ಪ್ರೀತಿ ಪ್ರಣಯ ಪುಕಾರು ಸುತ್ತಲೂ ಹೆಣೆದ ಕತೆಗಳ ಸರಮಾಲೆ..


ಲೇಖಕಿ ವೈಶಾಲಿ ಹೆಗಡೆ ಅವರು ಬರೆದಿರುವ ಪ್ರೀತಿ ಪ್ರಣಯ ಪುಕಾರು ಸಣ್ಣ ಕತೆಗಳ ಸಂಕಲದ ಬಗ್ಗೆ ಲೇಖಕಿ ಸಂಗೀತಾ ಚಚಡಿ ಅವರು ಬರೆದಿರುವ ಟಿಪ್ಪಣಿ ನಿಮ್ಮ ಓದಿಗಾಗಿ..

ಪುಸ್ತಕ :ಪ್ರೀತಿ ಪ್ರಣಯ ಪುಕಾರು
ಲೇಖಕಿ :ವೈಶಾಲಿ ಹೆಗಡೆ
ಪುಟ: 112
ಬೆಲೆ:100
ಮುದ್ರಣ: 2021
ಪ್ರಕಾಶನ: ಧರಣಿ ಪ್ರಿಂಟರ್‍ಸ್

ಮೊನ್ನೆ ಜಯಶ್ರೀ ದೇಶಪಾಂಡೆ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಣಕು ರಮಾಕಾಂತ್ ತಮ್ಮ ಮಾತಿನ ಮಧ್ಯ ವೈಶಾಲಿ ಹೆಗಡೆಯವರನ್ನು ನೆನಪಿಸಿಕೊಂಡರು. ಅಮೇರಿಕಾದ ಬೋಸ್ಟನ್ ನಲ್ಲಿ ನೆಲೆಸಿರುವ ಅವರು ಕೆಲವು ಸ್ವಯಂ ಸೇವಾ ಸಂಘಟನೆಗಳಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಅಣ್ಣನ ಊರಿಗೆ ಹೋದಾಗ ,ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಒಂದು ಸಮಾರಂಭದಲ್ಲಿ ಕೆಲವು ನಿಮಿಷಗಳಷ್ಟೇ ಮಾತನಾಡಿದ್ದು ವೈಶಾಲಿಯವರ ಜೊತೆ . ಬಹುಶಃ ಬರವಣಿಗೆಯ ಸೆಳೆತವೇನೋ ಆ ಕೆಲವೇ ನಿಮಿಷಗಳಲ್ಲಿ ಅಲ್ಲೊಂದು ಆತ್ಮೀಯತೆ ಮೂಡಿತ್ತು . ಆಮೇಲಾಮೇಲೆ ಕೆಲವು ಪೋಸ್ಟಗಳನ್ನು ಫೇಸ್ಬುಕ್ ನಲ್ಲಿ ನೋಡಿದ್ದಷ್ಟೇ . ಮನೆಯಲ್ಲಿ ತಂದಿಟ್ಟ ಇನ್ನೂ ಓದಿರದ ಅವರ ಪುಸ್ತಕದ ನೆನಪಾಯಿತು. ಅಂದು ಕಾರ್ಯಕ್ರಮದಿಂದ ಬಂದ ತಕ್ಷಣ ಮೊದಲು ಅವರ ಪುಸ್ತಕ ತೆರೆದೆ.

ಹದಿನಾಲ್ಕು ಕಥೆಗಳ ಕಥಾ ಸಂಕಲನ ಇದು . ಹೆಚ್ಚು ಕಮ್ಮಿ ಎಲ್ಲ ಕಥೆಗಳು ಬಹುಮಾನಿತ ಮತ್ತು ಪ್ರತಿಷ್ಠಿತ ಪತ್ರಿಕೆ ಹಾಗು ವಾರಪತ್ರಿಕೆಗಳಲ್ಲಿ ಪ್ರಕಟಿತ. ಹೀಗಾಗಿ ಎಲ್ಲವೂ ತೂಕವುಳ್ಳ ಕಥೆಗಳೇ .

ಆದರೆ ನನ್ನ ಗೊಂದಲ ಇದ್ದದ್ದು ಪುಸ್ತಕದ ಹೆಸರಿನ ಬಗ್ಗೆಯೇ! ಇದೇನು ಪ್ರೀತಿ ಪ್ರಣಯ ಪುಕಾರು ಎಂದು ? ನಮ್ಮ ಕಡೆ ಪುಕಾರು ಎಂದರೆ ಸುಮ್ಮ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವದು . ಪ್ರೀತಿ ಮತ್ತು ಪ್ರಣಯದ ಬಗ್ಗೆ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ ಬಗೆಗಿನ ಕಥೆ ಅಂದುಕೊಂಡಿದ್ದೆ . ಕಥೆಯನ್ನು ಓದಲು ಶುರು ಮಾಡಿದೆ .ಕಥೆಯನ್ನು ಓದಿದ ಮೇಲೆ ಇಲ್ಲಿ ಪುಕಾರು ಬರಲೇ ಇಲ್ಲವಲ್ಲ ಅಂದುಕೊಂಡೆ . ಆಮೇಲೆ ಎಷ್ಟೋ ಹೊತ್ತಿನ ನಂತರ ಹೊಳೆಯಿತು ಇಲ್ಲಿ ಪುಕಾರು ಎಂದರೆ "ದೂರು" ಎಂದರ್ಥ ಎಂದು. ಲೇಖಿಕಾದ ಸ್ನೇಹಿತೆಯರು ಕೂಡ ಇದನ್ನು ಪುಷ್ಠಿಕರಿಸಿದರು . ಕಥೆಯನ್ನು ಮತ್ತೊಮ್ಮೆ ಓದಿದೆ . ಗೊಂದಲ ಪರಿಹರಿಯಿತು .ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತಿರುವ ಗಂಡ ಹೆಂಡತಿ, ಹೆಂಡತಿಯ ಮೇಲಿನ ಆತನ ಪ್ರೀತಿ , ಹೆಂಡತಿಯ ಇನ್ನೊಬ್ಬರ ಜೊತೆ ಪ್ರಣಯ ಮತ್ತು ಗಂಡನ ದೂರು ಇವುಗಳನ್ನೊಳಗೊಂಡ ಕಥೆಯದು . ಆತನಿಗೋ ಹೆಂಡತಿಯೆಂದರೆ ಪ್ರಾಣ . ಆಕೆಗೆ ಆತನ ಮೇಲೆ ಅಗಾಧ ಭರವಸೆ . ಆದರೆ ಒಮ್ಮಿಂದೊಮ್ಮೆಲೆ ಮಾಯವಾಗಿ ಎಲ್ಲಿಗೋ ಹೋಗಿ ಯಾರೊಂದಿಗೋ ಇದ್ದು ಬಂದು ಬಿಡುವಾಕೆ . ಮತ್ತೆ ಮನಸ್ಸು ಬಂದಾಗ ಮರಳಿ ಬರುವಾಕೆ .ಹೀಗೆ ಎಷ್ಟೋ ಸಾರಿ ಇದೇ ಕಥೆ ಪುನರಾವರ್ತನೆಯಾದ ಮೇಲೆ ಕೊನೆಗೊಮ್ಮೆ ಗಂಡನಾದವನು ಲೇಖಕಿಯ ಊರಿನ ಮ್ಯಾರೇಜ್. ಕೌನ್ಸಿಲಿಂಗ್ ಗೆ ಪುಕಾರು ತಂದಿದ್ದು (ಅಂದರೆ ಕಂಪ್ಲೇಂಟ್ ಮಾಡಲು ಬಂದಿದ್ದು ). ಪುಕಾರು ಆದರೂ ಏನೆಂದು ? ಹೀಗೆ ಇವಳು ಯಾವೆಗೆಂದರಾವಾಗ ,ಯಾರೆಂದರೆ ಅವರ ಜೊತೆ ಹೋಗಿ ಇದ್ದು ಬರುತ್ತಾಳೆ. ಕಾರಣ ತಿಳಿದು ಇವಳನ್ನು ಸರಿ ಮಾಡಬೇಕು ಎಂಬುದೇ ಗಂಡನ ದೂರು . ಲೇಖಕಿಗೆ ತಲೆಕೆಟ್ಟು ಹೋಗುವದೊಂದೇ ಬಾಕಿ . ಎಷ್ಟೆಂದರೂ ರಾಮರಾಜ್ಯದ ಪ್ರಜೆಯಾದ ಅಗಸನಂತೆ ಸಾಮಾನ್ಯರಲ್ಲವೇ ನಾವು . "ಅಲ್ಲವೋ ಮಳ್ಳ ,ಅವಳು ಯಾರೆಂದರೆ ಅವರ ಜೊತೆ ಹೋಗಿ ಬಂದರೂ ಮತ್ತೆ ಹೇಗೆ ಅವಳ ಜೊತೆ ಇರುತ್ತೀಯೋ ? ಬಿಟ್ಟು ಬಿಡಬಾರದೇ ಯಾರ ಜೊತೆ ಬೇಕಾದರೂ ಹೋಗಲಿ " (ಅವರಷ್ಟು ಚೆನ್ನಾಗಿ ಹವ್ಯಕ ಕನ್ನಡಲ್ಲಿ ನನಗೆ ಹೇಳಲು ಸಾಧ್ಯವಿಲ್ಲ )

ಅವಾಕ್ಕಾಗುವಂತೆ ಬಂದಿತ್ತು ಆತನ ಉತ್ತರ . "ಹಾಗೆಂದರೆ ಹೇಗೆ ?ನಾನೊಬ್ಬ ಇದ್ದೀನಿ ಎಂದು ಎಷ್ಟಾದರೂ ಆಕೆ ಮರಳಿ ಬರುತ್ತಾಳೆ. ನಾನೂ ಇಲ್ಲ ಎಂದರೆ ಆಕೆ ಎಲ್ಲಿ ಹೋಗಬೇಕು?

ಅವರಿಬ್ಬರ ಮಧ್ಯ ಇದ್ದದ್ದು ಪ್ರೀತಿ, ಅವಳು ಅರಸಿಕೊಂಡು ಹೋಗುತ್ತಿದ್ದದ್ದು ಪ್ರಣಯ. ಆದರೆ ಅಲ್ಲಿ ಪುಕಾರು ಅನ್ನುವದೇ ಇರಲಿಲ್ಲ . ಇದ್ದಿದ್ದರೂ ಅದನ್ನು ಅರ್ಥೈಸಿಕೊಳ್ಳುವ ಕ್ಷಮತೆ ಅವಳಿಗಿರಲಿಲ್ಲ. ಪುಕಾರು (ದೂರು)ಕೊಡಲು ಬಂದ ಆತ ತನಗರಿವಿಲ್ಲದೆ ಪ್ರೀತಿಯ ವ್ಯಾಖ್ಯಾನ ನೀಡಿದ್ದ . ಯಾರೆಂದರೆ ಅವರ ಜೊತೆ ಹೋಗಿ ಇದ್ದು ಬರುವ ಮಡದಿಯ ನಡತೆ ಆತನಿಗೆ ಅನೈತಿಕತೆ ಅನಿಸಲೇ ಇಲ್ಲ . ಅವಳು ಮನೋರೋಗಿ ಎಂದು ಯೋಚಿಸುವಷ್ಟು ಆತ ಕಲಿತವನೂ ಅಲ್ಲ . ಅವಳೇಕೆ ಹೀಗೆ ಮಾಡುತ್ತಾಳೆ ಕಾರಣ ಹುಡುಕಿ ಕೊಡಿ ಎಂಬುವದಷ್ಟೇ ಅವನ ಪುಕಾರು . ಅದೇನೇ ಇದ್ದರೂ ನಾನು ಸರಿಪಡಿಸುವೆ ಎನ್ನುವ ಅಭಯ ಬೇರೆ . ಕಥೆಯ ಕೊನೆಯಲ್ಲಿ ಯಾಕೋ ನಂಗೆ ಇವತ್ತಿನವರೆಗೂ ಪ್ರೀತಿಸಲು ಬರಲೇ ಇಲ್ಲ ಎನಿಸಿತು ಎಂದು ಲೇಖಕಿ ಹೇಳಿದ್ದು ಎಲ್ಲರ ಪಾಲಿನ ನಿಜ ಅಲ್ಲವೇ ? ಪ್ರೀತಿಯೆಂದರೆ ಹಕ್ಕು ಸಾಧನೆ ಅಲ್ಲವೇ ಅಲ್ಲ . ಅದು ಅವರವರ ಹಕ್ಕುಗಳ ಗೌರವಿಸುವಿಕೆ ಮತ್ತು ನಿಜವಾದ ಕಾಳಜಿ ಮತ್ತು ಬೆಂಬಲ ಅಲ್ಲವೇ ?

ಇನ್ನು ಪ್ರಶಾಂತ ಕೊಳದಂತಿದ್ದ ಅಕ್ಕೋರ ಜೀವನದ ಕೊಳದಲ್ಲಿ ಕಲ್ಲೆಸೆದು ಕದಡುವಂತೆ ಬಂದ ಆ ಪತ್ರ.

ನಾನೂ ಮಂದೀ, ನೀನೂ ಮಂದಿ, ಇದು ಆ ಮಂದಿಗೆ ಗೊತ್ತಾಗಂಗಿಲ್ಲ ಎಂದು ಪಕ್ಕಾ ಉತ್ತರ ಕರ್ನಾಟಕದ ಕನ್ನಡಲ್ಲಿ ಬರೆದ ಮಂದಿಯಲ್ಲದ ಮಂದಿಯ ಕಥೆ ,

ಹೇಳದೆ ಕೇಳದೆ ಬರುವ ಒಂದು ಮದ್ಯಾಹ್ನದ ಮೀಟಿಂಗ ಕುಟುಂಬಗಳ ಆಧಾರ ಸ್ತಂಭಗಳನ್ನೇ ಬುಡ ಮೇಲು ಮಾಡುವ ಕಾರ್ಪೊರೇಟ್ ಜಗತ್ತಿನ ಕಥೆ , ಇಲ್ಲಿ ಯಾರಿಗೂ ವಯಸ್ಸಾಗಬಾರದು, ದೊಡ್ಡ ಕಾಯಿಲೆ ಬರಬಾರದು ಎಂಬ ಕ್ರೂರ ನಿಜಗಳ ಅನಾವರಣ, ಎಮಿಲಿಯಲ್ಲದ ಎಮಿಲಿಯ ಕಥೆ..ಹೀಗೆ ಪ್ರತಿಯೊಂದು ಕಥೆಗೂ ಪುಟಗಳಷ್ಟು ಅನಿಸಿಕೆ ಬರೆಯಬಹುದು ಅಷ್ಟೊಂದು ತೂಕವುಳ್ಳ ವಿಷಯ ಸಾಮಗ್ರಿಗಳು ಪ್ರತಿ ಕಥೆಯಲ್ಲೂ ಅಡಕವಾಗಿವೆ.

ವೈಶಾಲಿ ಹೆಗಡೆ ಅವರ ಲೇಖಕ ಪರಿಚಯ..
ಪ್ರೀತಿ ಪ್ರಣಯ ಪುಕಾರು ಕೃತಿ ಪರಿಚಯ...

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...