Date: 04-12-2025
Location: ಬೆಂಗಳೂರು
ಮಕ್ಕಳಿಗೆ ದೆವ್ವ, ಭೂತ ಮುಂತಾದ ಸಂಗತಿಗಳನ್ನು ಹೇಳಬಾರದೆಂದು ಹೇಳುತ್ತ ಅವರಲ್ಲಿ ಮತ್ತಷ್ಟು ಹೆದರಿಕೆ ಹುಟ್ಟಿಸಿರುತ್ತೇವೆ. ಆದರೆ ಚಾರ್ಲಿ, ಚಾರ್ಲಿ, ವ್ಹೇರ್ ಆರ್ ಯೂ?’ ಎಂಬ ಕತೆಯನ್ನು ಹೇಳುತ್ತಲೆ ಮಕ್ಕಳ ಮನೋಭೂಮಿಕೆಯನ್ನು ತುಂಬ ಪರಿಣಾಮಕಾರಿಯಾಗಿ ತೆರೆದಿಡಲಾಗಿದೆ. ದೆವ್ವವನ್ನು ಕರೆಯುವ ಆಟ ಆಡುತ್ತ ಮಕ್ಕಳು ಅಪರಿಚಿತ ಲೋಕವೊಂದನ್ನು ನಮ್ಮ ಕಣ್ಣ ಮುಂದೆ ಧುತ್ತನೆ ನಿಲ್ಲಿಸಿಬಿಡುತ್ತಾರೆ. ಅದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎಂಬಂತೆ ಗುಂಡುರಾವ್ ದೇಸಾಯಿ ಅವರು ತುಂಬ ಮನೋಹರವಾಗಿ ಚಿತ್ರಿಸಿದ್ದಾರೆ.ಎನ್ನುತ್ತಾರೆ ಕಥೆಗಾರ ಹಾಗೂ ಅನುವಾದಕ ಡಾ. ಬಸು ಬೇವಿನಗಿಡದ. ಅವರು ಈ ಕೃತಿಗೆ ಬರೆದ ಮುನ್ನುಡಿ ಹೀಗಿದೆ ;
ಗುಂಡುರಾವ್ ದೇಸಾಯಿ ಅವರ 'ಚಾರ್ಲಿ, ಚಾರ್ಲಿ, ವ್ಹೇರ್ ಆರ್ ಯೂ?' ಕೃತಿ ಮನುಷ್ಯನ ಬಾಲ್ಯಾವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ. ಈ ಬಾಲ್ಯಾವಸ್ಥೆಯಲ್ಲಿ ಕೇವಲ ಮಕ್ಕಳು ಮಾತ್ರ ಭಾಗವಹಿಸಿಲ್ಲ. ಅವರೊಂದಿಗೆ ಅಷ್ಟೇ ಕ್ರಿಯಾಶೀಲತೆಯಿಂದ ದೊಡ್ಡವರು ಕೂಡ ಭಾಗವಹಿಸಿದ್ದಾರೆ. ಹಾಗಾಗಿ ಬಾಲ್ಯಲೋಕ ಅಥವಾ ಮಕ್ಕಳ ಕಣ್ಣಿಂದ ಕಂಡ ಲೋಕವೆಂಬುದು ಎಳೆಯರು ಹಾಗೂ ಹಿರಿಯರು ಇಬ್ಬರೂ ಸೇರಿರುವಂಥದ್ದು. ಈ ಪುಸ್ತಕದ ಒಂದು ವಿಶಿಷ್ಟತೆಯೆಂದರೆ ನಾವು ಬಹುತೇಕ ಅಲಕ್ಷ್ಯ ಮಾಡುವ ಹುಡುಗತನ ಅಥವಾ ಹುಡುಗಿತನವನ್ನು ಬಹಳ ಆಕರ್ಷಕವಾಗಿ ಮುನ್ನೆಲೆಗೆ ತಂದಿರುವುದು.
ಮನುಷ್ಯನ ಸೃಜನಶೀಲತೆ ಬಹಳ ದಟ್ಟವಾಗಿ ಬೆಳೆಯುವ ಕಾಲವೆಂದರೆ ಬಾಲ್ಯದ ಹುಡುಗತನ ಅಥವಾ ಹುಡುಗಿತನದ ವಯಸ್ಸು ಎಂಬುದನ್ನು ಕತೆಗಾರರು ಇಲ್ಲಿ ತಮ್ಮ ಕತೆಗಳ ಮೂಲಕ ಸಾಬೀತು ಮಾಡಿದ್ದಾರೆ. ಕುತೂಹಲ ತೋರಿಸುವುದು, ಪ್ರಶ್ನಿಸುವುದು, ಅದಮ್ಯ ಕ್ರಿಯಾಶೀಲತೆಯಿಂದ ಪುಟಿಯುವುದು, ಈಗಿಂದಿಗಲೇ ಕ್ರಿಯಾರೂಪಕ್ಕೆ ಇಳಿಸಲು ಹೊರಡುವುದು, ತಮ್ಮ ಲಕ್ಷ್ಯದಿಂದ ಹಿಂದೆ ಸರಿಯದಿರುವುದು ಇತ್ಯಾದಿ ಅಂಶಗಳು ಹುಡುಗತನ ಅಥವಾ ಬಾಲ್ಯತನದ ಕುರುಹುಗಳಾಗಿರಬಹುದು! ಹುಡುಗತನ ಎಂದರೆ ಉಡಾಳತನ ಅಲ್ಲವೆಂಬುದನ್ನೂ ಇಲ್ಲಿಯ ಕತೆಗಳು ಬಹಳ ಸ್ಪಷ್ಟವಾಗಿ ತೋರಿಸುತ್ತವೆ.
ಬಾಲ್ಯತನ ಅಥವಾ ಮನುಷ್ಯನ ಶೈಶವದ ಕಾಲವನ್ನು ಅದರ ಬಹುತೇಕ ಆಯಾಮಗಳೊಂದಿಗೆ ತೆರೆದಿಡುವ ಕೆಲಸವನ್ನು ‘ಚಾರ್ಲಿ, ಚಾರ್ಲಿ’ ಕೃತಿ ಮಾಡುತ್ತದೆ ಎನ್ನಬಹುದು. ಗುಂಡುರಾವ್ ದೇಸಾಯಿ ಅವರು ಈ ಸಂಕಲನದಲ್ಲಿ ಮುಂದು ಮಾಡುವ ಇನ್ನೊಂದು ಮುಖ್ಯ ಸಂಗತಿಯೆಂದರೆ ಕತೆಗಳನ್ನು ನಮ್ಮ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಗೆ ತಂದು ಅವುಗಳನ್ನು ಅಭಿವ್ಯಕ್ತಿಸಲು ನೋಡಿರುವುದು. ಯಾವುದನ್ನು ಹೇಳಲು ನಾವು ಹೆದರುತ್ತೇವೆಯೋ, ಅಥವಾ ಹಾಗೆ ಹೇಳಿದರೆ ಮಕ್ಕಳು ಕೆಟ್ಟು ಹೋಗುತ್ತಾರೆಂದು ಅಂಜುತ್ತೇವೆಯೋ ಅದನ್ನು ಅವರು ನಿರ್ಭೀತಿಯಿಂದ ಹೇಳಿರುವುದು! ಅಂದರೆ ಒಂದು ಸೀಮಿತ ಚೌಕಟ್ಟಿನಿಂದ ಕಥಾವಸ್ತುವನ್ನು ಆಚೆಗೆ ತರಲು ಪ್ರಯತ್ನಿಸಿದ್ದಾರೆ. ಮಕ್ಕಳಿಗೆ ಕತೆಗಳನ್ನು ದಾಟಿಸುವುದು ಎಂದರೆ ಮಕ್ಕಳೊಂದಿಗೆ ಹಿರಿಯರ ಓದುವಿಕೆ ಮತ್ತು ಪಾಲ್ಗೊಳ್ಳುವಿಕೆ ಮುಖ್ಯ ಎಂಬುದನ್ನು ಕತೆಗಾರರು ಇಲ್ಲಿ ಹೇಳುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ ಮಕ್ಕಳಿಗಾಗಿ ಎಂದೇ ಪ್ರತ್ಯೇಕವಾಗಿ ಸಾಹಿತ್ಯವನ್ನು ಬರೆಯಬೇಕಾಗಿಲ್ಲ. ಮಕ್ಕಳಿಗಾಗಿ ಕತೆ, ಕವಿತೆ, ಕಾದಂಬರಿ ಎಂದರೆ ಬರೀ ಮಕ್ಕಳು ಮಾತ್ರ ಓದಬೇಕೆಂದಿಲ್ಲ. ಬಾಲ್ಯದ ಸಂವೇದನೆ, ಸೂಕ್ಷ್ಮತೆ ಇರುವ ಕಥೆ, ಕವಿತೆ, ಕಾದಂಬರಿ, ಪ್ರಬಂಧ, ನಾಟಕ ಎಲ್ಲವೂ ಮಕ್ಕಳಿಂದ ಹಾಗೂ ಹಿರಿಯರಿಂದ ಓದಲ್ಪಡಬೇಕು. ಆವಾಗ ಮಾತ್ರ ಮುಂದಿನ ತಲೆಮಾರುಗಳು ಸಂವೇದನಾಶೀಲರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಿಂದ ಇಲ್ಲಿಯ ಕತೆಗಳನ್ನು ನೋಡುವುದು ಅಗತ್ಯ ಎನಿಸುತ್ತದೆ. ಮಕ್ಕಳಿಗಾಗಿನ ಬರವಣಿಗೆ ಎಂದರೆ ಮಕ್ಕಳತನದಿಂದ ಕೂಡಿರುವ ಜಗತ್ತು ಎಷ್ಟೊಂದು ವಿಸ್ಮಯ, ತಲ್ಲಣ, ತವಕ ಹುಟ್ಟಿಸುವಂತಹದ್ದೆಂದು ಮಕ್ಕಳು ಹಾಗೂ ಹಿರಿಯರು ಇಬ್ಬರೂ ಕೂಡಿಯೇ ಅನುಭವಿಸುವುದು!
‘ಹುಡುಗತನ’ ಮತ್ತು ‘ಹುಡುಗಿತನ’ವನ್ನು ಮುನ್ನೆಲೆಗೆ ತಂದು ಅದರ ವಿಶಿಷ್ಟತೆಯನ್ನು ಈ ಪುಸ್ತಕ ಬಣ್ಣಿಸುತ್ತದೆಯೆಂದು ನಾನು ಮೊದಲೇ ಹೇಳಿದೆ. ಅಂದರೆ ಬಾಲ್ಯಾವಸ್ಥೆಯಲ್ಲಿ ಮನುಷ್ಯ ಹಾದು ಬರುವ ಪ್ರಕ್ರಿಯೆಗಳನ್ನು ನಿರೂಪಿಸುವಂತಹ ಕೆಲಸವನ್ನು ಲೇಖಕರು ಮಾಡಿದ್ದಾರೆ. ಅದು ವಸ್ತು ಮತ್ತು ಕತೆ ಕಟ್ಟುವ ಕ್ರಿಯೆ ಎರಡರಲ್ಲೂ ಗೋಚರಿಸುತ್ತದೆ. ಅದನ್ನು ಸ್ಪಷ್ಟಪಡಿಸಲಿಕ್ಕೆ ಇಲ್ಲಿಯ ನಾಲ್ಕೈದು ಕತೆಗಳನ್ನು ನೋಡಬಹುದು. ‘ಪೇಪರ್ ಮತ್ತು ದೆವ್ವ’, ‘ಹ್ಯಾಪಿ ಬರ್ತಡೇ’, ‘ಚಾರ್ಲಿ, ಚಾರ್ಲಿ, ವ್ಹೇರ್ ಆರ್ ಯೂ?’ ಮುಂತಾದ ಕತೆಗಳಲ್ಲಿ ಸಾಂಪ್ರದಾಯಿಕ ಧೋರಣೆಯನ್ನು ಮುರಿದು ಆಧುನಿಕವಾಗಿರುವ ಮಕ್ಕಳ ಲೋಕವನ್ನು ಮುನ್ನಲೆಗೆ ತರುವ ಪ್ರಯತ್ನವಿದೆ. ಜೀವನದ ಮೌಲ್ಯಗಳನ್ನು ಉಳಿಸುವಲ್ಲಿ ಹಿರಿಯರಿಗಿಂತ ಮಕ್ಕಳೆ ಮುಂದಿರುತ್ತಾರೆ ಎನ್ನುವುದನ್ನು ಈ ಕತೆಗಳು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಹೇಳುತ್ತವೆ. ಅದರಲ್ಲೂ ಹುಡುಗಿಯರು ಎಷ್ಟೊಂದು ಪರೋಪಕಾರದ, ಸಹಾಯದ ಗುಣಗಳನ್ನು ಹೊಂದಿರುತ್ತಾರೆ ಎಂಬುದನ್ನು ‘ಪೇಪರ್ ಮತ್ತು ದೆವ್ವ’ ಕತೆ ಸಾಬೀತುಪಡಿಸುತ್ತದೆ. ಸಮು ಮತ್ತು ಅವನ ಗೆಳೆಯರ ಸಾಹಸ-ತುಂಟಾಟ-ಕಲ್ಪನಾಶಕ್ತಿಗಳನ್ನು ಚಿತ್ರಿಸುವುದರ ಜೊತೆಗೆ ಸಮೂನ ಅಕ್ಕನ ಮಾನವೀಯ ನೆಲೆಗಳನ್ನು ಲೇಖಕರು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಒಂದು ವಯಸ್ಸಿನ ಹುಡುಗ, ಹುಡುಗಿಯರು ಯಾವ ರೀತಿ ಸಾಹಸಮಯ ಪ್ರವೃತ್ತಿಯುಳ್ಳವರೂ, ಹೊಸದಕ್ಕೆ ತುಡಿಯುವವರೂ ಆಗಿರುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಮಕ್ಕಳ ಮುಗ್ಧತೆ ಹಾಗೂ ಅವರಲ್ಲಿರುವ ಹೊಸತನದ ದೃಷ್ಟಿಕೋನ ಇಲ್ಲಿ ನಮಗೆ ಕಾಣುತ್ತದೆ. ಸಮೂನ ಅಜ್ಜಿ ತುಂಬ ಸಾಂಪ್ರದಾಯಿಕವಾಗಿದ್ದು ಮಕ್ಕಳಿಗೆ ಅವರಿಗೆ ಅಗತ್ಯವಿರುವ ಸ್ವಾತಂತ್ರ್ಯವನ್ನು ನಿರಾಕರಿಸುತ್ತಾಳೆ. ‘ದೊಡ್ಡವರು ಹೇಳಿದಂತೆ ಕೇಳಬೇಕು’ ಎನ್ನುವ ರೂಢಿಗತ ಬಾಲ್ಯತತ್ವವನ್ನು ಇಲ್ಲಿ ಮುರಿಯಲಾಗಿದೆ! ಆ ನಿಯಮವನ್ನು ಮುರಿಯಲು ಹಚ್ಚುವವನೆ ಸಮ್ಮೂನ ಅಪ್ಪ. ಸಮ್ಮೂನ ಅಪ್ಪನಿಗೂ ಗೊತ್ತಿದೆ-ತನ್ನ ತಾಯಿ ಹೇಳಿದಂತೆ ಕೇಳಿದರೆ ಈಗಿನ ಜಗತ್ತು ನಡೆಯಲಾರದು! ಗೆಳೆಯರಿಗೆ ಸಹಾಯವೆಂದು ಮನೆಯಲ್ಲಿರುವ ಸೈಕಲ್ ಪಂಪ್ ಕೊಟ್ಟರೂ ಅಜ್ಜಿ ಬೈಯುತ್ತಾಳೆ! ಆಡಲು ಬ್ಯಾಟು ಕೊಟ್ಟರೂ ಉರಿಉರಿ ಉರಿಯುತ್ತಾಳೆ! ‘ಬ್ಯಾಟು ಶಾಲೆಯಲ್ಲಿದೆ ಎಂದು ಸುಳ್ಳು ಹೇಳು’ ಎಂದು ಸುಳ್ಳು ಹೇಳಲು ಅಜ್ಜಿ ಮೊಮ್ಮಗನಿಗೆ ಹುರಿದುಂಬಿಸುತ್ತಾಳೆ! ಆದರೆ ಮೊಮ್ಮಗ ಮತ್ತು ಮೊಮ್ಮಗಳು ಈಗ ಅಜ್ಜಿ ಹೇಳಿದಂತೆ ನಡೆಯಲಾರರು! ಮಕ್ಕಳಲ್ಲಿರುವ ಸೃಜನಶೀಲತೆ ಮತ್ತು ಸಾಹಸದ ಪ್ರವೃತ್ತಿಯನ್ನು ಹಿಸುಕಿ ಹಾಕಬಾರದೆಂದು ಈ ಕತೆ ಪರೋಕ್ಷವಾಗಿ ನಮಗೆ ಮನದಟ್ಟು ಮಾಡುತ್ತದೆ. ಈ ಕತೆಯಲ್ಲಿನ ಗಾಳಿಪಟ ಒಂದು ರೀತಿಯಲ್ಲಿ ಅವರ ಕಲ್ಪನಾಪಟ! ವೈಜ್ಞಾನಿಕ ಸತ್ಯವೊಂದನ್ನು ಸ್ವಾರಸ್ಯಕರ ರೀತಿಯಲ್ಲಿ ‘ಸೂರ್ಯ ಮಾಮಾ’ ಹೆಸರಿನ ಕತೆ ಬಿತ್ತರಿಸುತ್ತದೆ. ಅಣ್ಣ, ತಂಗಿಯ ಸಂಭಾಷಣೆಯ ನಡುವೆ ಸೂರ್ಯ ಪಾಲ್ಗೊಂಡು ಅವರಿಗೆ ವಾಸ್ತವ ಸ್ಥಿತಿ ಹಾಗೂ ಪ್ರಕೃತಿಯ ವಿಷಯದಲ್ಲಿ ಒಟ್ಟಾರೆ ಮನುಷ್ಯನ ಕೃತಘ್ನತೆಯನ್ನು ತೆರೆದಿಡುವ ಕೆಲಸ ಮಾಡುತ್ತದೆ.
ಸಮಕಾಲೀನ ವಸ್ತುವೊಂದನ್ನು ‘ಗಲ್ಲಿ ಕ್ರಿಕೆಟ್’ ಕತೆಯಲ್ಲಿ ಕತೆಗಾರರು ತುಂಬ ಸಮರ್ಥವಾಗಿ ನಿರ್ವಹಿಸಿರುವುದು ಎದ್ದು ಕಾಣುತ್ತದೆ. ಆಟವೊಂದನ್ನು ತೀವ್ರ ಸ್ಪರ್ಧೆಯೆಂದು ಎನಿಸದೆ ಬದುಕಿನ ಸಂತೋಷಕ್ಕಾಗಿ ಆಡಬೇಕು ಎನ್ನುವ ತತ್ವ ಇಲ್ಲಿ ವ್ಯಕ್ತವಾಗಿದೆ. ಗ್ರಾಮ ಹಾಗೂ ನಗರಗಳನ್ನು, ಪರಂಪರೆ ಹಾಗೂ ಆಧುನಿಕತೆಯನ್ನು ತುಂಬ ಸರಳವಾಗಿ ಸಮನ್ವಯಗೊಳಿಸುವ ಸಾಧ್ಯತೆ ಇಲ್ಲಿ ಅಭಿವ್ಯಕ್ತಗೊಂಡಿದೆ. ಮಲ್ಲ, ನಾಗ, ರಾಜ, ರಾಮು ಹೇಗೆ ಕ್ರಿಕೆಟ್ ಎನ್ನುವ ಆಟವನ್ನು ತಮಗೆ ಮಜಾ ತರುವ ರೀತಿಯಲ್ಲಿ ಆಡುತ್ತಾರೆಂಬುದು ಇಲ್ಲಿ ಮೆಚ್ಚತಕ್ಕ ಅಂಶವಾಗಿದೆ. ಆಟ, ಓದು, ಭಾಷೆ, ಅಡುಗೆ, ಊಟ, ತಿಂಡಿ ಮುಂತಾದ ಸಂಗತಿಗಳಲ್ಲಿ ದ್ವೇಷ ಇರಬಾರದು ಎನ್ನುವ ತತ್ವವೊಂದು ಪರೋಕ್ಷವಾಗಿ ಇಲ್ಲಿ ವ್ಯಕ್ತವಾಗಿದೆ. ಪ್ರತಿಯೊಬ್ಬರದೂ ಒಂದು ವಿಶಿಷ್ಟತೆ ಇರುತ್ತದೆಯೆಂದು ಲೇಖಕರು ಹೇಳಲು ಇಚ್ಛೆ ಪಟ್ಟಿರುವುದು ಕಾಣುತ್ತದೆ. ಹೊಸತನ ಮತ್ತು ಉತ್ತಮ ನಿರ್ವಹಣೆಯ ದೃಷ್ಟಿಯಿಂದ ‘ಚಾರ್ಲಿ, ಚಾರ್ಲಿ, ವ್ಹೇರ್ ಆರ್ ಯೂ?’ ಒಂದು ತುಂಬ ಯಶಸ್ವಿ ಕತೆಯೆಂದು ಹೇಳಬಹುದು. ಮಕ್ಕಳಿಗೆ ದೆವ್ವ, ಭೂತ ಮುಂತಾದ ಸಂಗತಿಗಳನ್ನು ಹೇಳಬಾರದೆಂದು ಹೇಳುತ್ತ ಅವರಲ್ಲಿ ಮತ್ತಷ್ಟು ಹೆದರಿಕೆ ಹುಟ್ಟಿಸಿರುತ್ತೇವೆ. ಆದರೆ ಈ ಕತೆ ದೆವ್ವದ ಕತೆಯನ್ನು ಹೇಳುತ್ತಲೆ ಮಕ್ಕಳ ಮನೋಭೂಮಿಕೆಯನ್ನು ತುಂಬ ಪರಿಣಾಮಕಾರಿಯಾಗಿ ತೆರೆದಿಡಲಾಗಿದೆ. ದೆವ್ವವನ್ನು ಕರೆಯುವ ಆಟ ಆಡುತ್ತ ಮಕ್ಕಳು ಅಪರಿಚಿತ ಲೋಕವೊಂದನ್ನು ನಮ್ಮ ಕಣ್ಣ ಮುಂದೆ ಧುತ್ತನೆ ನಿಲ್ಲಿಸಿಬಿಡುತ್ತಾರೆ. ಅದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎಂಬಂತೆ ಗುಂಡುರಾವ್ ದೇಸಾಯಿ ಅವರು ತುಂಬ ಮನೋಹರವಾಗಿ ಚಿತ್ರಿಸಿದ್ದಾರೆ. ಈ ಕತೆಯ ಇನ್ನೊಂದು ಮುಖ್ಯ ಅಂಶವೆಂದರೆ ಕತೆಯಲ್ಲಿ ಕುತೂಹಲವನ್ನು ಕಾಯ್ದುಕೊಂಡಿರುವ ಬಗೆ. ಅದು ಸಾಮಾನ್ಯವಾಗಿ ನಡೆಯುತ್ತಿದೆ ಎನಿಸುವಂತೆಯೆ ಹಠಾತ್ತನೆ ಒಂದು ತಿರುವು ತೆಗೆದುಕೊಳ್ಳುವ ಬಗೆ ಮೆಚ್ಚುಗೆಗೆ ಅರ್ಹವಾಗಿದೆ. ‘ಚೋಟ್ಯಾಗಳ ಚಮತ್ಕಾರ’ ಕತೆ ಕುಳ್ಳಗೆ ಇರುವ ರಾಮು ಹಾಗೂ ಗಿರೀಶ ಎನ್ನುವ ಹುಡುಗರ ಛಲ ಹಾಗೂ ಮನೋಭೂಮಿಕೆಯನ್ನು ಹೃದ್ಯವಾಗಿ ನಿರೂಪಿಸಿದೆ. ಈ ಕತೆಯಲ್ಲಿ ಮಕ್ಕಳ ಮನೋಸಾಮರ್ಥ್ಯವನ್ನು ಸ್ವಾರಸ್ಯಕರ ರೀತಿಯಲ್ಲಿ ಹೇಳಲಾಗಿದೆ. ಕತೆಯ ತಂತ್ರ ಮತ್ತು ಹೇಳುವ ರೀತಿ ಸಹ ನನಗೆ ಹಿಡಿಸಿತು.
ತೀರ ಸಾಮಾನ್ಯವೆನಿಸುವ ಸಂಗತಿಗಳನ್ನು ಸೊಗಸಾದ ಹಾಗೂ ಹೃದ್ಯವಾದ ಕತೆಗಳನ್ನಾಗಿ ಮಾಡುವಲ್ಲಿ ಗುಂಡುರಾವ್ ದೇಸಾಯಿ ಯಶಸ್ವಿಯಾಗಿದ್ದಾರೆ. ಮನುಷ್ಯನ ಬಾಲ್ಯವನ್ನು ಬೆರಗುಗಣ್ಣಿನಿಂದ ನೋಡಿದ ಹಾಗೂ ಬೆಕ್ಕಸ ಬೆರಗಿನಿಂದ ಮಕ್ಕಳು ನೋಡುವಂತೆ ಹಾಗೂ ಓದುವಂತೆ ಪ್ರೇರೇಪಿಸುವ ಸಾಕಷ್ಟು ಸಂಗತಿಗಳು ಈ ಪುಸ್ತಕದಲ್ಲಿ ಇವೆಯೆಂದರೆ ಅತಿಶಯೋಕ್ತಿಯಲ್ಲ. ಗುಂಡುರಾವ್ ದೇಸಾಯಿ ಅವರು ಕಲ್ಪನಾ ವಿಲಾಸದ ಬೆನ್ನೇರಿ ಕುತೂಹಲದಿಂದ ಗುಂಡುಗುಂಡಾಗಿರುವ ಕತೆಗಳನ್ನು ಬರೆದಿರುವುದಕ್ಕೆ ನನ್ನ ಹಾರ್ದಿಕ ಅಭಿನಂದನೆಗಳು ಸಲ್ಲುತ್ತವೆ.
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ (kannada Pustaka Pradhikara) ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚ...
ಲಂಡನ್: ದಕ್ಷಿಣ ಭಾರತದ ಸಾಹಿತ್ಯ ಲೋಕ, ಅದರಲ್ಲೂ ಕನ್ನಡ ಸಾಹಿತ್ಯದ ಪಾಲಿಗೆ ಮೇ 20, 2025 ಸುವರ್ಣಾಕ್ಷರದಲ್ಲಿ ಬರೆದಿಡಬೇ...
ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...
©2025 Book Brahma Private Limited.