ಬರಹಗಾರರು ಯಾವಾಗಲೂ ಡ್ರೋನ್ ತರ ಇರಬೇಕು: ಕುಸುಮ ಆಯರಹಳ್ಳಿ

Date: 21-12-2024

Location: ಬೆಂಗಳೂರು


ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯನ್ನು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಡಿ. 14 ಮತ್ತು 15ರಂದು ಹಮ್ಮಿಕೊಂಡಿದ್ದು, ಉತ್ಸವದ ಮೊದಲ ದಿನ ಶನಿವಾರದಂದು ಮುಖ್ಯ ವೇದಿಕೆ 'Waterfront' ನಲ್ಲಿ ಮಧ್ಯಾಹ್ನದ ವೇಳೆ ಡಾ. ಗೀತಾ ವಸಂತ ಅವರ ನಿರೂಪಣೆಯಲ್ಲಿ "ಹೊಸ ಬರಹ" ಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.

ಗೋಷ್ಠಿಯಲ್ಲಿ ಲೇಖಕಿ ಕುಸುಮಾ ಆಯರಹಳ್ಳಿ, ಮಧು ವೈ. ಎನ್, ಶಾಂತಿ ಕೆ ಅಪ್ಪಣ್ಣ ಅವರು ಭಾಗಿಯಾಗಿದ್ದರು.

ಗೋಷ್ಠಿಯ ಆರಂಭದಲ್ಲಿ ಗೀತಾ ವಸಂತ ಅವರ "ಹೊಸತು ಅನ್ನುವುದು ನಿಜವಾಗಿಯೂ ಇದ್ಯಾ" ಎನ್ನುವ ಪ್ರಶ್ನೆಗೆ ಸಂವಾದಿಸಿದ ಶಾಂತಿ ಕೆ ಅಪ್ಪಣ್ಣ, "ಹೊಸತು ಅನ್ನುವುದು ಏನಿಲ್ಲ. ಹೊಸತನದಲ್ಲಿ ನಾವು ಹಳೇಯದನ್ನ ಹುಡುಕಿ ಮತ್ತೆ ಕಟ್ಟಬೇಕು. ಹೊಸ ಹೊಸ ವಿಚಾರಗಳನ್ನ ಹಳೆಯ ಕೊಂಡಿಯೊಂದಿಗೆ ಸೇರಿಸಿದಾಗ ಭಿನ್ನವಾದ ಬರವಣಿಗೆ ರೂಪುಗೊಳ್ಳುತ್ತದೆ,' ಎಂದರು.

ಈ ಪ್ರಶ್ನೆಗೆ ಕುಸುಮ ಆಯರಹಳ್ಳಿ ಉತ್ತರಿಸಿ, "ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಹೊಸತಾಗಿ ಕಾಣುತ್ತದೆ. ಆದರೆ ಹೊಸತನಕ್ಕೆ ಹಳೆಯ ಬೇರು ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಹೊಸ ಲೇಖಕರು ಪೂರ್ವಗ್ರಹಗಳನ್ನು ಬಿಟ್ಟು ಎಲ್ಲರನ್ನು ಓದಬೇಕು. ಯಾವುದೇ ಒಂದು ವ್ಯಕ್ತಿಯನ್ನು ನಾವು ಓದಲು ಶುರು ಮಾಡಿದಾಗ ಪೂರ್ವಯೋಜಿತ ಯೋಚನೆಗಳನ್ನ ಬಿಟ್ಟು ಬಿಡಬೇಕು,' ಎಂದರು.

ಲೇಖಕ ಮಧು ವೈ.ನ್ ಸಂವಾದಿಸಿ, "ನಮಗೆ ಹೊಸತನದ ಅನುಭವ ಕೊಟ್ಟರೆ ಅದು ಹೊಸತನ,' ಎಂದರು.

*ಸ್ಥಳೀಯ ಭಾಷೆಯ ಸೊಗಡು ಬರವಣಿಗೆಯಲ್ಲಿ ಬೇರೂರುತ್ತಿದೆ. ಭಾಷೆಯನ್ನ ನಿಮ್ಮ ಬರವಣಿಗೆಯಲ್ಲಿ ಆಯ್ಕೆ ಮಾಡಿದ್ದು ಯಾಕೆ?* ಎನ್ನುವ ಗೀತಾ ವಸಂತ ಅವರ ಪ್ರಶ್ನೆಗೆ ಸಂವಾದಿಸಿದ, ಕುಸುಮ ಆಯರಹಳ್ಳಿ, 'ತುಂಬಾ ಜನ ಓದುಗರನ್ನು ತಲುಪುವ ಉದ್ದೇಶವಿದ್ದರೆ ನಾವು ಸರಳ ಭಾಷೆಯನ್ನು ಬಳಸಬಹುದು. ಆದರೆ ಒಂದು ಕಾಲಘಟ್ಟದ ಸಂವೇದನೆ, ಆ ಪಾತ್ರ ಬದುಕಿದ ರೀತಿ, ಭಾವನೆ ಎಲ್ಲವನ್ನೂ ಹೇಳಬೇಕಾದರೆ ನಾನು ಕಂಡ ಆ ಪಾತ್ರವನ್ನು, ಪಾತ್ರ ಬದುಕಿದ ರೀತಿಯಲ್ಲೇ, ಹಾಗೂ ಪಾತ್ರದ ಪ್ರದೇಶದ ಭಾಷೆಯನ್ನೇ ಬಳಸಬೇಕು,' ಎಂದು ತಿಳಿಸಿದರು.

*ಕಥೆಯನ್ನು ಕಟ್ಟುವ ಪರಿ ಹೇಗಿರುತ್ತದೆ* ಎನ್ನುವ ಪ್ರಶ್ನೆಗೆ ಸಂವಾದಿಸಿದ ಶಾಂತಿ ಕೆ ಅಪ್ಪಣ್ಣ, 'ಕಥೆಗಳು ಕ್ಷಣಾರ್ಧದಲ್ಲಿ ಹುಟ್ಟಿಕೊಳ್ಳುವ ಕೊಲ್ಮಿಚ್ಚು. ಕಥೆಗಳನ್ನ ಹುಟ್ಟುವಾಗಲೇ ಇಡಿದಿಟ್ಟುಕೊಂಡರೆ ಅದು ನಮ್ಮಲ್ಲೇ ಉಳಿಯುತ್ತದೆ. ಇಲ್ಲವಾದರೆ ಅದು ಚಿಟ್ಟೆಯ ತರ ಹಾರಿ ಹೋಗಬಹುದು,' ಎಂದು ಹೇಳಿದರು .

ಈ ಪ್ರಶ್ನೆಗೆ ಮಧು ವೈ. ಎನ್ ಸಂವಾದಿಸಿ , 'ಬರವಣಿಗೆ ಅಂದರೆ ಶ್ರಮದ ಕ್ರಿಯೆ, ಮಾನಸಿಕವಾಗಿ, ಸೃಜನಶೀಲವಾಗಿ ಅದು ನಮ್ಮನ ಒಳಗೊಳ್ಳುತ್ತದೆ. ಎಂದಿಗೂ ಬರವಣಿಗೆ ಪೂರ್ಣವಾಗುವುದಿಲ್ಲ. ಮತ್ತೆ ಮತ್ತೆ ಹುಟ್ಟುತ್ತದೆ,' ಎಂದರು.

*ಹೊಸ ಬರಹಗಾರರನ್ನ ಕನ್ನಡ ಸಾಹಿತ್ಯ ಸ್ವಾಗತಿಸುತ್ತಿದೆಯಾ? ಕನ್ನಡ ಸಾಹಿತ್ಯದಲ್ಲಿ ಗುಂಪುಗಾರಿಕೆ ಇದ್ಯಾ?* ಎನ್ನುವ ಪ್ರಶ್ನೆಗೆ ಕುಸುಮ ಆಯರಹಳ್ಳಿ, 'ಬರಹಗಾರರು ಯಾವಾಗಲು ಡ್ರೋನ್ ತರ ಇರಬೇಕು. ಯಾಕಂದ್ರೆ ಸಮಾಜದಲ್ಲಿ ಒಂದು ಅಂತರವನ್ನಿಟ್ಟುಕೊಂಡು ನಾವು ಎಲ್ಲವನ್ನೂ ಗಮನಿಸಲು ಶುರು ಮಾಡಿದಾಗ ಯಾವುದೇ ಒಂದು ಪಕ್ಷಕ್ಕೆ ಸೇರದೆ ನಮ್ಮದೇ ನಿಲುವಿನಲ್ಲಿ ಬರೆಯಲು ಸಾಧ್ಯ. ಬರಹಗಾರನಾದವ ಹಾಗೆಯೇ ಇರಬೇಕು. ಬರವಣಿಗೆ ಅನ್ನುವುದು ಚೌಕಟ್ಟನ್ನು ಮೀರಿದ್ದು. ಬೇರೆ ಬೇರೆ ಪಕ್ಷಕ್ಕೆ ಸೇರಿದಾಗ ಚೌಕಟ್ಟನ್ನು ಮೀರಲು ಸಾಧ್ಯವಾಗುದಿಲ್ಲ. ಅದಕ್ಕೆ ಲೇಖಕ ಎಲ್ಲವನ್ನೂ ಮೀರಿ ದೂರದಲ್ಲಿ ನಿಂತು ನೋಡಬೇಕು,' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಪ್ರಶ್ನೆಗೆ ಸಂವಾದಿಸಿದ ಮಧು ವೈ. ಎನ್, 'ಕನ್ನಡ ಬರಹಗಾರರು ಇತ್ತೀಚಿನ ದಿನಗಳಲ್ಲಿ ವಿಶ್ವದ ಸಂಗತಿಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಸೀಮಿತ ವಲಯಕ್ಕೆ ಮಾತ್ರ ತಮ್ಮನ್ನು ಒಳಪಡಿಸದೆ ವಿಸ್ತಾರವಾಗಿ ತೆರೆದುಕೊಳ್ಳುತ್ತಿದ್ದಾರೆ,' ಎಂದು ಹೇಳಿದರು.

MORE NEWS

ಎಲ್ಲದರಲ್ಲೂ ಫೇಲ್ ಆದಾಗ ಹೊಸದರ ಅನ್ವೇಷಣೆಗೆ ಹೊರಡುತ್ತೇವೆ : ಟಿಎನ್ಎಸ್

14-12-2024 ಬೆಂಗಳೂರು

"ನೆನಪಿನ ಪುಟಗಳು" ಕೃತಿಯ ಬಗ್ಗೆ ಟಿ.ಎನ್. ಸಿತಾರಾಮ್ ಜೊತೆ ಜೊಗಿ (ಗಿರೀಶ್ ರಾವ್ ಹತ್ವಾರ್) ಸಂವಾದ ನಡೆಸಿದರ...

ನಾನು ಸತ್ತರೆ ಶವ ಎತ್ತದಂತೆ ಫತ್ವಾ ಹೊರಡಿಸಿದ್ದರು: ಬಾನು ಮುಷ್ತಾಕ್

14-12-2024 ಬೆಂಗಳೂರು

ಬೆಂಗಳೂರು : ಪ್ರಭು ಎಂದರೆ ದೇವರಲ್ಲ ಲಾರ್ಡ್ ಶಿಪ್. ಅದು ದೇವರನ್ನ ಲಾರ್ಡ್ ಎಂದು ಕರೆದಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯ...

ಕನ್ನಡವನ್ನು ಪರಭಾಷಿಗರಿಗೆ ಪರಿಚಯ ಮಾಡಿಕೊಡುವಲ್ಲಿ ನಾವು ಸೋಲುತ್ತಿದ್ದೇವೆ: ಹಂಪನಾ

14-12-2024 ಬೆಂಗಳೂರು

ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...