Date: 22-05-2022
Location: ಬೆಂಗಳೂರು
"ಕೈದ ಕೊಡುವರಲ್ಲದೆ ಕಲಿತನವ ಕೊಡವರುಂಟೆ ಮಾರಯ್ಯಾ? ಹೆಣ್ಣ ಕೊಡವರಲ್ಲದೆ ಕೂಟಕ್ಕೊಳಗಾದವರುಂಟೆ ಮಾರಯ್ಯಾ?" ಎಂಬಂತಹ ಲಕ್ಕಮ್ಮನ ಪ್ರಶ್ನೆಗಳು ತುಂಬ ಮಹತ್ವದವುಗಳಾಗಿವೆ. ಪತಿ ಮರವೆಗೊಳಗಾದಾಗ, ಆತನನ್ನು ಎಚ್ಚರಿಸಿ ಸರಿದಾರಿಗೆ ತರುವ ಮಾದರಿಯನ್ನು ಇಲ್ಲಿ ಕಾಣಬಹುದಾಗಿದೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಶರಣೆ ಆಯ್ದಕ್ಕಿ ಲಕ್ಕಮ್ಮನ ಕುರಿತು ಬರೆದಿದ್ದಾರೆ.
ಆಯ್ದಕ್ಕಿ ಲಕ್ಕಮ್ಮನು, ಆಯ್ದಕ್ಕಿ ಮಾರಯ್ಯನ ಪತ್ನಿಯಾಗಿದ್ದು, ಈ ದಂಪತಿಗಳನ್ನು ಕುರಿತು, ನಡುಗನ್ನಡ ಕಾವ್ಯಕೃತಿಗಳಲ್ಲಿ, ಶೂನ್ಯಸಂಪಾದನೆಯಲ್ಲಿ ಆಧುನಿಕ ಸಾಹಿತ್ಯದಲ್ಲಿ ಹೆಳಲಾಗಿದೆ. ಶಾಂತಲಿಂಗ ದೇಶಿಕನ "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ", ಲಕ್ಕಣ್ಣ ದಂಡೇಶನ "ಶಿವತತ್ವ ಚಿಂತಾಮಣಿ", ಸಿದ್ದನಂಜೇಶನ "ಗುರುರಾಜ ಚಾರಿತ್ರ್ಯ", ಶಂಕರಲಿಂಗ ಕವಿಯ "ಪ್ರಸನ್ನ ಶಂಕರಲಿಂಗನ ರಗಳೆ" ಈ ಮೊದಲಾದ ಪುರಾಣಕಾವ್ಯಗಳಲ್ಲಿ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ದಂಪತಿಗಳ ಜೀವನವೃತ್ತಾಂಗಳಿವೆ. ಗುಮ್ಮಳಾಪುರದ ಸಿದ್ದಲಿಂಗಯತಿಗಳ ``ಶೂನ್ಯಸಂಪಾದನೆ'' ಮತ್ತು ಗೂಳೂರು ಸಿದ್ದವೀರಣ್ಣೊಡೆಯರ ``ಶೂನ್ಯಸಂಪಾದನೆಗಳಲ್ಲಿ'' ಈ ದಂಪತಿಗಳಿಗಾಗಿ ಒಂದು ಸಂಪಾದನೆಯನ್ನೇ ರಚಿಸಲಾಗಿದೆ. ಇನ್ನು ಆಧುನಿಕ ಸಾಹಿತ್ಯದ ನಾಟಕಗಳಲ್ಲಿ ಈ ದಂಪತಿಗಳ ಕಥಾವಸ್ತುವಿದೆ.
"ಬೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಕೃತಿಯಲ್ಲಿ ಈಕೆಯನ್ನು ಸದ್ಭಕ್ತನ ಸತಿ ಲಕ್ಕಮ್ಮನೆಂದು ಕರೆಯಲಾಗಿದೆ. ಜಂಗಮ ಭಕ್ತಿಯನ್ನು ಮಾಡುವುದಕ್ಕೆ ಇವರು ಆಯ್ದಕ್ಕಿ ಕಾಯಕ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಬೀದಿಯಲ್ಲಿ ಬಿದ್ದ ಅಕ್ಕಿಯನ್ನಾಯುವುದನ್ನು ನೋಡಿದ ಬಸವಣ್ಣನವರು, ಮರುದಿನ ಮೂಟೆಯಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸುತ್ತಾರೆ. ಆಗ ಮಾರಯ್ಯನು ಆ ಅಕ್ಕಿಯನ್ನು ಬಳಿದುಕೊಂಡು ಮೂಟೆ ಕಟ್ಟಿಕೊಂಡು ಬರುತ್ತಾನೆ. ಇದನ್ನು ಕಂಡ ಲಕ್ಕಮ್ಮ ಸಿಟ್ಟಿಗೆ ಬರುತ್ತಾಳೆ. ಭಕ್ತರಾದವರಿಗೆ ಆಸೆ-ರೋಷ ಸಲ್ಲದು ಈಸಕ್ಕಿಯಾಸೆ ನಿಮಗೇಕೆಂದು ಕೇಳುತ್ತಾಳೆ. ಈ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಎನ್ನುತ್ತಾಳೆ. ಆಗ ಮಾರಯ್ಯನು ತಾನು ತಂದ ಅಕ್ಕಿಯನ್ನು ಒಯ್ದ ಅವು ಎಲ್ಲಿದ್ದವೋ ಅಲ್ಲಿ ಹಾಕಿ ಬರುತ್ತಾನೆ.
"ಭಕ್ತರ್ಗೆ ಆಸೆ ರೋಷ ಸಲ್ಲದು ಈಸಕ್ಕಿಯಾಸೆ ನಿಮಗೇತಕ್ಕೆ? ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲದ ನೇಮವೆಂದು ಪುರುಷರಿಗೆ ಪೇಳಿ, ಒಪ್ಪಿಡಿಯಕ್ಕಿಯ ತೆಗೆದುಕೊಂಡು ಮಿಕ್ಕಕ್ಕಿಯನಲ್ಲಿ ಚೆಲ್ಲಿ ಬನ್ನಿ ಎನಲಾಗ, ಮಾರಯ್ಯನು ಅಕ್ಕಿಯನೊಯ್ದ ಚೆಲ್ಲಿ ಅನುಭವ ಮಂಟಪದಲ್ಲಿಗೆ ಪೋಗಿ" - (ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಪು-157) ಲಕ್ಕಮ್ಮನ ಕಾಯಕನಿಷ್ಠೆಯನ್ನು ಶಾಂತಲಿಂಗದೇಶಿಕನು ತನ್ನ ಈ ಕಾವ್ಯದಲ್ಲಿ ಸ್ಪಷ್ಟವಾಗಿ ಗುರುತಿಸಿದ್ದಾನೆ. ಲಕ್ಕಣ್ಣ ದಂಡೇಶನ "ಶಿವತತ್ವ ಚಿಂತಾಮಣಿ"ಯಲ್ಲಿ ಆಯ್ದಕ್ಕಿ ಮಾರಯ್ಯನ ಬಗೆಗೆ ಹೇಳಲಾಗಿದೆ. ಸಿದ್ಧನಂಜೇಶ ಕವಿಯ "ಗುರುರಾಜ ಚಾರಿತ್ರ''ದಲ್ಲಿ ಹೀಗೆ ಹೇಳಲಾಗಿದೆ.
"ಆಯ್ದಕ್ಕಿ ಮಾರಯ್ಯನೆಂಬ ಸಜ್ಜನನು ಶಿವಭಕ್ತರಾಗರಕ್ಕೆ ಹೋಗಿ ಶರಣೆಂದು ಬಿದ್ದಕ್ಕಿಗಳ ಸೆಲೆ ತುಂಬಲಾಯ್ದು ತಂದು" (ಗುರುರಾಜ ಚಾರಿತ್ರ) ಇಲ್ಲಿಯೂ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಶಂಕರಲಿಂಗ ಕವಿಯ "ಪ್ರಸನ್ನ ಶಂಕರಲಿಂಗನ ರಗಳೆಗಳು" ಎಂಬ ಕೃತಿಯಲ್ಲಿ ಆಯ್ದಕ್ಕಿ ಮಾರಯ್ಯನ ರಗಳೆಯೂ ಒಂದು. ಅಲ್ಲಿ ಇದೇ ಕಥೆಯನ್ನು ಹೇಳಿದ ಕವಿ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ದಂಪತಿಗಳ ದಾಸೋಹದಿಂದ ಸಂತೃಪ್ತರಾದ ಶರಣೆರಲ್ಲರೂ, ಈ ದಂಪತಿಗಳನ್ನು ಕೊಂಡಾಡುತ್ತಾರೆ. ಅದನ್ನು ಕವಿ ಹೀಗೆ ಹೇಳಿದ್ದಾನೆ.
"ಚೆಂದದಿಂ ಮಾರತಂದೆಯ ಮಹಿಮೆಯಂ ನುತಿಸಿ ವನಿತೆ ಲಖ್ಖಾದೇವಿಯರ ಭಕ್ತಿಯಿಂ ಹೊಗಳಿ ಜನನುತ ಪ್ರಮಥರಾನಂದರಸದೊಳು ನೆಗಳಿ ಮಗನೆ ಬಸವಣ್ಣ ಬಾ ಮಾರಿತಂದೆಯ ಭಕ್ತಿ ಅಗಣಿತಕ್ಕಗಣಿತ ಧರೆಗೆ ಜೀವನ್ಮುಕ್ತಿ. "
- ಆಯ್ದಕ್ಕಿ ಮಾರಯ್ಯನ ರಗಳೆ. (ಪು.77, ಸಂ. ಡಾ. ಸುಂಕಾಪುರ)
ನಡುಗನ್ನಡ ಕಾವ್ಯಗಳಲ್ಲಿ ಹೆಚ್ಚಾಗಿ ಈ ದಂಪತಿಗಳ ಕಾಯಕ ನಿಷ್ಠೆಯ ಪ್ರಸಂಗಗಳೇ ಮಹತ್ವದ ಸ್ಥಾನ ಪಡೆದಿವೆ. ಇವರ ವೈಯಕ್ತಿಕ ಜೀವನದ ಬಗೆಗೆ ಹೆಚ್ಚಿನ ಪ್ರಸ್ತಾಪಗಳಿಲ್ಲ. ಶೂನ್ಯಸಂಪಾದನೆಗಳಲ್ಲಿ ಈ ದಂಪತಿಗಳಿಗೆ ಸಂಬಂಧಿಸಿದಂತೆ ಒಂದು ಅಧ್ಯಾಯವೇ
ಇದೆ.
ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಶೂನ್ಯಸಂಪಾದನೆ ಕೃತಿಯಲ್ಲಿ, ಆಯ್ದಕ್ಕಿ ಮಾರಯ್ಯಗಳನ್ನು ಕುರಿತಂತೆ 12ನೇ ಅಧ್ಯಾಯವಿದೆ. ಇದರಲ್ಲಿ ಆಯ್ದಕ್ಕಿ ಲಕ್ಕಮ್ಮನ ಕಾಯಕ ನಿಷ್ಠೆಯನ್ನು ಪ್ರತಿಪಾದಿಸಲಾಗಿದೆ. ವಚನಗಳಲ್ಲಿ ಕಾಣಿಸುವ ಅಲ್ಲಮ ಪ್ರಭುವಿಗಿಂತ ಶೂನ್ಯಸಂಪಾದನೆಕಾರರು ಸೃಷ್ಟಿಸಿಕೊಂಡ ಪ್ರಭುದೇವ ಬೇರೆಯಾಗಿದ್ದಾನೆ. ಆಯ್ದಕ್ಕಿ ಮಾರಯ್ಯಗಳ ಅಧ್ಯಾಯದಲ್ಲಿ ಅಲ್ಲಮಪ್ರಭು ಮತ್ತು ಮಾರಯ್ಯನವರಲ್ಲಿ ಕಾಯಕಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತದೆ. ಕಾಯಕದಲ್ಲಿ ನಿರತನಾದಡೆ ಗುರುದರ್ಶನ, ಲಿಂಗಪೂಜೆ, ಜಂಗಮನ ಹಂಗು ಹರಿಯಬೇಕೆಂದು ಮಾರಯ್ಯ ಹೇಳಿದರೆ, "ಮಾಡಿಹೆ ಮಾಡಿಹೆನೆಂಬನ್ನಬರ ತನ್ನ ಅವಧಿಗೆ ಬಂದುದನರಿವ ಪರಿ ಇನ್ನೆಂತೊ?" ಎಂದು ಅಲ್ಲಮಪ್ರಭು ಹೇಳುತ್ತಾನೆ. ಈ ವಚನ ಅಲಮಪ್ರಭುಗಳ ಮೂಲ ವಚನದಲ್ಲಿ ಇಲ್ಲ. ಇಂತಹ ಕೆಲವು ಹೊಸ ವಚನಗಳನ್ನು ಶೂನ್ಯಸಂಪಾದನೆಕಾರರೇ ಸೃಷ್ಟಿಸಿಕೊಂಡಿದ್ದಾರೆ. 12ನೇ ಶತಮಾನದ ಆಶಯಗಳ ಉದ್ದೇಶವನ್ನು ಮರೆತ ಶೂನ್ಯ ಸಂಪಾದನೆಕಾರರು, 15ನೇ ಶತಮಾನದಲ್ಲಿ ಎಲ್ಲಕ್ಕಿಂತಲೂ ಆಧ್ಯಾತ್ಮ ಮುಖ್ಯ, ಪರಮುಖ್ಯವೆಂದು ಬಿಂಬಿಸಿದ್ದಾರೆ. ಶರಣರ ಪ್ರಮುಖ ಮೌಲ್ಯಗಳಾಗಿದ್ದ ಕಾಯಕ, ದಾಸೋಹ, ಸಮಾಜಿಕನ್ಯಾಯದಂತ ವಿಷಯಗಳು ಶೂನ್ಯಸಂಪಾದನೆಗಳಲ್ಲಿ ಕಾಣುವುದಿಲ್ಲ. ಆಯ್ದಕ್ಕಿ ಮಾರಯ್ಯಗಳ ಸಂಪಾದನೆಯಲ್ಲಿಯೂ ಇದೇ ಆಗಿದೆ. ಮಾರಯ್ಯ ದಂಪತಿಗಳು ಕಾಯಕಕ್ಕೆ ಮಹತ್ವ ನೀಡಿ "ಕಾಯಕವೇ ಕೈಲಾಸವೆಂದು" ಹೇಳಿದರೆ, ಅದಕ್ಕೆ ಪ್ರತಿಯಾಗಿ ಅಲ್ಲಮ ಪ್ರಭುದೇವನ ಮೂಲಕ ಕಾಯಕ ಮಾಡಿದೆನೆಂಬ ಅಹಂಭಾವಕ್ಕಿಂತ ಆಧ್ಯಾತ್ಮ ಸಾಧನೆ ಮಾಡಬೇಕೆಂದು ಬೋಧಿಸುತ್ತಾರೆ.
ಶೂನ್ಯಸಂಪಾದನೆಕಾರರು 12ನೇ ಶತಮಾನದ ಶರಣರ ಆಶಯಗಳಿಗೆ ಹೇಗೆ ಧಕ್ಕೆ ತಂದಿದ್ದಾರೆಂಬುದನ್ನು ಡಾ. ಸಬರದವರು ಆಧಾರಸಹಿತ ಸ್ಪಷ್ಟಪಡಿಸಿದ್ದಾರೆ. (ನೋಡಿ-`ಶೂನ್ಯಸಂಪಾದನೆ-ಪ್ರಸ್ತುತ ಸವಾಲುಗಳು'', ಕನ್ನಡ ವಿಶ್ವವಿದ್ಯಾಲಯ ಹಂಪಿ, 2007) ಶೂನ್ಯಸಂಪಾದನೆಯ ಈ ಅಧ್ಯಾಯದಲ್ಲಿ ಮಾರಯ್ಯಗಳ ಕಾಯಕದ ಬಗೆಗೆ ಹೀಗೆ ಹೇಳುತ್ತಾರೆ. "ಕಂಗಳ ಮುಂದಣ ಗೊತ್ತಹರಿದು, ಕಾವ್ಯದ ಮುಂದಣ ಚಿತ್ತವ ಹರಿದು, ಮಾಡಿದೆನೆಂಬ ಮಾಟಕೂಟದ ಚಿತ್ತನಿಂದಲ್ಲದೆ ಸ್ವಸ್ಥವಿಲ್ಲ. ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು ಆಯ್ದಕ್ಕಿ ಮಾರಯ್ಯ"
ಇದಕ್ಕೆ ಆಯ್ದಕ್ಕಿಯ ಮಾರಿತಂದೆಗಳು ಬಿನ್ನೈಸುವ ಪ್ರಸ್ತಾವದ ವಚನ "ಒಂದ ಬಿಟ್ಟು ಒಂದ ಕಂಡೆಹೆನೆಂದಡೆ, ಅದು ಕಾಣಬಾರದ ಬಯಲು, ಒಂದರಲ್ಲಿ ಸಲೆಸಂದು ಹಿಂಗದ ಭಾವ ನೆಲೆಗೊಂಡಲ್ಲಿ ಅಮರೇಶ್ವರಲಿಂಗವು ತಾನೆ" ಹೀಗೆ ಇವರಲ್ಲಿ ಕಯಕದ ಬಗೆಗೆ ಚರ್ಚೆ ನಡೆಯುತ್ತಿರುವಾಗ ಇದನ್ನು ಕಂಡ ಆಯ್ದಕ್ಕಿಲಕ್ಕಮ್ಮ ಪತಿಗೆ ನಿಜವಾದ ಮಾರ್ಗದರ್ಶನ ಮಾಡುತ್ತಾಳೆ.
"ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ" ಎಂದು ಪತಿಯನ್ನು ಕಾಯಕ ಮಾಡಲು ಕಳಿಸಿಕೊಡುತ್ತಾಳೆ. ಶೂನ್ಯಸಂಪಾದನೆಕಾರರು ಬಳಸಿಕೊಂಡ ವಚನಗಳಲ್ಲಿ ಅಲ್ಲಮಪ್ರಭುವಿನ ವಚನಗಳಿಗಿಂತ, ಲಕ್ಕಮ್ಮನ ವಚನಗಳೇ ಮಹತ್ವದ ವಚನಗಳಾಗಿ ಕಾಣಿಸುತ್ತವೆ. "ಇಂತು ಆಯ್ದಕ್ಕಿ ಮಾರಯ್ಯಗಳೂ ಆ ಮಾರಯ್ಯಗಳ ಸತಿಯೂ ಮಹಾನುಭಾವದಿಂದೋಲಾಡುತ್ತ, ಮತ್ತಂ ಮಾರಯ್ಯಗಳ ಸತಿ ತಮ್ಮ ಪತಿಯೊಡನೆ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳಿಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದೇವರುಗಳಿಗೆ ಅಮರೇಶ್ವರಲಿಂಗದ ಮನೆಯಲ್ಲಿ ಪದಾರ್ಥವಾಯಿತ್ತೆಂದು ವಿಭೂತಿಯ ಕಳುಹುವ ಪ್ರಸ್ತಾವದ ವಚನ" - (ಗೂಳೂರ ಸಿದ್ದವೀರಣ್ಣೊಡೆಯ ಶೂನ್ಯಸಂಪಾದನೆ, 1958)
ಹೀಗೆ ಗೂಳೂರ ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯಲ್ಲಿ ನಡೆದ ಚರ್ಚೆ ಗಮನಿಸುವಂತಿದೆ. ಒಬ್ಬಸಮಾನ್ಯ ಮಹಿಳೆಯಾಗಿದ್ದ ಆಯ್ದಕ್ಕಿ ಮಾರಯ್ಯನ ಪತ್ನಿ ಲಕ್ಕಮ್ಮ ತನ್ನ ಪತಿಯನ್ನು ಎಚ್ಚರಿಸಿದ್ದು ಮತ್ತ್ತು ಪ್ರಭು ಹೇಳಿದ ಮಾತಿಗೆ ಭಿನ್ನವಾಗಿ ಕಾಯಕ ನಿಷ್ಠೆಯ ಮಾತುಗಳನ್ನಾಡಿದ್ದು ಆಕೆಯ ವ್ಯಕ್ತಿತ್ವವೆಂತಹದೆಂಬುದು ಸ್ಪಷ್ಟವಾಗುತ್ತದೆ.
ಲಕ್ಕಮ್ಮನ ವಚನಗಳನ್ನೇ ಶೂನ್ಯಸಂಪಾದನೆಕಾರರು ಇಲ್ಲಿ ಬಳಸಿಕೊಂಡು, ನಡುನಡುವೆ ತಮ್ಮ ವಿಚಾರವನ್ನು ವ್ಯಕ್ತಪಡಿಸುತ್ತ ಹೋಗಿದ್ದಾರೆ. ಆದರೆ ಇಲ್ಲಿ ಬಂದಿರುವ ಪ್ರಭುವಿನ ವಚನಗಳು ಶೂನ್ಯಸಂಪಾದನೆಕಾರರ ಸೃಷ್ಟಿಯೇ ಆಗಿವೆ. ಆಧುನಿಕ ಸಾಹಿತ್ಯದಲ್ಲಿ ಜ.ಚ.ನಿಯವರ ``ಆಯ್ದಕ್ಕಿ ಮಾರಯ್ಯ'', ಎಸ್.ವಿ.ಪಾಟೀಲ ಗುಂಡೂರ ಅವರ "ಶರಣೆ ಆಯ್ದಕ್ಕಿ ಲಕ್ಕಮ್ಮ" ನಾಟಕಗಳು ಗಮನ ಸೆಳೆಯುತ್ತವೆ. ಜ.ಚ.ನಿ ಯವರ ನಾಟಕದಲ್ಲಿ ಏಳು ಅಂಕಗಳಿವೆ. ಈ ನಾಟಕದಲ್ಲಿ ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ, ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ ಮತ್ತು ಇತರ ಜಂಗಮರ ಪಾತ್ರಗಳಿವೆ. ಈ ನಾಟಕದಲ್ಲಿ ಶೂನ್ಯಸಂಪಾದನೆಗಳ ಪ್ರಭಾವವಿದೆ. ಲಾಂಛನಕ್ಕೆ ಶರಣೆಂಬೆ ಎಂಬ ಬಸವಣ್ಣನವರ ವಿಚಾರವನ್ನು ಮಾರಯ್ಯ ಒಪ್ಪುವುದಿಲ್ಲ. ವೇಷ ಹಾಕಿದಾಕ್ಷಣ, ಲಾಂಛನ ಧರಿಸಿದಾಕ್ಷಣ ಅವನು ಜಂಗಮನಾಗುವುದಾದರೆ, ದುರಾಚಾರಿಗಳು-ದುಷ್ಟರು ಈ ವೇಷಧರಿಸಿ ಬರಬಹುದಲ್ಲ ಎಂದು ಪ್ರಶ್ನಿಸುವ ಮಾರಯ್ಯನು, ಕಾಯಕ ಮಾಡುವವನೇ ನಿಜವಾದ ಜಂಗಮನಾಗುತ್ತಾನೆಂದು ತನ್ನ ವಿಚಾರವನ್ನು ಪ್ರತಿಪಾದಿಸುತ್ತಾನೆ.
ಕಾಯಕದಿಂದ ಬಂದ ದ್ರವ್ಯದಿಂದಲೇ ದಾಸೋಹ ಮಾಡಿ ಒಂದು ಲಕ್ಷ ತೊಂಬತ್ತಾರು ಜಂಗಮರಿಗೆ ಪ್ರಸಾದಕ್ಕೆ ಕರೆಯಬೇಕೆಂದು ಲಕ್ಕಮ್ಮ ನಿರ್ಧರಿಸುತ್ತಾಳೆ. ಆ ಪ್ರಕಾರ ಬಸವಣ್ಣನವರೊಂದಿಗೆ ಜಂಗಮರು ಬರುತ್ತಾರೆ. ಲಕ್ಕಮ್ಮ ಪ್ರಸಾದವ್ಯವಸ್ಥೆ ಮಾಡುತ್ತಾಳೆ. ಜಂಗಮರೆಲ್ಲ ಪ್ರಸಾದ ಸ್ವೀಕರಿಸಿ ತೃಪ್ತಿಯಾದ ನಂತರ, ಲಕ್ಕಮ್ಮನಿಗೆ ವ್ಯಾದಿ ಬಂದು ನರಳುತ್ತಾ ಮಲಗುತ್ತಾಳೆ. ಆಗ ಮಾರಯ್ಯ ದು:ಖಿತನಾಗುತ್ತಾನೆ. ಶರಣರ ದರ್ಶನ ಪಡೆದ ಲಕ್ಕಮ್ಮ ಲಿಂಗೈಕ್ಯಳಾಗುತ್ತಾಳೆ, ಇದನ್ನು ನೋಡಿ ದು:ಖಗೊಂಡ ಮಾರಯ್ಯ ತಾನು ತನ್ನ ಪತ್ನಿಯನ್ನು ಬಿಟ್ಟಿರಲಾರೆನೆಂದು ತಾನೂ ಲಿಂಗೈಕ್ಯನಾಗುತ್ತಾನೆ. ಇಲ್ಲಿಗೆ ನಾಟಕ ಮುಗಿಯುತ್ತದೆ.
ಎಸ್.ವಿ.ಪಾಟೀಲರ "ಶರಣೆ ಆಯ್ದಕ್ಕಿ ಲಕ್ಕಮ್ಮ" ನಾಟಕವು ಚಿಕ್ಕ ನಾಟಕವಾಗಿದೆ. ಎಂಟು ಚಿಕ್ಕ ಚಿಕ್ಕ ದೃಶ್ಯಗಳಿವೆ. ಮಾರಯ್ಯನು, ಬಸವಣ್ಣನ ಮಹಾಮನೆಯ ಮುಂದೆ ಬಿದ್ದಿದ್ದ ಅಕ್ಕಿಯ ಮೂಟೆಯನ್ನು ಹೊತ್ತು ತರುವುದನ್ನು ನೋಡಿ ಕೊಂಡೆಮಂಚಣ್ಣ ಮತ್ತು ಪಂಡಿತರಿಬ್ಬರೂ ಬಸವಣ್ಣನವರನ್ನು ಮತ್ತು ಅನುಭವ ಮಂಟಪವನ್ನು ವಿಡಂಬಿಸುತ್ತಾರೆ. ಚೆಲ್ಲಿದ ಅಕ್ಕಿಯನ್ನು ಆಯ್ದುಕೊಂಡು ಹೋಗಿ ಜಂಗಮರಿಗೆ ನೀಡುವುದು ಅದೆಂತಹ ಕಾಯಕ, ಅದೆಂತಹ ದಾಸೋಹವೆಂದು ಹೀಗಳೆಯುತ್ತಾರೆ.
ಇಲ್ಲಿ ಬರುವ ಅನುಭವ ಮಂಟಪದಲ್ಲಿ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಮುಂದೆ ಯಥಾವತ್ತಾಗಿ ಶೂನ್ಯಸಂಪಾದನೆಯಲ್ಲಿ ಬರುವ ಪ್ರಸಂಗಗಳೇ ಇಲ್ಲಿ ಬೇರೆ ಬೇರೆ ದೃಶ್ಯಗಳಾಗಿ ಪ್ರಕಟವಾಗಿವೆ. ಮಾರಯ್ಯ ಅಕ್ಕಿಮೂಟೆ ತರುವುದು, ಲಕ್ಕಮ್ಮ ಅದನ್ನು ಮರಳಿ ಕಳಿಸುವುದು. ಕಾಯಕ ನಿಷ್ಠೆಯೆಂದರೇನೆಂಬುದನ್ನು ಲಕ್ಕಮ್ಮ ತಿಳಿಸಿ ಹೇಳುವುದು, ಅದನ್ನು ಮಾರಯ್ಯ ಒಪ್ಪಿಕೊಳ್ಳುವುದು. ಕೊನೆಗೆ ಜಂಗಮ ದಾಸೋಹವನ್ನು ಈ ದಂಪತಿಗಳು ತಮ್ಮ ಮನೆಯಲ್ಲಿ ಮಾಡುವುದು ಈ ಎಲ್ಲ ಸಂಗತಿಗಳು ಈ ನಾಟಕದಲ್ಲಿವೆ. ಈ ಎರಡೂ ನಾಟಕಗಳಲ್ಲಿ ಹೊಸತನವಿರದಿದ್ದರೂ ಆಯ್ದಕ್ಕಿಲಕ್ಕಮ್ಮನ ಕಾಯಕನಿಷ್ಠೆಯನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವಲ್ಲಿ ನಾಟಕಗಳು ಯಶಸ್ವಿಯಾಗಿವೆ.
ಲಕ್ಕಮ್ಮನನ್ನು ಕುರಿತಾಗಿರುವ ಈ ಎಲ್ಲ ಆಕರಗಳನ್ನು ಗಮನಿಸಿದರೂ ಈಕೆಯ ಜೀವನಚರಿತ್ರೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಈ ಎಲ್ಲ ಆಕರಗಳನ್ನು ಕ್ರೋಢೀಕರಿಸಿ ಆಕೆಯ ಜೀವನ ವೃತ್ತಾಂತವನ್ನು ಹೀಗೆ ಹೇಳಬಹುದು. ಲಕ್ಕಮ್ಮ ಆಯ್ದಕ್ಕಿ ಮಾರಯ್ಯಗಳ ಪತ್ನಿಯಾಗಿದ್ದಳು. ಈ ದಂಪತಿಗಳು ಬಸವಾದಿ ಶರಣರನ್ನು ತಮ್ಮ ಮನೆಗೆ ಕರೆಸಿ ದಾಸೋಹ ಮಾಡಿರುವ ದಾಖಲೆಗಳಿರುವುದರಿಂದ ಇವರ ಕಾಲ ಸು.1160. ಇವರು ರಾಯಚೂರ ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರೇಶ್ವರ ಗ್ರಾಮದವರು. ಬಿದ್ದ ಅಕ್ಕಿಯನ್ನು ಆಯ್ದುಕೊಂಡು ಬಂದು ಸತ್ಯಶುದ್ಧ ಕಾಯಕದಿಂದ ದಾಸೋಹ ಮಾಡುತ್ತಿದ್ದರು. ಒಂದುದಿನ ಮರವೆಯಿಂದ ಮಾರಯ್ಯನವರು ಬಸವಣ್ಣನವರ ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಮೂಟೆಕಟ್ಟಿ ತಂದಾಗ ಲಕ್ಕಮ್ಮ ಪತಿಯನ್ನು ಪ್ರಶ್ನಿಸಿ, ಇದು ಸತ್ಯಶುದ್ಧ ಕಾಯಕವಾಗುವುದಿಲ್ಲ. ಈಸಕ್ಕಿಯಾಸೆ ನಿಮಗೇಕೆ? ಎಂದು ಮರಳಿ ಕಳಿಸುತ್ತಾಳೆ. ಮಾರಯ್ಯನೂ ಕೂಡ ಸತಿಯ ಮಾತನ್ನು ಮೀರದೆ ತಂದ ಅಕ್ಕಿಯನ್ನು ಮೊದಲಿದ್ದ ಸ್ಥಳದಲ್ಲಿ ಚೆಲ್ಲಿ ಬರುತ್ತಾನೆ. ಇವರು ಮಾಡಿದ ದಾಸೋಹವನ್ನು ಕಂಡು ಶರಣರು ಇವರನ್ನು ಪ್ರಶಂಸಿಸುತ್ತಾರೆ. ಹೀಗೆ ಕಾಯಕನಿಷ್ಠೆಯ ಶರಣರಾಗಿ ಈ ದಂಪತಿಗಳು ಬದುಕಿದರೆಂದು ತಿಳಿದು ಬರುತ್ತದೆ. "ಕಾಯಕವೇ ಕೈಲಾಸ"ವೆಂದು ಹೇಳಿದ ಮೊಟ್ಟಮೊದಲನೆಯ ಶರಣನೇ ಆಯ್ದಕ್ಕಿ ಮಾರಯ್ಯನಾಗಿದ್ದಾನೆ ಆತನನ್ನು ಸರಿದಾರಿಗೆ ತಂದು ಮುನ್ನಡೆಸಿದ ಮಹಾಶರಣೆ ಆಯ್ದಕ್ಕಿ ಲಕ್ಕಮ್ಮಳಾಗಿದ್ದಾಳೆ. "ಮಾರಯ್ಯ ಪ್ರಿಯ ಅಮರೇಶ್ವರಲಿಂಗ" ಅಂಕಿತದಲ್ಲಿ ಲಕ್ಕಮ್ಮ ವಚನಗಳನ್ನು ರಚಿಸಿದ್ದಾಳೆ.
25 ವಚನಗಳು ಪ್ರಕಟವಾಗಿವೆ. ಈ ದಂಪತಿಗಳು ಲಿಂಗಸೂರಿನ ಸಮೀಪವಿರುವ ಗುಡುಗುಂಟಿ ಗ್ರಾಮದ ಅಮರೇಶ್ವರದವರಾಗಿದ್ದು, ನಂತರದಲ್ಲಿ ಬಸವಣ್ಣನವರ ಹೆಸರು ಕೇಳಿ ಕಲ್ಯಾಣಕ್ಕೆ ಹೋಗಿರಬಹುದಾಗಿದೆ. ಗುಡಗುಂಟಿಯಲ್ಲಿ ಅಮರೇಶ್ವರ ದೇವಾಲಯದ ಸ್ಮಾರಕವಿದೆ. ಲಕ್ಕಮ್ಮನ ವಚನಗಳ ಅಧ್ಯಯನ ನಡೆದಿದೆ. ಡಾ.ಬಸವರಾಜ ಸಬರದವರ ಮಾರ್ಗದರ್ಶನದಲ್ಲಿ, ಡಾ.ಮೀನಾಕುಮಾರಿ ಪಾಟೀಲ ಅವರು ಸಂಶೋಧನೆ ಮಾಡಿ 2007ರಲ್ಲಿ "ಆಯ್ದಕ್ಕಿ ಮಾರಯ್ಯ ಲಕ್ಕಮ್ಮ" ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಹೆಚ್‍ಡಿ ಪದವಿ ಪಡೆದಿದ್ದಾರೆ. ಇನ್ನೂ ಕೆಲವು ಲೇಖನಗಳು ಆಯ್ದಕ್ಕಿ ಲಕ್ಕಮ್ಮನನ್ನು ಕುರಿತಂತೆ ಪ್ರಕಟವಾಗಿವೆ.
ಲಕ್ಕಮ್ಮನ ವಚನಗಳು ಕಾಯಕನಿಷ್ಠೆಯನ್ನು ಪ್ರತಿಪಾದಿಸುತ್ತವೆ. ಲಕ್ಕಮ್ಮನ ಸಮಯಪ್ರಜ್ಞೆ, ಕಾಯಕದ ಬದ್ಧತೆ, ನೇರನುಡಿ, ಆತ್ಮವಿಶ್ವಾಸ, ಅಚಲ ನಿಲುವು ಈ ಎಲ್ಲ ಸಂಗತಿಗಳನ್ನು ಆಕೆಯ ವಚನಗಳಲ್ಲಿ ಕಾಣಬಹುದಾಗಿದೆ. ಸ್ತ್ರೀಸಾಧ್ಯತೆಯ ಫಲವಾಗಿ ಆಕೆಯ ವಚನಗಳಿವೆ.
ಆಸೆಯೆಂಬುದು ಅರಸಂಗಿರುತ್ತದೆ, ಅದು ಶಿವಭಕ್ತರಿಗಿರುವುದಿಲ್ಲವೆಂಬ ಸ್ಪಷ್ಟಸಂದೇಶವನ್ನು ಆಕೆಯ ವಚನಗಳು ಸಾರುತ್ತವೆ. ಬಸವಣ್ಣನವರೇ ಪರೀಕ್ಷೆಯೊಡ್ಡಲಿ, ಯಾರೇ ಪರೀಕ್ಷಿಸಲಿ, ತಾನು ನಂಬಿದ ತತ್ವದ ಬಗೆಗೆ ಬದ್ಧತೆ ಇರಬೇಕೆಂದು ಹೇಳಿದ ಲಕ್ಕಮ್ಮ, ಇದು ಸಲ್ಲದ ಬೋನವಾಗಿದ್ದು, ಮರಳಿ ಒಯ್ದು ಈ ಅಕ್ಕಿಯನ್ನು ಸುರಿದುಬನ್ನಿಯೆಂದು ಸ್ಪಷ್ಟವಾಗಿ ಹೇಳುತ್ತಾಳೆ. ಹೀಗಾಗಿ ಲಕ್ಕಮ್ಮ ಇಂದು ಹೆಚ್ಚು ಪ್ರಸ್ತುತಳಾಗುತ್ತಾಳೆ. ಭಕ್ತರು ದಾಯಗಾರಿಕೆಯಲ್ಲಿ ತಂದು, ಲಾಭಕ್ಕಾಗಿ ದಾಸೋಹ ಮಾಡಬಾರದೆಂದು ತಿಳಿಸುತ್ತಾಳೆ. ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನ ಉಂಟೆ? ಎಂದು ಕೇಳುತ್ತಾಳೆ. ಭಕ್ತನಿಗೆ ಎರಡು ಮನಸ್ಸು ಇರಬಾರದು, ಆತ ಯಾವಾಗಲೂ ಒಮ್ಮನವನ್ನೊಳಗೊಂಡಿರಬೇಕೆಂದು ಹೇಳುತ್ತಾಳೆ. ಮನ ಶುದ್ಧವಿಲ್ಲದವನಿಗೆ ದ್ರವ್ಯದ ಬಡತನವೇ ಹೊರತು, ಚಿತ್ತಶುದ್ಧದಲ್ಲಿ ಕಾಯಕ ಮಾಡಿದರೆ, ಎತ್ತ ನೋಡಿದರತ್ತ ಲಕ್ಷ್ಮಿ ಇರುತ್ತಾಳೆಂದು ಹೇಳಿದ್ದಾಳೆ. ದಾಸೋಹ ಮಾಡದೆ, ಕೈಲಾಸದಾಸೆ ಕಾಣವುದು ವ್ಯರ್ಥವೆಂದು ತಿಳಿಸಿದ್ದಾಳೆ. ಮನುಷ್ಯನಿಗೆ ಮರೆವುಂಬುದು ಕಾಣಿಸಿಕೊಳ್ಳುತ್ತದೆ, ಆದರೆ ಅದನ್ನು ತನ್ನ ಅರಿವಿನಿಂದ ನಿವಾರಿಸಿಕೊಳ್ಳಬೇಕು, ಆಗ ಅರಿವೇ ಗುರುವಾಗುತ್ತದೆಂದು ಲಕ್ಕಮ್ಮ ಹೇಳಿದ್ದಾಳೆ.
"ಕೈದ ಕೊಡುವರಲ್ಲದೆ ಕಲಿತನವ ಕೊಡವರುಂಟೆ ಮಾರಯ್ಯಾ? ಹೆಣ್ಣ ಕೊಡವರಲ್ಲದೆ ಕೂಟಕ್ಕೊಳಗಾದವರುಂಟೆ ಮಾರಯ್ಯಾ?" ಎಂಬಂತಹ ಲಕ್ಕಮ್ಮನ ಪ್ರಶ್ನೆಗಳು ತುಂಬ ಮಹತ್ವದವುಗಳಾಗಿವೆ. ಪತಿ ಮರವೆಗೊಳಗಾದಾಗ, ಆತನನ್ನು ಎಚ್ಚರಿಸಿ ಸರಿದಾರಿಗೆ ತರುವ ಮಾದರಿಯನ್ನು ಇಲ್ಲಿ ಕಾಣಬಹುದಾಗಿದೆ. ಕೈದು ಎಂದರೆ ಆಯುಧ. ಯಾರಾದರೂ ಆಯುಧವನ್ನು ಕೊಡಬಹುದೇ ಹೊರತು ಕಲಿತನವನ್ನು ಕೊಡುವುದಿಲ್ಲವೆಂದು ಹೇಳಿದ ಲಕ್ಕಮ್ಮ" ಹೆಣ್ಣು ಕೊಡುವರಲ್ಲದೆ ಕೂಟಕ್ಕೊಳಗಾದವರುಂಟೆ ಮಾರಯ್ಯ?" ಎಂದು ಆಕೆ ಪತಿಯನ್ನು ಕೇಳುವ ಪ್ರಶ್ನೆ ಲೋಕಾನುಭವದ ಮಹತ್ವದ ಉದಾಹರಣೆಯಾಗಿದೆ.
"ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು,
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ" (ವ-12)
"ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣಬಂದಿತ್ತು
ಮಾಟವುಳ್ಳನ್ನಕ್ಕ ಮಹಾಪ್ರಮಥರ ಭಾಷೆಭಾಗ್ಯ ದೊರೆಕೊಂಡಿತ್ತು" (ವ-13)
"ಸಸಿಗೆ ನೀರೆರದಡೆ ಎಳಕುವುದಲ್ಲದೆ
ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಎಳಕುವುದೆ ಮಾರಯ್ಯ?" (ವ-25) "ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೇ?" (ವ-22)
ಆಯ್ದಕ್ಕಿಲಕ್ಕಮ್ಮನ ವಚನಗಳ ಇಂತಹ ನುಡಿಗಳು ಜೀವನಾನುಭವದಿಂದ ಹುಟ್ಟಿದವುಗಳಾಗಿವೆ. ಅನೇಕ ಗಾದೆಮಾತುಗಳು, ಪಡೆನುಡಿಗಳನ್ನೊಳಗೊಂಡಿರುವ ಈ ವಚನಗಳು ಎಂತಹವರನ್ನೂ ಜಾಗೃತಗೊಳಿಸುತ್ತವೆ. ಕಾಯಕನಿಷ್ಠೆಯ ಅದ್ವಿತೀಯ ಶರಣೆಯಾಗಿ ಲಕ್ಕಮ್ಮ ಕಾಣಿಸಿಕೊಂಡಿದ್ದಾಳೆ.
ವಿಜಯಶ್ರೀ ಸಬರದ
9845824834
ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...
"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...
"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...
©2024 Book Brahma Private Limited.