'ನಾಯಿ ನೆರಳು' ಪುನರ್ಜನ್ಮವನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದಂತಹ ಕಾದಂಬರಿ


"ಎಸ್.ಎಲ್. ಭೈರಪ್ಪನವರು ಕನ್ನಡ ಸಾಹಿತ್ಯ ಲೋಕ ಕಂಡ ಅಗ್ರಮಾನ್ಯ ಬರಹಗಾರರಲ್ಲಿ ಒಬ್ಬರು. ಇವರ ಒಂದೊಂದು ಕೃತಿಗಳು ಒಂದೊಂದು ದಿಕ್ಕಿನಲ್ಲಿ ಜ್ಞಾನದ ಬೆಳಕನ್ನು ಚೆಲ್ಲುತ್ತಾ ಹೋಗುತ್ತವೆ ಎನ್ನುತ್ತಾರೆ ಲೇಖಕ ವಿ.ಗಣೇಶ್‌. ಅವರು ಲೇಖಕ ಎಸ್.ಎಲ್. ಭೈರಪ್ಪ ಅವರ "ನಾಯಿ ನೆರಳು" ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಎಸ್.ಎಲ್. ಭೈರಪ್ಪನವರು ಕನ್ನಡ ಸಾಹಿತ್ಯ ಲೋಕ ಕಂಡ ಅಗ್ರಮಾನ್ಯ ಬರಹಗಾರರಲ್ಲಿ ಒಬ್ಬರು. ಇವರ ಒಂದೊಂದು ಕೃತಿಗಳು ಒಂದೊಂದು ದಿಕ್ಕಿನಲ್ಲಿ ಜ್ಞಾನದ ಬೆಳಕನ್ನು ಚೆಲ್ಲುತ್ತಾ ಹೋಗುತ್ತವೆ. ಅವರ ಕೃತಿಗಳನ್ನು ಹಿಡಿದು ಓದುತ್ತ ಕುಳಿತರೆ ಕೆಳಗಿಡುವುದಕ್ಕೇ ಮನಸ್ಸು ಬರುವುದಿಲ್ಲ. ಪ್ರತಿಯೊಂದು ಕೃತಿಯೂ ಯಾವುದೇ ಒಂದು ತೆರೆನಾದ ಹೊಸ ವಿಷಯವನ್ನು ಕೆದುಕುತ್ತಾ, ಆ ಬಗ್ಗೆ ಚಿಂತಿಸುವಂತೆ ಮಾಡುತ್ತಾರೆ. ಅದು ಧಾರ್ಮಿಕ ವಿಚಾರವೋ, ವೈಜ್ಞಾನಿಕ ವಿಚಾರವೋ, ವೈಚಾರಿಕ ವಿಚಾರವೋ, ಸಾಂಸ್ಕ್ರತಿಕ ವಿಚಾರವೋ ಆಗಿರಬಹುದು, ಯಾವುದೇ ವಿಚಾರವಾದರೂ ಓದುಗನನ್ನು ತೃಪ್ತಿಪಡಿಸುವುದರಲ್ಲಿ ಹಿಂದೆ ಬೀಳುವುದಿಲ್ಲ.

ಅಂತೆ ಪ್ರಸಕ್ತ ಕಾದಂಬರಿ "ನಾಯಿ ನೆರಳು" ಪುನರ್ಜನ್ಮವನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದಂತಹ ಒಂದು ಕಾದಂಬರಿ. ಪುನರ್ಜನ್ಮ ಇರುವುದು ನಿಜವೇ ಆಗಿದ್ದರೆ ಅದು ಹೇಗೆ ಸಾಧ್ಯ? ಅದನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆಯೇ? ಹಿಂದಿನ ಜನ್ಮದ ಜ್ಞಾಪಕ ಶಕ್ತಿ ಹಾಗೆಯೇ ಉಳಿದಿರುತ್ತದೆಯೇ? ಮುಂತಾದ ಪ್ರಶ್ನೆಗಳನ್ನು ಈ ಕೃತಿಯು ಚರ್ಚಿಸುತ್ತಾ ಹೋಗುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಸಿಗುವುದು ಅಥವಾ ಬಿಡುವುದು ಓದುಗರ ವಿಮರ್ಶೆಗೆ ಬಿಡಲಾಗುತ್ತದೆ.

ಈ ಕಾದಂಬರಿಯಲ್ಲಿ ಬರುವ ಕಥಾನಾಯಕನಾದ ಕ್ಷೇತ್ರಪಾಲ ಬಾಲ್ಯದಿಂದಲೇ ತನಗೆ ಮದುವೆ ಆಗಿದೆ, ತನ್ನ ಹೆಂಡತಿ ಹೆಸರು ವೆಂಕಮ್ಮ, ತನಗೆ ಒಂದು ಗಂಡು ಮಗುವಿದೆ ಎಂದು ಹೇಳುತ್ತಾ ಬರುತ್ತಾನೆ. ಆತನಿಗೆ ಹೆಚ್ಚಿಗೆ ಮಾತನಾಡುವ ಅಭ್ಯಾಸವಿಲ್ಲದಿದ್ದರು ಓದುಬರಹದಲ್ಲಿ ತುಂಬಾ ಚಾಣಾಕ್ಷ ಆಗಿದ್ದು ಶಾಲೆಯಲ್ಲೂ ಕೂಡ ತನಗೆ ಮದುವೆ ಆಗಿದೆ ಒಬ್ಬ ಮಗನಿದ್ದಾನೆ ಎಂಬ ವರಸೆಯನ್ನು ನಿಲ್ಲಿಸುವುದೇ ಇಲ್ಲ. ಅಷ್ಟೇ ಅಲ್ಲ ತನ್ನ ಹೆಂಡತಿ ಹೇಗಿದ್ದಾಳೆ? ಮಗು ಹೇಗಿದೆ? ಎಂಬುದರ ಚಹರೆಯನ್ನು ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದ. ಇದು ಯಾವುದೋ ದೆವ್ವ ಭೂತಗಳ ಕಾಟವೋ ಅಥವಾ ಮಾಟವೋ ಎಂದು ಭಾವಿಸಿದ ತಂದೆ ತಿರುಮಲ ಜೋಯ್ಸರು ಆ ಎಲ್ಲದಕ್ಕೂ ಪೂಜೆ ಮಾಡಿಸಿದರು ಆದರೆ ಅವುಗಳಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಮನೆಯಲ್ಲಿ ನಾಯಿಗಳು ಇಲ್ಲದಿದ್ದರೂ ಕ್ಷೇತ್ರಪಾಲನು ಬೀದಿಯಲ್ಲಿ ಹೋಗುತ್ತಿರುವ ಒಂದು ಹೆಣ್ಣು ನಾಯಿಯನ್ನು ಹಿಡಿದು ತಂದು ಬಹಳ ಪ್ರೀತಿಯಿಂದ ಸಾಕುತ್ತಿದ್ದ. ಬೇರೆ ನಾಯಿಗಳು ಆ ನಾಯಿಯನ್ನು ನೋಡಿದರೆ ಜೋರಾಗಿ ಬೊಗಳುತ್ತಿದ್ದವು. ಯಾರು ಎಷ್ಟೇ ಹೇಳಿದರು ಅವನು ಅದರ ಸಹವಾಸವನ್ನು ನಿಲ್ಲಿಸಲೇ ಇಲ್ಲ. ಸದಾ ಅದನ್ನು ತಬ್ಬಿಕೊಂಡು ಕಾಲ ಕಳೆಯುತ್ತಿದ್ದ. ಕೆಲವೊಮ್ಮೆ ಊರಹೊರಕ್ಕೆ ಹೋಗಿ ಯಾವುದೋ ಒಂದು ತಾಣದಲ್ಲಿ ಅದನ್ನು ಅಪ್ಪಿಕೊಂಡೆ ಮಲಗಿರುತ್ತಿದ್ದ.

ಕ್ಷೇತ್ರ ಪಾಲನಿಗೆ ಹದಿನಾರನೇ ವಯಸ್ಸು ಆದಾಗ ದೂರದ ಊರಿನಿಂದ ನಾಗರಾಜ್ ಜೋಯ್ಸ ಎಂಬ ಒಬ್ಬ ಬ್ರಾಹ್ಮಣರು ಅವನನ್ನು ಹುಡುಕಿಕೊಂಡು ಬಂದರು. ಅವರಿಬ್ಬರು ಪರಿಚಯ ಮಾಡಿಕೊಂಡಾಗ ತಾವು ಅಪ್ಪ ಮಗ ಎಂಬುದನ್ನು ಪರಸ್ಪರ ಒಪ್ಪಿಕೊಂಡರು. ಅಷ್ಟೇ ಅಲ್ಲ ಕ್ಷೇತ್ರಪಾಲನು ಅವರ ಮನೆಯಲ್ಲಿರುವ ಎಲ್ಲ ಮಂದಿಯನ್ನು, ವಸ್ತುಗಳನ್ನು ಮತ್ತು ಊರಿನ ಜನರನ್ನು ಸ್ಥಳಗಳನ್ನು ನೋಡಿದಂತೆ ಕರಾರುವಕ್ಕಾಗಿ ಹೇಳಿದನು. ಸುಮಾರು ಹದಿನೆಂಟು ವರ್ಷಗಳ ಹಿಂದೆ ತೀರಿ ಹೋದ ತನ್ನ ಮಗ ವಿಶ್ವೇಶ್ವರನೇ, ಕ್ಷೇತ್ರಪಾಲ ಎಂಬ ಹೆಸರಿನಲ್ಲಿ ಪುನಹ ಹುಟ್ಟಿದ್ದಾನೆ ಎಂಬ ತೀರ್ಮಾನಕ್ಕೆ ಜೋಯ್ಸರು ಬಂದರು. ಅಂತೆಯೇ ಅವನನ್ನು ಕರೆದುಕೊಂಡು ತಮ್ಮ ಮನೆಗೂ ಹೋದರು. ಅಲ್ಲಿ ಮಾಮೂಲಿಯಾಗಿ ಆತನು ಕುಟುಂಬದ ಮಗನಂತೆ ಎಲ್ಲರೊಂದಿಗೆ ಹಾಗೂ ಊರಿನಲ್ಲಿ ಹೊಂದಿಕೊಂಡು ವಾಸಿಸ ತೊಡಗಿದನು. ವಿಶ್ವೇಶ್ವರಯ್ಯ ಹೆಂಡತಿ ವೆಂಕಮ್ಮನ ಜೊತೆಗೆ ಬಾಳ ತೊಡಗಿದನು.

ಆದರೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವನ ಮಗ ಅಚ್ಚುತ ಮಾತ್ರ ಈ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ. ತನ್ನ ಮನೆಗೆ ಅಪ್ಪನ ಸ್ಥಾನದಲ್ಲಿ ಆಗಮಿಸಿದ, ನನಗಿಂತಲೂ ಚಿಕ್ಕವನಾದ ಕ್ಷೇತ್ರ ಪಾಲನನ್ನು ತಂದೆ ಎಂದು ಒಪ್ಪಿಕೊಳ್ಳಲು ಸಾರಾಸಗಟಾಗಿ ನಿರಾಕರಿಸಿದ. ಕುಟುಂಬದಲ್ಲಿರುವ ಈ ವಿರಸ ಹೀಗೆ ಮುಂದುವರೆಯುತ್ತಿದ್ದಾಗ ಪುಟ್ಟಮ್ಮ ಎಂಬ ಹೊಲೆಯರ ಹುಡುಗಿಯ ಜೊತೆಯಲ್ಲಿ ವಿಶ್ವೇಶ್ವರನ ಕಳ್ಳಾಟ ಪ್ರಾರಂಭವಾಗಿ ಅವಳು ಗರ್ಭಿಣಿಯಾಗುತ್ತಾಳೆ. ಆಗ ವಿಶ್ವೇಶ್ವರನಿಗೆ ಏನು ಮಾಡುವುದಕ್ಕೂ ತೋಚದೆ ಅವಳನ್ನು ಕಟ್ಟಿಕೊಂಡು ಬೇರೆ ಹಳ್ಳಿಗೆ ಓಡಿ ಹೋಗುತ್ತಾನೆ. ವಿಚಿತ್ರವೆಂಬಂತೆ ಇವನ ಜೊತೆಯಲ್ಲಿ ಬಂದ ಆ ಬೀದಿ ನಾಯಿ, ಅವನನ್ನು ಬಿಡದೆ ಅವರ ಜೊತೆಯಲ್ಲಿ ಅಂಟಿಕೊಂಡೇ ಬಂದಿತು.

ಈ ವಿಷಯ ಗೊತ್ತಾದ ಮೇಲೆ ಅಚ್ಚುತನು ನ್ಯಾಯಾಲಯಕ್ಕೆ ಹೋಗಿ ವಿಶ್ವೇಶ್ವರನಮೇಲೆ ಕೇಸು ಹಾಕಿ, ಅವನನ್ನು ಜೈಲಿಗೆ ತಳ್ಳಿ, ಏಳು ವರ್ಷಗಳ ಕಾಲ ಸೆರೆವಾಸ ಅನುಭವಿಸುವಂತೆ ಮಾಡುತ್ತಾನೆ. ಇಲ್ಲೂ ನಾಯಿ ಅವನ ಜೊತೆಯಲ್ಲಿ ಬರುತ್ತದೆ. ಆ ನಾಯಿಯನ್ನು ಪೊಲೀಸರು ಹೊಡೆದು ಕೊಂದು ಹಾಕುತ್ತಾರೆ. ಈ ಮಧ್ಯೆ ಅವನ ಹೆಂಡತಿ ವೆಂಕಮ್ಮನು ಮತ್ತೊಂದು ಮಗುವಿಗೆ ಜನ್ಮ ಕೊಡುತ್ತಾಳೆ. ಅವಳು ಗಂಡನಿಗಾಗಿ ಪರಿತಪಿಸುವುದನ್ನು ನೋಡಲಾಗದ ವಿಶ್ವೇಶ್ವರನನ್ನು ಜೈಲಿನಿಂದ ಬಿಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವನು ಅದಕ್ಕೆ ಒಪ್ಪದೇ ಜೈಲಿನಲ್ಲೇ ಕಾಲ ಕಳೆಯುತ್ತಾನೆ. ಇತ್ತ ಮನೆಯಲ್ಲಿ ಮಗನನ್ನು ಕಳೆದುಕೊಂಡು ವಿಶ್ವೇಶ್ವರನ ತಾಯಿ ವಿಧಿವಶಳಾಗಿ ಅಪ್ಪನನಿಗೆ ಬಾಯಿ ನಿಂತು ಹೋಗುತ್ತದೆ. ಆಗ ವೆಂಕಮ್ಮ ಮನೆ ಬಿಟ್ಟು ಹೊರಟು ಯಾವುದೋ ಒಂದು ಆಶ್ರಮದ ಸಹಕಾರ ಪಡೆದು ಮಗನನ್ನು ಸಾಕುತ್ತಾಳೆ. ಜೈಲಿನಿಂದ ಬಿಡುಗಡೆಯಾದ ಮೇಲೆ ವಿಶ್ವೇಶ್ವರ ಹೆಂಡತಿ ಮತ್ತು ಮಗುವನ್ನು ಭೇಟಿಯಾದರೂ ಆತನು ಅಲ್ಲಿ ನಿಲ್ಲದೆ ಎತ್ತಲೋ ಹೊರಟು ಹೋಗುತ್ತಾನೆ. ಅಮ್ಮನನ್ನು ಹುಡುಕಿಕೊಂಡು ಬಂದ ಅಚ್ಚುತ, ತಾಯಿಯನ್ನು ಮನೆಗೆ ಬಾ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅದಕ್ಕೆ ವೆಂಕಮ್ಮ ಒಪ್ಪದೇ, "ಅಪ್ಪನನ್ನು ಜೈಲಿಗೆ ಕಳಿಸಿದ ಚಾಂಡಾಲ, ನಿನ್ನ ಮನೆಯಲ್ಲಿ ಒಂದು ತುತ್ತು ಅನ್ನವನ್ನು ತಿನ್ನುವುದಿಲ್ಲ" ಎಂದು ಜಾಡಿಸುತ್ತಾಳೆ. ಅಲ್ಲೇ ಮಗನೊಂದಿಗೆ ತನ್ನ ಬದುಕನ್ನು ಮುಂದುವರಿಸುತ್ತಾಳೆ.

ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ಸಾಕಷ್ಟು ಪ್ರಶ್ನೆಗಳು ನಮ್ಮಲ್ಲಿ ಉದ್ಭವವಾಗುತ್ತದೆ. ತನಗೆ ಮದುವೆಯಾಗಿದೆ ಹೆಂಡತಿ ಮತ್ತು ಮಗು ಇದ್ದಾರೆ ಎಂಬುದನ್ನು ಬಾಲ್ಯದಿಂದಲೂ ಹೇಳುತ್ತಾ ಬಂದ ಕ್ಷೇತ್ರಪಾಲನದು ಪುನರ್ಜನ್ಮ ಹೌದೇ ಅಲ್ಲವೇ ಎಂಬ ಅನುಮಾನ ನಮ್ಮನ್ನು ಕಾಡುತ್ತದೆ. ಹಾಗೆ ಅಲ್ಲದೆ ಹೋದರೆ ಆತನು ಹೇಗೆ ತಾನೇ ವಿಶ್ವೇಶ್ವರಯ್ಯನೋ ಎಂಬಂತೆ ಎಲ್ಲವನ್ನೂ ಹೇಗೆ ಹೇಳುತ್ತಾನೆ? ವಿಶ್ವೇಶ್ವರನ ಮನೆಯಲ್ಲಿ ಎಲ್ಲರೂ ಅವನ ಕತೆಯನ್ನು ನಂಬಿದರೂ ಮಗ ಅಚ್ಚುತ ಮಾತ್ರ ಅದಕ್ಕೆ ಮಣೆ ಹಾಕುವುದಿಲ್ಲ. ಯಾವ ಕಾರಣಕ್ಕೂ ತನಗಿಂತ ಚಿಕ್ಕವನಾದ ಕ್ಷೇತ್ರ ಪಾಲನನ್ನು ತನ್ನ ತಂದೆ ಎಂದು ಅವನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಅಷ್ಟೇ ಅಲ್ಲದೆ ತಾಯಿ ಅವನ ಸಂಗವನ್ನು ಮಾಡಿದಾಗ ಆತನ ರಕ್ತ ಕುದಿಯುತ್ತದೆ ಅದಕ್ಕಾಗಿ ತಾಯಿಯನ್ನು ನೀತಿಗೆಟ್ಟವಳು ಎಂದು ಕರೆಯುವ ಮಟ್ಟಕ್ಕೂ ಹೋಗುತ್ತಾನೆ. ವಿಶ್ವೇಶ್ವರನ ಅನುಸರಿಸಿಕೊಂಡ ಒಂದು ಶ್ವಾನ ಸಾಯುವವರೆಗೂ ಕೂಡ ಎಷ್ಟೇ ಕಷ್ಟ ಬಂದರೂ ಅವನ ಜೊತೆಯಲ್ಲಿ ಕೊನೆಯವರೆಗೂ ಬದುಕುತ್ತದೆ. ಕ್ಷೇತ್ರ ಪಾಲನು ವಿಶ್ವೇಶ್ವರನ ಮರು ಹುಟ್ಟು ಆದದ್ದಕ್ಕೆ ಇದು ಕಾರಣವಿರಬಹುದೇ? ನಾಯಿ ಏನಾದರೂ ಅವನನ್ನು ಗುರುತಿಸಿ ಅವನ ಜೊತೆಯಲ್ಲಿ ಇದ್ದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಕ್ಷೇತ್ರ ಪಾಲನೇನಾದರೂ ಸಾತ್ವಿಕ ನೆಲೆಯುಳ್ಳವ ನಾಗಿದ್ದರೆ ಪುಟ್ಟಿಯ ಸಹವಾಸ ಮಾಡಿ ಅವಳ ಜೊತೆಯಲ್ಲಿ ಓಡಿ ಹೋಗುತ್ತಿದ್ದನೆ? ಆದರೆ ಅವನನ್ನು ಬಿಡುಗಡೆ ಮಾಡಿಸುತ್ತೇವೆ ಎಂದು ಬಂದಾಗ, ಬಿಡುಗಡೆ ಹೊಂದಲು ಇಷ್ಟಪಡದೆ ತನ್ನ ಸದ್ಗುಣದಿಂದ ಆರು ತಿಂಗಳಿಗೂ ಮೊದಲೇ ಬಿಡುಗಡೆ ಹೊಂದುತ್ತಾನೆ. ಹಾಗಾಗಿ ಅವನಲ್ಲಿ ದುರ್ಗಣ ಹಾಗೂ ಸದ್ಗುಣಗಳು ಎರಡು ಪಾತ್ರಗಳಲ್ಲೂ ಕಾಣುತ್ತಿರುವುದರಿಂದ ಅವನದು ಪುನರ್ಜನ್ಮ ಇರಬಹುದೇ? ಈ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.

MORE FEATURES

ಪಠ್ಯಗಳ ಸಂಪಾದಕರಾಗಿ ಮೂವತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿರುವ ಡಾ. ಜಯದೇವಿ ಗಾಯಕವಾಡ

17-09-2024 ಬೆಂಗಳೂರು

"ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತ...

ತಂದೂರ್ ಮರ್ಡರ್: ದೇಶವನ್ನೇ ರೊಚ್ಚಿಗೆಬ್ಬಿಸಿದ ಭಯಾನಕ ಅಪರಾಧ

17-09-2024 ಬೆಂಗಳೂರು

“ಕೊಲೆ ಹೇಗಾಯ್ತು, ಹೇಗೆ ಪತ್ತೆ ಆಯ್ತು, ವಿಚಾರಣೆ ಹೇಗೆಲ್ಲಾ ನಡೀತು, ಮೊದಲು ಪೋಸ್ಟ್ ಮಾರ್ಟಂ ಮಾಡಿದ ಸಾರಂಗಿ ಕೋಡ...

ಈ ಗ್ರಂಥ ಒಂದು ಎಂ.‌ಫಿಲ್‌ ಗ್ರಂಥಕ್ಕೆ ಸರಿಸಮಾನವಾಗಿದೆ‌: ಉದಯ್ ಕುಮಾರ್ ಹಬ್ಬು

17-09-2024 ಬೆಂಗಳೂರು

“ಈ ಗ್ರಂಥವು ಮಾಧ್ಯಮದಲ್ಲಿ ಮಹಿಳೆ ಎಂಬ ವಿಷಯದ ನೆಪದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಲೈಂಗಿಕ, ಸಾಂಸ್ಕೃತಿಕ ಶೋ...