ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......


"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ, ಇಂತಹ ಹಲವು ಭಾವಸೃಷ್ಟಿಗಳೆಲ್ಲವೂ, ಪ್ರಾಣಿ ಪಕ್ಷಿಗಳ ಮಾತುಗಳ ಮೂಲಕ ಪ್ರಕಟಗೊಳ್ಳುವ ಮೂಲಕ ಮನೋವಿಶಿಷ್ಟ ಬಗೆಯ ಸಂದೇಶವನ್ನು ಈ ಕಥೆಗಳು ನೀಡಿದ ಅನುಭವವಾಗುತ್ತದೆ," ಎನ್ನುತ್ತಾರೆ ಮಂಡಲಗಿರಿ ಪ್ರಸನ್ನ. ಅವರು ಗುಂಡುರಾವ್ ದೇಸಾಯಿ ಅವರ `ಕಿರಿಕ್‌ಕೋತಿ ಹಾಗೂ ಇತರ ಮಕ್ಕಳ ಕತೆಗಳು’ ಕೃತಿ ಕುರಿತು ಬರೆದ ಅನಿಸಿಕೆ.

ಮಕ್ಕಳ ಸಾಹಿತ್ಯದ ಗೆಳೆಯ ಗುಂಡುರಾವ್ ದೇಸಾಯಿ ಅವರ ಹತ್ತು ಕತೆಗಳ ಮಕ್ಕಳ ಕಥಾ ಸಂಕಲನ `ಕಿರಿಕ್‌ಕೋತಿ ಹಾಗೂ ಇತರ ಮಕ್ಕಳ ಕತೆಗಳು’ ಓದುವ ಸಂದರ್ಭದಲ್ಲಿ ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು! ನಮ್ಮ ಮನೆಯ ಮೂಲೆಯೊಂದರಲ್ಲಿ ಗೂಡುಕಟ್ಟಲು ಹೆೆಣಗಾಡುತ್ತಿದ್ದ ಗುಬ್ಬಿಯೊಂದು ನಂತರ ಅದರಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತಿತ್ತು. ಗೂಡುಕಟ್ಟುವ ಸಂದರ್ಭದಲ್ಲಿ ಅದು ಪದೆ ಪದೆ ಮನೆಯಹೊರಗೆ, ಒಳಗೆ ಹಾರಿ ಬರುವುದು, ಹುಲ್ಲು-ಕಡ್ಡಿಗಳಿಂದ ಗೂಡುಕಟ್ಟಿ ಮತ್ತೆ ಹೊರಗೆ ಹಾರಿ ಹೋಗುವ ಈ ಎಲ್ಲ ಕ್ರಿಯೆಗಳು ಮಕ್ಕಳಾಗಿದ್ದ ನಮಗೆ ಒಂದು ಕುತೂಹಲಕ್ಕೆ ಕಾರಣವಾಗಿದ್ದವು.

ಮೊಟ್ಟೆಯಿಂದ ಹೊರಬಂದಗುಬ್ಬಿ ಮರಿಗಳು ಆಕಸ್ಮಾತ್ ಗೂಡಿನಿಂದ ಹೊರಬಿದ್ದರೆ ಬಾಲಕರಾದ ನಾವು ಅವನ್ನು ಮತ್ತೆಗೂಡಿಗೆ ಸೇರಿಸಿ ಧನ್ಯತಾ ಭಾವ ಹೊಂದುತ್ತಿದ್ದೆವು.ಆ ಮರಿಗಳನ್ನು ಹೇಗಾದರೂ ಮಾಡಿ ಉಳಿಸಬೇಕೆಂಬುದು ನಮ್ಮ ಭಾವನೆಗಳು.ಈ ಸನ್ನಿವೇಶವನ್ನುತಾಯಿಗುಬ್ಬಿ ಆಕಸ್ಮಾತ್ ಏನಾದರೂ ನೋಡಿ ಬಿಟ್ಟರೆ ಅದರ ಪರದಾಟಕ್ಕೆ ಮೊದಲು ಕೊನೆ ಇರುತ್ತಿರಲಿಲ್ಲ. `ನನ್ನ ಮರಿಗಳಿಗೆ ಈ ಮನುಷ್ಯ ಅಪಾಯಕಾರಿ....!’ಎನ್ನುವ ಸಂಕಟದಲ್ಲಿ ಅದು ಒಂದೆ ಸವನೆ ಅರಚಾದಾಡುತ್ತಿತ್ತು. ಪಕ್ಷಿ, ಪ್ರಾಣಿ ಹಾಗೂ ಮನುಷ್ಯ ನಡುವಿನ ಇಂತಹ ಅನೂಹ್ಯ ಸಂಬಂಧಗಳನ್ನು ನಾವು ಕಂಡಷ್ಟು ಬಹುಶಃ ಈಗಿನ ಮಕ್ಕಳು ಕಾಣಲು ಸಾಧ್ಯವೆ? ಈ ಪ್ರಶ್ನೆ ನನ್ನಲ್ಲಿ ಈಗಲೂ ಹಾಗೆ ಜೀವಂತವಾಗಿದೆ.ಆ ಕಾರಣದಿಂದಾಗಿಯೇ ಗುಂಡುರಾವ್ ದೇಸಾಯಿ ಅವರ ಇಲ್ಲಿನ ಹತ್ತು ಕತೆಗಳು ನನಗೆ ತೀರ ಮಹತ್ವ ಹಾಗೂ ವಿಶಿಷ್ಟ ಅನಿಸಿದ್ದು ಆ ಹಿನ್ನೆಲೆಯಿಂದ. ಇಲ್ಲಿಯ ಕಥಾ ಪ್ರಪಂಚ ಪ್ರಾಣಿ, ಪಕ್ಷಿಗಳನ್ನು ಕೇಂದ್ರವಾಗಿರಿಸಿಕೊಂಡು ರಚಿತಗೊಂಡಿದ್ದರೂ ಅವು ಮನುಷ್ಯನ ಗುಣಾವಗುಣಗಳನ್ನು ಪ್ರಾಣಿ-ಪಕ್ಷಿಗಳ ರೂಪಕಗಳಲ್ಲಿ ಹೇಳುವ ಕಥೆಗಳು ಎನಿಸುತ್ತವೆ.

ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ, ಇಂತಹ ಹಲವು ಭಾವಸೃಷ್ಟಿಗಳೆಲ್ಲವೂ, ಪ್ರಾಣಿ ಪಕ್ಷಿಗಳ ಮಾತುಗಳ ಮೂಲಕ ಪ್ರಕಟಗೊಳ್ಳುವ ಮೂಲಕ ಮನೋವಿಶಿಷ್ಟ ಬಗೆಯ ಸಂದೇಶವನ್ನು ಈ ಕಥೆಗಳು ನೀಡಿದ ಅನುಭವವಾಗುತ್ತದೆ. `ಬೆಕ್ಕಿಗೆ ಗಂಟೆ....?, ಮತ್ತೆಗೆದ್ದ ಆಮೆ, ಫ್ರಾಗಿ ಮದುವೆ, ಅಪ್‌ಡೇಟೆಡ್ ಕಾಗೆ, ಕತ್ತೆಯ ಕೂಗು, ನರಿಯ ಮದುವೆ, ಜಾಣ ಹಸು’ ಈ ಕತೆಗಳು, ಇತಿಹಾಸದ ಹಳೆ ಕತೆಗಳ ಅಥವಾ ಘಟನೆಗಳ ಮರುಸೃಷ್ಟಿ ಎನ್ನಬಹುದಾದರೂ, ಆ ಮರು ಸೃಷ್ಟಿಯಲ್ಲಿ ಒಂದಷ್ಟು ಹೊಸತನವಿದೆ. ವರ್ತಮಾನದ ಸಂಗತಿಗಳ ಹಲವು ವೈಚಿತ್ಯ, ಹಾಗೂ ಸತ್ಯಾಸತ್ಯತೆಗಳ ಕುತೂಹಲಗಳ ಮೂಲಕ ಈ ಕತೆಗಳು ವರ್ತಮಾನದ ಸಂದರ್ಭಗಳನ್ನು ಹೇಳುತ್ತಾ ಹೋಗುತ್ತವೆ. ಪ್ರಾಣಿ-ಪಕ್ಷ್ಷಿಗಳ ಮನುಷ್ಯರೂಪಿ ಸಂಭಾಷಣೆ, ಆಧುನಿಕ ಜಗತ್ತಿನ ತಳಮಳಗಳು ಈ ಸಂಭಾಷಣೆಯಲ್ಲಿ ಅಲ್ಲಲ್ಲಿ ಗರಿಗೆದರುತ್ತವೆ, ಹಾಗೆ ಮಧ್ಯದಲ್ಲಿ ಇಂಗ್ಲೀಷ್ ಪದಗಳ ಬಳಕೆ, ಸರಳ ನಿರೂಪಣಾ ಸಾಮರ್ಥ್ಯದಿಂದಾಗಿ ಈ ಕತೆಗಳು ವಿಶಿಷ್ಟ ಬಗೆಯವು ಎನಿಸುತ್ತವೆ.

ಬೆಕ್ಕಿಗೆ ಗಂಟೆಕಟ್ಟುವವರಾರು ಸನ್ನಿವೇಶದ ‘ಬೆಕ್ಕಿಗೆ ಗಂಟೆ....?’ ಕತೆಯಲ್ಲಿ ಇತಿಹಾಸವನ್ನು ಮರೆಯದ ಇಲಿಗಳು ಬೆಕ್ಕಿಗೆ ಗಂಟೆಕಟ್ಟುವಲ್ಲಿ ಹೂಡುವತಂತ್ರ ಇಲಿಗಳ ಒಗ್ಗಟ್ಟಿಗೆ ಸಾಕ್ಷಿಭೂತವಾಗುತ್ತದೆ.`ಮತ್ತೆಗೆದ್ದ ಆಮೆ’ ಕತೆಯಲ್ಲಿ ಅಂತಹುದೆ ಇತಿಹಾಸ ಮರುಕಳಿಸಿ ಧೂರ್ತ ಮೊಲ ಇಲ್ಲಿಯೂ ಸೋಲಿನ ರುಚಿ ನೋಡಬೇಕಾಗುತ್ತದೆ. ಇನ್ನು`ಪ್ರಾಗಿ ಮದುವೆ’ ಕತೆ ಹುಡುಗರಾಗಿದ್ದಾಗ ಚಿಣ್ಣರು ಆಡುತ್ತಿದ್ದ ಮಾತಿನಿಂದ ಪ್ರೇರೇಪಿತರಾಗಿ ರಚಿಸಿದಂತೆ ಕಾಣುವ ಲೇಖಕರು ಇದನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

`ಅಪ್‌ಡೇಟೆಡ್ ಕಾಗೆ’ ಕತೆಯಲ್ಲಿಯೂ ನರಿಯ ಸಣ್ಣತನದ ಗುಣ ಮತ್ತೊಮ್ಮೆ ಸಾಬೀತಾಗುವ ಕಾರಣ ಕಾಗೆ ವರ್ತಮಾನದ ಎಲ್ಲ ಬದಲಾವಣೆಗಳನ್ನು ತಿಳಿದುಕೊಂಡು ಬುದ್ಧಿಯಲ್ಲೂ ಅದು ಸಾಕಷ್ಟು ಚುರುಕಾಗಿದೆ ಎಂಬುದನ್ನು ತೋರಿಸುತ್ತದೆ. `ಕತ್ತೆಯ ಕೂಗು, ನರಿಯ ಮದುವೆ’ ಕತೆಗಳು ಬಾಲ್ಯದ ಘಟನೆಗಳು ನೆನಪು ಮಾಡಿಕೊಳ್ಳುವ ಓದುಗರಿಗೆ ಕಚಗುಳಿ ಇಡುತ್ತವೆ. ಇಂತಹ ಕತೆಗಳನ್ನು ಹಿರಿಯರೂ ಓದಿ, ಆನಂದಿಸಿ ಮಕ್ಕಳಿಗೆ ಅದರ ವಿವರಗಳನ್ನು ನೀಡಬಹುದಾಗಿದೆ.`ನಾಯಿಯ ಸ್ವಗತ, ಕಿರಿಕ್ ಕೋತಿ, ಕಾಗೆಯ ನ್ಯಾಯ’ ಕತೆಗಳು ತೀರ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿವೆ. ನಾಯಿ ಸ್ವಗತದಲ್ಲೆತನ್ನೆಲ್ಲ ವಿವರ ನೀಡುವುದು, ಕಂಪ್ಯೂಟರ್ ಮೆದುಳಿನ ಮೂಲಕ ಬಲಿಷ್ಠ ಪ್ರಾಣಿಯನ್ನು ನೈತಿಕವಾಗಿ ಸೋಲಿಸುವ ಕಿರಿಕ್‌ಕೋತಿ ಹಾಗೂ ಕಾಗೆಯ ನ್ಯಾಯ ಕತೆ ಕಾಗೆಗಳು ಕೂಡಿ ಬಾಳುವ, ಕೂಡಿತಿನ್ನುವುದನ್ನು ಮನುಷ್ಯರಿಗೆ ಮಾದರಿಯಾಗುವಂತಹ ವರ ನೀಡು ಎಂಬ ಬಹುದೊಡ್ಡ ಸಂದೇಶವಿದೆ. ಆದರೆ `ಜನರು ತೀರಿದ ತಮ್ಮ ಹಿರಿಯರನ್ನು ನಿನ್ನರೂಪದಲ್ಲಿ ನೋಡುವಂತಾಗಲಿ....ಅವರು ತೀರಿದ ದಿನದಲ್ಲಿ ನಿನಗಾಗಿ ಪರಿತಪಿಸುವಂತಾಗಲಿ’ ಎಂಬ ಘನವಾದ ಸಂದೇಶ ಮಕ್ಕಳಿಗೆ ಕಠಿಣವಾಗಬಾರದಷ್ಟೆ. ಉಳಿದಂತೆ ಈ ಕಥೆಯ ಒಟ್ಟಾರೆ ಆಶಯ ನಿಯಮಿತವಾಗಿದೆ.

`ನಮಗೂ ಹಕ್ಕಿದೆ’ಕತೆ, ಈ ಸಂಕಲನದ ವಿಭಿನ್ನ ಬಗೆಯ ಕತೆಗಾರಿಕೆಯಾಗಿದ್ದು, ಇದು ಸಂಕಲನದ`ಮಾಸ್ಟರ್ ಪೀಸ್’ಎನ್ನಬಹುದು. ಮಾಧ್ಯಮಗಳ ಕೋಲಾಹಲ ಇಲ್ಲಿದೆ. ಬ್ರೇಕಿಂಗ್ ನ್ಯೂಜ್ ನಿಂದಲೆ ಆರಂಭವಾಗುವ ಈ ಕತೆ ವನ್ಯಪ್ರಾಣಿಗಳೆಲ್ಲ ಕಾಡು ಬಿಟ್ಟು ನಾಡಿಗೆ ಬಂದು ಕೋಲಾಹಲವೆಬ್ಬಿಸುವ ವಾತಾವರಣ ಸೃಷ್ಟಿಸುತ್ತವೆ. ಆದರೆ ಈ ಪ್ರಾಣಿಗಳು ಮನುಷ್ಯರಿಗೆ ತೊಂದರೆ ನೀಡಲಿಲ್ಲ. ಇದು ನಿಜಕ್ಕೂ ಮನುಷ್ಯನಲ್ಲಿ ಮರೆಯಾಗುತ್ತಿರುವ ದಯಾಗುಣಕ್ಕೆ ಉದಾಹರಣೆಯಾಗುತ್ತದೆ. ಕೊನೆಯಲ್ಲಿ ನಾಡಿನ ಮುಖ್ಯಮಂತ್ರಿಗಳ ಜೊತೆ ನೇರ ಸಂವಾದದಲ್ಲಿ ಮಗು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬಂದದುರ ಕಾರಣವವನ್ನು ವಿಶ್ಲೇಸಿರುವ ರೀತಿ ಪರಿಸರ, ಕಾಡು ನಾಶ ಮಾಡುತ್ತಿರುವ ಮನುಷ್ಯತನ್ನಅವನತಿಗೆ ತಾನೇ ಕಾರಣ ಎನ್ನುವ ಸಂದೇಶ ನೀಡುತ್ತದೆ. ಮಾತ್ರವಲ್ಲ, ಮಕ್ಕಳಿಗಿರುವ ಸಂವೇದನೆ ತೋರಿಸುತ್ತದೆ. ಹಣ ಸಂಪಾದಿಸುವ ಏಕಮೇವ ಉದ್ದೇಶ, ಅತಿಯಾದ ಆಸೆ, ಸರ್ವನಾಶಕ್ಕೆ ಹಾದಿ ಎಂಬುದರ ಸಾಂಕೇತಿಕತೆಯನ್ನುಇಲ್ಲಿ ಸಾರಿದಂತಿದೆ.

ಒಟ್ಟಾರೆ, ಪ್ರಾಣಿ, ಪಕ್ಷಿಗಳ ಮೂಲಕವೆ ಹೇಳಲ್ಪಡುವ ಈ ಕತೆಗಳ ಸಂಭಾಷಣೆಗಳು ಆಪ್ತವಾಗಿದ್ದು, ಮಾತಿನ ನಡುವೆಬರುವ ಇಂಗ್ಲೀಷ್ ಶಬ್ದಗಳು ಅನಗತ್ಯ ಎನಿಸುವುದಿಲ್ಲ, ಕತೆಗಳಲ್ಲಿ ಅಲ್ಲಲ್ಲಿ ತುಂಬಿರುವ ನವಿರಾದ ಹಾಸ್ಯ ಮುದನೀಡುತ್ತದೆ. ಆದರೆ ಈ ಕತೆಗಳು ಪ್ರಬುದ್ಧ ಮನಸ್ಸಿನ ಮಕ್ಕಳಿಗೆ ಹೆಚ್ಚು ಆಪ್ತವೆನಿಸಿ ತೀರ ಚಿಕ್ಕಮಕ್ಕಳಿಗೆ ಜೀರ್ಣವಾಗುವುದು ಕಷ್ಟಸಾಧ್ಯವೇನೋ ಎಂಬ ಅನುಮಾನ ಮೂಡದಿರದು.ಆದರೂ, ಪಂಚತಂತ್ರದ ಕತೆಗಳ ಮಾದರಿಯಲ್ಲಿ ಇಲ್ಲಿ ಪಕ್ಷಿ ಮತ್ತು ಪ್ರಾಣಿಗಳ ಮೂಲಕವೆ ಗುಂಡುರಾವ ದೇಸಾಯಿ ಕತೆಕಟ್ಟಲು ಪ್ರಯತ್ನಿಸಿರುವುದು ಅವರ ಸೃಜಶೀಲತೆಗೆ ಹಿಡಿದ ಕನ್ನಡಿ. ತಮ್ಮ ಲಲಿತ ಪ್ರಬಂಧ ಹಾಗೂ ಮಕ್ಕಳ ಸಾಹಿತ್ಯದ ಮೂಲಕ ಈಗಾಗಲೆ ಹೆಸರಾಗಿರುವ ಗುಂಡುರಾವ್ ದೇಸಾಯಿ ಅವರಿಂದ ಇನ್ನಷ್ಟು ಉತೃಷ್ಟ ಬರಹಗಳು ಈ ನಾಡಿನ ಮಕ್ಕಳಿಗೆ ಸಿಗಲಿ ಎಂದು ಆಶಿಸುವೆ. ಕನ್ನಡ ಮಕ್ಕಳ ಸಾಹಿತ್ಯಲೋಕದ ಪರವಾಗಿ ಅವರಿಗೆ ಅಭಿನಂದನೆಗಳು!

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಕಲ್ಪನಾ ವಿಳಾಸ: ಅವಳ ಸಾವಿಗೆ ಅವಳೇ ಕಾರಣವಾದಳೆ?

13-12-2025 ಬೆಂಗಳೂರು

" ಸದಾ ಅಚ್ಚುಕಟ್ಟುತನ ಶಿಸ್ತು ಸೌಂದರ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಕಲ್ಪನಾ ವಿಲಾಸಿ ಜೀವನದಿಂದ ವಿಮುಖವಾಗಿ ಒ...