ಶೈಕ್ಷಣಿಕ ಕೆಲಸಗಳೂ ಇರುತ್ತಿದ್ದುದರಿಂದ ಓದಲು ಸಮಯ ಹೊಂದಾಣಿಕೆ ಮಾಡುವುದು ಸವಾಲಾಗಿತ್ತು


"ಮನೆಯಲ್ಲಿ ಓದಿ ನಿಲ್ಲಿಸಿದ ಪುಟದಿಂದ ಗ್ರಂಥಾಲಯದ ಪ್ರತಿಯಲ್ಲಿ ಮತ್ತೆ ಸ್ವಪ್ನ ಸಾರಸ್ವತದ ಓದು. 9.10ಕ್ಕೆ ಕ್ಲಾಸಿಗೆ ಪ್ರವೇಶ. ಮಧ್ಯಾಹ್ನ 1ರಿಂದ 2 ಗಂಟೆಯವರೆಗಿನ Lunch Break ಅವಧಿಯಲ್ಲಿ 10 ನಿಮಿಷದಲ್ಲಿ ಗಬಗಬನೇ ಊಟ ಮಾಡಿ ಲೈಬ್ರೇರಿಗೆ ಬಂದು ಸ್ವಪ್ನ ಸಾರಸ್ವತದ ಓದಿಗೆ ಮರುಚಾಲನೆ. ಕಾಲೇಜು ಬಿಟ್ಟ ತತ್‌ಕ್ಷಣ ಮನೆಗೆ ಓಡಿ ಮತ್ತೆ ಸ್ವಪ್ನ ಸಾರಸ್ವತದ ತೆಕ್ಕೆಗೆ ನಾನು!," ಎನ್ನುತ್ತಾರೆ ನವೀನಕೃಷ್ಣ ಎಸ್. ಉಪ್ಪಿನಂಗಡಿ. ಅವರು ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕೃತಿ ಕುರಿತು ಬರೆದಿರುವ ವಿಮರ್ಶೆ.

ನನಗೆ ಇವಾಗಲೂ ಮತ್ತೆ ಮತ್ತೆ ಕಾಡುವುದು ಗೋಪಾಲಕೃಷ್ಣ ಪೈ ಅವರ 'ಸ್ವಪ್ನ ಸಾರಸ್ವತ'ದ ಓದು. ಅದನ್ನು ಓದಿ ಸರಿಸುಮಾರು ಮೂರು ವರ್ಷಗಳಾಗುತ್ತಾ ಬಂತು. ಆದರೆ ಇಂದಿಗೂ ನನ್ನ ಮೆಚ್ಚಿನ ಕೃತಿಗಳು ಯಾವುದೆಂದು ಕೇಳಿದರೆ ಅದರಲ್ಲಿ 'ಸ್ವಪ್ನ ಸಾರಸ್ವತ' ಖಂಡಿತ ಇದ್ದೇ ಇರುತ್ತದೆ.

ಆಗತಾನೇ ಈ ಪುಸ್ತಕದ ಬಗ್ಗೆ ಬಹಳಷ್ಟು ಜನರ ಲೇಖನಗಳನ್ನು ಓದಿದ್ದ ನನಗೆ ಅದೆಷ್ಟು ಕಡೆಗಳಲ್ಲಿ ಹುಡುಕಾಡಿದರೂ 'ಸ್ವಪ್ನ ಸಾರಸ್ವತ' ಸಿಕ್ಕಿರಲಿಲ್ಲ. ಕಾರಣವಿಷ್ಟೇ - ಆ ಸಮಯದಲ್ಲಿ ಅದು Out of print. ಪುನರ್ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಸಿಗುವುದಕ್ಕೆ ಕನಿಷ್ಠ ಒಂದೆರಡು ತಿಂಗಳಾದರೂ ಆಗಬಹುದೆಂಬ ಮಾಹಿತಿ ಸಿಕ್ಕಿತು. ಅಷ್ಟೆಲ್ಲಾ ಕಾಯುವಷ್ಟು ತಾಳ್ಮೆ ಇರಬೇಕಲ್ಲ?

ಪ್ರತೀ ದಿನವೂ ಕಾಲೇಜಿಗೆ ಪುತ್ತೂರಿಗೆ ಬರುತ್ತಿದ್ದುದರಿಂದ ಒಂದು ದಿನ ಕೊಡೆಂಕಿರಿ ಪ್ರಕಾಶ್ ಅವರ ಜ್ಞಾನಗಂಗಾ ಪುಸ್ತಕ ಮಳಿಗೆಗೆ ಗಣೇಶಯ್ಯನವರ ಪುಸ್ತಕವನ್ನರಿಸಿ ಹೋಗಿದ್ದೆ. ಆಗಷ್ಟೇ ನಾನು ತಿಂಗಳಿಗೊಮ್ಮೆ ಜ್ಞಾನಗಂಗಾಕ್ಕೆ ಹೋಗುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೆ. ಆಶ್ಚರ್ಯವೆಂದರೆ ಅಂದು ಹೋಗಿದ್ದಾಗ ಅಲ್ಲಿ ಸ್ವಪ್ನ ಸಾರಸ್ವತದ ಒಂದೇ ಒಂದು ಪ್ರತಿ ಉಳಿದಿತ್ತು. 'ಅರಸುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಾಗ' ಎಂಬಂತೆ ಸ್ವಪ್ನ ಸಾರಸ್ವತವನ್ನು ನಾನು ಹುಡುಕಿ ಹೊರಟಿದ್ದೆನೋ ಅಥವಾ ಸ್ವಪ್ನ ಸಾರಸ್ವತವೇ ನನ್ನನ್ನು ಹುಡುಕಿಕೊಂಡು ಬಂತೋ ಗೊತ್ತಿಲ್ಲ. ಪುಸ್ತಕವನ್ನು ಕೂಡಲೇ ಖರೀದಿಸಿ ಮನೆಗೆ ತಂದಾಗ ಮನಸ್ಸಿಗೆ ರಾಶಿ ನೆಮ್ಮದಿ!

ಇನ್ನು ಓದುವ ಸಂಭ್ರಮ ಕೇಳಬೇಕಾ? ದೊಡ್ಡ ಕಾದಂಬರಿ ಬೇರೆ... ಶೈಕ್ಷಣಿಕ ಕೆಲಸಗಳೂ ಇರುತ್ತಿದ್ದುದರಿಂದ ಓದಲು ಸಮಯ ಹೊಂದಾಣಿಕೆ ಮಾಡುವುದು ಸವಾಲಾಗಿತ್ತು. ಆದರೇನಂತೆ? ತುಸು ನಿದ್ದೆ ಕಡಿಮೆ ಮಾಡಿಯಾದರೂ ಓದಬಹುದೆಂದುಕೊಂಡಿದ್ದೆ.

ಆದರೆ ವಿಶೇಷ ಏನು ಗೊತ್ತಾ? ನಾನು ಈ ಕಾದಂಬರಿಯನ್ನು ಮನೆಯಲ್ಲಿಯೂ, ಕಾಲೇಜಿನಲ್ಲಿಯೂ ಎರಡೂ ಕಡೆ ಓದುವಂತಾಯ್ತು. ನಮ್ಮ ವಿವೇಕಾನಂದ ಮಹಾವಿದ್ಯಾಲಯದ ಲೈಬ್ರೇರಿ ಅಂದರೆ 74,000 ಪುಸ್ತಕಗಳ ಸಂಗ್ರಹವಿರುವ ಅತಿ ದೊಡ್ಡ ಕಟ್ಟಡ. ಅಲ್ಲಿ Refference Section ಮತ್ತು Issue Sectionನಲ್ಲಿ ತಲಾ ಒಂದು ಪ್ರತಿಗಳಂತೆ ಸ್ವಪ್ನ ಸಾರಸ್ವತದ ಎರಡು ಪ್ರತಿಗಳಿದ್ದವು.

ನಮಗೆ ಆಗ ಕಾಲೇಜು ಆರಂಭವಾಗುತ್ತಿದ್ದುದು ಬೆಳಗ್ಗೆ 9.15ಕ್ಕೆ. ಆಗಿನ್ನೂ ನನಗೆ ಬೈಕ್ ಬಂದಿರಲಿಲ್ಲ. ಬಸ್ಸಿನಲ್ಲಿಯೇ ಪ್ರಯಾಣ. ಬೆಳಗ್ಗೆ ಬೇಗ ಎದ್ದು ಸ್ವಪ್ನ ಸಾರಸ್ವತವನ್ನು ಓದಿ, ಕಾಲೇಜಿಗೆ ಹೊರಟು ಬೇಗ ಕಾಲೇಜು ಸೇರುತ್ತಿದ್ದೆ. ಆಗ 8.45ಕ್ಕೆ ಲೈಬ್ರೇರಿ ತೆರೆಯುತ್ತಿತ್ತು. ಲೈಬ್ರೇರಿ ಸಿಬ್ಬಂದಿ ಬರುವ ಮೊದಲೇ ಲೈಬ್ರೇರಿ ಎದುರುಗಡೆ ನಾನು ಹಾಜರ್!

ಮನೆಯಲ್ಲಿ ಓದಿ ನಿಲ್ಲಿಸಿದ ಪುಟದಿಂದ ಗ್ರಂಥಾಲಯದ ಪ್ರತಿಯಲ್ಲಿ ಮತ್ತೆ ಸ್ವಪ್ನ ಸಾರಸ್ವತದ ಓದು. 9.10ಕ್ಕೆ ಕ್ಲಾಸಿಗೆ ಪ್ರವೇಶ. ಮಧ್ಯಾಹ್ನ 1ರಿಂದ 2 ಗಂಟೆಯವರೆಗಿನ Lunch Break ಅವಧಿಯಲ್ಲಿ 10 ನಿಮಿಷದಲ್ಲಿ ಗಬಗಬನೇ ಊಟ ಮಾಡಿ ಲೈಬ್ರೇರಿಗೆ ಬಂದು ಸ್ವಪ್ನ ಸಾರಸ್ವತದ ಓದಿಗೆ ಮರುಚಾಲನೆ. ಕಾಲೇಜು ಬಿಟ್ಟ ತತ್‌ಕ್ಷಣ ಮನೆಗೆ ಓಡಿ ಮತ್ತೆ ಸ್ವಪ್ನ ಸಾರಸ್ವತದ ತೆಕ್ಕೆಗೆ ನಾನು!

ಸ್ವಪ್ನ ಸಾರಸ್ವತದ ಜೊತೆಗೆ ಎಂಥಾ Attachment ಆಗಿತ್ತು ಗೊತ್ತಾ? ಪ್ರಾಯಶಃ ಓದಿನಲ್ಲಿ ನಾನು ಇಷ್ಟು ಹಠಕ್ಕೆ ಬಿದ್ದು, ಬಹಳ ಉತ್ಸಾಹದಿಂದ ಓದಿದ ಪುಸ್ತಕಗಳಲ್ಲಿ ಇದಕ್ಕೇ ಅಗ್ರಸ್ಥಾನ. ಇಲ್ಲಿಯವರೆಗೆ ಗೋಪಾಲಕೃಷ್ಣ ಪೈಯವರು ಬರೆದ ಕೃತಿಗಳಲ್ಲಿ ಈ ಪುಸ್ತಕವನ್ನು ಮಾತ್ರವೇ ನಾನು ಓದಿದ್ದು. ಇಲ್ಲಿ ಪೈಯವರ ನಿರೂಪಣಾ ಶೈಲಿ, ಕಥೆ ಸಾಗುವ ರೀತಿ, ಕಾದಂಬರಿಯ ಹರಹು ಇದೆಯಲ್ಲಾ? ಅದು ಅದ್ಭುತ.

ಇವತ್ತು ಮನೆಯಲ್ಲಿ ಶಾರದಾ ಪೂಜೆಗೆ ಪುಸ್ತಕಗಳನ್ನು showcaseನಿಂದ ತೆಗೆಯುವ ಸಮಯದಲ್ಲಿ 'ಸ್ವಪ್ನ ಸಾರಸ್ವತ' ಕೈಗೆ ಸಿಕ್ಕಿ ಇದೆಲ್ಲಾ ನೆನಪಾಯಿತು....

- ನವೀನಕೃಷ್ಣ ಎಸ್. ಉಪ್ಪಿನಂಗಡಿ

MORE FEATURES

ಕೃಷಿ ಉತ್ಪನ್ನಗಳಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ

18-10-2024 ಬೆಂಗಳೂರು

“ಕವನಗಳು ಯಾವುದೇ ವಿಷಯದ ಬಗ್ಗೆ ಕವಿಗಳ ಮನೋಭಾವನೆಗಳನ್ನು, ಅಭಿಪ್ರಾಯಗಳನ್ನು ಅಥವಾ ಊಹೆಗಳನ್ನು ಬಹಳ ಅಚ್ಚುಕಟ್ಟಾಗ...

ಭಾರತದ ಪ್ರವೇಶಕ್ಕೆ ಮತ್ತೊಂದು ಕಾಲು ಹಾದಿ ‘ಮಹಾಭಾರತ ಪ್ರೇಮ ಮತ್ತು ಯುದ್ಧ’

18-10-2024 ಬೆಂಗಳೂರು

"ಮಹಾಭಾರತ ಎಂಬ ಮಹಾಕಾವ್ಯಕ್ಕೆ 'ಭಾರತ' ಎಂದೂ ಸಂಕ್ಷಿಪ್ತವಾಗಿ ಕರೆಯುತ್ತಾರೆ. ವ್ಯಾಸರು ರಚಿಸಿದ ಈ ಮಹಾಭಾ...

ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು

17-10-2024 ಬೆಂಗಳೂರು

“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...