ಒಂದೇ ನದಿಯ ನೀರನ್ನು ಕುಡಿದರೂ, ಒಬ್ಬರು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತಾರೆ


“ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ಲಕ್ಷಾಂತರ ಜನರ ಪಾದಗಳನ್ನು ತರೆಯಲ ಮುಹೂರ್ತ ಒದಗಿ ಬಂದಿತ್ತು” ಎನ್ನುತ್ತಾರೆ ವಸುಧೇಂದ್ರ. ಅವರು ‘ರೇಷ್ಮೆ ಬಟ್ಟೆ’ ಕಾದಂಬರಿಗೆ ಬರೆದ ಲೇಖಕರ ಮಾತು.

ಪೃಥುಗಳ ಮತ್ತು ಯವನರ ನಾಡುಗಳ ಗಡಿಯನ್ನು ದೇವರೇ ಗೆರೆಯೆಳೆದು ವಿಭಾಗಿಸಿದಂತೆ ನದಿಯೊಂದು ಹರಿಯುತ್ತದೆ. ಒಂದೇ ನದಿಯ ನೀರನ್ನು ಕುಡಿದರೂ, ಒಬ್ಬರು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತಾರೆ. ಎರಡೂ ಕಡೆಯೂ ಕಾವಲು ಪಡೆ ಇದೆಯಾದರೂ, ನದಿಯ ಹರಿವಿನ ಉದ್ದಕ್ಕೂ ಕಾವಲು ಹಾಕುವುದು ಎರಡೂ ಸಾಮ್ರಾಜ್ಯಕ್ಕೂ ಸಾಧ್ಯವಿಲ್ಲ. ಕಾವಲು ಇಲ್ಲದ ಎಡೆಯನ್ನು ಗುಪ್ತಚಾರರ ಮೂಲಕ ತಿಳಿದುಕೊಂಡು, ಆ ಭಾಗದ ಕಡೆ ನುಗ್ಗುವುದನ್ನು ಇಬ್ಬರೂ ರೂಢಿ ಮಾಡಿಕೊಂಡಿದ್ದಾರೆ. ನದಿಯ ಎರಡೂ ಕಡೆ ವಿಶಾಲವಾದ ದಂಡೆಯಿದ್ದು, ಅನಂತರ ದಟ್ಟವಾದ ಕಾಡು ಹಬ್ಬಿಕೊಂಡಿದೆ. ಆ ಎರಡೂ ದಂಡೆಗಳನ್ನು ಯಾರಿಗೂ ಕಾಣದಂತೆ ದಾಟಿ ಇನ್ನೊಂದು ಸಾಮ್ರಾಜ್ಯದ ಕಾಡನ್ನು ಸೇರಿಕೊಂಡುಬಿಟ್ಟರೆ ಆಕ್ರಮಣ ಸುಲಭವಾಗುತ್ತದೆ. ನದಿಯನ್ನು ದಾಟುವುದಕ್ಕೆ ಪುಟ್ಟ ಹಡಗುಗಳನ್ನು ಬಳಸುತ್ತಾರೆ.

ಅಂದು ಬೆಳಗಿನ ಜಾವದಲ್ಲಿ ಯವನರು ಆಕ್ರಮಣ ಮಾಡುವ ಯೋಜನೆಯಲ್ಲಿ ನಿರತರಾಗಿದ್ದರು. ಇನ್ನೂ ಸೂರ್ಯ ಉದಯಿಸಿರಲಿಲ್ಲ. ಕತ್ತಲೆಯಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣುವುದೂ ಕಷ್ಟವಾಗಿತ್ತು. ಆದರೆ ಕೈಯಲ್ಲಿನ ದೊಂದಿಯ ಮುಖಾಂತರ ದಾರಿಯನ್ನು ಮಾಡಿಕೊಂಡು ಯವನರು ತಮ್ಮ ಕಡೆಯ ಕಾಡನ್ನು ದಾಟುತ್ತಿದ್ದರು. ಯಾವತ್ತಿನಂತೆ ಯವನರ ಸೈನಿಕರು ಗಾಢ ಬಣ್ಣದ ದಪ್ಪನೆಯ ಬಟ್ಟೆಯ ಲಂಗದಂತಹ ವಸ್ತ್ರವನ್ನು ಮೊಣಕಾಲ ತನಕ ಹಾಕಿ, ಅನಂತರ ಮೇಲಂಗಿ ಹಾಕಿಕೊಂಡಿದ್ದರು. ಎದೆಯನ್ನು ಪೂರ್ತಿ ರಕ್ಷಿಸುವಂತೆ ಕವಚವನ್ನು ಧರಿಸಿದ್ದರು. ಶಿರಕ್ಕೆ ಲೋಹದ ಕವಚವನ್ನು ಧರಿಸಿ, ಅದರ ಶಿಖೆಯಲ್ಲಿ ಒಂದೇ ಬಣ್ಣದ ಪುಕ್ಕಗಳನ್ನು ಗುಚ್ಚಾಗಿ ಸಿಕ್ಕಿಸಿಕೊಂಡಿದ್ದರು. ಬಲಗೈಯಲ್ಲಿ ಒಂದು ಉದ್ದದ ಶೂಲ, ಎಡಗೈಯಲ್ಲಿ ಅಲಂಕೃತ ಗುರಾಣಿಯಿತ್ತು.

ಸೂರ್ಯ ನಿಧಾನಕ್ಕೆ ಹೊರಬರುತ್ತಿದ್ದ. ಅವನ ಉದಯದ ಕೆಂಪು ನದಿಯನ್ನೆಲ್ಲಾ ಕೆನ್ನೀರಾಗಿಸುತ್ತಿತ್ತು. ಇನ್ನೇನು ಯವನರು ನದಿಗೆ ಇಳಿಯಬೇಕು ಎನ್ನುವಾಗ ಆ ದಂಡೆಯಿಂದ ಇದ್ದಕ್ಕಿದ್ದಂತೆ ಬಾಣಗಳ ಮಳೆ ಸುರಿಯತೊಡಗಿತು. ಎಲ್ಲಿಂದ ಬರುತ್ತಿವೆ ಎಂಬುದು ತಿಳಿಯುವುದೂ ಕಷ್ಟವಾಗುವಂತೆ, ರಪರಪನೆ ಆಕಾಶಮಾರ್ಗದಿಂದ ಬೀಳತೊಡಗಿದವು. ಬಾಣಗಳಿಗೆ ಕಣ್ಣುಗಳಿವೆಯೇನೋ ಎನ್ನುವಂತೆ ಕವಚ ಇಲ್ಲದ ದೇಹದ ಆಯಕಟ್ಟಿನ ಭಾಗಗಳಿಗೆ ನಾಟಿ, ರಕ್ತ ಹರಿಯತೊಡಗಿತು. ಯವನರ ನೋವಿನ ಆಕ್ರಂದನ ಪ್ರಾರಂಭವಾಯ್ತು. ತಿರುಗಿ ಪ್ರಹಾರ ಮಾಡಬೇಕೆಂದರೆ ಆ ಅರೆಗತ್ತಲಿನಲ್ಲಿ ಯಾವ ದಿಕ್ಕಿನಲ್ಲಿ ವೈರಿಗಳು ಇದ್ದಾರೋ ತಿಳಿಯದಾಯ್ತು. ಕೆಲವು ನಿಮಿಷಗಳಲ್ಲಿ ಬಹುತೇಕ ಯವನ ಸೈನಿಕರು ನೆಲಕ್ಕೆ ಒರಗಿದರು. ದೇಹದಿಂದ ಸೋರಿದ ರಕ್ತವು ನದಿಯ ನೀರನ್ನು ಕೆಂಪುಗೊಳಿಸುವಲ್ಲಿ ಸೂರ್ಯನಿಗೆ ಸ್ಪರ್ಧೆ ನೀಡತೊಡಗಿತು. ಸೂರ್ಯ ಸೋತು ನಿಧಾನಕ್ಕೆ ಬಿಳಿಚಿಕೊಳ್ಳತೊಡಗಿದ. ಎಲ್ಲೆಡೆಗೆ ಬೆಳಕಾಯ್ತು.

ಕಾಡಿನಲ್ಲಿಯೇ ನೆಲೆಸಿ ಅಲೆಮಾರಿಗಳಾಗಿದ್ದ ಹಿನ್ನೆಲೆಯನ್ನು ಹೊಂದಿದ್ದು, ಈಗ ಸಾಮ್ರಾಜ್ಯ ಕಟ್ಟಿರುವ ಪೃಥುಗಳ ಆಕ್ರಮಣವೇ ಅಂತಹದು. ಕಾಡಿನ ಪ್ರಾಣಿಗಳಂತೆ ಕತ್ತಲಿನಲ್ಲಿಯೂ ಅವರಿಗೆ ಕಣ್ಣುಗಳು ಕಾಣುತ್ತವೆ. ಅವರು ಎಲ್ಲಿ ಅಡಗಿದ್ದಾರೆ ಎನ್ನುವುದೂ ಶತ್ರುಗಳಿಗೆ ಕಾಣದಂತೆ ಆಕ್ರಮಣ ಮಾಡುತ್ತಾರೆ. ಒಮ್ಮೆ ಯವನರ ಸೈನ್ಯ ಸೊರಗಿದ್ದು ದೃಢ ಪಡಿಸಿಕೊಂಡ ನಂತರ, ನಿಧಾನಕ್ಕೆ ಪೃಥುಗಳು ತಮ್ಮ ಕುದುರೆಯನ್ನೇರಿ ಕಾಡಿನಿಂದ ಹೊರಬಂದು ಆ ಬದಿಯ ದಡದಲ್ಲಿ ಸಾಲಾಗಿ ಸೇರತೊಡಗಿದರು. ಬಿಲದಿಂದ ಹೊರಬರುವ ಇರುವೆಗಳಂತೆ ಅವರು ಯಥೇಚ್ಛವಾಗಿ ಒಂದು ಸಾಲಿನ ಹಿಂದೆ ಮತ್ತೊಂದು ಸಾಲಿನಂತೆ ಗುಂಪುಗೂಡತೊಡಗಿದರು. ಅವರ ಹುಲ್ಲುಗಾವಲಿನ ದಷ್ಟಪುಷ್ಟ ಕೆಂಪು ಕುದುರೆಗಳು ಆ ತೆಳುಬೆಳಕಿನಲ್ಲಿ ಮಿರಮಿರ ಹೊಳೆಯುತ್ತಿದ್ದವು. ಪೃಥುಗಳು ಕುದುರೆ ಸವಾರಿ ಮಾಡಲು ಸರಿಯಾಗುವಂತೆ ದಿರಿಸು ತೊಟ್ಟಿದ್ದರು. ಯವನರಂತೆ ಲಂಗವನ್ನು ತೊಡದೆ, ಸೊಂಟದಿಂದ ಕಣಕಾಲಿನವರೆಗೂ ಪೂರ್ತಿಯಾಗಿ ಬಟ್ಟೆ ಸುತ್ತಿಕೊಂಡಿದ್ದರೂ, ಕಾಲುಗಳ ಮಧ್ಯದಲ್ಲಿ ಯಾವುದೇ ತೊಡರು ಬರದಂತೆ ಜಾಗ್ರತೆ ವಹಿಸಿದ್ದರು. ಎದೆಯ ಮೇಲೆ ಕಸೆಯಂಗಿ ಹಾಕಿಕೊಂಡು, ತಲೆಗೆ ಬಣ್ಣದ ರುಮಾಲೊಂದನ್ನು ಸುತ್ತಿಕೊಂಡಿದ್ದರು. ನೆಲಕ್ಕೆ ಒರಗಿದ ಯವನ ಸೈನಿಕರು ತಿರುಗಿ ಆಕ್ರಮಣ ಮಾಡುವ ವ್ಯರ್ಥ ಸಾಹಸಕ್ಕೆ ಹೋಗದೆ ಸುಮ್ಮನೆ ನೋಡತೊಡಗಿದರು. ಒಂದಿಷ್ಟು ಹೊತ್ತು ದಂಡೆಯ ಮೇಲೆ ವಿಜಯದ ಘೋಷವನ್ನು ಮೊಳಗಿಸಿದ ಪೃಥುಗಳು, ಅನಂತರ ಯಾರೂ ನಿರೀಕ್ಷಿಸಿರದ ಒಂದು ಪವಾಡವನ್ನು ಮಾಡಿಬಿಟ್ಟರು.

ಕುದುರೆಯ ಹಲ್ಲಣಕ್ಕೆ ಸಿಕ್ಕಿಸಿದ್ದ ಕೋಲೊಂದನ್ನು ಹೊರ ತೆಗೆದು, ಅದರ ತುದಿಗೆ ಕಟ್ಟಿದ ಬಾವುಟವನ್ನು ಎಲ್ಲರೂ ಏಕಕಾಲಕ್ಕೆ ಪ್ರದರ್ಶಿಸಿದರು. ಅದರಲ್ಲಿ ಪೃಥುಗಳ ರಾಜಲಾಂಛನವಿತ್ತು. ಕೆಂಪು ಬಣ್ಣದ, ನುಣುಪಾದ ವಸ್ತ್ರದಿಂದ ಮಾಡಿದ ಆ ಬಾವುಟಗಳು ಮುಂಜಾನೆಯ ತಣ್ಣನೆಯ ಗಾಳಿಗೆ ಆಗಸದಲ್ಲಿ ಹಾರಾಡತೊಡಗಿದಾಗ, ಇದ್ದಕ್ಕಿದ್ದಂತೆಯೇ ಇಡೀ ಕಾಡಿನ ವೃಕ್ಷಗಳೆಲ್ಲಾ ಒಂದೇ ಬಣ್ಣದ ಹೂಗಳನ್ನು ಹೂತಂತೆ, ಅಕಾಲದಲ್ಲಿ ವಸಂತನ ಆಗಮನವಾಯ್ತಿನೋ ಎಂದು ಭಾಸವಾಗುವಂತೆ ಯವನರಿಗೆ ಕಂಡಿತು.

ಅಂತಹ ನುಣುಪಾದ, ಪಾರದರ್ಶಕವೇನೋ ಎನ್ನಿಸುವ, ಸೂರ್ಯರಶ್ಮಿಗೆ ಮಿರಮಿರನೆ ಮಿಂಚುವ ಬಣ್ಣದ ಬಟ್ಟೆಯನ್ನು ಯವನರು ತಮ್ಮ ಜೀವನದಲ್ಲೇ ಕಂಡಿರಲಿಲ್ಲ. ಅದು ಯಾವ ಪ್ರಾಣಿಯ ಚರ್ಮವೂ ಅಲ್ಲ, ಯಾವ ಹತ್ತಿಯ ಬಟ್ಟೆಯೂ ಅಲ್ಲ, ಯಾವ ಮರದ ಹಾಳೆಯೂ ಅಲ್ಲ - ಹಾಗಿದ್ದರೆ ಅದೇನು? ಅಂತಹ ಅದ್ಭುತವನ್ನು ಅದು ಯಾರು ಸೃಷ್ಟಿಸಿದರು? ಈ ಪೃಥುಗಳ ಕೈಗೆ ಅದನ್ನು ಕೊಟ್ಟವರು ಯಾರು? ಜಾಣತನದಲ್ಲಿ ಪೃಥುಗಳು ಎಂದೂ ಯವನರನ್ನು ಮೀರಿಸಲು ಸಾಧ್ಯವಿಲ್ಲ. ಅಂದಮೇಲೆ ಈ ಬಟ್ಟೆ ಅವರ ಸೃಷ್ಟಿಯಂತೂ ಅಲ್ಲ. ಅಂದರೆ ಪೃಥುಗಳ ಸೀಮೆಯ ಅತ್ತ ಕಡೆ ಯಾರೋ ಯವನರನ್ನೇ ಬೆರಗುಗೊಳಿಸುವಂತಹ ಬಟ್ಟೆಯನ್ನು ನೇಯುವ ಜಾಣರಿದ್ದಾರೆ. ಯಾರವರು?

ಸ್ವಲ್ಪ ಕಾಲ ತಮ್ಮ ಬಾವುಟಗಳನ್ನು ಗಾಳಿಯಲ್ಲಿ ಹಾರಿಸಿದ ಪೃಥುಗಳು, ಬಾವುಟ ಹಿಡಿದಂತೆಯೇ ನಿಧಾನಕ್ಕೆ ಕಾಡಿನಲ್ಲಿ ಹೊರಟು ಹೋದರು. ಅರಳಿದ ಕೆಂಪು ಹೂಗಳನ್ನೆಲ್ಲಾ ದೇವಲೋಕದ ಅಪ್ಸರೆಯರು ಒಂದೂ ಬಿಡದಂತೆ ಕಿತ್ತುಕೊಂಡರೇನೋ ಎಂದು ಭಾಸವಾಗುವಂತೆ ಆ ಬಾವುಟಗಳು ಕಣ್ಮರೆಯಾದವು. ಅಕಾಲದರ್ಶನ ನೀಡಿದ ವಸಂತ, ಹೆಚ್ಚು ಹೊತ್ತು ನಿಲ್ಲಲು ನಾಚಿಕೆಯಾಗಿ ಹೊರಟು ಹೋಗಿದ್ದ.

ಚೀನೀ ದುಕೂಲದ ಪ್ರಥಮ ದರ್ಶನ ಯವನರಿಗಾಗಿತ್ತು. ಅವರಲ್ಲಿ ಮೂಡಿದ ರೋಮಾಂಚನ, ಭವಿಷ್ಯದಲ್ಲಿ ಹೊಸ ಅಧ್ಯಾಯವನ್ನೇ ಬರೆಯುವದಕ್ಕೆ ನಾಂದಿ ಹಾಡಿತು. ಅಗೋಚರವಾಗಿದ್ದ ಹೊಸ ವ್ಯಾಪಾರದ ದಾರಿಯೊಂದು ಲಕ್ಷಾಂತರ ಪಾದಗಳ ಅಡಿಯಲ್ಲಿ ಅರಳುವುದಕ್ಕೆ ಸಮಯ ಕೂಡಿಬಂದಿತ್ತು. ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ಲಕ್ಷಾಂತರ ಜನರ ಪಾದಗಳನ್ನು ತರೆಯಲ ಮುಹೂರ್ತ ಒದಗಿ ಬಂದಿತ್ತು.

- ವಸುಧೇಂದ್ರ

MORE FEATURES

ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ

05-10-2024 ಬೆಂಗಳೂರು

“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...

ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು

05-10-2024 ಬೆಂಗಳೂರು

"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...

ಅವರು ಏನೇ ಬರೆಯಲಿ, ಮಾತನಾಡಲಿ ತಲಸ್ಪರ್ಶಿಯಾಗಿ ಚಿಂತನೆ ಮಾಡುತ್ತಾರೆ; ಶರಣಬಸಪ್ಪ

04-10-2024 ಬೆಂಗಳೂರು

“ಭಾಲಚಂದ್ರ ಜಯಶೆಟ್ಟಿಯವರು ಒಬ್ಬ ಅತ್ಯುತ್ತಮ ಉಪನ್ಯಾಸಕರು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಓದಬ...