Dara Shiko; ಕನ್ನಡ ಓದುಗರನ್ನು, ಪ್ರೇಕ್ಷಕರನ್ನೂ ದಾರಾ ಮುಟ್ಟಿದ್ದಾನೆ


“ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ನನ್ನ ಈ ಪುಟ್ಟ ಕೃತಿ ದಾರಾಶಿಖೋನನ್ನು ಕುರಿತು ಕನ್ನಡದಲ್ಲಿ ಬಂದ ಮೊದಲ ಪುಸ್ತಕ,” ಎನ್ನುತ್ತಾರೆ ಅಗ್ರಹಾರ ಕೃಷ್ಣಮೂರ್ತಿ ಅವರು ತಮ್ಮ ದಾರಾಶಿಖೋ ಕೃತಿಗೆ ಬರೆದ ಲೇಖಕರ ಮಾತು.

ಗೆಳೆಯ ಡಿ.ಆರ್. ನಾಗರಾಜ್ ಪ್ರಧಾನ ಸಂಪಾದಕನಾಗಿ ಒಂದು ಚಿಂತನ ಮಾಲಿಕೆಯನ್ನು ಕನ್ನಡ ಬೌದ್ಧಿಕ ಜಗತ್ತಿಗೆ ನೀಡಿದ್ದು ಒಂದು ಮಹತ್ವದ ಸಂಗತಿಯೆಂಬುದು ಎಲ್ಲರಿಗೂ ತಿಳಿದಿರುವಂತಹ ಸಂಗತಿ. ಆ ಮಾಲಿಕೆಯನ್ನು 'ಅಕ್ಷರ ಚಿಂತನ' ಎಂದು ಕರೆಯಲಾಗಿತ್ತು. ಮೊದಲ ಕಂತಿನಲ್ಲಿ ಸುಮಾರು 10-15 ಪುಸ್ತಕಗಳನ್ನು ಹೆಗ್ಗೋಡಿನ 'ಅಕ್ಷರ ಪ್ರಕಾಶನ'ದ ಕೆ.ವಿ.ಸುಬ್ಬಣ್ಣ ಪ್ರಕಟಿಸಿದರು. ಮೊದಲ ಕಂತಿನ ನಂತರವೂ ಕೆಲವು ಪುಸ್ತಕಗಳು ಪ್ರಕಟವಾದವೆನಿಸುತ್ತದೆ. ಈ ಮಾಲಿಕೆ ಡಿ.ಆರ್. ನಿಧನಾನಂತರ 'ಡಿ.ಆರ್. ನಾಗರಾಜ್ ನೆನಪಿನ ಅಕ್ಷರ ಚಿಂತನ'ವಾಗಿ ಬದಲಾಯಿತು. ಹೊಸ ಮಾಲಿಕೆಯಲ್ಲೂ ಕೆಲವು ಪುಸ್ತಕಗಳು ಹೊರಬಂದಿವೆ.

ಡಿ.ಆರ್. ಪ್ರಾರಂಭಿಸಿದ ಮಾಲಿಕೆಗೆ ಆಶಯರೂಪದಲ್ಲಿ ಕೆಲವು ಮಾತುಗಳನ್ನು ಎಲ್ಲ ಪುಸ್ತಕಗಳ ಮೊದಲ ಪುಟದಲ್ಲೇ ಅಚ್ಚುಮಾಡಲಾಗಿತ್ತು. ಮಾಲಿಕೆಯ ಗುರಿ ಹೀಗಿದೆ: "ಸಮಾಜಗಳಿಗೆ ವಿಚಿತ್ರ ರೀತಿಯ ಮರೆವು ಆವರಿಸುತ್ತದೆ. ಅದರಲ್ಲೂ ತಾನು ಚಿಂತಿಸುತ್ತಿದ್ದ, ಪ್ರತಿಕ್ರಿಯಿಸುತ್ತಿದ್ದ, ಭಾವಿಸುತ್ತಿದ್ದ ಕ್ರಮಗಳು ಮರೆತು ಹೋಗುವುದು ದೊಡ್ಡ ದುರಂತವೇ ಸರಿ. ವಸಾಹತುಶಾಹಿ ನಂತರದ ಭಾರತೀಯ ಸಮಾಜಕ್ಕೆ ಈ ರೀತಿಯ ವಿಸ್ಕೃತಿ ಈಗ ಆವರಿಸಿಬಿಟ್ಟಿದೆ. ನಮ್ಮ ಸಮಾಜದೊಳಗೆ ಅಂತರ್ಗತವಾಗಿದ್ದ ವೈವಿಧ್ಯಮಯ ವೈಚಾರಿಕ ರಚನೆಗಳು ಮರೆತುಹೋಗಿರುವುದರಿಂದ ಆಗ ಲಭ್ಯವಿರುವ ಚಿಂತನಕ್ರಮಗಳು ಪೂರ್ಣವಾಗಿ ಪಶ್ಚಿಮಮುಖಿಯಾಗಿಬಿಟ್ಟಿವೆ. ನಮ್ಮನ್ನು ಕಾಡುತ್ತಿರುವ ಬಿಕ್ಕಟ್ಟುಗಳನ್ನು ಅವುಗಳ ಮೂಲಕ ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. 'ಅಕ್ಷರ ಚಿಂತನ'ದ ಪ್ರಮುಖ ಗುರಿ ಈ ವೈಚಾರಿಕ ವಿಸ್ಕೃತಿಯನ್ನು ದಾಟುವುದೇ ಆಗಿದೆ.

ಕನ್ನಡಿಗಳೋ, ದೀಪಗಳೋ ಆಗದ ಚಿಂತನೆಗಳು ನಿರುಪಯುಕ್ತ. ಈಗ ನಮ್ಮನ್ನು ಕಿತ್ತು ತಿನ್ನುತ್ತಿರುವ ಹಲವಾರು ಸಮಸ್ಯೆಗಳನ್ನು ಎದುರಿಸಲು ಉಪಯುಕ್ತವಾಗುವಂತಹ ಪರ್ಯಾಯ ಚಿಂತನಾಕ್ರಮಗಳನ್ನು 'ಅಕ್ಷರ ಚಿಂತನ' ವಿಮರ್ಶಾತ್ಮಕವಾಗಿ ಮಂಡಿಸುತ್ತದೆ. ಈಗ ಪ್ರತಿಷ್ಠಿತವಾಗಿರುವ ಅಧಿಕಾರಸ್ಥವಾಗಿರುವ ಬಲಿಷ್ಟವಾಗಿರುವ ಚಿಂತನಾಕ್ರಮಗಳಿಗಿಂತ ಬೇರೆಯದನ್ನು ಹುಡುಕುವ ಈ ಪುಸ್ತಕಮಾಲೆ, ಈಗ ಪಶ್ಚಿಮದಲ್ಲೂ ಭಿನ್ನಮತೀಯವಾಗಿರುವಂಥದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ...

ಕನ್ನಡದ ಮೂಲಕವೇ ಸಮಸ್ತ ವಿಶ್ವವನ್ನು ಕಂಡುಕೊಳ್ಳುವ ಮಹತ್ವಾಕಾಂಕ್ಷೀ ಪ್ರಯತ್ನ ಇದು.

ಡಿ.ಆ‌ರ್.ನ ಈ ಮಹತ್ವಾಕಾಂಕ್ಷಿ ಚಿಂತನ ಮಾಲಿಕೆ ಯಾವುದೋ ಒಂದು ಪ್ರಾಜೆಕ್ಟ್‌ಗಾಗಿ ಕೈಗೊಂಡಂಥದ್ದು, ಅದರಲ್ಲಿ 'ದಾರಾಶಿಖೋ' ಸೇರಿತು. ನಾನು ಈ ಕೃತಿಯನ್ನು ಬರೆದದ್ದು ಒಂದು ಪವಾಡವೆಂದೇ ಹೇಳಬೇಕು. ಕೇವಲ ಮೂರು ದಿನಗಳಲ್ಲಿ ಈ ಪುಟ್ಟ ಕೃತಿ ರಚನೆಯಾಯಿತು. ಹಾಗೆಂದು ನಾನು ಪ್ರಥಮ ಮುದ್ರಣದ ಮುನ್ನುಡಿಯಲ್ಲಿ ಬರೆದಾಗ ಡಿ.ಆರ್. ಆ ವಾಕ್ಯವನ್ನು ಬೇರೆ ರೀತಿ ಬರೆಯಿಸಿದ! ಓದುಗರು ಅದನ್ನು ಗಮನಿಸಬಹುದು.

ಡಿ.ಆರ್. ನನ್ನಷ್ಟು ಸೋಮಾರಿಯಾಗಿರಲಿಲ್ಲ! ಅವನು ತನ್ನ ಇನ್ನಿತರ ಚಟುವಟಿಕೆಗಳ ನಡುವೆ ಈ ಪ್ರಾಜೆಕ್ಷನ್ನು ತಡಮಾಡಿದ್ದನೆನಿಸುತ್ತದೆ! ಅದು ಅವನ ಕುತ್ತಿಗೆಗೆ ಬಂದಿತ್ತು! ಆಗ ನನ್ನ ತಲೆಯ ಮೇಲೆ ಕುಳಿತು ಈ ಪುಸ್ತಕದ ರಚನೆಗೆ ಕಾರಣನಾದ. ಅದೇನೇಯಿರಲಿ ಅವನಿಗೆ, ಅವನ ನೆನಪಿಗೆ ನನ್ನ ಸ್ನೇಹದ ಕೃತಜ್ಞತೆ ಸಲ್ಲಬೇಕು. ಹಾಗೆಯೇ ಕೆ.ವಿ.ಸುಬ್ಬಣ್ಣನವರ ಸ್ಮೃತಿಗೆ.

ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ನನ್ನ ಈ ಪುಟ್ಟ ಕೃತಿ ದಾರಾಶಿಖೋನನ್ನು ಕುರಿತು ಕನ್ನಡದಲ್ಲಿ ಬಂದ ಮೊದಲ ಪುಸ್ತಕ. ಚರಿತ್ರೆಯ ಪಠ್ಯಪುಸ್ತಕಗಳಲ್ಲಿ, 'ಮೊಘಲ್ ದೊರೆ ಶಹಜಹಾನನಿಗೆ- ದಾರಾ, ಶೂಜ, ಮುರಾದ್ ಮತ್ತು ಔರಂಗಜೇಬ್ ಎಂಬ ಮಕ್ಕಳಿದ್ದರು' ಎಂಬಂಥ ಎರಡು ಮೂರು ವಾಕ್ಯಗಳಲ್ಲಿ ಮಾತ್ರ ದಾರಾನ ಹೆಸರು ಕಾಣಿಸಿಕೊಳ್ಳುತ್ತದೆ(ನಾವು ಶಾಲೆ ಕಲಿಯುತ್ತಿದ್ದ ದಿನಗಳಲ್ಲಿ 'ದಾರಾ- ಸೂಜಿ' ಅಂದುಕೊಳ್ಳುತ್ತಿದ್ದೆವು!). ಇನ್ನೆಲ್ಲೂ ದಾರಾ ಪತ್ತೆಯಾಗುವುದಿಲ್ಲ! ಅವನು ಇತಿಹಾಸದಿಂದಲೇ ಕಣ್ಮರೆಯಾದ ದುರಂತ ವ್ಯಕ್ತಿ. ಈ ಕೃತಿ ರಚನೆಯಾಗುವ ಕಾಲದಲ್ಲಿ ಅಂತರ್ಜಾಲವಿನ್ನೂ ಬಂದಿರಲಿಲ್ಲ. ದಾರಾಶಿಯೋ ಕುರಿತಂತೆ ಇಂಗ್ಲಿಷಿನಲ್ಲೂ ಕೃತಿಗಳು, ಪರಾಮರ್ಶನ ಗ್ರಂಥಗಳು ಲಭ್ಯವಿರಲಿಲ್ಲ. ಇತ್ತೀಚೆಗೆ ಕೆಲವರು ಅವನನ್ನು ಕುರಿತು ಬರೆದಿದ್ದಾರೆ. ನನ್ನ ಪುಟ್ಟ ಕೃತಿಯು ನಮ್ಮ ಮುಖ್ಯ ನಾಟಕಕಾರರಾದ ಡಾ.ರಾಜಪ್ಪ ದಳವಾಯಿಯವರನ್ನು ಬಹಳವಾಗಿ ಆಕರ್ಷಿಸಿತ್ತು. ಅದನ್ನೇ ಆಧರಿಸಿ ಅವರು ಒಂದು ನಾಟಕವನ್ನೇ ರಚಿಸಿ ರಂಗದ ಮೇಲೆ ಪ್ರಯೋಗ ಮಾಡಿದ್ದರು. ಆನಂತರ ಅವರೇ ಒಂದು ಸ್ವತಂತ್ರ ನಾಟಕವನ್ನು ಬರೆದರು. ಅದನ್ನು ಪ್ರೀತಿಯಿಂದ ನನಗೆ ಅರ್ಪಿಸಿದ್ದಾರೆ. ಇತ್ತೀಚೆಗೆ ದಾರಾಶಿಖೋನನ್ನು ಕುರಿತು ಕನ್ನಡದ ಮತ್ತೊಬ್ಬ ಪ್ರಮುಖ ನಾಟಕಕಾರರಾದ ಶ್ರೀ ಜಯರಾಮ್ ರಾಯಪುರ ಅವರು 'ವಾರಸುದಾರ' ಎಂಬ ನಾಟಕವನ್ನು ರಚಿಸಿದರು. ಅದನ್ನು ಸುಪ್ರಸಿದ್ದ ನಿರ್ದೇಶಕರಾದ ಎಂ.ಎಸ್.ಸತ್ಯು ಅವರು ರಂಗಪ್ರಯೋಗಕ್ಕಿಳಿಸಿದರು. ಹೀಗೆ ಕನ್ನಡ ಓದುಗರನ್ನು, ಪ್ರೇಕ್ಷಕರನ್ನೂ ದಾರಾ ಮುಟ್ಟಿದ್ದಾನೆ. ಅವನು ಪ್ರತಿಪಾದಿಸಿದ ಧಾರ್ಮಿಕ ಸೌಹಾರ್ದತೆ ಹಿಂದೆಂದಿಗಿಂತಲೂ ಹೆಚ್ಚು ವರ್ತಮಾನ ಕಾಲದಲ್ಲಿ ಪ್ರಸ್ತುತವಾಗಿದೆ. ಇಂಥ ಮೌಲ್ಯವನ್ನು ನಮ್ಮ ನಡುವೆ ಬಿತ್ತಿ ಬೆಳೆಸಿದ. ಬೆಳಸುತ್ತಾ ಬದುಕುತ್ತಿರುವ ನಮಗೆಲ್ಲ ಪ್ರಿಯರಾದ ಪ್ರೊ.ಜಿ.ಆರ್. ಅವರಿಗೆ ಈ ಮುದ್ರಣವನ್ನು, ಅವರನ್ನು ಕೇಳದೆಯೇ ಅರ್ಪಿಸುತ್ತಿದ್ದೇನೆ. ಅವರಿಗೆ ವಂದನೆಗಳು.

ನನ್ನ ಕೃತಿಯ ಮರುಮುದ್ರಣವನ್ನು 'ಸಖೀಗೀತ ಪ್ರಕಾಶನ' ತಾವಾಗಿಯೇ ಮುಂದೆ ಬಂದು ಪ್ರಕಾಶಗೊಳಿಸುತ್ತಿದ್ದಾರೆ. ಕಲಾವಿದ ಗೆಳೆಯರಾದ ಯು.ಟಿ.ಸುರೇಶ್ ಬಗ್ಗೆ ಒಂದು ಮಾತು ಬರೆಯಲೇಬೇಕು. ಡಿ.ಆರ್. ಯೋಜಿಸಿದ ಮಾಲಿಕೆಯ ಮೊದಲ ಕಂತಿನ ಎಲ್ಲ ಕೃತಿಗಳಿಗೂ ಮುಖಪುಟ ವಿನ್ಯಾಸವನ್ನು ವಿಶೇಷ ಮುತುವರ್ಜಿಯಿಂದ ಮಾಡಿದ್ದವರು ಸುರೇಶ್. ಅವರೇ ಈಗಲೂ ತುಂಬ ಆಕರ್ಷಕವಾದ ಮುಖಪುಟ ರಚಿಸಿದ್ದಾರೆ. ಅಕ್ಷರ ಜೋಡಣೆ ಮಾಡಿದ ನಾಗಮಣಿ, ಪುಟವಿನ್ಯಾಸ ಮಾಡಿದ ಕತೆಗಾರ ಮಂಜುನಾಥ ವಿ.ಎಂ. ಹಾಗೂ ಮುದ್ರಿಸಿಕೊಟ್ಟ ಸ್ವಾನ್ ಕೃಷ್ಣಮೂರ್ತಿ ಇವರೆಲ್ಲರಿಗೂ ನನ್ನ ತುಂಬು ಪ್ರೀತಿಯ ವಂದನೆಗಳು.

- ಅಗ್ರಹಾರ ಕೃಷ್ಣಮೂರ್ತಿ

MORE FEATURES

GANDHI MAY; ಇಲ್ಲೊಂದು ಎಚ್ಚೆತ್ತ ನಾಗರಿಕ ಪ್ರಜ್ಞೆಯ ಮನಸ್ಸು ಕೆಲಸ ಮಾಡುತ್ತಿದೆ

10-01-2025 ಬೆಂಗಳೂರು

“ಭಾರತದ ಪ್ರಭುತ್ವ ಅಧಿಕಾರಶಾಹಿ ರಾಜಕೀಯ ಪಕ್ಷಗಳು, ಹೇಗೆ ಸಂವಿಧಾನಾತ್ಮಕ ನೈತಿಕತೆ ಮತ್ತು ಆದರ್ಶದ ಗೆರೆಗಳನ್ನು ಉ...

Gandasaagi kavithe bareyuvudu sulabha; ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ

10-01-2025 ಬೆಂಗಳೂರು

"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...

Nadavargal; ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು

10-01-2025 ಬೆಂಗಳೂರು

“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...