಕಷ್ಟು ಅಧ್ಯಯನ, ಜ್ಞಾನವನ್ನು ಬೇಡುವುದು...ಶ್ರುತಿಯೊಂದಿಗೆ ಬೆರೆತು ನಾದಮಯವಾದ ಸ್ವರದಿಂದ ಸಂದರ್ಭಕ್ಕೆ ತಕ್ಕ ಸ್ವರಭಾರಗಳ ಏರಿಳಿತದ ನಿರ್ವಹಣೆಯೂ ಬೇಕಾಗುವುದು.... ನಿರಂತರಅಧ್ಯಯನ,ಆಲಿಸುವಿಕೆ, ಭಾಗವಹಿಸುವಿಕೆಯಿಂದಈ ವಿದ್ಯೆ ಕೈಗೂಡುವುದು.... ಇಲ್ಲಿ ಸರಸವಿದೇ,ವಿರಸವಿದೆ,ಹಾಸ್ಯವಿದೆ, ಚರ್ಚೆಯಿದೆ, ಹಿರಿಯ-ಕಿರಿಯರೊಂದಿಗೆ ಬೆ ರೆತುಕೊಳ್ಳುವ ಅವಕಾಶವಿದೆ... ಕೆಲವೊಮ್ಮೆ ಹಿರಿಯಅರ್ಥದಾರಿಗಳ ದಬ್ಬಾಳಿಕೆಯನ್ನುಸಹಿತ ಎದುರಿಸಬೇಕಾಗಿ ಬರುವುದು. ಸಂದರ್ಭಕ್ಕೆ ಸರಿಯಾಗಿ ಮಾತನಾಡಲು ಲೋಕದ ವಿದ್ಯಮಾನಗಳನ್ನು ಆಗಿಂದಾಗ ಅರಿಯ ಬೇಕಾಗುವುದು... ವೇದಿಕೆಯಲ್ಲಿ ಪ್ರತ್ಯು ನ್ ಮತಿಯ ಜವಾಬು ಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಳ್ಳಲು ಅವಕಾಶ ವೂ ಇರುವುದು. ನಿರಂತರ ಅಧ್ಯಯನದಿಂದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆ ಯಿಂದ ಕಲಾವಿದರು ಪರಕಾಯ ಪ್ರವೇಶಿಸಿ ಆತ್ಮ ಸಮ್ಮಾನವನ್ನು ಹೊಂದುವರು. 

ಮೊದಲೆಲ್ಲ ರಾತ್ರಿ ಬೆಳಗಿನವರೆಗೂ ನಡೆಯುವ ಕಾರ್ಯಕ್ರಮವಿದು. ಈಗ ಕೆಲವು ವರ್ಷಗಳಿಂದ ಅಲ್ಪಕಾಲದ ಅವಧಿಗೂ ನಡೆಯುವ ಬದಲಾವಣೆಯನ್ನು ಹೊಂದಿದೆ....ತಾಳಮದ್ದಳೆ ಕಾರ್ಯಕ್ರಮ ನಡೆಯುವಾಗ ಹಿರಿಯ ಅರ್ಥದಾರಿಗಳು ಕಿರಿಯರನ್ನುಚರ್ಚೆ ಮಾಡಿ ಬಾಯಿ ಮುಚ್ಚಿಸಲು ನೋಡುವುದೂ ಇದೇ.... ಇನ್ನು ಕೆಲವರು ರಂಗದಲ್ಲಿ ಸ್ವಲ್ಪ ಪರೀಕ್ಷೆ ನಡೆಸಿದರು ರಂಗದಿಂದ ಹೊರಗೆ ತಿದ್ದುವವರು ಇದ್ದಾರೆ. ಭಾಗವಹಿಸುತ್ತಾ ಭಾಗವಹಿಸುತ್ತಾ ಕೆಲವರಿಗೆ ಹಮ್ಮು ತುಂಬಿಕೊಳ್ಳುತ್ತದೆ. ಅದೆಲ್ಲವೂ ರಂಗಸ್ಥಳದಲ್ಲಿ ಎದುರಾಳಿಯಿಂದಾಗಿ ಇಳಿದು ಅವಮಾನಿತರಾಗಿ ತಲೆತಗ್ಗಿಸುವುದು ಇದೆ. ಕೆಲವೊಂದುಕಾರ್ಯಕ್ರಮಗಳಲ್ಲಿಚರ್ಚೆಯಿಂದಾಗಿ ಕಾರ್ಯಕ್ರಮವವೇ ನಿಲ್ಲುವ ಪರಿಸ್ಥಿತಿ ಬರುವುದಿದೆ.... ಇಂತಹ ಸನ್ನಿವೇಶಗಳನ್ನೆಲ್ಲ ಲೇಖಕರು ಈ ಪುಸ್ತಕದಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ತುಷಾರದಲ್ಲಿ ಬಂದ ಲೇಖನ ಮಾಲೆಗಳಲ್ಲಿ ಇದ್ದಹಾಗೆ ಸಾಂದರ್ಭಿಕ ಚಿತ್ರಗಳು ಕೆಲವೊಂದು ಭಾವಚಿತ್ರಗಳೂ ಪುಸ್ತಕದಲ್ಲೂ ಇರಬೇಕಿತ್ತು ಎಂದು ನನಗನಿಸಿತು.

ತಾಳಮದ್ದಲೆ ಎಂಬ ರಂಗಭೂಮಿಯಲ್ಲಿ ಲೇಖಕರು ಕಂಡ ಏರಿಳಿತಗಳ ಪಯಣ ಕಥನವಿದು. ಅವರು ಬಹುವಾಗಿ ಪ್ರೀತಿಸಿದ ತಾಳಮದ್ದಲೆಯ ಅರ್ಥಗಾರಿಕೆ ಅವರ ವ್ಯಕ್ತಿತ್ವವನ್ನು ರೂಪಿಸಿದ ಶಕ್ತಿಯೂ ಹೌದು. ಇದು ಅವರ ವೈಯುಕ್ತಿಕ ಅನುಭವ ಸಂಗ್ರಹವಷ್ಟೇ ಅಲ್ಲ. ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಬೆಳೆಯಬೇಕಾದರೆ ಆತಂಕಗಳು, ಎದುರಿಸಬೇಕಾಗುವ ಸನ್ನಿವೇಶಗಳು, ಆದರಿಸಬೇಕಾದ ಕೈಗಳು, ಇವುಗಳಿಗೆಲ್ಲಾ ಇದೊಂದು ಸಂಕೇತವು. 

ಇದು ಪೂರ್ತಿ ಲೇಖಕನ ವೈಯಕ್ತಿಕ ಜೀವನವನ್ನು ಹೇಳುವ ಪುಸ್ತಕವಲ್ಲ...ವಸ್ತುನಿಷ್ಠ ವಾಗುವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಹೇಳಿದ್ದಾರೆ. ನಾಲ್ಕೈದು ದಶಕಗಳಲ್ಲಿ ಬದಲಾಗುತ್ತಾ ಹೊಸತನಕ್ಕೆ ತೆರೆದುಕೊಳ್ಳುತ್ತ ಬಂದ ರಂಗ ಭೂಮಿಯಅಂತರಂಗವನ್ನು ಈ ಕೃತಿಯ ಮೂಲಕ ನೋಡುವುದಕ್ಕೆ ಪ್ರಯತ್ನಿಸಿದ್ದಾರೆ..ಒಂದು ಹಳ್ಳಿಗಾಡಿನ ಎಳೆಯ ಮನಸ್ಸು ಪರಿಸರದ ಪ್ರಭಾವದ ಕಾರಣಗಳಿಂದ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಹೇಗೆ ಸಾಧ್ಯವಾಯಿತು ಎಂಬಅವಲೋಕನ ವೂ ಹೌದು. ಸಂಘಟನೆ ಕಲಾವಿದ, ಶ್ರೊತೃ,ಹೀಗೆ ವಿಭಿನ್ನ ಮುಖಗಳಿಂದ ರಂಗದ ಪರಿವರ್ತನೆಗಳನ್ನು ಗ್ರಹಿಸುವಯತ್ನವು ಕೂಡಾ ಹೌದು. ಕಲಾವಿದನಿಗೆ ಒದಗುವ ಪ್ರೇರಣೆಗಳು,ಹಿನ್ನಡೆ, ಕಿಂಚಿತ್ತಾದರೂ ದೊರೆಯುವ ಸಾರ್ಥಕ ಭಾವ.... ಇತ್ಯಾದಿ ಅಂಶಗಳು ಇವೆ... ಎಲ್ಲರೂ ಒಗ್ಗೂಡಿ ತಾಳಮದ್ದಳೆ ರಂಗದ ಮೇಲಿನಸಮಗ್ರ ನೋಟ ವೊಂದರ ಸಾಹಸ. ತಮ್ಮ ಕಲಾ ಯಾತ್ರೆಯ ಹಲವು ನೋಟಗಳನ್ನು ಈ ಬರಹದಲ್ಲಿ ಚಿತ್ರಿಸಿದ್ದಾರೆ.... ಪುರಾಣದ ಪಾತ್ರ ವಿಸ್ಮಯಗಳಿಂದ ಮರುಳಾಗಿ ಸತತ ವ್ಯವಸಾಯದ ಮುಖಾಂತರ ಈ ಜಿಜ್ಞಾಸೆ ಮಾಧ್ಯಮಕ್ಕೆ ಪ್ರವೇಶ ಪಡೆದ ವೃತ್ತಾಂತ ಇಲ್ಲಿದೆ... ಅರ್ಥಧಾರಿಯೊಬ್ಬ ತನ್ನ ಸಂಪ್ರದಾಯದೊಳಗೆ ಸಿಕ್ಕ ಹಿರಿಕಿರಿಯರ ವೈವಿಧ್ಯಮಯ ಮಾರ್ಗಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವರೊಂದಿಗಿನ ಕೊಡು ಕೊಳ್ಳುವ ಸಂಬಂಧದೊಳಗೆ ತನ್ನ ರೂಪರೇಷೆ ಗಳನ್ನು ನಿರ್ಮಿಸಿಕೊಂಡ ಶೈಕ್ಷಣಿಕ ಕಥೆಯು ಇಲ್ಲಿದೆ... 4 ಜಿಲ್ಲೆಗಳನ್ನೊಳಗೊಂಡ ಪುಟ್ಟ ಪ್ರಾಂತ್ಯ ಒಂದು ಈ ಜಗತ್ತಿನಲ್ಲಿ ವಿಶಿಷ್ಟವಾದ ಹೊಸಬಗೆಯ ರಂಗ ಮಾಧ್ಯಮ ಒಂದನ್ನು ಹೇಗೆ ಬೆಳೆಸಿ ಉಳಿಸಿಕೊಳ್ಳುತ್ತದೆ ಎಂಬ ಕಲಾ ಇತಿಹಾಸದ ಕಥಾನಕವು ಈ ಪುಸ್ತಕದೊಳಗೆ ಇದೆ.... ಇದು ತಾಳಮದ್ದಳೆಯ ಒಳಗಿನವರಿಗೂ, ಹೊರಗಿನವರಿಗೂ, ರಂಗಭೂಮಿಯ ಹಿರಿಯರಿಗೂ, ಕಿರಿಯರಿಗೂ, ಸಾಂಸ್ಕೃತಿಕ ಕುತೂಹಲಿಗಳಿಗೂ ವಿದ್ವಾಂಸರಿಗೂ ಉಪಯುಕ್ತವಾಗಬಲ್ಲ ಹೊತ್ತಿಗೆ....

ಏನಾದರೂ ಆಗು ನಿನ್ನೊಲವಿನಂತಾಗು ಎನ್ನುವ ಕವಿ ವಾಣಿಗೆ, ಲೇಖಕರು ತನ್ನೊಲವಿನ ಅಭಿರುಚಿಯಂತೆ ಬದುಕಲು ಕೈಯಲ್ಲಿದ್ದ ಸರಕಾರಿ ಅಧ್ಯಾಪಕ ಹುದ್ದೆಯನ್ನು ತ್ಯಜಿಸಿ ತನ್ನ ಅಭಿರುಚಿಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡು ಯಶಸ್ವಿಯಾದ್ದು ಸಾಕ್ಷಿಯಾಗಿದೆ.. ಲೇಖಕರು ನನ್ನ ಸೋದರತ್ತೆಯ ಮೊಮ್ಮಗ... ತಾಯ ಗರ್ಭದಲ್ಲಿದ್ದಾಗಲೇ ತಂದೆಯನ್ನು ಕಳೆದು ಕೊಂಡಿದ್ದರು. ಬಡವರಾದರೂ ಸೋದರ ಮಾವಂದಿರ ಹೃದಯವಂತಿಕೆಯನ್ನು ನೆನಪಿಸಿ ಕೊಂಡಿದ್ದಾರೆ...ಪುಸ್ತಕದಲ್ಲಿ ಉಲ್ಲಖಿ ಸಿದ ಕೆಲವೊಂದು ಸಂದರ್ಭಗಳನ್ನು ಓದಿದಾಗ ಕಣ್ಣಿಂದ ಹನಿ ಉರುಳಿದ್ದು ಸುಳ್ಳಲ್ಲ. ತನ್ನ ಅಭಿರುಚಿಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಒಂದು ಹಂತಕ್ಕೆ ಮುಟ್ಟಿದಾಗ ಹಿಂತಿರುಗಿ ನೋಡಿದಾಗ ಬಂದ ಭಾವನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ನಮ್ಮ ನಾಡಿನ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನರಂಗದ ಒಳಹೊರಗುಗಳನ್ನು ಸಂಪೂರ್ಣವಾಗಿ ಪರಿಚಯಿಸುವ ಈ ಪುಸ್ತಕವನ್ನು ಓದುವಿರಲ್ಲವೇ...

-ವರಲಕ್ಷ್ಮಿ ಪರ್ತಜೆ.

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...