Date: 06-03-2023
Location: ಬೆಂಗಳೂರು
"ರೈತಾಪಿ ವರ್ಗದ ಬಡ ಕುಟುಂಬದ ಚಿತ್ರಣ ಸೊಗಸಾಗಿ ಮೂಡಿದೆ. ಈಗಿನ ಹಳ್ಳಿಗಳಲ್ಲಿ ಆಸ್ಪತ್ರೆ, ಶಿಕ್ಷಣ, ಬ್ಯಾಂಕಿನ ಸೌಲಭ್ಯಗಳು ಸುಧಾರಿಸಿವೆ. ಆದರೂ ಮಳೆಯ ನಂಬಿ ಬೆಳೆ, ದಲ್ಲಾಳಿಗಳ ಕಾಟ, ಉಳುವ ಭೂಮಿಗಳನ್ನು ನುಂಗುವ ಲ್ಯಾಂಡ್ ಮಾಫಿಯಾಗಳ ಹಿಡಿತ, ಆತ್ಮಹತ್ಯೆ...ಮುಂತಾದ ಸಂಕಷ್ಟಗಳಿಂದ ಪೂರ್ಣವಾಗಿ ನಮ್ಮ ರೈತರು ಇನ್ನೂ ಹೊರ ಬಂದಿಲ್ಲ. ಆದರೆ ನಂಬಿಕೆ ಇದೆ" ಎನ್ನುತ್ತಾರೆ ಲೇಖಕಿ ಚಿತ್ರಲೇಖಾ.ಎಸ್ ಅವರು. ಇಂದಿರಾ ನಾಡಿಗ್ ಅವರ "ಬಲವಂತದ ಕರ್ಮ" ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಕಥೆ ಒಂದು ಸಾವಿನೊಂದಿಗೆ ಪ್ರಾರಂಭವಾಗುತ್ತದೆ. ಪೊನ್ನಾಥಪುರವೆಂಬ ಹಳ್ಳಿಯ ಒಂದು ಚಿಕ್ಕ ಬ್ರಾಹ್ಮಣ ಅಗ್ರಹಾರದಲ್ಲಿ ಲಕ್ಷ್ಮಿದೇವಿ ಎಂಬ ಬಡ ಎಳೆ ಪ್ರಾಯದ ಹೆಣ್ಣು ಮಗಳ ಹೆಣದ ಸುತ್ತ ಬಂಧು ಹಾಗು ನೆರೆ ಹೊರೆಯ ಜನ ಕೂಡಿರುತ್ತಾರೆ.ಅಲ್ಲಿಯ ಚರ್ಚಾ ವಾತಾವರಣ ತಟ್ಟನೆ ಅನಂತ ಮೂರ್ತಿಯವರ "ಸಂಸ್ಕಾರ" ಕಾದಂಬರಿಯ ನೆನಪು ತಂದಿತಾದರು ಸಮಸ್ಯೆ ಭಿನ್ನವಾಗಿತ್ತು. ಎಂಟು ವರ್ಷದ ಗುಂಡಮ್ಮ ತಾಯಿಯ ಹೆಣದ ಮೇಲೆ ಬಿದ್ದು ರೋಧಿಸುತಿದ್ದರೆ, ಐದು ವರ್ಷದ ಬಾಲಕ ಸುಬ್ಬು ಏನೂ ಅರ್ಥ ವಾಗದ ಸ್ಥಿತಿಯಲ್ಲಿ ನಿಂತಿದ್ದನು. ತಾಯಿಯ ಹೊಟ್ಟೆಯ ವಾಸದಲ್ಲಿದ್ದಾಗ, ತಂದೆಯನ್ನು ಕಳೆದುಕೊಂಡ. ಐದರ ಹಂತದಲ್ಲಿ ತಾಯಿಯನ್ನು ಬಲಿಗೊಟ್ಟ ನತದೃಷ್ಟ ಹಾಗು ಕಥಾ ನಾಯಕ. ಹೆಣ ತೆಗೆಯಲು ತಡ ಆಯ್ತು ಎಂದು ದಾಯಾದಿಗಳು ಚರ್ಚೆ ಮಾಡುತ್ತಿರಲು ಹೆತ್ತವರಾದ ಲಲಿತಮ್ಮ, ವೆಂಕಟಶಾಸ್ತ್ರಿಗಳ ಆಗಮನವಾಗುತ್ತದೆ. ಹಿರಿಯರು ಕೂಡಿ ಪುಟ್ಟ ಬಾಲಕನ ಕೈಯಲ್ಲಿ ತಾಯಿಯ ಅಂತ್ಯಕ್ರಮವನ್ನು ಮಾಡಿಸುತ್ತಾರೆ. ಅಜ್ಜ ಅಜ್ಜಿ ಮಗಳ ಮುಂದಿನ ಕಾರ್ಯಕ್ಕೆ ಒಂದಿಷ್ಟು ಹಣವನ್ನು ಕೊಟ್ಟು ಊರಿಗೆ ಮರಳಿ ಹೋಗುತ್ತಾರೆ. ಮಕ್ಕಳ ಜವಾಬ್ದಾರಿ ಅಲ್ಲಿ ಒಂದು ಸಮಸ್ಯೆಯಾಗಿ ಎಲ್ಲರನ್ನೂ ಕಾಡುತ್ತದೆ.
ನಾಲ್ಕು ಜನ ದೊಡ್ಡಪ್ಪ-ಚಿಕ್ಕಪ್ಪಂದಿರ ನಡುವೆ ಮಕ್ಕಳು ಅನಾಥರಾಗುತ್ತಾರೆ. ಮಗ ದೊಡ್ಡ ವಿದ್ಯಾವಂತನಾಗಬೇಕೆಂಬ ಲಕ್ಷ್ಮಿದೇವಿಯ ಆಸೆ ಪುಟ್ಟ ಸುಬ್ಬುವಿಗೆ ಅರ್ಥವಾಗದಿದ್ದರೂ ಚೀಲ ಹೊತ್ತು ಶಾಲೆಗೆ ಹೋಗುವ ಆಸೆ ಅವನಿಗಿತ್ತು. ಆದರೆ ಈಗ ಗುಂಡಮ್ಮ ಎಲ್ಲರ ಮನೆ ಕೆಲಸಕ್ಕೆ ಸಹಾಯಕಿಯಾಗಿ, ಸುಬ್ಬು ಹೊಲ ಮತ್ತು ಕೊಟ್ಟಿಗೆ ಕೆಲಸಕ್ಕೆ ಗುಲಾಮನಾಗಿ ಶಾಲೆ ಮರೆತು ಅರೆಹೊಟ್ಟೆ ಕೂಳಿಗಾಗಿ ಪರದಾಡುವ ಸ್ಥಿತಿಗೆ ಇಳಿದರು. ಒಮ್ಮೆ ಇಲ್ಲಿಯ ಬಂಧುಗಳ ಮತ್ತು ಅಜ್ಜ- ಅಜ್ಜಿಯರ ನಡುವೆ ಮಕ್ಕಳ ಚೆಂಡಾಟವೂ ನಡೆದಿತ್ತು. ಕಡಗೆ ಚಿಕ್ಕಪ್ಪ ಸುಬ್ಬರಾವ್ ಮತ್ತು ಪಾರ್ವತಿ ಇರುವ ಒಬ್ಬ ಮಗಳ ಮದುವೆ ಮಾಡಿ ತಮಗೆ ದಿಕ್ಕಾಗಿರಲಿ ಎಂದು ಕರುಣೆಯಿಂದ ಇವರ ಜವಾಬ್ದಾರಿಯನ್ನು ಹೊತ್ತರು. ಹೀಗೆ ಗುಂಡಮ್ಮ ಮತ್ತು ಸುಬ್ಬು ಒಂದು ನೆಲೆ ಕಂಡರು.
ವಯಸ್ಸಿಗೆ ಬಂದ ಗುಂಡಮ್ಮನಿಗೆ ಇಬ್ಬರು ಮಕ್ಕಳ ತಂದೆಯಾದ ಶೇಷಾಚಲ ಎಂಬ ವರನೊಂದಿಗೆ ವಿವಾಹವಾಗುತ್ತದೆ. ಅವಳಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ. ಅನಾರೋಗ್ಯಕ್ಕೆ ತುತ್ತಾಗುವ ಚಿಕ್ಕಪ್ಪ ಸುಬ್ಬರಾಯರಿಗೆ ಸುಬ್ಬುವೇ ಆಸರೆ. ಅವರ ಹೊಲ, ಗದ್ದೆ, ತೋಟ ಎಂಬಂತೆ ಎಲ್ಲ ವ್ಯವಹಾರಗಳನ್ನು ಸುಬ್ಬು ನೋಡಿಕೊಳ್ಳುತ್ತಾನೆ. ಪ್ರಾಮಾಣಿಕತೆ, ನಿಷ್ಟೆ ಮತ್ತು ಸ್ವಾಭಿಮಾನ ಸುಬ್ಬುವಿನ ಆಸ್ತಿ. ಇದರಿಂದ ಹೆಚ್ಚು ಸುಪ್ರೀತರಾದ ಆ ಹಿರಿಯ ದಂಪತಿಗಳು ಅವನಿಗೆ ಸೀತಾಲಕ್ಷ್ಮಿ ಎಂಬ ಕನ್ಯೆ ತಂದು ಮದುವೆ ಮಾಡಿ ವಾಸಿಸಲು ಚಿಕ್ಕ ಜಾಗವನ್ನು ಸಹ ಕೊಡುತ್ತಾರೆ. ಚಿಕ್ಕಪ್ಪ ವಿಧಿವಶರಾದ ನಂತರ ಸುಬ್ಬು ಹೊಸ ಮನೆ ವಾಸ, ಬಹು ಕಷ್ಟ ದಿಂದ ಎರ್ಡೆಕರೆ ಭೂಮಿಯ ಖರೀದಿ, ನಾಲ್ಕು ಹೆಣ್ಣು ಎರಡು ಗಂಡು ಮಕ್ಕಳ ಪಾಲನೆ, ಒಂದು ಗಂಡು ಮಗುವಿನ ಸಾವು, ಮಾನಸಿಕ ಹಾಗು ದೈಹಿಕ ಅನಾರೋಗ್ಯದ ಸಮಸ್ಯೆಗಳು ಎಂಬ ನಾನಾ ಕಷ್ಟಗಳಿಗೆ ತುತ್ತಾಗುತ್ತಾರೆ.
ಪತ್ನಿ ಸೀತಾಲಕ್ಷ್ಮಿ ಸಹ ಬಡತನದ ಬೇಗುದಿಯಲ್ಲಿ ಎಲ್ಲಾ ಸಂಕಷ್ಟಗಳನ್ನೂ ಸಹಿಸಿ ತಮ್ಮ ಖಾಯಿಲೆಯನ್ನು ಮುಚ್ಚಿಟ್ಟು ,ಗಂಡನ ಕೋಪಾವೇಶಗಳನ್ನು ಸಹಿಸಿ, ಕಡೆಯದಾಗಿ ಆಸೆ ಪಡುವ ಒಂದು ಬೊಂಡಾವನ್ನು ಸಹ ಕೊಂಡು ತಿನ್ನಲಾಗದ ಹೀನ ಸ್ಥಿತಿಯಲ್ಲಿ ಪ್ರಾಣ ಬಿಡುವ ದುರಂತ ನಾಯಕಿಯಾಗುತ್ತಾರೆ. ನಾಲ್ಕು ಹೆಣ್ಣು ಮಕ್ಕಳ ಪೈಕಿ ದಿಟ್ಟೆ ಎನಿಸಿದ ವಾರಿಜೆ ತಂದೆಗೆ ಆಸರೆಯಾಗಿ ನಿಂತಳೆ? ಆ ಕಾಲಕ್ಕೆ ಶಾಪವಾದ ಹೆಣ್ಣು ಮಕ್ಕಳ ಬದುಕು ಸುಖಾಂತ್ಯವನ್ನು ಕಂಡಿತೆ? ವಿದ್ಯೆ ಹತ್ತದೆ ಗೆಳೆಯರೊಂದಿಗೆ ಸುತ್ತಾಡುತ್ತಿದ್ದ ಶ್ರೀನಾಥ ಮನೆಯ ಜವಾಬ್ದಾರಿ ಹೊತ್ತನೆ? ಸುಖದ ನೆರಳನ್ನು ಸಹ ಕಾಣದ ಸುಬ್ಬು ಏನಾದರು? ಕೈ ಬಿಟ್ಟ ಜಮೀನು ಮರಳಿ ಸಿಕ್ಕಿತೆ? "ನಾ ಮಾಡಿದಾ ಕರ್ಮ ಬಲವಂತವಾದರೆ ನೀ ಮಾಡುವುದೇನೋ ಸಂಜೀವಾ..." ಸುಬ್ಬುವಿನ ಮಾರ್ಮಿಕ ಮಾತುಗಳ ಅರ್ಥವೇನು.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ "ಬಲವಂತದ ಕರ್ಮ " ಕಾದಂಬರಿಯಲ್ಲಿದೆ.
ಇದೊಂದು ಪ್ರಾರಂಭಿಕ ಕಾದಂಬರಿ ಎನಿಸದೆ ವಯೋ ಮತ್ತು ವೃತ್ತಿ ಅನುಭವಗಳಿಂದ ಪಕ್ವಗೊಂಡ ಮುತ್ಸದಿಯೊಬ್ಬರ ಭಾವನಾತ್ಮಕ ಕೃತಿ ಎಂಬ ತೃಪ್ತಿಯನ್ನು ಕೊಟ್ಟಿತು. ರೈತಾಪಿ ವರ್ಗದ ಬಡ ಕುಟುಂಬದ ಚಿತ್ರಣ ಸೊಗಸಾಗಿ ಮೂಡಿದೆ. ಈಗಿನ ಹಳ್ಳಿಗಳಲ್ಲಿ ಆಸ್ಪತ್ರೆ, ಶಿಕ್ಷಣ, ಬ್ಯಾಂಕಿನ ಸೌಲಭ್ಯಗಳು ಸುಧಾರಿಸಿವೆ. ಆದರೂ ಮಳೆಯ ನಂಬಿ ಬೆಳೆ, ದಲ್ಲಾಳಿಗಳ ಕಾಟ, ಉಳುವ ಭೂಮಿಗಳನ್ನು ನುಂಗುವ ಲ್ಯಾಂಡ್ ಮಾಫಿಯಾಗಳ ಹಿಡಿತ, ಆತ್ಮಹತ್ಯೆ...ಮುಂತಾದ ಸಂಕಷ್ಟಗಳಿಂದ ಪೂರ್ಣವಾಗಿ ನಮ್ಮ ರೈತರು ಇನ್ನೂ ಹೊರ ಬಂದಿಲ್ಲ. ಆದರೆ ನಂಬಿಕೆ ಇದೆ...ಲೇಖಕಿಯಿಂದ ಇನ್ನೂ ಉತ್ತಮ ಕಾದಂಬರಿಗಳಿಗಾಗಿ ಕಾಯುವೆ. ಜೈ ಕಿಸಾನ್ ಜೈ ಜವಾನ್.
ಶಹಾಪುರ: ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಶಹಾಪುರ ನೀಡುವ ರಾಜ್ಯಮಟ್ಟದ ‘ಕರದಳ್ಳಿ ಸದ್ಭಾವನಾ ಪುರಸ್ಕಾರ 2...
ಬೆಂಗಳೂರು: ಮಾತಿನ ಮನೆ ಆಶ್ರಯದಲ್ಲಿ ಮಧುರಾ ಮೂರ್ತಿ ಅವರ ಸಂಪಾದಕತ್ವದ ‘ನೀರ ಮೇಲಣ ನೆರಳು’ ಕವನ ಸಂಕಲನ ಲೋ...
ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ...
©2024 Book Brahma Private Limited.