Date: 05-01-2025
Location: ಬೆಂಗಳೂರು
ಬೆಂಗಳೂರು: ನ್ಯಾಯ ಸ್ಪಂದನ ಬೆಂಗಳೂರು ಹಾಗೂ ಓದು ಗೆಳೆಯರ ಬಳಗ, ಬಾಗಲಕೋಟೆ ಇವರ ಸಹಯೋಗದಲ್ಲಿ ಅನಿಲ್ ಗುನ್ನಾಪುರ ಅವರ ‘ಸರ್ವೆ ನಂಬರ್ - 97’ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮವು 2025 ಜ.05 ಭಾನುವಾರದಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಕವಿ, ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು, "‘ಸರ್ವೆ ನಂಬರ್ - 97’ ಕೃತಿಯು ಬಿಡುಗಡೆಗೊಳ್ಳುವ ಮೊದಲೇ ಅರ್ಧ ಗೆದ್ದಿದ್ದು, ಇಲ್ಲಿನ ಒಂದು ಕತೆ ಕುವೆಂಪು ವಿಶ್ವವಿದ್ಯಾಲಯದ ಪಠ್ಯವಾಗಿ ಸೇರಲ್ಪಟ್ಟಿದೆ. ನಿರೂಪಣೆ ಹಾಗೂ ಭಾಷೆಯಿಂದಲೇ ಇವರ ಮೊದಲ ಕಥಾಸಂಕಲನ ಹೇಗೆ ಗೆಲುವನ್ನು ಪಡೆದಿದೆ. ಸುಲಲಿತ, ಸರಳವಾದ ಭಾಷೆ ಹಾಗೂ ಎಲ್ಲೂ ಸಿಕ್ಕುಗಳಿಲ್ಲದೇ ಓದಿಸಿಕೊಂಡು ಹೋಗುವುದೇ ಈ ಕಥಾ ಸಂಕಲನದ ವಿಶೇಷ. ಕತೆಗಳನ್ನು ಬೇಕಾದಷ್ಟು ವಸ್ತುಗಳ ಮೇಲೆ ಬರೆಯುತ್ತಾರೆ. ಅದು ಭ್ರಮೆ, ವಾಸ್ತ, ಸಹಜತೆ ಇವೆಲ್ಲವುಗಳ ಮೇಲೆ ಬೇಕಾದ ವಿಧದಲ್ಲಿ ಕತೆಗಳನ್ನು ರಚಿಸಬಹುದು. ಆದರೆ ಅದರಲ್ಲಿ ಬಳಸುವ ಭಾಷೆ, ಸಂವಹನ ಬಹಳ ಮುಖ್ಯವಾಗುತ್ತೆ. ಅದರಲ್ಲಿ ಅನಿಲ್ ಗುನ್ನಾಪುರ ಅವರು ತಮ್ಮ ಕೃತಿಯಲ್ಲಿ ಬಳಸಿಕೊಂಡಿರುವ ಭಾಷೆಯು ಕೃತಿಗೆ ಬೇರೆಯದ್ದೇ ಮೆರುಗನ್ನು ನೀಡಿದೆ. ಇನ್ನು ಇವರು ದಲಿತ ಬಂಡಾಯದ ಕತೆಯನ್ನು ಸುಮಾರು ನಾಲ್ಕು ದಶಕಗಳಿಂದ ಬರೆಯುತ್ತಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಇವರು ಹೇಳುವ ಪರಿಯ ಕಥಾನಕ ಕೂಡ ನಿಜಕ್ಕೂ ಮೆಚ್ಚುವಂತಹದ್ದು," ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲೇಖಕ, ಪತ್ರಕರ್ತ ರಘುನಾಥ ಚ.ಹ ಮಾತನಾಡಿ, "ಒಂದು ವರುಷಕ್ಕೆ ನಮ್ಮಲ್ಲಿ ಏಳೆಂಟು ಸಾವಿರ ಕೃತಿಗಳು ಬಿಡುಗಡೆಗೊಂಡರು, ಪುಸ್ತಕದ ಗುಣಮಟ್ಟ ಅನ್ನುವುದನ್ನು ನಾವು ಹುಡುಕುತ್ತಾ ಹೋದರೆ, ನಮಗೆ ನಿರಾಶಾದಾಯಕವಾಗುತ್ತದೆ. ನಾವು ಜನಸಂಖ್ಯಾ ಸ್ಫೋಟದ ನಿಯಂತ್ರಣದ ಕುರಿತು ಯೋಚನೆ ಮಾಡುವಂತೆ, ಈ ಸಾಹಿತ್ಯ ಕೃತಿಗಳ ನಿಯಂತ್ರಣದ ಬಗೆಯೂ ಮುಂದಿನ ದಿನಗಳಲ್ಲಿ ಅತ್ಯಂತ ಗಂಭೀರವಾಗಿ ಯೋಚನೆ ಮಾಡಬೇಕು ಎಂಬವುದು ನನ್ನ ಅನಿಸಿಕೆ. ಒಬ್ಬ ಬರಹಗಾರ ಯಾಕೆ ಬರೆಯುತ್ತಾನೆ, ಯಾರಿಗೋಸ್ಕರ ಬರೆಯುತ್ತಾನೆ ಎಂಬವುದನ್ನು ಆತ್ಮ ವಿಶ್ಲೇಷಣೆ ಮಾಡಬೇಕಾದ ಸಂದರ್ಭ ಇವತ್ತು ನಮ್ಮ ಮುಂದಿದೆ," ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜ.ನಾ. ತೇಜಶ್ರೀ ಮಾತನಾಡಿ, "ಲೋಕದ ಎಲ್ಲಾ ತಾಯಂದಿರ ಕೈಯಲ್ಲಿ ಕವಿತೆ, ಕತೆ ಅಥವಾ ಸೃಜನಶೀಲತೆಯ ಶಕ್ತಿ ಬಂದರೆ, ಅದು ಲೋಕದ ಅರ್ಧದಷ್ಟು ಕ್ರೌರ್ಯವನ್ನು, ಕೇಡನ್ನು, ದುಷ್ಟತನವನ್ನು ತಾನಾಗಿಯೇ ಕಮ್ಮಿ ಮಾಡಬಹುದು. ಇನ್ನು ಗುನ್ನಾಪುರ ಅವರ ಈ ಕತೆಗಳನ್ನು ಓದುತ್ತ ಹೋದಂತೆ ನಮ್ಮನ್ನು ನಾವು ಪ್ರಶ್ನಿಸಬಹುದಾದ ಕೆಲವೊಂದು ವಿಚಾರಗಳನ್ನು ನಮ್ಮಲ್ಲಿ ಮೂಡುತ್ತದೆ. ಹೀಗೆ ನಮ್ಮಲ್ಲಿ ಯಾವುದೇ ಕತೆಗಳು ಓದುವಾಗ, ಅನುಭವಿಸುವಾಗ ಬದಲಾವಣೆಯಾದರೆ ಅದರಲ್ಲಿ ಒಂದು ತಾತ್ವಿಕತೆಯ ಭಿತ್ತಿಯಿದೆ ಎನ್ನುವುದು ನನ್ನ ಅನಿಸಿಕೆ. ಅನಿಲ್ ಅವರ ಕತೆಗಳು ಇಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ನಾವು ಇವರ ಯಾವುದೇ ಕತೆಗಳನ್ನು ನೋಡಿದಾಗಲೂ ದಿನ ದಿನ ಬದಲಾಗುತ್ತಿರುವ ಗ್ರಾಮ ಜೀವನದ ಮಿಡಿತಗಳಿವೆ. ಒಟ್ಟಾರೆಯಾಗಿ ಇವರ ಕತೆಗಳನ್ನು ವಾಸ್ತವದ ಕನ್ನಡಿಯಂತಿವೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಲೇಖಕ ಅನಿಲ್ ಗುನ್ನಾಪುರ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಸುಧೇಂದ್ರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಮೂಲಕ ವೀಕ್ಷಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ..
ವಿಜಯ್ ರಾಘವೇಂದ್ರ ತಮ್ಮ 20 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ...
ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ...
ಮುಂಬಯಿ: ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದಿಂದ ಕೊಡಮಾಡುವ 2023-24ನೇ ಸಾಲಿನ ...
©2025 Book Brahma Private Limited.