ಬರಹಗಾರರಾಗಲಿಕ್ಕೆ ಈ ಬದುಕಿನ ಸಂಬಂಧಗಳ ದ್ವಂದ್ವಗಳೇ ಸಾಕು


"ತೀರಾ ಒಂದು ಅಸಮರ್ಥ ಬರಹವನ್ನ ಸಮರ್ಥಿಸಲು ಅಸಮರ್ಥರ ದಂಡೇ ದಂಡಿಯಾಗಿ ಸಿಗಬಹುದಾದ ವಿಚಿತ್ರ ಸಾಹಿತ್ಯಿಕ ವಾತಾವರಣದಲ್ಲಿ ನಮ್ಮ ಬರಹಗಳು ಹಾಗೂ ಓದು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಮಾದರಿಯ ಹುಡುಕಾಟದಲ್ಲಿರುವ ನನ್ನಂಥವರಿಗೆ ಹರೀಶ್ ಗಂಗಾಧರ ಅವರು ಬರೆದ “ಗುರುತಿನ ಬಾಣಗಳು” ನಾನ್-ಫಿಕ್ಷನಲ್ ಬರಹಗಳು ತುಂಬಾ ಇಷ್ಟವಾಗುತ್ತವೆ," ಎನ್ನುತ್ತಾರೆ ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ. ಅವರು ಹರೀಶ್ ಗಂಗಾಧರ್ ಅವರ 'ಗುರುತಿನ ಬಾಣಗಳು' ಕೃತಿ ಕುರಿತು ಬರೆದ ವಿಮರ್ಶೆ ಇಲ್ಲಿದೆ.

ನನಗೆ ಫಿಕ್ಷನ್ ಓದುವುದು ಅಂದ್ರೆ ಕೆಲವು ಸಲ ತ್ರಾಸದಾಯಕ ಕೆಲಸವೇ. ಅದರಲ್ಲೂ ಇತ್ತೀಚೆಗೆ ಬರೆಯುತ್ತಿರುವವರ ಕಥೆ-ಕವನಗಳನ್ನ ನೋಡಿದಾಗ ನಾನು ಬರೆಯುತ್ತಿರುವ ಕವಿತೆಗಳನ್ನ ಬೇರೆಯವರು ಓದುವಾಗ ಇಂತಹ ಯಾತನೆಯನ್ನ ಯಾಕಾದ್ರೂ ಅನುಭವಿಸಬೇಕು ಅಂತ ಅನಿಸಿಬಿಡುತ್ತೆ..! ಒಂದು ಸುದೀರ್ಘ ಹಾಗೂ ಪರಿಣಾಮಕಾರಿ ಲೇಖನ ಕೊಡಬಹುದಾದ ಅರಿವು ಹೊಳವು ಪರಿವರ್ತನೆಯ ಸಂಗತಿಯನ್ನ ಒಂದು ಕವಿತೆ ಕೊಡಬಹುದಾದರೂ ಅಂತಹ ಕವಿತೆಗಳು ನಿಜಕ್ಕೂ ನಮಗೆ ದೊರಕುತ್ತಿವೆಯೇ..? ವಿರಳ. ಈ ಪ್ರಶ್ನೆ ಅಂತಹ ಓದುಗರೂ ನಮಗೆ ದೊರಕಿಲ್ಲ ಎಂಬುದಕ್ಕೆ ಉತ್ತರವೂ ಹೌದು. ತೀರಾ ಒಂದು ಅಸಮರ್ಥ ಬರಹವನ್ನ ಸಮರ್ಥಿಸಲು ಅಸಮರ್ಥರ ದಂಡೇ ದಂಡಿಯಾಗಿ ಸಿಗಬಹುದಾದ ವಿಚಿತ್ರ ಸಾಹಿತ್ಯಿಕ ವಾತಾವರಣದಲ್ಲಿ ನಮ್ಮ ಬರಹಗಳು ಹಾಗೂ ಓದು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಮಾದರಿಯ ಹುಡುಕಾಟದಲ್ಲಿರುವ ನನ್ನಂಥವರಿಗೆ ಹರೀಶ್ ಗಂಗಾಧರ ಅವರು ಬರೆದ “ಗುರುತಿನ ಬಾಣಗಳು” ನಾನ್-ಫಿಕ್ಷನಲ್ ಬರಹಗಳು ತುಂಬಾ ಇಷ್ಟವಾಗುತ್ತವೆ.

ಅನೇಕರನ್ನ ಮುಖತಃ ಭೇಟಿ ಆಗಿಲ್ಲ ಅಂದ್ರೂ ಈ ಫೇಸ್ಬುಕ್ ಮೂಲಕ ಅವರ ಬರಹಗಳನ್ನ ವಿಚಾರಗಳನ್ನ ನಿಲುವುಗಳನ್ನ ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ. ಹರೀಶ್ ಅವರು ವ್ಯಕ್ತಪಡಿಸುವ ಅನೇಕ ಸಂಗತಿಗಳು ಅದು ಸಾಹಿತ್ಯ ಇರಲಿ, ಕ್ರೀಡೆಯಿರಲಿ, ರಾಜಕಾರಣವಿರಲಿ, ಸಿನಿಮಾ ಇರಲಿ, ಬದುಕಿನ ಸಂಬಂಧಗಳ ಸಂಕೀರ್ಣತೆಯಾಗಿರಲಿ “ನಿಲುವುಗಳ ಸ್ಪಷ್ಟತೆ” ಇದೆ. ಪುಸ್ತಕದ ಆರಂಭದಲ್ಲಿ ಹರೀಶ್ ಅವರೇ ಹೇಳಿಕೊಂಡಂತೆ ವ್ಯಕ್ತಿಗಳನ್ನ ಹೀಗೇ ಎಂದು ನಿರ್ಧರಿಸುವ (to judge) ಗೋಜಿಗೆ ಹೋಗಬಾರದು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರಾದರೂ ಇಂದಿನ ದುರಿತ ಕಾಲಕ್ಕೆ ಒಬ್ಬ ಜವಾಬ್ದಾರಿಯುತ ಲೇಖಕ ದಿಟ್ಟವಾಗಿ ತೆಗೆದುಕೊಳ್ಳಲೇಬೇಕಾದ ಸಾರ್ವಜನಿಕ ನಿಲುವುಗಳಿಗೆ ಧಕ್ಕೆಯಾಗಿಲ್ಲ ಎಂಬುದು ಗಮನಿಸುವ ಸಂಗತಿ. ಹಾಗಾಗಿ ನಾನು ಹೇಳುತ್ತಿರುವ “ನಿಲುವುಗಳ ಸ್ಪಷ್ಟತೆಯೇ” ಅವರ ವ್ಯಕ್ತಿತ್ವವನ್ನೂ ಇಷ್ಟಪಡುವಂತೆ ಮಾಡಿಬಿಡುತ್ತದೆ. ಇದಕ್ಕೆ ಅವರ ವೈಚಾರಿಕತೆ, ತಾರ್ಕಿಕ ಹಾಗೂ ತಾತ್ವಿಕ ಅಂಶಗಳೂ ಸೇರ್ಪಡೆಗೊಳ್ಳುತ್ತವೆ. ಮುಂದುವರೆದು ತಮ್ಮ ಬೌದ್ಧಿಕ ತಿಳುವನ್ನ ವ್ಯಂಗ್ಯದ ಧಾಟಿಯಲ್ಲಿ ದಾಟಿಸುವ ಪ್ರಯತ್ನವನ್ನ ಅವರೆಂದೂ ಮಾಡಿದ್ದು ನಾನು ಕಾಣೆ.

ಜೊತೆಗೆ ತಮ್ಮ ವೈಯುಕ್ತಿಕ ಬದುಕಿನ ಅನುಭವಗಳನ್ನ ಕೂಡ ಎಲ್ಲರೂ ಮನ್ನಿಸುವ ರೀತಿಯಲ್ಲಿ ಅಂದ್ರೆ ಲೋಕಾರೂಢಿಯಂತೆ ತೀರಾ ಭಾವನಾತ್ಮಕ, ಜೊಳ್ಳುಜೊಳ್ಳಾಗಿ, ರಂಜನೀಯ ಇಲ್ಲವೆ ಸಿದ್ಧ ಮಾದರಿಯ ಆದರ್ಶಗಳ ತಳಹದಿಯಲ್ಲಿ ಕಟ್ಟಿಕೊಟ್ಟಿಲ್ಲ. ನೇರವಾಗಿ ನಿಷ್ಟುರವಾಗಿ ದಕ್ಕಿದ್ದನ್ನ ಹೇಳುವ ಪ್ರಯತ್ನವೇ ಆಪ್ಯಾಯಮಾನ. ಉದಾಹರಣೆಗೆ ಅಪ್ಪ ಎಂಬ ಬಂಧ ಇವರ ಬದುಕಲ್ಲಿ ಎಷ್ಟು ವಿಶಿಷ್ಟ, ದ್ವಂದ್ವ, ಅಸ್ಪಷ್ಟ. ಇವು ನನಗೂ ಕಾಡಿದಂಥವುಗಳೇ. ಬಹುಶಃ ನಾವು ಬರಹಗಾರರಾಗಲಿಕ್ಕೆ ಈ ಬದುಕಿನ ಸಂಬಂಧಗಳ ದ್ವಂದ್ವಗಳೇ ಸಾಕು ಅನಿಸಿಬಿಡುತ್ತೆ. ಮೇಲಾಗಿ ಹರೀಶ್ ಅವರ ಸಾಮಾಜಿಕ ಹಾಗೂ ರಾಜಕೀಯ ಕಳವಳಗಳು, ಆಸಕ್ತಿಗಳು ನನ್ನವೂ ಆಗಿರುವುದರಿಂದ ಸಹಜವಾಗಿ ನನ್ನಂಥವರಿಗೆ ಇಷ್ಟವಾಗಿಬಿಡುತ್ತಾರೆ.

ಹಿರಿಯ ಲೇಖಕರಾದ ಡಾ. ಪುರುಷೋತ್ತಮ ಬಿಳಿಮಲೆ ಅವರ ಬೆನ್ನುಡಿಯನ್ನ ಓದಿದಾಗ ಮತ್ತಷ್ಟು ಖುಷಿ ಆಯ್ತು. ಅವರು ಹೇಳುವಂತೆ “ಇಷ್ಟೊಂದು ವಿಸ್ತಾರವಾದ ಲೋಕವನ್ನ ಗ್ರಹಿಸಿ, ಭಾಷೆಯಲ್ಲಿ ಮಂಡಿಸುವಾಗ , ಎರಡು ಅಂಶಗಳನ್ನ ಲೇಖಕರು ಸ್ಥಾಯಿಯಾಗಿ ಉಳಿಸಿಕೊಂಡಿದ್ದಾರೆ. ಒಂದು, ಎಲ್ಲ ಬಗೆಯ ಅನ್ಯಾಯಗಳ ವಿರುದ್ಧ ಸಾತ್ವಿಕ ಪ್ರತಿಭಟನೆ ಮತ್ತು ಎರಡು, ಬಹು ಬಗೆಯ ಶೋಷಣೆಗಳಿಗೆ ಒಳಗಾದವರ ಕುರಿತಾದ ಮಾನವೀಯ ಅನುಕಂಪ.”

ಇವರ ಬರಹಗಳನ್ನ ನಿಯಮಿತವಾಗಿ ಫೇಸ್ಬುಕ್ನಲ್ಲಿ ಓದುತ್ತಲೇ ಬಂದಿರುವ ನನಗೆ ಪುಸ್ತಕ ರೂಪದಲ್ಲಿ ಒಟ್ಟಿಗೆ ಬಂದಿದ್ದು ಖುಷಿಯ ಸಂಗತಿ. ಒಬ್ಬ ಅಧ್ಯಾಪಕನಾಗಿ ವಿದ್ಯಾರ್ಥಿಗಳಿಗೆ ತಿಳಿಸಲೇಬೇಕಾದ ಅನೇಕ ಸಂಗತಿಗಳನ್ನ ಇವರ ಬರಹಗಳಿಂದ ಎತ್ತಾಕೊಂಡು ಹೋಗಿದ್ದಿದೆ. ಈಗ ಈ ಪುಸ್ತಕವನ್ನೇ ಎತ್ತಾಕೊಂಡೋಗಿ ಇಡುವ ಸಂದರ್ಭ.

-ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...