ಸಾಮಾನ್ಯರ ಬದುಕಿಗೆ ಕಗ್ಗದ ದೀವಿಗೆ


"ವೇದ, ವೇದಾಂತ, ಉಪನಿಷತ್ತುಗಳು, ಧರ್ಮ ಶಾಸ್ತ್ರಗಳಲ್ಲಿನ ಘನತತ್ತ್ವಗಳ ಸಾರವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಚೌಪದಿಗಳ ಮೂಲಕ ಉಣ ಬಡಿಸಿರುವ ಪರಿ ನಿಜಕ್ಕೂ ಅಚ್ಚರಿ ತರುತ್ತದೆ. ಖ್ಯಾತ ವಿದ್ವಾಂಸರಾದ ಮತ್ತೂರು ಕೃಷ್ಣಮೂರ್ತಿಯವರು ಹೇಳುವಂತೆ 'ಕಗ್ಗವನ್ನು ಓದಿದಂತೆ ಓದಿದಂತೆ ಡಿ.ವಿ.ಜಿ. ಅವರು ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋಗುವುದನ್ನು ನಾವು ಅನುಭವಿಸುತ್ತೇವೆ. ಅನುಭವ ವೇದ್ಯವಿದು' ಎನ್ನುತ್ತಾರೆ ಎಸ್.ಎಲ್.ವರಲಕ್ಷ್ಮೀ ಮಂಜುನಾಥ್ ನಂಜನಗೂಡು. ಅವರು ಡಿ.ವಿ ಗುಂಡಪ್ಪ ಅವರ ಹುಟ್ಟು ಹಬ್ಬದ ಪ್ರಯುಕ್ತ ಬರೆದ ಲೇಖನ.

ಕನ್ನಡ ನಾಡಿನಲ್ಲಿ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗಗಳ ಬಗ್ಗೆ ಕೇಳಿರದ ವ್ಯಕ್ತಿಗಳೇ ಬಹುಶಃ ಇಲ್ಲವೇನೋ. 'ಕನ್ನಡದ ಭಗವದ್ಗೀತೆ'ಎಂದೇ ಹೆಸರಾದ ಮಂಕುತಿಮ್ಮನ ಕಗ್ಗಗಳು ಪಂಡಿತರಿಂದ ಪಾಮರರವರೆಗೂ ಬಹು ಉಪಯುಕ್ತವಾದ ಮಹಾನ್ ಕೃತಿ.ಡಿ.ವಿ.ಜಿ. ಅವರು ತಮ್ಮ ಕಗ್ಗಗಳ ಮೂಲಕ ಬದುಕಿನ ಎಲ್ಲಾ ಆಯಾಮಗಳ ಬಗ್ಗೆಯೂ ಸೂಕ್ಷ್ಮ ಒಳನೋಟ ನೀಡಿದ್ದಾರೆ. ತಮ್ಮ ಅಗಾಧ ಜ್ಞಾನ, ಅನುಭವ ಹಾಗೂ ಅನುಭಾವದ ಬೆಳಕಿನಲ್ಲಿ ಜನಸಾಮಾನ್ಯರಿಗೆ ಜೀವನ ದರ್ಶನಮಾಡಿಸುತ್ತಾರೆ. ವೇದ, ವೇದಾಂತ, ಉಪನಿಷತ್ತುಗಳು, ಧರ್ಮ ಶಾಸ್ತ್ರಗಳಲ್ಲಿನ ಘನತತ್ತ್ವಗಳ ಸಾರವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಚೌಪದಿಗಳ ಮೂಲಕ ಉಣ ಬಡಿಸಿರುವ ಪರಿ ನಿಜಕ್ಕೂ ಅಚ್ಚರಿ ತರುತ್ತದೆ. ಖ್ಯಾತ ವಿದ್ವಾಂಸರಾದ ಮತ್ತೂರು ಕೃಷ್ಣಮೂರ್ತಿಯವರು ಹೇಳುವಂತೆ 'ಕಗ್ಗವನ್ನು ಓದಿದಂತೆ ಓದಿದಂತೆ ಡಿ.ವಿ.ಜಿ. ಅವರು ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋಗುವುದನ್ನು ನಾವು ಅನುಭವಿಸುತ್ತೇವೆ. ಅನುಭವ ವೇದ್ಯವಿದು'ಎನ್ನುತ್ತಾರೆ. ಕಗ್ಗಗಳು ಜೀವನದ ಸಾರವನ್ನು ತಿಳಿಸುತ್ತವೆ. ಜೀವನದಲ್ಲಿ ಎದುರಾಗುವ ಕಷ್ಟಗಳು, ಸುಖಗಳು, ಸಂಬಂಧಗಳು, ಕರ್ತವ್ಯಗಳು, ಆಧ್ಯಾತ್ಮಿಕ ವಿಚಾರಗಳು ಇತ್ಯಾದಿಗಳ ಬಗ್ಗೆ ಕಗ್ಗಗಳು ಬೆಳಕು ಚೆಲ್ಲತ್ತವೆ. ಕಗ್ಗದ ಪ್ರತಿ ಚೌಪದಿಯೂ ಜೀವನದ ಒಂದೊಂದು ಮೌಲ್ಯವನ್ನು ತಿಳಿಸುತ್ತವೆ. ಕಗ್ಗದ ಚೌಪದಿಗಳು ಓದುಗರಿಗೆ ಜೀವನದ ಬಗ್ಗೆ ಒಂದು ಹೊಸ ದೃಷ್ಟಿಕೋನ ಬೆಳೆಸುತ್ತವೆ. ಜೀವನದ ಮೂಲಭೂತ ಪ್ರಶ್ನೆಗಳಿಗೆ ಕಗ್ಗದಲ್ಲಿ ಉತ್ತರಗಳನ್ನು ಕಾಣಬಹುದು. ಜನಸಾಮಾನ್ಯರಿಗೆ ಸರಿ ತಪ್ಪುಗಳ ಬಗ್ಗೆ ವಿವೇಕ ನೀಡಿ ಸರಿದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಇಹಪರ ಸೌಖ್ಯಗಳೆರಡರ ಉನ್ನತಿಗೂ ಮಾರ್ಗದರ್ಶನ ಮಾಡುವ ಹಿರಿಮೆ ಕಗ್ಗಗಳದ್ದು. ಹೀಗಾಗಿಯೇ ಕನ್ನಡ ಸಾಹಿತ್ಯದಲ್ಲಿ ಡಿ.ವಿ.ಜಿ. ಅವರ ಕಗ್ಗಗಳಿಗೆ ಹಿರಿದಾದ ಸ್ಥಾನವಿದೆ. ಬದುಕಿಗೆ ನೀತಿಪಾಠಗಳನ್ನು ಹೇಳುವ ಕಗ್ಗಗಳು ಜನಸಾಮಾನ್ಯರ ಬದುಕಿಗೆ ಕೈದೀವಿಗೆಗಳಾಗಿವೆ. ಎಂತಲೇ ಇದು ಕನ್ನಡದ ಭಗವದ್ಗೀತೆ ಎಂದು ಹೆಸರಾಗಿದೆ.

ಕಷ್ಟ ಜೀವದ ಪಾಕ; ಕಷ್ಟ ಧರ್ಮ ವಿವೇಕ ।
ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ।।
ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ ।
ದೃಷ್ಟಿ ಸೂಕ್ಷ್ಮವೆ ಗತಿಯೊ – ಮಂಕುತಿಮ್ಮ ।।

ಜೀವನದಲ್ಲಿ ಎದುರಾಗುವ ಕಷ್ಟನಷ್ಟಗಳ ಬಗ್ಗೆ ಅವರು ತಮ್ಮ ಈ ಕಗ್ಗದಲ್ಲಿ ಕಷ್ಟಗಳು ಜೀವನದ ಅವಿಭಾಜ್ಯ ಅಂಗವೆಂದು ಹೇಳುತ್ತಾರೆ. ಕಷ್ಟಗಳು ಜೀವನವನ್ನು ಪರಿಪಕ್ವಗೊಳಿಸುತ್ತವೆ ಮತ್ತು ಧರ್ಮದ ವಿವೇಕವನ್ನು ನೀಡುತ್ತವೆ ಎಂದು ಹೇಳುವ ಮೂಲಕ ಕಷ್ಟಗಳು ಎದುರಾದಾಗ ಎದೆಗುಂದದೆ ಧೈರ್ಯವಾಗಿ ಎದುರಿಸಬೇಕೆಂದು ತಿಳಿಸುತ್ತಾರೆ. ಸಣ್ಣ‌ಪುಟ್ಟ ಕಷ್ಟಗಳು ಎದುರಾದಾಗಲೂ ಹೆದರಿ ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಬರುವ ಇಂದಿನ ಅನೇಕರಿಗೆ ಇದು ಆತ್ಮಸ್ಥೈರ್ಯ ನೀಡುವ ಔಷಧದಂತಿದೆ.

ಅರಿವೇ ಗುರು ಎಂಬುದನ್ನು ಪುಷ್ಟೀಕರಿಸುವ ಡಿ.ವಿ.ಜಿ.ತಮ್ಮ ಕಗ್ಗದಲ್ಲಿ ಅನುಭವವೇದ್ಯವಾದ ಸ್ವಯಂ ಅರಿವಿನ ಹಾಗೂ ಜ್ಞಾನದ ಮಹತ್ವವನ್ನು ವಿವರಿಸಿ ಅರಿವೇ ಗುರು, ಅರಿವೇ ಶಿಷ್ಯ, ಅರಿವೇ ಜ್ಞಾನ | ಅರಿವೇ ಮುಕ್ತಿ, ಅರಿವೇ ಬಂಧನ || ಅರಿವಿನಾಚೆಗಿನ ನಿರವಯಲನು ಕಾಣುತ | ಪರಿಪರಿಯ ನುಡಿಯದಿರು ಮಂಕುತಿಮ್ಮ ||" ಎಂದು ಸಾರುವ ಮೂಲಕ ಆತ್ಮಜ್ಞಾನದ ಶ್ರೇಷ್ಠತೆಯನ್ನು ಸಾರುತ್ತಾರೆ. ಮನುಜರು ಸ್ವಯಂ ಅನುಭವಗಳ ಮೂಲಕ ಸತ್ಯ ಸಾಕ್ಷಾತ್ಕರಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಗಹನ ತತ್ತ್ವ ಇದರಲ್ಲಿ ಅಡಕವಾಗಿದೆ.

ಮೌನವೊಪ್ಪುವ ಮರದ ಬುಡದೊಳಗಿರ್ದವನು | ಜ್ಞಾನಿಯೆಂದೆನಿಸುವನು ಲೋಕದೊಳಗೆ ||
ನಾನಾ ವಿಧದ ವಾಕ್ಚಾತುರ್ಯದೊಳುಳಿದವನು | ಜ್ಞಾನಿಯಲ್ಲೆಂದರಿ ಮಂಕುತಿಮ್ಮ ||

ಈ ಕಗ್ಗದಲ್ಲಿ ಬರಿಯ ಒಣಮಾತು,ತೋರಿಕೆ,ಆಡಂಬರಗಳಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಧ್ಯಾನ, ಸಾಧನೆಗಳಿಂದ ಮೌನವಾಗಿದ್ದು ಜ್ಞಾನಪಡೆಯುವವನೇ ನಿಜವಾದ ಸಾಧಕನೆಂದು ತಿಳಿಸುತ್ತಾರೆ. ಆ ಮೂಲಕ ಸೋಗಲಾಡಿ ನಡವಳಿಕೆಯನ್ನು ತೊರೆದು ನಿಜವಾದ ಸಾಧನೆ ಮಾಡಬೇಕೆಂದು ಜನಸಾಮಾನ್ಯರಿಗೆ ತಿಳಿಹೇಳುತ್ತಾರೆ.

ಮೌನದೊಳೊ ಮಾತಿನೊಳು ಹಾಸ್ಯದೊಳೊ ಹಾಡಿನೊಳೊl
ಮಾನವಂ ಪ್ರಣಯದೊಳೊ ವೀರ ವಿಜಯದೊಳೊll
ಏನೋ ಎಂತೋ ಸಮಾಧಾನಗಳನರಸುತಿಹl
ನಾನಂದವಾತ್ಮಗುಣ- ಮಂಕುತಿಮ್ಮll

ಈ ಕಗ್ಗವು ಮನುಷ್ಯ ತನ್ನ ಸಂತೋಷ ಸಮಾಧಾನಗಳನ್ನು ಸಂಗೀತ, ಪ್ರಣಯ, ಗೆಲುವು ಇತ್ಯಾದಿಗಳಲ್ಲಿ ಹೊರಗೆಲ್ಲೋ ಹುಡುಕುತ್ತಾನ. ಆದರೆ ನಿಜವಾದ ಆನಂದವು ನಮ್ಮೊಳಗೇ ಇದೆ ಎಂದು ಆತ್ಮಾನಂದದ ಬಗ್ಗೆ ಸೂಚ್ಯವಾಗಿ ತಿಳಿಸುತ್ತಾರೆ. ಹೊರಗೆಲ್ಲೋ ಸುಖ ಸಂತೋಷಗಳನ್ನು ಅರಸಿ ಅಂಡಲೆಯುವ ಜನಸಾಮಾನ್ಯರು ನೈಜ ಆನಂದವನ್ನು ತಮ್ಮ ಮನದಲ್ಲೇ ಕಂಡುಕೊಳ್ಳಬೇಕೆಂಬ ಚಿಂತನೆ ಇಲ್ಲಿ ವ್ಯಕ್ತವಾಗಿದೆ. ಭಗವದ್ಗೀತೆಯ ಆರನೇ ಅಧ್ಯಾಯದ 26ನೇ ಶ್ಲೋಕವಾದ
ತೋಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್l
ತತಸ್ತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ll
ಎಂಬೀ ಶ್ಲೋಕವು ಅಸ್ಥರವಾದ ಮತ್ತು ಚಂಚಲವಾದ ಮನಸ್ಸು ಲೌಕಿಕ ವಿಷಯಗಳ ನಿಮಿತ್ತದಿಂದ ವಿಹರಿಸುತ್ತಿರುತ್ತದೆ. ಇದನ್ನು ಆಯಾ ವಿಷಯಗಳಿಂದ ಹಿಂದಕ್ಕೆಳೆದುಕೊಂಡು ಪದೇ ಪದೇ ಪರಮಾತ್ಮನಲ್ಲಿ ಸ್ಥಿರಗೊಳಿಸಬೇಕು. ಆ ಮೂಲಕ ಆತ್ಮಾನಂದದಲ್ಲಿ ಸ್ಥಿತರಾಗಬೇಕೆಂದು ಹೇಳುತ್ತದೆ. ಡಿ.ವಿ.ಜಿ.ಅವರು ಇದನ್ನೇ ತಮ್ಮ ಈ ಕಗ್ಗದಲ್ಲಿ ಮಾರ್ಮಿಕವಾಗಿ ಸಾರಿದ್ದಾರೆನ್ನಬಹುದು.

ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರುl
ಉಲ್ಲಾಸಕ್ಕೆಡೆಮಾಡು ನಿನ್ನಿನಾದನಿತುll
ನಿಲ್ಲು ಕೆಚ್ಚೆದೆಯಿಂದಲ ನ್ಯಾಯಗಳನಳಿಸೆl
ಎಲ್ಲಕಂ ಸಿದ್ಧನಿರು- ಮಂಕುತಿಮ್ಮll
ಕಗ್ಗದ ಈ ಸಾಲುಗಳು ಮನುಷ್ಯನಾದವನು ಎಲ್ಲವನ್ನು ಎದುರಿಸಲು ಸಿದ್ಧನಾಗಿರಬೇಕೆಂದು ಸಾರುವುದು. ಬಾಳನ್ನು ತಿರಸ್ಕರಿಸಬಾರದು, ಒಲವನ್ನು ಉಪೇಕ್ಷಿಸಬಾರದು. ಆದಷ್ಟು ಸಂತೋಷವಾಗಿರಲು ಯತ್ನಿಸಬೇಕು. ಸಮಯಬಂದರೆ ಅನ್ಯಾಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಬೇಕೆಂಬ ನೀತಿ ಸಾರುವ ಈ ಕಗ್ಗ ಧೈರ್ಯದಿಂದಿದ್ದು ಬದುಕಿನ ಸವಾಲುಗಳನ್ನು ಎದುರಿಸಬೇಕೆಂಬ ಮನೋ ಸ್ಥೈರ್ಯ ವನ್ನು ನೀಡುತ್ತದೆ.

ಎಲ್ಲೆಡೆ ದ್ವೇಷ, ಅಸೂಯೆ, ವಿರಸಗಳೇ ಹೆಚ್ಚಿರುವ ಇಂದಿನ ಸಮಾಜದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ನೀತಿಪ್ರದವಾದ ಕಗ್ಗವೊಂದು ಇಂತಿದೆ.

ಒಬ್ಬನುಟುವೂಟದಲಿ ಸವಿಯಿಲ್ಲ ಸೊಗವಿಲ್ಲl
ಇಬ್ಬರಾಗುವೆನೆಂದನಂತೆ ಪರಬೊಮ್ಮಂll
ಹೆಬ್ಬದುಕ್ಕಕೊಂಟಿತನದೊಳದೇನು ಬದುಕುವೆಯೋ?
ತಬ್ಬಿಕೊಳೊ ವಿಶ್ವವನು-ಮಂಕುತಿಮ್ಮ ll
ಈ ಮೇಲಿನ ಕಗ್ಗದಲಿ ಡಿ.ವಿ.ಜಿ. ಅವರು ಒಬ್ಬನೇ ಕುಳಿತು ಏಕಾಂಕಿಯಾಗಿ ಊಟ ಮಾಡಿದರೆ ಅದು ರುಚಿಯಾಗಿರುವುದಿಲ್ಲ. ಬದಲಾಗಿ ಎಲ್ಲರೂ ಸೇರಿ ಒಟ್ಟಾಗಿ ಕಲೆತು ಉಣುವುದರಿಂದ ಆನಂದ ಸಿಗುತ್ತದೆ ಎನ್ನುವ ಮೂಲಕ ನಾವೆಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಹಂಚಿ ತಿಂದು ಒಟ್ಟಿಗೆ ಕೂಡಿ ಬಾಳುವುದರಲ್ಲೇ ಬದುಕಿನ ಸಾರ್ಥಕತೆ ಅಡಗಿದೆ ಎಂದು ತಿಳಿಸುತ್ತಾರೆ.

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ |
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು ||
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದ |
ಸ್ಪರ್ಧಿಯೆ ತ್ರಿವಿಕ್ರಮಗೆ ? – ಮಂಕುತಿಮ್ಮ ||
ಎಂಬೀ ಕಗ್ಗವು ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ ಯಾಗಿದೆ. ಅನೇಕರು ತಮ್ಮಲ್ಲೇ ಅನೇಕ ಲೋಪದೋಷಗಳಿದ್ದರೂ ಪರರ ತಪ್ಪುಗಳಿಗೆ ಬೂದುಗನ್ನಡಿ ಹಿಡಿದು ತೋರಿ ವಿಮರ್ಶಿಸುವ ಕೆಟ್ಟಚಾಳಿ ಹೊಂದಿರುತ್ತಾರೆ. ಪರಿಪೂರ್ಣರೆಂಬುವವರು ಈ ಜಗದಲ್ಲಿ ಯಾರೂ ಇಲ್ಲ. ತಿದ್ದಿಕೊಳ್ಳುವ ಕೆಲಸ ಮೊದಲು ನಮ್ಮೊಳಗೆ ಪ್ರಾರಂಭವಾಗಬೇಕು. ಆಗ ಸಮಾಜದಲ್ಲೂ ಪರಿವರ್ತನೆ ಮೂಡುವುದು ಸಾಧ್ಯ. ಇದನ್ನೇ ಬಸವಣ್ಣನವರು ತಮ್ಮ ಪ್ರಸಿದ್ಧ ವಚನವಾದ 'ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ' ಎಂದು ಬಹು ಸೊಗಸಾಗಿ ನುಡಿದಿದ್ದಾರೆ. ಇದೇ ಧ್ವನಿಯನ್ನು ಈ ಮೇಲಿನ ಕಗ್ಗದಲ್ಲೂ ಕಾಣಬಹುದು.

ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।
ಗುರುತಿಸೊಳಿತಿರುವುದನು ಕೇಡುಗಳ ನಡುವೆ ।।
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।
ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।

ಈ ಮೇಲಿನ ಕಗ್ಗದಲ್ಲಿ ಡಿ.ವಿ.ಜಿ. ಅವರು ಜನರು ತಮ್ಮಲ್ಲಿರುವುದರ ಕಡೆಗೆ ಗಮನಿಸದೆ ಸದಾ ತಮ್ಮಲ್ಲಿಲ್ಲದವುಗಳ ಬಗ್ಗೆ ಕೊರಗುತ್ತಾ ಗೋಳಾಡುತ್ತಾ ತಮ್ಮ ಜೀವನವನ್ನು ವ್ಯರ್ಥವಾಗಿ ಕಳೆಯುವ ಮನಸ್ಥಿತಿಯ ಬಗ್ಗೆ ಇಲ್ಲಿ ತಿಳಿಸಿ, ತಮಗೆ ದೊರೆತಿರುವುದರಲ್ಲಿ ಸಂತೋಷವನ್ನು ಕಾಣುವ ಮನೋಭಾವ ಬೆಳೆಸಿಕೊಂಡು ತೃಪ್ತಿಕರ ಜೀವನ ನಡೆಸಬೇಕೆಂಬ ಮಹತ್ವದ ಸಂದೇಶ ನೀಡಿದ್ದಾರೆ. ಇದೇ ನಿಜವಾದ ಹರುಷಕ್ಕೆ ದಾರಿ ಎಂಬ ಕಿವಿಮಾತು ಹೇಳಿದ್ದಾರೆ.

ಹೀಗೆ ಹುಡುಕುತ್ತಾ ಹೋದರೆ ಡಿ.ವಿ.ಜಿ.ಅವರ ಮಂಕುತಿಮ್ಮನ ಕಗ್ಗಗಳಲ್ಲಿ ಒಂದೊಂದು ಕಗ್ಗವು ಒಂದೊಂದು ಬದುಕಿನ ಪಾಠವನ್ನು ಅರುಹುವ ಅಮೂಲ್ಯ ಮುತ್ತೇ ಸರಿ. ಜನಸಾಮಾನ್ಯರಿಗೆ ಕೈ ದೀವಿಗೆಗಳಂತಿರುವ ಕಗ್ಗಗಳು ದೈನಂದಿನ ಬದುಕಿನಲ್ಲಿ ಹೇಗಿರಬೇಕೆಂಬ ಸರಳ ಮಾರ್ಗಗಳಿಂದ ಹಿಡಿದು ಪಾರಮಾರ್ಥಿಕ ಗುರಿ ಸಾಧನೆಯ ಕಡೆಗೂ ಮಾರ್ಗದರ್ಶನ ನೀಡುವ ಹಿರಿಮೆ ಹೊಂದಿರುವುದು ಅವುಗಳ ಹೆಚ್ಚುಗಾರಿಯೇ ಹೌದು. ಹೀಗಾಗಿಯೇ ಡಿ.ವಿ.ಜಿ.ಅವರು ಕನ್ನಡ ಸಾಹಿತ್ಯ ಲೋಕದ ಮೇರು ಪುರುಷರಾಗಿ ದೇಶಕಾಲಗಳ ಗಡಿ ಮೀರಿದ ಮಹಾನ್ ಚೇತನವಾಗಿ ನಮಗೆ ಕಾಣುತ್ತಾರೆ.

MORE FEATURES

ಕ್ರಿಕೆಟ್‌ನಲ್ಲಿ ಅವರ ಕೊಡುಗೆ ಅತ್ಯಂತ ಮಹತ್ತರವಾದದ್ದು

18-03-2025 ಬೆಂಗಳೂರು

“ಹೆಚ್ಚು ಕಡಿಮೆ ವರ್ಷಪೂರ್ತಿ ಒಂದಲ್ಲ ಒಂದು ಕಡೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅದರ ವಿಚ...

'ಯಯಾತಿ' ಕಾದಂಬರಿ ಒಂದು ಪ್ರಾಚೀನ ಪರಂಪರೆಯನ್ನು ಮುರಿದು ಕಟ್ಟಿದ ವಿನೂತನ ಕೃತಿ

18-03-2025 ಬೆಂಗಳೂರು

“ಒಟ್ಟಿನಲ್ಲಿ ಈ 'ಯಯಾತಿ' ಕಾದಂಬರಿ ಒಂದು ಪ್ರಾಚೀನ ಪರಂಪರೆಯನ್ನು ಮುರಿದು ಕಟ್ಟಿದ ವಿನೂತನ ಕೃತಿಯಾಗಿದೆ...

ನೋವನ್ನು ಮೀರಬೇಕಾದರೆ ಮೊದಲು ಅದನ್ನು ಅನುಭವಿಸಬೇಕಷ್ಟೇ!

18-03-2025 ಬೆಂಗಳೂರು

"ಮೊದಮೊದಲು ಏನಾದರೂ ಸಾಧಿಸಬೇಕಾದರೆ ಕಷ್ಟವಾಗುತ್ತದೆ. ಮನಸ್ಸು ಮೂಡನ್ನು ಸಹ ಹಾಳು ಮಾಡುತ್ತದೆ. ನಿಧಾನವಾಗಿ ಕೇಂದ್ರ...