'ಯಯಾತಿ' ಕಾದಂಬರಿ ಒಂದು ಪ್ರಾಚೀನ ಪರಂಪರೆಯನ್ನು ಮುರಿದು ಕಟ್ಟಿದ ವಿನೂತನ ಕೃತಿ


“ಒಟ್ಟಿನಲ್ಲಿ ಈ 'ಯಯಾತಿ' ಕಾದಂಬರಿ ಒಂದು ಪ್ರಾಚೀನ ಪರಂಪರೆಯನ್ನು ಮುರಿದು ಕಟ್ಟಿದ ವಿನೂತನ ಕೃತಿಯಾಗಿದೆ. ಮೊಟ್ಟ ಮೊದಲ ಬಾರಿಗೆ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಇಲ್ಲಿನ ಪಾತ್ರಗಳನ್ನು ಮರುಸೃಷ್ಟಿಸಲಾಗಿದೆ,” ಎನ್ನುತ್ತಾರೆ ಲಕ್ಷ್ಮಣ ಕೌಂಟೆ. ಅವರು ಪುರುಷೋತ್ತಮ ದಾಸ್‌ ಹೆಗ್ಗಡೆ ಅವರ “ಯಯಾತಿ” ಕಾದಂಬರಿ ಕುರಿತು ಬರೆದ ವಿಮರ್ಶೆ.

ಇದು ಪುರುಷೋತ್ತಮ ದಾಸ ಹೆಗ್ಗಡೆಯವರು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ರಚಿಸಿದ ಪ್ರಾಚೀನ ಕಥೆ ಆಧಾರಿತ ಕಾದಂಬರಿ. ಈ ಕಾದಂಬರಿಯಲ್ಲಿ ನಾನು ಕಂಡುಕೊಂಡ ಹಾಗೆ ಯಯಾತಿ ಮುಖ್ಯ ಕಥಾ ಹಂದರವಾದರೆ, ಯಯಾತಿಯ ಮಗಳು ಮಾಧವ ಮತ್ತುಗಾಲವರ ಉಪಕಥೆಯೂ ಆ ಕಥೆಗೆ ಪೂರಕವಾಗಿ ಬರುತ್ತದೆ. ೨೦೦೬ರಲ್ಲಿ ನಾನು ಮಾಧವಿ ಮತ್ತು ಗಾಲವರ ಕುರಿತು 'ಆಹುತಿ' ಕಾದಂಬರಿ ಬರೆದಿದ್ದೆ. ಅದು ಬಹುಜನ ಓದುಗರನ್ನು ಆಕರ್ಷಿಸಿತ್ತು, ಅದೀಗ ಮರು ಮುದ್ರಣ ಹಂತದಲ್ಲಿದೆ. ಅದನ್ನು ಬರೆಯುವ ಮುಂಚೆ ವಿ.ಎಸ್. ಖಾಂಡೇಕರ್ ರಚಿಸಿದ 'ಯಯಾತಿ' ಯನ್ನು ಹಿಂದಿಯಲ್ಲೂ, ಅದೇ ಕಾದಂಬರಿಯ ಕನ್ನಡ ಅನುವಾದ ವಿ. ಎಂ. ಇನಾಮದಾರ ಅವರ 'ಯಯಾತಿ'ಯನ್ನು, ಗಿರೀಶ ಕಾರ್ನಾಡ್ ಅವರ 'ಯಯಾತಿ' ನಾಟಕ ಮತ್ತು ಭಗವತ್ ಶರಣ ಉಪಾಧ್ಯಾಯ ಅವರ 'ಮಾಧವಿ' ನಾಟಕವನ್ನು ಓದಿದ್ದೆ. ನನ್ನ ರಚನೆಗೆ ಅವೆಲ್ಲ ಪರೋಕ್ಷ ಕಥಾ ಹಂದರವಾಗಿದ್ದವು.

ಒಂದು ತಿಂಗಳ ಹಿಂದೆ ಪುರುಷೋತ್ತಮ ದಾಸ ಹೆಗ್ಗಡೆಯವರು 'ಯಯಾತಿ' ಮತ್ತು ಎರಡು ಸಂಪುಟಗಳನ್ನು ಹೊಂದಿದ 'ಪುರುಷೋತ್ತಮಾಯಣ' ಅಂಚೆಯ ಮೂಲಕ ಕಳುಹಿಸಿಕೊಟ್ಟಿದ್ದರು. ಮೂರು ಪುಸ್ತಕಗಳು ಆಕರ್ಷಕ ಮುದ್ರಣ ಮತ್ತು ರಟ್ಟು ರಕ್ಷಾಕವಚವನ್ನು ಹೊಂದಿವೆ. ಸು. ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಅವುಗಳ ವಿನ್ಯಾಸವನ್ನು ನೋಡಿ ನಾನು ಅಚ್ಚರಿಗೊಂಡು ಅವರೊಂದಿಗೆ ಮಾತನಾಡಿದೆ. 'ಯಯಾತಿ' ಇದೇ ತಿಂಗಳ ಹದಿನಾರರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳುತ್ತಿದೆ.

ಮೂರುನೂರಾ ಹನ್ನೆರಡು ಪುಟಗಳಷ್ಟಿರುವ ಈ ಕಾದಂಬರಿಯನ್ನು ಎರಡು ದಿನಗಳಲ್ಲಿ ಓದಿ ಮುಗಿಸಿದೆ. ನಾನು ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದ ಕೃತಿಗಳನ್ನು ಓದಿದ್ದೆ ಮತ್ತು ಬರೆದಿದ್ದೆ. ಆದರೆ ಅವುಗಳಿಗಿಂತ ಇವರ ಬರಹ ಕಥಾ ವಿಶ್ಲೇಷಣೆ ಬೇರೆಯ ಸ್ವರೂಪದಲ್ಲಿಯೇ ಇದೆ. ಐತಿಹ್ಯಗಳ, ಅಮಾನುಷ ದೈವಿಶಕ್ತಿಗಳನ್ನು ಬದಿಗಿಟ್ಟು ಇವರು ಪ್ರತಿಯೊಂದು ಘಟನೆಗಳನ್ನು, ಪಾತ್ರಗಳ ಆಂತರ್ಯವನ್ನು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿಯೇ ರೋಚಕವಾಗಿಯೂ, ಲವಲವಿಕೆಯಲ್ಲೂ, ಪ್ರೌಢವಾಗಿಯೂ, ಸಮರ್ಥವಾಗಿಯೂ ರಚಿಸಿದ್ದಾರೆ. ವರ-ಶಾಪಗಳ ಗೊಡವೆ ಬದಿಗಿರಿಸಿ ರಸವಿದ್ಯೆಯ ಮೂಲಕ ತಾರುಣ್ಯವನ್ನು ವೃದ್ಧಿಸಿಕೊಳ್ಳಬಹುದು, ಅಕಾಲದಲ್ಲಿ ರಸ ಸೇವನೆಯನ್ನು ನಿಲ್ಲಿಸಿದರೆ ವೃದ್ದಾಪ್ಯವನ್ನು ಹೊಂದಬಹುದು ಎನ್ನುವ ವಿಚಾರವನ್ನು 'ಯಯಾತಿ' ಕಾದಂಬರಿ ಹೇಳುತ್ತದೆ.

ಯಯಾತಿ ತನ್ನ ಅತಿಕಾಮದ ತಣಿಕೆಗಾಗಿ ಚಿರಯೌವನ ಬಯಸುವ ಒಂದು ಪಾತ್ರ. ಅದು ಸಹಜವಾಗಿ ಪುರುಷರ ಮಹದಾಸೆಯೂ ಹೌದು. ಅದನ್ನು ಸಂಕೇತಿಸುವುದಕ್ಕಾಗಿ ಯಯಾತಿ ಪಾತ್ರವನ್ನು ವ್ಯಾಸ ಮಹರ್ಷಿ ಸೃಷ್ಟಿಸಿದಂತಿವೆ. ದೇವಯಾನಿಯನ್ನು ಮದುವೆಯಾಗಿ ಅವಳ ಮೂಲಕ ಅವಳ ಅಪ್ಪನಿಂದ ಅಕಾಲ ವೃದ್ಧಾಪ್ಯದ ಶಿಕ್ಷೆಯನ್ನು ಹೊಂದಿದ ಅವನು ಪುನಃ ಅವರಿಂದಲೇ ಉಶ್ಶಾಪವನ್ನು ಹೊಂದಿ ಪುತ್ರ ಪುರುವಿನ ಯೌವನ ಪಡೆದು ಅನೇಕ ವರ್ಷಗಳ ಕಾಲ ಭೋಗಲಾಲಸೆಯಲ್ಲಿ ಮುಳುಗಿದವನು. ಇದು ಮೂಲ ಕಥೆಯ ಹೂರಣ.

ಈ ಕಾದಂಬರಿಯಲ್ಲೂ ಸಹ ಸ್ವಭಾವತಃ ಕಾಮುಕನಾದ ಯಯಾತಿ ಗಾಲವನಿಂದ 'ಕಾಮಶಾಸ್ತ್ರ'ದ ವಿವಿಧ ಭಂಗಿಗಳ ಕುರಿತು ಅರಿಯುವಾಗ ಹಲವಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡವನು. ಆದರೆ ಅವನ ಈ ಕಾಮುಕ ವರ್ತನೆಗಳಿಗೆ ಲೇಖಕರು ಹೀಗೆ ವಿಶ್ಲೇಷಿಸುತ್ತಾರೆ. ಯಯಾತಿ ಶುಕ್ರಾಚಾರ್ಯನ ಪ್ರಶ್ನೆಯೊಂದಕ್ಕೆ ತನ್ನ ಸ್ವಭಾವಕ್ಕನುಗುಣವಾಗಿ ಉತ್ತರಿಸುತ್ತಾನೆ.

"ಗುರುಗಳೇ, ಜೀವನಪೂರ್ತಿ ಸರಿಯಾಗಿ ಬದುಕಲಿಲ್ಲ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ಸಾವಿಗಾಗಿ ಹೆದರುತ್ತಿಲ್ಲ, ಮುಪ್ಪಿಗಾಗಿ ಹೆದರುತಿದ್ದೇನೆ. ನನಗೆ ಗೊತ್ತು ನಾನೊಂದು ದಿನ ಸಾಯುವೆನೆಂದು. ಆದರೆ ಆ ಸಾವು ನಾನು ಗಟ್ಟಿಯಿದ್ದಾಗಲೇ ಬರಲಿ.ಮುಪ್ಪಿನಲ್ಲಿ ನರಳಿ ನರಳಿ ಸಾಯುವುದು ನನಗಿಷ್ಟವಿಲ್ಲ... ಈ ವಯಸ್ಸು, ಯೌವ್ವನವು ಹೀಗೆಯೇ ಇರುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಸುಖವನ್ನು ಅನುಭವಿಸಬೇಕು. ಸುರೆ-ಸುರತಿಯ ಸುಖದಲ್ಲಿ ತೇಲಾಡಬೇಕು. ನಾರಿಯರ ದೇಹಸಿರಿಯನ್ನು ಕಣ್ಣುಗಳು ಆಸ್ವಾದಿಸಬೇಕು, ಅವರ ಪಿಸುಮಾತುಗಳು ಸದಾ ಕಿವಿಯಲ್ಲಿ ಬೀಳಬೇಕು. ಮೈಗೆ ಪೂಸಿಕೊಂಡಿರುವ ಸುಗಂಧವು ನನ್ನ ಮೂಗಿಗೆ ಬಡಿಯಬೇಕು, ಲಲನಾಮಣಿಯರ ಸೌಂದರ್ಯವನ್ನು ನಾಲಿಗೆಯು ಹೊಗಳಬೇಕು, ಸ್ಪರ್ಶಸುಖದಿಂದ ದೇಹವು ಸಂತೋಷಪಡಬೇಕು. ವಸುಂಧರೆಯ ವಸುಮತಿಯರ ಸಿಹಿಜೇನು ಸವಿಯಬೇಕು. ಇಂದೇ ಕೊನೆಯ ದಿನ ಎಂಬಂತೆ ಪ್ರತಿಕ್ಷಣವನ್ನು ಅನುಭವಿಸಬೇಕು. ಸುಖ ಸಂತೋಷಗಳು ನನ್ನವುಗಳಾಗಬೇಕು. ಪ್ರತಿದಿನವೂ ಸಾವು ಸನಿಹವಾಗುತ್ತಲೇ ಇದ್ದು ಸಾಯುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ಸುಖವನ್ನು ಉಣ್ಣಬೇಕು ಎನ್ನುವುದೇ ನನ್ನ ಸಿದ್ಧಾಂತವಾಗಿದೆ." (ಪುಟ :೨೩೪).

ಇದೇ ಕಾದಂಬರಿಯಲ್ಲಿ ಬರುವ ಗಾಲವ ಎನ್ನುವ ಯುವ ತಾಪಸನ ವ್ಯಕ್ತಿತ್ವ ಇಲ್ಲಿ ಭಿನ್ನವಾಗಿ ರೂಪುಗೊಂಡಿದೆ. ಮೂಲತಃ ಗಾಲವ ವಿಶ್ವಾಮಿತ್ರ ರಾಜರ್ಷಿಯ ಪ್ರಿಯಶಿಷ್ಯ. ಹನ್ನೆರಡು ವರುಷಗಳ ಕಾಲ ಅವರಲ್ಲಿ ಅಧ್ಯಯನ ಮಾಡಿದ ಅವನು ವಿದ್ಯಾಪೂರ್ತಿಯ ನಂತರ ಇತರ ಹುಡುಗರಂತೆ ಗುರುದಕ್ಷಿಣೆ ಕೊಡಲು ಮುಂದೆಬರುತ್ತಾನೆ. ವಿಶ್ವಾಮಿತ್ರ ಅವನ ಸ್ಥಿತಿಯನ್ನು ಅರ್ಥ ಮಾಡಿಕೊಂಡು 'ನೀನೇನು ಕೊಡುವುದು ಬೇಡ' ಎನ್ನುತ್ತಾರೆ. ಅವನಾದರೂ 'ವಿದ್ಯಾರ್ಥಿಯಾದವನು ಗುರುವರ್ಯರಿಂದ ಕಲಿತ ವಿದ್ಯೆಗೆ ಪ್ರತಿಯಾಗಿ ಗುರುವರ್ಯರಿಗೆ ದಕ್ಷಿಣೆ ಕೊಡಲೇ ಬೇಕು. ಶಿಷ್ಯನಿಗೆ ಬೋಧಿಸಿದ ವಿದ್ಯೆಯ ಸಾರ್ಥಕ್ಯ ಅದೆಯೇ. ನೀವು ನನ್ನಿಂದ ಗುರುದಕ್ಷಿಣೆ ಪಡೆಯಲೇ ಬೇಕು. ನಿಮಗೇನು ಬೇಕು ಕೇಳಿ, ನಾನು ಕೊಡುವೆ' ಎನ್ನುತ್ತಾನೆ.

ವಿಶ್ವಾಮಿತ್ರರು 'ನಾನು ಕೊಡುತ್ತೇನೆ' ಎನ್ನುವ ಮಾತನ್ನು ಅವನಲ್ಲಿ ಉದಿಸಿದ ಅಹಂಕಾರವೆಂದು ಭಾವಿಸಿ ಅದನ್ನು ಮುರಿಯಲು 'ಕೊಡುವುದಾದರೆ ಎಂಟುನೂರು ಅಶ್ವಮೇಧಿ ಕುದುರೆಗಳನ್ನು ಕೊಡು. ಒಂದು ಹೆಚ್ಚೂ ಬೇಡ, ಒಂದು ಕಡಿಮೆಯೂ ಬೇಡ' ಎನ್ನುತ್ತಾರೆ. ಅವನು ಚಿಂತಿತನಾಗುತ್ತಾನೆ. ಕಿವಿ ಮಾತ್ರ ಕಪ್ಪಗಿರುವ, ಶರೀರ ಪೂರ್ತ ಬೆಳ್ಳಗಿರುವ ಹರೆಯದ ನಿರೋಗಿ ಗಂಡು ಕುದುರೆಗಳನ್ನು ಅಷ್ಟು ಪ್ರಮಾಣದಲ್ಲಿ ತರುವುದು ಎಲ್ಲಿಂದ?' ಎನ್ನುವ ಚಿಂತೆ ಅವನನ್ನು ಕಾಡುತ್ತದೆ. ಗುರುಗಳು ಕೇಳಿದ್ದಾರೆ ಎಂದ ಮೇಲೆ ಕೊಡಲೇ ಬೇಕು' ಹೀಗೆಂದು ಅವನು ಕುದುರೆಗಳನ್ನು ಹೊಂದಿಸುವುದಕ್ಕಾಗಿ ಮಹಾದಾನಿ ಎಂದು ಪ್ರಸಿದ್ಧಿಯನ್ನು ಹೊಂದಿದ್ದ ಆಶ್ರಮವಾಸಿ ಯಯಾತಿ ಬಳಿಗೆ ಬರುತ್ತಾನೆ.

ರಾಜ್ಯವನ್ನು ತೊರೆದು ಸನ್ಯಾಸಾಶ್ರಮದಲ್ಲಿರುವ ಯಯಾತಿ ಕುದುರೆಗಳ ಬದಲು ತಮ್ಮ ಮಗಳು ಮಾಧವಿಯನ್ನು ಅವನಿಗೆ ದಾನದ ರೂಪದಲ್ಲಿ ಕೊಟ್ಟು 'ಇವಳು ಚಿರಕೌಮಾರ್ಯ ವರಪ್ರಾಪ್ತೆ. ಇವಳ ಉದರದಿಂದ ಹುಟ್ಟಿದ ಮಕ್ಕಳು ಚಕ್ರವರ್ತಿಗಳಾಗುತ್ತಾರೆ. ಇವಳನ್ನು ಯಾರಾದರೂ ಅಪುತ್ರಕ ದೊರೆಗಿತ್ತು ನಿನಗೆ ಅಗತ್ಯವಿರುವಷ್ಟು ಕುದುರೆಗಳನ್ನು ಪಡೆ' ಎನ್ನುತ್ತಾರೆ.

ಗಾಲವ ಮಾಧವಿಯೊಂದಿಗೆ ಹೊರಡುತ್ತಾನೆ. ಎಂಟು ನೂರು ಕುದುರೆಗಳನ್ನು ಹೊಂದಿಸಲು ಗಾಲವ ಮತ್ತು ಮಾಧವಿ ಪಡಬಾರದ ಕಷ್ಟಪಡುತ್ತಾರೆ. ಇದು ನನ್ನ 'ಆಹುತಿ' ಕಾದಂಬರಿಯ ಕಥಾವಸ್ತುವಾಗಿದೆ. ಅಲ್ಲಿ ಗಾಲವ ಉನ್ನತ ಆದರ್ಶ ಹೊಂದಿದ, ಗುರಿಸಾಧನೆಗೆ ಎಲ್ಲ ಸುಖಗಳನ್ನು ಬದಿಗಿರಿಸಿ ಪ್ರಯತ್ನಿಸುವ ಸುಶೀಲ ವ್ಯಕ್ತಿತ್ವ ಹೊಂದಿದವನಾಗಿದ್ದಾನೆ.

ಈ ಕಾದಂಬರಿಯಲ್ಲಿ ಗಾಲವನಲ್ಲಿ ಸಚ್ಚಾರಿತ್ರ್ಯವಿಲ್ಲ. ಅವನ ವ್ಯಕ್ತಿತ್ವದ ಕುರಿತು ಶಾಂಡಲಿ ಆಡುವ ಮಾತುಗಳು ಆ ಪಾತ್ರದ ನೈಜ ರೂಪವನ್ನು ಅನಾವರಣಗೊಳಿಸುತ್ತವೆ :

"ಗಾಲವ, ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಳ್ಳುತ್ತ ಭೋಗದ ವಸ್ತುವನ್ನಾಗಿ ನೋಡುತ್ತಿದ್ದ ಕ್ಷುದ್ರಯುಗದಲ್ಲಿ ಶ್ವೇತಕೇತುವು ಮಹಿಳೆಯರ ಸ್ಥಾನದಲ್ಲಿ ನಿಂತು ಅವರ ನೋವುಗಳನ್ನು ಅರ್ಥಮಾಡಿಕೊಂಡು 'ಕಾಮಶಾಸ್ತ್ರ'ವನ್ನು ರಚಿಸಿದ್ದನು. ಪ್ರಪಂಚದ ಮೊದಲ ಮಹಿಳಾವಾದಿಯೂ ಅವನಾಗಿದ್ದನು. ಹೆಣ್ಣಿನ ಆಸೆ-ಬಯಕೆಗಳ ಬಗ್ಗೆ, ಗಂಡಿಗೆ ಸರಿಸಮಾನವಾಗಿ ಅವುಗಳನ್ನು ವ್ಯಕ್ತಪಡಿಸುವ ಬಗ್ಗೆ, ಪ್ರೀತಿ ಪ್ರೇಮ ಪ್ರಣಯದ ಸಿದ್ಧಾಂತಗಳ ಬಗ್ಗೆ ಹೆಚ್ಚಾಗಿ ಕಾಮಶಾಸ್ತ್ರದಲ್ಲಿ ಬರೆಯಲಾಗಿದೆ. ಭಗ್ನಗೊಂಡ ಹೃದಯ, ದೌರ್ಜನ್ಯ, ನಾಶವಾಗದ ಪ್ರೀತಿ, ಲಂಪಟತನ, ಸಂಬಂಧಿಗಳೊಡನೆಯ ಕಾಮ, ಏಕಮುಖ ಕಾಮ, ಏಕಮುಖಪ್ರೇಮ ಮುಂತಾದವುಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಆದರೆ ಅವೆಲ್ಲವುಗಳನ್ನು ಬಿಟ್ಟು ಒಂದೆರಡು ಅಧ್ಯಾಯಗಳಲ್ಲಿ ತಿಳಿಸಿರುವ ಸೃಜನಾತ್ಮಕ ಕಾಮದ ಭಂಗಿಗಳು, ವಿವಿಧ ರೀತಿಯ ಹೆಣ್ಣುಗಳ ಬಗ್ಗೆ ನೀನು ಪ್ರಾಮುಖ್ಯತೆ ಕೊಟ್ಟಿದ್ದು ಸರಿಯಲ್ಲ. ಶ್ವೇತಕೇತುವಿನ ಉದ್ದೇಶವನ್ನು ನೀನು ಅರ್ಥಮಾಡಿಕೊಳ್ಳಲಿಲ್ಲ.. ನೀನು ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡೆ... ಗುರಿಯನ್ನು ಮುಟ್ಟಲು ನೀನು ಯಶಸ್ವಿಯಾದರೂ ಅನುಸರಿಸಿದ ಮಾರ್ಗವು ಸರಿಯಾದುದಲ್ಲ."(ಪು : 278)

ಒಟ್ಟಿನಲ್ಲಿ ಈ 'ಯಯಾತಿ' ಕಾದಂಬರಿ ಒಂದು ಪ್ರಾಚೀನ ಪರಂಪರೆಯನ್ನು ಮುರಿದು ಕಟ್ಟಿದ ವಿನೂತನ ಕೃತಿಯಾಗಿದೆ. ಮೊಟ್ಟ ಮೊದಲ ಬಾರಿಗೆ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಇಲ್ಲಿನ ಪಾತ್ರಗಳನ್ನು ಮರುಸೃಷ್ಟಿಸಲಾಗಿದೆ. ಬಳಸಿದ ಭಾಷೆಯಲ್ಲಿ ಲವಲವಿಕೆ ಇದೆ, ಪ್ರೌಢಿಮೆ ಇದೆ.

MORE FEATURES

ಕ್ರಿಕೆಟ್‌ನಲ್ಲಿ ಅವರ ಕೊಡುಗೆ ಅತ್ಯಂತ ಮಹತ್ತರವಾದದ್ದು

18-03-2025 ಬೆಂಗಳೂರು

“ಹೆಚ್ಚು ಕಡಿಮೆ ವರ್ಷಪೂರ್ತಿ ಒಂದಲ್ಲ ಒಂದು ಕಡೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅದರ ವಿಚ...

ನೋವನ್ನು ಮೀರಬೇಕಾದರೆ ಮೊದಲು ಅದನ್ನು ಅನುಭವಿಸಬೇಕಷ್ಟೇ!

18-03-2025 ಬೆಂಗಳೂರು

"ಮೊದಮೊದಲು ಏನಾದರೂ ಸಾಧಿಸಬೇಕಾದರೆ ಕಷ್ಟವಾಗುತ್ತದೆ. ಮನಸ್ಸು ಮೂಡನ್ನು ಸಹ ಹಾಳು ಮಾಡುತ್ತದೆ. ನಿಧಾನವಾಗಿ ಕೇಂದ್ರ...

ಒಳ್ಳೆಯ ಓದು ಕೊಡುವ ಖುಷಿ ಬರೆದು ಮುಗಿಯುವಂತದ್ದಲ್ಲ

18-03-2025 ಬೆಂಗಳೂರು

“ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲಿ ಬೇಗ ಬೇಗ ಓದಿದರೆ ಮುಗಿದುಬಿಡುತ್ತದೋ ಎಂದು ಓದಿ ಸವಿದ ಕೃತಿ ಇದು. ನಿಸ್ಸಂ...