ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ

Date: 11-05-2023

Location: ಬೆಂಗಳೂರು


ಲಿಂಗಾಯತ ಧರ್ಮದ ಸಿದ್ಧಾಂತಗಳ ಬಗೆಗೆ ಪ್ರಸ್ತಾಪಿಸಿರುವ ವೀರಮ್ಮ ಮತ್ತು ಸತಿಪತಿ ಭಾವವನ್ನು ವ್ಯಕ್ತಗೊಳಿಸಿರುವ ಕದಿರ ರೆಮ್ಮವ್ವೆ ಇವರಿಬ್ಬರ ಬಗ್ಗೆ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಲೇಖಕಿ ವಿಜಯಶ್ರೀ ಸಬರದ ಚರ್ಚಿಸಿದ್ದಾರೆ.

ವೀರಮ್ಮ ಹೆಸರಿನ ಮೂವರು ಶರಣೆಯರಿದ್ದಾರೆ. ತೆರಕಣಾಂಬಿಯ ವೀರಮ್ಮ, ದೀಪದ ವೀರಮ್ಮ ಮತ್ತು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ. ಈ ಮೂವರು ಶರಣೆಯರಲ್ಲಿ ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮಾತ್ರ ವಚನಗಳನ್ನು ರಚಿಸಿದ್ದಾಳೆ. ಈಕೆ ದಸರಯ್ಯನ ಪತ್ನಿಯೆಂದು "ಅಮರಗಣಾಧೀಶ್ವರರ ಚರಿತ್ರೆ"ಯಿಂದ ತಿಳಿದು ಬರುತ್ತದೆ. ದಸರಯ್ಯನು ಬಸವಾದಿ ಶರಣರ ಸಮಕಾಲೀನನಾಗಿದ್ದು ಇವರ ಕಾಲ ಕ್ರಿ.ಶ.1160 ಆಗಿದೆ. ದಸರಯ್ಯ ಮತ್ತು ವೀರಮ್ಮ ರಾಮಗೊಂಡ ಗ್ರಾಮಕ್ಕೆ ಸೇರಿದವರಾಗಿದ್ದರೆಂದು ತಿಳಿದುಬರುತ್ತದೆ. ಪುರಾಣಕಾವ್ಯಗಳಲ್ಲಿ ಈಕೆಯ ಪ್ರಸ್ತಾಪವಿಲ್ಲ. ಸಿದ್ಧನಂಜೇಶನ "ಗುರುರಾಜ ಚಾರಿತ್ರ"ದಲ್ಲಿ ತೆರಕಣಾಂಬಿಯ ವೀರಮ್ಮನ ಪ್ರಸ್ತಾಪವಿದೆ. ಜನಪದ ಕಾವ್ಯದಲ್ಲಾಗಲಿ, ಆಧುನಿಕ ಕೃತಿಗಳಲ್ಲಾಗಲಿ ವೀರಮ್ಮನ ಪ್ರಸ್ತಾಪವಿಲ್ಲ.

ದಸರಯ್ಯನೆಂಬ ಶರಣ ದಯೆಯೇ ಸಾಕಾರದ ಮೂರ್ತಿಯಂತಿದ್ದ. ಆತನ ಪತ್ನಿಯಾಗಿದ್ದ ವೀರಮ್ಮ ಕೂಡ ದಯಾಮಯಿಯೇ ಆಗಿದ್ದಳು. ಪತಿಯೇ ಪರದೈವವೆಂದು ನಂಬಿದ್ದ ವೀರಮ್ಮ ಪತಿ ನಡೆದ ದಾರಿಯಲ್ಲಿ ನಡೆದಳು, ಜೀವಿಯ ನೋವೇ ಲಿಂಗದ ನೋವೆಂದು ಭಾವಿಸಿದಳು. ಪತಿಗೆ ತಕ್ಕ ಸತಿಯಾಗಿ, ಪತಿಯನ್ನು ನೆರಳಿನಂತೆ ಹಿಂಬಾಲಿಸಿದ ವೀರಮ್ಮ ಸಾತ್ವಿಕ ಶಿರೋಮಣಿಯಾಗಿದ್ದಳು, ಶಿವಾನುಭಾವಿಯಾಗಿದ್ದಳು. ಈಕೆ ಎಷ್ಟೊಂದು ದಯಾಮಯಿಯಾಗಿದ್ದಳೋ ಶರಣಸಿದ್ಧಾಂತಕ್ಕೆ ಸಂಬಂಧಿಸಿದಂತೆ ಅಷ್ಟೇ ನಿಷ್ಠುರಳಾಗಿದ್ದಳು. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎನ್ನುವ ಜೇಡರ ದಾಸಿಮಯ್ಯನವರ ಮಾತು ಈ ದಂಪತಿಗಳ ಬದುಕಿಗೆ ಸರಿಯಾಗಿ ಅನ್ವಯಿಸುತ್ತದೆ.

ವೀರಮ್ಮ "ಗುರುಶಾಂತೇಶ್ವರಾ" ಅಂಕಿತದಲ್ಲಿ ಐದು ವಚನಗಳನ್ನು ರಚಿಸಿದ್ದಾಳೆ. ಫ.ಗು.ಹಳಕಟ್ಟಿಯವರ "ಶರಣೆಯರ ಚರಿತ್ರೆಗಳು" ಗ್ರಂಥದಲ್ಲಿ ಮೂರು ವಚನಗಳು, ಡಾ.ಆರ್.ಸಿ.ಹಿರೇಮಠರು ಸಂಪಾದಿಸಿರುವ "ಇಪ್ಪತ್ತೇಳು ಶಿವಶರಣೆಯರ ವಚನಗಳು" ಗ್ರಂಥಗಳಲ್ಲಿ ಮೂರು ವಚನಗಳು ಪ್ರಕಟವಾಗಿವೆ. ಆದರೆ ಇವುಗಳಲ್ಲಿ ಒಂದು ವಚನವು ಎರಡೂ ಗ್ರಂಥಗಳಲ್ಲಿ ಒಂದೇ ರೀತಿಯಾಗಿದೆ. ಹೀಗಾಗಿ ಈಕೆಯ ಐದು ವಚನಗಳು ಪ್ರಕಟವಾಗಿವೆ.

ವೀರಮ್ಮನ ವಚನಗಳಲ್ಲಿ ಲಿಂಗಾಯತ ಧರ್ಮದ ಸಿದ್ಧಾಂತಗಳ ಬಗೆಗೆ ಪ್ರಸ್ತಾಪಿಸಲಾಗಿದೆ. ಪಾದೋದಕ ಪ್ರಸಾದದಂತಹ ಅಷ್ಟಾವರಣಗಳು ಈಕೆಯ ವಚನಗಳಲ್ಲಿ ಪ್ರಸ್ತಾಪವಾಗಿವೆ. ಭಕ್ತಿ, ಆಧ್ಯಾತ್ಮ ವಿಷಯಗಳ ಬಗೆಗೂ ವಚನ ರಚಿಸಿದ್ದಾಳೆ. ``ನಿಜಗುರು ಶಾಂತೇಶ್ವರ''ನೆಂಬುದು ಈಕೆಯ ಆರಾಧ್ಯ ದೈವವಾಗಿದೆ. ಗುರುಮುಖದಿಂದ ಬಂದುದೇ ಗುರುಪ್ರಸಾದ, ಆ ಪ್ರಸಾದವನ್ನು ಲಿಂಗಕ್ಕರ್ಪಿಸಿದಾಗ ಅದು ಲಿಂಗ ಪ್ರಸಾದವಾಗುತ್ತದೆಂದು, ಪ್ರಸಾದದ ಬಗೆಗೆ ಸರಳ ಮಾತುಗಳಲ್ಲಿ ಹೇಳಿದ್ದಾಳೆ. ಭೋಜ್ಯ ಕಟ್ಟಿ ಲಿಂಗಕ್ಕೆ ಕೊಟ್ಟು ಸಲಿಸುವುದೇ ಜಂಗಮಪ್ರಸಾದವೆಂದು ತಿಳಿಸಿದ್ದಾಳೆ. ಮನವೇ ಲಿಂಗವಾಗಿ, ಬುದ್ಧಿಯೇ ಶಿವಜ್ಞಾನವಾಗಿ, ಚಿತ್ತವೇ ಶಿವದಾಸೋಹವಾಗಬೇಕೆಂದು ಹೇಳಿದ್ದಾಳೆ.

"ಪರಿಪೂರ್ಣನಲ್ಲ, ಪ್ರದೇಶಿಕನಲ್ಲನಿರತಿಶಯದೊಳತಿಶಯ ತಾ ಮುನ್ನಲ್ಲ
ಶರಣನಲ್ಲ, ಐಕ್ಯನಲ್ಲ, ಪರಮನಲ್ಲ, ಜೀವನಲ್ಲ
ನಿರವಯನಲ್ಲ, ಸಾವಯನಲ್ಲ

ಪರವಿಹವೆಂಬುಭಯದೊಳಿಲ್ಲದವನು
ನಿರಾಲಯ ನಿಜಗುರು ಶಾಂತೇಶ್ವರನ ಶರಣನ ನಿಲುವು
ಉಪಮೆಗೆ ತಾನನುಪಮ."

- ಸ.ವ.ಸಂ.5, ವ-783, 1993

ಈ ವಚನದಲ್ಲಿ ದ್ವಂದ್ವವನ್ನು ಮೀರಿನಿಲ್ಲಬಹುದಾದ ಸಾಧ್ಯತೆಯ ಬಗೆಗೆ ಪ್ರಸ್ತಾಪವಿದೆ. ಪರಿಪೂರ್ಣ-ಅಪೂರ್ಣ, ಪ್ರಾದೇಶಿಕ-ಜಾಗತಿಕ, ಅತಿಶಯ-ನಿರತಿಶಯ, ಈ ದ್ವಂದ್ವಗಳನ್ನು ಮೀರಿ ಬದುಕಿದಾಗ ಉಪಮೆಗೆ ಸಿಲುಕದ ಅನುಪಮ ಬದುಕು ಸಾಧಕನದಾಗುತ್ತದೆಂದು ತಿಳಿಸಿದ್ದಾಳೆ.

ಪಾದೋದಕದ ಬಗೆಗೆ ಒಂದು ವಚನವನ್ನೇ ರಚಿಸಿದ್ದಾಳೆ. ನೀರು ಪಾದೋದಕವಲ್ಲ, ಕೂಳು ಪ್ರಸಾದವಲ್ಲ. ನೀರು ಮತ್ತು ಕೂಳು ಕಣ್ಣಿಗೆ ಕಾಣುವ ವಸ್ತುಗಳು. ಇವುಗಳು ಸಾಧಕನ ಆಚರಣೆಯಲ್ಲಿ, ಪಾದೋದಕವಾಗಿ-ಪ್ರಸಾದವಾಗಿ ಕಾಣಿಸುತ್ತವೆ. ಕೇವಲ ಪಾದದಲ್ಲಿ ಪಾದೋದಕವಿರದೆ ಅದು ದಶವಿಧ ರೀತಿಯಲ್ಲಿದೆಯೆಂದು ಹೇಳಿದ್ದಾಳೆ. ಈಕೆಯ ಬದುಕಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳು, ದಾಖಲೆಗಳು ದೊರೆತಿಲ್ಲ. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ಕದಿರ ರೆಮ್ಮವ್ವೆ

ಕದಿರ ಎಂದರೆ ನೂಲುಸುತ್ತುವ ಸಾಧನ ಎಂದರ್ಥ. ರೆಮ್ಮವ್ವೆ ನೇಕಾರಳಾಗಿದ್ದ ಳೆಂಬುದಕ್ಕೆ ಅವಳ ಹೆಸರೇ ಸಾಕ್ಷಿಯಾಗಿದೆ. ಆಕೆಯ ವಚನಗಳಲ್ಲಿಯೂ ನೇಕಾರಿಕೆಯ ವೃತ್ತಿ ಪ್ರತಿಮೆಗಳು ಬಳಕೆಯಾಗಿವೆ. ರೆಮ್ಮವ್ವೆಯನ್ನು ರೆಬ್ಬವ್ವೆಯೆಂದೂ ಕರೆಯಲಾಗುತ್ತಿತ್ತೆಂದು ತಿಳಿದುಬರುತ್ತದೆ. ಕದಿರ ರೇಮಯ್ಯನ ಸತಿ ಈಕೆಯೆಂದು ಕವಿಚರಿತೆಕಾರರು ಹೇಳಿದ್ದಾರೆ. "ರೇಮಯ್ಯನಿಗೆ ಹತ್ತಿದ ವಿಶೇಷಣ ಅವನ ಸ್ಥಳವನ್ನು ಸೂಚಿಸಿದರೆ, ರೆಮ್ಮವ್ವೆಯ್ಯದು ಆಕೆಯ ವೃತ್ತಿಸೂಚಿಯಾಗಿ ಬಂದಿದೆ. ಹೀಗಾಗಿ ಈಕೆ ರೇಮಯ್ಯನ ಸತಿಯೆಂದು ನಂಬಲು ಖಚಿತ ಆಧಾರಗಳಿಲ್ಲವೆಂದೇ ಹೇಳಬೇಕಾಗುತ್ತದೆ" ಎಂದು ಡಾ.ವೀರಣ್ಣ ರಾಜೂರ ಅವರು ಹೇಳಿದ್ದಾರೆ. (ಸ.ವ.ಸಂ.5, ಪ್ರಸ್ತಾವನೆ, ಪುಟ-46, 1993) ಕೇವಲ "ಕದಿರ" ಎಂಬ ಹೆಸರು ಇದ್ದಾಕ್ಷಣ ಆಕೆ ಅವನ ಸತಿಯಾಗುವುದಿಲ್ಲ. ಸಧ್ಯಕ್ಕೆ ಕದಿರ ರೆಮ್ಮವ್ವೆ ನೇಕಾರ ವೃತ್ತಿಯ ಶರಣೆಯೆಂಬುದನ್ನು ಮಾತ್ರ ನಂಬಬಹುದಾಗಿದೆ.

ಈಕೆಯ ಕಾಲವನ್ನು ಡಾ.ಎಲ್.ಬಸವರಾಜು ಅವರು ಕ್ರಿ.ಶ.1430 ಎಂದು ಹೇಳಿದ್ದಾರೆ. ಈಕೆಯ ವಚನಗಳಲ್ಲಿ ಬಳಕೆಯಾಗಿರುವ "ಗಜವೇಂಟೆಗಾರ" ಮತ್ತು "ಪರದಳ ವಿಭಾಡ"ದಂತಹ ಪದಗಳನ್ನು ವಿಜಯನಗರದ ಅರಸರ ಕಾಲದಲ್ಲಿ ಬಳಸಲಾಗುತ್ತಿತ್ತೆಂದು ಅವರು ತಿಳಿಸಿದ್ದಾರೆ. ಆದರೆ ಹರಿಹರನು ತನ್ನ "ಲಿಂಗಾರ್ಚನೆಯ ರಗಳೆ"ಯಲ್ಲಿ 50 ಶಿವಶರಣೆಯರ ನಾಮಸ್ಮರಣೆ ಮಾಡಿದ್ದಾನೆ. ಅವುಗಳಲ್ಲಿ ರೆÉಮ್ಮವ್ವೆಯ ಹೆಸರೂ ಇದೆ. ಹರಿಹರನ ಕಾಲ 13ನೇ ಶತಮಾನ ಹೀಗಿರುವಾಗ ರೆಮ್ಮವ್ವೆ ವಿಜಯನಗರದ ಅರಸರ ಕಾಲದವಳಾಗಿರದೆ, ಶರಣರ ಸಮಕಾಲೀನ ಶರಣೆಯಾಗಿದ್ದಳೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಪಾಲ್ಕುರಿಕೆ ಸೋಮನಾಥನ "ಪಂಡಿತಾರಾಧ್ಯ ಚಾರಿತ್ರ"ದಲ್ಲಿ ಈಕೆಯ ಹೆಸರನ್ನು ಸ್ಮರಿಸಲಾಗಿದೆ. ಸಿದ್ಧನಂಜೇಶನ "ಗುರುರಾಜ ಚಾರಿತ್ರ"ದಲ್ಲಿ ಕದಿರ ರೇಮಯ್ಯನಿಗೆ ಸಂಬಂಧಿಸಿದ ಪವಾಡಕತೆಯಿದ್ದು, ಅದಕ್ಕೂ ರೆಮ್ಮವ್ವೆಗೂ ಸಂಬಂಧವಿಲ್ಲವೆಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ.

ಕದಿರ ರೆಮ್ಮವ್ವೆಯ ನಾಲ್ಕು ವಚನಗಳು ಪ್ರಕಟವಾಗಿವೆ. "ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ"ವೆಂಬುದು ಈಕೆಯ ವಚನಾಂಕಿತವಾಗಿದೆ. ಬಸವಣ್ಣ-ಚೆನ್ನಬಸವಣ್ಣ- ಅಲ್ಲಮಪ್ರಭು ಇವರನ್ನು ತನ್ನ ವಚನದಲ್ಲಿ ಸ್ಮರಣೆ ಮಾಡಿದ್ದಾಳೆ. ತನ್ನ ಸ್ಥೂಲತನುವೆ ಬಸವಣ್ಣ, ಸೂಕ್ಷ್ಮತನುವೆ ಚೆನ್ನಬಸವಣ್ಣ, ಕಾರಣತನುವೆ ಪ್ರಭುದೇವರಯ್ಯ ಎಂದು ಹೇಳಿ ಇವರ ಕರುಣದಿಂದ ತಾನು ಬದುಕಿದೆನೆಂದು ಹೇಳಿದ್ದಾಳೆ.

"ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ,
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು, ಕದಿರು ತುಂಬಿತ್ತು. ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ"

- ಸ.ವ.ಸಂ.5, ವ-747, 1993

ಈ ವಚನದಲ್ಲಿ ಕದಿರ ರೆಮ್ಮವ್ವೆ ತನ್ನ ವೃತ್ತಿಪ್ರತಿಮೆಯ ಮೂಲಕ ಆಧ್ಯಾತ್ಮದ ಪರಿಯನ್ನು ವಿವರಿಸಿದ್ದಾಳೆ. "ಕದಿರು" ಎಂದರೆ ನೂಲು ತೆಗೆಯುವ ಕಡ್ಡಿಯಂತಹ ಸಾಧನವೆಂದು ಪದಕೋಶದಲ್ಲಿ ಹೇಳಲಾಗಿದೆ. ಇಲ್ಲಿ ಅರಿವೇ ಕದಿರಾಗಿದೆ. ಭಕ್ತಿಯೆಂಬ ಕೈಯಲ್ಲಿ ಅದನ್ನು ತಿರುಹುತ್ತ ಹೋದಂತೆ ನೂಲು ಸುತ್ತಿ ಸುತ್ತಿ ಕದಿರು ತುಂಬುತ್ತದೆಂದು ಹೇಳಿದ್ದಾಳೆ. ಬ್ರಹ್ಮ-ವಿಷ್ಣು-ಮಹಾರುದ್ರರೂ ಇಲ್ಲಿ ಕ್ರಮವಾಗಿ, ಹಲಗೆ, ತೋರಣ,ಬೊಂಬೆಯಾಗಿ ಕಾಣಿಸಿಕೊಂಡಿದ್ದಾರೆ. "ಎಲ್ಲರ ಹೆಂಡಿರು ತೊಳಸಿಕ್ಕುವರು ಎನ್ನ ಗಂಡಂಗೆ ತೊಳಸುವುದಿಲ್ಲ....." (ವ.746) ಎನ್ನುವ ವಚನದಲ್ಲಿಯೂ ವೃತ್ತಿ ಪ್ರತಿಮೆಯೇ ಪ್ರಧಾನವಾಗಿದೆ. "ಎಲ್ಲರ ಗಂಡಂದಿರಗೆ ಬೀಜವುಂಟು, ಎನ್ನ ಗಂಡಂಗೆ ಅಂಡದ ಬೀಜವಿಲ್ಲ"ವೆಂದು ಹೇಳಿರುವುದು "ಎಲ್ಲರ ಗಂಡಂದಿರು ಮೇಲೆ, ಎನ್ನ ಗಂಡ ಕೆಳಗೆ, ನಾ ಮೇಲೆ" ಎಂದು ಹೇಳಿರುವುದು ತನ್ನ ವೃತ್ತಿ ಸಾಧನವಾಗಿದ್ದ ಮಗ್ಗವನ್ನು ಕುರಿತೇ ಹೇಳಲಾಗಿದೆ. ಮಗ್ಗದ ಮೇಲೆ, ಕುಳಿತು ನೇಕಾರರು ನೇಯ್ಗೆ ಕೆಲಸ ಮಾಡುತ್ತಾರೆ. ಮಗ್ಗವೇ ಇಲ್ಲಿ ಪತಿಮೆಯಾಗಿದೆ, ಮಗ್ಗದ ಮೇಲೆ ಕುಳಿತ ತಾನು ಸತಿಯಾಗಿದ್ದಾಳೆ. ಮಗ್ಗ ಕೆಳಗಿದ್ದು, ನೇಕಾರ ಮೇಲಿರುವುದರಿಂದ ತನ್ನ ಪತಿ ಕೆಳಗೆ, ತಾನು ಅವನ ಮೇಲೆ ಎಂದು ವೃತ್ತಿಪ್ರತಿಮೆಯ ಮೂಲಕ ಬೆಡಗಿನ ಶೈಲಿಯಲ್ಲಿ ಹೇಳಿದ್ದಾಳೆ. ವೃತ್ತಿ ಪ್ರತಿಮೆಯು, ಇಲ್ಲಿ ಸತಿಪತಿಭಾವದ ಮೂಲಕ ಕಾಣಿಸಿಕೊಂಡಿದೆ. ರೆಮ್ಮವ್ವೆಯನ್ನು ಕುರಿತು ಹೆ

ಈ ಅಂಕಣದ ಹಿಂದಿನ ಬರೆಹಗಳು:
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಸತ್ಯಕ್ಕ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಅಕ್ಕನಾಗಮ್ಮ
ಅಮುಗೆ ರಾಯಮ್ಮ
ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ

ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಹೊಸ ರೂಪಕದ ಕವಿತೆಗಳು 

07-11-2024 ಬೆಂಗಳೂರು

"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...

ಗುರುಗಳ ಮಹಿಮೆ ಕಥೆಯಲ್ಲಿರುವ ತಾರ್ಕಿಕತೆ

06-11-2024 ಬೆಂಗಳೂರು

"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...

ಯಾರು ಅರಿಯದ ವೀರನ ತ್ಯಾಗ

31-10-2024 ಬೆಂಗಳೂರು

"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...