Date: 05-01-2025
Location: ಬೆಂಗಳೂರು
ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಡಾ.ನಾ ಡಿಸೋಜ ಅವರು ಇಂದು(ಜ. 05) ವಯೋಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.
ಅವರು ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತ ಸಾಹಿತಿ ನಾ. ಡಿಸೋಜ ಅವರ ಪಾರ್ಥೀವ ಶರೀರವನ್ನು ಸಾಗರಕ್ಕೆ ತರಲಾಗುತ್ತಿದ್ದು, ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನವರಿ 7ರಂದು ಸಾಗರದಲ್ಲಿ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.
ನಾ. ಡಿಸೋಜ ಅವರ ಪರಿಚಯ: ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದ್ದರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿದ್ದ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.
ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯಗೊಂಡಿವೆ. ನಾ. ಡಿಸೋಜ ಅವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿ ತೆರೆಮೇಲೆಯೂ ಮೂಡಿನಿಂತು ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ.
ಅಜ್ಞಾತ, ಒಂದು ಜಲಪಾತದ ಸುತ್ತ , ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ?, ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡತೆ ಮಕ್ಕಳ ಸಾಹಿತ್ಯವನ್ನೂ, ರೇಡಿಯೋ ನಾಟಕಗಳನ್ನೂ ನಾ.ಡಿಸೋಜ ಅವರು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನವದೆಹಲಿ ಕಳಾ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.
ನಾ. ಡಿಸೋಜಾ ಅವರ ಕೃತಿಗಳ ಕುರಿತು ಮಾಹಿತಿಯನ್ನು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..
ವಿಜಯ್ ರಾಘವೇಂದ್ರ ತಮ್ಮ 20 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ...
ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ...
ಮುಂಬಯಿ: ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದಿಂದ ಕೊಡಮಾಡುವ 2023-24ನೇ ಸಾಲಿನ ...
©2025 Book Brahma Private Limited.