ಲೌಕಿಕದ ಮೂಲಕವೇ ಅಲೌಕಿಕದ ಹಾದಿ

Date: 07-10-2022

Location: ಬೆಂಗಳೂರು


ಒಂದರ ಮೂಲಕ ಮತ್ತೊಂದನ್ನು ಹೇಳುತ್ತ, ಲೌಕಿಕದ ಮೂಲಕವೇ ಶರಣರು ಅಲೌಕಿಕವನ್ನು ಕಂಡುಕೊಂಡಿದ್ದಾರೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಶಾಂಭವಿದೇವಿ ಮತ್ತು ಕಾಳವ್ವೆಯರ ಕುರಿತು ಬರೆದಿದ್ದಾರೆ.

ಶಾಂಭವಿದೇವಿ

ಶಾಂಭವಿದೇವಿ ರೇವಣಸಿದ್ಧೇಶ್ವರನ ಧರ್ಮಪತ್ನಿಯರಲ್ಲಿ ಒಬ್ಬಳೆಂದು, ಮೈಸೂರು
ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ - (ಸಂಪುಟ-4,

ಭಾಗ-1, ಪುಟ-763, 1977). ಶಾಂಭವಿದೇವಿ ಸಿಂಹವಿಕ್ರಮ ಚೋಳರಾಜನ ಮಗಳಾಗಿದ್ದಳೆಂದು ತಿಳಿದುಬರುತ್ತದೆ. "ಮುಕ್ತಿ ಕಂಠಾಭರಣ" ಕೃತಿಯಲ್ಲಿ ಈಕೆಯ ನಾಲ್ಕು ವಚನಗಳು ಪ್ರಕಟವಾಗಿವೆ. "ಶಾಂಭವೀ ಲಿಂಗ" ಎಂಬುದು ಈಕೆಯ ವಚನಾಂಕಿತವಾಗಿದೆ. ಕವಿಚರಿತೆಕಾರರ ಪ್ರಕಾರ ರೇವಣಸಿದ್ಧೇಶ್ವರ ಕ್ರಿ.ಶ.1150 ರಲ್ಲಿದ್ದನಾದುದರಿಂದ ಈಕೆಯ ಕಾಲವೂ ಇದೇ ಆಗಿದೆ. ರೇವಣಸಿದ್ಧೇಶ್ವರ ಮತ್ತು ಅವನ ಧರ್ಮಪತ್ನಿಯರು ತ್ರಿಪುರಾಂತಕ ಕೆರೆಯ ನಿರ್ಮಾಣದಲ್ಲಿ ತೊಡಗಿದ್ದಾಗ ಶಾಂಭವಿದೇವಿಯೂ ಅದರಲ್ಲಿ ಭಾಗಿಯಾಗಿದ್ದಳೆಂದು ತಿಳಿದುಬರುತ್ತದೆ. ಶಾಂಭವಿಯು ಅಲ್ಲಮಪ್ರಭುವಿನೊಂದಿಗೆ ಸಂವಾದ ಮಾಡಿದ್ದಳೆಂಬುದು ಆಕೆಯ ವಚನಗಳಿಂದ ತಿಳಿದು ಬರುತ್ತದೆ.

ಶಾಂಭವಿ ಆಧ್ಯಾತ್ಮ ಮಾರ್ಗದಲ್ಲಿ ದೊಡ್ಡ ಸಾಧನೆ ಮಾಡಿದ್ದಳು. ಯೋಗದಲ್ಲಿಯೂ ಈಕೆ ಪರಿಣಿತಿ ಹೊಂದಿದ್ದಳೆಂಬುದು ಗೊತ್ತಾಗುತ್ತದೆ. ರೇವಣಸಿದ್ಧ, ಬಸವೇಶ್ವರರ ಹಿರಿಯ ಸಮಕಾಲೀನನಾಗಿದ್ದನೆಂಬುದು ಸ್ಪಷ್ಟವಿದೆ. ಕೊಂಡಗುಳಿ ಕೇಶಿರಾಜ, ಹಾವಿನಹಾಳ ಕಲ್ಲಯ್ಯ ಈ ಮೊದಲಾದ ಶರಣರ ಸಮಕಾಲೀನನಾಗಿದ್ದ ರೇವಣಸಿದ್ಧನ ಚರಿತ್ರೆ ಅನೇಕ ಪುರಾಣಕಾವ್ಯಗಳಲ್ಲಿ ದಾಖಲಾಗಿದೆ. ರೇವಣಸಿದ್ಧ ಮತ್ತು ಆತನ ಮಗ ರುದ್ರಮುನಿಯನ್ನು ಕುರಿತಂತೆ ಹರಿಹರ ಮೊದಲಾದ ಕವಿಗಳು ಕಾವ್ಯ ರಚಿಸಿದ್ದಾರೆ. ಕವಿಬೊಮ್ಮರಸನು "ರೇವಣಸಿದ್ಧೇಶ್ವರ ಪುರಾಣ" ಕಾವ್ಯ ರಚಿಸಿದ್ದಾನೆ. ಚೆನ್ನಬಸವ ಕವಿಯ "ರೇವಣಸಿದ್ದೇಶ್ವರ ಕಾವ್ಯ" ಎಂಬ ಕೃತಿಯಲ್ಲಿ, ರೇವಣಸಿದ್ಧೇಶ್ವರನ ಬಗೆಗೆ ಮತ್ತು ಆತನ ಪತ್ನಿಯರ ಬಗೆಗೆ ವಿವರಗಳು ಸಿಗುತ್ತವೆ. ಹೀಗೆ ಶಾಂಭವಿದೇವಿ ರೇವಣಸಿದ್ಧೇಶ್ವರನೆಂಬ ಆಚಾರ್ಯ ಪುರುಷನ ಪತ್ನಿಯಾಗಿದ್ದಳೆಂಬುದು ಸ್ಪಷ್ಟವಾಗಿದೆ.

ಶಾಂಭವಿ ತನ್ನ ವಚನಗಳಲ್ಲಿ ಅಲ್ಲಮಪ್ರಭುವನ್ನು ಸಂಬೋಧಿಸಿ ಮಾತನಾಡಿದ್ದಾಳೆ. ಆಕೆಯ ಹೃದಯದಲ್ಲಿ ಪ್ರಭು ಶೂನ್ಯಪೀಠದಲ್ಲಿದ್ದುದನ್ನು ಆ ಶೂನ್ಯಪೀಠದಲ್ಲಿ ನಿರಂಜನ ಪ್ರಭುವಾದುದನ್ನು ಹೇಳಿದ್ದಾಳೆ. ಆಕೆಯ ಕೈಯಲ್ಲಿ ಪ್ರಭುವೇ ಶಿವಲಿಂಗದ ಕುರುಹಾಗಿ, ನಂತರ ಉಭಯಲಿಂಗಗಳು ಕೂಡಿ ಮಹಾಲಿಂಗವಾಯಿತೆಂದು ತಿಳಿಸಿದ್ದಾಳೆ. ಗುರುಮನೆಯ ವಾರ್ತೆ ಅರಮನೆಯವರಿಗೆ ತಿಳಿದಿರುವುದಿಲ್ಲ, ಅರಮನೆಯ ವಾರ್ತೆಯನ್ನು ಅರೆಮರುಳರು ಬಲ್ಲರೆ? ಎಂದು ಪ್ರಶ್ನಿಸಿದ್ದಾಳೆ. ಶಾಂಭವಿಗೆ ಗುರುಮನೆ- ಅರಮನೆಗಳ ಪರಿಚಯವಿತ್ತು. ಈ ಅನುಭವದ ಹಿನ್ನಲೆಯಲ್ಲಿ ಅವಳು ಕೇಳಿರುವ ಪ್ರಶ್ನೆಗಳು ಕುತೂಹಲಕಾರಿಯಾಗಿವೆ.

ಶಾಂಭವಿಯ ಪತಿ ರೇವಣಸಿದ್ಧನೂ ವಚನಗಳನ್ನು ರಚಿಸಿದ್ದು ಮುಕ್ತಿಕಂಠಾಭರಣ ದಲ್ಲಿ ಆತನ ಒಂದು ವಚನ ಪ್ರಕಟವಾಗಿದೆ. ಆ ವಚನದಲ್ಲಿ ಕಲ್ಯಾಣಪುರವನ್ನು ಉಲ್ಲೇಖಿಸಿದ್ದಾನೆ. ತನ್ನ ಪತ್ನಿಯರೊಂದಿಗೆ ರೇವಣಸಿದ್ಧ ಕಲ್ಯಾಣಕ್ಕೆ ಬಂದುದು ಅನೇಕ ಪುರಾಣಕಾವ್ಯಗಳಲ್ಲಿ ಪ್ರಕಟವಾಗಿದೆ. ಶಾಂಭವಿದೇವಿ ಕೂಡಾ ಇದೇ ಸಂದರ್ಭದಲ್ಲಿ ಕಲ್ಯಾಣಕ್ಕೆ ಬಂದಿರಬೇಕು. ಅವಳ ಮೇಲೆ ಪ್ರಭುವಿನ ಪ್ರಭಾವ ದಟ್ಟವಾಗಿದೆ.

"ಈ ಲಿಂಗ ಮೂರು ಕೋಣೆಯ ದಾಟಲು ಸಮರ್ಥ ದಾಂಟಿ ಪುನರಪಿ ಬರಲು ಸಮರ್ಥ
ಈ ಲಿಂಗ ಉತ್ತರಕೋಣೆಯಲ್ಲಿ ತತ್ತರಿಸುವುದಲ್ಲದೆ ಆ ಕೋಣೆ ಕತ್ತರಿಸಿ ದಾಂಟಿಲ್ಲ ಕಾಣಾ
ಶಾಂಭವೀಲಿಂಗ ಅಲ್ಲಮ ಪ್ರಭುವೇ!"
- ಮುಕ್ತಿ ಕಂಠಾಭರಣ, ಪುಟ-104, 1971

ಇಲ್ಲಿ "ಲಿಂಗ" ಎಂಬ ಪದ ಕಾಲದ ಸಂಕೇತವಾಗಿ ಬಳಕೆಯಾಗಿದೆ. ಭೂತ, ವರ್ತಮಾನ, ಭವಿಷತ್ ಕೋಣೆಗಳನ್ನು ಈ ಲಿಂಗವೆಂಬ ಕಾಲ ದಾಟುತ್ತದೆ. ಆದರೆ ಮುಂದಿನ ಕಾಲಘಟ್ಟವನ್ನು ಅದೇ ಉತ್ತರ ಕೋಣೆಯನ್ನು ದಾಟುವುದಕ್ಕಾಗುವುದಿಲ್ಲವೆಂದು ಹೇಳಿದ್ದಾಳೆ ಈ ವಚನದಲ್ಲಿ ಬೆಡಗಿನ ಶೈಲಿಯಿದೆ. ಈಕೆ ಮಹತ್ವದ ವಚನಕಾರ್ತಿಯಾಗಿದ್ದಳೆಂಬುದು ಸ್ಪಷ್ಟವಾಗುತ್ತದೆ.

ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ

ಬಡಿಗಿ ವೃತ್ತಿಯನ್ನು ಮಾಡುತ್ತಿದ್ದ ಬಾಚಿಕಾಯಕದ ಬಸವಯ್ಯನು, ಬಸವಾದಿ ಶರಣರ ಸಮಕಾಲೀನ ವಚನಕಾರನಾಗಿದ್ದಾನೆ. ಈತನ ಪತ್ನಿಯೇ ಕಾಳವ್ವೆ. ಈಕೆಯನ್ನು ಬಸವಯ್ಯಗಳ ಪುಣ್ಯಸ್ತ್ರೀ ಎಂದೇ ಕರೆಯಲಾಗಿದೆ. ಇವರ ಕಾಲ ಕ್ರಿ.ಶ.1160 ಆಗಿದೆ. ಬಸವಯ್ಯನು ವಿಶ್ವಕರ್ಮನಾಗಿದ್ದ, ಕಾಳಿಕಾದೇವಿಯ ಭಕ್ತನಾಗಿದ್ದ. ಬಸವಣ್ಣನವರ ಚಳುವಳಿಯನ್ನು ಸೇರಿದ ಮೇಲೆ ಶಿವಭಕ್ತನಾದ. ``ರಾಜೇಶ್ವರಲಿಂಗ'' ಅಂಕಿತದಲ್ಲಿ ವಚನಗಳನ್ನು ರಚಿಸಿದ. ಈತನ ವಚನಗಳಲ್ಲಿ ಬಾಚಿಕಾಯಕದ ವೃತ್ತಿಪ್ರತಿಮೆಗಳಿಗೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳಿವೆ.

ಬಸವನಣ್ಣನವರ ಬಗೆಗೆ ಈ ದಂಪತಿಗಳು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. "ಇದು ಬಸವಣ್ಣ ಕೊಟ್ಟ ಕಾಯಕ" ಎಂದು ತನ್ನ ಕಾಯಕದ ಬಗೆಗೆ ಬಸವಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ತನ್ನ ವಚನಾಂಕಿತದಲ್ಲಿ "ಬಸವಣ್ಣ ಪ್ರಿಯ" ಪದವನ್ನು ಬಳಸಿದ್ದಾನೆ. ಬಸವಣ್ಣನ ಬಗೆಗೆ ಅಪಾರ ಗೌರವ ಹೊಂದಿದ್ದ ಈ ದಂಪತಿಗಳು, ತಮ್ಮ ಕಾಯಕ, ದಾಸೋಹದ ಮೂಲಕ ನಿಷ್ಠೆಯಿಂದ ವಚನಚಳುವಳಿಯಲ್ಲಿ ತೊಡಗಿಸಿಕೊಂಡ ಶರಣರಾಗಿದ್ದಾರೆ.

ಬಸವಯ್ಯಗಳ ಪುಣ್ಯಸ್ತ್ರಿ ಕಾಳವ್ವೆಯ ಬಗೆಗೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಇಷ್ಟಲಿಂಗದಲ್ಲಿ ನಿಷ್ಠೆಯಿಟ್ಟಿದ್ದ ಕಾಳವ್ವೆ ಶರಣತತ್ವದಲ್ಲಿ ಬದುಕಿದ ಶರಣೆಯಾಗಿದ್ದಾಳೆ. ಈಕೆ ತುಂಬ ಸ್ವಾಭಿಮಾನಿ ಶರಣೆಯಾಗಿದ್ದಳೆಂಬುದು ತಿಳಿದುಬರುತ್ತದೆ. ಅನೇಕ ವಚನಕಾರ್ತಿಯರು ತಮ್ಮ ಪತಿಯ ಹೆಸರನ್ನು, ತಮ್ಮ ವಚನಾಂಕಿತವನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ ಕಾಳವ್ವೆ ಹಾಗೆ ಮಾಡಿಲ್ಲ. ಆಕೆ ಕಾಳಿಸಮೇತನಾದ ಶಿವನನ್ನು ತನ್ನ ವಚನಾಂಕಿತವನ್ನಾಗಿ ಮಾಡಿಕೊಂಡು "ಕರ್ಮಹರ ಕಾಳೇಶ್ವರ" ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾಳೆ. ಕರ್ಮವನ್ನು ಹರಿದ, ಕಾಲವನ್ನು ಮೀರಿದ ಕಾಳೇಶ್ವರಾ ಈಕೆಯ ವಚನಾಂಕಿತವಾಗಿದೆ.

ಬಡಿಗ, ಕಮ್ಮಾರ, ಕುಂಬಾರ, ಚಮ್ಮಾರ ಈ ಮೊದಲಾದವರೆಲ್ಲ ಒಕ್ಕಲಿಗನ ಆಯಗಾರರಾಗಿದ್ದಾರೆ. ಕೃಷಿ ಮಾಡಲು ರೈತನಿಗೆ ಇವರೆಲ್ಲರ ಸಹಕಾರವೂ ಬೇಕು. ಬಡಿಗವೃತ್ತಿಯನ್ನು ಮಾಡುವವರು ಸಾಮಾನ್ಯವಾಗಿ ವಿಶ್ವಕರ್ಮ ಸಮುದಾಯದವರಾಗಿರುತ್ತಾರೆ. ಇಲ್ಲಿ ಈ ದಂಪತಿಗಳು ವಿಶ್ವಕರ್ಮರು ಹಾಕುವ ಜನಿವಾರವನ್ನು ಕಿತ್ತೊಗೆದು ಇಷ್ಟಲಿಂಗಧರಿಸಿ ಶರಣರಾಗಿದ್ದಾರೆ. ಲಿಂಗಾಯತರಾಗಿದ್ದಾರೆ.

ಹೀಗೆ ಅನೇಕ ಆಯಗಾರರು ಶರಣರಾಗಿರುವುದು, ವಚನಗಳನ್ನು ರಚಿಸಿರುವುದು ಚಾರಿತ್ರಿಕವಾಗಿ ತುಂಬ ಮುಖ್ಯವಾಗಿದೆ. ಕಾಳವ್ವೆಯ ಎರಡು ವಚನಗಳು ಪ್ರಕಟವಾಗಿವೆ. ಈಕೆ ಕಾಯಕಕ್ಕೆ ಮತ್ತು ವ್ರತಕ್ಕೆ ತುಂಬ ಮಹತ್ವ ನೀಡಿದ್ದಾಳೆ. ಕಾಯಕ ತಪ್ಪಿದಡೆ ಸೈರಿಸಬಾರದೆಂದು ಸ್ಪಷ್ಟವಾಗಿ ಹೇಳಿದ್ದಾಳೆ. ವ್ರತವೆಂಬುದು ಇಲ್ಲಿ ನಿಷ್ಠೆಯಾಗಿದೆ. ಆ ನಿಷ್ಠೆ ಕಾಯಕಕ್ಕೆ ಸಂಬಂಧಿಸಿದ್ದಾಗಿದೆ. ಕಾಯಕ ನಿಷ್ಠೆಗೆ ಕಾಳವ್ವೆ ಬದ್ಧಳಾಗಿದ್ದಳೆಂಬುದು ಆಕೆಯ ವಚನಗಳಿಂದ ಸ್ಪಷ್ಟವಾಗುತ್ತದೆ.

"ಕೈತಪ್ಪಿ ಕೆತ್ತಲು ಕಾಲಿಗೆ ಮೂಲ,
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ, ವ್ರತಹೀನನ ನೆರೆಯಲು ನರಕಕ್ಕೆ ಮೂಲ ಕರ್ಮಹರ ಕಾಳೇಶ್ವರಾ"
- ಸ.ವ.ಸಂ.5, ವ-1091, 1993

ತನ್ನ ವೃತ್ತಿಪ್ರತಿಮೆಯ ಮೂಲಕ ಕಾಳವ್ವೆ ಈ ವಚನದಲ್ಲಿ ಮಹತ್ವದ ವಿಚಾರಗಳನ್ನು ತಿಳಿಸಿದ್ದಾಳೆ. ಬಡಿಗ ಕಾಯಕ ಮಾಡಬೇಕಾದರೆ, ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಕಬ್ಬಿಣದ ಉಳಿಯಿಂದ ಕಟ್ಟಿಗೆಯನ್ನು ಕೆತ್ತುವಾಗ ಸ್ವಲ್ಪ ಅಲಕ್ಷ್ಯವಹಿಸಿದರೂ ಅದು ಕಾಲಿಗೆ ಬಡಿಯುತ್ತದೆ. ಕಬ್ಬಿಣದ ಚೂಪಾದ ಉಳಿ ಕಾಲಿಗೆ ಬಡಿದರೆ, ಕಾಲೇ ಕತ್ತರಿಸುವ ಅಪಾಯವಿರುತ್ತದೆ. ಈ ಸಂಗತಿಯನ್ನು ಕಾಳವ್ವೆ ನಡೆ-ನುಡಿ ಸಿದ್ಧಾಂತಕ್ಕೆ ಹೋಲಿಸಿದ್ದಾಳೆ. ಮಾತು ತಪ್ಪಿ ನುಡಿದರೆ ಅದು ಉಳಿಗಿಂತಲೂ ಅಪಾಯಕಾರಿಯೆಂದು ಹೇಳಿರುವ ಕಾಳವ್ವೆ ವ್ರತಹೀನರ ಸಂಗ ಮಾಡಬಾರದೆಂದು ಸ್ಪಷ್ಟಪಡಿಸಿದ್ದಾಳೆ. ಹೀಗೆ ಒಂದರ ಮೂಲಕ ಮತ್ತೊಂದನ್ನು ಹೇಳುತ್ತ, ಲೌಕಿಕದ ಮೂಲಕವೇ ಶರಣರು ಅಲೌಕಿಕವನ್ನು ಕಂಡುಕೊಂಡಿದ್ದಾರೆ.

ಈ ಅಂಕಣದ ಹಿಂದಿನ ಬರೆಹಗಳು:
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಹೊಸ ರೂಪಕದ ಕವಿತೆಗಳು 

07-11-2024 ಬೆಂಗಳೂರು

"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...

ಗುರುಗಳ ಮಹಿಮೆ ಕಥೆಯಲ್ಲಿರುವ ತಾರ್ಕಿಕತೆ

06-11-2024 ಬೆಂಗಳೂರು

"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...

ಯಾರು ಅರಿಯದ ವೀರನ ತ್ಯಾಗ

31-10-2024 ಬೆಂಗಳೂರು

"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...