ಕಾಲಚಕ್ರದ ಚಲನೆಗೆ ಮಿಡುವ ಒಡಲುಗೊಂಡವರು 


"ಇಲ್ಲಿ ಗ್ರಾಮ ಜೀವನದ ಕಥಾನಕ ಪ್ರಧಾನವಾಗಿ ಬಂದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇಂತಹ ಕೆಲವು ಕಾದಂಬರಿಗಳು ಕನ್ನಡದಲ್ಲಿವೆ. ರಾಯಚೂರು ಪ್ರದೇಶದ ಹಳ್ಳಿಗಳ ಪ್ರತಿನಿಧಿಯಂತಿರುವ ಬನ್ನಿಪುರವು ಬಿಸಿಲ ಹೊಡೆತದಿಂದ ತತ್ತರಿಸಿ ಬರಗಾಲದಿಂದ ಬಸವಳಿದು ಮಳೆಗಾಗಿ ಹಂಬಲಿಸುತ್ತ ಇರುವ ಸಂದರ್ಭದಲ್ಲಿ ಕಥನ ಆರಂಭವಾಗುತ್ತದೆ," ಎನ್ನುತ್ತಾರೆ ಗುರುಪಾದ ಮರಿಗುದ್ದಿ. ಅವರು ರಾಜಶೇಖರ ಹಳೆಮನೆ ಅವರ ʻಒಡಲುಗೊಂಡವರುʼ ಕಾದಂಬರಿ ಕುರಿತು ಬರೆದ ವಿಮರ್ಶೆ,

ರಾಯಚೂರು ಜಿಲ್ಲೆ ಎಂದರೆ ಬಿರು ಬಿಸಿಲು ಮತ್ತು ಬರಗಾಲಗಳ ನಾಡು ಎಂದು ನೆನಪಾಗುವುದು ಸಹಜವಾದದು. ಆದರೆ ತುಸು ಯೋಚಿಸಿದರೆ ಆ ನೆಲ ದೇಶಿಯ ತತ್ವಜ್ಞಾನ ಧಾರೆಯರೆದಿರುವುದನ್ನು ಗ್ರಹಿಸಬಹುದು. ಶರಣರು ಸಂತರು ಕೀರ್ತನಕಾರರು ಅನುಭಾವಿಗಳು ತತ್ವಪದಕಾರರು ಆ ಬಿಸಿಲು ಬರಗಾಲಗಳ ಒಡಲಲ್ಲಿ ರೂಪುಗೊಂಡು ಜನಮನಕ್ಕೆ ಇಹಪರಗಳ ಬೆಳಕು ನೀಡಿರುವರು. ಇದರ ವಾಯೆಯಲ್ಲಿ ಹದಗೊಂಡ ಅನೇಕ ಕಲಾವಿದರು ,ನಾಟಕಕಾರರು ,ನಟರು ,ಹಾಡುಗಾರರು, ಕವಿ ಸಾಹಿತಿಗಳು ಪರಂಪರೆಯ ಸತ್ವವನ್ನ ಹಿಗ್ಗಿಸಿದ್ದಾರೆ. ಆಧುನಿಕ ಕಥನ ವಿನ್ಯಾಸಕ್ಕೆ ಹೊಸ ಸ್ವರೂಪ ಇರುವವರಲ್ಲಿ ಅಮರೇಶ ನುಗಡೋಣಿ ಮತ್ತು ರಾಜಶೇಖರ ಹಳೆಮನೆ ಪ್ರಮುಖ ಕಥನಕಾರರು. ಸಣ್ಣಕತೆಗಳಿಂದ ಗಮನ ಸೆಳೆದಿದ್ದ ರಾಜಶೇಖರ ಹಳೆಮನೆ ಒಡಲುಗೊಂಡವರು ಕಾದಂಬರಿ ಪ್ರಕಟಿಸಿ ಇನ್ನೊಂದು ಬಗೆಯ ಸಾಹಿತ್ಯದ ಆಯಾಮದ ಬಾಗಿಲು ಬಡೆದಿದ್ದಾರೆ. ಬದುಕಿನ ಹೋರಾಟದ ಅನಿವಾರ್ಯತೆ ರಾಜಶೇಖರರನ್ನು ಮಲೆನಾಡು ಕರಾವಳಿ ಮಿಶ್ರಣದ ಉಜಿರೆ ಕಾಲೇಜಿಗೆ ಎಳೆತಂದು ಖಾಸಗಿ ಅಧ್ಯಾಪಕರನ್ನಾಗಿ ಮಾಡಿಬಿಟ್ಟಿದೆ. ಆದರೆ ಅವರಲ್ಲಿಯ ಬಿಸಿಲು ನಾಡಿನ ಕಪ್ಪು ಭೂಮಿಯ ಸುಡುವ ಪ್ರತಿಭೆ ಪೂರ್ಣಾವಧಿ ಕಥನಕಾರರನ್ನಾಗಿಸಿದೆ. ಅಧ್ಯಯನ ಅಧ್ಯಾಪನಗಳನ್ನು ಸಾಕ್ಷಿ ಪ್ರಜ್ಞೆಯಲ್ಲಿ ಮಾಡುತ್ತಾ, ತನ್ನತನವನ್ನು ಎಲ್ಲಾ ಒತ್ತಡಗಳಿಂದ ಕಾಪಾಡಿಕೊಳ್ಳುತ್ತಾ, ನಗುವಿನಿಂದ, ಸತ್ಯ ಪ್ರಾಮಾಣಿಕತೆಗಳಿಂದ ಅನ್ಯಾಯ ಸಣ್ಣತನಗಳನ್ನು ಗೆಲ್ಲುತ್ತಾ ಕಥನವನ್ನು ಉಸಿರಾಗಿಸಿಕೊಂಡ  ರಾಜಶೇಖರ ನನಗೆ ಮಹಾಮನೆಯ ಮರುಳ ಶಂಕರ ದೇವನಂತೆ ಕಾಣಿಸುವುದು ಉಂಟು. ನೋವು ವಿಷಾದ ಸೋಲುಗಳನ್ನ ಮೀರುವ ಕ್ರಮಗಳನ್ನು ಹುಡುಕುವಂತೆ ಬರಹದಲ್ಲಿ ಮುಳುಗಿದ ಅವರು ಈಗ ನೀಡಿರುವ ಕಾದಂಬರಿ ಮೊದಲನೆಯದಾದರೂ ಗಂಭೀರ ಚಿಂತನೆಗೆ ತೊಡಗಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಇನ್ನೂರು ಪುಟ ವ್ಯಾಪ್ತಿಯಲ್ಲಿ ಬರುವ ಬನ್ನಿಪುರ ಗ್ರಾಮ ಜೀವನದ ಚಿತ್ರಣವು ಬೆಳೆಯುವ ರೀತಿ ಕಥನದ ಕುತೂಹಲವನ್ನು ತೀವ್ರಗೊಳಿಸುತ್ತಾ ಹೋಗುವುದುಂಟು. ಹಾಗೆ ನೋಡಿದರೆ ಕಾದಂಬರಿ ರಾಯಚೂರು ಪ್ರದೇಶದ ಗ್ರಾಮ ಒಂದರ ಸಾಮಾನ್ಯ ಇತಿ ವೃತ್ತವಾಗಿದೆ. ಆದರೆ ಆಶಯದಲ್ಲಿ ಅದು ಅಸಾಮಾನ್ಯವಾಗಿ ಬೆಳೆಯುತ್ತಾ ನಿರೂಪಣೆಯಲ್ಲಿ ವಿಶಿಷ್ಟ ಜೋಡಣೆಗೆ ಒಳಗಾಗಿದೆ. ಕಾದಂಬರಿಯ ಪ್ರಕಟಣೆಯ ಜೊತೆಗೆ ಇಬ್ಬರು ವಿಮರ್ಶಕರ ಅಭಿಮತಗಳು ಪ್ರಕಟವಾಗಿವೆ. `ಊರುಕೇರಿ ಒಂದಾಗಬೇಕು ಎಂಬ ಆಶಯ ಜನಸಮುದಾಯಗಳ ಒಳಗಿನಿಂದ ಬಂದಿರುವುದಾಗಿ’ ಶುಭಾಷ್ ರಾಜಮಾನೆಯವರು ಗ್ರಹಿಸಿದ್ದಾರೆ. ಕಥನವು ಭೀಮನ ಪಾತ್ರದ ಕೇಂದ್ರಪ್ರಜ್ಞೆಯಲ್ಲಿ ಬಂದಿರುವುದಾಗಿಯೂ ಅವರು ಹೇಳಿರುವರು. ಕಥೆಗೆ ಕೇರಿಯ ದಲಿತ ಭೀಮನು ನಾಯಕನೆಂದು ಒಪ್ಪುವ ದೇವು ಪತ್ತಾರ ಅವರು. `ಆಧುನಿಕತೆಯ ದಾಳಿಗೆ ನಲುಗುವ ಹಳ್ಳಿಗಳ ಕಥನವಾಗಿ’ ಕಾದಂಬರಿಯನ್ನು ಗುರುತಿಸಿದ್ದಾರೆ. ಮುನ್ನುಡಿ ಬರೆದಿರುವ ಅನುಪಮಾ ಪ್ರಸಾದ್ ರವರು ಕಾದಂಬರಿ `ದೇಹತತ್ವ ಜೀವತತ್ವಗಳ ತಾತ್ವಿಕತೆಯ ದರ್ಶನ ಹೊಂದಿದೆ’ ಎಂಬ ಕೇಂದ್ರ ಪ್ರಜ್ಞೆಯನ್ನು ಕಾಣುತ್ತಾರೆ. ಪ್ರಕಾಶಕರಾದ ಅಶ್ವತ್ ಎಸ್.ಎಲ್ ಅವರಿಗೆ ಕಾದಂಬರಿ ಹಳ್ಳಿಯ ಜನಸಮುದಾಯದ ಬಾಂಧವ್ಯಗಳ ವಿಶ್ಲೇಷಣೆ ಎನಿಸಿದೆ. ಇವರೆಲ್ಲರ ಹೇಳಿಕೆಗಳನ್ನು ಕಾದಂಬರಿ ದೃಢೀಕರಿಸುತ್ತದೆ ಹಾಗೆ ಇನ್ನು ಹಲವು ಸಾಧ್ಯತೆಗಳತ್ತ ಅದು ತೋರು ಬೆರಳಾಗುತ್ತದೆ.

ಇಲ್ಲಿ ಗ್ರಾಮ ಜೀವನದ ಕಥಾನಕ ಪ್ರಧಾನವಾಗಿ ಬಂದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇಂತಹ ಕೆಲವು ಕಾದಂಬರಿಗಳು ಕನ್ನಡದಲ್ಲಿವೆ. ರಾಯಚೂರು ಪ್ರದೇಶದ ಹಳ್ಳಿಗಳ ಪ್ರತಿನಿಧಿಯಂತಿರುವ ಬನ್ನಿಪುರವು ಬಿಸಿಲ ಹೊಡೆತದಿಂದ ತತ್ತರಿಸಿ ಬರಗಾಲದಿಂದ ಬಸವಳಿದು ಮಳೆಗಾಗಿ ಹಂಬಲಿಸುತ್ತ ಇರುವ ಸಂದರ್ಭದಲ್ಲಿ ಕಥನ ಆರಂಭವಾಗುತ್ತದೆ. ಕೊನೆಗೆ ಆ ಹಂಬಲವು ಪೂರ್ಣವಾಗುವಂತೆ ರಭಸದ ಮಳೆ ಹೊಡೆದು ಸುಖ ಸಂತೋಷದ ಹೊನಲು ಹರಿಸುತ್ತಿದ್ದಂತೆ ಅದೇ ಕಾರಣದಿಂದ ವಿಚಿತ್ರ ಸಮಸ್ಯೆಗೆ ಗ್ರಾಮವು ಪಕ್ಕವಾಗುವುದರ ದುರಂತದಲ್ಲಿ ಕಾದಂಬರಿ ವಿಶ್ರಮಿಸುತ್ತದೆ. ಇವೆರಡು ವಿಚಾರಗಳು ಮನುಷ್ಯ ಮತ್ತು ಪ್ರಕೃತಿಯ ಒಡನಾಟ, ಸಂಘರ್ಷಗಳಲ್ಲಿ ಬರುವುದರಿಂದ ನಿರೂಪಣೆಗೆ ಹಲವು ತಂತ್ರಗಳನ್ನ ಪ್ರಯೋಗಿಸಲಾಗಿದೆ. ಇದು ಕಾದಂಬರಿಕಾರರಿಗೆ ಕೇವಲ ತಾಂತ್ರಿಕತೆಯಾಗಿ ಮುಖ್ಯವಾಗಿಲ್ಲ. ಇವುಗಳಿಂದ ಹಲವು ಚಿಂತನಾಧಾಟಿಗಳನ್ನು ತತ್ವ ಜ್ಞಾನಗಳನ್ನು ಮುಖಾಮುಖಿಯಾಗಿಸುವುದು ಸಾಧ್ಯವೆನಿಸಿದೆ.

ಆರಂಭದಲ್ಲಿ ಅದರ ಸೂಚನೆ ಬಂದಿದೆ. `ಗಾಳಿಯ ಬಿಸಿ ಉಸಿರಿಗೆ ಸಿಲುಕಿದ ಗಿಡಮರಗಳು ಬೆಂಕಿಗಾಹುತಿಯಾದಂತೆ ನೀರವ ಮೌನದಲ್ಲಿ ನಿಂತಿದ್ದವು. ಬೆಳದಿಂಗಳು ಸುಣ್ಣದ ನೀರಿನಂತೆ ಚೆಲ್ಲಿತ್ತು. ಸೂರ್ಯನನ್ನು ನುಂಗಿದಂತಿದ್ದ ಬೆಳದಿಂಗಳು ಪ್ರವಾಹದ ರೀತಿಯಲ್ಲಿ ಹರಿದು ಬಂದು ನಾಯಿಮರಿಯಂತೆ ಕೈಕಾಲು ಮುದುರಿಕೊಂಡು ಮಲಗಿದ್ದ ಬೀಮನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಆಕಾಶಕ್ಕೆ ಹಾರಿತು. ಬೆಳದಿಂಗಳೆಂಬ ತೊಟ್ಟಿಲಲ್ಲಿ ಸುಖ ನಿದ್ದೆಗೆ ಜಾರಿದ ಭೀಮನನ್ನ ಬೇಟೆಯಾಡಲು ಸನ್ನದ್ಧವಾಗಿ ಸೊಳ್ಳೆಗಳು ಅವನನ್ನು ಹುಡುಕುತ್ತಾ ಹೋದವು. ಸಮರೋಪದಿಯಲ್ಲಿ ಭೀಮನನ್ನು ಬೆನ್ನಟ್ಟಿ ಬರುತ್ತಿದ್ದ ಸೊಳ್ಳೆಗಳನ್ನು ಕಂಡ ಬೆಳದಿಂಗಳು ಬಲೆ ಬೀಸಿ ಹಿಡಿದು ಒಂದೆಡೆ ಕೂಡಿ ಹಾಕಿತು.’ ಪ್ರಕೃತಿಯು ಇಲ್ಲಿ ಸಜೀವ ಪಾತ್ರವೇ ಆಗಿದೆ ಭೀಮ, ಭರಮ, ನೀಲಮ್ಮ, ನಾಗಪ್ಪಗೌಡ ಸರಸ್ವತಿಯಂತೆ ಗಾಳಿ, ಬಿಸಿಲು, ಬೆಳದಿಂಗಳು ,ಮಳೆಗಳು ಇಲ್ಲಿ ಪಾತ್ರಗಳಾಗಿ ಬೆಳೆದು ಪ್ರಭಾವ ಪರಿಣಾಮ ನೀಡಿವೆ. ಜೀವಂತ ಜನ, ಜೀವಂತ ಪ್ರಕೃತಿಗಳ ಒಪ್ಪಂದ ಸಹವಾಸ ಸಂಘರ್ಷಗಳಿಂದಾಗಿ ಬರುವ ಸುಖ ದುಃಖಗಳು ವಾಸ್ತವ ತತ್ವಜ್ಞಾನವನ್ನು ಹುಟ್ಟು ಹಾಕುತ್ತವೆ. 

ವ್ಯಕ್ತವಾಗುವ ಈ ವಿಲಕ್ಷಣ ತತ್ವಜ್ಞಾನವನ್ನು ಬಸಯ್ಯತಾತ ಗುರುತಿಸಿ ವಿಸ್ಮಿತನಾಗುವುದು ಗಮನಾರ್ಹ. ಕಾದಂಬರಿಯ ಆರಂಭದಲ್ಲಿ ಬಿಸಿಲ ತಾಪಕ್ಕೆ ಬಸವಳಿದಂತೆ ಎರಡು ಜೀವಗಳು ಉಸಿರು ಚೆಲ್ಲುತ್ತವೆ. ಒಂದು ಕೇರಿಯಲ್ಲಿಯ ಅಸ್ಪೃಶ್ಯರ ಮಗು ಇನ್ನೊಂದು ಊರಲ್ಲಿ ಗೌಡರ ಮನೆತನದ ಜೀವ. ಆಯಾ ಮನೆಯವರಿಗೆ ವಿಶೇಷವಾಗಿ ಊರಲ್ಲಿಯ ಎಲ್ಲರಿಗೂ ಸಾಮಾನ್ಯವಾಗಿ ಸಾವಿನಿಂದ ದುಃಖ ನೋವುಗಳು ಉಂಟಾದದ್ದು ಸಹಜ. ಆದರೆ ನಿಸ್ಸಂಗವಾಗಿದ್ದ ಅನುಭಾವಿಯಾಗಿದ್ದ ಬಸಯ್ಯ ತಾತನಿಗೆ ಇದು ಗಾಢವಾದ ಚಿಂತನೆಗೆ ಕಾರಣವಾಗುತ್ತದೆ. ದೊಡ್ಡಮ್ಮಳ ಸಾವಿನ ತರುವಾಯ ಆ ಮನೆಯಲ್ಲಿ ಆತ ಕೂತಾಗ ದನ ಕರುಗಳ ಒದ್ದಾಟ, ಚಡಪಡಿಕೆ ನೋಡಿ ದುಃಖವನ್ನು ಮೂಕ ಜೀವಿಗಳು ಹೇಗೆ ಸಹಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತವೆ ಶಿವನೇ ಬಲ್ಲ ಎಂದುಕೊಳ್ಳುವನು. ಅಟ್ಟದ ಮೇಲಿನ ಗುಬ್ಬಿಗಳ ಗೂಡು ಆಗೀಗ ಹಾವಿನ ಆಕ್ರಮಣದಿಂದ ಪಾರುಮಾಡಲು, ನಾಗಪ್ಪ ಗೌಡರು ಕೆಲವು ಗುಬ್ಬಿ ಮರಿಗಳನ್ನು ಉಳಿಸಲು ಯತ್ನಿಸಿದ್ದು ಹೋದುದು ಎಲ್ಲಾ ಗಮನಿಸುವನು. ದೊಡ್ಡಮ್ಮನ ಸಾವಿನಿಂದ ಮನೆಯ ಜನರಿಗೆ ಆಗಿರುವಂತೆ, ಅವನಿಗೆ ಗುಬ್ಬಿಗಳ ಸಾವು ಕಂಗಡಿಸುತ್ತದೆ. ಜೀವಿಗಳ ಹುಟ್ಟು ಸಾವಿನ ಚಿಂತನೆಯಲ್ಲಿ ತೊಡಗುತ್ತಾನೆ. ಎಲ್ಲರಿಗೂ ಧೈರ್ಯ ಸಮಾಧಾನ ಹೇಳುವ, ದಾರಿ ತೋರುವ ಬಸಯ್ಯ ತಾತ ಗುಬ್ಬಿಗಳ ಸಾವಿನಿಂದ ತತ್ತರಿಸಿ ಸ್ನಾನ ,ಪೂಜೆ ಮಾಡಿ ತತ್ವಪದ ಹಾಡುತ್ತ ಜೀವನದ ರಹಸ್ಯ, ದೇವರ ಆಟದ ಬಗ್ಗೆ ಚಿಂತಿಸುವನು. ನೀಲಮ್ಮನ ಮನೆಗೆ ಹೋದಾಗಲೂ ಬದುಕು, ಕರ್ಮ, ಸಾವುಗಳ ಬಗೆಗೆ ಆತ ಮಾತನಾಡುತ್ತಾನೆ. ಬದುಕಿನ ಕ್ರಮ ಅನೋನ್ಯತೆಗಳನ್ನು ಸಾವು ಅದರ ಸ್ವರೂಪ ವಿನ್ಯಾಸಗಳನ್ನು ಚಿಂತಿಸುವ ಆ ಪಾತ್ರದ ಮೂಲಕ ಕಾಲಚಕ್ರದ ಹೆಜ್ಜೆ ಗುರುತುಗಳನ್ನು ಕಾಣುವ ಗುರುತಿಸುವ ಅರಿಯುವ ಗ್ರಾಮೀಣರ ತತ್ವಜ್ಞಾನ ಇಲ್ಲಿ ಮುಂಚಾಚಿದೆ.

ಕಾದಂಬರಿಯ ಇನ್ನೊಂದು ಚಿಂತನೆ ಎಂದರೆ ತಲೆಮಾರುಗಳ ನಡುವಿನ ವ್ಯತ್ಯಾಸ, ಬದಲಾವಣೆ ಮುಖಾಮುಖಿ ಸಂಘರ್ಷಗಳಾಗಿವೆ. ನಾಗಪ್ಪಗೌಡರ ಸಾಂಪ್ರದಾಯಿಕ ರೈತ  ಮನೆತನದ ಆಗು ಹೋಗುಗಳಿಗೆ ಅವರ ಮಗ ಪ್ರಕಾಶ ನೀಡುವ ಆಘಾತ ಮತ್ತು ನೀಲವ್ವಳ ಪ್ರತಿಷ್ಠೆಯ ಜನೋಪಕಾರಿ ಬದುಕಿಗೆ ಮಗ ಬಸವರಾಜಪ್ಪ ನೀಡುವ ಆಘಾತ ಎರಡು ಇದಕ್ಕೆ ಸಾಕ್ಷಿ. ದನ ಕರುಗಳೊಂದಿಗೆ ಸುತ್ತಣ ಜನರೊಂದಿಗೆ ನೆಲ, ಬೆಳೆ, ಕೆರೆ, ನೀರು ,ಗಿಡಮರಗಳೊಂದಿಗೆ ಕರುಳ ಬಳ್ಳಿ ಸಂಬಂಧ ಹೊಂದಿದ್ದ ನಾಗಪ್ಪಗೌಡ ಮತ್ತು ನೀಲವ್ವಳ ಮನೆತನಗಳು ಊರಲ್ಲಿ ಗೌರವ ಹೊಂದಿದ್ದವು. ಒಕ್ಕಲುತನವನ್ನು ರಕ್ತಗತ ಮಾಡಿಕೊಂಡು ಊರವರ, ಕೇರಿಯವರ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಬಂದವರು. ಅವರಿಗೆ ಅವರ ನಂಬಿಕೆ ಬರವಸೆ ಕನಸುಗಳಿಗೆ ಮೆಚ್ಚುಗೆಯ ಮಕ್ಕಳು ನಿರಾಸೆ ಉಂಟುಮಾಡುತ್ತಾರೆ. ಅಜ್ಜಿ ಸತ್ತರೆ ನೋಡಲು ಬಾರದ ಪ್ರಕಾಶ, ತಂದೆ ತಾಯಿಯರ ಬದುಕಿನ ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಲು ಯೋಚಿಸುತ್ತಾನೆ. ನಗರದಲ್ಲಿ ಅಧ್ಯಾಪಕನಾಗಿದ್ದ ಬಸವರಾಜಪ್ಪ ಹಳೆ ಕಾಲದ ಒಕ್ಕಲುತನ ತೊರೆದು ಆಧುನಿಕ ರೀತಿಯಲ್ಲಿ ಮಾಡಲು ಸಿದ್ಧನಾಗಿದ್ದಾನೆ. ಗ್ರಾಮೀಣ ಸಾಂಪ್ರದಾಯಕ ಬದುಕು ಆ ಯುವಕರ ಬದಲಾವಣೆಯ ಕನಸಿಗೆ ಅಲ್ಲೋಲಕಲ್ಲೋಲವಾಗುತ್ತದೆ. ಗ್ರಾಮೀಣ ರೈತ ಕುಟುಂಬಗಳ ವಿದ್ಯಾವಂತ ಹೊಸ ತಲೆಮಾರು ಬದಲಾವಣೆಯ ವೇಗಕ್ಕೆ ಪ್ರತಿಸ್ಪಂದಿಸುತ್ತಾ ಪೂರ್ವಜರ ಇರುವಿಕೆಯ ವಿಧಾನ ಪ್ರಶ್ನಿಸುತ್ತಿರುವ ಸಂದೀ ಕಾಲದ ಯಾತನೆಗಳನ್ನು ಅದರ ಸೂಕ್ಷ್ಮ ಆಯಾಮಗಳನ್ನು ಕಾದಂಬರಿ ಅದ್ಭುತವಾಗಿ ಚಿತ್ರಿಸಿದೆ.

ಈ ಆಘಾತ ಯಾತನೆಗಳಿಗೆ ಕಾರಣವಾದ ಬದಲಾವಣೆಯು ಬಸವರಾಜಪ್ಪನ ಚಿಂತನೆಯಲ್ಲಿ ಆರಂಭವಾಗಿ ಪ್ರಕಾಶನ ಕಾರ್ಯ ಯೋಜನೆಯಲ್ಲಿ ಖಚಿತವಾಗುತ್ತದೆ. ಗ್ರಾಮದ ಜನರು ತಮ್ಮ ದುಃಖ ನೋವುಗಳನ್ನು ಬಸಯ್ಯತಾತನ ಉಪದೇಶ ತತ್ವಪದಗಳಲ್ಲಿ ಶಮನಗೊಳಿಸಿಕೊಂಡು ಮತ್ತೆ ಬದುಕಿಗೆ ಮುಖಾಮುಖಿ ಆಗುತ್ತಾರೆ. ಆದರೆ ಅದನ್ನು ಬಸವರಾಜಪ್ಪ ಖಂಡಿಸಿ ಅವೆಲ್ಲ ಪಾಲಾಯನದ ಹಾದಿಯನ್ನು ತೋರುತ್ತವೆ ಎಂದು ಹೇಳುವನು, ತಾಯಿ ನೀಲವ್ವ ವಿವಾಹವಾಗಿ ಇರು ಎಂದಾಗ ಆತ `ನಿಮ್ಮಂಗ ಈ ಮನೆಯಾಗೆ ಕಂಬಾಗಿ ಇರಾಕ ಆಗದಿಲ್ಲಂಗೆ’ ಎಂದು ನಿರಾಶೆ ಪಡುವನು. ನೀಲವ್ವ ಸಿದ್ದಮ್ಮ, ಭೀಮ, ಸರಸ್ವತಿ, ಬಸಯ್ಯತಾತ ನಾಗನಗೌಡ ಮುಂತಾದವರು ಮನೆಯ ಕಂಬಗಳನ್ನು ಜೀವಂತವೆಂದು ಭಾವಿಸಿದರೆ ಬಸವರಾಜಪ್ಪ ಮನೆ ಕಂಬಗಳನ್ನು ನಿರ್ಜೀವ ಕಂಬಗಳೆಂದು ಭಾವಿಸುವಲ್ಲಿ ಅವರ ಎರಡು ಜಗತ್ತುಗಳ ಭಿನ್ನತೆ ಅರಿಯಬೇಕು. ಭೀಮ ಕಂಬವನ್ನು ಕಂಡು ಮುಂದಿನ ಸಲ ಕಂಬವಾಗಿ ಹುಟ್ಟಬೇಕು ಎನ್ನುವುದು ಕಂಬ ಹಿಡಿದು ಕೂತು ಭಾವ ಲಹರಿಯಲ್ಲಿ ಮುಳುಗುವುದು ಗಮನಾರ್ಹ. ತಾಯಿಯ ವಿಚಾರ ಕ್ರಿಯೆಗಳೆಲ್ಲ ಬಸವರಾಜಪ್ಪನಲ್ಲಿ ತಾತ್ಸಾರ ಹುಟ್ಟಿಸುವುದು, ತಲೆಮಾರುಗಳ ಜೀವನ ಕ್ರಮದ ಸಮಾಪ್ತಿಯ ಸೂಚನೆಯಾಗಿದೆ. ಕಂಬಗಳಿಗೆ ಮಕ್ಕಳ ತೊಟ್ಟಿಲ ತೂಗ ಬೇಕು ಜನರಿಗೆ ನೀರು, ಕಾಳು ನೀಡಿ ಸಹಕರಿಸಬೇಕು, ದಿಕ್ಕು ದೆಸೆ ಇಲ್ಲದವರಿಗೆ ಆಧಾರವಾಗಬೇಕು ಎತ್ತು,ಧನ,ಕರು ಪ್ರೀತಿಸಬೇಕು, ಭೂಮಿ ಪವಿತ್ರವಾದದ್ದು, ಕೃಷಿ ಗೌರವ ವೃತ್ತಿ ಎಂಬ ನೀಲಮ್ಮನ ವಿಚಾರಗಳನ್ನು ಮಗ ಪ್ರಶಿಸುತ್ತಾನೆ, ಅವಮಾನಿಸುತ್ತಾನೆ. ಪ್ರಕಾಶ ಇವುಗಳಿಂದ ಇನ್ನು ದೂರವಾಗಿದ್ದಾನೆ. ಈ ಮುಖಾಮುಖಿ ಸಂಘರ್ಷ ತಾರ್ಕಿಕ ಅಂತ್ಯ ಕಾಣುವುದು ಪ್ರಕಾಶ ಮತ್ತು ಬಸವರಾಜಪ್ಪ ಸೇರಿ ಮಾಡುವ ನೀರಿನ ಪ್ರಾಜೆಕ್ಟ್ನಲ್ಲಿ. ತಲೆಮಾರುಗಳಿಂದ ತಮ್ಮ ಜಮೀನಿನಲ್ಲಿದ್ದ ಕೆರೆಯನ್ನು ನೀಲಮ್ಮ ಮತ್ತು ಅವರ ಹಿಂದಿನವರು ಊರಿನವರಿಗೆಲ್ಲ ಉಪಯೋಗಿಸಲು ನೀಡುತ್ತಾ ಬಂದಿದ್ದರು. ಕೆರೆ ಊರಿನವರಿಗೆಲ್ಲ ತುಂಬಾ ಪೂಜ್ಯ ಪವಿತ್ರವಾದುದು. ಅದು ತುಂಬಿದಾಗ ಊರಿನವರೆಲ್ಲರೂ ನೀಲಮ್ಮನೊಂದಿಗೆ ಸೇರಿ ಅದರ ಪೂಜೆ ಮಾಡುತ್ತಿದ್ದರು. ಅಂದು ಕೆರೆ ದಂಡೆಯಲ್ಲಿ ಸಾಮೂಹಿಕ ಭೋಜನ ನಡೆಯುತ್ತಿತ್ತು. ಊರವರ ಒಗ್ಗಟ್ಟು ಕೃಷಿ ಕಾರ್ಯ ಕುಡಿಯುವ ನೀರಿಗೆ ಸ್ನೇಹ ಸಹಕಾರಕ್ಕೆ ಕೆರೆ ಮಾತೃಕೆಯಾಗಿತ್ತು. ಅಂತಹ ಕೆರೆಯ ನೀರನ್ನು ಬಾಟಲಿಗೆ ತುಂಬಿ ಮಾರಿ ಹಣ ಮಾಡುವ ಪ್ರಾಜೆಕ್ಟ್ ಬಸವರಾಜಪ್ಪ ಪ್ರಕಾಶರದ್ದು. ಆಗ ಸಾರ್ವಜನಿಕ ಸ್ವರೂಪದಲ್ಲಿದ್ದ ಕೆರೆ ಮುಂದೆ ಖಾಸಗಿ ಒಡೆತನ ಪಡೆಯುತ್ತದೆ. ನೀರನ್ನು ಶುದ್ಧ ಮಾಡಲು ಕೆರೆ ದಂಡೆಯ ನೂರಾರು ಗಿಡ ಮರಗಳನ್ನು ಕಡಿದು ಹಾಕಲಾಗುತ್ತದೆ. ಆ ಗಿಡಗಳ ಬಗ್ಗೆ ಗ್ರಾಮೀಣರಿಗೆ ಜೀವ ಭಾವದ ಸಂಬಂಧವಿದೆ. ಹೀಗೆ ಬಿರು ಬಿಸಿಲಿನ ಒಡಲಲ್ಲಿ ಮಾನವೀಯ ಮತ್ತು ಸಹಕಾರದ ಜೀವನ ಕ್ರಮ ರೂಡಿಸಿಕೊಂಡು ಪ್ರಕೃತಿಯನ್ನು ಅವಲಂಬಿಸಿ ಬಾಳಿ ಬದುಕಿದ್ದ ಹಳ್ಳಿಯ ಬದುಕು ಆಧುನಿಕವಾಗುತ್ತದೆ. ಮಾರುಕಟ್ಟೆಗೆ ಪರಿವರ್ತನೆಯಾಗಿ ಬಿಡುತ್ತದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಧಾರದ ಹೆಸರಲ್ಲಿ ಬರುವ ಇಂತಹ ಪ್ರಾಜೆಕ್ಟ್ ಗಳ ಹಿಂದಿರುವ ನ್ಯಾಯ ವಂಚನೆ, ಮೋಸ ,ರಾಜಕೀಯ ಭ್ರಷ್ಟತೆ, ಮೈತ್ರಿ, ಲಾಭಕೋರತನಗಳನ್ನು ಇಲ್ಲಿ ಸಂಕ್ಷಿಪ್ತ ಚಿತ್ರಣದಲ್ಲಿ ಧ್ವನಿ ಪೂರ್ಣವಾಗಿ ಬಿಂಬಿಸಲಾಗಿದೆ. ಆಧುನಿಕ ವಿದ್ಯಾಭ್ಯಾಸ ಮತ್ತು ಸ್ವಾರ್ಥ ರಾಜಕೀಯಗಳು ಸೇರಿದಾಗ ತಂತ್ರಜ್ಞಾನ ಸಂಪರ್ಕ ಸಾಧ್ಯತೆಗಳು ವಿಸ್ತರಿಸಿದಾಗ ಉಂಟಾಗುವ ಇಂತಹ ಅನಾಹುತಗಳನ್ನು ಇಂದು ದೇಶದ ಎಲ್ಲೆಡೆ ಕಾಣಬಹುದು. ಗ್ರಾಮಗಳು ಬದಲಾಗುತ್ತಿರುವ ವೇಗದಲ್ಲಿ ಇದೆಲ್ಲಾ ಸೇರಿದೆ. ಸರಕಾರದ ಶುದ್ಧ ನೀರು ಕುಡಿಯುವ ಯೋಜನೆ ಬನ್ನಿಪುರದ ಬದುಕನ್ನು ಬದಲಿಸಿತು. ಕೆರೆಗೆ ಬೇಲಿ ಬಂತು ನೀರು ಖಾಸಗಿ ಒಡೆತನಕ್ಕೆ ಸೇರಿ ಮಾರಾಟದ ವಸ್ತುವಾಯಿತು. ಗಿಡ ಮರಗಳು ಕತ್ತರಿಸಲ್ಪಟ್ಟು, ಸಾಂಪ್ರದಾಯಿಕ ಕೃಷಿ ನಿಂತಿತು. ರೈತ, ಕೂಲಿಯವ ,ಎತ್ತು ,ಗಾಡಿ, ಕೆರೆ, ಗಿಡ, ಕುಂಟೆ, ಬಳ್ಳಿ ,ಬಡಿಗರ ಶಾಲೆ, ಕಮ್ಮರ ಸಾಲೆಗಳೆಲ್ಲ ಅರ್ಥ ಕಳೆದುಕೊಂಡು ಪಳೆಯುಳಿಕೆಗಳಾದವು. ಬಡಿಗರ ಶಾಲೆಯಲ್ಲಿ ಜನರು ಕುಳಿತು ಒಕ್ಕಲುತನದ ಕೂರಿಗೆ ದಿಂಡು ಸರಿ ಮಾಡಿಸುತ್ತಿದ್ದ ಚಿತ್ರ, ಭೀಮ ಪಕ್ಕದೂರಿಗೆ ಹೋಗಿ ಕಮ್ಮಾರನಲ್ಲಿ ರಿಪೇರಿ ಮಾಡಿಸಿದ ಚಿತ್ರ, ಇಂತಹ ಅನೇಕ ಚಿತ್ರಗಳು ಪ್ರಕಾಶ ಬಸವರಾಜಪ್ಪನ ಪ್ರಾಜೆಕ್ಟ್ ನಲ್ಲಿ ಬಣ್ಣಗಟ್ಟುವುದನ್ನು ಕಾದಂಬರಿ ಚೆನ್ನಾಗಿ ಧ್ವನಿಸುತ್ತದೆ.

ಕೆಲವು ವಿಮರ್ಶಕರು ಭೀಮನು ಕಾದಂಬರಿಯ ಕೇಂದ್ರ ಪಾತ್ರ ಕಥನ ಅರಿವಿನಿಂದ ಹೊಮ್ಮಿದೆ ಎಂದಿರುವರು. ಆದರೆ ನಿಜಕ್ಕೂ ಹಾಗಿಲ್ಲ. ಬಿಸಿಲು, ಸಾವು, ಕೃಷಿ ಸಂಸ್ಕೃತಿ ಸಾಮುದಾಯಕ ಬದುಕು ಶರಣರ, ತತ್ವಪದಕಾರರ ದರ್ಶನಗಳ ಎದುರಲ್ಲಿ ಭೋಗ ಸುಖಗಳ ಆರ್ಥಿಕ ಚಿಂತನೆ ನಡೆಸುವ ಮುಖಾಮುಖಿಯಲ್ಲಿ, ಭೀಮನಂತೆ ನೀಲಮ್ಮ ನಾಗಪ್ಪಗೌಡ ಮತ್ತು ಬಸಯ್ಯತಾತರು ಪಾರಂಪರಿಕ ಬದುಕಿನ ಅವಸಾನವನ್ನು ಕಾಣುತ್ತಿದ್ದಾರೆ. ಈ ನಾಲ್ಕು ಪಾತ್ರಗಳು ಕೇಂದ್ರ ಪ್ರಜ್ಞೆಗೆ ಸಲ್ಲುತ್ತವೆ. ಭೀಮ ಅಸ್ಪೃಶ್ಯ ಮತ್ತು ಆದರ್ಶವಾದಿ ಯುವಕ ಒಡೆಯರಲ್ಲಿ ನಿಯತ್ತಿನಿಂದ ದುಡಿದು ಕೃಷಿಯ ಹಾಗೂ ಹೋಗುಗಳಲ್ಲಿ ಮುಳುಗಿ ಬರಲಿರುವ ಅಪಾಯಗಳನ್ನು ತನ್ನ ಕನಸುಗಳ ಮೂಲಕ ಕಾಣುವ ಇತರರಿಗೆ ಸೂಚಿಸುವ ವಿಶೇಷ ಶಕ್ತಿ ಹೊಂದಿದ್ದಾನೆ. ಅವನಿಗೆ ಆಗೀಗ ಕಾಣಿಸುವ ಹದ್ದು ಶಕ್ತಿಶಾಲಿ ಸಂಕೇತ ನಿಜ. ಅದು ತುಸು ಧಾರಾಳವಾಗಿ ಬಂದಿದೆ ಎಂಬುದೂ ನಿಜ. ಆ ಹದ್ದು ಗ್ರಾಮೀಣರ ಸಣ್ಣ ಪುಟ್ಟ ಸಂತೋಷದ ತಾಣಗಳಿಗೆ ಎರಗುವ ಭವಿಷ್ಯದಲ್ಲಿ ಗ್ರಾಮೀಣರ ನೆಮ್ಮದಿಯನ್ನು ಕುಕ್ಕಿ ತಿನ್ನುವ ಸೂಚನೆಯ ಸಂಕೇತವಾಗಿದೆ.  ಅದಕ್ಕಾಗಿ ಒಂದು ಸಲ ಹದ್ದು ಭೀಮನಿಗೆ ಬಸವರಾಜಪ್ಪನ ಕುರಿತು ಹೀಗೆ ಹೇಳುತ್ತದೆ `ನಿನಗೆ ಗೊತ್ತಿಲ್ವೋ ಆತ ಭೂಮಿನ ತಲೆಕೆಳಗೆ ಮಾಡ್ತಾನ, ಆಕಾಶವನ್ನು ಗಾಳಿಪಟ ಮಾಡ್ತಾನ, ಚುಕ್ಕಿಗಳನ್ನು ಹುಡಿಯಲ್ಲಿ ಕಟ್ಟಿಕೊಂಡು ಕೆರೆ ನೀರೆಲ್ಲ ಕುಡಿದು ತೇಗತನ, ಇದೆಲ್ಲ ನಿನ್ನಿಂದ ನಿನ್ನ ಗೌಡಸಾನಿಯಿಂದ ಮಾಡಾಕ ಆಗದಿಲ್ಲ ಅದಕ್ಕೆ ಗೌಡ ಬರೋದು ಕಾಯಕತ್ತೀನಿ’ ಇದು ಮುಂದಿನ ಘಟನಾವಳಿಗಳಿಗೆ ಭಾಷ್ಯವಾಗಿದೆ.

ಕಾದಂಬರಿಯ ಎರಡು ಆಸಕ್ತ ಪೂರ್ಣ ಅಂಶಗಳೆಂದರೆ ಒಂದು ರಾಯಚೂರು ಸೀಮೆಯ ಗ್ರಾಮ ಭಾಷೆಯ ಬಳಕೆ ಮತ್ತು ಭೀಮನ ಪ್ರಣಯವೃತ್ತಂತಾದ ಮಾರ್ದವತೆಗಳು. ದೇಸಿ ಭಾಷೆಯ ಸೊಗಡು, ಇಲ್ಲಿ ಎದ್ದು ಕಾಣುತ್ತದೆ. ಪುಲಾರ, ಸಣ್ಣ ಮಾಡು, ನಂಬಲುತ್ತಾ , ಮಂಡಾಳು, ಮಕ್ಕ, ಹೆಂಡೆ, ಬಾರಿಗಿ, ದಗದ, ಎಂಬಲ, ಸಪ್ಪೆ, ಬೇಸಿ ತಿಪ್ಪಲ, ಐಸತ್ತು, ವಾಜಮಿ ಹೀಗೆ ನೆಲದ ನುಡಿಯ ಬಳಕೆ ಬಂದಿದೆ. `ಒಕ್ಕಲಾಗು’ ಎಂಬುದು ಬದುಕು ಎಂಬ ವಿಶಿಷ್ಟ ಅರ್ಥದಲ್ಲಿ ಬಂದಿರುವುದು ಕಂಡರೆ ಗ್ರಾಮ ಭಾಷೆಯ ಅರ್ಥ ಸಾಧ್ಯತೆ ಶಕ್ತಿ ಅರಿವಿಗೆ ಬರುತ್ತದೆ. ನೀಲಮ್ಮ, ಬಸಯ್ಯತಾತನ ಸಂವಾದ ನೀಲಮ್ಮ ಸರಸ್ವತಿಯರ ಸಂವಾದ ಭೀಮ ಮಹಾದೇವಯ್ಯ ಸಂವಾದಗಳಲ್ಲಿ ಗ್ರಾಮೀಣದ ಭಾಷಾ ಸಾಮರ್ಥ್ಯ ತುಂಬಿಕೊಂಡಿದೆ. ನಿರೂಪಕರು ನೀಡುವ ಬಿಸಿಲಿನ ಝಳದ ವರ್ಣನೆ ರಾತ್ರಿ ಬೆಳದಿಂಗಳ ವರ್ಣನೆ ಮಳೆ ಬೀಳುವ ವರ್ಣನೆಗಳು ಭಾಷಿಕವಾಗಿ ಸತ್ವ ಪೂರ್ಣವಾಗಿವೆ.

ಪಾತ್ರಗಳ ಸಂವಾದ ಮತ್ತು ನಿರೂಪಕರ ನಿರೂಪಣೆ ಎರಡು ನೆಲದ ಭಾಷೆಯಲ್ಲಿ ರೂಪುಗೊಳ್ಳುವ ಕಾರಣ ಕಥನವು ಭಾಷಿಕವಾಗಿ ವಿಶಿಷ್ಟ ಆಕೃತಿ ಪಡೆದಿದೆ. ಇದನ್ನು ನೀಲಮ್ಮ ಭೀಮನ ಸಾಮಾನ್ಯ ದಿನನಿತ್ಯದ ಮಾತಿನಲ್ಲಿಯೂ ಕಾಣಬಹುದು. `ಭೀಮ ಮನೆಯಾಗ ಕಾಲಿಟ್ಟಿದ್ದೆ ದನ ಕರುಗಳು ಕಿತ್ಕೊಂಡು ಹೋಗುವಂತೆ ಜಿಗಿದಾಡಿದವು ಏ....ಏ...ಹಂಗ್ಯಾಕ ಮಾಡುತ್ತೀರಿ ನಿಮ್ಮವ್ವನ, ಎಲ್ಲರ ಕಿತ್ಕೊಂಡು ಹೋದೀರಿ ಸುಮ್ಮ ನಿಂದ್ರಿ ನಾ ಬಂದಿನಲ್ಲ’ ಎಂದು ಎತ್ತುಗಳ ಸಮೀಪ ಹೋಗಿ ಮೈ ಮೇಲೆ ಕೈ ಆಡಿಸಿದ. `ನೋಡಲೋ ಭೀಮ ನೀ ಬಂದರ ಎತ್ತುಗಳು ಹೆಂಗ ಕುಣಿತಾವಾ ಒಂದಿನ ನೀ ಕಾಣದಿದ್ದರ ಅವು ನಿದ್ದೆ ಮಾಡದಿಲ್ಲಲೋ’ ಎಂದು ನೀಲಮ್ಮ ಚಹ ತಂದು ಕೊಟ್ಟಳು. ಹೌದು ನಾನ್ ಅಂದಿರ ಅವಕ್ಕ ಪ್ರಾಣ ಎಂದು ಒಂದು ಕಪ್ ಚಹಾ ಕುಡಿದು ಇನ್ನೊಂದು ಕಪ್ ಹಾಕಿಸಿಕೊಂಡ. ಬೀಮನಿಗೆ ಎರಡು ಕಪ್ ಚಹ ಬೇಕೆಂದು ನೀಲಮ್ಮ ಒಂದು ತಂಬಿಗೆ ತುಂಬಾ ಅವನಿಗಾಗಿ ಚಹ ಮಾಡಿರುತ್ತಿದ್ದಳು. ಅವನು ಕುಡಿದಂತೆ ಚಹ ಕೊಡುತ್ತಿದ್ದಳು. `ಯಮ್ಮಂಗೆ ಗೌಡ ಬಂದನಲ್ಲಂಗೆ ರಾಯಚೂರಿಗೆ ಹೋದನನಂಗೆ ಚಹ ಕುಡಿಯುತ್ತಾ ಕೇಳಿದ. `ಇಲ್ಲಲೋ ಮಕ್ಕಂಡಾನ  ನಿನ್ನೆ ಬರುವಾಗ ತಡವಾಗಿ ಬಂದ.’ ಹೌದಂಗೆ ಬಜನಿ ಪದ ಕೆಳಕಂಥ ಕುಂತದ್ದು ನೋಡಿದೆ ಆಗ ಮಾತಾಡಿಸಬೇಕೆಂದೆ ಮಂದ್ಯಾಗ ಬ್ಯಾಡಂತ ಸುಮ್ಮನೆ ಆದೆ’ ಹೆಂಡಗಸ ಬಳಿಯಲು ತಯಾರಾದ.’ ಮುಂದೆ ಅದೇ ಪ್ರಸಂಗದಲ್ಲಿ ಮುಂದುವರೆದು ಭೀಮ ದನಕರುಗಳ ಅಂಕಣಕ್ಕೆ ಹೋಗಿ ಕೆಲಸ ಮಾಡುವುದರ ವಿವರಗಳು ವಾಸ್ತವವಾಗಿ ಕಥನಕ್ಕೆ ಹೆಚ್ಚು ಸಹಜವಾಗಿವೆ. ಜೊತೆಗೆ ಆ ವಿವರ ಭಾಗ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಸುಬ್ಬಣ್ಣ ಹೆಗ್ಗಡೆ ದನಗಳ ಕೊಟ್ಟಿಗೆ ಹಂದಿ ಕೋಳಿ ಒಡ್ಡಿಗಳಲ್ಲಿ ಪಡೆವ ಅನುಭವವನ್ನು ನೆನಪಿಸುವಂತಿದೆ. ಎತ್ತುಗಳು ಭೀಮನ ಸ್ಪರ್ಶಕ್ಕಾಗಿ ಚಡಪಡಿಸುತ್ತಿದ್ದವು. ಭೀಮನಿಗೆ ತೃಪ್ತಿ ಅನಿಸಿತು’ ಎಂಬ ಭಾಗವದು. ಸುಡು ಸುಡುವ ನೆಲವು ದೀರ್ಘಕಾಲದಿಂದ ಮಳೆಗಾಗಿ ಕಾಯುತ್ತಿದೆ. ಜನರು ಮಳೆ ಬಂದಿತೆಂದು ನಿರೀಕ್ಷಿಸುತ್ತಿದ್ದಾರೆ ಇಡೀ ಗ್ರಾಮದ ಎಲ್ಲಾ ಜೀವಿಗಳ ಹಾರೈಕೆ ಫಲಿಸಿದಂತೆ ಬರುವ ಮಳೆಯ ಶಾಬ್ಧಿಕ ಚಿತ್ರಣವಿದು.

`ಗುಡುಗು ಸಿಡಿಲಿನ ಮಿಂಚಿನ ಸದ್ದು ಕೇಳಿದ್ದೆ ಊರುಕೇರಿ ಸಾವಿರಾರು ವರ್ಷಗಳ ಫಲವೋ ಎಂಬಂತೆ ಮೋಡದ ಧ್ವನಿಗೆ ಕಿವಿಯಾಗಿ ಕುಳಿತರು. ಗುಡುಗುಡು ಎಂದು ನಿಧಾನಕ್ಕೆ ಶ್ರುತಿ ಮಾಡಿಕೊಂಡು ಒಮ್ಮೆಲೇ ಮೋಡ ಸ್ಫೋಟಗೊಂಡಂತೆ ಗುಡುಗಿತು. ಗುಡುಗಿನ ಸದ್ದಿಗೆ ಭೂಮಿ ನಡುಗಿ ಜೀವಚರಗಳೆಲ್ಲಾ ಜೀವ ಕೈಯಲ್ಲಿ ಹಿಡಿದು ಮಿಂಚಿಗಾಗಿ ಕಾಯುತ್ತ ಕುಳಿತವು. ಹಸಿದು ಕಂಗೆಟ್ಟು ಬಾಯಾರಿ ಕುಳಿತಿದ್ದ ಭೂಮಿ ಮಳೆರಾಯಯನ ಸಮ್ಮಿಲನಕ್ಕೆ ದೇಹವನ್ನು ಹುರಿಗೊಳಿಸಿತು. ದೇಹ ದಾಹದಿಂದ ಬತ್ತಿದ ರಂದ್ರದ ಕವಾಟಗಳು ಸಸಿ ಬಿರಿವಂತೆ ತೆರೆದುಕೊಂಡವು. ತೇವ ಕಳೆದುಕೊಂಡು ಮರಗಟ್ಟಿದ್ದ ಮರ ಗಿಡ ಪ್ರಾಣಿ ಪಕ್ಷಿಗಳ ನಾಲಿಗೆಗಳು ಮೋಡದ ಕಡೆ ಮುಖ ಮಾಡಿದವು.’ ಮುಂಗಾರ ಮೊದಲ ಮಳೆಯ ಸ್ಥಿತಿ ವಾಸ್ತವವಾಗಿದೆ. ಮಲೆನಾಡಿನಲ್ಲಿ ಕರಾವಳಿಯಲ್ಲಿ ಬೀಳುವ ಮಳೆಯ ಚಿತ್ರಣ ಆಧುನಿಕ ಕನ್ನಡ ಕಥೆ ಕಾದಂಬರಿಗಳಲ್ಲಿ ಬಂದಿದೆ. ಅದಕ್ಕಿಂತ ಬಯಲು ಸೀಮೆಯ ಮಳೆಯ ಚಿತ್ರಣ ಭಿನ್ನವೇ ಆಗಿದೆ.

ಭೀಮನ ಪ್ರಣಯ ವೃತ್ತಾಂತ ಕಾದಂಬರಿಯಲ್ಲಿ ಹಿತಮಿತವಾಗಿ ಬಂದಿದೆ. ಭೀಮನನ್ನು ಕೇರಿಯ ಶಿವಬಸವ್ವ ತಾನಾಗಿ ಮೋಹಿಸಿ ಪ್ರೀತಿಸುತ್ತಿದ್ದಳು. ಬಣವೆ ಒಟ್ಟುವ ಕಾರ್ಯದ ದಿನ ಆಕೆ ಮರೆಯಲಿ ನಿಂತು ಬೀಮ ಬಂದಾಗ ತಾನಾಗಿ ಅಪ್ಪಿಕೊಂಡು ಮುದ್ದಿಸಿ ಆತನಿಗೆ ಪ್ರಣಯಕ್ಕೆ ಪ್ರೋತ್ಸಾಹಿಸುವಳು. ಅವರಿಬ್ಬರ ಪ್ರಣಯ ಎರಡು ಮೂರು ಪ್ರಸಂಗಗಳಲ್ಲಿ ರಭಸವಾಗಿ ಬಂದರೂ ಸೀಮಾ ರೇಖೆ ದಾಟುವುದಿಲ್ಲ. ಕಾದಂಬರಿಕಾರರು ಈ ಜೋಡಿಯ ಪ್ರಣಯದಾಟವನ್ನು ನೇರವಾಗಿ ಚಿತ್ರಿಸಿದಂತೆ ಭ್ರಮೆ ಕನಸು ವಾಸ್ತವ ಅವಾಸ್ತವದ ರೂಪದಲ್ಲಿ ಚಿತ್ರಿಸಿದ್ದು ಅದನ್ನು ಓದುಗರು ಹಲವು ಸ್ತರದಲ್ಲಿ ಗ್ರಹಿಸಬಹುದು. ದ್ಯಾಮವ್ವನ ಗುಡಿಗೆ ರಾತ್ರಿ ಮಲಗಲು ಬಂದಿದ್ದ ಭೀಮನ ಚಿತ್ರಣ ಹನ್ನಂದನೆಯ ಅಧ್ಯಾಯದಲ್ಲಿದೆ. ಮಲಗಬೇಕು ಎಂದಿದ್ದ ಆತನಿಗೆ ದ್ಯಾಮವ್ವನ ದರ್ಶನವಾಗುತ್ತದೆ. ಸಂವಾದ ಏರ್ಪಡುತ್ತದೆ. ಭೀಮ ಹಸಿವೆ, ಭಯ ಎಂದಾಗ ದ್ಯಾಮವ್ವ ಹೇಳುವಳು `ಭೀಮ ಒಂಟಿಯಾಗಿ ಇರಬಾಡಲೋ ನಿನಗೆ ಹಸಿವು ಆಗೇತಿ ಶಿವಬಸವ್ವ ನಿತ್ಯದ ಊಟಕ್ಕ ಕರಿಯಾಕತ್ತಾಳ ಹೋಗು.’ಈ ಮಾತು ಆ ಸಂದರ್ಭದಲ್ಲಿ ಧ್ವನಿ ರಮ್ಯವಾಗಿದೆ. ಹಸಿವು ಊಟ ಭಿನ್ನ ಅರ್ಥ ಪಡೆದಿದೆ. ಆದಿಮ ದೈವ ಶಕ್ತಿಯು ಆದಿಮ ಪ್ರವೃತ್ತಿಯನ್ನ ಸೃಷ್ಟಿ ಕ್ರಿಯೆಯನ್ನ ಸೂಚಿಸುತ್ತಿವೆ. ಭೀಮ ಹಸಿದು ಶಿವಬಸಮ್ಮನ ಮನೆಗೆ ಹೋಗಿ ಊಟ ಮಾಡಿ ಬರುವನು. ಊಟ ಮಾಡುವಾಗ ಶಿವಬಸಮ್ಮನನ್ನು ತುತ್ತಿನೊಂದಿಗೆ ಸೆಳೆದು ಸೇವಿಸಿದನೆಂಬ ಅನ್ಯಾರ್ಥ ನಿರೂಪಣೆ ಸೊಗಸಾಗಿದೆ. ಆತ ಮರಳಿ, ದ್ಯಾಮವ್ವನ ಗುಡಿಗೆ ತೆರಳಿದರೆ ಆಕೆ ಮನೆಯಲ್ಲಿ ಹಾಸಿಗೆಗೆ ಉರುಳಿದಳು. ಇಲ್ಲಿಂದ ಮುಂದೆ ಕಣ್ಣಿಗೆ ಕಣ್ಣು ಹೊತ್ತಲಿಲ್ಲ. ಧ್ಯಾಮವ್ವ ಕ್ಷಣ ಲೋಕದ ಉಸಿರನ್ನೆ ನಿಲ್ಲಿಸಿದಳು. ಈ ವರೆಗಿನ ಒಂದು ಭಾಗ ನಿರೂಪಕರ ಪ್ರತಿಭೆಗೆ ನಿದರ್ಶನವಾಗಿದೆ. ಆ ಪ್ರಣಯಿಗಳ ಮಿಲನ ಕನಸಿನಲ್ಲಿ ಜರುಗಿತೋ, ವಾಸ್ತವದಲ್ಲಿ ಜರುಗಿತೋ ಎಂಬುದರ ನಿರ್ಣಯವೇ ಸಾಧ್ಯವಾಗದ ಪ್ರತಿಮಾ ಬಣ್ಣನೆಯದು ಕಾದಂಬರಿಯ ಶಕ್ತಿಶಾಲಿ ಭಾಗಗಳಲ್ಲಿ ಅದೂ ಒಂದು.

ಇಡೀ ಕಾದಂಬರಿ ವಾಸ್ತವ ಅವಾಸ್ತವದ ಎಚ್ಚರ, ನಿದ್ರೆ, ಸ್ಮರಣೆ, ಮರೆವುಗಳಲ್ಲಿ ನಡೆಯುತ್ತಾ ಒಂದರೊಳಗೊಂದು ಸೇರಿದ ವಿಶಿಷ್ಟ ನಿರೂಪಣೆಯಾಗುತ್ತದೆ. ಭೀಮನ ಕನಸುಗಳ ಒಂದು ಲೋಕವಿದೆ. ಹಗಲು ರಾತ್ರಿ ಬರುವಾಗ, ಹೋಗುವಾಗ, ಕುಳಿತಾಗ ,ನಿಂತಾಗ ಅವನಿಗೆ ಕನಸು ಅರೆ ಕನಸು ಕಾಣಿಸುತ್ತದೆ. ಕಾದಂಬರಿಯ ಆರಂಭದಲ್ಲಿ ಮಲಗಿದ್ದ ಭೀಮನಿಗೆ ಬೆಳದಿಂಗಳ ಸೀರೆ ಉಟ್ಟಿದ್ದ ನೀಲಮ್ಮ ಗೌಡಸಾನಿ ಐದಾರು ಕೂಸುಗಳನ್ನು ಹೊತ್ತುಕೊಂಡು ಕರೆದು ಕೂಗುವ ಕನಸಿದೆ. ಬೆಳಗಿನ ಜಾವ ತೊಟ್ಟಿಲು ಹರಿದು ನೆಲಕ್ಕೆ ಬಿದ್ದಂತಹ ಕನಸಾಗುತ್ತದೆ. ಹಗಲು ಹೊತ್ತು ಬಂಡಿಯೇರಿಕೊಂಡು ಮರಳಿ ಊರಿಗೆ ಬರುತ್ತಿದ್ದ ಅವನಿಗೆ ಬಿಸಿಲಲ್ಲಿ ಬಸವರಾಜಪ್ಪ ಕುಣಿಯುವುದು ಕಾಣಿಸುತ್ತದೆ. ಎತ್ತು ಬಂಡಿಗಳನ್ನು ಆತ ಕಿತ್ತುಕೊಂಡ ಹಾಗಾಗುತ್ತದೆ. ಇನ್ನೊಮ್ಮೆ ಕುದುರೆಗಳೆಲ್ಲ ಓಡಿ ಬಂದು ಹೊಲದಲ್ಲಿ ಓಡಾಡಿ ಕುಣಿದಂತಾಗುತ್ತದೆ. ಹೀಗಾಗಿ ಭೀಮ ಸದಾ ಕಾಲ ಆತಂಕ ಭಯ ತಲ್ಲಣಗಳಲ್ಲಿ ಏನೋ ಭೀಕರವಾದುದು ಜರುಗಲಿದೆ ಎಂಬ ಚಿಂತೆಯಲ್ಲಿ ಒದ್ದಾಡುವುದು ಗಮನಾರ್ಹ.

ಕಾದಂಬರಿಯ ವಿಲಕ್ಷಣ ಚಿತ್ರವಾಗಿ ನೀಲಮ್ಮ ಸಿದ್ದಮ್ಮರು ಎರೆದುಕೊಳ್ಳುವ ಸಂಭ್ರಮವು ಬಂದಿದೆ. ಊರಲ್ಲಿ ಎರಡು ಸಾವುಗಳಾಗಿದ್ದವು. ಮಗ ಎಲ್ಲವನ್ನು ಕಡೆಗಣಿಸಿ ಮಾತಾಡಿದ್ದ. ಎದುರಿಗೆ ಪ್ರೀತಿ ಕಾಳಜಿ ತೋರುವ ಸಿದ್ದಮ್ಮ ಇದ್ದಳು. ಆಗ ನೀಲಮ್ಮ ಸ್ನಾನ ಮಾಡುವ ಪ್ರಿಯವಾದ ವಿಚಾರ ಹೇಳಿದರೆ ಸಿದ್ದಮ್ಮ ಸಂಭ್ರಮಿತಳಾಗುತ್ತಾಳೆ. ಆಕೆ ಎಣ್ಣೆ ಬಟ್ಟಲು ತರಿಸಿ ಸಿದ್ದಮ್ಮನ ತಲೆಗೆ ಮೈಗೆ ಚೆನ್ನಾಗಿ ಲೇಪಿಸಿ ಉಜ್ಜುತ್ತಾಳೆ. `ಎಣ್ಣೆ ಬಟ್ಟಲನ್ನು ಮೊಣಕಾಲು ಸಂಧಿಯಲ್ಲಿ ಇಟ್ಟುಕೊಂಡು ಸ್ವಲ್ಪ ಸ್ವಲ್ಪ ಕೂದಲು ಕೈಯಲ್ಲಿ ತಗೊಂಡು ನಿಧಾನಕ್ಕೆ ಒಂದೊಂದೇ ಹನಿ ಎಣ್ಣೆಯನ್ನು ಕೂದಲ ಸಂದಿಯಲ್ಲಿ ಬಿಟ್ಟಳು. ಒಂದೊಂದು ಹನಿ ಕೂದಲಿಗೆ ಎಣ್ಣೆ ಬಿದ್ದಂತೆ ಮೈಯಿಗೆ ಮೈ ಜುಮ್ ಎಂದು ಅಂಗಾಂಗಗಳ ರಂದ್ರಗಳಲ್ಲಿ ಬೆವರೊಡೆಯುತ್ತಿತ್ತು. ತೊಡೆಗಳು ಬಿಗಿದುಕೊಂಡು ಅಂಗಾಲುಗಳು ಹೂ ಬಿರಿದಂತೆ ಬಿರಿದವು. ಮೊಲೆ ತೊಟ್ಟುಗಳು ಮೊಗ್ಗಿನಂತಾಗಿ ಬಿರಿಯಲು ಹಾತೊರೆಯುತ್ತಿದ್ದವು. ಸಿದ್ದಮ್ಮ ನೀಲಮ್ಮನನ್ನು ತನ್ನ ತೊಡೆ ಮುಂದೆ ಕೂರಿಸಿಕೊಂಡು ಕೂದಲಿಗೆ ನಿಧಾನಕ್ಕೆ ಎಣ್ಣೆ ಹಚ್ಚಿದಳು. ಮೈ ಹಗುರಾದಂತೆ ಎನಿಸಿತು ಇಬ್ಬರೂ ಬೆತ್ತಲಾಗಿ ಬಚ್ಚಲಕ್ಕೆ ಇಳಿದರು. ಇಬ್ಬರೂ ಪರಸ್ಪರ ಮೈಮೇಲೆ ನೀರು ಹಾಕಿಕೊಂಡು ಮೈಯೆಂಬ ಮೈಯನ್ನ ಒಬ್ಬರಿಗೊಬ್ಬರು ನೀವಿಕೊಂಡರು. ಎಂಬಲನ್ನು ತಲೆಗೆ ಹಾಕಿ ತಿಕ್ಕಿಕೊಂಡು ನೀರಾಟವನ್ನೇ ಆಡಿದರು. ಇಬ್ಬರಿಗೂ ಹೊಸ ಜೀವ ಬಂದಂತಾಗಿ ಬಚ್ಚಲಿಂದ ಹೊರಬಂದರು. ದೇಹ ಅಮೃತದಲ್ಲಿ ಅದ್ದಿ ತೆಗೆದಂತಾಗಿತ್ತು.’ ಹೆಂಗಳೆಯರಿಬ್ಬರ ಇಂತಹ ಮನಸೋ ಸ್ನಾನ ಸಂಭ್ರಮ ಕನ್ನಡ ಕಾದಂಬರಿಗಳಲ್ಲಿ ವಿರಳ. ಈ ದೃಶ್ಯದ ಅನನ್ಯತೆಯನ್ನು ಓದಿಯೇ ಸವಿಯಬೇಕು. ಇಬ್ಬರ ಪ್ರೀತಿ ವಿಶ್ವಾಸದ ಅದ್ಭುತ ಸನ್ನಿವೇಶಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ. ಮನೋವಿಜ್ಞಾನದ ದೃಷ್ಟಿಯಲ್ಲಿ ಇದಕ್ಕೆ ಇನ್ನೊಂದು ಅರ್ಥವಿದೆ.

ಕಾದಂಬರಿಯು ಪ್ರಾದೇಶಿಕ ವಿಶಿಷ್ಟತೆಯನ್ನು ಅಲ್ಲಿ ಬದುಕಿ ಬಾಳುತ್ತಿರುವ ನಿರ್ದಿಷ್ಟ ಕಾಲದ ಜನರ ಸ್ಥಿತಿಗತಿಯನ್ನು ವಾಸ್ತವವಾಗಿ ತೆರೆದಿಡುತ್ತದೆ. ಕೃಷಿ ಕುಟುಂಬಗಳ  ಸಾಂಘಿಕ ಜೀವನದ ಚಿತ್ರಣ ಸಾಂಸ್ಕೃತಿಕವಾಗಿ ಕೂಡ ಬರುತ್ತದೆ .ನೀಲಮ್ಮನ ಮನೆ ನಾಲ್ಕು ತಲೆಮಾರುಗಳ ಹಿಂದೆ ಕಟ್ಟಿಸಲಾಗಿದೆ. ಎಂಬತ್ತು ಕಂಬದ ಎರಡು ದೊಡ್ಡ ಬಂಕಗಳ ಹಗೇವುಗಳ ಹೆಬ್ಬಾಗಿಲಿನ ವಿಶಾಲವಾದ ಮನೆ, ದನಗಳ ಎರಡು ಅಂಕಣಗಳು, ಕುಡತಿಗಳು, ಅಟ್ಟಗಳು, ಕೃಷಿ ಸಾಮಗ್ರಿಗಳಿಂದ ಹಿಂದೆ ತುಂಬಿ ಹೋಗಿತ್ತು. ಈಗ ಕುಟುಂಬದ ಜನರು ಕಡಿಮೆಯಾಗಿದ್ದಾರೆ. ದನ ಕರುಗಳು ಕಡಿಮೆಯಾಗಿವೆ. ಮನೆ ಮುಂದೆ ದೊಡ್ಡ ಹುಣಸೆ ಕಾರ ಬಂಡೆ ಇತ್ತು. ಮೂಲ ಮನೆಯವರು ಊರವರು ಅಲ್ಲಿ ಹುಣಸೆ ಕಾಯಿ ರುಬ್ಬುತ್ತಿದ್ದರು. ಸಾವಿನ ಸಂಸ್ಕಾರ ವರ್ಣನೆ, ಅಡುಗೆ ವಿವರಣೆ, ಕಮ್ಮಾರ ಬಡಿಗೇರ ಸಾಲೆಗಳ ಚಿತ್ರ ಹೀಗೆ ಹಲವು ಸಾಂಸ್ಕೃತಿಕ ವಿಚಾರಗಳು ಕಥನಕ್ಕೆ ಸೇರಿಕೊಂಡಿವೆ.

ಇಂತಹ ಗ್ರಾಮ ಜಗತ್ತನ್ನು ವಾಸ್ತವವಾಗಿ ಚಿತ್ರಣದಲ್ಲಿ ಹೆರೆತುಪ್ಪದ ರೂಪದಿಂದ ನೀಡಿರುವ ನಿರೂಪಕರು ಪ್ರಧಾನ ಬಿರುಕನ್ನ ನೀಡುವ ಬಗೆ ವಿಚಾರಾರ್ಹ. ಸುಮಾರು ಹತ್ತಾರು ಅಧ್ಯಾಯಗಳಲ್ಲಿ ಮುಂಬರುವ ಅನೂಹ್ಯ ಆಘಾತದ ಸುಳಿವುಗಳನ್ನ ನೀಡುತ್ತಾ ಬರುವ ಕಾದಂಬರಿ ಕೊನೆಯ ಮೂರು ಅಧ್ಯಾಯಗಳಲ್ಲಿ ಬದಲಾವಣೆಯ ನಿಜವಾದ ಮುಖಾಮುಖಿಯನ್ನು ಬಿಂಬಿಸುತ್ತದೆ. ಇಡೀ ಗ್ರಾಮ ಜೀವನ ಸಾಮೂಹಿಕವಾಗಿ ಸಹಾಯ, ಸಹಕಾರ, ಮಾನವೀಯ ಸ್ಪಂದನೆಗಳಿಂದ ನಡೆದಿದೆ. ಬಡವರಿಗೆ ಕೇರಿಯವರಿಗೆ ನೀಲಮ್ಮ ನೀಡುವ ಸಹಾಯ ಅಪಾರ. ಆದರೆ ಇದು ಫ್ಯುಡಲ್ ವ್ಯವಸ್ಥೆಯ ಉದಾರವಾದಿ ಮುಖ. ಜಮೀನುದಾರರು, ಜೀತದಾಳುಗಳು, ಊರವರು ,ಕೇರಿಯವರು ಎಲ್ಲಿಯೂ ಶ್ರೀಮಂತಿಕೆ, ಬಡತನ, ಮೇಲು ಜಾತಿ ,ಕೀಳು ಜಾತಿ ಎಂದು ಕಿತ್ತಾಡುವುದಿಲ್ಲ. ಹಳ್ಳಿಯ ಜನರು ಒಂದಾಗಿ ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸೌಜನ್ಯದಿಂದ ವರ್ತಿಸುವರು. ಆದರೆ ಇದು ಗುಣಾತ್ಮಕವಾಗಿ ಇರುವ ಪ್ರಬಲ ಅಂಶವಾಗಿರುವಂತೆ ಇನ್ನೊಂದು ಮುಖವನ್ನು ಮರೆಯಾಗಿಸಿರುವಂತ ಅಂಶವು ಆಗಿದೆ. ಸಾಧು ಸಜ್ಜನರು ಸಹ ಜೀವನದಲ್ಲಿ ಗಾಢವಾದ ವಿಶ್ವಾಸವಿರುವ ಜನರು ಇರುತ್ತಾರೆ ನಿಜ. ಆದರೆ ಇವರಿಗೆ ತೀರಾ ಭಿನ್ನರಾದ ಜನರು ನಮ್ಮ ಹಳ್ಳಿಗಳಲ್ಲಿ ಇರುತ್ತಾರೆ. ಅನ್ಯಾಯ, ಅಸಹನೆ ಮತ್ಸರ, ಕುತಂತ್ರ, ಕುಹಕ, ಹಾದರ, ಸುಳ್ಳು ಸ್ವಾರ್ಥಗಳಿಲ್ಲದ ಒಂದು ಹಳ್ಳಿಯನ್ನು ನಾವಿಲ್ಲಿ ಕಾಣಲಾರೆವು. ಇವು ಸಂಕೀರ್ಣ ಬದುಕಿನ ಒಳಗೆ ಇರುವ ಮಾನವ ಪ್ರವೃತ್ತಿಗಳು. ಇವುಗಳನ್ನು ದಾಟಿರುವ ಪ್ರಸ್ತುತ ಕಾದಂಬರಿಯ ಹಳ್ಳಿಗರು ಸರಳ ರೇಖೆಯ ಚಿತ್ರಣವೆನಿಸುವುದುಂಟು. ಜೀತದಾಳು ಭೀಮ ಜೀವಿಸುವುದು. ಕೇರಿಯವರು ಅಸ್ಪೃಶ್ಯತೆ ಬಡತನ ಒಪ್ಪಿಕೊಂಡಿರುವುದು ಪ್ರತಿಷ್ಠಿತ ಕುಟುಂಬಗಳ ಉದಾರತೆಯಿಂದ ಅವರು ಕೃತಜ್ಞರಾಗಿರುವುದು ವಾಸ್ತವವಾಗಬಹುದೇ? ಊರಿನ ಪ್ರತಿಯೊಬ್ಬರ ಆಸೆ ಆಕಾಂಕ್ಷೆ ಅನುಭವ ಜಗತ್ತುಗಳು ಭಿನ್ನವಾಗಿರುವುದರಿಂದ ಇಂತಹ ಸರಳರೇಖಾ ಮನುಷ್ಯ ವ್ಯವಹಾರ ವರ್ತನೆಗಳು ಸಂಭವನೀಯಲ್ಲ. ನಿದರ್ಶನಕ್ಕೆ ಸಿದ್ದಮ್ಮನನ್ನು ಗಮನಿಸಬಹುದು. ಗಂಡನ ಮನೆಯಿಂದ ಅನ್ಯಾಯ, ಶೋಷಣೆಗಳಿಗೆ ಒಳಗಾಗಿ ಬಂಜೆ ಕಳಂಕ ಹೊತ್ತು ಕಣ್ಣೀರಿನಲ್ಲಿ ದಿನಗಳೆಯುತ್ತಿದ್ದಳು. ಅವಳ ಕಷ್ಟ ಕೇಳಿದ ನೀಲಮ್ಮ ತನ್ನ ಒಂಟಿತನವನ್ನು, ಕೊರಗನ್ನು ಹಗುರವಾಗಿಸಲೆಂದು ಆಕೆಗೆ ಸಹಾಯವಾಗಲೆಂದು ಮನೆಯಲ್ಲಿ ಇರಿಸಿಕೊಳ್ಳುವಳು. ಸಿದ್ದಮ್ಮನ ಆಸೆ ಆಕಾಂಕ್ಷೆ ಸುಖ ದುಃಖದ ನಂತರದ ದಿನಗಳ ಒಳ ಜಗತ್ತು ಅನಾವರಣಗೊಳ್ಳುವುದಿಲ್ಲ. ಭೀಮ ಶಿವಬಸಮ್ಮರ ಪ್ರಣಯ ಸಂದರ್ಭಗಳು ಮಾರ್ಗವಾಗಿ ಕುತೂಹಲಕಾರಿಯಾಗಿ ಬಂದಿದೆ. ಅವರ ಪ್ರಣಯ ಬದುಕಿಗೆ ಅಲ್ಲಿ ಯಾವ ಅಡೆ-ತಡೆಗಳಿಲ್ಲ ಆತಂಕವಿಲ್ಲ. ಪ್ರೇಮ ಫಲಿಸಿ ವಿವಾಹವಾಗುವ ಎಲ್ಲಾ ಸರಾಗವಾಗಿ ಜರಗುತ್ತದೆ. ಈ ತೆರನ ಸರಾಗ ಅರ್ಥ ಸಾಧ್ಯವೇ? ತಲೆಮಾರುಗಳ ನಡುವಿನ ಅಂತರ ಸಹಜವಾಗಿದ್ದರೂ ಅಲ್ಲಿಯ ಬಿಕ್ಕಟ್ಟು ಬೆಳೆದು ಬರಲು ಗಾಢವಾದ ಕಾರಣಗಳು ಸರಿಯಾದ ಘಟನೆಗಳು ಕಂಡುಬರುವುದಿಲ್ಲ. ಕೆರೆ,ನೀರು ವಿಚಾರದಲ್ಲಿ ಮಾತ್ರ ಬಿಕ್ಕಟ್ಟಿನ ವ್ಯವಸ್ಥಿತ ಬೆಳವಣಿಗೆ ಬಂದಿದೆ.

ಗ್ರಾಮ ಜೀವನದ ಭವಿಷ್ಯ ಸರಿಯಾಗಿಲ್ಲ ಅಪಾಯಕಾರಿವಾಗಿದೆ ಎಂಬುದನ್ನು ಕಾದಂಬರಿ ಕನಸುಗಳು ಸಾವುಗಳು ಹದ್ದಿನ ಆಗಮನಗಳು ಸೂಚಿಸುತ್ತದೆ. ಜಾನಪದದಲ್ಲಿ ದುಃಶ್ಶಕುನಗಳು ಇದನ್ನು ನಿಭಾಯಿಸುತ್ತವೆ. ಇಂತಹ ಸಂಕೇತ ಸೂಚನೆಗಳು ನಿರೂಪಣೆಯ ಶಕ್ತಿಶಾಲಿ ಭಾಗವಾಗಿರುತ್ತದೆ. ಹದ್ದಿನ ಪ್ರವೇಶ ಕಾದಂಬರಿಯಲ್ಲಿ ಮತ್ತೆ ಮತ್ತೆ ಆಗುವುದರಿಂದ ಅರ್ಥಪೂರ್ಣ ಸಂಕೇತ ವಾಚ್ಯವಾಗಿದೆ. ಪರಿಣಾಮ ತೆಳುವಾಗುತ್ತದೆ, ದೊಡ್ಡಮ್ಮನ ಸಾವಿನ ಪ್ರಸಂಗವು ಊರಿನ ಜನರ ದುಃಖಕ್ಕೆ ಕಾರಣವಾಗಿದೆ. ಬಸಯ್ಯ ತಾತನ ಜಿಜ್ಞಾಸಿಗೆ ವಸ್ತುವಾಗಿದೆ. ಆಕೆಯ ಸಾವಿನ ನಂತರದಲ್ಲಿ ನಾಗಪ್ಪಗೌಡ, ಸರಸ್ವತಿ ಶೋಕ ಪೂರ್ಣರಾಗಿ ಬರುವುದುಂಟು. ಮುಂದಿನ ಕಥನದಲ್ಲಿ ಅವರ ಪ್ರಸ್ತುತ, ಅನಿರ್ವಾರ್ಯತೆ ಏನು ಎಂದು ಸಿದ್ಧವಾಗುವ ಬೆಳವಣಿಗೆ ಕಾಣಿಸದು. ಅವರು ಯಾವುದೇ ತೆರನಲ್ಲಿ ನಿರ್ಣಾಯಕ ಭೂಮಿಕೆಯಲ್ಲಿ ಕಂಡು ಬರುವುದಿಲ್ಲ.

ಕಾದಂಬರಿಯ ನಿರೂಪಣೆಯಲ್ಲಿ ನಿರೂಪಕರು ನೇರವಾಗಿ  ಬಾರದೆ   ಅಂತರ ಕಾಪಾಡಿಕೊಂಡು ಬಂದಿರುವುದು ಮಾತ್ರ ಗಮನಾರ್ಹವಾಗಿದೆ. ಗ್ರಾಮದ ಅವಸಾನ, ಪತನ ಎಂದು ಎಲ್ಲಿಯೂ ಸ್ಪಷ್ಟವಾಗಿ ತಿಳಿಸಿ ಕಳೆದು ಹೋಗುತ್ತಿರುವ ಜೀವನ ಕ್ರಮದ ಬಗೆಗೆ ಕಳಕಳಿ ಕಳವಳ ತೋರುವ ಕೊರಗುವಿಕೆ ಕಾಣಿಸುವುದಿಲ್ಲ. ಹಳೆಯದರ ಬೆನ್ನುಕಟ್ಟಿ ಹೊಸದನ್ನು ನಿರಾಕರಿಸುವ ಹಳೆಯದು ಹೊನ್ನ ಹೊಸದು ಹೆಂಚು ಎಂದು ತೋರುವ ಭಾವವಿಲ್ಲ. ವ್ಯವಸ್ಥೆಯೊಂದು ಪರಿವರ್ತನೆಗೆ ಸಿಲುಕಿದೆ, ಹಾಗಾಗಿ ಪಾರಂಪರಾಗತ ಜೀವನ ಶೈಲಿ ರೂಢಿಸಿಕೊಂಡ ನಂಬಿಕೆಗಳಿಗೆ ಆಘಾತವಾಗಿದೆ ಎಂಬ ಭಾವವಿದೆ. ಹಾಗಾಗಿ ಪ್ರಕಾಶ ಬಸವರಾಜಪ್ಪರು ಇಲ್ಲಿ ಖಳನಾಯಕರು, ದುಷ್ಟರು ಎಂದು ಚಿತ್ರಿತವಾಗುವುದಿಲ್ಲ. ಸ್ವತಃಹ ಬಸವರಾಪ್ಪ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗಿದ್ದಾನೆ. ಎಲ್ಲಾ ಅರ್ಹತೆ ಇದ್ದರೂ ಅರೆಕಾಲಿಕ  ಉಪನ್ಯಾಸಕನಾಗಿ ಕುಗ್ಗಿ ಹೋಗಿದ್ದಾನೆ. ಅವನ ಅವಸ್ಥೆ ನಮ್ಮ ನಾಡಿನ ದೇಶದ ನಿರುದ್ಯೋಗಿ ಅರೆ ಉದ್ಯೋಗಿ ಖಾಸಗಿ ಉದ್ಯೋಗಿಗಳ ತಲ್ಲಣಕ್ಕೆ ತೋರಬೆರಳಾಗಿದೆ. ವಿದ್ಯಾಭ್ಯಾಸ, ಆಧುನಿಕತೆಗಳು ತರುವ ಬದಲಾವಣೆಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಉತ್ತರವಿಲ್ಲ, ಪರಿಹಾರವಿಲ್ಲ. ಸರಕಾರಗಳು ರೂಪಿಸುವ ಯೋಜನೆಗಳು ಗ್ರಾಮ ಮಟ್ಟಕ್ಕೆ ಬರುವುದಿಲ್ಲ. ಬಂದರು ಸರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಕೆಲಸ ಮಾಡುವ ವಿಚಿತ್ರ ಪರಿಯನ್ನು ಈ ಕಾದಂಬರಿಯು ನೀಡಿದೆ. ಹಂಚಿಕೊಂಡು ತ್ತಿನ್ನು, ಪರರನ್ನು ತನ್ನಂತೆ ಕಾಣು ಎಂಬ ತತ್ವದಲ್ಲಿ ನಂಬಿಕೆ ಇರಿಸಿದ್ದ ಹಳ್ಳಿಗರ ಜಗತ್ತು ಆರ್ಥಿಕ ಲಾಭ, ಭೌತಿಕ ಸುಖಗಳ ಎದುರಲ್ಲಿ ತಬ್ಬಿಬ್ಬಾಗುತ್ತದೆ. ಹಳೆಯದನ್ನು ಬಿಡಲಾಗದೆ, ಹೊಸದನ್ನು ಜೀರ್ಣಿಸಿಕೊಳ್ಳಲಾಗದ ಸಂದಿಗ್ಧ ಪರಿಸ್ಥಿತಿ ಭಾರತೀಯ ಹಳ್ಳಿಗಳ ಸ್ವರೂಪವನ್ನು ಅಂದಗೆಡಿಸಿದೆ. ಹಿಂದಿನ ನಿಧಾನದ, ವಿರಾಮದ ಜೀವನ ಕ್ರಮ ವೇಗ ಪಡೆದು ಓಡುವುದೊಂದೇ ಕರ್ಮ ಎಂಬಂತಾಗಿದೆ. ಅಜ್ಜಿ ಸತ್ತರೂ ಪ್ರಕಾಶ ಬಾರದಿರಲು ಅವನ ಪರಿಸ್ಥಿತಿ ಒತ್ತಡ ಕೆಲಸ ಸ್ಪರ್ಧೆಗಳ ಕಾರಣವಾಗಿರುವುದನ್ನು ಗಮನಿಸಬಹುದು. ಒಡಲುಗೊಂಡವರಲ್ಲಿ ಕಾಲಚಕ್ರದ ಚಲನೆಯಲ್ಲಿ ತಿರುಗುತ್ತಿದ್ದಾರೆ  ಯಾಕೆ ಎಂಬುದು ಗೊತ್ತಿಲ್ಲದೆ.

ಕಾದಂಬರಿಯ ಮುಕ್ತಾಯ ಮಾತ್ರ ತುಂಬಾ ಅರ್ಥಪೂರ್ಣ ಎನ್ನಬೇಕು. ಕೆರೆಗೆ ಬೇಲಿ ಹಾಕಿ, ಗಿಡ ಕಡಿದು, ನೀರು ಮಾರಾಟವಾಗುವುದು ನಿರ್ಧಾರವಾದಾಗ, ಬಸಯ್ಯತಾತ, ನೀಲಮ್ಮ, ಊರವರು, ಕೇರಿಯವರು ತೋರುವ ಪ್ರತಿಕ್ರಿಯೆ ವಿಚಿತ್ರವಾದುದು. ಮಳೆಯ ರಭಸಕ್ಕೆ ತುಂಬಿದ ಕೆರೆ, ಸುತ್ತಲಿನ ಗಿಡ ಮರಗಳು ಇನ್ನು ಸಾರ್ವಜನಿಕ ಉಪಯೋಗಕ್ಕೆ ಹಿಂದಿನಂತೆ ಮುಕ್ತವಾಗಿರುವುದಿಲ್ಲ. ಎಂದು ತಿಳಿದಾಗ ಎಲ್ಲರೂ ಗರಬಡಿದು ಕುಳಿತರು. ಆಗ ಬಸಯ್ಯತಾತ 'ಬಯಲಿಗೆ ಗೋಡೆಯ ಕಟ್ಟಿದರೋ, ಮಳೆಗಾಲ ಸೆರೆಯ ಹಿಡಿದಾರೋ' ಎಂಬ ಅರ್ಥಪೂರ್ಣ ತತ್ವಪದ  ಹಾಡಿ ಅವರನ್ನು ಸಾಂತ್ವಾನ ಮಾಡಲು ಪ್ರಯತ್ನಿಸುತ್ತಾನೆ. ಹಾಡಿದ ನಂತರ ಸ್ವತಃ ಅವನಿಗೆ ಮನಸ್ಸು ಸಮಾಧಾನ ಆಗದೆ ಹೀಗೆ ಹೇಳುವನು "ನೀಲಮ್ಮ ಇನ್ನಾ ನಮಗಾ ಕೆರೆ ನೀಗೋದಿಲ್ಲ. ಮರ ತೆಗೆದು ಗೋಡೆ ಕಟ್ಟೋದಕ್ಕಿಂತ ಮುಂಚೆ ಒಮ್ಮೆ ಕೆರೆ ದಂಡೆ ಮ್ಯಾಲಮಕ್ಕಬೇಕು ಅನಿಸ್ತದ. ನಾನು ಕೆರೆಗೆ ಹೋತಿನವ್ವಾ. ಇವತ್ತು ಅಲ್ಲೇ ಮಕ್ಕಂತೀನಿ"‌ ಎಂದು ಹೇಳಿ ಕೆರೆಯ ಕಡೆಗೆ ಹೊರಟರು. ಉಳಿದವರೂ ಅವನನ್ನು ಅನುಸರಿಸುತ್ತಾರೆ. ನೀಲಮ್ಮ, ಸಿದ್ದಮ್ಮ, ಭೀಮ, ಶಿವಬಸವ್ಮ, ಅತ್ತ ಸಾಗುವರು. ತಾವೇ ಹಿಂದೆ ನೆಟ್ಟ ಗಿಡದ ಕೆಳಗೆ ಬಸಯ್ಯತಾತ ಮಲಗಿದರೆ, ಭೀಮ ಶಿವಬಸವ್ವ ಇನ್ನೊಂದು ಗಿಡದ ಕೆಳಗೆ, ನೀಲಮ್ಮ, ಸಿದ್ದಮ್ಮ ಮತ್ತೊಂದು ಗಿಡದ ಕೆಳಗೆ ಮಲಗುವರು. ಆಗಲೂ ಭೀಮನಿಗೆ ಕನಸಾಗುತ್ತದೆ; ಹದ್ದು ಗಿಡಗಳನ್ನೆಲ್ಲ ಮುರಿದು ಬೆಂಕಿ ಹಚ್ಚಿ ಅದರ ಉರಿಯಲ್ಲಿ ನೀಲಮ್ಮ ಮತ್ತು ಬಸಯ್ಯ ತಾತನನ್ನು ಎತ್ತಿ ಹಾಕಿದಂತಾಗುತ್ತದೆ. ಗಾಬರಿಯಿಂದ ಎದ್ದು ಕೂತ ಆತ, ರಾತ್ರಿಯ ನೀರವತೆಯಲ್ಲಿ ಎಲ್ಲರೂ ಮಲಗಿದ್ದನ್ನು ಕಂಡು ಪಕ್ಕದ ಶಿವಬಸವ್ವನನ್ನು  ಅಪ್ಪಿಕೊಂಡು ಮಲಗುವಲ್ಲಿ ಕಾದಂಬರಿ ಮುಕ್ತಾಯ ಕಾಣುತ್ತದೆ. ಅವರು ಹಾಗೆ ಕೆರೆ ದಂಡೆಗೆ ಮಲಗುವುದು ಸಾತ್ವಿಕ ಪ್ರತಿಭಟನೆ, ಅನುಭಾವಿಕ ಪ್ರತಿಭಟನೆ ಎನ್ನಿಸುತ್ತದೆ. ಮುಂದಿನ ಬದಲಾವಣೆಗೆ ಅದು ದೊಡ್ಡ ಸೂಚನೆಯಾಗಿದೆ.

ಕಾದಂಬರಿ ಗ್ರಾಮ ಬದುಕಿನ ಬದಲಾವಣೆಯನ್ನು, ಅದರ ಪ್ರಭಾವ ಪರಿಣಾಮಗಳನ್ನು ಮುಂದಿರಿಸುವಲ್ಲಿ ಯಶಸ್ಸು ಸಾಧಿಸಿದೆ. ನೆಲದ ಭಾಷೆ ಬದುಕುಗಳ ಅನಾವರಣದಲ್ಲಿ ಜನರ ಸಹ ಬಾಳ್ವೆ ಸಹಜ ಅನುಭವ ಪ್ರಜ್ಞೆಯ ಅಭಿವ್ಯಕ್ತಿಯಲ್ಲಿ ವಾಸ್ತವದ ದಾರಿ ಹಿಡಿದಿದೆ. ಗ್ರಾಮ ಸ್ವರಾಜ್ಯ ಗ್ರಾಮಾಭಿವೃದ್ಧಿಯಲ್ಲಿ ಇದ್ದ ಪರಂಪರಾಗತ ಮೂಲಾದರ್ಶಗಳು ಇಂದು ಪಲ್ಲಟಗೊಳ್ಳುತ್ತಿರುವ ಹೊರ ಜಗತ್ತಿನ ಪ್ರತಿನಿಧಿಯಾಗಿರುವ ಬನ್ನಿಪುರ ಇನ್ನೊಂದು ಗ್ರಾಮಾಯಣವಾಗಿದೆ. ಭೀಮನಂತಹ ಪಾರಂಪಾರಿಕ ಜ್ಞಾನದ ಕ್ರಿಯಾಶೀಲನನ್ನು  ಸಿದ್ದಮ್ಮನಂತಹ ನಂಬಿಗಸ್ತಳನ್ನು ಮರೆಯುವಂತಿಲ್ಲ. ರಾಜಶೇಖರ ಹಳೆಮನೆಯವರ 'ಒಡಲುಗೊಂಡವರು' ಮೊದಲ ಕಾದಂಬರಿಯಾಗಿದ್ದರೂ ಸೃಜನಶೀಲತೆಯ ಒಳ್ಳೆಯ ನೆಗೆತ ಸಾಧಿಸಿದೆ. ಅವರ ಮುಂದಿನ ಕಾದಂಬರಿಗಳನ್ನು ಓದುಗರು ಓದುವ ಒಡಲುಗೊಂಡು ನಿರೀಕ್ಷಿಸಿದರೆ ಅಚ್ಚರಿಯಿಲ್ಲ.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...