ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶೇಷವೆಂದರೆ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟದ ಸಂಖ್ಯೆ ಜಗತ್ತಿನಲ್ಲಿ ಹೆಚ್ಚುತ್ತಲೇ ಇದೆ; ಕನ್ನಡದಲ್ಲೂ ಅದು ಸತ್ಯ. ಆ ನಿಟ್ಟಿನಿಂದ ಸಮಾಜ ಪುಸ್ತಕಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ನೀಡಿದೆ ಎನ್ನುವುದು ಸ್ಪಷ್ಟವಾಗುತ್ತದೆ," ಎನ್ನುವ ಆತಂಕವನ್ನು ವಸುಧೇಂದ್ರ ಅವರು ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೇ ದಿನ "ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆ’ಯಲ್ಲಿ ಹಮ್ಮಿಕೊಂಡಿದ್ದ "ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು" ಗೋಷ್ಠಿಯಲ್ಲಿ "ಭವಿಷ್ಯದ ಪುಸ್ತಕೋದ್ಯಮ’ದ ಕುರಿತ ತಮ್ಮ ವಿಚಾರಧಾರೆಯನ್ನು ಸಾಹಿತ್ಯಾಸಕ್ತರ ಮುಂದಿಟ್ಟರು.
ಜಾಗತಿಕ ಪುಸ್ತಕೋದ್ಯಮದ ಜೊತೆಜೊತೆಗೇ ನಮ್ಮ ಪುಸ್ತಕೋದ್ಯಮದ ಭವಿಷ್ಯವೂ ನಿಂತಿರುತ್ತೆಯಾದರೂ, ದೇಶೀಯ ಭಾಷೆಗಳ ಸಮಸ್ಯೆಗಳು ತುಸು ಅನನ್ಯವಾಗಿರುತ್ತವೆ. ಅಧಿಕಾರ ಮತ್ತು ಹಣದ ಬಲವನ್ನು ಹೊಂದಿರುವ ಇಂಗ್ಲೀಷ್ ಮತ್ತು ಇತರ ಯೂರೋಪಿಯನ್ ಭಾಷೆಗಳ ಪುಸ್ತಕೋದ್ಯಮದ ಜೊತೆಗೆ ನಮ್ಮ ಕನ್ನಡದ ಪುಸ್ತಕೋದ್ಯಮದ ತುಲನೆ ಮಾಡುವುದು ತಪ್ಪಾಗುತ್ತದೆ.
ಎಸ್.ಎಸ್.ಎಲ್.ಸಿ. ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳಿಗೆ ಕನ್ನಡ ಓದಲೂ ಬರುವುದಿಲ್ಲ ಎನ್ನುವ ಆತಂಕಕಾರಿ ವಾರ್ತೆಗಳನ್ನು ನಿತ್ಯ ಓದುತ್ತಿರುವ ಹೊತ್ತಿನಲ್ಲಿ ಕನ್ನಡ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ಮಾತನಾಡಲು ಭಯವಾಗುತ್ತದೆ. ಆದರೆ ಎರಡು ಸಾವಿರ ವರ್ಷ ಇತಿಹಾಸವನ್ನುಳ್ಳ ಕನ್ನಡಕ್ಕೆ ತನ್ನನ್ನು ತಾನು ಇನ್ನೆರಡು ಸಾವಿರ ವರ್ಷ ಸಂಭಾಳಿಸಿಕೊಳ್ಳುವ ಶಕ್ತಿಯಿದೆ ಎನ್ನುವ ವಿಶೇಷ ಧೈರ್ಯವನ್ನು ಒಗ್ಗೂಡಿಸಿಕೊಂಡು ನಾನು ಈ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ.
ಆ ರೀತಿ ನೋಡಿದರೆ ಕಾಗದದ ಪುಸ್ತಕಗಳು ಬೆಳಕಿಗೆ ಬಂದೂ ಎರಡು ಸಾವಿರ ವರ್ಷಗಳು ಕಳೆದಿವೆ. ಕ್ರಿ.ಶ. ಎರಡನೆಯ ಶತಮಾನದ ಆರಂಭದಲ್ಲಿ ಚೀನಾದ ಅಂತಃಪುರದಲ್ಲಿ ಖೋಜಾ ಒಬ್ಬಳು ಅಕಸ್ಮಾತ್ತಾಗಿ ಕಾಗದವನ್ನು ಕಂಡು ಹಿಡಿದಳು. ಮೊದಲಿಗೆ ಕಾಗದದ ಬಳಕೆ ಅನ್ಯ ಉಪಯೋಗಕ್ಕೆ ಸೀಮಿತವಾಗಿದ್ದರೂ ಅನಂತರ ನಿಧಾನಕ್ಕೆ ಬರವಣಿಗೆಗೆ ಬಳಕೆಯಾಗತೊಡಗಿತು. ಅದೇ ಹೊತ್ತಿನಲ್ಲಿಯೇ ಚೀನೀಯರು ಬ್ಲಾಕ್ ಮುದ್ರಣವನ್ನು ಕಂಡು ಹಿಡಿದರು. ಅಲ್ಲಿಂದ ಪುಸ್ತಕಗಳು ಓದುಗರ ನಡುವೆ ಹರಿದಾಡತೊಡಗಿದವು. ಮುಂದೆ ಹದಿನೈದನೇ ಶತಮಾನದಲ್ಲಿ ಗುಟನ್ಬರ್ಗ್ ಮುದ್ರಣದ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದ ಮೇಲೆ, ಪುಸ್ತಕಗಳ ಯಥೇಚ್ಚ ಬಳಕೆ ಪ್ರಾರಂಭವಾಯಿತು. ಭಾರತವೂ ಹೊಸ ಬಗೆಯ ಪುಸ್ತಕಗಳಿಗೆ ತೆರೆದುಕೊಳ್ಳತೊಡಗಿತು.
ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು. ಯಾವ ದೇಶದಲ್ಲಿ ಪುಸ್ತಕಗಳು ಸಂಕೋಲೆಯಿಲ್ಲದೆ ಯಥೇಚ್ಛವಾಗಿ ಓದಲ್ಪಡುತ್ತವೆಯೋ, ಅಲ್ಲಿ ವ್ಯಕ್ತಿಸ್ವಾತಂತ್ರ್ಯ, ಬೌದ್ಧಿಕತೆ, ಸಹಿಷ್ಣುತೆ ಹೆಚ್ಚಿರುತ್ತವೆಯೆಂದೇ ಅರ್ಥ. ಜ್ಞಾನಾರ್ಜನೆಗೆ ಹಲವಾರು ಮಾರ್ಗಗಳು ಇವೆಯಾದರೂ, ಪುಸ್ತಕಗಳು ಅತ್ಯಂತ ಸುಲಭವಾದ ಮತ್ತು ಸಫಲವಾದ ಸಾಧನೆಗಳಾಗಿವೆ. ಆ ಕಾರಣದಿಂದಲೇ ಹಲವಾರು ಜ್ಞಾನಾರ್ಜನೆಯ ಮಾರ್ಗಗಳು ನವೀಕರಣಗೊಂಡರೂ, ಪುಸ್ತಕಗಳು ಸಮಾಜದಲ್ಲಿ ಹಾಗೆಯೇ ಉಳಿದುಕೊಂಡಿವೆ. ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶೇಷವೆಂದರೆ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟದ ಸಂಖ್ಯೆ ಜಗತ್ತಿನಲ್ಲಿ ಹೆಚ್ಚುತ್ತಲೇ ಇದೆ; ಕನ್ನಡದಲ್ಲೂ ಅದು ಸತ್ಯ. ಆ ನಿಟ್ಟಿನಿಂದ ಸಮಾಜ ಪುಸ್ತಕಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ನೀಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಮಾಹಿತಿಯ ಮಹಾಪೂರದ ಹೊತ್ತಿನಲ್ಲಿ ನಾವಿದ್ದೇವೆ. ಬೇಕಾದ ಮಾಹಿತಿಗಳೆಲ್ಲವೂ ಮೊಬೈಲ್ ಪರದೆ ಉಜ್ಜಿದರೆ ಸಾಕು, ಪುತುಪುತುನೆ ಲಕ್ಷಾಂತರ ಸಂಖ್ಯೆಯಲ್ಲಿ ಉದುರುತ್ತವೆ. ಈ ಹಿಂದಿನ ಶತಮಾನದಲ್ಲಿ ಉತ್ತಮ ಮಾಹಿತಿಯೇ ಒಳ್ಳೆಯ ಪುಸ್ತಕವಾಗಲು ಸಾಕಾಗುತ್ತಿತ್ತು. ಎಲ್ಲ ಬಗೆಯ ಓದುಗರಿಗೂ ಮಾಹಿತಿ ಅಲಭ್ಯವಾಗಿದ್ದ ಕಾಲಘಟ್ಟವದು. ಆದರೆ ಇಂದು ಪುಸ್ತಕಗಳು ತಮ್ಮ ಅನನ್ಯತೆಯನ್ನು ಪುರಾವೆ ಸಮೇತ ಹೇಳಬೇಕಾಗಿದೆ. ಎಲ್ಲೂ ಸಿಗದಂತಹ ಅಪರೂಪದ ಮಾಹಿತಿ ನಮ್ಮ ಪುಸ್ತಕದಲ್ಲಿ ಲಭ್ಯ ಎನ್ನದೆ ಯಾರೂ ಪುಸ್ತಕದ ಕಡೆಗೆ ತಲೆ ಹಾಕುವುದಿಲ್ಲ. ಆದ್ದರಿಂದಲೇ ಪ್ರಕಾಶಕರಿಗೆ ಈ ಹೊತ್ತಿನಲ್ಲಿ ಹೆಚ್ಚಿನ ಸವಾಲುಗಳು ಎದ್ದು ಕಾಣುತ್ತವೆ.
ಜ್ಞಾನಾರ್ಜನೆಗೆ ಹೊಸ ಮಾರ್ಗಗಳಾಗಿ ಪಾಡ್ಕಾಸ್ಟ್ಗಳು, ಬ್ಲಾಗ್ಗಳು, ವೀಡೀಯೋಗಳು, ಕಂಪ್ಯೂಟರ್ ಬೇಸ್ಡ್ ಟ್ರೇನಿಂಗ್ ಹೀಗೆ ಹಲವಾರು ಹೊಸ ವಿಧಾನಗಳು ಬಂದು ಯುವಕರನ್ನು ಆಕರ್ಷಿಸುತ್ತಿವೆ. ಯುವಸಮುದಾಯ ಈ ಹೊಸ ಮಾರ್ಗಗಳನ್ನು ಹೆಚ್ಚು ಹೆಚ್ಚು ಇಷ್ಟ ಪಡುತ್ತಿದೆ. ಇವೆಲ್ಲವೂ ಪ್ಯಾಸಿವ್ ಲರ್ನಿಂಗ್ ಅಂದರೆ ಹೆಚ್ಚಿನ ಶ್ರಮವನ್ನು ಬೇಡದೆ ಬಳಕೆದಾರರಿಗೆ ಜ್ಞಾನವನ್ನು ಧಾರೆಯೆರೆಯುತ್ತವೆ. ಉದಾಹರಣೆಗೆ ಯೂಟ್ಯೂಟ್ ವೀಡಿಯೋ ನೋಡಲು ನಿಮಗೆ ಯಾವ ವಿದ್ವತ್ತೂ ಬೇಡ, ಯಾವ ಪದವಿಯೂ ಬೇಡ. ಒಂದು ಭಾಷೆ ಗೊತ್ತಿದ್ದರೆ ಸಾಕು. ಅಕ್ಷರ ಗೊತ್ತಿಲ್ಲದವರಿಗೂ ಇವು ಜ್ಞಾನವನ್ನು ಧಾರೆಯೆರೆಯಬಲ್ಲವು. ಆದ್ದರಿಂದ ಈ ಎಲ್ಲಾ ಹೊಸ ವಿಧಾನಗಳು ಕನ್ನಡ ಪುಸ್ತಕೋದ್ಯಮಕ್ಕೆ ಸವಾಲಾಗಿವೆ. ಅವುಗಳನ್ನೆಲ್ಲಾ ನಾವಿಂದು ಎದುರಿಸಲೇ ಬೇಕಿದೆ. ಪುಸ್ತಕ ಓದುವ ಜ್ಞಾನದ ಮಾರ್ಗ ಓದುಗನಿಂದ ಹಲವು ಕೌಶಲಗಳನ್ನು ನಿರೀಕ್ಷಿಸುತ್ತದೆ. ಅವನಿಗೆ ಓದಿನ ಅರಿವಿರಬೇಕು, ಶ್ರದ್ಧೆಯಿಂದ ಸಮಯ ಮೀಸಲಿಡಬೇಕು, ಓದಿ ಸಂತಸ ಪಡುವ ಹವ್ಯಾಸ ರೂಢಿಸಿಕೊಂಡಿರಬೇಕು - ಹೀಗೆ. ಆದರೆ ಹೆಚ್ಚು ಶ್ರಮ ಹಾಕಿದರೂ ಹೆಚ್ಚಿನ ಲಾಭ ದೊರೆಯುತ್ತದೆ ಎನ್ನುವ ತಿಳುವು ಹಲವು ಪ್ರಜ್ಞಾವಂತರಿಗೆ ಇರುವುದರಿಂದಲೇ ಪುಸ್ತಕೋದ್ಯಮ ಇಂದಿಗೂ ಜೀವಂತಿಕೆಯಿಂದ ನಳನಳಿಸುತ್ತಿದೆ.
ತಂತ್ರಜ್ಞಾನ ನಿತ್ಯವೂ ಬದಲಾಗುತ್ತಲೇ ಇದೆ. ಬೇಡವೆಂದರೆ ಸುಮ್ಮನಿರಬಹುದಾದ ಸಂಗತಿಯಲ್ಲವದು. ಒಂದು ಕಾಲದಲ್ಲಿ ಪುಸ್ತಕವೊಂದನ್ನು ಪ್ರಕಟಿಸಲು ಹರಸಾಹಸ ಪಡಬೇಕಾಗಿತ್ತು. ಈಗ ಡಿಜಿಟಲ್ ತಂತ್ರಜ್ಞಾನ ಯಾವ ಮಟ್ಟಿಗೆ ಬೆಳೆದಿದೆಯೆಂದರೆ ವರ್ಷಕ್ಕೆ ಕನ್ನಡದಲ್ಲಿಯೇ ಎಂಟರಿಂದ ಹತ್ತು ಸಾವಿರ ಪುಸ್ತಕಗಳು ಪ್ರಕಟವಾಗುತ್ತಿರುವುದು ಕಂಡು ಬರುತ್ತದೆ. ಅಂಗಡಿಯಲ್ಲಿ ನಮ್ಮ ಕಣ್ಣಿಗೆ ಕಾಣುವ ನೂರು ಚಿಲ್ಲರೆ ಪುಸ್ತಕಗಳು ದೇವರ ನೈವೇದ್ಯಕ್ಕೆ ಬಡಿಸಿಟ್ಟ ಚೂರು ಪಾರು ಆಹಾರವಷ್ಟೇ! ತೆರೆಮರೆಯಲ್ಲಿ ಪ್ರಕಟವಾಗುವ ಉಳಿದ ಸಾವಿರಾರು ಪುಸ್ತಕಗಳಿಗೆ ಮುಖ್ಯ ಕಾರಣ ಗ್ರಂಥಾಲಯ ಇಲಾಖೆ ಕೊಳ್ಳುವ ಸಗಟು ಖರೀದಿಯೇ ಆದರೂ, ಅಂತಹ ಬೃಹತ್ ಪ್ರಕಟಣೆ ಸಾಧ್ಯವಾಗುತ್ತಿರುವುದಕ್ಕೆ ತಂತ್ರಜ್ಞಾನವೂ ಅಷ್ಟೇ ಮುಖ್ಯ ಕಾರಣ. ಹೀಗೆ ಸಾವಿರಾರು ಪುಸ್ತಕಗಳ ಮಧ್ಯೆ ಪ್ರಕಟವಾಗುವ ಲೇಖಕನೊಬ್ಬನ ಪುಸ್ತಕವನ್ನು ಓದುಗನೊಬ್ಬ ಯಾವ ಪ್ರತ್ಯೇಕ ಕಾರಣಕ್ಕಾಗಿ ಕೊಳ್ಳಬೇಕು? ಅವನಿಗೆ ಈ ಅರಿವನ್ನು ತುಂಬುವವರು ಯಾರು? ಈ ಪ್ರಶ್ನೆ ಹಾಕಿಕೊಳ್ಳುವುದೇ ಪುಸ್ತಕೋದ್ಯಮದ ಬಹುಮುಖ್ಯ ಸವಾಲಾಗಿದೆ. ಇದು ಸ್ಪಷ್ಟವಾಗಿ ಪುಸ್ತಕದ ಪ್ರಚಾರದ ಮಹತ್ವವನ್ನು ನಮಗೆ ಮನಗಾಣಿಸುತ್ತದೆ.
ಹಿಂದಿನ ತಲೆಮಾರಿನಲ್ಲಿ ಪುಸ್ತಕ ಪ್ರಚಾರದ ಅವಶ್ಯಕತೆ ಅಷ್ಟಾಗಿ ಇರಲಿಲ್ಲ. ಆದ್ದರಿಂದ ಹಿಂದಿನ ಲೇಖಕರು ಮತ್ತು ಪ್ರಕಾಶಕರು ಪುಸ್ತಕದ ಪ್ರಚಾರವನ್ನು ತುಸು ಸಂಕೋಚದ ಸಂಗತಿಯಾಗಿಯೇ ಕಂಡಿದ್ದಾರೆ. ಲೇಖಕರಂತೂ ಅದರ ಸಹವಾಸಕ್ಕೇ ಹೋಗದಷ್ಟು ಮಡಿಯಲ್ಲಿ ದೂರ ನಿಲ್ಲುತ್ತಿದ್ದರು. ಅವರ ಅದೃಷ್ಟಕ್ಕೆ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಮಾಹಿತಿ ಮತ್ತು ವಿಮರ್ಶೆಗಳನ್ನು ಪ್ರಕಟಿಸುವಷ್ಟು ಸಾಹಿತ್ಯಪ್ರೀತಿಯನ್ನು ಮುದ್ರಣ ಮಾಧ್ಯಮಗಳು ತೋರುತ್ತಿದ್ದವು. ಅವರು ಸಂಕೋಚದ ಐಷಾರಾಮವನ್ನು ಅನುಭವಿಸಲು ಸಾಧ್ಯವಾಗುತ್ತಿತ್ತು. ಇಂದು ದುರಾದೃಷ್ಟವಷಾತ್ ಎಲ್ಲಾ ಪತ್ರಿಕೆಗಳೂ ಸಾಹಿತ್ಯದ ಮಾಹಿತಿಯ ಪ್ರಕಟಣೆಯಿಂದ ದೂರ ಸರಿಯುತ್ತಿವೆ. ಯಾರಿಗೂ ಅದು ವಾಣಿಜ್ಯದ ಸರಕಲ್ಲವಾದ್ದರಿಂದ ನಿರಾಕರಣೆಗೆ ಗುರಿಯಾಗಿದೆ. ಆದ್ದರಿಂದ ನಮ್ಮ ಪುಸ್ತಕಗಳ ಕುರಿತು ಪ್ರಕಾಶಕರೇ ಓದುಗರಿಗೆ ತಿಳಿಸಬೇಕಾದ ಅತೀವ ತುರ್ತು ಇದೆ. ಲೇಖಕರಿಗೆ ಸಂಕೋಚದ ಸಂಗತಿಯಾದರೂ ಪ್ರಚಾರದಲ್ಲಿ ಕೈಜೋಡಿಸಬೇಕಾಗುತ್ತದೆ. ತಮ್ಮ ಓದುಗರನ್ನು ಬೇರೆ ಬೇರೆ ಸಾಮಾಜಿಕ ಜಾಲತಾಣದ ಮೂಲಕ ತಲುಪಿ, ತಮ್ಮ ಹೊಸ ಪುಸ್ತಕದ ಪ್ರಕಟಣೆಯ ಬಗ್ಗೆ ತಿಳಿಸುವ ಜರೂರತ್ತು ಇಂದಿದೆ. ಇಲ್ಲವಾದರೆ ಕೃತಿಯೊಂದು ಎಲೆಮರೆಯ ಹಣ್ಣಾಗಿ ಕೊಳೆತು ಹೋಗುತ್ತದೆ. ಪ್ರಕಟಣಾ ಪೂರ್ವ ಮತ್ತು ಪ್ರಕಟಣಾ ನಂತರದ ಎರಡೂ ಪ್ರಚಾರಗಳೂ ವಿನೂತನವಾಗಿರಬೇಕು, ಸೂಕ್ತ ಓದುಗರನ್ನು ತಲುಪುವ ಉದ್ದೇಶ ಹೊಂದಿರಬೇಕು ಮತ್ತು ಕಡಿಮೆ ಖರ್ಚಿನಲ್ಲಿ ಆಗುವಂತಾಗಬೇಕು.
ಪುಸ್ತಕ ಪ್ರಕಟಣೆ ಸುಲಭವಾಗಿರುವುದರಿಂದ ಓದುಗರು ತಾವೇ ಪ್ರಕಾಶಕರಾಗಿ ತಮ್ಮ ಪುಸ್ತಕ ಮಾರಾಟ ಮಾಡುವ ಸಾಹಸಕ್ಕೆ ಹೊರಡುತ್ತಿದ್ದಾರೆ. ಹಲವಾರು ಲೇಖಕರು ಇದರಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಹೆಜ್ಜೆ ಮುಂದಿಟ್ಟು ಬೆಳೆದಿದ್ದಾರೆ. ನಮ್ಮ ಕಣ್ಣ ಮುಂದೆಯೇ ಇಂತಹ ಸಾಕಷ್ಟು ಉದಾಹರಣೆಗಳು ಇವೆ. ಇದೊಂದು ರೀತಿಯಲ್ಲಿ ಸ್ವಾಗತಿಸಬೇಕಾದ ಸಂಗತಿಯೇ ಆಗಿದೆ. ಅಂದರೆ ಈಗಿರುವ ಪ್ರಕಾಶಕರಿಗೆ ಉತ್ತಮ ಲೇಖಕರನ್ನು ಸುಲಭವಾಗಿ ಗಳಿಸಲು ಸಾಧ್ಯವಾಗದ ಪರಿಸ್ಥಿತಿಗೆ ಇದು ಒಡ್ಡುವ ಸಾಧ್ಯತೆ ಇದೆ. ಈಗಾಗಲೇ ವ್ಯವಸ್ಥಾಪಿತ ಪ್ರಕಾಶನಗಳ ಬಳಿ ಯಾವ ಕಾರಣಕ್ಕೆ ಅವರು ಬರಬೇಕು? ಸರಿಯಾದ ಗೌರವಧನ, ಗೌರವ ಪ್ರತಿ, ಲೆಕ್ಕಾಚಾರ - ಒಂದೂ ಕೊಡದೇ ಹೋದರೆ ಇರುವ ಲೇಖಕರನ್ನೂ ಕಳೆದುಕೊಳ್ಳುವ ಸ್ಥಿತಿಗೆ ತಲುಪುವ ಅವಸ್ಥೆ ಪ್ರಕಾಶಕರಾಗುತ್ತದೆ. ದೂರದೃಷ್ಟಿ ಇರುವ ಪ್ರಕಾಶಕರೆಲ್ಲಾ ಇದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ.
ಇಷ್ಟೆಲ್ಲದರ ಮಧ್ಯೆ ತಂತ್ರಜ್ಞಾನ ಮತ್ತೊಂದು ಹಂತ ಮೇಲಕ್ಕೆ ಹೋಗಿ ಕೃತಕ ಬುದ್ಧಿಮತ್ತೆಯ ಯಂತ್ರಗಳು ಚಲಾವಣೆಗೆ ಬರುತ್ತಿವೆ. ಇವುಗಳು ಅದೇನೇನು ಬದಲಾವಣೆಗಳನ್ನು ತರುತ್ತವೆಯೋ ಇನ್ನೂ ಊಹೆಯಲ್ಲಿಯೇ ಇದೆ. ಸದ್ಯಕ್ಕೆ ಇಂಗ್ಲೀಷ್ ಜಗತ್ತು ಆ ಅಪಾಯವನ್ನು ಎದುರಿಸುತ್ತಿದೆ. ಕನ್ನಡಕ್ಕೆ ಆ ಸವಾಲುಗಳು ಬರಲು ಹೆಚ್ಚು ದಿನ ಬೇಕಾಗುವುದಿಲ್ಲ. ಈಗಾಗಲೇ ಅವು ಲೇಖಕರಿಗೆ ಸಮಾನವಾಗಿ ಅಥವಾ ಅವರಿಗಿಂತಲೂ ನಿಪುಣವಾಗಿ ಪುಸ್ತಕಗಳನ್ನು ಬರೆಯಲು ತೊಡಗಿವೆ. ಸಂಪಾದನೆ ಮಾಡುತ್ತವೆ, ಮುಖಪುಟ ಮಾಡುತ್ತವೆ, ತಪ್ಪು-ತಿದ್ದುತ್ತವೆ, ಕ್ಷಣಾರ್ಧದಲ್ಲಿ ಪುಸ್ತಕದ ರೂಪ ಬದಲಾಯಿಸುತ್ತವೆ. ಇಷ್ಟೆಲ್ಲಾ ಮಾಡುವ ಕೃತಕ ಬುದ್ಧಿಮತ್ತೆ ಪ್ರಕಾಶಕನಾಗಿ ಸಹಾಯ ಮಾಡಲು ಸಿದ್ಧವಾಗಬಹುದು. ಇದನ್ನು ನಮ್ಮ ಪ್ರಕಾಶಕರು ಹೇಗೆ ಸ್ವೀಕರಿಸಬೇಕು? ಬೆಂಕಿಯಂತಹ ಈ ತಂತ್ರಜ್ಞಾನವನ್ನು ಕೈಸುಟ್ಟುಕೊಳ್ಳದೆ ನಮಗೆ ಬೆಳಕಾಗಿ ಬಳಸಿಕೊಳ್ಳುವುದು ಹೇಗೆ? ಇದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ಹಿಂದೆ ಭೂತಾಕಾರವಾಗಿ ಬಂದ ತಂತ್ರಜ್ಞಾನದ ಇತರ ಆವೃತ್ತಿಗಳಾದ ಇಬುಕ್, ಆಡಿಯೋ ಬುಕ್ಗಳನ್ನು ಕನ್ನಡದ ಓದುಗರು ಅಷ್ಟಾಗಿ ಸ್ವೀಕರಿಸಲಿಲ್ಲ. ಇದೂ ಹಾಗೇ ಕಣ್ಮರೆಗೆ ಸರಿಯುತ್ತದೆಯೆ ಅಥವಾ ಇದರ ವರಸೆ ಬೇರೆಯಾಗಿದೆಯೆ? ಏನೇ ಇರಲಿ, ಪ್ರಕಾಶಕರು ಹೊಸತಕ್ಕೆ ಸಿದ್ಧವಾಗಿರುವ ಅವಶ್ಯಕತೆ ಇದೆ. ಬದಲಾವಣೆಗೆ ಹಿಂಜರಿಯುವ ಎಲ್ಲಾ ಬಗೆಯ ಲೇಖಕರು ಮತ್ತು ಪ್ರಕಾಶಕರು ಕಾಲಾನುಕ್ರಮಣದಲ್ಲಿ ಹಿನ್ನೆಲೆಗೆ ಸರಿಯುತ್ತಾರೆ.
ಕೃತಕಬುದ್ಧಿಮತ್ತೆ ತಂತ್ರಾಂಶವು ಅನುವಾದದ ಕೆಲಸವನ್ನು ಶರವೇಗದಲ್ಲಿ ಕಲಿತುಕೊಳ್ಳುತ್ತಿದೆ. ಕನ್ನಡದಲ್ಲಿ ಆ ಮಟ್ಟದ ಯಶಸ್ಸು ಅದಕ್ಕಿನ್ನೂ ದಕ್ಕಿಲ್ಲ. ಆದರೆ ಬೇರೆ ಯೂರೋಪಿಯನ್ ಭಾಷೆಗಳಲ್ಲಿ ಇದು ಶೇಕಡಾ 95 ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಯಶಸ್ಸು ಭಾರತೀಯ ಭಾಷೆಗಳಿಗೆ ಹಬ್ಬಲು ಹೆಚ್ಚು ದಿನ ಬೇಕಾಗುವುದಿಲ್ಲ. ಇದರಿಂದಾಗಿ ಭಾಷೆಯ ಗಡಿಗಳು ಅಳಿಸಿ ಹೋಗುತ್ತವೆಯೇನೋ ಎಂಬ ಅನುಮಾನವನ್ನು ಎಐ ತಂತ್ರಜ್ಞರು ವ್ಯಕ್ತ ಪಡಿಸುತ್ತಿದ್ದಾರೆ. ನಿಮಗೆ ಬೇಕಾದ ಭಾಷೆಯಲ್ಲಿ ಪುಸ್ತಕವನ್ನು ಖರೀದಿಸಬಹುದು. ಆಗ ಇಡೀ ಪ್ರಪಂಚದ ಪುಸ್ತಕೋದ್ಯಮವೇ ಕನ್ನಡಕ್ಕೆ ಎದುರಾಳಿಯಾಗುತ್ತದೆ. ಅಂದರೆ ಡಬ್ಬಿಂಗ್ನಿಂದ ಕನ್ನಡ ಸಿನಿಮಾರಂಗ ಎದುರಿಸುತ್ತಿರುವ ಸಮಸ್ಯೆಯನ್ನು ನಾವೂ ಎದುರಿಸಬೇಕಾಗುತ್ತದೆ. ಯೋಗ್ಯ ಕನ್ನಡ ಲೇಖಕರಿಗೆ ಇದು ವರದಾನವೂ ಆಗಬಹುದು. ಆದರೆ ಬಹುತೇಕ ಹೊಸ ಲೇಖಕರು, ವಿಭಿನ್ನ ಬರವಣಿಗೆಯುಳ್ಳವರು ಈ ಗಲಾಟೆಯಲ್ಲಿ ಸರಿದು ಹೋಗುತ್ತಾರೆಯೆ ಎನ್ನುವುದು ಅನುಮಾನ. ಜೊತೆಗೆ ಎಐ ಓದುಗರ ರುಚಿಗೆ ತಕ್ಕಂತೆ ಒಂದೇ ಪುಸ್ತಕವನ್ನು ಬೇರೆ ಬೇರೆ ರೂಪದಲ್ಲಿ ಕೊಡಲು ಶಕ್ಯವಾಗಬಹುದು. ಅದನ್ನು ಎದುರಿಸುವುದು ಹೇಗೆ? ಕನ್ನಡದ ಬಹುತೇಕ ಪ್ರಕಾಶಕರು ಕಾಪಿರೈಟ್ ಉಲ್ಲಂಘನೆ ಮಾಡಿ ಅನುವಾದ ಮಾಡುತ್ತಾರೆ. ಇದು ಹೆಚ್ಚು ದಿನ ಉಳಿಯುವುದಿಲ್ಲ.
ಇವೆಲ್ಲಾ ಅಂತರಾಷ್ಟ್ರೀಯ ಸಮಸ್ಯೆಗಳ ಜೊತೆಗೆ ನಮಗೆ ಸ್ಥಳೀಯ ಪ್ರತ್ಯೇಕ ಸಮಸ್ಯೆಗಳು ಗೋಚರಿಸುತ್ತಿವೆ. ಗ್ರಂಥಾಲಯಗಳು ಪುಸ್ತಕ ಖರೀದಿಯತ್ತ ಆಸಕ್ತಿಯನ್ನು ತೋರಿಸುತ್ತಿಲ್ಲ. ಪುಸ್ತಕಗಳ ಪ್ರೋತ್ಸಾಹ ಓಟ್ ಬ್ಯಾಂಕ್ ವಿಸ್ತರಿಸುವುದಿಲ್ಲವಾದ್ದರಿಂದ ಯಾವ ಸರಕಾರಕ್ಕೂ ಅದರಲ್ಲಿ ಆಸಕ್ತಿ ಇಲ್ಲ. ಇನ್ನು ಮುಂದೆ ಗ್ರಂಥಾಲಯಗಳನ್ನೇ ನಂಬಿ ಪುಸ್ತಕ ಪ್ರಕಟಿಸುವ ಧೈರ್ಯವನ್ನು ಎಲ್ಲರೂ ತೋರಲು ಸಾಧ್ಯವಿಲ್ಲ. ಇದು ನೋವಿನ ಸಂಗತಿಯೂ ಆಗಿದೆ. ಏಕೆಂದರೆ ಸಾಕಷ್ಟು ಮಹತ್ವದ ಪುಸ್ತಕಗಳು ಓದುಗರ ಹೆಚ್ಚಿನ ಬೆಂಬಲವಿಲ್ಲದೆ ಪ್ರಕಟವಾಗಬೇಕಾಗುತ್ತದೆ. ಆಗ ಗ್ರಂಥಾಲಯದ ನೆರವು ಅಂತಹ ಪುಸ್ತಕಗಳ ಪ್ರಕಟಣೆಗೆ ಅನುಕೂಲ ಮಾಡಿಕೊಡುತ್ತದೆ. ಅದು ಈಗ ಹಿನ್ನೆಲೆಗೆ ಸರಿಯುತ್ತದೆ.
ಪುಸ್ತಕ ವಿತರಣೆಗೆ ಅಂಚೆ ಕಚೇರಿ ಸಾಕಷ್ಟು ನೆರವು ನೀಡುತ್ತಿತ್ತು. ಮುಖ್ಯವಾಗಿ ರಿಜಸ್ಟರ್ಡ್ ಪ್ರಿಂಟೆಡ್ ಬುಕ್ ಎಂಬ ವ್ಯವಸ್ಥೆಯ ಮೂಲಕ ನಾಡಿನ ಎಲ್ಲೆಡೆಗೂ ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಕಳುಹಿಸಲು ಸಾಧ್ಯವಾಗುತ್ತಿತ್ತು. ಈಗ ಆ ಸೌಕರ್ಯ ನಿಂತು ಹೋಗಿದೆ. ಈಗ ಅದೇ ಸೇವೆಗೆ ದುಪ್ಪಟ್ಟು ವೆಚ್ಚವನ್ನು ಪ್ರಕಾಶಕರು ಭರಿಸಬೇಕಾಗುತ್ತದೆ. ಈ ಹೊರೆಯನ್ನು ಯಾರು ಭರಿಸಬೇಕು? ಈಗಾಗಲೇ ಜಿಎಸ್ಟಿ ಸುಂಕ ಕಾಗದ, ಮುದ್ರಣ, ಗೌರವಧನ ಎಲ್ಲದಕ್ಕೂ ಅನ್ವಯಿಸುತ್ತಿದೆ. ಅದನ್ನು ಮರುಭೋಗಿಸಲೂ ಪ್ರಕಾಶಕರಿಗೆ ಸಾಧ್ಯವಿಲ್ಲ. ಏಕೆಂದರೆ ಪುಸ್ತಕಗಳಿಗೆ ಜಿಎಸ್ಟಿ ಇಲ್ಲ. ಇದು ಪ್ರಕಾಶಕರಿಗೆ ಕಂಟಕಪ್ರಾಯವಾಗಿದೆ.
ಸಾಂಪ್ರದಾಯಿಕವಾಗಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಕನ್ನಡ ಪ್ರಕಾಶಕರು, ಓದುಗರು, ಲೇಖಕರು ಇಷ್ಟಪಟ್ಟು ಮಾಡುವ ಸಮಾರಂಭ. ಆದರೆ ಇಂದು ಅದಕ್ಕೆ ಕನಿಷ್ಠ 50-60 ಸಾವಿರ ವೆಚ್ಚ ಭರಿಸಬೇಕಾಗುತ್ತದೆ. ಅಷ್ಟೊಂದು ದೊಡ್ಡ ಮೊತ್ತವನ್ನು ಲೇಖಕರೋ ಅಥವಾ ಯಾರೋ ದಾನಿಗಳು ಭರಿಸಿದರೆ ಮಾಡಬಹುದು. ಇಲ್ಲವಾದರೆ ಆ ವೆಚ್ಚವನ್ನು ಪ್ರಕಾಶರಿಂದ ಸರಿತೂಗಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ತನ್ನ ಆಕರ್ಷಣೆ ಕಳೆದುಕೊಳ್ಳುತ್ತದೆ. ಬೇರೆ ಪರ್ಯಾಯ ದಾರಿಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ.
ಇನ್ನು ಪುಸ್ತಕ ತಯಾರಿಸುವ ಸಾಫ್ಟ್ವೇರ್ಗಳು ವಿಪರೀತ ದುಬಾರಿಯಾಗಿವೆ. ಅವುಗಳನ್ನು ಕೊಂಡು ಬಳಸುವುದು ಕನ್ನಡ ಪ್ರಕಾಶಕರಿಗೆ ಕಷ್ಟ. ಆದ್ದರಿಂದ ಇಪ್ಪತ್ತು ವರ್ಷ ಹಿಂದಿದ್ದ ಸಾಫ್ಟ್ವೇರ್ಗಳನ್ನೇ ಬಳಸುತ್ತಿದ್ದಾರೆ. ಇದು ಪುಸ್ತಕೋದ್ಯಮ ಬೆಳೆಯಲು, ಒಂದು ಪ್ರಕಾಶನದಿಂದ ಮತ್ತೊಂದಕ್ಕೆ ಸಂವಹನ ನಡೆಸಲು, ಹೊಸ ಹೊಳಪನ್ನು ಪುಸ್ತಕಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಸರಕಾರದಿಂದಲೂ ಇದಕ್ಕೆ ಯಾವುದೇ ರೀತಿಯ ಸಹಾಯ ದಕ್ಕುತ್ತಿಲ್ಲ.
ಆದರೂ ಕನ್ನಡದಲ್ಲಿ ಸಾಕಷ್ಟು ಆಶಾದಾಯಕ ಬೆಳವಣಿಗೆಗಳು ಇತ್ತೀಚೆಗೆ ಕಂಡು ಬಂದಿವೆ. ಹೊಸ ಪುಸ್ತಕದಂಗಡಿಗಳು ಬೆಳಕು ಕಂಡಿವೆ. ಯುವಕರು ಕನ್ನಡ ಪುಸ್ತಕದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನವೆಂಬರ್ ತಿಂಗಳಲ್ಲಿ ನಡೆದ ಪುಸ್ತಕ ಸಂತೆ, ಉತ್ಸವ, ಜಾತ್ರೆಗಳು ನಿಜಕ್ಕೂ ಓದುಗರನ್ನು ಸೆಳೆದು ಪ್ರಕಾಶಕರಿಗೆ ಅನುಕೂಲ ಮಾಡಿಕೊಟ್ಟಿವೆ. ವರ್ಷದ ಆರಂಭದಲ್ಲಿ ಬುಕ್ಬ್ರಹ್ಮನವರು ಮಾಡಿದ ದಕ್ಷಿಣ ಭಾಷೆಗಳ ಸಾಹಿತ್ಯ ಸಮ್ಮಿಲನ ಫಲಪ್ರದವಾಗಿದ್ದು ನಮಗೆ ಭರವಸೆ ಕೊಟ್ಟಿವೆ. ಕನ್ನಡ ಸಂಚಯ ತಂಡವು ಏಕಪ್ರಕಾರವಾಗಿ ಕನ್ನಡದ ಮಹತ್ವದ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಸಂಗ್ರಹಿಸಿ, ಜನರಿಗೆ ಉಚಿತವಾಗಿ ತಲುಪಿಸುತ್ತಿದ್ದಾರೆ. ಇವೆಲ್ಲವೂ ನಾವು ಭವಿಷ್ಯವನ್ನು ಸಮಾಧಾನದಿಂದ ನಿರೀಕ್ಷಿಸುವಂತೆ ಮಾಡುತ್ತವೆ.
ಪುಸ್ತಕಗಳಲ್ಲಿ ಪ್ರೀತಿ, ಆಸಕ್ತಿ ಉಳ್ಳವರು ಮಾತ್ರ ಕನ್ನಡ ಪುಸ್ತಕೋದ್ಯಮವನ್ನು ಮುಂದುವರೆಸಿಕೊಂಡು ಹೋಗುವಂತಾಗಲಿ. ಅವರೇ ಅದರ ಶ್ರೀರಕ್ಷೆ. ಹಣ ಮಾಡುವ ಉದ್ದೇಶದವರು ಪುಸ್ತಕಗಳಿಗೆ ಒಳಿತು ಮಾಡಲಾರರು.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...
©2024 Book Brahma Private Limited.