Date: 26-04-2025
Location: ಬೆಂಗಳೂರು
ಬೆಂಗಳೂರು: "ಹಾಸಾಕೃ ನಾನು ಜೊತೆಯಲ್ಲೇ ಓದುತ್ತಿದ್ದರೂ, ಅವರ ಬಗ್ಗೆ ನನಗೇನೂ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ನನ್ನೊಬ್ಬ ಗೆಳೆಯ ದೆಲ್ಲಿಯಿಂದ ಇನ್ನು ಮುಂದೆ ನೀನು ಹಾಸಾಕೃ ಜೊತೆಗೆ ಒಡನಾಡಬೇಕೆಂದು ಪತ್ರ ಬರೆದ. ಆಗಲೇ ನನಗೆ ಈ ಪ್ರಶ್ನಾರ್ಥಕ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕೆನ್ನುವ ಹಂಬಲ ಜಾಸ್ತಿಯಾಗಿ ಅವನೊಂದಿಗೆ ಒಡನಾಟವನ್ನು ಬೆಳೆಸಿದೆ," ಎಂದು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಟ್ರಸ್ಟಿ, ರಂಗಕರ್ಮಿ ಆನಂದ ಸಭಾಪತಿ ಅವರು ಹೇಳಿದರು.
ಅವರು ಬೆಂಗಳೂರಿನ ಚಾರುಮತಿ ಪ್ರಕಾಶನ ವತಿಯಿಂದ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಹಯೋಗದಲ್ಲಿ 2025 ಏ.26 ಶನಿವಾರದಂದು ನಗರದ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಎನ್.ಕೆ. ಮೋಹನ್ ರಾಂ ಮತ್ತು ಎಂ.ಕೆ. ಶಂಕರ್ ಅವರ ‘ಹಾಸಾಕೃ’ ಕೃತಿಯ ಲೋಕಾರ್ಪಣಾ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
"ನಾನು ಅಂದುಕೊಂಡ ಹಾಗೆ ಹೆಚ್ಚಿನ ಒಡನಾಟ ಹಾಸಾಕೃ ಅವರೊಂದಿಗೆ ಸಾಧ್ಯವಾಗಿಲ್ಲ. ಆದರೆ ಇದೀಗ ನನ್ನ ಜೊತೆಯಲ್ಲೇ ಇದ್ದ ಗೆಳೆಯನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಎನ್.ಕೆ. ಮೋಹನ್ ರಾಂ ಹಾಗೂ ಎಂ.ಕೆ. ಶಂಕರ್ ಅವರು ಸಂಪಾದಿಸಿದ ಈ ಕೃತಿ ಸಹಾಯಕವಾಗಿದೆ. ಅವರಿಗೆ ನನ್ನ ಅಭಿನಂದನೆಗಳು," ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಲೇಖಕ ಹಾಸಾಕೃ, "ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ವಿಪರೀತ ಬಡತನ. ಕಲಿಕೆಗೆ ಬಹಳಷ್ಟು ಕಷ್ಟವಿದ್ದರು, ಮನೆಯಿಂದ ಕಲಿಕೆಗೆ ಪ್ರೋತ್ಸಾಹ ಬಹಳಷ್ಟಿತ್ತು. ಇದೇ ನನ್ನ ಸಾಹಿತ್ಯ ಕ್ಷೇತ್ರದ ಆಸಕ್ತಿಗೆ ಮುನ್ನುಡಿಯಾಯಿತು," ಎಂದರು.
ನಿರ್ದೇಶಕ ಟಿ.ಎನ್ ಸೀತಾರಾಂ ಮಾತನಾಡಿ, "ಹಾಸಾಕೃ ಮತ್ತು ಎನ್.ಕೆ. ಮೋಹನ್ ರಾಂ ಅವರನ್ನು ಒಂದುಗೂಡಿಸಿದ್ದು ಹಾಸ್ಯಪ್ರಜ್ಞೆ. ಹಾಸಾಕೃ ಬಹಳಷ್ಟು ಘಟಾನುಘಟಿಗಳೊಂದಿಗೆ ವೇದಿಕೆಯಲ್ಲಿ ಒಡನಾಡಿದವರು. ಹಾಸ್ಯದ ಒಡಲಲ್ಲಿ ಎಲ್ಲರನ್ನೂ ತೇಲಿಸಿದರು. ಇಂದು ಹಾಸಾಕೃ ಅವರಿಗೆ ವಯಸ್ಸಾದರೂ ಮನಸ್ಸು ಮಾತ್ರ ಯುವಕನಂತೆ ಇದೆ," ಎಂದು ಹೇಳಿದರು.
`KARNAD KALEIDOSCOPE' ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸುಚಿತ್ರ ಫಿಲಂ ಸೊಸೈಟಿಯ ಅಧ್ಯಕ್ಷ ಎಚ್.ಎನ್. ನರಹರಿರಾವ್, "ಕಾರ್ನಾಡ್ ಅವರೊಂದಿಗೆ ನನ್ನ ಒಡನಾಟ ಸಿನಿಮಾ ಕ್ಷೇತ್ರದ ಮೂಲಕ ಶುರುವಾಯಿತು. ನಾನು ಮೈಸೂರು ಹಾಗೂ ದಾವಣೆಗೆರೆಯಲ್ಲಿ ಫಿಲಂ ಸೊಸೈಟಿಯನ್ನು ಶುರುಮಾಡಿದ್ದು, ಆಗಲೇ ನನಗೆ ಅವರ ಪರಿಚಯವಾಯಿತು. ನಂತರದಲ್ಲಿ ನನ್ನ ಅವರ ಒಡನಾಟ ಕಾಡು ಚಿತ್ರದ ಮೂಲಕ ಮತ್ತಷ್ಟು ಗಟ್ಟಿಯಾಗಿ ಇಂದು ಅವರು ನನ್ನೊಂದಿಗೆ ಬಹಳಷ್ಟು ವಿಚಾರಧಾರೆಗಳಲ್ಲಿ ಸೇರಿದ್ದಾರೆ," ಎಂದು ಹೇಳಿದರು.
ಸಮಾರಂಭದಲ್ಲಿ ಎನ್.ಕೆ. ಮೋಹನ್ ರಾಂ, ಮುರಳೀಧರ ಖಜಾನೆ, ಎಂ.ಕೆ. ಶಂಕರ್, ಎನ್.ವಿದ್ಯಾಶಂಕರ್, ಬಿ.ಎಸ್. ವಿದ್ಯಾರಣ್ಯ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.
ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಲ್ಲತ್ತಹಳ್ಳಿ ಬಾಲ ಗಂಗಾಧರ ನಗರದ &ls...
ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...
ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...
©2025 Book Brahma Private Limited.