ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ...


"ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವುಳ್ಳ ಡಿ.ಎನ್.ಅಕ್ಕಿಯವರು `ಹಕ್ಕಿ ಹಾಂಗ’ ಹಾಗೂ `ಗೆರೆ ಏಕೆ ಕೊರೆದೆ’ ಎಂಬ ಅವಳಿ ಕವನ ಸಂಕಲನಗಳನ್ನು ಹನ್ನೆರಡು ವರ್ಷಗಳ ನಂತರ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ," ಎನ್ನುತ್ತಾರೆ ಮಹಾದೇವಯ್ಯ ಕರದಳ್ಳಿ. ಅವರು ಡಿ.ಎನ್.ಅಕ್ಕಿ ಅವರ `ಗೆರೆ ಏಕೆ ಕೊರದೆ’ ಮತ್ತು `ಹಕ್ಕಿ ಹಾಂಗಕವನಸಂಕಲನದ ಕುರಿತು ಬರೆದ ಅಭಿಪ್ರಾಯ.

ಡಿ.ಎನ್.ಅಕ್ಕಿಯವರು ನನಗೆ ನೇರವಾಗಿ ವ್ಯಕ್ತಿಗತವಾಗಿ ಪರಿಚಯವಿಲ್ಲ. ಅವರ ಕೃತಿಗಳಿಂದ ಅದರಲ್ಲೂ ಅವರಿಗೂ ನನಗೂ ಸಂಬಂಧದ ಸೇತುವೆಯಾಗಿರುವ ಮಿತ್ರರ ಬಳಗದಿಂದ ಅವರ ಬಗ್ಗೆ ಅರಿತಿದ್ದೇನೆ. ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವುಳ್ಳ ಡಿ.ಎನ್.ಅಕ್ಕಿಯವರು `ಹಕ್ಕಿ ಹಾಂಗ’ ಹಾಗೂ `ಗೆರೆ ಏಕೆ ಕೊರೆದೆ’ ಎಂಬ ಅವಳಿ ಕವನ ಸಂಕಲನಗಳನ್ನು ಹನ್ನೆರಡು ವರ್ಷಗಳ ನಂತರ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಜೇನುತುಪ್ಪದಂತೆ `ಹಕ್ಕಿಹಾಂಗ’
ಡಿ.ಎನ್.ಅಕ್ಕಿಯವರು ತಮ್ಮ ಸುದೀರ್ಘವಾದ ಹನ್ನೆರಡು ವರ್ಷಗಳ ಕಾಲಖಂಡದಲ್ಲಿ ಮಧುವಿನ ರೂಪದಲ್ಲಿ ಸಂಗ್ರಹಿಸಿದ್ದನ್ನು ಜೇನುತುಪ್ಪದಂತೆ `ಹಕ್ಕಿಹಾಂಗ’ (ಮಕ್ಕಳ ಕವಿತೆಗಳು) ಕವನ ಸಂಕಲನದ ಮೂಲಕ ಮಕ್ಕಳಿಗೆ ಧಾರೆಯೆರೆದಿದ್ದಾರೆ. `ಹಕ್ಕಿ ಹಾಂಗ’ ಕವನ ಸಂಕಲನಗಳಲ್ಲಿ 36 ಕವನಗಳಿವೆ. ಸುಂದರ ಆಕರ್ಷಕ ಮುಖಪುಟ, ಚಂದದ ಮುದ್ರಣಗಳನ್ನು ಮಾಡಿ ಕವನ ಸಂಕಲನವನ್ನು ನಾಡಿಗೆ ನೀಡಿದ `ಕವಿಕುಂಚ’ ಪ್ರಕಾಶನಕ್ಕೆ ಅಭಿನಂದನೆಗಳು. ಡಿ.ಎನ್.ಅಕ್ಕಿಯವರು ಹೆಸರಾಂತ ಚಿತ್ರಕಾರರು. ಕುಂಚ ಹಿಡಿದು ಚಿತ್ರ ರಚಿಸಿದ ಅಕ್ಕಿಯವರು ಈಗ ಅಕ್ಷರಗಳಿಂದ ಮನಮೋಹಕ ಕವಿತೆಗಳು ಅವುಗಳಿಗೆ ಸೂಕ್ತ ಚಿತ್ರಗಳನ್ನು ಜೋಡಿಸಿ ಕವನಸಂಕಲನದ ಮೆರಗು ಹೆಚ್ಚಿಸಿದ್ದಾರೆ.

ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ ಕಾರಣ ಅಕ್ಕಿಯವರ ಮತ್ತು ಹಕ್ಕಿ ನಡುವೆ ಅವಿನಾಭವ ಸಂಬಂಧ ಸೃಷ್ಟಿಯಾಗಿದೆ. ಹಕ್ಕಿಗಳಂತೆ ನಲಿವ ಮಕ್ಕಳಿಗೆ, ತಂತ್ರಜ್ಞಾನ ಯುಗದಲ್ಲಿ ಪ್ರಕೃತಿಯ ಸುಂದರ ಸಂಗತಿಗಳಿಂದ ದೂರವಾಗಿ ನಗರದಲ್ಲಿ ವಾಸಿಸುವ ಮಕ್ಕಳ ಮುಂದೆ ಪ್ರಕೃತಿ ಸಂಸ್ಕೃತಿ ವಿಚಾರಗಳನ್ನು ಕವನಗಳ ರೂಪದಲ್ಲಿ ಹರವಿದ್ದಾರೆ. ಕವನಗಳನ್ನು ಓದುತ್ತಿದ್ದಂತೆ ಮಕ್ಕಳಿಗೆ ತಮ್ಮ ಊರು, ಗ್ರಾಮೀಣ ಪರಿಸರ ಜೊತೆಗೆ ಅಜ್ಜ ಅಜ್ಜಿ ಸಹಜವಾಗಿ ನೆನಪಾಗುತ್ತದೆ. ಗ್ರಾಮೀಣ ಮಕ್ಕಳಿಗಂತೂ ಅಕ್ಕಿಯವರ ಹಾಡುಗಳು ಓದುತ್ತಿದ್ದಂತೆ ಹಕ್ಕಿಯಂತೆ ನೀಲಾಗಸ ದಲ್ಲಿ ತೇಲಾಡುವ ಅನುಭೂತಿ ಆಗುತ್ತದೆ. ಈಗ ಅಪರೂಪ ಎನ್ನಬಹುದಾದ ಪಾತರಗಿತ್ತಿ, ನವಿಲು, ಗಾಳಿಪಟ, ಕೋಳಿಮರಿ, ಕೋಗಿಲೆ, ಹಣತೆ, ಬಿಳಿಕೊಕ್ಕರೆ, ಚಂದಿರ ಮುಂತಾದವುಗಳನ್ನು ತಮ್ಮ ಕವನಗಳಲ್ಲಿ ಮಕ್ಕಳ ಮನ ತಟ್ಟುವಂತೆ ಪರಿಚಯಿಸಿದ್ದಾರೆ. ಒಟ್ಟಿನಲ್ಲಿ ಮಕ್ಕಳಿಗೆ ದೇಶ, ಭಾಷೆ, ಸಂಸ್ಕೃತಿಯ ಪರಿಚಯಿಸುವ ಸಾಧನಗಳನ್ನಾಗಿ ಕವಿತೆಗಳನ್ನು ರಚಿಸಿ, ಅವುಗಳಲ್ಲಿ ತಮ್ಮ ಜೀವನದ ಅನುಭವಾಮೃತವನ್ನು ಸೇರಿಸಿದ್ದರಿಂದ ಕವನಗಳಿಗೆ ಮೌಲ್ಯವರ್ಧನೆ ಮಾಡಿದಂತಾಗಿದೆ. ಹೊಸಯುಗದ ಕವಿಗಳಿಗೆ ಪ್ರೇರಣೆ, ಮಾರ್ಗದರ್ಶಿ ಯಾಗುವಂತಿವೆ.

ಜವಾಬ್ದಾರಿಯುತ ಕವಿತೆಗಳು
`ಗೆರೆ ಏಕೆ ಕೊರೆದೆ’ ಎಂಬ ಕವನ ಸಂಕಲನದಲ್ಲಿ ಡಿ.ಎನ್.ಅಕ್ಕಿಯವರು ರಚಿಸಿರುವ 51 ಕವನಗಳಿವೆ. ಕವನಗಳಲ್ಲಿ ತಮ್ಮ ಮನದಾಳದ ಮಾತುಗಳನ್ನು ಸ್ಪಷ್ಟಪಡಿಸಿದ್ದಾರೆ. ಅವುಗಳಲ್ಲಿ ಪೂಜ್ಯಸಿದ್ದೇಶ್ವರ ಸ್ವಾಮಿಗಳ, ಭಗವಾನ ಮಹಾವೀರರಿಗೆ ಸಮರ್ಪಿತ ಕವನಗಳಿವೆ. ಮತ್ತು ಅವರ ಸಮಕಾಲಿನ ಸಾಹಿತಿಗಳ, ಹಿರಿಯರ ಅಭಿನಂದನಾ ಕವನಗಳಿವೆ. ಮೇಲಾಗಿ ನಾಡಿನ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಐದಾರು ದಶಕಗಳಲ್ಲಿ ಸಾಮಾಜಿಕ ನೈತಿಕ ಮತ್ತು ಮಾನವೀಯ ಮೌಲ್ಯಗಳ ಕುಸಿತ (ಸಾಕ್ಷಿಬೇಕೆ?) ವನ್ನು ಹಂತ ಹಂತವಾಗಿ ಗುರುತಿಸಿದ್ದಾರೆ. ಸ್ವಾತಂತ್ಯ್ರ ಹೋರಾಟ ( ಹೀಗೆ ಬಂತು ಬಿಡುಗಡೆ) ಸ್ಮರಿಸಿದ್ದಾರೆ.


`ಗೆರೆ ಏಕೆ ಕೊರೆದೆ’ ಎಂಬ ಕವನದಲ್ಲಿ ಲಕ್ಷ್ಮಣ ಸೀತಾಮಾತೆಯ ರಕ್ಷಣೆಗಾಗಿ ಕೊರೆದ ಗೆರೆಯಲ್ಲಿ ಸ್ತ್ರೀ ಕುಲದ ರಕ್ಷಣೆ ಚಿಂತನೆಯಿದೆ. ಮುಗ್ಧ ಮಹಿಳೆಯು ಗೋಮುಖ ವ್ಯಾಘ್ರದಂತಿರುವ ರಾವಣನಂತಹ ವ್ಯಕ್ತಿತ್ವದವರ ರಾಕ್ಷಸಿ ಪ್ರವೃತ್ತಿ ಅರಿಯದೇ ಗೆರೆ ದಾಟಿದ್ದರಿಂದ ಅನುಭವಿಸಿದ ಯಾತನೆ ಇಂದಿಗೂ ಮುಂದುವರೆದಿದೆ ಎಂಬ ಕಳಕಳಿ ಇದೆ. ಸಮಾಜದಲ್ಲಿ ಹಿಂಸೆ, ಮೋಸ, ಶೋಷಣೆ ( ಕಲ್ಯಾಣದ ಹಣತೆ), ಆತ್ಮವಿಸ್ಮೃತಿ, ಸಾಂಸ್ಕೃತಿಕ ಭಯೋತ್ಪಾದನೆ, ಹಗಲು ದರೋಡೆ, ಮಧ್ಯವರ್ತಿಗಳ ನಯವಂಚಕತನ, ಅಧಿಕಾರಿಗಳ ಕುತಂತ್ರ, (ಸಂಭವಾಮಿ ಯುಗೇ ಯುಗೇ)ಯಿಂದ ಅಸಹಾಯಕರಾಗಿ ಬಳಲುವ ಅಸಹಾಯಕ (ಆರ್ತನಾದ) ಜನತೆ, ಉಚಿತ ಕೊಡುಗೆಗಳಿಗೆ ಮುಗ್ಧಜನತೆಯನ್ನು ಮರಳು ಮಾಡಿ ಅಧಿಕಾರ ಹಿಡಿವ ಹುನ್ನಾರ, ನೌಕರಿ ಎಂಬ ಮರೀಚಿಗೆ ಮಾರುಹೋಗಿ ಸೋಮಾರಿಗಳಾದ ಯುವ ಜನತೆಗೆ ಸ್ವಉದ್ಯೋಗ ಸ್ವಾವಲಂಬಿತನದ ಸ್ವಾಭಿಮಾನದಿಂದ ಮೆರೆಯಬೇಕು (ಸಂಜೆ ಸೊಬಗು) ಎಂಬ ಜಾಗೃತಿ ಸಂದೇಶ ನೀಡಿದ್ದಾರೆ. `ನ ಜಾಗೃತೋ ಭಯಂ’ ಎಂಬ ಮಾತು `ಜವನಿಕೆ’ ಕವನದ `ಎಚ್ಚರದಲಿ ಅಡಿಯಿಟ್ಟರೆ ಬದುಕೆಲ್ಲವೂ ಮಧುರ’ ಎಂಬ ಸಾಲುಗಳಲ್ಲಿದೆ. ಹಾಲಿನಿಂದ ತುಪ್ಪ, ಭತ್ತದಿಂದ ಅಕ್ಕಿ ಪಡೆವಂತೆ ಪ್ರಕೃತಿಯಿಂದ ಸಂಸ್ಕೃತಿ ಸಾಧಿಸಬೇಕು ಎಂಬ ಡಿ.ಎನ್. ಅಕ್ಕಿಯವರ ಆಶಯ ಕವನಗಳಲ್ಲಿ ಸ್ಪುಟವಾಗಿ ವ್ಯಕ್ತವಾಗಿದೆ. ಆಶಯಕ್ಕೆ ತಕ್ಕಂತೆ ಅನುಭಾವ ಸೇರಿದ್ದರಿಂದ ಅಮೃತವಾಗಿದೆ.

MORE FEATURES

ಅಪರೂಪದ ಕವಿ-ವಾಗ್ಮಿ ನಮ್ಮ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ವಲಯದ ಗುಂಪುಗಾರಿಕೆಯಿಂದ ಬಲುದೂರ ಉಳಿದಿರುವ ಸಿದ್ಧಲಿಂಗಯ್ಯನವರದು ಬಹುತೇಕ ಒಂಟಿ ಪಯಣವೇ. ಇವರಿಗೆ ಆಪ್ತರ...

ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ!

07-05-2025 ಬೆಂಗಳೂರು

"ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತ...

ಈ ಕತೆಗಳು ಬದುಕಿನ ವಿವಿಧ ಮುಖವಾಡಗಳನ್ನು ಬಯಲಿಗೆಳೆಯುತ್ತವೆ

07-05-2025 ಬೆಂಗಳೂರು

"ಆಹುತಿ ಕತೆಯಲ್ಲಿ ಹೆಣ್ಣಿನ ಶೋಷಣೆಯ ಚಿತ್ರಣವಿದೆ. ಶೀನಪ್ಪ ಮೇಷ್ಟರ ಮುಖವಾಡದ ಕತೆಯಿದೆ. ಹೊರಗಣ ಸಮಾಜಕ್ಕೆ ಸಂಭಾವಿ...