ಶಿವಶರಣೆ ಅಕ್ಕನಾಗಮ್ಮ

Date: 03-06-2022

Location: ಬೆಂಗಳೂರು


"ಅಕ್ಕನಾಗಮ್ಮನ ಪ್ರಸಾದವ ಕೊಂಡು ಎನ್ನ ಅಂತರಂಗ ಶುದ್ಧವಾಯಿತಯ್ಯ" ಎಂದು ಆಯ್ದಕ್ಕಿ ಲಕ್ಕಮ್ಮ ಹೇಳಿದರೆ, "ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮತಾಯೆ!" ಎಂದು ನೀಲಮ್ಮ ಸ್ಮರಿಸಿದ್ದಾಳೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಶರಣೆ ಅಕ್ಕನಾಗಮ್ಮನವರ ಬದುಕು ಬರಹಗಳ ಕುರಿತು ಬರೆದಿದ್ದಾರೆ.

ಅಕ್ಕನಾಗಮ್ಮನನ್ನು ನಾಗಮ್ಮ ಅಕ್ಕನಾಗಾಯಿ, ನಾಗಲಾಂಬಿಕೆಯೆಂದು ಕರೆಯಲಾಗಿದೆ. ಈಕೆ ಬಸವಣ್ಣನವರ ಅಕ್ಕನಾಗಿದ್ದು, ಚೆನ್ನಬಸವಣ್ಣನ ತಾಯಿಯಾಗಿದ್ದಾಳೆ. ಬಸವಣ್ಣನವರ ಪ್ರಾರಂಭದ ಜೀವನದಲ್ಲಿ ಅಕ್ಕನಾಗಮ್ಮ ಮಹತ್ವದ ಸ್ಥಾನ ವಹಿಸಿದರೆ, ಅವರ ಕೊನೆಯ ಬದುಕಿನ ಘಟ್ಟದಲ್ಲಿ ನೀಲಾಂಬಿಕೆ ಪ್ರಮುಖಪಾತ್ರ ವಹಿಸಿದ್ದಾಳೆ.

ಭೀಮಕವಿಯ "ಬಸವಪುರಾಣದಲ್ಲಿ" ಅಕ್ಕನಾಗಮ್ಮನ ಪ್ರಸ್ತಾಪವಿದೆ. ವಿರೂಪಾಕ್ಷ ಪಂಡಿತನ "ಚೆನ್ನಬಸವ ಪುರಾಣ"ದಲ್ಲಿ ಕಕ್ಕಯ್ಯನ ಪ್ರಸಾದದಿಂದ ಚೆನ್ನಬಸವಣ್ಣ ಹುಟ್ಟಿದನೆಂದು ಹೇಳಿದರೆ, "ಸಿಂಗಿರಾಜ ಪುರಾಣ"ದಲ್ಲಿ ಅಕ್ಕನಾಗಮ್ಮನ ಪತಿ ಶಿವದೇವ ಆಗಿದ್ದನೆಂದು ತಿಳಿಸಲಾಗಿದೆ. ಅದೇ ರೀತಿ "ದೇವರದಾಸಿಮಯ್ಯನ ಪುರಾಣವೂ" ಶಿವದೇವನ ಹೆಸರನ್ನೇ ಹೇಳುತ್ತದೆ. ವೀರಶೈವ ಪುರಾಣಗಳು ಡೋಹರಕಕ್ಕಯ್ಯನ ಪ್ರಸಾದದಿಂದ ಚೆನ್ನಬಸವಣ್ಣನು ಜನಿಸಿದನೆಂದು ಹೇಳಿದರೆ, "ಜನಪದ ಕಥನ ಕಾವ್ಯವು" ಶಿವದೇವನೇ ಅಕ್ಕನಾಗಮ್ಮನ ಗಂಡನಾಗಿದ್ದನೆಂದು ಸ್ಪಷ್ಟಪಡಿಸುತ್ತದೆ. ಬಸವಣ್ಣನು ಬಲದೇವನ ಮಗಳು ಗಂಗಾಂಬಿಕೆಯೊಂದಿಗೆ ಮದುವೆಯಾದಾಗ ಅಕ್ಕನಾಗಮ್ಮನ ಗಂಡ ಶಿವಸ್ವಾಮಿಯೂ ಇದ್ದನೆಂದು "ಸಿಂಗಿರಾಜ ಪುರಾಣ" ಹೇಳುತ್ತದೆ. ಶಿವಗಣಪ್ರಸಾದಿ ಮಹಾದೇವಯ್ಯನ "ಶೂನ್ಯಸಂಪಾದನೆಯಲ್ಲಿ" ಮತ್ತು ಭೀಮಕವಿಯ "ಬಸವಪುರಾಣ"ದಲ್ಲಿ ಈಕೆಯನ್ನು ಬಸವಣ್ಣನನವರ ತಂಗಿಯೆಂದು ಹೇಳಲಾಗಿದೆ. ಆದರೆ ಲಕ್ಕಣ್ಣ ದಂಡೇಶ ಮತ್ತು ಸಿಂಗಿರಾಜ ಕವಿಗಳು ಈಕೆ ಬಸವಣ್ಣನವರ ಅಕ್ಕ ಆಗಿದ್ದಳೆಂದು ಹೇಳಿದ್ದಾರೆ. ಅಕ್ಕನಾಗಮ್ಮನ ಸಮಕಾಲೀನ ಶರಣರು ಈಕೆಯನ್ನು ಕೊಂಡಾಡಿದ್ದಾರೆ.

"ಅಕ್ಕನಾಗಮ್ಮನ ಪ್ರಸಾದವ ಕೊಂಡು ಎನ್ನ ಅಂತರಂಗ ಶುದ್ಧವಾಯಿತಯ್ಯ" ಎಂದು ಆಯ್ದಕ್ಕಿಲಕ್ಕಮ್ಮ ಹೇಳಿದರೆ, "ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮತಾಯೆ!" ಎಂದು ನೀಲಮ್ಮ ಸ್ಮರಿಸಿದ್ದಾಳೆ. "ಎನ್ನ ಮುದ್ದಾಡಿಸಿದರಯ್ಯ ಅಕ್ಕನಾಗಮ್ಮನವರು" ಎಂದು ಕೋಲಶಾಂತಯ್ಯ ಹೇಳಿದರೆ, "ನನ್ನವ್ವೆ ನಾಗಾಯಿ" ಎಂದು ಮರುಳ ಶಂಕರದೇವರು ಕೊಂಡಾಡಿದ್ದಾರೆ. ಹೀಗೆ ಅನೇಕ ವಚನಕಾರರು ಅಕ್ಕನಾಗಮ್ಮನನ್ನು ಸ್ಮರಿಸಿಕೊಂಡಿದ್ದಾರೆ.

ಕೆಲವು ಜನಪದ ಹಾಡುಗಳಲ್ಲಿ ಅಕ್ಕನಾಗಮ್ಮನ ಪ್ರಸ್ತಾಪವಿದೆ. ನಡುಗನ್ನಡ ಪುರಾಣ ಕಾವ್ಯಗಳಲ್ಲಿ ಅಕ್ಕನಾಗಮ್ಮನ ಗಂಡನ ಬಗೆಗೆ ಬೇರೆ ಬೇರೆ ಅಭಿಪ್ರಾಯಗಳಿರುವಂತೆ, ಜನಪದ ಕಾವ್ಯಕೃತಿಗಳಲ್ಲಿಯೂ ಭಿನ್ನ ಅಭಿಪ್ರಾಯಗಳಿವೆ. "ಜನಪದ ಬಸವ ಪುರಾಣ", "ಕನ್ನಡ ವೃತ್ತಿಗಾಯಕರ ಕಾವ್ಯಗಳು", "ಚಿಕ್ಕದಣ್ಣಾಯಕ ಚೆನ್ನಬಸವಣ್ಣ", "ಐದು ಜನಪದ ಕಥನ ಗೀತೆಗಳು", "ಬೀದರ್ ಜಿಲ್ಲೆಯ ಬುಲಾಯಿ ಹಾಡುಗಳು", ಈ ಎಲ್ಲ ಜನಪದ ಹಾಡುಗಳ ಸಂಗ್ರಹಗಳಲ್ಲಿ ಕಕ್ಕಯ್ಯನ ಪ್ರಸಾದ ಸೇವನೆಯಿಂದ ಅಕ್ಕನಾಗಮ್ಮ ಗರ್ಭವತಿಯಾದಳೆಂದು ಹೇಳಲಾಗಿದೆ. ಇವುಗಳಿಗೆ ಭಿನ್ನವಾಗಿರುವ ಕಥನಕಾವ್ಯವೊಂದು, ಕಲಬುರಗಿಯ "ಅರಿವು ಆಚಾರ" ಪತ್ರಿಕೆಯಲ್ಲಿ 2001ರಲ್ಲಿ ಪ್ರಕಟವಾಗಿದೆ. (ನೋಡಿ- ಸಂಪುಟ-1, ಸಂಚಿಕೆ-4, ಸಂಗ್ರಹ - ಡಾ.ವೀರಣ್ಣ ದಂಡೆ) ಈ ಜನಪದ ಹಾಡು ಚೆನ್ನಬಸವಣ್ಣನ ಜನನ ವೃತ್ತಾಂತದ ಕಾರಣದಿಂದ ತುಂಬ ಮಹತ್ವ ಪಡೆದಿದೆ. ಈ ಹಾಡನ್ನು ಆಧಾರವಾಗಿಟ್ಟುಕೊಂಡು "ಜನಪದ ಕಾವ್ಯದಲ್ಲಿ ಚೆನ್ನಬಸವಣ್ಣನ ಜನನ ವೃತ್ತಾಂತ" ಎಂಬ ಸಂಶೋಧನಾ ಲೇಖನವನ್ನು ಡಾ.ಬಸವರಾಜ ಸಬರದ ಅವರು ಬರೆದಿದ್ದಾರೆ. ಈ ಲೇಖನವು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ "ಜಾನಪದ ಕರ್ನಾಟಕ" ಪತ್ರಿಕೆಯಲ್ಲಿ ಪ್ರಕಟವಾಗಿದೆ. (ವಿವರಗಳಿಗೆ ನೋಡಿ - "ಜಾನಪದ ಕರ್ನಾಟಕ" ಸಂಪುಟ-5, ಸಂಚಿಕೆ-1, ಜನೇವರಿ 2006, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ. ಲೇ. ಡಾ. ಬಸವರಾಜ ಸಬರದ)

"ಈ ಎಲ್ಲ ಕಥೆ ಇಂಗಳೇಶ್ವರದಲ್ಲಿಯೇ ನಡೆಯುತ್ತದೆ. ಮಾದಲಾಂಬಿಕೆಯ ತವರುಮನೆ ಇಂಗಳೇಶ್ವರವಾಗಿತ್ತೆಂಬುದು ಸ್ಪಷ್ಟವಾಗಿದೆ. ಈ ಹಾಡಿನಲ್ಲಿ ಪ್ರಸ್ತಾಪಿಸಲ್ಪಟ್ಟ ಶೆಟ್ಟಿಸಾಹುಕಾರ ಮಾದಲಾಂಬಿಕೆಯ ಸೋದರನೇ ಆಗಿದ್ದಾನೆ. ಈ ಸಾಹುಕಾರ ತನ್ನ ಮಗ ಶಿವದೇವನಿಗೆ ಅಕ್ಕನ ಮಗಳಾದ ನಾಗಮ್ಮನನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳಲು ಇಚ್ಛಿಸುತ್ತಾನೆ. ಆ ಸಾಹುಕಾರ ದೇವರಸನೇ ಆಗಿದ್ದಾನೆ ಎಂದು ಹೇಳಿರುವ ಡಾ.ಸಬರದವರು, ಈ ಲೇಖನದ ಮೂಲಕ ಅಕ್ಕನಾಗಮ್ಮನ ಗಂಡ ಶಿವದೇವನೆಂದು ಸ್ಪಷ್ಟಪಡಿಸಿದ್ದಾರೆ.

ಶಿವದೇವ-ಅಕ್ಕನಾಗಮ್ಮ ಇವರ ಮದುವೆ ನಿಶ್ಚಯವಾಗುತ್ತದೆ. ಮದುವೆ ನಡೆದಿದೆ, ಜನರೆಲ್ಲ ಅಕ್ಷತೆ ಹಾಕಿದ್ದಾರೆ. ಮದುಮಕ್ಕಳು ಮದುವೆ ಮಂಟಪದಲ್ಲಿರುವಾಗಲೇ "ತಾಯಿಸೀರೆ"ಯ ಸಲುವಾಗಿ ಜಗಳವಾಗುತ್ತದೆ.

"ಬೀಗರು ಬೀಗರು ಹೆಂತ ಬುದ್ಧಿವಂತರು
ಕದನ ಹೂಡ್ಯಾರೆ ಕೆಡಗಾಲ ದೇವ
ಕದನ ಹೂಡ್ಯಾರೆ ಬೀಗರು ಅಕ್ಕನಾಗಮ್ಮನ ತಾಯಿಸೀರಿ ಮನಸಿಗಿಲ್ಲ ದೇವ||
ಹೆಣ್ಣ ಕೊಟ್ಟಿದನಂತ ಹಮ್ಮಿಲಿ ಮಾತಾಡಬ್ಯಾಡ
ಹಿಂತವೇಸು ಹೆಣ್ಣ ತರಲೆಂದ ದೇವ ರೊಕ್ಕಕೊಟ್ಟೀದನಂತ ಸೊಕ್ಕಿಲಿ ಮಾತಾಡಲಿಬ್ಯಾಡ
ಹಿಂತವೇಸು ರೊಕ್ಕ ತರಲೆಂದ ದೇವ||

ಹಿಂತವೇಸು ರೊಕ್ಕ ತರಲೆಂದ ಸಾವಕಾರ ಇದ್ದಾಳ ಮಗಳು ಮನಿಯಾಗ ದೇವ ಸಿಟ್ಟಿನ ಸಾವಕಾರ ಕೆಟ್ಟಮಾತ ಆಡ್ಯಾನ ಕಟ್ಟಿದ ಕರಿಮಣಿ ಕಡಿರೆಂದ ದೇವ||"
- "ಅರಿವು-ಆಚಾರ" ಪತ್ರಿಕೆ, ಕಲಬುರಗಿ (ಪುಟ-20, 2001)
ಈ ಕಥನಕಾವ್ಯವನ್ನು ಗಮನಿಸಿದಾಗ, ಇದು ಅಕ್ಕನಾಗಮ್ಮನ ಬದುಕಿಗೆ ಸಮೀಪವೆನಿಸಬಹುದಾದ ಆಕರವಾಗಿದೆ. ತಾಯಿಸೀರಿಗಾಗಿ ಮದುವೆಯಲ್ಲಿ ಇಂದಿಗೂ ಜಗಳವಾಗಿ, ಮದುವೆಗಳು ಮುರಿದುಕೊಂಡು ಹೋಗುತ್ತವೆ. ಅಕ್ಕನಾಗಮ್ಮನ ಮದುವೆಯಲ್ಲಿ ನಡೆದದ್ದೂ ಇದೇ ಆಗಿದೆ. ತಾಯಿಸೀರಿಗಾಗಿ ಬೀಗರು ಬೀಗರಲ್ಲಿ ಜಗಳವಾಗಿ ಅಕ್ಕನಾಗಮ್ಮನನ್ನು ತವರುಮನೆಗೆ ಕರೆದೊಯ್ಯುತ್ತಾರೆ. ಇದು ಬಾಲ್ಯವಿವಾಹ ವಾಗಿತ್ತೆಂದು ತಿಳಿಯಲಿಕ್ಕೆ ಪಠ್ಯದಲ್ಲಿ ಕಾರಣಗಳಿವೆ. ಮದುವೆಯಾಗಿ 12 ವರ್ಷಗಳ ನಂತರ ನಾಗಮ್ಮ ದೊಡ್ಡವಳಾಗುತ್ತಾಳೆ. ಅದೇ ಊರಿನವನಾದ ಶಿವದೇವನು ದಿನಾ ನೀರು ತರಲೆಂದು ಅದೇ ಓಣಿಯಲ್ಲಿ ಹಾಯ್ದು ಹೋಗುತ್ತಿರುತ್ತಾನೆ. ಒಂದು ದಿನ ಶಿವದೇವ ನೀರು ತರಲೆಂದು ಬಂದಾಗ, ನಾಗಮ್ಮನನ್ನು ನೋಡುತ್ತಾನೆ. ಸತಿ ನಾಗಮ್ಮ ಮನೆಗೆ ಬಂದು ಹೋಗಲು ಹೇಳುತ್ತಾಳೆ, ತಂದೆ ತಾಯಿಗೆ ಸುದ್ಧಿ ತಿಳಿಸುತ್ತಾಳೆ. ಬೆಳೆದ ಮಗಳನ್ನು ಮನೆಯಲ್ಲಿಟ್ಟುಕೊಂಡು ಎಷ್ಟು ದಿನ ಕೂಡುವದೆಂದು ತಂದೆ-ತಾಯಿ ಚಿಂತಿತರಾಗಿದ್ದಾಗ, ನಾಗಮ್ಮ ಹೇಳಿದ ವಿಚಾರ ಅವರಿಗೆ ಸರಿಯೆನಿಸುತ್ತದೆ. ಮಗಳನ್ನು ಉಡಿತುಂಬಿ ಕಳಿಸಬೇಕೆಂದರೆ ಬೀಗರು ಒಪ್ಪುವುದಿಲ್ಲ. ಆದುದರಿಂದ ಕದ್ದುಡಿ ತುಂಬಿಸಿ, ತಮ್ಮ ಮನೆಯಲ್ಲಿಯೇ ಸೋಬಾನ ಕಾರ್ಯವನ್ನು ಮುಗಿಸುತ್ತಾರೆ.

"ಅಳಿಯ ಬಂದಾನ ರಾತ್ರಿಯಾಳಿ, ಬೀಗರು ಓಸು ಬಾಗಿಲು ಮುಚ್ಚಿ ನಾಕು ಕಿಡಕಿಯ ಮುಚ್ಚಿ ಕದ್ದುಡಿ ತುಂಬಿ ಕೊಟ್ಟಿದಾರ ಅಕ್ಕನಾಗಮ್ಮನ ನಡುಮನಿ ಸೆಳಮಂಚ ಎಳದಾರ ದೇವ"
- "ಅರಿವು ಆಚಾರ" ಪತ್ರಿಕೆ, ಪು.21

ಹೀಗೆ ಕದ್ದು ಸೋಬಾನ ಕಾರ್ಯವಾದ ಮೇಲೆ ಅಕ್ಕನಾಗಮ್ಮ ಬಸುರಿಯಾಗುತ್ತಾಳೆ. ಆಗ ತಾನು ತವರು ಮನೆಯಲ್ಲಿರುವುದು ಸರಿಯಲ್ಲವೆಂದು ತಿಳಿದು ಗಂಡನ ಮನೆಗೆ ಹೋಗುತ್ತಾಳೆ. ಎಂದಿಲ್ಲದ ಸೊಸೆ ಇಂದು ಬಂದುದನ್ನು ಕಂಡು ಅತ್ತೆ-ಮಾವ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ತಾನು ಗರ್ಭಿಣಿಯಾಗಿರುವುದಾಗಿ ತಿಳಿಸಿದಾಗ, ಯಾರಿಗೆ ಬಸುರಾದೆ? ಎಂದು ಪ್ರಶ್ನಿಸುತ್ತಾರೆ. ತಾನು ತನ್ನ ಗಂಡನಿಗೆ ಬಸುರಾಗಿದ್ದೇನೆಂದು ಹೇಳಿದರೂ ಕೇಳದ ಬೀಗರು ದಿವ್ಯವನ್ನು ಏರ್ಪಡಿಸುತ್ತಾರೆ. ಸುಡುವ ಎಣ್ಣೆಯಲ್ಲಿ ದುಡ್ಡು ಹಾಕಿ ಅದನ್ನು ಹೊರಗೆ ತೆಗೆಯಬೇಕೆಂದು ಹೇಳುತ್ತಾರೆ. ಅಕ್ಕನಾಗಮ್ಮ ಸುಡುವ ಎಣ್ಣೆಯಲ್ಲಿ ಕೈಹಾಕಿ ದುಡ್ಡು ತೆಗೆಯುತ್ತಾಳೆ. ಕುದಿಯುವ ಎಣ್ಣೆಯಲ್ಲಿ ಕೈಹಾಕಿದರೂ ಅವಳ ಕೈ ಸುಡದೇ ಇದ್ದುದನ್ನು ಕಂಡು ಪತಿವ್ರತೆಯರೆಲ್ಲ ಹಾಡಿ ಹೊಗಳುತ್ತಾರೆ. ಆಗ ಸಾಹುಕಾರ ದೇವರಸ ತನ್ನ ಮಗ ಶಿವದೇವನ ಇಚ್ಛೆಯಂತೆ ನಾಗಮ್ಮನನ್ನು ಮನೆ ತುಂಬಿಸಿಕೊಳ್ಳುತ್ತಾನೆ.

"ಅಕ್ಕನಾಗಮ್ಮ ಗರ್ಭವತಿಯಾಗಿದ್ದಾಗಲೇ ಶಿವದೇವ ತೀರಿಹೋಗಿರಬೇಕು. ಮುಂದೆ ಅಕ್ಕನಾಗಮ್ಮ ಕಲ್ಯಾಣಕ್ಕೆ ಬಂದಾಗ ಚೆನ್ನಬಸವಣ್ಣನ ಜನನವಾಗಿರಬೇಕೆಂದು" ಹೇಳಿರುವ ಡಾ.ಸಬರದ ಅವರು ಕಲ್ಯಾಣದಲ್ಲಿ ಬಸವಣ್ಣನವರು ಮೂವತ್ತಾರು ವರ್ಷ ಇದ್ದರು. ಚೆನ್ನಬಸವಣ್ಣ ಕಲ್ಯಾಣದಲ್ಲಿಯೇ ಬೆಳೆದು ದೊಡ್ಡವನಾಗರಬೇಕೆಂದು ಈ ಲೇಖನದಲ್ಲಿ ತಿಳಿಸಿದ್ದಾರೆ. ಜನಪದ ಕಥನಕಾವ್ಯದಲ್ಲಿ ಬಂದಿರುವ ಈ ಕಥಾನಕ ಸತ್ಯಕ್ಕೆ ಸಮೀಪವಾಗಿದೆ. ಈ ಕಾರಣದಿಂದ 'ಅಕ್ಕನಾಗಮ್ಮನ ಹಾಡು'' ತುಂಬ ಮಹತ್ವದ್ದಾಗಿದೆ.

ಶಾಸನ, ತಾಡೋಲೆಯಂತಹ ಆಕರಗಳು ಇರದಿದ್ದಾಗ, ಜನಪದರ ಹಾಡುಗಳು ಹೇಗೆ ಮಹತ್ತರವಾದ ಆಕರಗಳಾಗುತ್ತವೆಂಬುದಕ್ಕೆ ಈ ಹಾಡೇ ಸಾಕ್ಷಿಯಾಗಿದೆ. "ಪುರಾಣ ಕಾವ್ಯಗಳು" ಮತ್ತು "ಜನಪದ ಕಾವ್ಯಗಳು". "ಅಕ್ಕನಾಗಮ್ಮನ ಹಾಡು" ಇವುಗಳನ್ನು ಗಮನಿಸಿದಾಗ ಚೆನ್ನಬಸವಣ್ಣನ ಜನನ ವೃತ್ತಾಂತಕ್ಕೆ ಸಂಬಂಧಿಸಿದಂತೆ ಮೂರು ರೀತಿಯ ಅಂಶಗಳು ಸ್ಪಷ್ಟವಾಗುತ್ತವೆ.

1. ಚೆನ್ನಬಸವಣ್ಣ ಕಕ್ಕಯ್ಯನ ಪ್ರಸಾದದಿಂದ ಜನಿಸಿದನೆಂದು ಶಿಷ್ಟಕಾವ್ಯಗಳು ಮತ್ತು ಕೆಲವು ಜನಪದ ಕಾವ್ಯಗಳು ಹೇಳುತ್ತವೆ.
2. ಬಸವಣ್ಣನ ಪ್ರಸಾದದಿಂದ ಜನಿಸಿದನೆಂದು ಬುಲಾಯಿ ಹಾಡುಗಳು ಹೇಳುತ್ತವೆ.
3. ಶಿವದೇವನೇ ಅಕ್ಕನಾಗಮ್ಮನ ಪತಿಯಾಗಿದ್ದ. ಈ ಶರಣ ದಂಪತಿಗಳ ಉದರದಲ್ಲಿ ಚೆನ್ನಬಸವಣ್ಣ ಜನಿಸಿದನೆಂದು ಕೆಲವು "ಶಿಷ್ಟಕಾವ್ಯಗಳು" ಮತ್ತು "ಅಕ್ಕನಾಗಮ್ಮನ ಹಾಡು" ಹೇಳುತ್ತವೆ. ಹೀಗಾಗಿ ಈ ಜನಪದ ಹಾಡು ಅಕ್ಕನಾಗಮ್ಮನ ಬದುಕಿಗೆ ಹೊಸ ತಿರುವು ನೀಡುತ್ತದೆ.

"ಕೆಲವು ಸಂಶೋಧಕರು ಅಭಿಪ್ರಾಯಪಡುವಂತೆ, ಒಂದು ವೇಳೆ ಅಕ್ಕನಾಗಮ್ಮನು ಕಕ್ಕಯ್ಯನೊಂದಿಗೆ ವಿವಾಹವಾಗಿದ್ದರೆ, ಅದೇ ಮೊದಲನೆಯ ಅಂತರ್ಜಾತಿ ವಿವಾಹ ವಾಗುತ್ತಿತ್ತು. ಆಗ ಹರಳಯ್ಯನ ಮಗ, ಮಧುವರಸನ ಮಗಳೊಂದಿಗೆ ಮದುವೆ ಯಾದಾಗ ಕೋಲಾಹಲವಾಗುತ್ತಿರಲಿಲ್ಲ. ಎಳೆಹೂಟೆಯ ಹಿಂಸೆ ನಡೆಯುತ್ತಿರಲಿಲ್ಲ"ವೆಂದು ಆ ಲೇಖನದಲ್ಲಿ ಡಾ.ಸಬರದರವರು ಸ್ಪಷ್ಟಪಡಿಸಿದ್ದಾರೆ. ಅಕ್ಕನಾಗಮ್ಮನು ಶಿವದೇವನ ಪತ್ನಿಯೆಂಬುದಕ್ಕೆ ಶಿಷ್ಟಕಾವ್ಯ ಮತ್ತು ಜನಪದಕಥನಕಾವ್ಯದಲ್ಲಿ ದಾಖಲೆಗಳಿವೆ. ಈ ಎಲ್ಲಾ ಆಧಾರಗಳನ್ನು ಗಮನಿಸಿದಾಗ ಶರಣ ಶಿವದೇವನೇ ಅಕ್ಕನಾಗಮ್ಮನ ಪತಿಯಾಗಿದ್ದನೆಂದು ನಂಬಬಹುದಾಗಿದೆ. ಈ ಎಲ್ಲಾ ಆಕರಗಳನ್ನು ಗಮನಿಸಿ ಅಕ್ಕನಾಗಮ್ಮನ ಜೀವನವೃತ್ತಾಂತವನ್ನು ಹೀಗೆ ಹೇಳಬಹುದಾಗಿದೆ.

1. ಅಕ್ಕನಾಗಮ್ಮನು ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ದಂಪತಿಗಳ ಹಿರಿಯ ಮಗಳಾಗಿದ್ದಳು. ಬಸವಣ್ಣನವರ ಅಕ್ಕನಾಗಿದ್ದಳು, ಚೆನ್ನಬಸವಣ್ಣನ ತಾಯಿಯಾಗಿದ್ದಳು. ಶಿವದೇವನೇ ಈಕೆಯ ಪತಿಯಾಗಿದ್ದ.
2. ಈಕೆಯ ಕಾಲವನ್ನು ಕ್ರಿ.ಶ.1150 ಎಂದು ನಂಬಬಹುದಾಗಿದೆ.
3. ಬಸವಣ್ಣನು ಕಲ್ಯಾಣಕ್ಕೆ ಹೋದಾಗ, ಆತನ ಜೊತೆಯಲ್ಲಿಯೇ ಹೋದಳು, ಅಕ್ಕನಾಗಮ್ಮನು ಮತ್ತು ಕಲ್ಯಾಣದಲ್ಲಿಯೇ ಚೆನ್ನಬಸವಣ್ಣನನ್ನು ಹೆತ್ತಳು.
4. ಕಲ್ಯಾಣದಲ್ಲಿ ಅಕ್ಕನಾಗಮ್ಮ ಮಹತ್ವದ ಪಾತ್ರವಹಿಸಿದಳು.
5. ಕಲ್ಯಾಣಕ್ರಾಂತಿಯ ನಂತರ ಅಕ್ಕನಾಗಮ್ಮ ವೀರಮಾತೆಯಾಗಿ ಬೆಳೆದಳು. ಕಲ್ಯಾಣದಲ್ಲಿ ಶರಣರ ಹತ್ಯೆ ಪ್ರಾರಂಭವಾದ ಮೇಲೆ, ಕಲ್ಯಾಣವನ್ನು ಬಿಟ್ಟ ಅಕ್ಕನಾಗಮ್ಮನು, ಶರಣರ ವಚನಗಳ ಕಟ್ಟುಗಳನ್ನು ಹೊತ್ತುಕೊಂಡು ಚೆನ್ನಬಸವಣ್ಣನೊಂದಿಗೆ ಸಂಪಗಾಂವಿಯ ನೈರುತ್ಯಕ್ಕಿರುವ ನಾಗಲಾಪುರಕ್ಕೆ ಬರುತ್ತಾಳೆ. ಆಗ ಆ ಸಂದರ್ಭದಲ್ಲಿ ಕಾರತವಳ್ಳಿ (ಈಗಿನ ಕಾದರೊಳ್ಳಿ) ಕಾಳಗ ನಡೆಯುತ್ತದೆ.
6. ಚೆನ್ನಬಸವಣ್ಣನೊಂದಿಗೆ ಇತರ ಶರಣರನ್ನು ಕರೆದುಕೊಂಡು ನಾಗಮ್ಮ ಉಳಿವಿಗೆ ಬರುತ್ತಾಳೆ. ವೈರಿಸೈನ್ಯ ಬೆನ್ನತ್ತಿದಾಗ ಉಳಿವಿಯಲ್ಲಿಯೇ ಕೆಲವು ಶರಣರು ಹತರಾಗುತ್ತಾರೆ. ಕೊನೆಗೆ ಅವರಲ್ಲಿ ಅಕ್ಕನಾಗಮ್ಮ ಮತ್ತು ನುಲಿಯ ಚಂದಯ್ಯ ಇಬ್ಬರೇ ಉಳಿಯುತ್ತಾರೆ.
7. ತರೀಕೆರೆ ಹತ್ತಿರವಿರುವ ಎಣ್ಣೆಹೊಳೆ ಎಂದು ಪ್ರಸಿದ್ಧವಾಗಿರುವ ಪ್ರದೇಶದಲ್ಲಿ ಅಕ್ಕನಾಗಮ್ಮ ನೆಲೆ ನಿಂತಳು. ಇದೇ ಸ್ಥಳದಲ್ಲಿಯೇ ಆಕೆ ಐಕ್ಯಳಾದಳೆಂದು ಹೇಳಲಾಗುತ್ತದೆ. ಅಕ್ಕನಾಗಮ್ಮನ ಸಮಾಧಿಯೂ ಇಲ್ಲಿಯೇ ಇದೆ. ಅಕ್ಕನಾಗಮ್ಮನಿಗೆ ಸಂಬಂಧಿಸಿದ ಸ್ಮಾರಕಗಳು ಹೀಗಿವೆ.

1. ಇಂಗಳೇಶ್ವರದಲ್ಲಿ ಮಾದಲಾಂಬಿಕೆಯ ತವರುಮನೆಯಿದ್ದು, ಆ ತವರೂರಲ್ಲಿ ಬಸವಣ್ಣ ಹುಟ್ಟಿದನೆಂದು ಗುರುತಿಸಲಾದ ಕುಲಕರ್ಣಿಯವರ ಮನೆಯಿದೆ. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರವು, ಆ ಮನೆಯನ್ನು ವಶಪಡಿಸಿಕೊಂಡು ಸುಂದರಸ್ಮಾರಕವನ್ನಾಗಿ ಮಾಡಿದೆ. ತಾಯಿ ಮಾದಲಾಂಬಿಕೆ ಕೂಸು ಬಸವಣ್ಣನನ್ನು ಎತ್ತಿಕೊಂಡಿರುವ ಮತ್ತು ಅದರ ಪಕ್ಕದಲ್ಲಿ ಅಕ್ಕನಾಗಮ್ಮ ನಿಂತಿರುವ ಮೂರ್ತಿಗಳಿವೆ.
2. ಇಂಗಳೇಶ್ವರದ ಪೂರ್ವಕ್ಕೆ ಗುಡ್ಡವಿದ್ದು, ಆ ಗುಡ್ಡದಲ್ಲಿ ಅಕ್ಕನಾಗಮ್ಮನ ಗವಿಯಿದೆ. ಗವಿಯಲ್ಲಿ ಅಕ್ಕನಾಗಮ್ಮ ಪೂಜಿಸಿದ ಲಿಂಗವಿದೆ.
3. ಬಸವಕಲ್ಯಾಣದ ತ್ರಿಪುರಾಂತ ಕೆರೆಯ ಅರಿವಿನ ಮನೆಯಿಂದ ಇಳಿದು ಮುಂದೆ ಹೋದರೆ ಅಕ್ಕನಾಗಮ್ಮನ ಗವಿಯಿದೆ. ಸುಮಾರು ನೂರು ಅಡಿಗಳಷ್ಟು ಉತ್ತರ- ದಕ್ಷಿಣವಾಗಿ ಗವಿಯಿದೆ. ಇದು ತ್ರಿಪುರಾಂತ ಕೆರೆಯ ದಂಡೆಯ ಮೇಲಿರುವ ಗವಿಯಾಗಿದೆ.
4. ಸಂಪಗಾವಿಯ ನೈರುತ್ಯಕ್ಕಿರುವ ನಾಗಲಾಪುರದಲ್ಲಿ ಅಕ್ಕನಾಗಮ್ಮನ ಸುಂದರ ದೇವಾಲಯವಿದೆ, ಅದರ ಹತ್ತಿರವೇ ಚೆನ್ನಬಸವಣ್ಣನ ಮೂರ್ತಿ ಇದೆ.
5. ಕಾರವಾರ ಜಿಲ್ಲೆಯ ಉಳುವಿಯಲ್ಲಿ ಅಕ್ಕನಾಗಮ್ಮನ ಗವಿಯಿದೆ.
6. ಶಿವಮೊಗ್ಗ ಜಿಲ್ಲೆಯ ಎಣ್ಣೆಹೊಳೆ ಪ್ರದೇಶದಲ್ಲಿ ಅಕ್ಕನಾಗಮ್ಮನ ದೇವಾಲಯವಿದೆ. ಇಲ್ಲಿಯೇ ಅಕ್ಕನಾಗಮ್ಮ ಲಿಂಗೈಕ್ಯಳಾದಳೆಂದು ತಿಳಿದು ಬರುತ್ತದೆ. ಆಧುನಿಕ ಸಾಹಿತ್ಯದಲ್ಲಿಯೂ ಅಕ್ಕನಾಗಮ್ಮ ಕಾಣಿಸಿಕೊಂಡಿದ್ದಾಳೆ. ವಿ.ಸಿದ್ಧರಾಮಣ್ಣ ಅವರು "ಕ್ರಾಂತಿಗಂಗೋತ್ರಿ ಅಕ್ಕನಾಗಮ್ಮ" ಎಂಬ ನಾಟಕವನ್ನು ರಚಿಸಿದ್ದಾರೆ. ಈ ನಾಟಕದಲ್ಲಿ ನಾಗಮ್ಮನ ಕ್ರಾಂತಿಕಾರಕ ಗುಣವನ್ನು ಗುರುತಿಸಲಾಗಿದೆ. ಭಾಲ್ಕಿಯ ಹಿರೇಮಠದಿಂದ ಈ ನಾಟಕ ಪ್ರಕಟವಾಗಿದೆ. ವಚನಸಾಹಿತ್ಯಕ್ಕೆ ಅಕ್ಕನಾಗಮ್ಮ ತನ್ನದೇ ಕೊಡುಗೆಯನ್ನು ನೀಡಿದ್ದಾಳೆ. "ಬಸವಣ್ಣಪ್ರಿಯ ಚೆನ್ನಸಂಗಯ್ಯ" ಅಂಕಿತದಲ್ಲಿ ಈಕೆಯ 14 ವಚನಗಳು ಪ್ರಕಟವಾಗಿವೆ. ಈಕೆಯ ಸಾಹಿತ್ಯವನ್ನು ಕುರಿತು ಈಗಾಗಲೇ ಕೆಲವು ಲೇಖನಗಳು ಪ್ರಕಟವಾಗಿವೆ. ತನ್ನ ವಚನಗಳಲ್ಲಿ ರೇವಣಸಿದ್ಧಯ್ಯ, ಗುರುಭಕ್ತಯ್ಯ, ಮಡಿವಾಳ ಮಾಚಯ್ಯ, ಮರುಳಶಂಕರದೇವ, ಅಜಗಣ್ಣ, ಘಟ್ಟಿವಾಳಯ್ಯ, ಸಿದ್ಧರಾಮಯ್ಯ, ಮಹಾದೇವಿಯಕ್ಕ ಈ ಮೊದಲಾದ ಶರಣರನ್ನು ಸ್ಮರಿಸಿಕೊಂಡಿದ್ದಾಳೆ. ಬಸವಣ್ಣನ ಕುರಿತೇ ಅನೇಕ ವಚನಗಳಲ್ಲಿ, ಸ್ತುತಿಪರವಾದ ನುಡಿಗಳಿವೆ. ಬಸವಣ್ಣನಿಂದಲೇ ತನ್ನ ಭವನಾಶವಾಯಿತೆಂದು ಹೇಳಿಕೊಂಡಿದ್ದಾಳೆ. ಬಸವಣ್ಣನು ಸಂಗಮದಲ್ಲಿ ಲಿಂಗೈಕ್ಯನಾದ ನಂತರ, ನಾಗಮ್ಮನಿಗೆ ತುಂಬ ನೋವಾಗುತ್ತದೆ. ಆ ಸಂದರ್ಭದಲ್ಲಿಯೇ ಹೆಚ್ಚು ವಚನಗಳನ್ನು ರಚಿಸಿರಬಹುದಾಗಿದೆ. "ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೇ, ಲಿಂಗಜಂಗಮದ ಚೈತನ್ಯವೆ, ನಿಮ್ಮನಗಲಿ ಎಂತು ಸೈರಿಸುವೆನು?" (ವ-12) ಎಂಬ ವಚನವನ್ನು ಗಮನಿಸಿದಾಗ ಇಂತಹ ವಚನಗಳೆಲ್ಲ ಬಸವಣ್ಣನ ನಿಧನದ ನಂತರವೇ ರಚಿಸಿರಬಹುದಾದ ರಚನೆಗಳಾಗಿವೆ. "ಎನ್ನ ತನು ಚೆನ್ನಬಸವಣ್ಣನ ಬಯಲಬೆರಸಿತ್ತು, ಎನ್ನ ಮನ ಸಂಗನಬಸವಣ್ಣನ ನಿಜಪದವ ಬೆರಸಿತ್ತು. ಎನ್ನ ಪ್ರಾಣ ಅಲ್ಲಮ ಪ್ರಭುದೇವರ ಅರಿವ ಬೆರಸಿತ್ತು" (ವ-6) ಎಂಬ ವಚನದಲ್ಲಿ ಬಸವಣ್ಣ-ಚೆನ್ನಬಸವಣ್ಣ-ಪ್ರಭುದೇವರ ವಿಶಿಷ್ಟತೆಯನ್ನು ಗುರುತಿಸಿ ಹೇಳಿದ್ದಾಳೆ. "ಎನ್ನ ಕುಲಸೂತಕ, ಛಲಸೂತಕ, ತನಸೂತಕ, ಮನಸೂತಕ, ನೆನವುಸೂತಕ, ಭಾವಸೂತಕ-ಈ ಎಲ್ಲ ಸೂತಕಗಳನ್ನು ಕಳೆದಾತ ಬಸವಣ್ಣ" (ವ-5) ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾಳೆ. ನಾಗಮ್ಮನ ವಚನಗಳು ಆತ್ಮನಿವೇದನೆಯ ರೀತಿಯಲ್ಲಿದ್ದು ಅನೇಕ ಶರಣರನ್ನು ಇಲ್ಲಿ ಸ್ಮರಿಸಿದ್ದಾಳೆ.

ಬಸವಣ್ಣನಿಂದಲೇ ಈ ಭುವಿಗೆ ಭಕ್ತಿಯ ಬೆಳಕು ಬಂದಿತೆಂದು ಹೇಳಿದ ನಾಗಮ್ಮನು ಗುರುಲಿಂಗ ಜಂಗಮ ಪೂಜೆಗೆ, ಲಿಂಗಾಂಗ ಸಾಮರಸ್ಯದ ಸುಧೆಗೆ ಬಸವಣ್ಣನೇ ಮೊದಲಿಗನೆಂದು ಹೇಳಿದ್ದಾಳೆ. "ಅಯ್ಯಾ ನಾನಧವೆ" ಎಂದು ಆಕೆ ತನ್ನ ವಚನದಲ್ಲಿ ಹೇಳಿರುವುದರಿಂದ, ತಾನು ಅನಾಥೆಯೆಂದು ದು:ಖ ತೋಡಿಕೊಂಡಿರುವುದರಿಂದ ಈಕೆ ಕಲ್ಯಾಣಕ್ಕೆ ಬರುವ ಹೊತ್ತಿಗೆ ವಿಧವೆಯಾಗಿದ್ದಳೆಂಬುದು ಸ್ಪಷ್ಟವಾಗುತ್ತದೆ.

"ಅರಿಯದೆ ಮರಹಿಂದ ಭವದಲ್ಲಿ ಬಂದೆನಲ್ಲದೆ ಇನ್ನು ಅರಿದ ಬಳಿಕ ಬರಲುಂಟೆ? - (ವ-3)
"ಆಚಾರವೆಂಬುದು ಅಗೋಚರ ನೋಡಯ್ಯಾ,
ಆರಿಗೆಯೂ ಸಾಧ್ಯವಿಲ್ಲ ಮತ್ರ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು
ಬಸವಣ್ಣ ಬಂದು ಭಕ್ತಿಸ್ಥಲವ ಅರುಹಿದ" - (ವ-4)

ಇಂತಹ ಕೆಲವು ವಚನಗಳಲ್ಲಿ ಅರಿವು-ಆಚಾರಗಳ ಕುರಿತಂತೆ ಮಾತನಾಡಿದ್ದಾಳೆ. ಅಕ್ಕನಾಗಮ್ಮ ಇಂತಹ ವಚನಗಳನ್ನು ರಚಿಸುವುದರ ಮೂಲಕ ತನ್ನ ಕೊಡುಗೆಯನ್ನು ಕೊಟ್ಟಿರುವಂತೆ, ಶರಣರು ರಚಿಸಿದ್ದ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ರಕ್ಚಿಸಿದ್ದಾಳೆ, ವಚನಸಾಹಿತ್ಯವನ್ನೇ ಜಗತ್ತಿಗೆ ಉಣಬಡಿಸಿದ್ದಾಳೆ.

ವಿಜಯಶ್ರೀ ಸಬರದ
9845824834

ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:

ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

 

MORE NEWS

ಹೊಸ ರೂಪಕದ ಕವಿತೆಗಳು 

07-11-2024 ಬೆಂಗಳೂರು

"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...

ಗುರುಗಳ ಮಹಿಮೆ ಕಥೆಯಲ್ಲಿರುವ ತಾರ್ಕಿಕತೆ

06-11-2024 ಬೆಂಗಳೂರು

"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...

ಯಾರು ಅರಿಯದ ವೀರನ ತ್ಯಾಗ

31-10-2024 ಬೆಂಗಳೂರು

"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...