ಕೆಂಡದ ನೆರಳು: ದೇವದಾಸಿಯರ ಅಂತರಂಗ ಅನಾವರಣ


ವಸಾಹತುಶಾಹಿ, ರಾಜಶಾಹಿ ಪಾಳೇಗಾರರ ಅವಸಾನ, ಸ್ವಾತಂತ್ಯ್ರ ಹೋರಾಟ, ಅಸ್ಪೃಶ್ಯತಾ ನಿವಾರಣೆ, ಧಾರ್ಮಿಕ ಆಚರಣೆ, ಸಾಮಾಜಿಕ ವಾಸ್ತವತೆಗಳ ಮಹಾಸಂಘಟನೆ ‘ಕೆಂಡೆದ ನೆರಳು’. ಲಚಮವ್ವ ಮತ್ತು ಅಬ್ದುಲ್ ಸಾಹೇಬ ಹೊತ್ತಿಸುವ ಕ್ರಾಂತಿಯ ಕಿಡಿಗಳು ಇವೆಲ್ಲದರ ಪರಿಣಾಮವಾಗಿ ಸ್ಥಿತ್ಯಂತರಕ್ಕೆ ಚಾಚಿಕೊಳ್ಳುವ ಬದುಕಿನ ಬೇರೆ ಬೇರೆ ಮುಖಗಳನ್ನು ಪ್ರಭಾವಶಾಲಿಯಾಗಿ ಈ ಕಾದಂಬರಿ ಅನಾವರಣಗೊಳಿಸುತ್ತದೆ ಎಂಬುದು ಲೇಖಕ, ವಿಮರ್ಶಕ ಸಿ. ಎಸ್. ಭೀಮರಾಯ ಅವರ ಮಾತು. ಅವರು ಲೇಖಕ ವೈ. ಎಸ್. ಹರಗಿ ಅವರ ಕೆಂಡದ ನೆರಳು ಕೃತಿಯ ಬಗ್ಗೆ ಬರೆದ ವಿಮರ್ಶೆ ಇಲ್ಲಿದೆ...

ಕೃತಿ: ಕೆಂಡದ ನೆರಳು
ಲೇಖಕ: ವೈ. ಎಸ್. ಹರಗಿ
ಪುಟ:339
ಬೆಲೆ: 350
ಪ್ರಕಾಶನ: ಶ್ರೀ ಗಂಗಾ ಪ್ರಕಾಶನ, ಸಿರಸಿ

ವೈ. ಎಸ್. ಹರಗಿ ಹೊಸ ತಲೆಮಾರಿನ ಪ್ರಮುಖ ಕವಿ, ಕಥೆಗಾರ ಮತ್ತು ಕಾದಂಬರಿಕಾರರು. ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನ ಲಯಗಳನ್ನು ಸೂಕ್ಷö್ಮವಾಗಿ ಹಿಡಿದು ಅವುಗಳಿಂದ ತಮ್ಮ ಕಥೆ, ಕಾವ್ಯ ಮತ್ತು ಕಾದಂಬರಿಗಳನ್ನು ರೂಪಿಸಿರುವ ವೈ. ಎಸ್. ಹರಗಿ ನಾಡಿನ ಓದುಗರ ಮತ್ತು ವಿಮರ್ಶಕರ ಗಮನ ಸೆಳೆದಿದ್ದಾರೆ.

ಪ್ರಸ್ತುತ ‘ಕೆಂಡದ ನೆರಳು’ ವೈ. ಎಸ್. ಹರಗಿಯವರ ನಾಲ್ಕನೆಯ ಕಾದಂಬರಿ. ಇದು ಇಪ್ಪತ್ತೆರಡು ಅಧ್ಯಾಯಗಳನ್ನು ಒಳಗೊಂಡಿದೆ. ಮನುಷ್ಯರನ್ನು ತಲ್ಲಣಗೊಳಿಸುವ ಹಸಿವು ಮತ್ತು ಕಾಮಗಳ ಚಿತ್ರಣ ಈ ಕಾದಂಬರಿಯ ಮೂಲ ದ್ರವ್ಯ. ಈ ಎರಡು ಬೆಂಕಿಯಂತಹ ಸಮಸ್ಯೆಗಳಿಗಾಗಿ ದಲಿತರು ಹೇಗೆ ಶೋಷಿತರಾಗುತ್ತಾರೆಂಬುದನ್ನು ಹಸಿ ಹಸಿಯಾಗಿಯೇ ಈ ಕಾದಂಬಯಲ್ಲಿ ವೈ. ಎಸ್. ಹರಗಿ ಚಿತ್ರಿಸಿದ್ದಾರೆ. ಈ ಕಾದಂಬರಿಯ ಬೀಸು ಮತ್ತು ವ್ಯಾಪ್ತಿ ದೊಡ್ಡದು. ಇದರ ಕಥೆಯನ್ನು ಸಂಗ್ರಹಿಸುವುದು ತುಸು ಕಷ್ಟ. ಏಕೆಂದರೆ, ಸಣ್ಣವೆಂದು ಕಾಣಬಹುದಾದ ಘಟನೆಗಳೇ ವಸ್ತುವಿನ ನಿರೂಪಣೆ, ಕಥೆಯ ಓಟ ಎರಡನ್ನೂ ನಿರ್ಧರಿಸುತ್ತವೆ. ಸ್ವಾತಂತ್ಯ್ರಪೂರ್ವದ ಕಾಲಘಟ್ಟದಲ್ಲಿ ಸಮಾಜದಲ್ಲಿ ಸೃಷ್ಟಿಯಾದ ವಿವಿಧ ಬಗೆಯ ತವಕ ಮತ್ತು ತಲ್ಲಣಗಳನ್ನು ಅದು ಉತ್ತರ ಕರ್ನಾಟಕದ ಪ್ರಾಂತ್ಯವನ್ನು ಕೇಂದ್ರವಾಗಿರಿಸಿಕೊಂಡು ಪರೀಕ್ಷೆ ನಡೆಸುತ್ತದೆ. ಕಾದಂಬರಿ ಬಸವಿಪುರ ಮತ್ತು ಹನುಮಾಪುರ ಎಂಬ ಅವಳಿ ಗ್ರಾಮಗಳ ಕಥೆಯನ್ನು ಹೇಳುತ್ತಿದ್ದರೂ ಆ ಕಾಲಘಟ್ಟದ ಗ್ರಾಮೀಣ ಭಾರತದ ವಸ್ತುಸ್ಥಿತಿಯನ್ನು ಯಥಾವತ್ತಾಗಿ ತೆರೆದಿಡುತ್ತದೆ; ಹೊಸ ಬದಲಾವಣೆ, ಹೊಸ ವಿಚಾರ, ಹೊಸ ಬದುಕನ್ನು ಪ್ರೀತಿಸುವ; ಶೋಷಣೆ, ಹಿಂಸೆ ಮತ್ತು ಕ್ರೌರ್ಯಗಳನ್ನು ಪ್ರತಿಭಟಿಸುವ ದೃಶ್ಯಗಳನ್ನು ಹೊತ್ತು ನಿಂತಿದೆ. ವೈ. ಎಸ್. ಹರಗಿಯವರು ಕಥೆಯನ್ನು ಬೆಳೆಸುವ ಪರಿ ವಿಶಿಷ್ಟವಾದದ್ದು. ಅದು ಅಧ್ಯಾಯದಿಂದ ಅಧ್ಯಾಯಕ್ಕೆ ಹೊಸ ಹೊಸ ಆಯಾಮಗಳನ್ನು ಪಡೆಯುತ್ತ ಕುತೂಹಲವನ್ನು ಉಳಿಸಿಕೊಂಡು ಹೋಗುತ್ತದೆ. ಬ್ರಿಟಿಷ್ ಸರ್ಕಾರದ ಆಡಳಿತ, ಸ್ವಾತಂತ್ತ್ಯ್ರಹೋರಾಟ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ ನಿರ್ಮೂಲನೆ, ದೇವಾಲಯ ಪ್ರವೇಶಗಳನ್ನು ಕಾದಂಬರಿ ತನ್ನ ತೆಕ್ಕೆಗೆ ತಂದುಕೊಂಡಿದೆ. ಕಥೆಯ ಕಾಲ ಇಪ್ಪತ್ತನೆಯ ಶತಮಾನದ ಆರಂಭಿಕ ದಶಕಗಳು; ಮೂರು ತಲೆಮಾರುಗಳ ಬದುಕಿನ ಸುದೀರ್ಘ ಚಿತ್ರಣವಿದೆ. ಕಾದಂಬರಿ ಬುದ್ಧ, ಗಾಂಧಿ, ಅಂಬೇಡ್ಕರ್, ತಿಲಕ್, ಇಂಗಳೆ- ಮುಂತಾದವರ ಸಮಾಜ ಸುಧಾರಣಾ ಸಂಗತಿಗಳನ್ನು ಚಿತ್ರಿಸುತ್ತ ಮುಖ್ಯ ಆಶಯದ ಸಮರ್ಥನೆಗೆ ಬಳಸಿಕೊಳ್ಳುವ ಸಾಮಾಜಿಕ ಮತ್ತು ವೈಚಾರಿಕ ನೆಲೆಗಟ್ಟಿನತ್ತ ಹೆಜ್ಜೆ ಇಡುತ್ತದೆ. ಬುದ್ಧ, ಗಾಂಧಿ, ಅಂಬೇಡ್ಕರ್, ಫುಲೆ ಅವರ ವಿಚಾರಗಳು ದಲಿತರ ವೈಯಕ್ತಿಕ ಬದುಕಿನಲ್ಲಿ ಮೂಡಿಸಿದ ಹೊಸ ಭರವಸೆ, ಆತ್ಮವಿಶ್ವಾಸಗಳ ಸ್ವರೂಪವನ್ನು ಓದುಗರ ಮುಂದೆ ತೆರೆದಿಡುತ್ತದೆ. ಈ ಕಾದಂಬರಿಯಲ್ಲಿ ಬರುವ ಕೆಲವು ಸನ್ನಿವೇಶಗಳು ಉತ್ತರ ಕರ್ನಾಟಕದ ಜೀವನದ ಅನುಭವವಿಲ್ಲದವರಿಗೆ ಕೇವಲ ಊಹೆಯಂತೆ ಕಾಣಬಹುದು; ಕೆಲವೊಮ್ಮೆ ನಂಬಲಸಾಧ್ಯವಾಗಬಹುದು. ಆದರೆ, ಅಲ್ಲಿ ಬರುವ ಸನ್ನಿವೇಶಗಳೆಲ್ಲವೂ ನಾನು ಕಂಡ ನಿತ್ಯದ ಉತ್ತರ ಕರ್ನಾಟಕದ ನಿಜ ಜೀವನ.

ವಸಾಹತುಶಾಹಿ, ರಾಜಶಾಹಿ ಪಾಳೇಗಾರರ ಅವಸಾನ, ಸ್ವಾತಂತ್ಯ್ರ ಹೋರಾಟ, ಅಸ್ಪೃಶ್ಯತಾ ನಿವಾರಣೆ, ಧಾರ್ಮಿಕ ಆಚರಣೆ, ಸಾಮಾಜಿಕ ವಾಸ್ತವತೆಗಳ ಮಹಾಸಂಘಟನೆ ‘ಕೆಂಡೆದ ನೆರಳು’. ಲಚಮವ್ವ ಮತ್ತು ಅಬ್ದುಲ್ ಸಾಹೇಬ ಹೊತ್ತಿಸುವ ಕ್ರಾಂತಿಯ ಕಿಡಿಗಳು ಇವೆಲ್ಲದರ ಪರಿಣಾಮವಾಗಿ ಸ್ಥಿತ್ಯಂತರಕ್ಕೆ ಚಾಚಿಕೊಳ್ಳುವ ಬದುಕಿನ ಬೇರೆ ಬೇರೆ ಮುಖಗಳನ್ನು ಪ್ರಭಾವಶಾಲಿಯಾಗಿ ಈ ಕಾದಂಬರಿ ಅನಾವರಣಗೊಳಿಸುತ್ತದೆ. ಹರಗಿಯವರು ತಮಗೆ ಸಿದ್ಧವಾಗಿರುವ ವ್ಯಂಗ್ಯ, ವಿಡಂಬನೆ ಮತ್ತು ಲೇವಡಿಗಳಲ್ಲಿ ರಂಜಿಸುತ್ತಲೇ ಐತಿಹಾಸಿಕ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ದಾಖಲಿಸಲು ದೇಸಿ ಕಥಾನಕ ಮಾರ್ಗ ಹಿಡಿದಿರುವುದು ಅವರ ಬರವಣಿಗೆಯ ಹೊಸ ಧಾಟಿಯಾಗಿದೆ. ಧರ್ಮ, ಸಂಸ್ಕೃತಿ, ರಾಜಕೀಯ, ಸಮಾಜ, ವ್ಯಕ್ತಿ ಈ ಸಂಬಂಧಗಳ ತೊಡಕು-ತೊಳಲಾಟ, ವ್ಯಕ್ತಿಗತ ಸ್ವಾತಂತ್ಯ್ರದ ಅಭೀಷ್ಟಗಳ ರಿಂಗನಗುಣಿತದಲ್ಲೂ ಹರಗಿಯವರ ಮೂಲ ಕಾಳಜಿ ವ್ಯಕ್ತಿಯ ಅಸ್ತಿತ್ವ ಮತ್ತು ಅಸ್ಮಿತೆಗಳೇ ಆಗಿವೆ.

ಅಸ್ಪೃಶ್ಯತೆ ಶತ ಶತಮಾನಗಳಿಂದ ಈ ನೆಲಕ್ಕೆ ಅಂಟಿಕೊಂಡ ಬಂದ ವ್ಯವಸ್ಥೆ. ದಲಿತರ ಜೀವನವನ್ನು ನಿಯಂತ್ರಿಸುವ ಶಕ್ತಿಗಳು ಎಂಥವು ಎಂಬ ಪ್ರಶ್ನೆಯಲ್ಲಿ ಕೇಂದ್ರೀಕೃತಗೊಂಡು ಸಮಾಜದ ದುಷ್ಟ ಶಕ್ತಿಗಳತ್ತ ಕಾದಂಬರಿಯ ಮನಸ್ಸು ಹರಿದಾಡುತ್ತದೆ. ಕುಲಕಸುಬನ್ನು ಬಿಟ್ಟು ಬೇರೊಂದು ಉದ್ಯೋಗಕ್ಕೆ ತೊಡಗುವ ತಳಸಮುದಾಯದ ಹೆಣ್ಣಿನ ಪ್ರಯತ್ನದ ಬಗೆಗಿನ ಕುತೂಹಲ, ಆಶ್ಚರ್ಯ, ಅಸಹಕಾರ, ಪ್ರತಿಭಟನೆ, ವ್ಯಂಗ್ಯ ಮತ್ತು ವಿಡಂಬನೆಗಳೇ ಕಾದಂಬರಿಯ ಕ್ರಿಯಾಶೀಲತೆಗೆ ಕಾರಣವಾಗಿವೆ. ಪಾರಂಪರಿಕ ಹಾದಿಯನ್ನು ಬಿಟ್ಟು ಬೇರೊಂದು ಉದ್ಯೋಗಕ್ಕೆ ಹಾತೊರೆಯುವ ಲಚಮವ್ವಳ ಉತ್ಸಾಹವೇ ಕಾದಂಬರಿಯ ಉಸಿರು. ಹೊಸ ಬದುಕಿನ ಶೋಧನೆಯಲ್ಲಿ ಧುಮುಕುವ ಲಚಮವ್ವಳ ಸಂಚಲನ ಕುಲಕರ್ಣಿ, ದೇಸಾಯಿಯಂಥವರ ತಳಮಳಕ್ಕೆ ಕಾರಣವಾಗುತ್ತದೆ. ಶಿಕ್ಷಣ ಪಡೆಯುವ ಲಚಮವ್ವಳ ಆಲೋಚನೆ, ಅಂತರ್‌ಜಾತಿ ವಿವಾಹ, ದೇವಾಲಯ ಪ್ರವೇಶಗಳ ಚರ್ಚೆ ಈ ಬಗೆಗಿನ ವಾದ-ವಿವಾದ ಅದನ್ನು ಎದುರಿಸುವ ಆಕೆಯ ದಿಟ್ಟತನ ಇವೆಲ್ಲವುಗಳನ್ನು ಕಾದಂಬರಿ ಮನಮುಟ್ಟುವಂತೆ ನಿರೂಪಿಸುತ್ತದೆ. ಆ ಮೂಲಕ ಮಹಿಳಾ ಸಬಲೀಕರಣವನ್ನು ಸಮರ್ಥಿಸುವ ಏರ್ಪಾಟುಗಳನ್ನು ಮಾಡುತ್ತದೆ.

‘ಕೆಂಡದ ನೆರಳು’ ಕಾದಂಬರಿ  ದಲಿತರ ಭೂತ, ವರ್ತಮಾನ ಮತ್ತು ಭವಿಷ್ಯತ್‌ಗಳನ್ನು ಏಕಕಾಲಕ್ಕೆ ಚಿತ್ರಿಸಲು ಸಾಧ್ಯವಾಗಿದೆ. ದಲಿತ ಮಹಿಳೆಯರು ಯಲ್ಲಮ್ಮ, ಮರೆಮ್ಮ, ದುರಗಮ್ಮ, ಹುಲಿಗೆಮ್ಮರ ಹೆಸರಿನಲ್ಲಿ ಬೆತ್ತಲಾಗಿದ್ದಾರೆ. ಈ ಕಾದಂಬರಿ ಕಾಮ-ಪ್ರೇಮ, ಹಸಿವು-ಹಾದರಗಳಾಚೆಯೂ  ಮಾತನಾಡುತ್ತದೆ. ಜಮೀನ್ದಾರರ ದರ್ಪ, ದವಲತ್ತು, ಕ್ರೌರ್ಯ, ದುರಹಂಕಾರ, ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆಗಳಿಗೆ ತಳಸಮುದಾಯದ ಜನರು ಆಹುತಿಯಾಗುವ-ಪ್ರತಿಭಟಿಸುವ ಕಥೆ ಇಲ್ಲಿದೆ. ದಲಿತ ಜಗತ್ತಿಗೆ ಮೊದಲಿನಿಂದಲೂ ಮೇಲ್ಜಾತಿ ಜನರ ಲೈಂಗಿಕ ಶೋಷಣೆ ತಪ್ಪಿಲ್ಲ. ದಲಿತ ಮಹಿಳೆಯರು ದೇವದಾಸಿ, ನೃತ್ಯಗಾತಿ, ಅಂತಃಪುರ ಸೇವಕಿಯ ಸ್ವರೂಪದಲ್ಲಿ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ; ಗೆದ್ದ ರಾಜನಿಗೆ ಉಡುಗೊರೆಯಾಗಿ, ಕದಿಯಲು ಬಂದಾಗ ವಸ್ತುವಾಗಿ, ಪಂದ್ಯಾಟಕ್ಕೆ ಹಣದ ಮೊತ್ತವಾಗಿ ಉಪಯೋಗಿಸಿದ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇದು ದಲಿತ ಸಾಹಿತ್ಯಕ್ಕೆ ಆರಂಭದಿಂದಲೂ ಗೊತ್ತಿದೆ. ವಯಸ್ಸು-ವಯ್ಯಾರ, ಹಸಿವು-ಅನಿವಾರ್ಯತೆಗಳು ಹೆಣ್ಣಿಗೆ ಮೈ ಮಾರಲು ಹಚ್ಚಿರಬಹುದು. ಆದರೆ ಇದು ಮುಗಿದ ಮೇಲೆ ಆರಂಭಗೊಳ್ಳುವ ಆತಂಕ ಮತ್ತು ಅವಘಡಗಳಿಗೆ ಖುಷಿಪಟ್ಟ ಯಾವ ಪುರುಷನೂ ಉತ್ತರಿಸಲಾರನು. ಮರಳಿ ಅನುಭವಿಸುವ ಕಷ್ಟ-ನಷ್ಟ, ರೋಗ-ರುಜಿನ, ನಿಂದೆ-ನಿರಾಸೆಗಳಿಗೆಲ್ಲ ಮಹಿಳೆಯ ಸೆರಗಿಗೆ ಸಮಾಜ ಗಂಟುಹಾಕಿದೆ. ಅವಳ ಹೆಣ್ತನ, ತಾಯ್ತನ ಮತ್ತು ಮುದಿತನಗಳೆಲ್ಲ ನೋವಿನ ಹಂತಗಳೇ ಆಗಿವೆ. ಇವುಗಳ ನಡುವೆ ಮಜಾ ಮಾಡಿದ್ದು ಮಾತ್ರ ‘ಪುರುಷ’. ಭಯದ ಕಾರಣಕ್ಕೆ ಹುಟ್ಟಿದ ದೇವರು, ದೇವರ ಕಾರಣಕ್ಕೆ ಕಟ್ಟಿದ ದೇವಾಲಯ, ದೇವಾಲಯದೊಳಗೆ ಬಂದ ಧರ್ಮ, ಧರ್ಮದ ಹೆಸರಿನಲ್ಲಿ ಹುಟ್ಟಿಕೊಂಡ ಆಚರಣೆಗಳು ಈ ದೇಶದಲ್ಲಿ ಅನೇಕ ಅವಘಡಗಳನ್ನೇ ಸೃಷ್ಟಿಸಿವೆ. ದೇವರು ಖಾಸಗೀಕರಣಗೊಂಡು, ಧರ್ಮ ಕೇಂದ್ರೀಕರಣಗೊಂಡಾಗಲೇ ಹಲವು ಅವಘಡಗಳು ಆರಂಭವಾಗಿವೆ. ಜನಪದರ ದೇವರು, ಧರ್ಮ ಮತ್ತು ದೇವಾಲಯಗಳಲ್ಲಿ ಖಾಸಗಿತನವೇ ಇಲ್ಲ. ಅಲ್ಲಿ ಎಲ್ಲವೂ ಬಹಿರಂಗ, ಸಾರ್ವಜನಿಕ ಮತ್ತು ಸಾರ್ವತ್ರಿಕ. ಆದರೆ ಬರುಬರುತ್ತಾ ಶುರುವಾದ ಪುರೋಹಿತರ ಅಝಂಡಾಗಳು, ರಾಜರ ಕೂಪಮಂಡೂಕ ಬುದ್ಧಿವಂತರು ದೇವರನ್ನೇ ದಾರಿ ತಪ್ಪಿಸಿದ್ದು ವಿಚಿತ್ರ ಸಂಗತಿ. ಆಗ ಧರ್ಮ ಮತ್ತು ದೇವಾಲಯಗಳು ನೈಜ ನೆಲೆಯಿಂದ ಪಲ್ಲಟಗೊಂಡವು. ಅಂಥ ಸಂದರ್ಭವನ್ನು ಬಹು ಸೂಕ್ಷ್ಮವಾಗಿ ಗಮನಿಸಿರುವ ವೈ. ಎಸ್. ಹರಗಿಯವರು ಈ ಕಾದಂಬರಿಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದು ಕಂಡುಬರುತ್ತದೆ.

ಪ್ರಾಚೀನ ಕಾಲದಿಂದಲೂ ದೇವರು, ಧರ್ಮ ಮತ್ತು ದೇವಾಲಯಗಳ ನೆಪದಲ್ಲಿ ಹುಟ್ಟಿಕೊಂಡಿರುವ ಈ ‘ಸೂಳೆತನ’ದ ಕುರಿತು ಲೇಖಕರಿಗೆ  ಅಸಹನೆಯಿದೆ. ಸೂಳೆತನಕ್ಕೆ ‘ದೇವದಾಸಿ’ ಎಂಬ ಗೌರವ ಸೂಚಕ ಪದ ಬೇರೆ. ಪುರೋಹಿತಶಾಹಿ ಮತ್ತು ರಾಜಶಾಹಿಗಳು ತಮ್ಮ ತೀಟೆಗಾಗಿ ಬಳಸಿಕೊಂಡ ಹೆಣ್ಣುಗಳು ಅಂದು ಅಸಂಖ್ಯೆ. ದೇವರು ಮತ್ತು ಧರ್ಮಗಳ ಕಾರಣಕ್ಕೆ ಅಸಹಾಯಕ ದಲಿತ ಹೆಣ್ಣನ್ನು ‘ದೇವದಾಸಿ’ಯನ್ನಾಗಿ ಮಾಡಲಾಗಿದೆ. ಮುಗ್ಧ ಹೆಣ್ಣನ್ನು ದೇವರ ಹೆಸರಿನಲ್ಲಿ ‘ದಾಸಿ’ಯಾಗಿಸುವ, ‘ದಾಸಿ’ಯಾದ ಹೆಣ್ಣನ್ನು ತಮ್ಮ ಸುಖಕ್ಕೆ ‘ಸೂಳೆ’ಯಾಗಿಸುವ ವಿಕೃತ ಜಗತ್ತು ಉಗಮಗೊಂಡಿದ್ದೇ ಈ ದೇವರಗುಡಿಯಲ್ಲಿ ಎಂಬ ವಿಷಯವನ್ನು ಲೇಖಕರು ಬಹಿರಂಗಪಡಿಸುತ್ತಾರೆ. ದೇವರು, ಧರ್ಮ ಮತ್ತು ದೇವಾಲಯಗಳು ಪವಿತ್ರವೆಂದು ಹೇಳುತ್ತಲೇ, ಅದರೊಳಗೆ ಗೆಜ್ಜೆಯ-ಹೆಜ್ಜೆಯನ್ನು ಕುಣಿಸಿದವರು; ಕಲ್ಲುಗೊಂಬೆಯ ಜೊತೆ ಕಲ್ಯಾಣ ಮಾಡಿದವರು, ನಿತ್ಯ ಸುಮಂಗಲಿ, ರತಿರಂಭೆ, ರೇಣುಕಾ, ಯಲ್ಲಮ್ಮ ಎಂದೆಲ್ಲ ಹೊಗಳಿದವರಿದ್ದಾರೆ. ಈ ರೀತಿ ಹೊಗಳಿದವರು ಬೇರೆ ಯಾರೂ ಅಲ್ಲ ಅದೇ ಪುರೋಹಿತರು, ರಾಜರು, ಪ್ರಭುತ್ವದವರು ಅರ್ಥಾತ್ ಪುರುಷರು. ಎಲ್ಲ ಕ್ರಿಯೆಗಳು ಮುಗಿದ ಮೇಲೆ ಮರಳಿ ಇದೇ ಪಾಪಿಗಳು ಮೈಕೊಟ್ಟವಳನ್ನೇ ದೇವದಾಸಿ ಎಂದು ಹಂಗಿಸಿದೆ, ಹಾದರದ ಹೊರೆಹೊರೆಸಿದೆ, ತಂದೆಯಿಲ್ಲದ ಮಕ್ಕಳ ಸಂತತಿಗೆ ಕಾರಣವಾಗಿದೆ ಎಂಬ ಅಂಶಗಳ ಕಡೆಗೆ ಕಾದಂಬರಿ ಓದುಗರನ್ನು ಗಂಭೀರ ಚಿಂತನೆಗೆ ಪ್ರೇರೇಪಿಸುತ್ತದೆ. ಸತ್ಯ, ಇತಿಹಾಸ ಮತ್ತು ಕಲ್ಪನೆಗಳಲ್ಲಿಂದ ಹಾದು ಬಂದಿರುವ ಈ ಕಾದಂಬರಿ ಒಂದು ಹೊಸ ಲೋಕವನ್ನೇ ಓದುಗರೆದುರು ತೆರೆದಿಡುತ್ತದೆ.

ಮೂರು ತಲೆಮಾರಿನ ಕಥೆಯನ್ನು ‘ಕೆಂಡದ ನೆರಳು’ ಕಾದಂಬರಿ ಒಳಗೊಂಡಿದೆ. ಶೋಷಿತ ಸಮಾಜದ ಒಳಸ್ತರಗಳ ವ್ಯಾಖ್ಯಾನವನ್ನ ವೈಚಾರಿಕ ಮತ್ತು ಸಾಮಾಜಿಕ ನೆಲೆಯಲ್ಲಿ ನೀಡುತ್ತ ಚರಿತ್ರೆ ನಿರ್ಲಕ್ಷಿಸಿದ್ದ ಅಸ್ಪೃಶ್ಯ ಸಮುದಾಯದ ಬದುಕನ್ನು ಸಮರ್ಥವಾಗಿ ಪ್ರತಿಮಿಸುವ ‘ಕೆಂಡದ ನೆರಳು’ ಅವಲೋಕಿಸಬೇಕಾದ ಕೃತಿ. ಹೆಣ್ಣನ್ನು ಊಳಿಗಮಾನ್ಯ ವ್ಯವಸ್ಥೆ ತನ್ನ ಅಧೀನ ಮಾಡಿಕೊಂಡಿರುವ ಚಿತ್ರವನ್ನು  ವೈ. ಎಸ್. ಹರಗಿಯವರು ಈ ಕಾದಂಬರಿಯಲ್ಲಿ ಸಮರ್ಥವಾಗಿ ನೀಡಿದ್ದಾರೆ. ಬದುಕಿನ ಅವಶ್ಯಕತೆಯನ್ನೇ ಮೂಲಭೂತವಾಗಿ ಪ್ರಶ್ನಿಸುವ ಹಂದರ ಈ ಕಾದಂಬರಿಯದು. ಲಿಂಗಪ್ಪ ದೇಸಾಯಿ, ಸಿ. ಕೆ. ದೇಸಾಯಿ, ಯಂಕಪ್ಪ ಕುಲಕರ್ಣಿ, ಬಾಳಪ್ಪ ಜಮಾದಾರ, ಲಕ್ಷö್ಮಯ್ಯ ಮಠಪತಿ, ಹನುಮಾಚಾರಿ, ಕಾಳಿಂಗಪ್ಪ, ಆಲೂರಿನ ಬಾಬುರಾವ್- ಮುಂತಾದವರು ಒಂದು ವ್ಯವಸ್ಥೆಯನ್ನು ಪ್ರತಿನಿಧಿಸಿದರೆ, ಕರಿಯವ್ವ, ಲಚಮವ್ವ, ಸರಸವ್ವ, ಕಾಕಾ ಸಾಹೇಬ, ನಾಮದೇವ ಕಾಳೆ, ಮುಕ್ತಾಬಾಯಿ, ದುರ್ಬೀನು ಸಾಹೇಬ, ಸಂಬೂರ ಸಿದ್ದಪ್ಪ, ಮೈಲಾರಜ್ಜ, ಭಂತಜ್ಜ, ಹುಲ್ಲೂರ ವೆಂಕಪ್ಪ, ಅಬ್ದುಲ್ ಸಾಹೇಬ-ಮೊದಲಾದವರು ಇನ್ನೊಂದು ಧ್ರುವವನ್ನು ಪ್ರತಿನಿಧಿಸುವ ಮನುಷ್ಯ ಪ್ರಪಂಚದಲ್ಲಿರುವವರು.

ಹೊಸ ತಲೆಮಾರಿನ ಪ್ರಾತಿನಿಧಿಕ ಪಾತ್ರ ಎನ್ನಬಹುದಾದ ಲಚಮವ್ವ ಈ ಕಾದಂಬರಿಯ ನಾಯಕಿ. ಇವಳ ವಿಚಾರಗಳಲ್ಲಿ ಹೆಣ್ಣಿನ ಶೋಷಣೆಯ ವಿವಿಧ ಮಜಲು ಮತ್ತು ಮುಖಗಳು ದಾಖಲಾಗುತ್ತಾ ಹೋದಂತೆ ಉತ್ತರ ಕರ್ನಾಟಕದ ವೈಶಿಷ್ಟ್ಯತೆಗಳು, ರೀತಿ-ನೀತಿಗಳು, ಆಚರಣೆಗಳು, ಕೃಷಿ -ಇತ್ಯಾದಿಗಳು ದಟ್ಟೆöÊಸುವ ಚಿತ್ರಗಳಾಗಿ ಪ್ರಾದೇಶಿಕ ಸಂಸ್ಕೃತಿಯೊಂದು ಓದುಗರ ಕಣ್ಮುಂದೆ ಸಾಕಾರಗೊಳ್ಳುತ್ತದೆ. ಕರಿಯವ್ವ, ಲಚಮವ್ವ, ಸರಸವ್ವ, ಸಂಗವ್ವರು ಪಡುವ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಹರಗಿಯವರು ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಲಚಮವ್ವಳ ಹಂತ ಹಂತದ ಬೆಳವಣಿಗೆಯನ್ನು, ಹಂತ ಹಂತವಾಗಿಯೇ ಕಾದಂಬರಿಯಲ್ಲಿ ಬಿಡಲಾಗಿದೆ. ತನ್ನ ಜನರ ಕುರಿತು ಲಚಮವ್ವ ಬೆಳೆಸಿಕೊಂಡಿರುವ ಪ್ರೀತಿ, ದ್ವೇಷ ಮತ್ತು ವೈರತ್ವಗಳನ್ನು ಕಾದಂಬರಿಯಲ್ಲಿ ನೈಜವಾಗಿ ತರಲಾಗಿದೆ. ಈ ಕಾದಂಬರಿಯಲ್ಲಿ ಬರುವ ಅನೇಕ ಸಣ್ಣಪುಟ್ಟ ಪಾತ್ರಗಳು ಅತ್ಯಂತ ನೈಜವಾಗಿ ಮೂಡಿಬಂದಿದ್ದು, ಗ್ರಾಮೀಣ ಬದುಕಿನ ವಿವಿಧ ಮುಖಗಳನ್ನು ದರ್ಶಿಸುತ್ತಲೇ ಅವು ಕ್ರಿಯಾಶೀಲವಾಗಿ ಓದುಗರ ಗಮನ ಸೆಳೆಯುತ್ತವೆ.

ಗಂಡಿನ ಕ್ರೌರ್ಯ ಮತ್ತು ಗಂಡಿನ ಅತೃಪ್ತ ಕಾಮ ಲಚಮವ್ವ ಮತ್ತು ಸರಸವ್ವರ ಶೀಲವನ್ನು ಬಲಿ ತೆಗೆದುಕೊಳ್ಳುತ್ತದೆ ಮಾತ್ರವಲ್ಲ, ವೇಶ್ಯಾ ಸಮಸ್ಯೆಯನ್ನು ಸಮಾಜದಲ್ಲಿ ನಿರಂತರವಾಗಿ ಜೀವಂತವಾಗಿಡುತ್ತದೆ. ಈ ಪಾಪಕೂಪದಲ್ಲಿ ಬಿದ್ದವರನ್ನು ತುಚ್ಛವಾಗಿ ಕಾಣುವ ಸಮಾಜ ಅವರು ಅಲ್ಲಿಂದ ಮೇಲೇರಿ ಬರದಂತೆಯೂ ಮಾಡುತ್ತದೆ. ಇಂಥ ಕ್ರೂರ, ಅಂಧ, ಕಾಮುಕ, ಸಮಾಜದ ಕೆಟ್ಟ ದೃಷ್ಟಿಗೆ ಗುರಿಯಾಗುವ ಲಚಮವ್ವ ಅದನ್ನು ಎದುರಿಸಿ ತನ್ನ ಧ್ಯೇಯನಿಷ್ಠೆಯನ್ನು ಮೆರೆಯುತ್ತಾಳೆ. ದೇವದಾಸಿಯಾದ ಆಕೆ ಊರ ಬಲಿಷ್ಠ ಪುರುಷರ ಕಾಮಕ್ಕೆ ಮೈ ತೆರೆದುಕೊಳ್ಳುವವಳು. ಲಿಂಗಪ್ಪ ದೇಸಾಯಿ, ಜಮಾದಾರ ಬಾಳಪ್ಪ ಮತ್ತು ಸರ್ಕಾರಿ ಅಧಿಕಾರಿಗಳು ಆಕೆಯನ್ನು ಶೋಷಣೆ ಮಾಡುತ್ತಾರೆ. ಲಚಮವ್ವ ಒಂದು ನಿರ್ಣಾಯಕ ಘಟ್ಟದಲ್ಲಿ ಪಾಳೇಗಾರಿಕೆ ವಿರುದ್ಧ ಸಿಡಿದೇಳುತ್ತಾಳೆ. ಅಬ್ದುಲ್ ಸಾಹೇಬ ಅವಳನ್ನು ಮದುವೆಯಾಗುತ್ತಾನೆ. ಲಚಮವ್ವಳಿಗೆ ಜಮಾದಾರ ಬಾಳಪ್ಪನಿಂದ ಹುಟ್ಟಿದ ಸರಸವ್ವ ಎಂಬ ಮಗಳಿದ್ದಾಳೆ. ಬಾಳಪ್ಪ ಮಗಳನ್ನೇ ಮೋಹಿಸುವ ಅವಿವೇಕಿ. ಬಾಳಪ್ಪನ ಮಗ ಶಿವಲಿಂಗನೂ ಸಹ ಸರಸಿಯ ಪ್ರಿಯಕರನೇ. ತಂದೆ-ಮಗನ ಕಾಮಸಮರದಲ್ಲಿ ಬಾಳಪ್ಪ ಸೆರೆವಾಸಿಯಾಗುವುದು ಇಲ್ಲಿನ ವಿಚಿತ್ರ ಸಂಗತಿ. ಲಚಮವ್ವಳ ಆದರ್ಶವನ್ನು ಜೀವಂತವಾಗಿರಸಲು ಅಬ್ದುಲ್, ಕಾಕಾ ಸಾಹೇಬ ಪಾಟೀಲ, ನಾಮದೇವ ಕಾಳೆ, ಮುಕ್ತಾಬಾಯಿಯಂಥ ಸಮಾಜ ಸುಧಾರಕರಿದ್ದಾರೆ. ತನ್ನ ದಾರಿ ತಪ್ಪಿದ ಬದುಕಿನ ಅರಿವಾದದ್ದೇ ಆಕೆಯ ಮಗಳು ಸರಸವ್ವ ಕೂಡ ಹೊಸ ಸಮಾಜದ ಕನಸಿನೊಂದಿಗೆ ಹೆಜ್ಜೆ ಹಾಕುತ್ತಾಳೆ. ಲಚಮವ್ವಳಂಥವರಿಂದ ಈ ಸಮಸ್ಯೆಯ ಪರಿಹಾರ ಸಾಧ್ಯವೆಂಬುದನ್ನು ಹರಗಿಯವರು ಇಲ್ಲಿ ಸೂಚಿಸುತ್ತಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತನ್ನ ಧ್ಯೇಯವನ್ನು ಸಾಧಿಸಿ ತೋರಿಸಿದ ಲಚಮವ್ವ ಈ ಕಾದಂಬರಿಯಲ್ಲಿ ಎದ್ದು ಕಾಣುತ್ತಾಳೆ. ತನ್ನ ಸಂಯಮವನ್ನು ಯಾವ ಕಾರಣದಿಂದಲೂ ಸಡಿಲಿಸಿಕೊಳ್ಳದ ಆಕೆಯಂಥವರಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯವೆಂಬುದನ್ನು ಹರಗಿಯವರು ಧ್ವನಿಸಿದ್ದು ಕಂಡುಬರುತ್ತದೆ. ಲಚಮವ್ವನ ಪಾತ್ರದೆದುರು ಕಾದಂಬರಿಯ ಉಳಿದೆಲ್ಲ ಪಾತ್ರಗಳು ಗೌಣವಾಗಿ ಬಿಡುತ್ತವೆ. ಅವಳು ಆಡಳಿತಶಾಹಿ, ಅಧಿಕಾರಶಾಹಿ ಮತ್ತು ಊಳಿಗದ ಮನಸ್ಸುಗಳನ್ನು ಏಕಕಾಲಕ್ಕೆ ಪ್ರತಿಭಟಿಸುತ್ತಾಳೆ. ಇಲ್ಲಿ ಲಚಮವ್ವಳ ಬದುಕು ದುರಂತವಾದರೂ, ಆ ಬದುಕಿನಿಂದ ಚೇತರಿಸಿಕೊಳ್ಳುವ ಪ್ರಯತ್ನವಿದೆ. ಶೋಷಣೆ, ಅನ್ಯಾಯ, ಮೂಢನಂಬಿಕೆಗಳು ಈ ಸಂಸ್ಕೃತಿಯ ದೌರ್ಬಲ್ಯಗಳ ಮುಖವಾದರೆ, ಅದರ ಶಕ್ತಿಯ ಮುಖವಿರುವುದು ಇವುಗಳ ವಿರುದ್ಧ ಎದ್ದು ನಿಲ್ಲುವ ಜೀವಪರವಾದ ಛಲದಲ್ಲಿ, ಲಚಮವ್ವ ಮತ್ತು ಅಬ್ದುಲ್ ಸಾಹೇಬ ಇಂಥ ಛಲದ ಪ್ರತೀಕ. ಕಾದಂಬರಿಯ ಅಂತ್ಯದಲ್ಲಿ ಕೊಲೆಯಾಗುವ ಲಚಮವ್ವ ಲೇಖಕರ ದೃಷ್ಟಿಯಲ್ಲಿ ಬೆಂಕಿಯAತೆ ಪರಿಶುದ್ಧಳು. ಬದುಕಿನ ಒತ್ತಡಗಳಿಂದ ಅವಳ ದೇಹ ಅನೇಕರಿಗೆ ವಶವಾದರೂ ಇಚ್ಛೆಯಿಂದ ಪರಿಶುದ್ಧಳು. ವೈ. ಎಸ್. ಹರಗಿಯವರ ಈ ನಿಲುವು ಸಂಪ್ರದಾಯಬದ್ಧರನ್ನು ರೊಚ್ಚಿಗೆಬ್ಬಿಸುವುದು ಸಹಜ. ಲಚಮವ್ವ ತನ್ನ ಸುತ್ತಲಿನ ಸಮಾಜವನ್ನು ಮತ್ತು ಸಂಸ್ಕೃತಿಯನ್ನು ಬದಲಾಯಿಸುವ ಎದೆಗಾರಿಕೆಯುಳ್ಳವಳು. 

ಸಂಕೀರ್ಣ ಪ್ರತಿಮೆಗಳ ಪ್ರಯೋಗ ಮಾಡುವ ವೈ. ಎಸ್. ಹರಗಿಯವರ ತಂತ್ರ ಸರಳವಾದುದಲ್ಲ. ಅದು ದಟ್ಟವಾಗುತ್ತ ಸಾಗಿ ಗಾಢ ಅನುಭವವನ್ನು ಕೊಡುತ್ತದೆ ಎಂಬುದಕ್ಕೆ ಈ ಕೆಳಗಿನ ವಾಕ್ಯಗಳನ್ನು ನೋಡಬಹುದು:

 “ಸಿ. ಕೆ. ದೇಸಾಯಿಯ ಕಿರಿಯ ತಂಗಿ ವಿಧವೆ ಹನುಮಾಪುರದ ಕಾವಿ ಮಠದ ನಿರ್ಗುಣಾನಂದ ಸ್ವಾಮಿ ಕೂಡ ಓಡಿ ಹೋಗಿದ್ದು ಬೆಳಕು ಹರಿಯೋದ್ರಳಗ ಊರು ತುಂಬಾ ಬಹು ದೊಡ್ಡ ಸುದ್ದಿಯಾಗಿತ್ತು. ಗಂಡ ಸತ್ತ ರಂಡಿ ಮುಂಡಿ ಕೂಡ ಮಠದ ಆಸ್ತಿಪಾಸ್ತಿ ಬಿಟ್ಟು ನಿರ್ಗುಣಾನಂದ ಸ್ವಾಮಿಗಳು ಓಡಿ ಹೋಗಿದ್ದು ಕಾವಿಮಠದ ನಿಷ್ಠಾವಂತ ಭಕ್ತರನ್ನು ಕಂಗೆಡಿಸಿತ್ತು. ಹನುಮಾಪುರದ ಹನುಮಂತ ದೇವರ ಜಾತ್ರೀನೂ ಇನ್ನೇನು ಬಾಳಾ ದಿನ ಉಳಿದಿರಲಿಲ್ಲ. ಇನ್ನು ಎರಡು ವಾರ ಕಳೆದು ಹೋದ್ರss..ಜಾತ್ರಿ ಬಂದೆ ಬಿಡುತ್ತಿತ್ತು. ಜಾತ್ರೀ ಮುಂದ ಇಟಗೊಂಡು ಅಗ್ಗದ ರಂಡಿ ಸೂಸಿ ನನ್ನ ಹೊಟ್ಟಿ ಉರಿಸೋದು ಅಷ್ಟss..... ಅಲ್ಲ ಅವರಣ್ಣ ಚಂದ್ರಪ್ಪ..... ನಾಕ ಮಂದೀ ಎದುರಿಗೆ ತಲಿ ಎತ್ತಿ ತಿರುಗಾಡಲಾರದಂಗ ಮಾಡಿದಳು.....” ಅಂತಾ ದೇಸಾಯರ ತಾಯಿ ರಾಧಾಬಾಯಿ ಮನಿಯೊಳಗ ಬಿದ್ದು ಹೊಳ್ಳಾಡಿ ಅಳುತ್ತಿದ್ದಳು (ಪುಟ-121).

ಸಿ. ಕೆ. ದೇಸಾಯಿಯ ಕಿರಿಯ ತಂಗಿ ಸೂಸವ್ವ ದೈಹಿಕ ಸುಖದಿಂದ ವಂಚಿತೆ, ಹನುಮಾಪುರದ ಕಾವಿ ಮಠದ ಸ್ವಾಮೀಜಿಯ ಮೇಲೆ ಅವಳ ಮನಸ್ಸು. ಊರ ಜನರ ಕಣ್ಣು ತಪ್ಪಿಸಿ ಅವರಿಬ್ಬರೂ ಓಡಿ ಹೋಗುತ್ತಾರೆ.

“ಮನೆತನದ ಮಾರಿಗೆ ಮಸಿ ಬಳಿದು, ಕಾವಿ ಮಠದ ಸ್ವಾಮಿಯೊಂದಿಗೆ ಸೂಸವ್ವ ಓಡಿಹೋಗಿದ್ದು ದೇಸಾಯಿ ಮನೆತನದ ಮಾರಿ ಮ್ಯಾಲಿನ ಹುಣ್ಣಿನಂತೆ ಇಡೀ ಜಗತ್ತಿಗೆ ಕುರೂಪಿಯಾಗಿ ಕಾಣುತ್ತಿತ್ತು. ಏನು ಮಾಡಿದರೇನು ಪರಿಸ್ಥಿತಿ ಕೈಮೀರಿ ಹೋಗೇತಿ; ಈಗ ಏನss.....  ಚವಕಾಸಿ ಮಾಡಿದರೂ ಏನೂ ಪ್ರಯೋಜನ ಇಲ್ಲಂತ ಗೊತ್ತಿದ್ದರೂ; ಬಾಯಿಗೆ ಬೀಗ ಹಾಕಲಾರದ ಊರ ಮಂದಿಯ ಚುಚ್ಚು ಮಾತು ಸಿ. ಕೆ. ದೇಸಾಯಿಯ ಮನಸ್ಸಿಗೆ ನಂಜೇರುವಂತೆ ಮಾಡಿದ್ದರಿಂದ; ದೇಸಾಯರ ಉರಿಮುಖವನ್ನು ಎದುರಿಸುವುದು ಕುಲಕರ್ಣಿಗೂ ದುಸ್ತರವಾಗಿತ್ತು....” (ಪುಟ-126).

ಈ ಕಾದಂಬರಿ ದಲಿತ ಮಹಿಳೆಯರ ಅಸಹಾಯಕತೆ, ಬಡತನ, ಲೈಂಗಿಕತೆ ಮತ್ತು ಹಸಿವುಗಳನ್ನು ತನ್ನ ಮೂಲದ್ರವ್ಯವನ್ನಾಗಿಸಿಕೊಂಡು ಬೆಳೆಯುತ್ತದೆ. ಹರಗಿಯವರ ಈ ಕಾದಂಬರಿಯಲ್ಲಿ ಸಾಮಾನ್ಯ ಓದುಗರನ್ನು ಒಂದು ಕ್ಷಣ ವಿಚಲಿತರನ್ನಾಗಿಸುವ ಲೋಕವಿದೆ;

“ಬೆದಿ ಬಂದ ಗೂಳಿಯಂಗ.... ಹಸಗೊಂಡ ಬಂದ..... ಗಂಡ್ಸೂರ ಹಸಿವು ತೀರಿಸಲಾರದss... ಹೊಳ್ಳಿ ಕಳಿಸಿದರss... ಮಹಾಪಾಪ ಬರತೈತೀರಿ..... ಏನು ಮಾಡೋದss… ಎಲಿ ಉದುರಿ ಹ್ವಾದ ಹಳೆ ಒಣ ಮರದಂಗ ಹಂಗಾಮ ಇಂಗಿ ಹೋಗಿ ಮಂಗ್ಯಾನ ಮೊಸಡಿ ಮಾಡಿಕೊಂಡು.... ನೆಲಾ ಹಿಡಕೊಂಡು ಕುಂತೇನಿ..... ನನ್ನ ಕಡೆಯಿಂದ ನಿಮ್ಮ ಹಸಿವು..... ತೀರಸಾಕ ಆಗೋದಿಲ್ಲ...... ಯಪ್ಪಾ.....” ಎಂದು ಹೇಳಿ ಇನ್ನು ಏನೋ ಲೊಳ ಲೊಳ ಲೊಳಗುಟ್ಟಿದಳು ಕರಿಯವ್ವ (ಪುಟ-156). ಇಂಥ ಭಾಷೆಯಲ್ಲೇ ಹಲವಾರು ಕಡೆ ನಡೆಯುವ ಸಂಭಾಷಣೆಯಿಂದಾಗಿ ಕಾದಂಬರಿಗೆ ಲವಲವಿಕೆ ಪ್ರಾಪ್ತವಾಗಿದೆ. ಆಕರ್ಷಕ ಸನ್ನಿವೇಶಗಳು ಅದರ ನೇರ ಪ್ರವಾಹಕ್ಕೆ ಪೂರಕವಾಗಿವೆ.

ಪಾಳೇಗಾರಿಕೆ ವ್ಯವಸ್ಥೆ, ಅದರ ಭಾಗವಾದ ವ್ಯಕ್ತಿಗಳು ಬ್ರಿಟಿಷರ ಆಡಳಿತವನ್ನು ರೂಪಿಸಿದ್ದನ್ನು ಇಲ್ಲಿ ಕಾಣಬಹುದು. ಅದರ ಮುಂದುವರಿಕೆಯಾಗಿಯೇ ಮಹಿಳೆಯರ ಮೇಲಿನ ದೌರ್ಜನ್ಯ, ಅವರ ವ್ಯಕ್ತಿತ್ವ ಮತ್ತು ಸ್ವಾತಂತ್ಯ್ರವನ್ನು ನಾಶ ಮಾಡುವ ಗಂಡಸರ ಮನಸ್ಥಿತಿಯನ್ನು, ಅಂದಿನ ಗ್ರಾಮೀಣ ಭಾರತದ ದಾರುಣ ವಾಸ್ತವನ್ನು ಈ ಕಾದಂಬರಿ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಮುಂದಿಡುತ್ತದೆ. ಈ ಕಾದಂಬರಿ ಪ್ರತಿಭಟನೆ, ಸಂಘಟನೆ, ಬದಲಾವಣೆ ಮತ್ತು ತಾತ್ವಿಕತೆಗಳನ್ನು ಸಹಜವಾಗಿ ಹೊಂದಿದೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಧೋರಣೆಗಳು ಗೊತ್ತಾಗದಂತೆಯೇ ನುಸುಳಿಕೊಂಡು ಬಂದಿವೆ. ಹಾಗೆ ಬರುವುದರ ಮೂಲಕ ಗಾಂಧೀಜಿ ಮತ್ತು ಅಂಬೇಡ್ಕರ್ ಎಷ್ಟರಮಟ್ಟಿಗೆ ಪ್ರಸ್ತುತರು ಎಂಬುದರತ್ತ ಆಲೋಚಿಸುವಂತೆಯೂ ಮಾಡುತ್ತದೆ. 

“ಸಂಗೀಯನ್ನು ಓಕಳಿ ಆಟದಲ್ಲಿ ಅಪಮಾನ ಮಾಡಿದ್ದು ಆಕೆಯ ಗಂಡನ ಹೆಣ ದೇವರಕೆರಿ ವಂಡೀ ಮ್ಯಾಲೆ ಎರಡು ಹಗಲು ಒಂದು ರಾತ್ರಿ ಅನಾಥವಾಗಿ ಬಿದ್ದಿದ್ದು ಇಡೀ ದೇಶಕ್ಕೆ ಗೊತ್ತಾಗಿತ್ತು. ವೈಸರಾಯ್‌ರಿಗೂ ಮತ್ತು ಇಂಗ್ಲೆಂಡಿನ ರಾಣಿ ಸರಕಾರಕ್ಕೆ ಈ ವಿಯ ತಿಳಿದಿತ್ತು. ಬಾಬಾ ಸಾಹೇಬರು ಮತ್ತು ಗಾಂಧೀಜಿಯವರು ಪ್ರತ್ಯೇಕವಾಗಿ ಅಂಗ್ರೇಜಿ ಸರಕಾರದ ವಿರುದ್ಧ ಕೆರಳಿ ಕೆಂಡವಾಗಿ; ಭಾರತದಲ್ಲಿಯ ಅಂಗ್ರೇಜಿ ಸರಕಾರವು ಭಾರತೀಯರನ್ನು ಕಾಪಾಡುವಲ್ಲಿ ವಿಫಲವಾಗಿದೆ; ಎಂದು ತಕರಾರು ತೆಗೆದಿದ್ದರಿಂದ ವಿಷಯ ಆಕಾಶದೆತ್ತರದಷ್ಟು ಗಂಭೀರ ಸ್ವರೂಪವನ್ನು ತಾಳಿತ್ತು.....” (ಪುಟ-215).

“ಠಾಕು ಠೀಕಿನ ಬೆಕ್ಕಿನ ಕಣ್ಣಿನ ರಾಬರ್ಟ್ ಸಾಹೇಬರ ರಾಜ ಠೀವಿಯನ್ನು ಹಳ್ಳಿಯ ಜನರು ಮರೆಯಲ್ಲಿ ನಿಂತು ಇಣುಕಿ ನೋಡುತ್ತಿದ್ದರು. ಅವರ ಚಲುವಿಕೆಯ ಸುಂದರ ದೇಹದಾರ್ಢ್ಯವನ್ನು ನೋಡಿ, ಈ ಇಲಾತಿ ಸಾಹೇಬರು ಹೊಟ್ಟೆಗೆ ಏನು ತಿಂತಾರss… ಏನೋ..... ಅವರ ಮೈ ಚರ್ಮ ಬೆಳದಿಂಗಳ ಬೆಳಕಿನಂಗ ಹೊಳೀತೈತಿ” ಎಂದು ಮುಗುಮ್ಮಾಗಿ ಕೊಂಡಾಡುತ್ತಿದ್ದರು (ಪುಟ-230).

ಯಂಕಪ್ಪ ಕುಲಕರ್ಣಿಯ ಕಚ್ಚೆ ಹರುಕ ಬುದ್ಧಿ ಲಚಮವ್ವಳನ್ನು ತನ್ನವಳನ್ನಾಗಿಸಿಕೊಳ್ಳುವತ್ತ ಯೋಚಿಸುತ್ತದೆ. ಕೇಡು ಅವನ ವ್ಯಕ್ತಿತ್ವದ ಮತ್ತು ದೇಹದ ಇನ್ನೊಂದು ಭಾಗ. ಅವನಿಂದಾಗಿ ಅನೇಕ ಕುಟುಂಬಗಳು ನಾಶವಾಗಿವೆ. ಇಲ್ಲಿರುವ ದೇಸಾಯಿ, ಯಂಕಪ್ಪ, ಲಕ್ಷ್ಮಯ್ಯ ಮಠಪತಿ ಎನ್ನುವ ವ್ಯಕ್ತಿಗಳು ಬರೀ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದವರಲ್ಲ; ಅವರು ಈ ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ಇರಬಹುದಾದ ಶೋಷಣೆಯ ಪ್ರತೀಕ. ದೇಸಾಯಿಯ ಪಾತ್ರ ಅಮಾನವೀಯ ಕ್ರೌರ್ಯವನ್ನು ಬಿಂಬಿಸುತ್ತದೆ. ಇಲ್ಲಿ ಸ್ವಾತಂತ್ಯ್ರ, ಸಮಾನತೆ, ಭ್ರಾತೃತ್ವಗಳೆಲ್ಲ ಉಸಿರುಗಟ್ಟಿ ಸಾಯುತ್ತಿರುವುದನ್ನು ಹರಗಿಯವರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ‘ದೇಸಾಯಿ’ ಎನ್ನುವ ಮಾತೇ ಗ್ರಾಮೀಣ ಊಳಿಗ ವರ್ಗದ ಸಂಕೇತ. ಈ ಊಳಿಗದ ವಿರೋಧವನ್ನು ಇಲ್ಲಿ ಪ್ರಗತಿಪರರೆನಿಸಿಕೊಂಡ ದೇವರಾಯ ಇಂಗಳೆ, ನಾಮದೇವ ಕಾಳೆ, ಸೋಮನಗೌಡ -ಮುಂತಾದ ನಾಯಕರು ಬಸವಿಹಳ್ಳಿಯ ಮರ‍್ನಾಲ್ಕು ಬಸವಿಯರನ್ನು ಸೇರಿಸಿಕೊಂಡು ತಂಡೋಪ ತಂಡವಾಗಿ ಹನುಮಾಪುರದ ಕೆರೆಯನ್ನು ಮುಟ್ಟಿ ಸಾರ್ವತ್ರಿಕೊಗೊಳಿಸುವ ಪ್ರಯತ್ನ ಸಂಪ್ರದಾಯವಾದಿಗಳ ಮನಸ್ಸನ್ನು ಕೆರಳಿಸುತ್ತದೆ. ವರ್ಣಾಶ್ರಮ ಸ್ವರಾಜ್ಯ ಸಂಘಟನೆಯ ಮುಖ್ಯಸ್ಥರಾದ ಲಕ್ಷ್ಮಯ್ಯ ಮಠಪತಿ ಹಾಗೂ ಅವನ ಅನುಯಾಯಿಗಳಾದ ಕಾಳಿಂಗಪ್ಪ ಸುಣಗಾರ, ಹನುಮಾಚಾರಿ, ಬಾಬುರಾವ್ ಕುಲಕರ್ಣಿಯಂಥವರು ಕೆಳಸಮುದಾಯದವರು ಕೆರೆಗೆ ಇಳಿದು ದೇವರ ಕೆರೆಯ ನೀರನ್ನು ಮುಟ್ಟಿ ಮೈಲಿಗೆಗೊಳಿಸದಂತೆ ತಡೆಯುತ್ತಾರೆ.

 ದಲಿತ ಸಮಾಜದಿಂದ ಹೊರಗಿನ ಸಮಾಜಗಳ ಪ್ರತಿನಿಧಿಗಳಾದ ದೇಸಾಯಿ, ಜಮಾದಾರ, ಮಠಪತಿ ಮತ್ತು ಕುಲಕರ್ಣಿಯರು, ಸಾಮಾನ್ಯ ಅರ್ಥದಲ್ಲಿ ದಲಿತ ಜನಾಂಗವನ್ನು ಹತೋಟಿಯಲ್ಲಿಟ್ಟುಕೊಂಡಿರುವ ವರ್ಗ ಮತ್ತು ವರ್ಣಗಳನ್ನು ಪ್ರತಿನಿಧಿಸುತ್ತಾರೆ. ಇವರು ಅತ್ಯಂತ ನಯವಾಗಿ ದಲಿತರಿಗೆ ಸಂಪ್ರದಾಯಗಳ ಶೃಂಕಲೆಗಳನ್ನು ತೊಡಿಸಿ, ತಮ್ಮ ಸುಖಕ್ಕೆ ದಾರಿ ಮಾಡಿಕೊಳ್ಳುತ್ತಾರೆ.

“ದೇವರ ಕೆರೆಯ ನೀರು ಯಾರ ಸ್ವತ್ತು....?”ಎಂದು ಪ್ರಶ್ನಿಸಿದಾಗ, “ದೇಸಾಯಿ ಮನೆತನದ ಖಾಸಗಿ ಸೊತ್ತು......!!”ಎಂದು ಘೋಷಣೆಯ ಪ್ರಶ್ನೆಗೆ ಒಕ್ಕೊರಲಿನ ಸಿದ್ಧ ಮಾದರಿಯ ಉತ್ತರವನ್ನು ಹೊರಹಾಕುತ್ತ ಮುಗಿಲು ಮುಟ್ಟುವಂತೆ ಘರ್ಜಿಸುತ್ತಿತ್ತು. “ಕೆರೆಯ ನೀರು ಮುಟ್ಟಿ ಮೈಲಿಗೆ ಮಾಡಿದರೆ ಕೇರಿಯ ಮಂದಿಯನ್ನು ಸಾಮೂಹಿಕವಾಗಿ ಸುಟ್ಟು ಹಾಕುತ್ತೇವೆ ಎಂದು ಪಾಳೇಗಾರಿಕೆಯ ಬಾಯಿ ಮಾತಿನ ಶಾಸನ ಎಲ್ಲರ ಬಾಯಿಂದ ಬಾಯಿಗೆ ಹರಿದಾಡುತ್ತಿತ್ತು. ಲಕ್ಷö್ಮಯ್ಯ ಮಠಪತಿಯವರ ಹಿಂಬಾಲಕನಾಗಿ ಬಂದಿದ್ದ ಪವಾಡಶೆಟ್ಟರ ಮುದುಕನ ಮೈಯಲ್ಲಿ ಹಿಡಿಮಾಂಸ, ದೇಹದಲ್ಲಿ ಶಕ್ತಿ ಇರಲಾರದೇ ದುರ್ಬಲನಾಗಿದ್ದರೂ ಅವನಲ್ಲಿಯ ಮಹಾ ಮಡಿವಂತಿಕೆಯು ಪ್ರಬಲವಾಗಿತ್ತು” (ಪುಟ-328) ಎನ್ನುವಂತಹ ವಿವರಣೆ ಪ್ರತಿಯೊಂದು ಪ್ರದೇಶದಲ್ಲಿಯೂ ಇರಬಹುದಾದ ಲಕ್ಷ್ಮಯ್ಯ ಮತ್ತು ಪವಾಡಶೆಟ್ಟಿಯಂಥ ಕೆಟ್ಟ ಹುಳುಗಳನ್ನು ಪರಿಚಯಿಸುತ್ತದೆ.

ಕನ್ನಡದ ಪ್ರಮುಖ ಕಾದಂಬರಿಗಳೆಲ್ಲ ಗ್ರಾಮ ಬದುಕಿನ ಚಿತ್ರಣಗಳೇ ಎಂಬ ಬೆರಗಿಗೆ ಹೆಪ್ಪು ಹಾಕುವಂತೆ ವೈ. ಎಸ್. ಹರಗಿಯವರ ‘ಕೆಂಡದ ನೆರಳು’ ಕೃತಿ ಹೊರ ಬಂದಿದೆ. ಕಾದಂಬರಿಯನ್ನು ಓದುತ್ತ ಹೋದಂತೆ ಕನ್ನಡದ ಕುವೆಂಪು, ಕಾರಂತ, ತೇಜಸ್ವಿ, ರಾವಬಹದ್ದೂರ, ಕಂಬಾರ, ಲೋಕಾಪೂರ, ಇಂಗ್ಲಿಷಿನ ಚಾರ್ಲ್ಸ್ ಡಿಕೆನ್ಸ್, ಡಿ. ಎಚ್. ಲರೆನ್ಸ್, ಚಿನುವಾ ಅಚೆಬೆ, ಥಾಮಸ್ ಹಾರ್ಡಿಯರು ನೆನಪಿಗೆ ಬರುತ್ತಾರೆ. ಕನ್ನಡದಲ್ಲಿ ದಲಿತ ಲೇಖಕರು ಬರೆದ ಅನೇಕ ಕಥೆ, ಕಾದಂಬರಿಗಳು ಬಂದಿವೆ. ಆದರೆ ‘ಕೆಂಡದ ನೆರಳು’ ನೀಡುವ ಅನುಭವ ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಇಲ್ಲಿ ದಲಿತ ಮತ್ತು ಬಲಿತ ಸಂಸ್ಕೃತಿಗಳ ಸಂಘರ್ಷ, ಪರಸ್ಪರ ಪರಕಾಯ ಪ್ರವೇಶಗಳನ್ನು ವೈ. ಎಸ್. ಹರಗಿಯವರು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ನಿರ್ಲಕ್ಷಿತರ ಹಾಗೂ ದಲಿತರ ಉದ್ದೇಶದಿಂದಲೇ ರಚಿತವಾದ ಇದು ಸಮಾಜವಾದಿ ಚಿಂತನೆಯ ಪ್ರತಿರೂಪದಂತಿದೆ. ಮಾನವಿಕಶಾಸ್ತ್ರ ಮತ್ತು ಸಮಾಜಶಾಸ್ತ್ರಗಳಿಗೂ ಉಪಯುಕ್ತವಾದ ಸಾಮಗ್ರಿ ಇಲ್ಲಿರುವುದನ್ನು ಕಾಣಬಹುದು. ಸಾಮಾಜಿಕ ಸಮಾನತೆಯನ್ನು ಧ್ವನಿಪೂರ್ಣವಾಗಿ ವ್ಯಕ್ತಪಡಿಸುವ ಈ ಕಾದಂಬರಿಯ ಕಲಾವಂತಿಕೆಯೂ ಉಲ್ಲೇಖನೀಯವಾದದ್ದೇ ಆಗಿದೆ. ಈ ಹಲವು ಕಾರಣಗಳಿಂದ ವೈ. ಎಸ್. ಹರಗಿಯವರ ‘ಕೆಂಡದ ನೆರಳು’ ಕಾದಂಬರಿ ಕನ್ನಡದ ವಿಶಿಷ್ಟ ದಾಖಲೆಯಾಗಿ ನಿಲ್ಲುತ್ತದೆ.

‘ಕೆಂಡದ ನೆರಳು’ ಕಾದಂಬರಿಯಲ್ಲಿ ಅಲ್ಲಲ್ಲಿ ಸಂಭಾಷಣೆಗಳಿವೆಯಾದರೂ ಅವು ಮುಖ್ಯವಾಗಿ ನೇರ ನಿರೂಪಣೆಯಲ್ಲೇ ಸೇರಿಕೊಂಡಿವೆ. ವೈ. ಎಸ್. ಹರಗಿಯವರ ಕಲೆಗಾರಿಕೆಗೆ ಈ ಕಾದಂಬರಿ ಸೊಗಸಾದ ನಿದರ್ಶನ. ಕಾದಂಬರಿಯ ತುಂಬ ಬಳಕೆಯಾಗಿರುವ ಗ್ರಾಮೀಣ ಭಾಷೆ ಅದಕ್ಕೊಂದು ವಿಶೇಷ ಮೆರಗನ್ನು ನೀಡಿದೆ. ಇದು ಭಾಷೆಯ ದೃಷ್ಟಿಯಿಂದಲಂತೂ ಕನ್ನಡದ ಕಾದಂಬರಿ ಕ್ಷೇತ್ರದಲ್ಲೇ ಅತ್ಯಂತ ವಿಶಿಷ್ಟವಾದುದು. ಕೆಲವು ಕಡೆ ಮುದ್ರಣ ದೋಷಗಳಿವೆ. ಕಾದಂಬರಿಯುದ್ದಕ್ಕೂ ಬಳಕೆಯಾಗಿರುವ ಆಡುಮಾತು, ಜನಪದ ನುಡಿಗಟ್ಟುಗಳು, ಬೈಗುಳಗಳು, ಗಾದೆಮಾತು, ಒಗಟುಗಳು ಅಧ್ಯಯನಕ್ಕೆ ಆಕರಗಳಾಗಿವೆ. ಹರಗಿಯವರ ಕಾದಂಬರಿಯಲ್ಲಿ ಪ್ರತಿಮೆಗಳಂತೆ ರೂಪಕಗಳು ಸಹ ಹೇರಳವಾಗಿ ಸಿಗುತ್ತವೆ. ಇಲ್ಲಿಯ ಕಥನ ಶೈಲಿ ಸಹಜವಾಗಿದೆ, ಕಲಾತ್ಮಕತೆ ಎದ್ದು ಕಾಣುತ್ತದೆ. ಭಾಷೆ, ವಸ್ತು, ಶೈಲಿ, ಸತ್ವ ಮತ್ತು ಪಾತ್ರಚಿತ್ರಣಗಳ ದೃಷ್ಟಿಯಿಂದ ಈ ಕೃತಿಯ ಕುರಿತು ಹೆಚ್ಚು ಅಧ್ಯಯನ ನಡೆಯಬೇಕಾಗಿದೆ.

ವೈ.ಎಸ್. ಹರಗಿ ಅವರ ಲೇಖಕ ಪರಿಚಯ ನಿಮ್ಮ ಓದಿಗಾಗಿ...
ಕೆಂಡದ ನೆರಳು ಕೃತಿ ಪರಿಚಯ ಇಲ್ಲಿದೆ...
ಸಿ.ಎಸ್.ಭೀಮರಾಯ (ಸಿಎಸ್ಬಿ) ಅವರ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

 


 

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...