Date: 06-07-2022
Location: ಬೆಂಗಳೂರು
“ಮಸಣಮ್ಮನ ವಚನಗಳು ಸಂಖ್ಯೆಯಲ್ಲಿ ಕಡಿಮೆಯಿದ್ದಲೂ ಸತ್ವಯುತವಾಗಿವೆ. ಬಸವಾದಿ ಶರಣರನ್ನು ತನ್ನ ವಚನದಲ್ಲಿ ಆಕೆ ಸ್ಮರಿಸಿದ್ದಾಳೆ. ಅವರಿಂದಲೇ ತಾನು ಬೆಳೆದೆನೆಂದು ಹೇಳಿಕೊಂಡಿದ್ದಾಳೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಕುರಿತು ಬರೆದಿದ್ದಾರೆ.
ಗಜೇಶ ಮಸಣಯ್ಯನವರ ಪತ್ನಿಯೇ ಮಸಣಮ್ಮ ಆಗಿದ್ದಾಳೆ. ಆದರೆ ಆಕೆಯ ಹೆಸರಿನ ಬಗೆಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಆಕೆಯನ್ನು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಎಂದೇ ಕರೆಯಲಾಗಿದೆ. ಗಜೇಶ ಮಸಣಯ್ಯ ಬಸವೇಶ್ವರರ ಸಮಕಾಲೀನನಾಗಿದ್ದು ಕ್ರಿ.ಶ.1160ರಲ್ಲಿ ಜೀವಿಸಿರಬಹುದಾಗಿದೆ. ಈತನ ಊರು ಅಕ್ಕಲಕೋಟ ತಾಲೂಕಿನ ಕರಜಿಗೆ ಎಂದು ಶಿಲಾಹಾರದ ಶಾಸನದಿಂದ ತಿಳಿದುಬರುತ್ತದೆ. ಕರಜಿಗೆ ಗ್ರಾಮವು ಕಲಬುರಗಿ ಜಿಲ್ಲೆಯ ಆಳಂದಕ್ಕೆ ಸಮೀಪವಾಗಿದೆ. ಕರಜಿಗೆಯಲ್ಲಿ ಮಸಣಯ್ಯನ ಇಷ್ಟದೈವವಾದ ಗಜೇಶ್ವರ ದೇವಾಲಯವಿದೆ. ಕರಜಿಗೆ ಸಮೀಪದ ಮನಹಳ್ಳಿಯಲ್ಲಿ ಮಸಣಯ್ಯನ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸಲಾಗಿದೆ. ಮಸಣಯ್ಯ ಕರಜಿಗೆಯಲ್ಲಿ ಹುಟ್ಟಿ, ಮನಹಳ್ಳಿಯಲ್ಲಿ ಲಿಂಗೈಕ್ಯನಾಗಿದ್ದಾನೆ. ಇಂತಹ ವಿಷಯಗಳಿಗೆ ಸಂಶೋಧನೆ ನಡೆಯಬೇಕಾಗಿದೆ. ಪ್ರತಿವರ್ಷ ಮನಹಳ್ಳಿಯಲ್ಲಿ ಮಸಣಯ್ಯನ ಜಾತ್ರೆ ನಡೆಯುತ್ತದೆ. ಮನಹಳ್ಳಿಗ್ರಾಮಕ್ಕೆ ಮುನವಳ್ಳಿ ಎಂತಲೂ ಕರೆಯಲಾಗುತ್ತದೆ. ಈ ಮನಹಳ್ಳಿ ಗ್ರಾಮಕ್ಕೆ
ನಾನು ಭೇಟಿನೀಡಿ ಕ್ಷೇತ್ರಕಾರ್ಯ ಮಾಡಿದಾಗ, ಅಲ್ಲಿಯ ಮಸಣಯ್ಯನ ದೇವಾಲಯವು ಕಲಬುರಗಿ ಶರಣಬಸವೇಶ್ವರನ ದೇವಾಲಯದ ಹಾಗೆ ಕಾಣಿಸಿತು. ಅದೇ ಶಿಲ್ಪದ ಮಾದರಿಯಲ್ಲಿ ಈ ದೇವಾಲಯವು ನಿರ್ಮಾಣವಾಗಿರಬಹುದಾಗಿದೆ. ಮಂದಿರದಲ್ಲಿ ಮಸಣಯ್ಯನ ಮೂರ್ತಿ ಇರದೆ, ನಂದಿಯ ಮೂರ್ತಿಯೇ ಇದೆ. ಗರ್ಭಗುಡಿಯಲ್ಲಿ ಜೋಡುನಂದಿಗಳಿವೆ. ಇವೆರಡೂ ಮಸಣಯ್ಯ ಮತ್ತು ಆತನ ಗುರುವಿನ ಸಂಕೇತವಾಗಿವೆಯೆಂದು ಹೇಳಲಾಗುತ್ತದೆ. ಮಸಣ್ಣಯ್ಯನ ಸಮಾಧಿಯ ಪಕ್ಕದಲ್ಲಿಯೇ ಪತ್ನಿ ಮಸಣಮ್ಮನ ಸಮಾಧಿಯೂ ಇತ್ತೆಂದು ಊರಿನ ಹಿರಿಯರು ಹೇಳುತ್ತಾರೆ. ಹೀಗಾಗಿ ಇವೆರಡು ನಂದಿಗಳ ಬಗೆಗೆ, ಮಸಣಮ್ಮನ ಸಮಾಧಿ ಬಗೆಗೆ ಹೆಚ್ಚಿನ ಸಂಶೋಧನೆ
ನಡೆಯಬೇಕಾಗಿದೆ. ಈ ಶರಣ ದಂಪತಿಗಳ ಸಮಾಧಿಗಳ ಮೇಲೆಯೇ ಗುಡಿಯನ್ನು ಕಟ್ಟಲಾಗಿದೆ. ಮಸಣಯ್ಯನನ್ನು ಮನಹಳ್ಳಿ ಜನರು "ಮಸಣಸಿದ್ಧ" ಎಂದೇ ಕರೆಯುತ್ತಾರೆ. ಗಜೇಶ ಮಸಣಯ್ಯನ ಬಗೆಗೆ ಮನಹಳ್ಳಿಯಲ್ಲಿ ಅನೇಕ ಪವಾಡ ಕತೆಗಳಿವೆ.
ಅದೇ ರೀತಿ ಗಜೇಶ ಮಸಣಯ್ಯನನ್ನು ಕುರಿತಂತೆ "ಗಣಸಹಸ್ರನಾಮ", "ಪಂಡಿತಾರಾಧ್ಯ
ಚರಿತ್ರೆ", "ಬಸವಪುರಾಣ", "ಪದ್ಮರಾಜ ಪುರಾಣ", "ವೀರಶೈವಾಮೃತ ಮಹಾಪುರಾಣ", "ಗುರುರಾಜ ಚಾರಿತ್ರ", "ಭೈರವೇಶ್ವರ ಕಾವ್ಯ", "ಅನುಭವಸ್ತ್ರೋತ್ರದ ಕಂದ", "ಬಸವೇಶ್ವರ ಪುರಾಣ", "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಈ ಮೊದಲಾದ ಪುರಾಣಕಾವ್ಯಗಳಲ್ಲಿ ಗಜೇಶ ಮಸಣಯ್ಯನ ಪ್ರಸ್ತಾಪವಿದೆ. ಆದರೆ ಆತನ ಪತ್ನಿ ಮಸಣ್ಣಮ್ಮನ ಬಗೆಗೆ ಹೆಚ್ಚಿನ ದಾಖಲೆಗಳು ದೊರೆಯುವುದಿಲ್ಲ, ಜನಪದ ಸಾಹಿತ್ಯದಲ್ಲಿಯೂ ಮಸಣಯ್ಯನನ್ನು ಕುರಿತು ಹಾಡುಗಳಿವೆ. ಆದರೆ ಮಸಣಮ್ಮನನ್ನು ಕುರಿತು ಹಾಡುಗಳು ದೊರೆತಿಲ್ಲ.
"ಗಜೇಶ ಮಸಣಯ್ಯ ಗಜನಾಗಿನಿಂತಾನ ಹೊಳೆ ದಾರಿ ಬಿಟ್ಟಾದ ಅವನಿಗೆ!. "
ಈ ಗೀತೆಯಲ್ಲಿ ಗಜೇಶ ಮಸಣಯ್ಯನನ್ನು ಕಂಡು, ಹೊಳೆಯೇ ದಾರಿಬಿಟ್ಟು, ಎರಡು ಕಡೆ ಹರಿದಿದೆಯೆಂದು ಪವಾಡ ಕಥೆಯನ್ನು ಹೇಳಲಾಗಿದೆ.
"ಚಿಕ್ಕಮಸಣಸಿದ್ಧ ಚಿಣೆಯನಾಡುತ ಹ್ವಾದ ಚಿಕ್ಕಳ್ಳಿ ದಾಟಿ ಮನಗೊಳಿ! ಸಂತ್ಯಾಗ ಚಿತ್ರದ ಕೊಡಕ ಚಿಣೆ ಬಡದೋ" ಎಂಬಂತಹ ತ್ರಿಪದಿಗಳಲ್ಲಿ ಗಜೇಶ ಮಸಣಯ್ಯನ ಬಾಲ್ಯದ ಜೀವನ ಕುರಿತಂತೆ ವಿವರಗಳಿವೆ. ಈ ರೀತಿಯ ಪೂರಕಸಾಹಿತ್ಯ ಮಸಣಮ್ಮನನ್ನು ಕುರಿತು ಸಿಗುವುದಿಲ್ಲ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಪತಿಗೆ ಗೌರವ ಸಿಕ್ಕರೆ ಸಾಕು, ಅದು ಅವನ ಸತಿಗೂ ಸಿಕ್ಕಂತೆ ಎಂಬ ನಂಬಿಕೆಯಿದೆ. ಹೀಗಾಗಿ ಅನೇಕ ಶರಣೆಯರ ಪತಿಗಳ ವರ್ಣನೆಗಳೇ ಜಾಸ್ತಿ ಇವೆ ಹೊರತು, ಶರಣೆಯರನ್ನು ಕುರಿತು ಪ್ರತ್ಯೇಕವಾಗಿ ಸಾಹಿತ್ಯ ರಚಿಸಿರುವುದು ವಿರಳ. ಅಕ್ಕಮಹಾದೇವಿ, ಮುಕ್ತಾಯಕ್ಕ, ನೀಲಾಂಬಿಕೆ ಈ ಮೊದಲಾದ ಕೆಲವು ಶರಣೆಯರನ್ನು ಕುರಿತು ಜನಪದರು ವಿವರವಾಗಿ ಹಾಡಿದ್ದಾರೆ.
ಗಜೇಶ ಮಸಣಯ್ಯಗಳ ಪತ್ನಿ ಮಸಣಮ್ಮನ ಬಗೆಗೆ ಪ್ರತ್ಯೇಕ ದಾಖಲೆಗಳಿಲ್ಲ. ಆಕೆಯನ್ನು ನಾವು ಮಸಣಯ್ಯನ ಮೂಲಕವೇ ನೋಡಬೇಕಾಗುತ್ತದೆ. ಆದರೆ ಮಸಣಮ್ಮ ಕೂಡ ಮಹತ್ವದ ವಚನಕಾರ್ತಿಯಾಗಿದ್ದಾಳೆ. "ಮಸಣಯ್ಯಪ್ರಿಯ ಗಜೇಶ", ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾಳೆ. ಹತ್ತು ವಚನಗಳು ಪ್ರಕಟವಾಗಿವೆ.
ಮಸಣಮ್ಮನ ವಚನಗಳು ಸಂಖ್ಯೆಯಲ್ಲಿ ಕಡಿಮೆಯಿದ್ದಲೂ ಸತ್ವಯುತವಾಗಿವೆ. ಬಸವಾದಿ ಶರಣರನ್ನು ತನ್ನ ವಚನದಲ್ಲಿ ಆಕೆ ಸ್ಮರಿಸಿದ್ದಾಳೆ. ಅವರಿಂದಲೇ ತಾನು ಬೆಳೆದೆನೆಂದು ಹೇಳಿಕೊಂಡಿದ್ದಾಳೆ. ಬಸವಣ್ಣ ತನಗೆ ಗುರುವಾದನೆಂದು, ಚೆನ್ನಬಸವಣ್ಣ ಲಿಂಗವಾದನೆಂದು, ಪ್ರಭುದೇವರು ತನಗೆ ಜಂಗಮವಾದನೆಂದು, ಮರುಳಶಂಕರದೇವರು ತನಗೆ ಪ್ರಸಾದಿಯಾದನೆಂದು ಹೇಳಿರುವ ಮಸಣಮ್ಮ ತಾನು ಆಧ್ಯಾತ್ಮಕ್ಷೇತ್ರದಲ್ಲಿ ಬೆಳೆಯಲು ಇವರೆಲ್ಲಾ ಕಾರಣರಾಗಿದ್ದಾರೆಂದು ಅವರನ್ನೆಲ್ಲ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾಳೆ. ಹೀಗೆ ತನ್ನನ್ನು ಶುದ್ಧ ಪ್ರಸಾದಿಯನ್ನಾಗಿ, ಸಿದ್ಧಪ್ರಸಾದಿಯನ್ನಾಗಿ, ಪ್ರಸಿದ್ಧ ಪ್ರಸಾದಿಯನ್ನಾಗಿ, ಮಹಾಪ್ರಸಾದಿಯನ್ನಾಗಿ ಮಾಡಿದ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮರುಳಶಂಕರದೇವರು ಇವರ ಪಾದಕ್ಕೆ ನಮೋ ನಮೋ ಎನುತಿರ್ದೆನೆಂದು ನಮಿಸಿದ್ದಾಳೆ. ಗುರುಶಿಷ್ಯ ಸಂಬಂಧದ ಬಗೆಗೆ ಮಸಣಮ್ಮ ಮಹತ್ವದ ವಿಚಾರಗಳನ್ನು ಹೇಳಿದ್ದಾಳೆ. ಲಿಂಗವಿಲ್ಲದ ಗುರು ಯಾರೆಂಬುದನ್ನು ತಿಳಿದುಕೊಳ್ಳಬಲ್ಲಾತನೇ ನಿಜವಾದ ಶಿಷ್ಯನಾಗಿರುತ್ತಾನೆ, ಅವನೇ ನಿಜವಾದ ಗುರುವಾಗುತ್ತಾನೆ. ಅದೇ ರೀತಿ ಲಿಂಗವಿಲ್ಲದ ಶಿಷ್ಯನಿಗೆ ತಿಳುವಳಿಕೆ ನೀಡಿ ಲಿಂಗದೀಕ್ಷೆ ಮಾಡುವಾತನೇ ನಿಜವಾದ ಗುರುವಾಗುತ್ತಾನೆಂದು ಹೇಳಿರುವ ಮಸಣಮ್ಮ ತನ್ನ ಈ ವಚನದಲ್ಲಿ ಹೀಗೆ ತಿಳಿಸಿದ್ದಾಳೆ.
"ಎನ್ನನರಿಯಿಸದಿರುವೆ, ಎನ್ನನರಿಯಿಸು ನಿನ್ನನರಿಯಿಸಬೇಡ ಎನ್ನನರಿಯದವ ನಿನ್ನನರಿಯ.
ಎನ್ನನರಿಯಿಸದೆ ನಿನ್ನನರಿಯಿಸಿದಡೆ
ನೀನೆನಗೆ ಗುರುವಲ್ಲ, ನಾ ನಿನಗೆ ಶಿಷ್ಯನಲ್ಲ. ಎನ್ನನರಿಯಿಸಿದಡೆ ನೀನನಗೆ ಗುರು, ನಾ ನಿನಗೆ ಶಿಷ್ಯ ಮಸಣಯ್ಯಪ್ರಿಯ ಗಜೇಶ್ವರಾ"
- (ಸ.ವ.ಸಂ.5, ವ-764, 1993)
ಇಲ್ಲಿ ಗುರು-ಶಿಷ್ಯ, ನಾನು-ನೀನು ಎಂಬುವುಗಳು ಬೇರೆ ಬೇರೆಯಾದರೆ, ಗುರುಶಿಷ್ಯ ಸಂಬಂಧಕ್ಕೆ ಅರ್ಥವಿರುವುದಿಲ್ಲ. ಗುರುವೇ ಶಿಷ್ಯನನ್ನು ಬೆಳೆಸಬೇಕು, ಶಿಷ್ಯನೇ ಗುರುವಾಗಿ ಬೆಳೆಯಬೇಕು. ಆಗ ಮಾತ್ರ ಗುರುಶಿಷ್ಯ ಸಂಬಂಧ ಬೆಳೆದು ನಿಲ್ಲುತ್ತದೆಂದು ಮಸಣಮ್ಮ ಹೇಳಿದ್ದಾಳೆ.
ಹೊನ್ನು ಹೆಣ್ಣು ಮಣ್ಣು ಇವು ಮೂರೂ ವಿಷಯಗಳು ಆಧ್ಯಾತ್ಮ ಕ್ಷೇತ್ರದಲ್ಲಿ ಬಹಳ ಚರ್ಚೆಯಾಗಿವೆ. ಈ ದೇಶವ್ಯವಸ್ಥೆಯ ಬಹುಸಂಖ್ಯೆಯ ಜನರೆಲ್ಲ ಇವುಗಳನ್ನು ಮಾಯೆಯೆಂದು ನಂಬಿಕೊಂಡು ಬಂದಿದ್ದಾರೆ. ಆದರೆ 12ನೇ ಶತಮಾನದಲ್ಲಿ ಅಲ್ಲಮಪ್ರಭು ಇದಕ್ಕೆ ಸ್ಪಷ್ಟ ವ್ಯಾಖ್ಯೆ ನೀಡಿದ್ದು ಇವು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆಯೆಂದು ಹೇಳಿದ್ದಾನೆ. ಹೊನ್ನು-ಹೆಣ್ಣು-ಮಣ್ಣು ಬಿಟ್ಟು ಬಂದಾಗಲೇ ಅಧ್ಯಾತ್ಮ ಸಾಧ್ಯವೆಂದು ಬಹಳಷ್ಟು ಜನ ನಂಬಿದ್ದಾರೆ. ಆದರೆ ಮಸಣಮ್ಮ ಇದಕ್ಕೆ ತಕ್ಕ ಉತ್ತರ ನೀಡಿದ್ದಾಳೆ. "ಹೊನ್ನು ಹೆಣ್ಣು, ಮಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು, ಇವಕ್ಕೂ-ಲಿಂಗಕ್ಕೂ ವಿರುದ್ಧವೆ?" ಎಂದು ಪ್ರಶ್ನಿಸಿದ್ದಾಳೆ. ಲಿಂಗವೆಂಬುದು
ಪರಂಜ್ಯೋತಿಯಾಗಿರುತ್ತದೆ, ಪರಮ ಕರುಣಿಯಾಗಿರುತ್ತದೆ, ಪರಮಶಾಂತವಾಗಿರುತ್ತದೆ, ಇದನ್ನರಿಯುವ ಅರಿವು ಮುಖ್ಯವೇ ಹೊರತು ಇದ್ದುದನು ತೊರೆಯುವುದಲ್ಲ, ಎಲ್ಲವನೂ ಮರೆಯುವುದಲ್ಲವೆಂದು ಸ್ಪಷ್ಟಪಡಿಸಿದ್ದಾಳೆ. ಲಿಂಗಕ್ಕೆ ಸಂಬಂಧಿಸಿದ ಮಸಣಮ್ಮನ, ಈ ಕೆಳಗಿನ ವಚನ ತುಂಬ ಮಹತ್ವದ್ದಾಗಿದೆ.
"ಅಂಗನ ಮೇಲಣ ಲಿಂಗವು ಲಿಂಗವಲ್ಲ,
ಮನದ ಮೇಲಣ ಲಿಂಗವು ಲಿಂಗವಲ್ಲ,
ಭಾವದ ಮೇಲಣ ಲಿಂಗವು ಲಿಂಗವಲ್ಲ, ಅಂಗದ ಮೇಲಣ ಲಿಂಗ ವ್ಯವಹಾರ, ಮನದ ಮೇಲಣ ಲಿಂಗ ಸಂಕಲ್ಪ,
ಭಾವದ ಮೇಲಣ ಲಿಂಗ ಭ್ರಾಂತುತತ್ವ.
ಆಳಿನ ಆಳು ಅರಸನಪ್ಪನೆ, ಆಳನಾಳುವನರಸಲ್ಲದೆ? ಅಂಗ ಪ್ರಾಣಭಾವಂಗಳನೊಳಗೊಂಡಿರ್ಪುದೆ ಲಿಂಗ ಕಾಣಾ, ಮಸಣಯ್ಯಪ್ರಿಯ ಗಜೇಶ್ವರಾ"
- (ಸ.ವ.ಸಂ.5, ವ-762, 1993)
ಅಂಗದ ಮೇಲೆ ಲಿಂಗ ಅದು ಮನಕ್ಕರ್ಪಿತವಾದಾಗ, ಅದು ಅಂಗದ ಮೇಲಣ ಲಿಂಗವಾಗಿ ಉಳಿಯುವುದಿಲ್ಲ. ಮನಕ್ಕರ್ಪಿತ ಲಿಂಗವು ಭಾವಲಿಂಗವಾದಾಗ ಅದು ಮನದ ಮೇಲಣ ಲಿಂಗವಾಗಿ ಉಳಿಯುವುದಿಲ್ಲ. ಮೊದಲನೇ ಹಂತ ವ್ಯವಹಾರವಾಗಿ ಕಾಣಿಸಿದರೆ, ಎರಡನೆ ಹಂತ ಸಂಕಲ್ಪವಾಗಿರುತ್ತದೆ. ನಂತರದಲ್ಲಿ ಅದು ಭಾವದಲ್ಲಿ ಮಾತ್ರ ಇರದೆ ದೇಹವನ್ನೇ ವ್ಯಾಪಿಸಿ ಹಾಲಿನಲ್ಲಿ ಹಾಲು ಬೆರೆಸಿದಂತೆ ಲಿಂಗ ಮತ್ತು ದೇಹ ಹಾಗೂ ಮನಸ್ಸು ಮೂರೂ ಕೂಡಿಕೊಂಡು ಒಂದೇಯಾಗಿ ಬಿಡುತ್ತವೆ. ಆಗ ಅದು ಲಿಂಗದೇಹಿಯಾಗುತ್ತದೆ. ಇದೇ ನಿಜವಾದ ಲಿಂಗತತ್ವ, ಉಳಿದದ್ದೆಲ್ಲ ಭ್ರಾಂತುತತ್ವವೆಂದು, ಲಿಂಗತತ್ವದ ಬಗೆಗೆ ಹೊಸ ವಿಚಾರವನ್ನು ಮಸಣಮ್ಮ ತಿಳಿಸಿದ್ದಾಳೆ. ಲಿಂಗಕ್ಕೆ ಸಂಬಂಧಿಸಿದಂತೆ ಇದೊಂದು ಮಹತ್ವದ ವಚನವಾಗಿದೆ. ಮಸಣಮ್ಮನ ವಚನಗಳ ಅಧ್ಯಯನ ನಡೆಯಬೇಕಾಗಿದೆ.
ವಿಜಯಶ್ರೀ ಸಬರದ
9845824834
ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...
"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...
"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...
©2024 Book Brahma Private Limited.