Date: 01-01-2025
Location: ಬೆಂಗಳೂರು
ಸರಿಯಾಗಿ ಎರಡೂವರೆ ವರ್ಷಗಳ ಹಿಂದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ‘ಅನ್ ಲಾಕ್ ರಾಘವ’ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಕಳೆದ ವರ್ಷವೇ ಚಿತ್ರದ ಚಿತ್ರೀಕರಣ ಮುಗಿದಿದ್ದರೂ, ಬಿಡುಗಡೆಯಾಗಿರಲಿಲ್ಲ. ಈಗ ಹೊಸ ವರ್ಷದಲ್ಲಿ ಬರುವುದಕ್ಕೆ ರಾಘವ ತಯಾರಿ ನಡೆಸಿದ್ದಾನೆ. ಚಿತ್ರವು ಫೆಬ್ರವರಿ 07ರಂದು ರಾಜ್ಯಾದ್ಯಂತ ಬಿಡುಡೆಯಾಗುತ್ತಿದೆ.
ಮಿಲಿಂದ್ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ. ಇನ್ನು ‘ರಾಮ ರಾಮಾ ರೇ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದ ಡಿ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ದೀಪಕ್ ಮಧುವನಹಳ್ಳಿ ಈ ಹಿಂದೆ ‘ಭಾಗ್ಯರಾಜ್’ ಮತ್ತು ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರಗಳನ್ನು ನೋಡಿದ್ದ ಅವರ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರಂತೆ. ಆದರೆ, ‘ಅನ್ ಲಾಕ್ ರಾಘವ’ ಚಿತ್ರದ ಫಸ್ಟ್ ಲುಕ್ ನಲ್ಲಿ ರೆಚೆಲ್ ಅವರನ್ನು ನೋಡಿದ ಗೆಳೆಯರು ಈಗ ನೀನೊಬ್ಬ ಕಮರ್ಷಿಯಲ್ ಚಿತ್ರದ ನಿರ್ದೇಶಕ ಎಂದು ಬೆನ್ನು ತಟ್ಟಿದರಂತೆ.
‘ಅನ್ ಲಾಕ್ ರಾಘವ’ ಕುರಿತು ಮಾತನಾಡುವ ದೀಪಕ್, ‘ಇದೊಂದು ಪಕ್ಕಾ ಮನೋರಂಜನೆಯ ಮತ್ತು ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಬಗನ್ನು ನೋಡುವುದೇ ಚೆಂದ. ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
ಸತ್ಯಪ್ರಕಾಶ್ ಹೇಳಿದ ಕಥೆ ಮಿಲಿಂದ್‍ಗೆ ಇಷ್ಟವಾಯಿತಂತೆ. ‘ಹೊಸ ನಾಯಕನ ಎಂಟ್ರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ಒಂದು ಚೆಂದವಾದ ಕಥೆಯನ್ನು ಸತ್ಯಪ್ರಕಾಶ್ ಅವರು ಕಟ್ಟಿ ಕೊಟ್ಟಿದ್ದಾರೆ. ಅಷ್ಟೇ ಸುಂದರವಾಗಿ ದೀಪಕ್ ನಿರ್ದೇಶನ ಮಾಡಿದ್ದಾರೆ. ರೆಚೆಲ್ ಅವರ ಅಭಿನಯ ಅದ್ಭುತವಾಗಿದೆ. ನೀವು ಈ ಹಿಂದೆ ಯಾವ ಚಿತ್ರಗಳಲ್ಲೂ ನೋಡಿರದ ಸಾಧು ಕೋಕಿಲ ಹಾಗೂ ಶೋಭರಾಜ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಅವಿನಾಶ್, ಭೂಮಿ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿದ್ದಾರೆ’ ಎನ್ನುತ್ತಾರೆ ಮಿಲಿಂದ್. ಈ ಚಿತ್ರದಲ್ಲಿ ಅವರು ರಾಘವ ಎಂಬ ಬೀಗ ರಿಪೇರಿ ಮಾಡುವ ಯುವಕನ ಪಾತ್ರ ಮಾಡಿದ್ದಾರಂತೆ.
ದೀಪಕ್ ಅವರು ಈ ಚಿತ್ರದ ಕಥೆ ಹೇಳಿದಾಗಲೇ ಈ ಚಿತ್ರದಲ್ಲಿ ನಟಿಸಬೇಕು ಎಂದು ರೆಚೆಲ್ ನಿರ್ಧರಿಸಿದ್ದರಂತೆ. ‘ಕಥೆ ಅಷ್ಟೊಂದು ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಆರ್ಕಿಯಾಲಜಿಸ್ಟ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಜಾನಕಿ ನನ್ನ ಪಾತ್ರದ ಹೆಸರು’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ರೆಚೆಲ್ ಡೇವಿಡ್.
ಮಂಜುನಾಥ್ ನಿರ್ಮಾಣದ ನಾಲ್ಕನೇ ಚಿತ್ರ ಇದು. ಸುನೀಲ್ ಕುಮಾರ್ ದೇಸಾಯಿ ನಿರ್ಮಾಣದ ‘ಉದ್ಘರ್ಷ’ ಮತ್ತು ಸತ್ಯಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳನ್ನು ಅವರು ಈ ಹಿಂದೆ ನಿರ್ಮಿಸಿದ್ದರು. ‘ಇತ್ತೀಚಿಗೆ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಯಿತು. ಇದೊಂದು ನಮ್ಮ ಸೊಗಡಿನ ಚಿತ್ರ’ ಎನ್ನುತ್ತಾರೆ.
‘ಇದು ಹೈ ವೋಲ್ಟೇಜ್ ಪ್ರೇಮಕಥೆ …’ ಎಂಬ ಅಡಿಬರಹದೊಂದಿಗೆ ಬರುತ್ತಿದೆ ನಿರಂಜನ್ ಶೆಟ್ಟಿ ಅಭಿನ...
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್, ‘ಜಿಮ್ಮಿ’ ಎ...
ಗಣೇಶ್ ಬಹಳ ವರ್ಷಗಳಿಂದ ಬೇರೆ ತರಹದ ಪಾತ್ರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರಂತೆ. ಆದರೆ, ಕಾರಣಾಂತರಗಳಿ...
©2025 Book Brahma Private Limited.