GANDHI MAY; ಇಲ್ಲೊಂದು ಎಚ್ಚೆತ್ತ ನಾಗರಿಕ ಪ್ರಜ್ಞೆಯ ಮನಸ್ಸು ಕೆಲಸ ಮಾಡುತ್ತಿದೆ


“ಭಾರತದ ಪ್ರಭುತ್ವ ಅಧಿಕಾರಶಾಹಿ ರಾಜಕೀಯ ಪಕ್ಷಗಳು, ಹೇಗೆ ಸಂವಿಧಾನಾತ್ಮಕ ನೈತಿಕತೆ ಮತ್ತು ಆದರ್ಶದ ಗೆರೆಗಳನ್ನು ಉಲ್ಲಂಘಿಸುತ್ತ, ದೇಶವನ್ನು ಅರೆ ಸರ್ವಾಧಿಕಾರಿ ಅವಸ್ಥೆಗೆ ಕರೆದುಕೊಂಡು ಹೋಗುತ್ತಿವೆ ಎಂದು ಲೇಖನಗಳು ಚರ್ಚಿಸುತ್ತವೆ,” ಎನ್ನುತ್ತಾರೆ ರಹಮತ್ ತರೀಕೆರೆ ಅವರು ರಾಜಾರಾಂ ತಲ್ಲೂರು ಅವರ “ಗಾಂಧಿ may +” ಕೃತಿಗೆ ಬರೆದ ಮುನ್ನುಡಿ.

ರಾಜಾರಾಂ ತಲ್ಲೂರರ `ಗಾದಿಮೇ' ಕೃತಿಯ `''ಹಿಜಾಬ್ ಮತ್ತು ಡಿಯರ್ ಮೀಡಿಯಾ’' ಲೇಖನ ಹೀಗೆ ಆರಂಭವಾಗುತ್ತದೆ:

``ಸಾಮಾನ್ಯವಾಗಿ ರಣಹದ್ದುಗಳು ಆಕಾಶದಲ್ಲಿ ಹಾರಾಡುತ್ತಿವೆ ಎಂದರೆ, ಅಲ್ಲಿ ಕೆಳಗೆ ನೆಲದಲ್ಲಿ ಯುದ್ಧಭೂಮಿ ಇರಬಹುದು. ಹೆಣಗಳ ರಾಶಿ ಬಿದ್ದಿರಬಹುದು ಎಂಬ ಯೋಚನೆ ಬರುವುದು ಸಹಜ. ಆದರೆ ಯುದ್ಧ ಸಂಭವಿಸಬಹುದು ಮತ್ತು ಅಲ್ಲಿ ಹೆಣಗಳ ರಾಶಿ ಬಿದ್ದು ತಮಗೆ ಮೃಷ್ಟಾನ್ನ ಭೋಜನ ಸಿಗಬಹುದೆಂಬ ನಿರೀಕ್ಷೆಯಲ್ಲಿ ರಣಹದ್ದುಗಳು ಹಾರಾಡತೊಡಗಿವೆ ಎಂದರೆ ಅದನ್ನು ಹೇಗೆ ಪರಿಗಣಿಸಬೇಕು?’’

ಮಾರ್ಮಿಕವಾದ ಪ್ರಶ್ನೆಯಿದು. ಇಂತಹ ನೂರಾರು ಮಾರ್ಮಿಕ ಪ್ರಶ್ನೆಗಳಿರುವ ಲೇಖನಗಳು ಪ್ರಸ್ತುತ ಕೃತಿಯಲ್ಲಿವೆ. ಭಾರತದ ರಾಜಕಾರಣ, ಆರ್ಥಿಕತೆ, ಮಾಧ್ಯಮ, ಕೃತಕ ಬುದ್ಧಿಮತ್ತೆ ಮೊದಲಾಗಿ ಹಲವಾರು ತಜ್ಞಕ್ಷೇತ್ರಗಳಿಗೆ ಸಂಬಂಧಿದಂತೆ, ಹಿರಿಯ ಪತ್ರಕರ್ತರಾದ ತಲ್ಲೂರರು ಬರೆದ ಲೇಖನ ಸಂಕಲನವಿದು. ಈ ಕ್ಷೇತ್ರಗಳಲ್ಲಿ ನನಗೆ ಆಳ ಪ್ರವೇಶವಿಲ್ಲ. ಆದರೆ ಒಬ್ಬ ಸಾಮಾನ್ಯ ಓದುಗನಾಗಿ ಇವನ್ನು ಓದುವಾಗ ಕೂಡಲೇ ಹೀಗೆನಿಸಿತು: 'ಇಲ್ಲೊಂದು ಎಚ್ಚೆತ್ತ ನಾಗರಿಕ ಪ್ರಜ್ಞೆಯ ಮನಸ್ಸು ಕೆಲಸ ಮಾಡುತ್ತಿದೆ; ಇದು ತನ್ನ ಸುತ್ತ ಸಂಭವಿಸುತ್ತಿರುವ ಆರ್ಥಿಕ ರಾಜಕೀಯ ಸಾಮಾಜಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ; ಈ ವಿದ್ಯಮಾನಗಳು ಹುಟ್ಟಿಸಿರುವ ದುಗುಡ ವಿಷಾದಗಳನ್ನು ತನ್ನ ಅನುಭವ ಮತ್ತು ತಜ್ಞತೆಯ ನೆರವಿನಿಂದ ವಿಶ್ಲೇಷಿಸುತ್ತಿದೆ; ತನ್ನ ವಿಶ್ಲೇಷಣೆಯ ಫಲಿತಗಳನ್ನು ಓದುಗರ ಜತೆ ಹಂಚಿಕೊಳ್ಳುತ್ತಿದೆ; ಇದರ ಇರಾದೆ ಕೋಟ್ಯಂತರ ನಾಗರಿಕ ದೈನಿಕ ಬದುಕನ್ನು ರೂಪಿಸುತ್ತಿರುವ ಅಧಿಕಾರಸ್ಥ ಶಕ್ತಿಗಳ ಬಗ್ಗೆ ತಿಳುವಳಿಕೆ ಸೃಷ್ಟಿಸುವುದು. ಅವುಗಳ ಅಪಾಯಗಳ ಬಗ್ಗೆ ಎಚ್ಚರಿಸುತ್ತ ನಾಗರಿಕ ಪ್ರಜ್ಞೆ ಬೆಳೆಸುವುದು; ಈ ಮೂಲಕ ಸರ್ವಾಧಿಕಾರದತ್ತ ಚಲಿಸುತ್ತಿರುವ ಭಾರತದ ಪ್ರಜಾಪ್ರಭುತ್ವವನ್ನೂ ಲಾಭಕೋರ ಬಂಡವಾಳವಾದಿಯತ್ತ ಚಲಿಸುತ್ತಿರುವ ಆರ್ಥಿಕತೆಯನ್ನೂ, ಮತೀಯವಾದದತ್ತ ಚಲಿಸುತ್ತಿರುವ ಧರ್ಮ ಮತ್ತು ಸಮಾಜಗಳನ್ನೂ, ಪತನದಿಂದ ತಡೆಯಲು ಸಾಧ್ಯವಾಗುವಂತೆ ನಾಗರಿಕ ಕ್ರಿಯಾಶೀಲತೆ ರೂಪಿಸುವುದು; ಸಾಮಾನ್ಯ ಜನತೆಯ ಪರವಾದ ಪ್ರಜಾಪ್ರಭುತ್ವವನ್ನು ಎಲ್ಲ ಜನರೂ ನೆಮ್ಮದಿಯಿಂದ ಬದುಕುವ ಆರ್ಥಿಕತೆ ಮತ್ತು ಸಮಾಜವನ್ನು ಕಟ್ಟುವುದಕ್ಕೆ ಬೇಕಾದ ಆಶೋತ್ತರಗಳನ್ನು ಬಿತ್ತುವುದು'.

ಈಯೆಲ್ಲ ಕಾರಣಗಳಿಂದ ಇಲ್ಲಿರುವ ಲೇಖನಗಳನ್ನು ಪ್ರಭುತ್ವ ವಿಮರ್ಶಕ ಚಿಂತನೆಗಳು ಎನ್ನಬಹುದು. ಇಲ್ಲಿ ಪ್ರಭುತ್ವವೆಂದರೆ, ಕೇವಲ ಆಳುವ ರಾಜಕಾರಣವಲ್ಲ. ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಾಂಗಗಳು ಕೂಡ; ಇವನ್ನು ರೂಪಿಸುತ್ತ ನಿಯಂತ್ರಿಸುತ್ತ ಇರುವ ಮತೀಯ ಸಿದ್ಧಾಂತ ಮತ್ತು ಲಾಭಕೋರ ಕಾರ್ಪೊರೇಟ್ ಶಕ್ತಿಗಳು ಸಹ. ತಲ್ಲೂರರು ಕರ್ನಾಟಕದಲ್ಲಿ ಉದ್ಯಮಶೀಲತೆಯೇ ಪ್ರಧಾನ ಆರ್ಥಿಕತೆಯುಳ್ಳ ಕರಾವಳಿ ಭಾಗದವರು; ಖಾಸಗಿ ಹೂಡಿಕೆದಾರರು ಬ್ಯಾಂಕು, ಕಾರ್ಖಾನೆ, ಶಿಕ್ಷಣಸಂಸ್ಥೆ ಕಟ್ಟಿದ ಚರಿತ್ರೆಯಿರುವ ಪ್ರದೇಶದವರು. ಆದರೆ ಈಗ ಕರಾವಳಿಯಲ್ಲಿ ಕರ್ನಾಟಕದಲ್ಲಿ ಏರ್ಪಡುತ್ತಿರುವ ನವ ಉದ್ಯಮಶೀಲತೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ಸಹಕಾರಿ ತತ್ವವಿಲ್ಲ; ನಾಡನ್ನು ಕಟ್ಟುವ ದೊಡ್ಡ ಕಾಣ್ಕೆಗಳಿಲ್ಲ. ಬದಲಿಗೆ ಸಮಾಜದ ಕೂಡು ಬಾಳುವೆ ಮತ್ತು ನಿಸರ್ಗದ ಸಹಜ ಪರಿಸರವನ್ನೂ ಹದಗೆಡಿಸಿಯಾದರೂ ಸರಿ, ನಫೆ ಮಾಡಿಕೊಳ್ಳುವ ಕೇಡಿಗತನವಿದೆ. ಹೀಗಾಗಿಯೇ ಇಲ್ಲಿನ ಆರ್ಥಿಕತೆ ಕುರಿತ ಬರೆಹಗಳು ನಮ್ಮ ಕಾಲದಲ್ಲಿ ಚಾಲ್ತಿಯಲ್ಲಿರುವ `ಅಭಿವೃದ್ಧಿ’ ಎಂಬ ವೈಭವೀಕೃತ ಪರಿಕಲ್ಪನೆಯನ್ನು ಒಡೆಯುತ್ತವೆ. ಉದಾರವಾದಿ ಆರ್ಥಿಕತೆ ಎನ್ನಲಾಗುವ, ಉಳ್ಳವರ ಅಭಿವೃದ್ಧಿ ಕಥನದ ಮೇಲಿನ ಕಟುವಿಮರ್ಶೆಗಳಾಗಿವೆ.

ಭಾರತದಲ್ಲಿ ಮಹಾ ಪ್ರವಾಹವಾಗಿ ಹರಿಯುತ್ತಿರುವ ಲಾಭಕೋರ ಆರ್ಥಿಕತೆಯು ಸ್ವಯಂಭುವಾಗಿ ರೂಪುಗೊಂಡಿದ್ದಲ್ಲ. ಅದಕ್ಕೆ ಶಕ್ತಿ ರಾಜಕಾರಣ ಮತ್ತು ಮತೀಯವಾದಗಳ ಜತೆ ಅಪವಿತ್ರ ಒಳಸಂಬಂಧಗಳಿವೆ; ಅದು ಭಾರತದ ಶಕ್ತಿ ರಾಜಕಾರಣವನ್ನು ಮಾತ್ರವಲ್ಲ, ಕಾರ್ಯಾಂಗವನ್ನೂ ನ್ಯಾಯಾಂಗವನ್ನೂ ಸುದ್ದಿಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ. ಹೀಗಾಗಿಯೇ ಇಲ್ಲಿನ ಲೇಖನಗಳು ಭಾರತದ ಆರ್ಥಿಕ ರಾಜಕಾರಣದ ಅಥವಾ ಕಾರ್ಪೊರೇಟೀಕೃತ ರಾಜಕಾರಣದ ವಿಶ್ಲೇಷಣೆಗಳಾಗಿವೆ. ಕನ್ನಡದಲ್ಲಿ ಈ ಬಗೆಯ ವಿಶ್ಲೇಷಣೆಗಳನ್ನು ಚಿಂತಕರಾದ ಶಿವಸುಂದರ್ ಹಾಗೂ ಕೆ. ಪಿ. ಸುರೇಶ ಅವರೂ ಮಾಡುತ್ತಿದ್ದಾರೆ. ಇವರೆಲ್ಲರೂ ರಾಜಕೀಯ ಅರ್ಥಶಾಸ್ತ್ರದ ನೆಲೆಯಿಂದ ಪ್ರಭುತ್ವವನ್ನು ವಿಮರ್ಶಿಸುತ್ತ, ನಮ್ಮ ಆರ್ಥಿಕ ವ್ಯವಸ್ಥೆ, ಶಕ್ತಿರಾಜಕಾರಣ ಮತ್ತು ಸುದ್ದಿಮಾಧ್ಯಮಗಳು ಹೇಗೆ ಕಾರ್ಪೊರೇಟ್ ಶಕ್ತಿಗಳ ಪರವಾಗಿ ವಾಲುತ್ತಿವೆ; ತೆರಿಗೆದಾರರ ಮೇಲಿನ ಶವಭಾರವಾಗುತ್ತಿವೆ ಎಂಬುದನ್ನು ಕಾಣಿಸುತ್ತಿರುವರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲವು `ಅಭಿವೃದ್ಧಿ’ ಯೋಜನೆಗಳ ಬಗ್ಗೆ ತಲ್ಲೂರರ ಲೇಖನಗಳನ್ನು ಗಮನಿಸಬೇಕು.

ಈ ಕೃತಿಯಲ್ಲಿ ಅತಿಹೆಚ್ಚು ಚರ್ಚೆಗೆ ಒಳಗಾಗಿರುವುದು ಸುದ್ದಿ ಮಾಧ್ಯಮಗಳ ರಾಜಕಾರಣ. ಭಾರತದ ರಾಜಕಾರಣ ಮತ್ತು ಕಾರ್ಪೊರೇಟ್ ಆರ್ಥಿಕ ನೀತಿಗಳ ಬಗ್ಗೆ ಕಟುವಾಗಿರುವ ಇಲ್ಲಿನ ವಿಮರ್ಶೆ, ಮಾಧ್ಯಮಗಳ ವಿಷಯ ಬಂದಾಗ ಮತ್ತಷ್ಟು ಮೊನಚನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ದೀರ್ಘಕಾಲ ಪತ್ರಕರ್ತರಾಗಿದ್ದ ಲೇಖಕರು, ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ನೇರ ಸಾಕ್ಷಿ ಆಗಿರುವುದು. ಹೇಗೆ ಮಾಧ್ಯಮಗಳು ಸತ್ಯವನ್ನು ಜನರ ಮುಂದೆ ಬಿಚ್ಚಿಡುವ ಬದಲು ಬಚ್ಚಿಡುತ್ತಿವೆ. ಪ್ರಭುತ್ವವನ್ನು ಟೀಕೆಗೆ ಒಳಪಡಿಸುವುದರ ಬದಲು ಅದರ ಕೇಡುಗಳನ್ನೇ ಸಾಧನೆಗಳೆಂದು ಸಾರುತ್ತಿವೆ. ಈ ಮೂಲಕ ಜನರಿಗೂ ದೇಶಕ್ಕೂ ತಮ್ಮ ಕ್ಷೇತ್ರಕ್ಕೂ ದ್ರೋಹ ಬಗೆಯುತ್ತಿವೆ ಎಂಬ ಬಗ್ಗೆ ಇಲ್ಲಿ ಟೀಕೆ ಟಿಪ್ಪಣಿಗಳಿವೆ. ಸುದ್ದಿ ಮಾಧ್ಯಮಗಳು ಆಳುವವರ ಮಡಿಲೊಳಗಾಡುವ ನಾಯಿಮರಿ ಆಗಿರುವ ಬಗ್ಗೆ ವಿಷಾದದಿಂದ ತಲ್ಲೂರರು ಮತ್ತೆಮತ್ತೆ ಬರೆಯುತ್ತಾರೆ. ಹಾಗೆ ಬರೆವಾಗೆಲ್ಲ ಅವನ್ನು ವ್ಯಂಗ್ಯವಾಗಿ `ಡಿಯರ್ ಮೀಡಿಯಾ’ ಎಂದು ಸಂಬೋಧಿಸುತ್ತಾರೆ. ದ್ವೇಷ ಹುಟ್ಟಿಸುವ ಯಂತ್ರಗಳಾಗಿ ಹೋಗಿರುವ ಕರ್ನಾಟಕದ ಸುದ್ದಿ ಮಾಧ್ಯಮಗಳು ಎಂ.ಎಂ. ಕಲಬುರ್ಗಿಯವರ ಪ್ರಾಸಂಗಿಕ ಹೇಳಿಕೆಯನ್ನು ಎಳೆದಾಡಿ, ಧರ್ಮವಿರೋಧಿ ಯನ್ನಾಗಿ ಬಿಂಬಿಸಿ ಅವರ ಕೊಲೆಗೆ ವಧಾಸ್ಥಾನವನ್ನು ಸಿದ್ಧಗೊಳಿಸಿದವು; ಪತ್ರಕರ್ತೆ ಗೌರಿಲಂಕೇಶರ ದಾರುಣ ಹತ್ಯೆಯಾದಾಗ, ಸಂಭ್ರಮಿಸುವಂತೆ ಎಷ್ಟೆಲ್ಲ ಪತ್ರಕರ್ತರು ಟಿಪ್ಪಣಿ ಬರೆದರು ಎಂಬುದನ್ನು ಕನ್ನಡಿಗರು ಬಲ್ಲರು. ಈ ವೃತ್ತಿನೈತಿಕತೆಯ ಪತನಕ್ಕೂ ಭಾರತವು ಪತ್ರಿಕಾ ಸ್ವಾತಂತ್ರö್ಯದ ವಿಷಯದಲ್ಲಿ ೧೬೧ನೇ ಹೀನಾಯ ಸ್ಥಾನಕ್ಕೆ ಜಾರಿರುವುದಕ್ಕೂ ಲಗತ್ತಿದೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ಸುದ್ದಿಮಾಧ್ಯಮಗಳನ್ನು ಪರಿಶೀಲನೆಗೆ ಒಳಪಡಿಸುತ್ತಿರುವ ತಲ್ಲೂರರ ಬರೆಹಗಳಿಗೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ. ಮಾಧ್ಯಮೋದ್ಯಮಕ್ಕೆ, ಮಾರುಕಟ್ಟೆ ಶಕ್ತಿ ಮತ್ತು ಮತೀಯವಾದಿ ಸಿದ್ಧಾಂತಗಳ ಒಳಒಪ್ಪಂದಗಳಿಂದ ಒದಗಿರುವ ದುರವಸ್ಥೆಯ ಬಗ್ಗೆ ಇಲ್ಲಿ ಆಳವಾದ ವೇದನೆಯಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಪತ್ರಕರ್ತ ವಿನೋದ ಮೆಹತಾ ಆತ್ಮಕಥೆ ಬರೆದಂತೆ (`ಲಖನೋ ಹುಡುಗ’), ತಲ್ಲೂರರು ತಮ್ಮ ವೃತ್ತಿಪರ ಅನುಭವಗಳ ಹಿನ್ನೆಲೆಯಲ್ಲಿ ಆತ್ಮಕಥೆ ಬರೆಯಬೇಕೆಂದು ಅನಿಸುತ್ತದೆ.

ಸದರಿ ಕೃತಿಯಲ್ಲಿ ತಲ್ಲೂರರು ಅರ್ಥಿಕತೆ ರಾಜಕಾರಣ ಮಾಧ್ಯಮ ತಂತ್ರಜ್ಞಾನ ಮೊದಲಾದ ಕ್ಷೇತ್ರದಲ್ಲಿ ಮಾಡಿರುವ ಚಿಂತನೆಗಳು ವಿಶಿಷ್ಟವೂ ಉಪಯುಕ್ತವೂ ಆಗಿವೆ. ಇದಕ್ಕಾಗಿ ಅವರು ವಿಶ್ಲೇಷಣೆ-ವ್ಯಾಖ್ಯಾನಕ್ಕೆ ಅನುಸರಿಸಿರುವ ವಿಧಾನವೂ ಒಂದು ಕಾರಣವಾಗಿದೆ. ಮೊದಲನೆಯದಾಗಿ ಲೇಖಕರು ಜಗತ್ತಿನ-ಭಾರತದ-ಸ್ಥಳೀಯವಾದ ವಿದ್ಯಮಾನಗಳನ್ನು ಸ್ವತಂತ್ರವಾಗಿ ನೋಡುವುದಿಲ್ಲ. ಅವುಗಳ ಹಿಂದಿನ ಚಾರಿತ್ರಿಕ ಚಾಲಕ ಶಕ್ತಿಗಳನ್ನು ಪತ್ತೆ ಮಾಡುತ್ತಾರೆ. ಅವುಗಳ ಕಾರ್ಯಾಚರಣೆಯು ಸ್ಥಳೀಯ ಜನ ಬದುಕಿನಲ್ಲಿ ಬೀರುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಚಿಂತಕ ಜಿ. ರಾಜಶೇಖರ ಅವರು ಉಡುಪಿ ಮತ್ತು ಕರಾವಳಿಯ ನಿತ್ಯ ಬದುಕಿನ ವಿವರಗಳನ್ನು ಹೀಗೆಯೇ ಹಿಡಿದು ಭಾರತದ ರಾಜಕಾರಣ ಸಂಸ್ಕೃತಿ ಧರ್ಮಗಳು ಹಿಡಿಯುತ್ತಿರುವ ದಿಕ್ಕುಗಳನ್ನು ಹೀಗೆಯೇ ವಿಶ್ಲೇಷಿಸುತ್ತಿದ್ದರು. ಎರಡನೆಯದಾಗಿ ತಲ್ಲೂರರು ಲಹರಿಯಲ್ಲಿ ತಮ್ಮ ಚಿಂತನೆಗಳನ್ನು ಹರಿಬಿಡುವುದಿಲ್ಲ. ಅಧಿಕೃತ ಅಂಕಿ ಅಂಶಗಳ ವಿಶ್ಲೇಷಣೆಯ ಮೂಲಕ ಅವನ್ನು ಮಂಡಿಸುತ್ತಾರೆ. ಮೇಲ್ನೋಟಕ್ಕೆ ಸಾಮಾನ್ಯ ಜನರಿಗೆ ಅರಿವಾಗದ ಲೆಕ್ಕಾಚಾರಗಳಂತೆ ಕಾಣುವ ಅಂಕಿಅಂಶ ಮತ್ತು ಜಡ ಹೇಳಿಕೆಗಳಂತಿರುವ ಕಾಯಿದೆಗಳನ್ನು ಪದರಪದರವಾಗಿ ಬಿಡಿಸುತ್ತ, ಅವುಗಳ ಘೋರ ಪರಿಣಾಮವನ್ನು ವಿವರಿಸುತ್ತಾರೆ. ಇದರಿಂದ ಇಲ್ಲಿನ ಲೇಖನಗಳು ರಾಜಕೀಯ ಅರ್ಥಶಾಸ್ತçದ ಶೈಕ್ಷಣಿಕ ಬರೆಹಗಳಾಗಿವೆ.

ಈ ಕೃತಿಯಲ್ಲಿ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳಿಗೆ ತಲ್ಲೂರರು ಹೊಸಭಾಷೆ ಮತ್ತು ನಿರೂಪಣ ಕ್ರಮವನ್ನು ಹುಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ. ಇಲ್ಲಿನ ಭಾಷೆಯು ಹೊಸಕಾಲದ ತಂತ್ರಜ್ಞಾನದ ಸಂಗತಿಗಳನ್ನು ಬಳಸುತ್ತ ಕಂಗ್ಲೀಷಾಗಿದೆ. ಈ ಬೆರಕೆಯ ಹೈಬ್ರಿಡ್ ಭಾಷೆಯೊಳಗೆ ಸಂದರ್ಭಾನುಸಾರ ಕುಂದಾಪುರ ಭಾಗದ ನುಡಿಗಟ್ಟು ಮತ್ತು ಗಾದೆಮಾತುಗಳು ಸೇರಿಕೊಂಡು, ಆರ್ಥಿಕ ರಾಜಕೀಯ ವಿಶ್ಲೇಷಣ ವಿಶಿಷ್ಟ ಭಾಷೆಯೊಂದು ಸಿದ್ಧಗೊಂಡಿದೆ. ಇದು ಕೆಲವೊಮ್ಮೆ ಜಡವಾಗಿಯೂ ತೋರುತ್ತದೆ. ಆದರೆ ತಲ್ಲೂರರು ತಮ್ಮ ತಲ್ಲಣ ಮತ್ತು ಆತಂಕಗಳನ್ನು ಭಾವಾವೇಶದ ಭರದಲ್ಲಿ ಓದುಗರ ಮೇಲೆ ಸುರಿಯುವುದಿಲ್ಲ. ಸಮಸ್ಯೆಯನ್ನು ಬೌದ್ಧಿಕವಾಗಿ ಅರಗಿಸಿಕೊಂಡು, ತಣ್ಣನೆಯ ವ್ಯಂಗ್ಯ ವಿಷಾದ ಭರಿತ ಶೈಲಿಯಲ್ಲಿ ತರ್ಕಬದ್ಧವಾಗಿ ಮುಂದಿಡುತ್ತಾರೆ. ವಿಶೇಷವೆಂದರೆ, ಅವರು ಪತ್ರಿಕೆಗೊ ಸಾಮಾಜಿಕ ಜಾಲತಾಣಗಳಿಗೊ ಬರೆದ ಬರೆಹಗಳಿಗಿಂತ, ಸಾರ್ವಜನಿಕ ವೇದಿಕೆಗಳ ಮೂಲಕ ಮಾಡಿದ ಭಾಷಣಗಳ ಬರೆಹರೂಪಗಳು ಹೆಚ್ಚು ಸಂಹವನಶೀಲವೂ ಅಪ್ತವೂ ಆಗಿರುವುದು.

ಇಲ್ಲಿನ ಲೇಖನಗಳಲ್ಲಿ ಅತಿಹೆಚ್ಚು ಬಳಕೆಯಾಗಿರುವ ಪದ ಸಂವಿಧಾನ. ಭಾರತದ ಪ್ರಭುತ್ವ ಅಧಿಕಾರಶಾಹಿ ರಾಜಕೀಯ ಪಕ್ಷಗಳು, ಹೇಗೆ ಸಂವಿಧಾನಾತ್ಮಕ ನೈತಿಕತೆ ಮತ್ತು ಆದರ್ಶದ ಗೆರೆಗಳನ್ನು ಉಲ್ಲಂಘಿಸುತ್ತ, ದೇಶವನ್ನು ಅರೆ ಸರ್ವಾಧಿಕಾರಿ ಅವಸ್ಥೆಗೆ ಕರೆದುಕೊಂಡು ಹೋಗುತ್ತಿವೆ ಎಂದು ಲೇಖನಗಳು ಚರ್ಚಿಸುತ್ತವೆ. ಇವುಗಳಲ್ಲಿ ಆಕ್ಟಿವಿಸ್ಟರಲ್ಲಿ ಕಾಣುವ ತೀರ್ಮಾನಗಳಿಲ್ಲ; ಕ್ರಾಂತಿಗೆ ಕರೆಗೊಡುವ ಧಾವಂತವಿಲ್ಲ. ಬದಲಿಗೆ ನಮ್ಮೆದುರು ಘಟಿಸುತ್ತಿರುವ ವಿದ್ಯಮಾನಗಳು ಮತ್ತು ಸುಡುವಾಸ್ತವ ಹೀಗಿದೆ, ಪರಿಸ್ಥಿತಿ ಹೀಗೇ ಇದ್ದರೆ ಮುಂದೆ ಏನೆಲ್ಲ ಆಗಬಹುದು ಕಣ್ತೆರೆದು ನೋಡಿ ಎಂದು ಪ್ರೇರೇಪಿಸುವ ಲಕ್ಷಣಗಳಿವೆ. ಇದನ್ನು ಅರ್ಥಪೂರ್ಣ ಪ್ರಜಾಸತ್ತೆಗಾಗಿ ಒಬ್ಬ ಹೊಣೆಗಾರಿಕೆಯುಳ್ಳ ಪತ್ರಕರ್ತ ಮಾಡುವ ರಾಜಕೀಯ ಪ್ರಜ್ಞೆಯ ನಿರ್ಮಾಣ ಮತ್ತು ಎಜುಕೇಟ್ ಮಾಡುವ ಕೆಲಸವೆನ್ನಬಹುದು.

ನೈಸರ್ಗಿಕವಾಗಿಯೊ ಕೃತಕವಾಗಿಯೊ ಬರುವ ಬರಗಾಲ ಕೂಡ ಭಾರತದಲ್ಲಿ ರಾಜಕಾರಣ ಮತ್ತು ಆರ್ಥಿಕ ವ್ಯವಸ್ಥೆಯ ಕೊರತೆಗಳನ್ನು ಬಹಿರಂಗಗೊಳಿಸುತ್ತದೆ ಮತ್ತು ಅವುಗಳ ದುಷ್ಟತನವನ್ನು ಕಾಣಿಸುತ್ತದೆ ಎಂದು ಪತ್ರಕರ್ತ ಸಾಯಿನಾಥರು ಪುಸ್ತಕ ಬರೆದರು. ಈ ಕೃತಿಯೂ ಇದೇ ವಿನ್ಯಾಸವುಳ್ಳದ್ದಾಗಿದೆ. ಇಲ್ಲಿನ ಬಹುತೇಕ ಲೇಖನಗಳ ಹಿಂದೆ ಕೊರೋನಾ ಭಿತ್ತಿಯಂತೆ ಕೆಲಸ ಮಾಡಿದೆ. ಒಂದು ಅಂಟುಜಾಡ್ಯ ಭಾರತದ ಆರ್ಥಿಕತೆ ರಾಜಕಾರಣ ಸಮಾಜದೊಳಗಿನ ಕಾಯಿಲೆಗಳನ್ನು ತೋರಿಸಿಕೊಟ್ಟಿತು. ಸಾರ್ವಜನಿಕ ಬದುಕಿನಲ್ಲಿರುವ ಈ ನಾಗರಿಕ ಕಾಯಿಲೆಯನ್ನು ವಿವರಗಳ ಸಮೇತ ಇಲ್ಲಿನ ಲೇಖನಗಳು ರೋಗತಪಾಸಣ ತಜ್ಞನಂತೆ ಕಾಣಿಸುತ್ತವೆ. ಕೊನೆಯಲ್ಲಿ ಸಾರ್ವಜನಿಕ ನೈತಿಕತೆಯ ಪ್ರಶ್ನೆಯನ್ನು ಮುಂದಿಟ್ಟು ಚಿಂತನೆ ಹುಟ್ಟಿಸುತ್ತವೆ.

ಭಾರತದ ಧರ್ಮ ರಾಜಕಾರಣ ಆರ್ಥಿಕತೆ ಸಮಾಜ ಸಮುದಾಯಗಳ ಮೇಲೆ ಯಾವುದೇ ಪುರಾವೆ ಸಾಕ್ಷಿಗಳಿಲ್ಲದೆಯೂ ಯಾರೊ ಯೋಜಿತವಾಗಿ ಹುಟ್ಟಿಸಿದ ಸುಳ್ಳನ್ನು ಪರಮಸತ್ಯವೆಂದು ನಂಬುವ, ಅದನ್ನು ಮತ್ತೊಬ್ಬರಿಗೆ ವಿಷದಂತೆ ಹಂಚುವುದರಲ್ಲೇ ಬದುಕು ಕಳೆಯುತ್ತಿರುವ ಬೌದ್ಧಿಕವಾಗಿ ಅಂಗವಿಕಲವಾದ ತಲೆಮಾರೊಂದು ಈಗ ಸೃಷ್ಟಿಯಾಗಿಬಿಟ್ಟಿದೆ. ಇದು ಕುವೆಂಪು ಹೇಳುವ ನಿರಂಕುಶಮತಿಗಳಾಗುವ ಹಾದಿಯನ್ನು ಬಿಟ್ಟು, ಟೊಳ್ಳಾದ ದ್ವೇಷದಾಯಕ ವ್ಯಕ್ತಿತ್ವವನ್ನು ಕಟ್ಟಿಕೊಂಡಿದೆ. ಇದಕ್ಕೆ ಬೇಕಾಗಿ ವಾಟ್ಸಾಪ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ತಿಳಿವಿನ ಕೆರೆಯ ಮೇಲೆ ಹಾವಸೆಯಂತೆ ಹಬ್ಬಿರುವರು. ಈ ಪ್ರವೃತ್ತಿ ಹೀಗೆ ಮುಙದುವರೆದರೆ ಭಾರತ ಜ್ಞಾನವಿರೋಧಿ ಸಮಾಜವಾಗಿ ಬದಲಾಗಬಹುದು. ಇಂತಹ ವಿಷಮ ಕಾಲದಲ್ಲಿ, ತಲ್ಲೂರರ ಈ ಕೃತಿಯಲ್ಲಿರುವ ಶೈಕ್ಷಣಿಕ ಶಿಸ್ತು, ತರ್ಕಬದ್ಧತೆ, ಒಳನೋಟ, ಮುಂಗಾಣ್ಕೆಗಳು ಮಹತ್ವದವೂ ಜರೂರಿತನದವೂ ಆಗಿವೆ. ಇವು ಭಾರತದ ಜನ ಸಂವಿಧಾನ ಪ್ರಜ್ಞೆ ರೂಢಿಸಿಕೊಳ್ಳುವುದರಿಂದ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವೆಂದು ಸೂಚಿಸುತ್ತವೆ. ಈ ಕೃತಿಯು ಸಾಮಾನ್ಯ ಓದುಗರಿಗೆ ಮಾತ್ರವಲ್ಲ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ರಾಜಕೀಯ ಅರ್ಥಶಾಸ್ತ್ರ ಮತ್ತು ಮಾಧ್ಯಮಶಾಸ್ತ್ರ ವಿದ್ಯಾರ್ಥಿಗಳಿಗೆ ಪಠ್ಯವಾಗುವಷ್ಟು ಕಸುವನ್ನು ಒಳಗೊಂಡಿದೆ.

MORE FEATURES

Dara Shiko; ಕನ್ನಡ ಓದುಗರನ್ನು, ಪ್ರೇಕ್ಷಕರನ್ನೂ ದಾರಾ ಮುಟ್ಟಿದ್ದಾನೆ

10-01-2025 ಬೆಂಗಳೂರು

“ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ನನ್ನ ಈ ಪುಟ್ಟ ಕೃತಿ ದಾರಾಶಿಖೋನನ್ನು ಕುರಿತು ಕನ್ನಡದಲ್ಲಿ ಬಂದ ಮೊದಲ...

Gandasaagi kavithe bareyuvudu sulabha; ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ

10-01-2025 ಬೆಂಗಳೂರು

"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...

Nadavargal; ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು

10-01-2025 ಬೆಂಗಳೂರು

“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...