‘ಮಿಸ್ಟರ್ ಜಾಕ್‍’ ಆದ ಗುರುನಂದನ್‍; ಹುಟ್ಟುಹಬ್ಬಕ್ಕೆ ಟೀಸರ್ ಉಡುಗೊರೆ

Date: 01-01-2025

Location: ಬೆಂಗಳೂರು


ಹೀರೋಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡಗಳು ಉಡುಗೊರೆ ಹೆಸರಿನಲ್ಲಿ ಟೀಸರ್, ಟ್ರೇಲರ್ ಬಿಡುಗಡೆ ಮಾಡುವುದು ಸಹಜ. ಇದೀಗ ಗುರುನಂದನ್‍ ಹುಟ್ಟುಹಬ್ಬಕ್ಕೂ ಅವರ ಹೊಸ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದು ಬರೀ ಟೀಸರ್‍ ಅಲ್ಲ, ಶೀರ್ಷಿಕೆ ಅನಾವರಣದ ಟೀಸರ್. ಕೆಲವು ತಿಂಗಳುಗಳ ಹಿಂದೆ ಚಿತ್ರದ ಮುಹೂರ್ತವಾಗಿತ್ತು. ಆ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಘೋಷಿಸಿರಲಿಲ್ಲ. ಈಗ ಗುರುನಂದನ್ ಹುಟ್ಟುಹಬ್ಬದ ನೆಪದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ.

ಅಂದಹಾಗೆ, ಈ ಚಿತ್ರಕ್ಕೆ ‘ಮಿಸ್ಟರ್ ಜಾಕ್‍’ ಎಂಬ ಹೆಸರನ್ನು ಇಡಲಾಗಿದೆ. ಏನಿದು ‘ಮಿಸ್ಟರ್‍ ಜಾಕ್‍’ ಎಂದು ವಿವರಿಸುವ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸುಮಂತ್‍ ಗೌಡ, ‘ಇಲ್ಲಿ ನಾಯಕನ ಹೆಸರು ಜಾನಕಿರಾಮ್‍. ಸಾಮಾನ್ಯವಾಗಿ stand-up comedianಗಳು ತಮ್ಮ ಹೆಸರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ, ನಾಯಕ ಇಲ್ಲಿ ತನ್ನನ್ನು ತಾನು ‘ಮಿಸ್ಟರ್ ಜ್ಯಾಕ್‍’ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿರುತ್ತಾನೆ. ಇದೊಂದು ರೊಮ್ಯಾಂಟಿಕ್‍ ಕಾಮಿಡಿ ಮತ್ತು ಫ್ಯಾಮಿಲಿ ಡ್ರಾಮಾ. ಗುರುನಂದನ್‍ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡುತ್ತಿದ್ದೇವೆ’ ಎಂದರು.

ಚಿತ್ರದ ಕುರಿತು ಮಾತನಾಡುವ ಗುರುನಂದನ್‍, ’ಇದುವರೆಗೂ stand-up comedian ಬಗ್ಗೆ ಕನ್ನಡದಲ್ಲಿ ಯಾರೊಬ್ಬರೂ ಚಿತ್ರ ಮಾಡಿರಲಿಲ್ಲ. ಅಂಥದ್ದೊಂದು ಪ್ರಯತ್ನವನ್ನು ನಾವು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಹಾಸ್ಯ ಮಾಡುವವರ ಹಿಂದಿನ ಕಥೆ ಇದು. ಇಲ್ಲಿ ನಾಯಕ ಒಬ್ಬ stand-up comedian ಆಗಿ ಕೆಲಸ ಮಾಡುತ್ತಿರುತ್ತಾನೆ. ಅವನ ಹಿಂದಿನ ನೋವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಏನೇ ನೋವಿದ್ದರೂ, ಅದನ್ನು ಹೊರಗೆ ತೋರಿಸದೇ, ಎಲ್ಲರನ್ನೂ ನಗಿಸುವುದು, ದೊಡ್ಡ ಸವಾಲಿನ ಕೆಲಸ. ಅದನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇನೆ’ ಎಂದರು ಗುರುನಂದನ್‍.

‘ಮಿಸ್ಟರ್ ಜಾಕ್’ ಚಿತ್ರದಲ್ಲಿ ಗುರುನಂದನ್‍ಗೆ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತೇಜಸ್ವಿನಿ ಪೂಣಚ್ಛ ನಟಿಸುತ್ತಿದ್ದಾರೆ. ಮಿಕ್ಕಂತೆ ಮಿತ್ರ, ಧರ್ಮಣ್ಣ ಕಡೂರು, ಗೋಪಾಲಕೃಷ್ಣ ದೇಶಪಾಂಡೆ, ಗಿರಿ, ಸುಷ್ಮಿತಾ ಮುಂತಾದವರು ನಟಿಸುತ್ತಿದ್ದಾರೆ. ಕಾರ್ತಿಕ್‍ ಪತ್ಥಾರ್‍ ಮುಂತಾದ ಜನಪ್ರಿಯ stand-up comedianಗಳು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್‍ ಸಂಗೀತ ಸಂಯೋಜಿಸುತ್ತಿದ್ದು, ಶಿವಸೇನ ಛಾಯಾಗ್ರಹಣವಿದೆ. ಈ ಚಿತ್ರವನ್ನು ಗುರುನಂದನ್‍, ಮಂಡಿಮನೆ ಟಾಕೀಸ್‍ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿ ಸ್ನೇಹಿತರೊಂದಿಗೆ ಜೊತೆಗೂಡಿ ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಈಗಾಗಲೇ ಬೆಂಗಳೂರು ಸುತ್ತಮುತ್ತ ಶೇ. 75ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಕೊನೆಯ ಹಂತದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಶುರುವಾಗಲಿದೆ.

MORE NEWS

31 ದಿನಗಳಲ್ಲಿ ನಡೆಯುವ ಹೈವೋಲ್ಟೇಜ್‍ ಪ್ರೇಮಕಥೆ

04-01-2025 ಬೆಂಗಳೂರು

‘ಇದು ಹೈ ವೋಲ್ಟೇಜ್ ಪ್ರೇಮಕಥೆ …’ ಎಂಬ ಅಡಿಬರಹದೊಂದಿಗೆ ಬರುತ್ತಿದೆ ನಿರಂಜನ್‍ ಶೆಟ್ಟಿ ಅಭಿನ...

ಹೊಸ ವರ್ಷಕ್ಕೆ ಹೊಸ ಹೀರೋ: ಚಿತ್ರರಂಗಕ್ಕೆ ಸುದೀಪ್ ಅಕ್ಕನ ಮಗ ಎಂಟ್ರಿ

03-01-2025 ಬೆಂಗಳೂರು

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುದೀಪ್‍ ಅವರ ಅಕ್ಕನ ಮಗ ಸಂಚಿತ್‍ ಸಂಜೀವ್‍, ‘ಜಿಮ್ಮಿ’ ಎ...

ರುದ್ರನೋ? ಕ್ಷುದ್ರನೋ?; ಗಣೇಶ್ ಹೊಸ ಚಿತ್ರ ‘ಪಿನಾಕ’

03-01-2025 ಬೆಂಗಳೂರು

ಗಣೇಶ್‍ ಬಹಳ ವರ್ಷಗಳಿಂದ ಬೇರೆ ತರಹದ ಪಾತ್ರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರಂತೆ. ಆದರೆ, ಕಾರಣಾಂತರಗಳಿ...