ಮಂಡ್ಯದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯ ವಿಶೇಷಗಳ ಮಾಹಿತಿ ಹೀಗಿದೆ...

Date: 12-12-2024

Location: ಬೆಂಗಳೂರು


ಬೆಳಗಾವಿ: ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಸೇರಿದಂತೆ ಅನೇಕ ಗಣ್ಯರು ಈ ವೇಳೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಆಹ್ವಾನ ಪತ್ರಿಕೆಯ ಕುರಿತು ಅಪಾರ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ತಾವು ಕೆಲಸ ಮಾಡಿದ ದಿನಗಳನ್ನು ಮತ್ತು ಹಿಂದೆ ತಾವು ಮುಖ್ಯಮಂತ್ರಿಗಳಾಗಿದ್ದಾಗ ನಡೆದ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅನುಭವಗಳನ್ನು ಹಂಚಿ ಕೊಂಡು ‘ಸಮ್ಮೇಳನವು ತುಂಬಾ ಯಶಸ್ವಿಯಾಗಲಿ, ಸರ್ಕಾರದ ಕಡೆಯಿಂದ ಎಲ್ಲಾ ನೆರವೂ ದೊರಕಲಿದೆ ಎಂಬ ಭರವಸೆಯನ್ನು ನೀಡಿದರು.

ಅದರ ವೈಶಿಷ್ಟ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕೆಳಕಂಡಂತೆ ವಿವರಿಸಿದ್ದಾರೆ. ಸಾರ್ವಕಾಲಿಕ ಮತ್ತು ಸಮಕಾಲೀನ ಎರಡೂ ನೆಲೆಗಳನ್ನು ಹೊಂದಿದ ಆಹ್ವಾನ ಪತ್ರಿಕೆಯಲ್ಲಿ ಹಿರಿತನಕ್ಕೆ ಪರಿಣತಿಗೆ ಮನ್ನಣೆ ನೀಡಿದಂತೆ, ಬೆಳಕಿಗೆ ಬಾರದಂತಹ ಪ್ರತಿಭೆಗಳಿಗೂ ಮಹತ್ವವನ್ನು ನೀಡಲಾಗಿದೆ. ಮಂಡ್ಯದಲ್ಲಿ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯದ ನೆಲಮೂಲಕ್ಕೆ ಮನ್ನಣೆ ನೀಡಿದಂತೆ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಮಹತ್ವವನ್ನು ನೀಡಲಾಗಿದೆ.

ಆಹ್ವಾನ ಪತ್ರಿಕೆಯ ವಿಶೇಷಗಳನ್ನು ನಾಡೋಜ ಡಾ. ಮಹೇಶ ಜೋಶಿಯವರು ಕೆಳಕಂಡಂತೆ ವಿವರಿಸಿದ್ದಾರೆ;

1. ಮಂಡ್ಯದಲ್ಲಿ ಡಿಸಂಬರ್ 20, 21 ಮತ್ತು 22ರ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಆಯೋಜಿತವಾಗಿದ್ದು ಇದರಲ್ಲಿ ಮೂರು ವೇದಿಕೆಗಳಿವೆ. ಎಲ್ಲವನ್ನೂ ಸಮಾನವಾಗಿ ಪರಿಗಣಿಸಿ ಮಂಡ್ಯ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ ಮಹನೀಯರ ಹೆಸರುಗಳನ್ನು ಇಡಲಾಗಿದೆ. ಎಲ್ಲಾ ಸಾಧಕರ ಹೆಸರುಗಳನ್ನು ಇಡಬೇಕು ಎಂಬ ಹಂಬಲವಿದ್ದರೂ ಪ್ರಾತಿನಿಧಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗಳನ್ನು ನೀಡಿದ ಈ ಕೆಳಕಂಡ ಪ್ರಮುಖರ ಹೆಸರುಗಳನ್ನು ಇಡಲಾಗಿದೆ.

ಪ್ರಧಾನ ವೇದಿಕೆ
“ರಾಜಮಾತೆ ಕೆಂಪರಾಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ”
“ಸರ್. ಎಂ.ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾ ಇಸ್ಮಾಯಿಲ್ ಮಹಾಮಂಟಪ”

“ಯಕ್ಷಕವಿ ಕೆಂಪಣ್ಣಗೌಡ ಮತ್ತು ಉಭಯ ಕವಿತಾ ವಿಶಾರದ ಷಡಕ್ಷರದೇವ ಮಹಾದ್ವಾರ”
‘ಶ್ರೇಷ್ಠ ರಾಜಕೀಯ ಮತ್ಸುದ್ಧಿ ಶ್ರೀ ಎಸ್.ಎಂ.ಕೃಷ್ಣ ಮತ್ತು ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಪ್ರವೇಶದ್ವಾರ”

ಸಮಾನಂತರ ವೇದಿಕೆ-1
“ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆ”
“ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಮತ್ತು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮಹಾಮಂಟಪ”
“ಆಸ್ಥಾನ ವಿದ್ವಾನ್ ಪಿಟೀಲು. ಟಿ. ಚೌಡಯ್ಯ ಸಭಾಂಗಣ”
“ಶ್ರೀ ಎಂ.ಎನ್. ಶ್ರೀಕಂಠೇಗೌಡ ಮತ್ತು ನಿತ್ಯ ಸಚಿವ ಕೆ.ವಿ. ಶಂಕರೇಗೌಡ ಹಾಗೂ ನಾಡೋಜ ಜಿ. ನಾರಾಯಣ ಪ್ರವೇಶದ್ವಾರ”

ಸಮಾನಂತರ ವೇದಿಕೆ-2

“ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆ”
“ಭಾಗವತ ಕವಿ ಪು.ತಿ. ನರಸಿಂಹಾಚಾರ್ ಮತ್ತು ಪ್ರೇಮಕವಿ ಕೆ.ಎಸ್. ನರಸಿಂಹ ಸ್ವಾಮಿ ಮಹಾಮಂಟಪ”
“ನೇಗಿಲಯೋಗಿ ಡಾ.ಎಚ್.ಎಲ್.ನಾಗೇಗೌಡ ಮತ್ತು ಜಾನಪದ ವಿದ್ವಾಂಸ ಡಾ.ಜೀ.ಶಂಪರಮಶಿವಯ್ಯ ಸಭಾಂಗಣ”
“ಕನ್ನಡ ಚಿತ್ರರಂಗದ ನಿರ್ಮಾತೃ ಎಚ್.ಎಲ್.ಎನ್.ಸಿಂಹ ಮತ್ತು ಮಂಡ್ಯದ ಗಂಡು ಅಂಬರೀಶ್ ಪ್ರವೇಶ ದ್ವಾರ.”

ಇವರೆಲ್ಲದೆ ಮಂಡ್ಯಕ್ಕೆ ಕೊಡುಗೆ ನೀಡಿದ ಇನ್ನೂ ಮಹನೀಯರಿದ್ದಾರೆ ಎಂಬ ಅರಿವು ಕನ್ನಡ ಸಾಹಿತ್ಯ ಪರಿಷತ್ತಿಗಿದ್ದು ವಿಚಾರ ಗೋಷ್ಠಿಗಳಲ್ಲಿ ಅವರ ಕುರಿತು ಸ್ಮರಿಸಿಕೊಳ್ಳಲಾಗುವುದು.

2. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾರಂಪರಿಕವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬಹಳ ಮಹತ್ವವಾಗಿದ್ದು ಇದರ ಉದ್ಘಾಟನೆಯನ್ನು ‘ಮಂಡ್ಯ ಜಿಲ್ಲೆಯ ಸೃಷ್ಟಿ’ಗೆ ಕಾರಣಕರ್ತರಾದ ಮೈಸೂರು ಅರಸರ ಮನೆತನಕ್ಕೆ ಗೌರವ ಸಲ್ಲಿಸುವ ಸಲುವಾಗಿ ರಾಜಮಾತೆ ಶ್ರೀಮನ್ಮಹಾರಾಣಿ ಮಾತೃಶ್ರೀ ಶ್ರೀಮತಿ ಪ್ರಮೋದಾದೇವಿಯವರಿಂದ ನಡೆಸಲಾಗುವುದು.

3. ಪ್ರಧಾನವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದವೂ ಸೇರಿದಂತೆ 11 ಗೋಷ್ಠಿಗಳು ಸಮಾನಂತರ ವೇದಿಕೆಗಳಲ್ಲಿ 20 ಗೋಷ್ಠಿಗಳು ಸೇರಿ ಒಟ್ಟು 31 ಗೋಷ್ಠಿಗಳು ಆಯೋಜನೆಗೊಂಡಿದ್ದು ಇದರಲ್ಲಿ ನಾಲ್ಕು ಕವಿಗೋಷ್ಠಿಗಳೂ ಸೇರಿ ಕೊಂಡಿವೆ.

4. 31 ವಿವಿಧ ಗೋಷ್ಠಿಗಳಲ್ಲಿ 156 ಜನ ವಿದ್ವಾಂಸರು, ನಾಲ್ಕು ಕವಿಗೋಷ್ಟಿಗಳಲ್ಲಿ ಒಟ್ಟು 83 ಜನ ಕವಿಗಳೂ ಸೇರಿದಂತೆ ಒಟ್ಟು 239 ಜನ ಚಿಂತಕ-ಬರಹಗಾರರು ಈ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವುದು ವಿಶೇಷವಾಗಿದೆ.

5. ಕವಿಗೋಷ್ಠಿಗಳಲ್ಲಿ ಕನ್ನಡ ಮಾತ್ರವಲ್ಲದೆ ಹವ್ಯಕ ಕನ್ನಡ , ತುಳು, ಕೊರಗ, ಕೊಂಕಣಿ, ಕುಂದಗನ್ನಡ, ಬ್ಯಾರಿ, ಲಂಬಾಣಿ ಸೇರಿದಂತೆ ಕನ್ನಡದ ಸೋದರ ಭಾಷೆಗಳ ಕವಿತೆಗಳೂ ವಾಚಿಸಲ್ಪಡುತ್ತಿರುವುದು ವಿಶೇಷವಾಗಿದೆ.

6. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಿಗೆ ವಿಶೇಷ ಮಹತ್ವವಿರುತ್ತದೆ. ಇದು ಕನ್ನಡ ಕಾವ್ಯಕ್ಷೇತ್ರದ ಭವಿಷ್ಯವನ್ನು ಸೂಚಿಸುತ್ತದೆ. ನವ್ಯ, ದಲಿತ-ಬಂಡಾಯ-ನವ್ಯೋತ್ತರ ಸಾಹಿತ್ಯಗಳು ತಮ್ಮ ನೆಲೆಯನ್ನು ಕಂಡು ಕೊಂಡಿದ್ದೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳ ಮೂಲಕ. ಇದೇ ಮೊಟ್ಟ ಮೊದಲ ಸಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದ್ದು ಇದರಲ್ಲಿ ಭಾಗವಹಿಸುವವರು ಮಾತ್ರವಲ್ಲದೆ ಅಧ್ಯಕ್ಷತೆ ವಹಿಸಿದವರು, ಆಶಯ ನುಡಿಗಳನ್ನಾಡುವವರು ಎಲ್ಲರೂ ವಿಶೇಷ ದೃಷ್ಟಿಚೇತನರೇ ಆಗಿದ್ದಾರೆ. ಡಾ. ಶಿವರಾಜ ಶಾಸ್ತ್ರೀ ಹೆರೂರ ಅವರು ಅಧ್ಯಕ್ಷತೆ ವಹಿಸುವ ಈ ಕವಿಗೋಷ್ಟಿಯಲ್ಲಿ ಮುದಿಗೆರೆ ರಮೇಶ್ ಕುಮಾರ್ ಅವರು ಆಶಯ ಭಾಷಣವನ್ನಾಡಲಿದ್ದು ಒಟ್ಟು ಹತ್ತು ಕವಿಗಳು ಈ ವಿಶೇಷ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

7. ಮಹಿಳಾ ವಿಶೇಷ ಕವಿಗೋಷ್ಠಿಯನ್ನು ಕೂಡ ಏರ್ಪಡಿಸಿದ್ದು ಇದರ ಅಧ್ಯಕ್ಷತೆ ವಹಿಸಿದವರು ಆಶಯ ನುಡಿಗಳನ್ನಾಡುವವರು, ನಿರ್ವಹಣೆ, ಸ್ವಾಗತ, ನಿರೂಪಣೆ, ವಂದನಾರ್ಪಣೆ ಮಾಡುವವರು ಎಲ್ಲರೂ ಮಹಿಳೆಯರೇ ಆಗಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಸಬಲೀಕರಣದ ಕುರಿತು ಆಶಯವನ್ನು ಬಿಂಬಿಸುತ್ತದೆ. ಇನ್ನು ಎರಡು ಕವಿಗೋಷ್ಟಿಗಳಲ್ಲಿ ಬೆಳಕಿಗೆ ಬಾರದ ಅವಕಾಶವಂಚಿತರಾದ ಪ್ರತಿಭಾವಂತರಿಗೆ ಮಹತ್ವವನ್ನು ನೀಡಲಾಗಿದೆ. ಸವಿತಾ ನಾಗಭೂಷಣ ಅವರು ಅಧ್ಯಕ್ಷತೆ ವಹಿಸಲಿರುವ ಈ ಗೋಷ್ಠಿಯಲ್ಲಿ ಡಾ.ಕೆ.ಎನ್.ಲಾವಣ್ಯಪ್ರಭಾ ಅವರು ಆಶಯ ಭಾಷಣವನ್ನಾಡಲಿದ್ದು ಒಟ್ಟು ಹದಿನೈದು ಜನ ಕವಯಿತ್ರಿಯರು ಇದರಲ್ಲಿ ಭಾಗವಹಿಸಲಿದ್ದಾರೆ.

5. ಇನ್ನುಳಿದ ಎರಡು ಕವಿಗೋಷ್ಠಿಗಳ ಅಧ್ಯಕ್ಷತೆಯನ್ನು ಡಾ. ಪ್ರದೀಪ್ ಕುಮಾರ್ ಹೆಬ್ರಿ ಮತ್ತು ಡಾ.ಮಾನಸ ಅವರು ವಹಿಸಲಿದ್ದು ಡಾ. ರವಿ ಬೆಸಗರಹಳ್ಳಿ ಮತ್ತು ಕೆ.ಪಿ.ಮೃತ್ಯುಂಜಯ ಅವರು ಆಶಯ ನುಡಿಗಳನ್ನು ಆಡುತ್ತಾರೆ. ವಹಿಸಲಿದ್ದು ಎರಡೂ ಕವಿಗೋಷ್ಟಿಗಳಲ್ಲಿ ತಲಾ 25ರಂತೆ ಒಟ್ಟು ಐವತ್ತು ಕವಿಗಳು ತಮ್ಮ ಕವಿತೆಗಳನ್ನು ವಾಚಿಸಲಿದ್ದಾರೆ.

6. ಸಮ್ಮೇಳನದ ಆರಂಭಿಕ ಗೋಷ್ಠಿಯೇ ‘ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರು’. ಇದರಲ್ಲಿ ಮಂಡ್ಯ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ ರಾಜಮಾತೆ ಕೆಂಪನಂಜಮ್ಮಣ್ಣಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಗಳ ಕುರಿತು ಚಿಂತನ-ಮಂಥನ ನಡೆಯಲಿದ್ದು, ಪ್ರೊ. ಎಂ.ವಿ. ಶ್ರೀನಿವಾಸ್ ಅಧ್ಯಕ್ಷತೆಯನ್ನು ವಹಿಸುವ ಕವಿಗೋಷ್ಠಿಯಲ್ಲಿ ಡಾ. ಗಜಾನನ ಶರ್ಮ, ಡಾ. ಚಿನ್ನಸ್ವಾಮಿ ಸೋಸಲೆ, ಪ್ರೊ. ಚಂದ್ರಶೇಖರ ಉಷಾಲ, ಡಾ. ನಯಿಂಉರ್ ರಹಮಾನ್ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

7. ‘ಮಂಡ್ಯ ನೆಲಮೂಲದ ಮೊದಲುಗಳು’ ಕುರಿತೂ ಒಂದು ವಿಚಾರಸಂಕಿರಣ ಆಯೋಜನೆಗೊಂಡಿದ್ದು ನಾಡಿಗೆ ಮಂಡ್ಯ ಜಿಲ್ಲೆಯು ನೀಡಿದ ಕೊಡುಗೆಗಳ ಬಗ್ಗೆ ಇಲ್ಲಿ ವಿಶೇಷ ಚಿಂತನ-ಮಂಥನಗಳು ನಡೆಯಲಿವೆ. ಪ್ರೊ. ಎಂ. ಕೃಷ್ಣೇಗೌಡರು ಅಧ್ಯಕ್ಷತೆಯನ್ನು ವಹಿಸುವ ಈ ಗೋಷ್ಠಿಯಲ್ಲಿ ಪ್ರೊ. ಬಿ.ಶಿವಲಿಂಗಯ್ಯ, ಡಾ. ವಿ. ನಾಗೇಂದ್ರ ಪ್ರಸಾದ್, ಡಾ. ಕೆಂಪಮ್ಮ, ನವೀನ್ ಕುಮಾರ್ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

8. “ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ’ ಸಮ್ಮೇಳನದಲ್ಲಿ ಆಯೋಜನೆಗೊಂಡಿರುವ ವಿನೂತನ ಗೋಷ್ಠಿಯಾಗಿದ್ದು ರಾಜಕೀಯ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ನಂಟನ್ನು ಹೊಂದಿರುವ ಹೆಚ್.ಕೆ.ಪಾಟೀಲ್, ಡಾ.ಬಿ.ಎಲ್.ಶಂಕರ್, ಸಿ.ಟಿ.ರವಿ, ಡಾ.ಕೆ.ಅನ್ನದಾನಿ, ರವೀಂದ್ರ ರೇಷ್ಮೆ ಇದರಲ್ಲಿ ಭಾಗವಹಿಸಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ ಸಾಹಿತ್ಯ ಎಲ್ಲೆಡೆಗೂ ಬೇಕು, ಆದರೆ ರಾಜಕೀಯ ತನ್ನ ಗಡಿಯನ್ನು ದಾಟಬಾರದು ಎನ್ನುವ ಸಕಾಲಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಈ ವಿಚಾರಗೋಷ್ಠಿ ರೂಪುಗೊಂಡಿದ್ದು , ಇದು ಎಲ್ಲಾ ವಲಯಗಳಲ್ಲಿಯೂ ಕುತೂಹಲವನ್ನು ಉಂಟು ಮಾಡಿದೆ.

9. ನೆಲ ಜಲ ಸಾಕ್ಷರತೆಯ ಕುರಿತು ವಿಶೇಷ ಗೋಷ್ಠಿಯು ಆಯೋಜಿತವಾಗುತ್ತಿದ್ದು, ಇದರಲ್ಲಿ ಕಾವೇರಿ ಮಾತ್ರವಲ್ಲದೆ ಕೃಷ್ಣ –ಮಹದಾಯಿಗೆ ಸಂಬಂಧಿಸಿದ ಸಮಸ್ಯೆಗಳೂ ಮತ್ತು ನೆಲ-ಜಲ ಸಾಕ್ಷರತೆಯ ಕುರಿತೂ ವಿಶೇಷ ಚರ್ಚೆಗಳು ನಡೆಯಲಿವೆ. ಕರ್ನಾಟಕ-ಪ್ರಕೃತಿ ವಿಕೋಪದ ಆತಂಕಗಳ ಕುರಿತು ವಿಶೇಷ ಗೋಷ್ಠಿಯು ಏರ್ಪಾಟಾಗಿದ್ದು ಭೂಕುಸಿತ, ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪಗಳಂತಹ ಜ್ವಲಂತ ಸಮಸ್ಯೆಗಳು ಇದರಲ್ಲಿ ಚರ್ಚಿತವಾಗಲಿವೆ.

10. ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಸಂದರ್ಭದಲ್ಲಿ “ಕನ್ನಡವೆಂದರೆ ಬರೀ ನುಡಿಯಲ್ಲ” ಎಂಬ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದ್ದು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಶಂಕರ ಹಲಗತ್ತಿ, ರಾಘವೇಂದ್ರ ಪಾಟೀಲರು ಉಪನ್ಯಾಸಗಳನ್ನು ನೀಡಲಿದ್ದಾರೆ.

11. ಸಮ್ಮೇಳನದ ವಿಶೇಷ ಆಕರ್ಷಣೆ ಎಂದರೆ ‘ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ’ ಇದರಲ್ಲಿ ಮಂಟೇಸ್ವಾಮಿ ಕಾವ್ಯ, ಮೂಡಲಪಾಯ, ಜುಂಜಪ್ಪ ಕಾವ್ಯ, ಶ್ರೀಕೃಷ್ಣ ಪಾರಿಜಾತ, ಜೋಗಿ ಕಥಾನಕಗಳ ಪ್ರದರ್ಶನ ಮತ್ತು ವಿವರಣಿ ಇದ್ದು, ಕನ್ನಡ ಸಾಹಿತ್ಯ ಪರಿಷತ್ತು ಲಖಿತ ಪರಂಪರೆಯಷ್ಟೇ ಮೌಖಿಕ ಪರಂಪರೆಗೂ ಮಹತ್ವ ನೀಡುತ್ತಿರುವುದಕ್ಕೆ ಇದು ನಿದರ್ಶನವಾಗಿದೆ.

12. ಮಹಿಳಾ ಲೋಕದ ಅನನ್ಯತೆಗಳನ್ನು ಶೋಧಿಸುವ “ಸ್ತ್ರೀ ಎಂದರೆ ಅಷ್ಟೇ ಸಾಕೆ” ಹಾಗೂ “ದಲಿತ ಸಾಹಿತ್ಯದ ನೆಲೆಗಳು” “ಸೃಜನಶೀಲತೆ-ವಿದ್ಯುನ್ಮಾನ ಮಾಧ್ಯಮಗಳ ಸವಾಲು” “ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು” ಹೀಗೆ ಕನ್ನಡ ಸಾಹಿತ್ಯದ ನಾಳೆಗಳನ್ನು ಶೋಧಿಸುವ ವಿಶಿಷ್ಟ ಪ್ರಯತ್ನಗಳು ಸಮ್ಮೇಳನದಲ್ಲಿವೆ.

13. ಗೋಷ್ಠಿಗಳ ಇನ್ನೊಂದು ವಿಶೇಷವೆಂದರೆ “ಸಾಹಿತ್ಯ ಪಾತ್ರಗಳ ಮುಖಾಮುಖಿ” ಕೃಷ್ಣ, ಶ್ರೀರಾಮ ಮತ್ತು ದ್ರೌಪದಿ ಪಾತ್ರಗಳು ವಿಭಿನ್ನ ಮಹಾಕವಿ ಪ್ರಯೋಗದಲ್ಲಿ ಮೂಡಿ ಬಂದ ಬಗೆಯನ್ನು ಮುಖಾಮುಖಿಯಾಗಿಸುವ ಪ್ರಯತ್ನ ಇಲ್ಲಿ ನಡೆಯಲಿದ್ದು ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ಕೃಷ್ಣ ಭಟ್ ಅವರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಗೋಷ್ಟಿಯಲ್ಲಿ ಡಾ.ಎಸ್.ಪಿ.ಪದ್ಮಪ್ರಸಾದ್, ಡಾ. ಸಿ. ಬಸವರಾಜ ಕಲ್ಗುಡಿ, ಡಾ. ಎಂ. ಸುಮಿತ್ರ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

14. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022ರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವಿಚಾರಗೋಷ್ಠಿ ಏರ್ಪಾಟಾಗಿದ್ದು ಕರ್ನಾಟಕದ ಕಾನೂನು ಆಯೋಗದ ಸದಸ್ಯರಾದ ಗೌರವಾನ್ವಿತ ನ್ಯಾಯಮೂರ್ತಿ ಅಶೋಕ ನಿಜಗಣ್ಣವರ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು ಅವರು ಕನ್ನಡಿಗರಿಗೆ ಉದ್ಯೋಗದ ಸಮಸ್ಯೆ ಮತ್ತು ಸಾಧ್ಯತೆಗಳ ಕುರಿತೂ ವಿವರವಾಗಿ ಮಾತನಾಡಲಿದ್ದಾರೆ. ಈ ಗೋಷ್ಠಿಯಲ್ಲಿ ಆಡಳಿತದಲ್ಲಿ ಕನ್ನಡ ಬಳಕೆ, ನ್ಯಾಯಾಲಯದಲ್ಲಿ ಕನ್ನಡ ತೀರ್ಪುಗಳು ಮತ್ತು ಸಾರ್ವಜನಿಕ ವಲಯದಲ್ಲಿ ಕನ್ನಡ ಬಳಕೆ ಬಗ್ಗೆ ಚರ್ಚೆಗಳು ನಡೆಯಲಿದ್ದು, ಬಿ.ಆರ್. ಜಯಚಾಮರಾಜೇ ಅರಸ್, ಶ್ರೀಧರ್, ಡಾ.ಅಬ್ದುಲ್ ರೆಹಮಾನ್ ಪಾಷ, ನ್ಯಾಯಾಧೀಶ ಬಿ.ಶಿವಲಿಂಗೇಗೌಡ ಈ ವಿಷಯದ ಕುರಿತು ಚಿಂತನ-ಮಂಥನ ನಡೆಸಲಿದ್ದಾರೆ.

15. ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣದ ಜ್ವಲಂತ ವಿಷಯದ ಕುರಿತು ವಿಶೇಷ ಗೋಷ್ಠಿ ಇದ್ದು ಡಾ. ಪುರುಷೋತ್ತಮ ಬಿಳಿಮಲೆ, ಡಾ. ಎಲ್.ಎನ್.ಮುಕುಂದ ರಾಜ್, ಡಾ. ನಿರಂಜನಾರಾಧ್ಯ, ಎಫ್ .ಸಿ. ಚೇಗರಡ್ಡಿ, ಆನಂದ್ ಜಿ, ಸೋಮಣ್ಣ ಬೇವಿನಮರದ ಇದರಲ್ಲಿ ಭಾಗವಹಿಸಲಿದ್ದಾರೆ.

16. ಸಮಾನತೆ ಸಾರಿದ ದಾರ್ಶನಿಕರ ಬಗ್ಗೆ ವಿಶೇಷ ಗೋಷ್ಠಿ ನಡೆಯಲಿದ್ದು ಸಾಂಸ್ಕೃತಿಕ ನಾಯಕ ಬಸವಣ್ಣ, ಸಾಮರಸ್ಯ ಸಾರಿದ ದಾಸವರೇಣ್ಯರು, ಅರಿವು ಮೂಡಿಸಿದ ತತ್ವಪದಕಾರರ ಕುರಿತು ಇಲ್ಲಿ ಚರ್ಚೆಗಳು ನಡೆಯಲಿವೆ. ಶಂಕರ ದೇವನೂರು ಅಧ್ಯಕ್ಷತೆ ವಹಿಸಲಿರುವ ಈ ಗೋಷ್ಠಿಯಲ್ಲಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ, ಶ್ರೀ ಶ್ರೀ ನಿ.ಪ ಶಿವಾನಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿಯವರು, ಡಾ. ಎನ್. ಆರ್. ಲಲಿತಾಂಬ, ಮೀನಾ ಪಾಟೀಲ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

17. ಶತಮಾನೋತ್ಸ ವರ್ಷದ ಸಾಧಕರು ಗೋಷ್ಟಿಯಲ್ಲಿ ಪ್ರೊ. ಎಲ್. ಎಸ್.ಶೇಷಗಿರಿ ರಾವ್, ನಿರಂಜನ, ಕು .ಶಿ. ಹರಿದಾಸ ಭಟ್ಟ, ಶಾಂತರಸ, ಜಿ. ಎಸ್. ಅಮೂರ ಮತ್ತು ವಿಜಯ ಭಾಸ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿ ಕೊಳ್ಳಲಾಗುವುದು ಇದಲ್ಲದೆ ಇನ್ನೂ ಹತ್ತು ಜನ ಮಹನೀಯರ ಜನ್ಮ ಶತಮಾನೋತ್ಸವ ಈ ವರ್ಷ ಆಚರಣೆಗೊಳ್ಳುವುದು ಎಂಬ ಅರಿವು ಕನ್ನಡ ಸಾಹಿತ್ಯ ಪರಿಷತ್ತಿಗಿದ್ದು ಅವರ ಸ್ಮರಣೆಯನ್ನೂ ಸಂದರ್ಭಾನುಸಾರ ಮಾಡಲಾಗುವುದು.

18. ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರದ ಸವಾಲುಗಳ ಕುರಿತ ವಿಶೇಷ ಗೋಷ್ಠಿ ಇದ್ದು ಎಸ್.ವಿ. ರಾಜೇಂದ್ರ ಸಿಂಗ್ (ಬಾಬು)ಅಧ್ಯಕ್ಷತೆ ವಹಿಸಲಿರುವ ಗೋಷ್ಟಿಯಲ್ಲಿ ಡಾ. ಸುಜಾತಾ ಜಂಗಮಶೆಟ್ಟಿ, ಡಿ.ಸತ್ಯ ಪ್ರಕಾಶ್ , ರಂಜನಿ ರಾಘವನ್ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಾಹಿತ್ಯದ ಪಾತ್ರದ ಕುರಿತು ವಿಶೇಷ ಗೋಷ್ಠಿ ಇದ್ದು ಟಿ.ಎಸ್.ನಾಗರಾಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಗೋಷ್ಠಿಯಲ್ಲಿ ಡಿ.ಎನ್. ಅಕ್ಕಿ, ಡಾ. ಬಸು ಬೇವಿನಗಿಡದ, ಆರ್. ಡಿ. ರವೀಂದ್ರ, ಬಾಗೂರು ಮಾರ್ಕಾಂಡೇಯ ಇದರಲ್ಲಿ ಭಾಗವಹಿಸಲಿದ್ದಾರೆ.

19. ಕರ್ನಾಟಕದ ಚಿತ್ರಣವನ್ನು ಬದಲಿಸಿದ ಚಳವಳಿಗಳ ಕುರಿತು ವಿಶೇಷ ವಿಚಾರ ಸಂಕಿರಣವಿದ್ದು ಗೋಕಾಕ್, ರೈತ ಮತ್ತು ಜನಪರ ಚಳವಳಿಗಳ ಕುರಿತು ಇಲ್ಲಿ ಚರ್ಚೆ ನಡೆಯಲಿದೆ. ದರ್ಶನ್ ಪುಟ್ಟಣ್ಣಯ್ಯ ನವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಗೋಷ್ಠಿಯಲ್ಲಿ ಸಾ.ರಾ.ಗೊವಿಂದು, ಬಂಕಾಪುರ ಚನ್ನಬಸಪ್ಪ , ಜಿ.ಎಸ್. ರಾಜೇಂದ್ರ ಅಸುರನಾಡು, ಇಂದಿರಾ ಕೃಷ್ಣಪ್ಪ ಭಾಗವಹಿಸಲಿದ್ದಾರೆ.

20. ಈ ವರ್ಷ ಅನೇಕ ಚಾರಿತ್ರಿಕ ಘಟನೆಗಳಿಗೆ ಮೈಲುಗಲ್ಲಾಗಿದ್ದು ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನ-100, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು- ಭಾರತ ಜನನಿಯ ತನುಜಾತೆ-100, ಭಾರತ ಸಂವಿಧಾನ-75, ಬೇಂದ್ರೆಯವರ ‘ನಾಕು ತಂತಿ’ಗೆ ಜ್ಞಾನಪೀಠ ಪುರಸ್ಕಾರ-50ರ ಕುರಿತು ವಿಶೇಷ ಉಪನ್ಯಾಸಗಳು ಸಮ್ಮೇಳನದಲ್ಲಿ ಏರ್ಪಾಟಾಗಿವೆ.

21. 87ನೆಯ ಅಖಿಲ ಭಾರತ ಸಮ್ಮೇಳನವಾಗಿರುವ ಹಿನ್ನೆಲೆಯಲ್ಲಿ ನಾಡು-ನುಡಿಗೆ ವಿಶೇಷ ಸೇವೆ ಸಲ್ಲಿಸದ 87 ಸಾಧಕರನ್ನು ಮತ್ತು ಸುವರ್ಣ ಮಹೋತ್ಸವ ನೆನಪಿನಲ್ಲಿ 50 ಸಾಧಕರು ಸೇರಿದಂತೆ ಒಟ್ಟು 137 ಜನರನ್ನು ಸನ್ಮಾನಿಸಲಾಗುವುದು. ಸಾಹಿತ್ಯ ಕನ್ನಡ ಸೇವೆ, ಕನ್ನಡ ಸಂಘಟನೆ, ಆಡಳಿತ ಕನ್ನಡ, ಸಮಾಜ ಸೇವೆ, ಶಿಕ್ಷಣ, ನ್ಯಾಯಾಂಗ, ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ ವೈದ್ಯಕೀಯ, ಕ್ರೀಡೆ, ರಂಗಭೂಮಿ, ಕಾನೂನು, ವಿಜ್ಞಾನ, ಚಲನಚಿತ್ರ, ಮಹಿಳಾ ಸಬಲೀಕರಣ, ಸಂಗೀತ, ಕನ್ನಡಪರ ಹೋರಾಟ, ಸಹಕಾರ, ಭಾರತೀಯ ಸೇನೆ, ಸಂಶೋಧನೆ, ಪ್ರಾಚ್ಯವಸ್ತು, ಜಾನಪದ, ಯುವ ಸಬಲೀಕರಣ ಹೀಗೆ 22 ಕ್ಷೇತ್ರದ 137 ಸಾಧಕರನ್ನು ಮೂರು ದಿನಗಳಲ್ಲಿ 45, 46, 46 ಹೀಗೆ ವಿಂಗಡಿಸಿ ಸನ್ಮಾನಿಸಲಾಗುವುದು.

22. 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಸಲ 18 ದೇಶಗಳ ಸುಮಾರು 250ಕ್ಕೂ ಹೆಚ್ಚು ವಿದೇಶಿ ಕನ್ನಡಿಗರು ಭಾಗವಹಿಸುತ್ತಿದ್ದು ಅವರಲ್ಲಿ 20 ಜನರನ್ನು ಸನ್ಮಾನಿಸಲಾಗುವುದು, ಯರೋಪಿನ ಪ್ರತಿಭಾವಂತ ಬರಹಗಾರರು ಬರೆದ ‘ಸಪ್ತಸಾಗರದಾಚೆಯೆಲ್ಲೋ’ ಕೃತಿ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ.

ಬೆಹರಿನ್, ಆಸ್ಟ್ರೇಲಿಯಾ ಕನ್ನಡ ಸಂಘಗಳನ್ನು ಅರವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕಾಗೋ ವಿಶ್ವವಿದ್ಯಾಲಯದ ಕನ್ನಡ ಪೀಠವನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಮಂಡ್ಯ ಜಿಲ್ಲೆಯ ಹೆಮ್ಮೆ ತ್ರಿವೇಣಿಯವರ ಪ್ರಖ್ಯಾತ ಕಾದಂಬರಿ ‘ಶರಪಂಜರ’ವನ್ನು ಜಯಮೂರ್ತಿಯವರು ಇಟಾಲಿಯನ್ ಭಾಷೆಗೆ ಅನುವಾದಿಸಿದ್ದು ಇದು ಸಮ್ಮೇಳನದಲ್ಲಿ ವಿಶೇಷವಾಗಿ ಬಿಡುಗಡೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...