ಛಲವಾದಿ ವೇದಿಕೆಯಲ್ಲಿ ಬಿಡುಗಡೆಗೊಂಡ ‘ಸಂಜು ವೆಡ್ಸ್ ಗೀತಾ-2’ ಹಾಡು

Date: 07-10-2024

Location: ಬೆಂಗಳೂರು


ಬೆಂಗಳೂರು: ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಿಸಿರುವ ಕನ್ನಡದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಅಂಬೇಡ್ಕರ್ ಭವನದ ಸುಂದರ ವೇದಿಕೆಯಲ್ಲಿ ನೆರವೇರಿತು.

ನಟಿ ರಾಗಿಣಿ ದ್ವಿವೇದಿ ಅಭಿನಯದ ಈ ಹಾಡನ್ನು ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ಜೊತೆಗೆ ಬಸನಾಗಿ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು.

ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಛಲವಾದಿ ಮಹಾಸಭಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡುತ್ತ 'ನಮ್ಮ ಸಹೋದರ ಕುಮಾರ್ ಈಗ ಸಿನಿಮಾ ರಂಗದಲ್ಲಿ ನಿರ್ಮಾಪಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ, ತುಂಬಾ ಖರ್ಚು ಮಾಡಿ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಅಲ್ಲದೆ ನಮ್ಮವರೇ ಆದ ನಾಗಶೇಖರ್ ಇದಕ್ಕೆ ನಿರ್ದೇಶನ ಮಾಡಿದ್ದಾರೆ. ಸಮಾಜದ ನ್ಯೂನತೆಗಳನ್ನು ತೊಡೆದು ಹಾಕೋ ಕೆಲಸವನ್ನು ನಮ್ಮ ಸಿನಿಮಾಗಳು ಮಾಡಲಿ, ಈ ಚಿತ್ರವು ಅತ್ಯಂತ ಯಶಸ್ವಿಯಾಗಲಿ ಅಂತ ಹಾರೈಸುತ್ತೇನೆ ಎಂದು ಶುಭ ಹಾರೈಸಿದರು. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ರೇಶ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ.

ನಂತರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಡಿಪರೆಂಟ್ ಪ್ಯಾಟ್ರನ್‌ನಲ್ಲಿ ಮೂಡಿಬಂದಿರುವ, ರಾಗಿಣಿ ಅಭಿನಯದ ಈ ಹಾಡನ್ನು ನಮ್ಮ ನಾರಾಯಣಸ್ವಾಮಿ ಅವರ ಕೈಲೇ ರಿಲೀಸ್ ಮಾಡಿಸಬೇಕೆಂದಿತ್ತು, ಹಾಡು ಅದ್ಭುತವಾಗಿ ಮೂಡಿಬಂದಿದೆ. ಇದು ಅಪ್ಪಟ ಪ್ಯಾಮಿಲಿ ಸ್ಟೋರಿ, ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೆನಪಿಸುತ್ತೆ, ರಚಿತಾರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ದೊಡ್ಡ ದೊಡ್ಡ ಕಲಾವಿದರೇ ಅಭಿನಯಿಸಿದ್ದಾರೆ ಎಂದು ಹೇಳಿದರು.

ನಿರ್ದೇಶಕ ನಾಗಶೇಖರ್ ಮಾತನಾಡುತ್ತ, ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ಹೀಗೆ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರೀಕರಿಸಿದ್ದೇವೆ, ಇವತ್ತು ಇಂಥ ದೊಡ್ಡ ವೇದಿಕೆಯಲ್ಲಿ ನಮ್ಮ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರವೀಗ ರಿರೆಕಾರ್ಡಿಂಗ್ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ, ಖುಷಿಯ ವಿಚಾರ ಏನೆಂದರೆ ಬಿಡುಗಡೆಗೂ ಮುನ್ನವೇ ಗೋಕುಲ್ ಪಿಲಂಸ್‌ನವರು ನಮ್ಮ ಚಿತ್ರವನ್ನು ಖರೀದಿ ಮಾಡಿದ್ದಾರೆ. ರಿಲೀಸ್ ಡೇಟ್ ಅನೌನ್ಸ್ ಮಾಡಲು ನಾವಂತೂ ರೆಡಿ ಇದ್ದೇವೆ. ಚಿತ್ರದಲ್ಲಿ 5 ಹಾಡುಗಳಿದ್ದು, ಒಂದು ಹಾಡಿಗೆ ಲಹರಿ ಸಂಸ್ಥೆಯ ಅನುಮತಿ ಬೇಕಿದೆ, ನಮ್ಮ ಮಣ್ಣಿನ ಕಥೆ ಮಾಡಲು ಹೊರಟಾಗ ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ ಕಣ್ಣಮುಂದೆ ಬಂತು, ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಚಿತ್ರದಲ್ಲಿ ಹೇಳಹೊರಟಿದ್ದೇವೆ, ಇದರಲ್ಲಿ ಎಲ್ಲವೂ ಹೊಸದಾಗಿರುತ್ತೆ. ನಿರ್ಮಾಪಕ ಕುಮಾರ್ ಅವರು ನೀಡಿದ ಸಹಕಾರದಿಂದ ಚಿತ್ರದ ಇಷ್ಟು ಅದ್ದೂರಿಯಾಗಿ ಬಂದಿದೆ. ಈಗಿನ ಕಾಲದ ಲವ್‌ಸ್ಟೋರಿ ಜೊತೆಗೆ ಒಂದು ಸರ್‌ ಪ್ರೈಸ್ ಕೂಡ ಚಿತ್ರದಲ್ಲಿದೆ ಎಂದರು.

ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ ಮೊದಲಬಾರಿಗೆ ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂದು ಮೊದಲ ಹಾಡು ರಿಲೀಸಾಗಿದೆ. ನಾಗಶೇಖರ್ ಅವರ ಪ್ಯಾಟ್ರನ್ ಅಲ್ಲದೆ ಇರುವ ಈ ಹಾಡಲ್ಲಿ ನಾನು, ರಚಿತಾರಾಮ್, ರಾಗಿಣಿ ದ್ವಿವೇದಿ ಅಭಿನಯಿಸಿದ್ದೇವೆ, ರಾಜ್ಯಾದ್ಯಂತ ಆಗಮಿಸಿರುವ ನಾಯಕರೆಲ್ಲರ ಸಮ್ಮುಖದಲ್ಲಿ ಈ ಹಾಡನ್ನು ರಿಲೀಸ್ ಮಾಡಿದ್ದೇವೆ ಎಂದು ಹೇಳಿದರು. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ, ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ.

MORE NEWS

ಕಲೆ, ಸಂಸ್ಕೃತಿಯಿಂದ ನಾಡು ಭಾಷೆ ಬೆಳೆಯುತ್ತದೆ ಉಳಿಯುತ್ತದೆ : ಪ್ರೊ.  ಕೃಷ್ಣೇಗೌಡ 

21-12-2024 ಬೆಂಗಳೂರು

ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...

ಪರಿಸರದ ಬಗ್ಗೆ ಎಲ್ಲರೂ ಚಿಂತಿಸಿ; ಯಲ್ಪಪ್ಪರೆಡ್ಡಿ

21-12-2024 ಬೆಂಗಳೂರು

ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...

ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಅಂಗಡಿಗಳೆಂದರೆ ಸೂಕ್ತ; ಸಾ. ರಾ. ಗೋವಿಂದು

21-12-2024 ಬೆಂಗಳೂರು

ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...