“ಡಾಬ್ಸ್ - ಕಬ್ಬನ್, ಬೌರಿಂಗ್ ಮತ್ತು ಕನ್ನಿಂಗ್‌ಹ್ಯಾಮ್ ಅವರ ಬಗೆಗಿನ ವಿಶೇಷ ತಿಳುವಳಿಕೆಗಾಗಿ ವಿಕಿಪೀಡಿಯಾ ಮತ್ತು ಅಂತರ್ಜಾಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕನ್ನಡಕ್ಕೆ ಅನುವಾದಿಸಿ ಅನುಬಂಧಗಳಲ್ಲಿ ಹಂಚಿಕೊಂಡಿದ್ದೇನೆ,” ಎನ್ನುತ್ತಾರೆ ಪ್ರೊ.ಎಂ.ಜಿ. ರಂಗಸ್ವಾಮಿ ಅವರು ತಮ್ಮ “ಆಡಳಿತದ ನೋಟಗಳು” ಕೃತಿಗೆ ಬರೆದ ಲೇಖಕರ ಮಾತು.
ಮೇಜರ್ ಜನರಲ್ ಆರ್.ಎಸ್. ಡಾಬ್ಸ್ ರವರ ಹೆಸರನ್ನು ಮೊದಲಿಗೆ ಪರಿಚಯಿಸಿದವರು ಇತಿಹಾಸ ಸಂಶೋಧಕರಾದ ಡಾ.ಲಕ್ಷ್ಮಣ್ ತೆಲಗಾವಿಯವರು. 2021ರಲ್ಲಿ ನಾನು 'ಮಾರಿಕಣಿವೆ' ಎಂಬ ಅನುವಾದ ಕೃತಿಯನ್ನು ಬರೆಯುತ್ತಿರುವ ಸಂದರ್ಭದಲ್ಲಿ ಯಾವುದೋ ವಿಚಾರವಾಗಿ ಮೊಬೈಲ್ ಮೂಲಕ ಮಾತನಾಡುವಾಗ, ತೆಲಗಾವಿಯವರು ಆಡಳಿತಗಾರ ಆರ್.ಎಸ್. ಡಾಬ್ಸ್‌ರವರು ಹತ್ತೊಂಬತ್ತನೇ ಶತಮಾನದಲ್ಲಿ 'ಮಾರಿಕಣಿವೆ ಎಂಬಲ್ಲಿ ಒಂದು ಜಲಾಶಯ ನಿರ್ಮಿಸುವ ಪ್ರಯತ್ನ ಮಾಡಿದ್ದರ ಬಗ್ಗೆ ಅವರ 'Reminiscences of Life in Mysore, South Africa and Burma' ಪುಸ್ತಕದಲ್ಲಿ ಉಲ್ಲೇಖಿಸಿರುವುದು ನನ್ನ ನೆನಪಿನಲ್ಲಿದೆ. ಸಾಧ್ಯವಾದರೆ ಆ ಪುಸ್ತಕವನ್ನು ನನ್ನ ಪುಸ್ತಕದ ರಾಶಿಯಲ್ಲಿ ಹುಡುಕಿ ಕೊಡುತ್ತೇನೆ. ಆದರೆ ತಾವು ಸ್ವಲ್ಪ ಸಮಯ ಕಾಯಬೇಕು' ಎಂದರು. ನಂತರ ಅವರು ಒಂದಾದ ಮೇಲೆ ಒಂದರಂತೆ ಪುಸ್ತಕ ರಚನೆಯಲ್ಲಿ ತೊಡಗಿದ್ದರಿಂದ ಅವರಿಗೆ ನಾನು ತೊಂದರೆ ಕೊಡಬಾರದು ಎಂದು ನಿರ್ಧರಿಸಿ ಸುಮ್ಮನಾದೆ. ನಾನು 'ಮಾರಿಕಣಿವೆ' (ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣದ ಕತೆ) ಪುಸ್ತಕ ಬರೆದು ಮುಗಿಸಿದ ಮೇಲೆ (2021) ಅಂತರ್ಜಾಲದಲ್ಲಿ ತಡಕಾಡುತ್ತಿರುವಾಗ 'ಅಮೆಜಾನ್'ನಲ್ಲಿ ಲಕ್ಷ್ಮಣ್ ತೆಲಗಾವಿಯವರು ಹೇಳಿದ್ದ ಡಾಬ್ಸ್ ರವರು ಬರೆದ ಪುಸ್ತಕ ಪತ್ತೆಯಾಯಿತು. ಮೂಲತಃ ಇತಿಹಾಸದ ವಿದ್ಯಾರ್ಥಿ ಅಲ್ಲದ ನನಗೆ ಈ ವ್ಯಕ್ತಿಯ ಹೆಸರಾಗಲೀ, ಆತ ಬರೆದಿರುವ ಪುಸ್ತಕಗಳ ಬಗ್ಗೆಯಾಗಲೀ ಏನೊಂದೂ ತಿಳಿದಿರಲಿಲ್ಲ. ಆ ವಿದೇಶಿ ವ್ಯಕ್ತಿ ಮಾರಿಕಣಿವೆ ಕುರಿತು ಏನು ಬರೆದಿರಬಹುದು ಎಂಬ ಕುತೂಹಲದಿಂದ ಆ ಪುಸ್ತಕವನ್ನು ತರಿಸಿಕೊಂಡು ಓದಿದೆ. ಅದರಲ್ಲಿರುವ ಬಹುತೇಕ ಸಂಗತಿಗಳು ವಸಾಹತು ಕಾಲಘಟ್ಟದ ಒಂದು ಸೀಮಿತ ಅವಧಿಯ (1835-1860) ಚರಿತ್ರೆ ಬಗ್ಗೆ ಪ್ರಖರವಾದ ಬೆಳಕು ಚೆಲ್ಲುವಂತಹವು. ಡಾಬ್ಸ್‌ರವರು ಈ ಪ್ರದೇಶದಲ್ಲಿ ಕೈಗೊಂಡ ಎಂದೂ ಮರೆಯಲಾಗದ ಅಭಿವೃದ್ಧಿ ಕಾರ್ಯಗಳು ಹಾಗೂ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಸ್ಥಳೀಯ ಇತಿಹಾಸದ ಆಂಶಗಳು ನನ್ನ ಗಮನ ಸೆಳೆದವು. ಡಾಬ್ಸ್ ಆಡಳಿತಾಧಿಕಾರಿಯೂ ಹೌದು ಹಾಗೂ ಒಬ್ಬ ಕ್ರಿಶ್ಚಿಯನ್ ಸಂತನೂ ಹೌದು. ಈ ಮಧ್ಯೆ, ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯಾಗಿದ್ದ ಡಾಬ್ಸ್, ಕಂಪನಿಯ ಮೂಲ ಆಶಯವಾದ ವ್ಯಾಪಾರಿ ತತ್ವಗಳನ್ನು ಹಾಗೂ ರಾಜ್ಯ ವಿಸ್ತರಣೆ ಕಾರ್ಯವನ್ನು ಅನುಸರಿಸುವುದು ಅನಿವಾರ್ಯವೂ ಆಗಿತ್ತು. ಜೊತೆಗೆ ಕ್ರಿಶ್ಚಿಯನ್ ಧರ್ಮಪ್ರಚಾರ ಮತ್ತು ಮತಾಂತರಕ್ಕೆ ಉತ್ತೇಜಿಸುವ ಅಂಶಗಳನ್ನು ಮರೆಯಲು ಸಾಧ್ಯವಿಲ್ಲ.
ಚಿತ್ರದುರ್ಗ ಡಿವಿಜನ್‌ನ ಸೂಪರಿಂಟೆಂಡೆಂಟರಾಗಿದ್ದ ಡಾಬ್‌ರವರ ಬಗ್ಗೆ ಒಂದಷ್ಟು ಒಲವು ಮೂಡಲು ಹಲವು ಕಾರಣಗಳಿವೆ. 'ಹತ್ತೊಂಭತ್ತನೇ ಶತಮಾನದ ಮಧ್ಯಭಾಗದವರೆಗೂ ರಸ್ತೆಗಳು, ಸೇತುವೆಗಳು, ಕೆರೆಗಳು ಇರಲಿಲ್ಲ. ಇದ್ದರೂ ಬಹುತೇಕವು ಹಾಳಾದ ಸ್ಥಿತಿಯಲ್ಲಿದ್ದವು. ವಿವಿಧ ದರೋಡೆಕೋರರ ಗುಂಪುಗಳು ಈ ಪ್ರದೇಶವನ್ನು ಆಳುತ್ತಿದ್ದವು, ಕಂದಾಯದ ದರಗಳು ಜನರನ್ನು ಸುಲಿಗೆ ಮಾಡುವಂತಿದ್ದವು, ದರೋಡೆಕೋರರ ಹಾವಳಿ ಹೆಚ್ಚಿ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದರು...' ಎಂಬ ಡಾಬ್‌ರವರ ಮಾತುಗಳು ನನ್ನ ಗಮನ ಸೆಳೆಯದೇ ಇರಲಿಲ್ಲ. ಜೊತೆಗೆ ಕಾಣದ ದೇಶಕ್ಕೆ ಬಂದ ಆತ, ಹಳೇ ಮೈಸೂರು ಭಾಗದಲ್ಲಿ ನೂರಾರು ಮೈಲಿಗಳ ಉದ್ದದ ಹೆದ್ದಾರಿ (ಇಂದಿನ ಎನ್.ಹೆಚ್ 48) ನಿರ್ಮಿಸಿದ್ದು, ಈ ಭಾಗದ ಜನರ ನೀರಿನ ಸಮಸ್ಯೆ ಅರಿತು ಮಾರಿಕಣಿವೆ ಎಂಬಲ್ಲಿ ಒಂದು ಜಲಾಶಯ ನಿರ್ಮಿಸಬೇಕೆಂದು ಹತ್ತು ವರ್ಷಗಳ ಕಾಲ ಸರ್ಕಾರದ ಹಂತದಲ್ಲಿ ಹೋರಾಟ ನಡೆಸುವುದಿದೆಯಲ್ಲಾ ಅದು ನಿಜಕ್ಕೂ ಆತನ ಜನಪರ ಕಾಳಜಿಯ ಪ್ರತೀಕವಾಗಿದೆ. ಇದೆಲ್ಲದರ ಜೊತೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 1801ರಲ್ಲಿ ಸಂಚರಿಸಿದ್ದ ಡಾ.ಫ್ರಾನ್ಸಿಸ್ ಬುಕಾನನ್‌ರು ಸಿದ್ಧಪಡಿಸಿದ್ದ ವರದಿಯ, ಚಿತ್ರದುರ್ಗ ಜಿಲ್ಲೆಗೆ ಸೀಮಿತಗೊಂಡ ಭಾಗವನ್ನು ಆಧರಿಸಿ ನಾನು 2020ರಲ್ಲಿ "ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್” ಎಂಬ ಅನುವಾದಿತ ಕೃತಿ ರಚಿಸಿದ್ದೆ. ನಂತರ 2021ರಲ್ಲಿ ಶಾಸನ ಪಿತಾಮಹ ಬಿ.ಎಲ್. ರೈಸ್‌ರವರ ಪುತ್ರ ಹೆಚ್.ಡಿ. ರೈಸ್ ವಾಣಿವಿಲಾಸ ಜಲಾಶಯ ನಿರ್ಮಾಣ ಸಂಬಂಧ ಸಿದ್ಧಪಡಿಸಿದ ಯೋಜನೆಯ ಇಂಗ್ಲಿಷ್ ಮೂಲದ ಯೋಜನೆಯ ಕರಡುಪ್ರತಿಯನ್ನು "ಮಾರಿಕಣಿವೆ” ಎಂಬ ಹೆಸರಲ್ಲಿ ಅನುವಾದಿಸಿ ಪ್ರಕಟಿಸಿದ್ದೆ. ಈ ಎರಡೂ ಕೃತಿಗಳು ಸ್ಥಳೀಯ ಇತಿಹಾಸ ಕುರಿತವುಗಳೇ ಆಗಿವೆ ಎಂಬುದನ್ನು ಪುನಃ ಹೇಳಬೇಕಿಲ್ಲವೆಂದು ಭಾವಿಸಿದ್ದೇನೆ.
ನಾನು 'ಡಾಬ್ಸ್‌ರ ಆಡಳಿತದ ನೋಟಗಳು' ಅನುವಾದಿಸಲು ಪ್ರಾರಂಭಿಸುವಷ್ಟರಲ್ಲಿ, ಚಿತ್ರದುರ್ಗದ ಸಿ.ಎಂ. ತಿಪ್ಪೇಸ್ವಾಮಿರವರು ಇದೇ ಕೃತಿಯ ವಿಶ್ಲೇಷಣಾತ್ಮಕ ನಿರೂಪಣೆಯ (ಇದು ತದ್ವತ್ ಅನುವಾದವಲ್ಲ) 'ಚಿತ್ರದುರ್ಗ ವಿಭಾಗದ ಆಡಳಿತದ ನೆನಪುಗಳು' ಕೃತಿಯನ್ನು ಪ್ರಕಟಿಸಿದ್ದರು. ಅದನ್ನು ಓದಿದ ನಂತರ ಮೂಲಕೃತಿಯನ್ನು ಆಮೂಲಾಗ್ರವಾಗಿ ಅನುವಾದಿಸಬೇಕೆಂಬ ತೀರ್ಮಾನಕ್ಕೆ ಬಂದೆ. ಕಾರಣ ಮೂಲ ಕೃತಿಯನ್ನು ಓದದೆ ಅದರ ವಿಶ್ಲೇಷಣೆಯನ್ನು ಅರ್ಥಮಾಡಿಕೊಳ್ಳುವುದು ಹೇಗೆ ಅನಿಸಿತು. ಹಾಗಾಗಿ ಮೂಲಕೃತಿಯ ಪೂರ್ಣ ಪಾಠವನ್ನು ಕನ್ನಡಕ್ಕೆ ತರಲೇಬೇಕಾದ ಅವಶ್ಯಕತೆ ಇದೆ ಎನಿಸಿತು.
ಡಾಬ್ಸ್‌ರವರ ಪುಸ್ತಕ 'Reminiscences of Life in Mysore, South Africa and Burma' ಸಹ ಸ್ಥಳೀಯ ಚರಿತ್ರೆ ಕುರಿತ ಇಂಗ್ಲಿಷ್ ಕೃತಿ ಆಗಿದ್ದು, ಅದರಲ್ಲಿರುವ ಮೂರು ಭಾಗಗಳ ಪೈಕಿ ಡಾಬ್ಸ್‌ರವರು ಮೈಸೂರು ದೇಶದಲ್ಲಿ ಸಲ್ಲಿಸಿದ ಸೇವೆಗೆ ಸೀಮಿತವಾಗಿರುವ ಭಾಗವನ್ನು ಮಾತ್ರ ಅನುವಾದಿಸಬೇಕೆಂದು ತೀರ್ಮಾನಿಸಿದೆ.
ಡಾಬ್ಸ್‌ರವರು ದಕ್ಷಿಣ ಆಫ್ರಿಕಾ ಮತ್ತು ಬರ್ಮಾ ದೇಶಗಳಲ್ಲಿ ಒಂದು ಸೀಮಿತ ಅವಧಿಗೆ ಕಾರ್ಯನಿರ್ವಹಿಸಿದ್ದು ಅದರ ಬಗ್ಗೆ ಕೂಡ ತಮ್ಮ ನೆನಪುಗಳನ್ನು ಇದೇ ಕೃತಿಯಲ್ಲಿ ದಾಖಲಿಸಿದ್ದಾರೆ ಎಂಬ ಅಂಶವನ್ನು ಓದುಗ ಬಂಧುಗಳ ಗಮನಕ್ಕೆ ತರಬಯಸುತ್ತೇನೆ. ಆದರೆ ಆ ದೇಶಗಳಲ್ಲಿ ಡಾಬ್ಸ್ ಕಳೆದ ಸಮಯದ ವಿವರಗಳು ನಮ್ಮ ಸ್ಥಳೀಯ ಚರಿತ್ರೆಗೆ ಯಾವ ರೀತಿಯಲ್ಲೂ ಸಂಬಂಧಿಸದೇ ಇರುವ ಕಾರಣಕ್ಕೆ ಆ ಎರಡು ಭಾಗಗಳ ಅನುವಾದ ಅನಗತ್ಯವೆನಿಸಿದ್ದರಿಂದ ಕೈಬಿಟ್ಟಿದ್ದೇನೆ.
ಅನಾರೋಗ್ಯ ನಿಮಿತ್ತ ಆಫ್ರಿಕಾ ದೇಶಕ್ಕೆ...
ಆರ್.ಎಸ್. ಡಾಬ್ಸ್‌ರವರು ವೈದ್ಯರ ಸಲಹೆ ಮೇರೆಗೆ 1840ರ ಆರಂಭದಲ್ಲಿ ಪತ್ನಿ ಹಾಗೂ ಮಕ್ಕಳ ಜೊತೆಗೂಡಿ ಕೇಪ್ ಆಫ್ ಗುಡ್ ಹೋಪ್‌ಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಅವರು ದೀರ್ಘ ಸಮಯದವರೆಗೆ ನಿರ್ಜಲೀಕರಣ ಸಮಸ್ಯೆಗೆ ಒಳಗಾಗಿರುತ್ತಾರೆ. ಆರೋಗ್ಯ ಚೆನ್ನಾಗಿ ಚೇತರಿಸಿಕೊಂಡ ಮೇಲೆ ಸೈಮನ್ಸ್ ಟೌನ್, ನ್ಯೂಲ್ಯಾಂಡ್ಸ್, ಗ್ರಹಾಮ್ಸ್ ಟೌನ್, ಕಾಫಿರ್ ಲ್ಯಾಂಡ್ ಮುಂತಾದ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವರು. ಜೊತೆಗೆ ಅಲ್ಲಿರುವ ಚರ್ಚ್‌ಗಳಲ್ಲಿ ಕ್ರೈಸ್ತಧರ್ಮ ಮತ್ತು ಬೈಬಲ್ ಕುರಿತು ಉಪನ್ಯಾಸ ನೀಡುತ್ತಾರೆ. ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಕೆ ಕಂಡು ಬಂದುದರಿಂದ ಸೆಪ್ಟೆಂಬರ್ 1841ರಲ್ಲಿ (18 ತಿಂಗಳ ನಂತರ) ಭಾರತಕ್ಕೆ ಮರಳಿ ಬಂದು ಪುನಃ ತುಮಕೂರಿನಿಂದ ಆಡಳಿತದ ಜವಾಬ್ದಾರಿಯನ್ನು ಮುಂದುವರಿಸುತ್ತಾರೆ. ಇವರ ಅನುಪಸ್ಥಿತಿಯಲ್ಲಿ ಕ್ಯಾಪ್ಟನ್ ಚಾಮರ್ ಚಿತ್ರದುರ್ಗ ಡಿವಿಜನ್‌ನ ಉಸ್ತುವಾರಿವಹಿಸಿದ್ದರು ಎಂದು ಡಾಬ್ ದಾಖಲಿಸಿದ್ದಾರೆ. ಬರ್ಮಾ ಭೇಟಿ...
ಈಸ್ಟ್ ಇಂಡಿಯಾ ಕಂಪನಿ ಬರ್ಮಾ ದೇಶದಲ್ಲಿ ಸ್ಥಳೀಯರೊಂದಿಗೆ 1852ರಲ್ಲಿ ನಡೆಸಿದ ಎರಡನೇ ಯುದ್ಧದಲ್ಲಿ ಭಾಗವಹಿಸುವಂತೆ ಮೇಜರ್ ಆರ್.ಎಸ್. ಡಾನ್ಸರವರನ್ನು ನಿಯೋಜನೆಗೊಳಿಸುತ್ತದೆ (ಮೊದಲ ಯುದ್ಧ 1823-24ರಲ್ಲಿ ನಡೆದಿದ್ದನ್ನು ಸ್ಮರಿಸಬಹುದು). ಹಾಗಾಗಿ 1852ರಲ್ಲಿ 1500 ಜನರನ್ನು ಒಳಗೊಂಡ ಹಡಗಿನಲ್ಲಿ ಪ್ರಯಾಣ ಕೈಗೊಂಡು ರಂಗೂನ್‌ಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಮೌಲ್ವಿನ್, ಸುಮಾತ್ರ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆ ಯುದ್ಧದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳಿಗೆ ಸಾಕ್ಷಿಯಾಗುವ ಡಾಬ್ಸ್, 1853ರಲ್ಲಿ ಮರಳಿ ಭಾರತಕ್ಕೆ ಬರುತ್ತಾರೆ.
ಐರೆಂಡ್‌ನಲ್ಲಿ ಮೇ 10, 1808ರಂದು ಜನಿಸಿದ ಆರ್.ಎಸ್. ಡಾಬ್ 1828ರಲ್ಲಿ ಭಾರತಕ್ಕೆ ಬಂದು ಮಹಾರಾಷ್ಟ್ರದ ಶೋಲಾಪುರದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸುತ್ತಾರೆ. ನಂತರ ಬೆಂಗಳೂರಿನ ಚೀಫ್ ಕಮೀಷನರ್‌ರವರ ಕಚೇರಿಗೆ (1834) ವರ್ಗಾವಣೆಗೊಳ್ಳುವರು. 1835ರಲ್ಲಿ ಚಿತ್ರದುರ್ಗ ಡಿವಿಜನ್‌ನ ಸೂಪರಿಂಟೆಂಡೆಂಟರಾಗಿ ನೇಮಕಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳು, ಸೇತುವೆಗಳು ಇಲ್ಲದಿರುವುದು, ನಿರ್ಲಕ್ಷ್ಯಕ್ಕೆ ಒಳಗಾದ ನೀರಾವರಿ ಕೃಷಿ, ಮಿತಿಮೀರಿದ ಭೂಕಂದಾಯ, ಆಹಾರ ಧಾನ್ಯಗಳ ಮೇಲೆ ದುಬಾರಿ ಕರ ಹೇರಿಕೆ, ಪ್ರತಿ 10 ಮೈಲಿಗಳ ಅಂತರದಲ್ಲಿ ಇದ್ದ ಸುಂಕದ ಕಟ್ಟೆಗಳು ಜನರನ್ನು ಹೇಗೆಲ್ಲಾ ಆತಂಕದಲ್ಲಿ ಇಟ್ಟಿದ್ದವು ಎಂಬುದನ್ನು ಕಂಡು ತೀವ್ರ ಚಿಂತನೆಗೆ ಒಳಗಾಗುತ್ತಾರೆ. ವಿವಿಧ ಇಲಾಖೆಗಳಿಗೆ ನೌಕರರನ್ನು ನೇಮಿಸುವ ವೇಳೆ ಲಂಚ ಪಡೆಯಲು ಸ್ವತಃ ರಾಜರ ಪರೋಕ್ಷ ಅನುಮತಿ ಇತ್ತು. ಪೊಲೀಸರು ದರೋಡೆಕೋರರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು. ವಾಮಾಚಾರ, ಅರಣ್ಯ ಮತ್ತು ಬಯಲು ಪ್ರದೇಶಗಳಲ್ಲಿ ದುಷ್ಟ ಪ್ರಾಣಿಗಳ ಹಾವಳಿ ಮಿತಿಮೀರಿತ್ತು. ದೇವದಾಸಿ ಪದ್ಧತಿ ಜಾರಿಯಲ್ಲಿ ಇತ್ತು. ಮಹಿಳಾ ಶಿಕ್ಷಣಕ್ಕೆ ಸಂಪ್ರದಾಯವಾದಿಗಳ ವಿರೋಧವಿತ್ತು, ವೃತ್ತಿಪರ ಕಳ್ಳರು ಜನರನ್ನು ಸದಾ ಆತಂಕದಲ್ಲಿ ಇಟ್ಟಿದ್ದರು- ಎಂದು ಡಾಬ್ ಆ ಕಾಲದ ಪರಿಸರ, ಸಾಮಾಜಿಕ ಮತ್ತು ರಾಜಕೀಯ ಚಿತ್ರಣ ದಾಖಲಿಸಿರುವುದನ್ನು ಓದಿದಾಗ ನನಗೆ ಬೆಚ್ಚಿಬಿದ್ದ ಅನುಭವವಾಯಿತು.
*ಡಾಬ್ಸ್ 'ಬೇಡರ ದಂಗೆ' (ಅಧ್ಯಾಯ:7)ಯಲ್ಲಿ ಪ್ರಸ್ತಾಪಿಸಿರುವ ಇರಾನಿಯನ್ ತಂಡದ ಬಗ್ಗೆ ಜೂನ್ 2024ರಲ್ಲಿ ಚಿತ್ರದುರ್ಗ ಜಿಲ್ಲೆಯ ರಕ್ಷಣಾ ಇಲಾಖೆಯಲ್ಲಿ ವಿಚಾರಿಸಿದೆ. ಏಪ್ರಿಲ್ 2020ರಲ್ಲಿ ಇರಾನಿಗ್ಯಾಂಗ್‌ನ ತಂಡದವರನ್ನು ಬಂಧಿಸಿದ ಹಿರಿಯೂರು ಪೊಲೀಸರು ಅವರಿಂದ ಕಳವು ಮಾಡಿದ ಸಂಪತ್ತನ್ನು ವಶಪಡಿಸಿಕೊಂಡ ಮಾಹಿತಿ ಲಭಿಸಿತು.
ಅಭಿವೃದ್ಧಿ ಕಾರ್ಯಗಳು...
ಚಿತ್ರದುರ್ಗ ಡಿವಿಜನ್‌ನಲ್ಲಿ ಆರ್.ಎಸ್. ಡಾಬ್‌ರವರು ಕೈಗೊಂಡ ಅಭಿವೃದ್ಧಿ ಕೆಲಸಗಳು ನಿಜಕ್ಕೂ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಅಭಿವೃದ್ಧಿ ಪರ್ವವನ್ನು ನೆನಪು ಮಾಡದೇ ಇರುವುದಿಲ್ಲ. ತುಮಕೂರಿನಿಂದ ಚಿತ್ರದುರ್ಗ, ದಾವಣಗೆರೆ ಮೂಲಕ ಹರಿಹರದವರೆಗೆ ರಸ್ತೆಯ ನಕಾಶೆ ನಿಗದಿಗೊಳಿಸಿದ ಡಾಬ್ಸ್ ಅದನ್ನು ಹೆದ್ದಾರಿ ಎಂದು ನಾಮಕರಣ ಮಾಡುತ್ತಾರೆ.
ಜೊತೆಗೆ ಹಿರಿಯೂರು ಹಾಗೂ ಬಳ್ಳಾರಿ ಪಟ್ಟಣಗಳ ನಡುವಿನ ಹೆದ್ದಾರಿ ನಿರ್ಮಿಸುವ ಮೂಲಕ ಮೊಟ್ಟಮೊದಲ ಬಾರಿಗೆ ಸುಗಮ ಸಂಚಾರಕ್ಕೆ ನಾಂದಿ ಹಾಡುತ್ತಾರೆ. ಸ್ಥಳೀಯ ಸಂಪನ್ಮೂಲ ಹಾಗೂ ಮಾನವಶಕ್ತಿ ಬಳಕೆ ಮಾಡಿಕೊಂಡು ಹಿರಿಯೂರು ಮತ್ತು ಜವನಗೊಂಡನಹಳ್ಳಿ ಮಧ್ಯೆ ಮೂರು ಸೇತುವೆಗಳನ್ನು ನಿರ್ಮಿಸುತ್ತಾರೆ. (ಈಗ ಆ ಸೇತುವೆಗಳಲ್ಲಿ ಎರಡು ಮಾತ್ರ ಅಸ್ತಿತ್ವದಲ್ಲಿದ್ದು, ಲಘು ವಾಹನಗಳು ಅದರ ಮೇಲೆ ಸಂಚರಿಸುತ್ತವೆ. ಅವುಗಳ ಸ್ಥಳದಲ್ಲಿ ಅಥವಾ ಪಕ್ಕದಲ್ಲಿ ಪ್ರತ್ಯೇಕ ಕಾಂಕ್ರಿಟ್ ಸೇತುವೆಗಳನ್ನು ಕಟ್ಟಿದ್ದಾರೆ.) ಆ ಪೈಕಿ ಹಿರಿಯೂರು ಪಟ್ಟಣದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮದ್ದೂರು ಪಟ್ಟಣದ ಬಳಿಯ ಸೇತುವೆ ನಿರ್ಮಾಣಕ್ಕೆ ಪ್ರೇರಣೆಯಾಗುತ್ತದೆ ಎಂಬುದು ಆಶ್ಚರ್ಯಕರ ಎನಿಸಿದರೂ ಸತ್ಯ ಸಂಗತಿ. ಹಿರಿಯೂರು ಸೇತುವೆ ಲೋಕಾರ್ಪಣೆಗೆ ಚೀಫ್ ಕಮೀಷನರ್ ಮಾರ್ಕ್ ಕಬ್ಬನ್ ಆಗಮಿಸಿದ್ದರು ಎಂಬ ಅಂಶ ಗಮನಾರ್ಹ.
ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಎಂಬಲ್ಲಿ ವೇದಾವತಿ ನದಿಗೆ ಒಂದು ಅಣೆಕಟ್ಟೆ ನಿರ್ಮಿಸಬೇಕೆಂಬ ಉದ್ದೇಶದಿಂದ ಚೀಫ್ ಕಮೀಷನರ್ ಮಾರ್ಕ್ ಕಬ್ಬನ್‌ರವರ ಮನವೊಲಿಸಿದ ಡಾಬ್ ಯೋಜನೆ ಮತ್ತು ಅಂದಾಜು ವೆಚ್ಚದ ಪಟ್ಟಿ ಸಿದ್ಧಪಡಿಸಿ ಮದ್ರಾಸ್ ಪ್ರೆಸಿಡೆನ್ಸಿಗೆ ಸಲ್ಲಿಸುತ್ತಾರೆ. ಯೋಜನೆ ಅನುಮೋದನೆಗಾಗಿ ಸತತ ಹತ್ತು ವರ್ಷಗಳ ಕಾಲ ಹೋರಾಟ ನಡೆಸಿ ವಿಫಲರಾದಾಗ, ಅದು ತನ್ನ ವೃತ್ತಿ ಬದುಕಿನ ಅತ್ಯಂತ ದೊಡ್ಡ ಸೋಲು ಎಂದು ಮಮ್ಮಲ ಮರುಗುತ್ತಾರೆ. ಇಷ್ಟೇ ಅಲ್ಲದೆ, ಗೇರುಸೊಪ್ಪೆ ಅಥವಾ ಜೋಗದ ಜಲಪಾತಕ್ಕೆ ಗೆಳೆಯರ ಜೊತೆ ಭೇಟಿ ನೀಡುವ ಡಾಬ್ ಅದರ ಸೌಂದರ್ಯ ಮತ್ತು ಅಗಾಧತೆಯನ್ನು ವಿಶ್ವವಿಖ್ಯಾತ ನಯಾಗರ ಜಲಪಾತಕ್ಕೆ ಹೋಲಿಸುತ್ತಾರೆ. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುವ ಅವರು, ಮತ್ತೊಂದೆಡೆಯಲ್ಲಿ ಅಬಕಾರಿ ಕಂದಾಯ ಏರಿಕೆ ಕಂಡು ತನ್ನ ಮೇಲಿನ ಅಧಿಕಾರಿಗಳ ಬಗ್ಗೆ ತೀವ್ರವಾಗಿ ಅಸಮಾಧಾನಗೊಳ್ಳುತ್ತಾರೆ. ಇಂತಹ ನೂರಾರು ರೋಚಕ ಸಂಗತಿಗಳನ್ನು ಒಳಗೊಂಡ ಡಾಟ್ಸ್‌ರವರ ಕೃತಿ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಅಂದಿನ ಇತಿಹಾಸ ತಿಳಿಯಬಯಸುವ ಸಹೃದಯ ಓದುಗರ ಮನಸ್ಸನ್ನು ಕೆರಳಿಸದೆ ಇರದು.
ಸ್ವಾಮಿ ನಿಷ್ಠ ಡಾಬ್
ರಿಚರ್ಡ್ ಸ್ಟೀವರ್ಟ್ ಡಾಬ್ ತಮ್ಮ ಬಹುತೇಕ ವೃತ್ತಿಬದುಕಿನ ದಿನಗಳನ್ನು ಮಾರ್ಕ್ ಕಬ್ಬನ್‌ರವರ ಅಧೀನದಲ್ಲಿ ಕಳೆಯುತ್ತಾರೆ. ಆದಾಗ್ಯೂ ಅವರನ್ನು ಒಬ್ಬ ಗುರುವಿನಂತೆ, ಮಾರ್ಗದರ್ಶಕ ಹಾಗೂ ಸಹೋದರನಂತೆ ಪರಿಭಾವಿಸುವುದನ್ನು ಕೃತಿಯ ಉದ್ದಕ್ಕೂ ಕಾಣುತ್ತೇವೆ. ಆ ಮೂಲಕ ಕಬ್ಬನ್‌ರವರು ಹೊಂದಿದ್ದ ಅಪಾರ ಆಡಳಿತದ ಅನುಭವ ಹಾಗೂ ಅವರ ವ್ಯಕ್ತಿತ್ವವನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಆರಾಧಿಸುವವರ ಹಾಗೆ ಕಂಡು ಬರುತ್ತಾರೆ. ಅದು ಅವರ ಮೇಲಿನ ಅಧಿಕಾರಿಗೆ ತೋರುವ ಅಸ್ಸಲಿತ ಸ್ವಾಮಿನಿಷ್ಠೆಯಂತೆ ಕಂಡು ಬರುತ್ತದೆ. ಡಾಬ್ ಎಂಬ ದಂತಕತೆ...
ತುಮಕೂರು ಹಾಗೂ ಬೆಂಗಳೂರು ನಡುವೆ ಇರುವ ಡಾಬಸ್ ಪೇಟೆ (ಡಾಬ್ ಪೆಟ್) ಅಥವಾ ಸೋಂಪುರ ಆರ್.ಎಸ್. ಡಾಬ್‌ರವರ ಪ್ರಿಯವಾದ ಸ್ಥಳ. ಹಾಗಾಗಿ ಡಾಬ್‌ರವರ ಸಮಾಧಿ ಅದೇ ಊರಲ್ಲಿ ಇದೆ ಎಂಬ ಊಹಾಪೋಹಗಳು ಸಹ ಜನರ ಬಾಯಲ್ಲಿ ಆಗಾಗ ಹರಿದಾಡುತ್ತಿದ್ದವು. ಒಮ್ಮೆ ಮಾತಿಗೆ ಸಿಕ್ಕ ಡಾಬಸ್‌ಪೇಟೆಯ ಪರಿಚಯದ ವ್ಯಕ್ತಿಯೊಬ್ಬರು 'ಡಾಕ್ಸ್‌ರವರ ಸಮಾಧಿ ಅಲ್ಲಿಯ ಪೊಲೀಸ್ ಠಾಣೆಯ ಆವರಣದಲ್ಲಿದೆ' ಎಂದು ಅಂದಾಜಿನ ಮೇಲೆ ಹೇಳಿದರು. ಅದರ ಸತ್ಯಾಸತ್ಯತೆಯ ಬೆನ್ನು ಹತ್ತಿದಾಗ ಪೊಲೀಸ್ ಠಾಣೆ ಆವರಣದಲ್ಲಿರುವುದು ಯಾವುದೋ ಒಬ್ಬ ಪೊಲೀಸ್ ಅಧಿಕಾರಿಯ ಸಮಾಧಿ ಎಂದು ತಿಳಿಯಿತು. ಪುನಃ ಯಾರನ್ನೋ ವಿಚಾರಿಸಿದಾಗ, 'ಯಾವುದೋ ಒಂದು ಸಮಾಧಿ ಡಾಬಸ್‌ಪೇಟೆಯ ಸಾರಿಗೆ ಬಸ್ ನಿಲ್ದಾಣದ ಸಮೀಪ ಇತ್ತು. ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಸಂದರ್ಭದಲ್ಲಿ ಅದನ್ನು ನೆಲಸಮಗೊಳಿಸಲಾಗಿದೆ' ಎಂಬ ಮತ್ತೊಂದು ಬಗೆಯ ಉತ್ತರ ಲಭಿಸಿತು. ಮೂರನೇ ವ್ಯಕ್ತಿಯೊಬ್ಬರು, ಡಾಬ್‌ರವರ ಒಂದು ಭಾವಚಿತ್ರ ಮೈಸೂರಿನ ಜಗನ್ನೋಹನ ಅರಮನೆ ವಸ್ತು ಸಂಗ್ರಹಾಲಯದಲ್ಲಿ ಇದೆ ಎಂದರು. ಹಾಗಾಗಿ ಇರಬಹುದೇನೋ ಎಂದುಕೊಂಡು ಜಗಮ್ಮೋಹನ ಅರಮನೆಗೆ ಫೆಬ್ರವರಿ 2024ರಲ್ಲಿ ಹೋಗಿ ವಿಚಾರಿಸಿದಾಗ, 'ನೀವು ಕೇಳಿದ ವ್ಯಕ್ತಿಯ ಫೋಟೋ ನಮ್ಮಲ್ಲಿ ಇಲ್ಲ' ಎಂಬ ಉತ್ತರ ಲಭಿಸಿತು. ಮೈಸೂರಿನ ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ಪುರಾತತ್ವ ಇಲಾಖೆಯಲ್ಲಿ ಸಿಗಬಹುದೇನೋ ಎಂದು ವಿಚಾರಿಸಿದಾಗ ಅವರು ಬೆಂಗಳೂರು ಇಲ್ಲವೆ ಮೈಸೂರು ಪತ್ರಾಗಾರ ಇಲಾಖೆಗೆ ಹೋಗಿ ವಿಚಾರಿಸಿ ಎಂಬ ಸಲಹೆ ನೀಡಿದರು. ಅಂತಿಮವಾಗಿ ಡಾಟ್ಸ್ ಕುರಿತು ಹೆಚ್ಚಿನ ಮಾಹಿತಿ ತಿಳಿದಿರುವ ತುಮಕೂರಿನ ಡಾ.ನಂಜುಂಡಸ್ವಾಮಿ ಅವರನ್ನು ವಿಚಾರಿಸಿದಾಗ ಅವರು ಗೂಗಲ್‌ನಲ್ಲಿ ಹುಡುಕಿ ಎಂದರು. ಗೂಗಲ್ ಅಂತರ್ಜಾಲದಲ್ಲಿ ಅದು 'ರೆಡ್ ಫೋರ್ಡ್ ದಿ ಗ್ರೇವ್ ಸೆಮೆಟೆರಿ. ಗ್ರೇಸ್ಟೋನ್ಸ್. ಕೌಂಟಿ ವಿಕ್ಲೋ, ಐಗ್ಲೆಂಡ್'ನಲ್ಲಿದೆ ಎಂದು ತಿಳಿದುಬಂತು. ಅಲ್ಲಿಗೆ ಈ ಮಾಹಿತಿ ಸಿಕ್ಕ ನಂತರ ಹುಡುಕಾಟವನ್ನು ಕೈಬಿಡಲಾಯಿತು.
ಡಾಬ್ಸ್‌ರವರು ಇಂಗ್ಲಿಷ್ ಭಾಷೆಯಲ್ಲಿ 1882ರಲ್ಲಿ ದಾಖಲಿಸಿದ್ದ ತಮ್ಮ ವೃತ್ತಿಬದುಕಿನ ಹಿನ್ನೋಟದಂತಿರುವ ಆಡಳಿತದ ನೆನಪುಗಳನ್ನು ಕನ್ನಡಕ್ಕೆ ಅನುವಾದಿಸುವಂತೆ ಉತ್ತೇಜನ ನೀಡಿದವರು ನಾಡಿನ ಹೆಸರಾಂತ ಜಾನಪದ ವಿದ್ವಾಂಸರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣನವರು, ನನ್ನ ಎಲ್ಲಾ ಕೃತಿಗಳ ಪ್ರಕಾಶಕರಾದ ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ಸ್‌ನ ಮಾಲೀಕರಾದ ಡಾ.ಚನ್ನವೀರೇಗೌಡರು.
ನಾನು ಡಬ್ಸ್‌ರವರ 'Reminiscences of Life in Mysore, South Africa and Burma' ಎಂಬ ಇಂಗ್ಲಿಷ್ ಕೃತಿಯನ್ನು ಅನುವಾದಿಸುತ್ತ ಹೋದಂತೆ ಪ್ರತಿ ಅಧ್ಯಾಯಗಳನ್ನು ಅಂದಂದೇ ಓದಿ, ಅನುವಾದ ಹೇಗಿರಬೇಕು, ಆತನ ಅಭಿವೃದ್ಧಿಪರ ಚಿಂತನೆಗಳೇನು, ಅಂದಿನ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಕನ್ನಡದ ಶ್ರೇಷ್ಠ ಅನುವಾದಿತ ಕೃತಿಗಳ ಉಲ್ಲೇಖದೊಂದಿಗೆ ಡಾ.ಶಿವಣ್ಣನವರು ಹಲವಾರು ಸಲಹೆಗಳನ್ನು ನೀಡಿ ಉತ್ತೇಜಿಸಿದ್ದಾರೆ. ಜೊತೆಗೆ ಈ ಕೃತಿಗೆ 'ಬೆನ್ನುಡಿ' ಬರೆದು ಹರಸಿದ್ದಾರೆ. ವಾಸ್ತವದಲ್ಲಿ ಇವರು ನನ್ನ ಸಾಹಿತ್ಯಕ ಪಯಣದ ಪ್ರೇರಕ ಶಕ್ತಿ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿ ಈ ಕೃತಿಯನ್ನು (ಡಾಬ್ಸ್ ಆಡಳಿತದ ನೋಟಗಳು) ಡಾ.ಮೀರಾಸಾಬಿಹಳ್ಳಿ ಶಿವಣ್ಣನವರಿಗೆ ಪ್ರೀತಿ-ಗೌರವದಿಂದ ಅರ್ಪಿಸುತ್ತಿದ್ದೇನೆ.
ಈ ಕೃತಿ ಕುರಿತು ಮುನ್ನುಡಿ ಬರೆಯಲು ಮೈಸೂರಿನ ಒಡೆಯರ್ ಚರಿತ್ರೆಯ ಗಂಭೀರ ಸಂಶೋಧಕರಾದ ಪ್ರೊ.ಪಿ.ವಿ. ನಂಜರಾಜೇ ಅರಸ್ ಮತ್ತು ಚಿತ್ರದುರ್ಗ ಚರಿತ್ರೆಯ ಬಗ್ಗೆ ಅರ್ಪಣಾಮನೋಭಾವದ ಸಂಶೋಧಕರಾದ ಡಾ.ಲಕ್ಷ್ಮಣ್ ತೆಲಗಾವಿ ಅವರನ್ನು ಕೇಳಿಕೊಂಡೆ. ಅರಸ್‌ರವರು ಅಪರಿಚಿತನಾದ ನನ್ನ ಮನವಿಗೆ ಸ್ಪಂದಿಸಿ ಬಹಳ ಬೇಗ ಮುನ್ನುಡಿಯನ್ನು ಬರೆದುಕೊಟ್ಟು ಬೆನ್ನು ತಟ್ಟಿದರು. ಅರಸರನ್ನು ಪರಿಚಯಿಸಿದ ನನ್ನ ಆಪ್ತಮಿತ್ರ, ನಿವೃತ್ತ ಪ್ರಾಂಶುಪಾಲ ಗಂಜಾಂನ ಜಿ.ಈ. ಪರಮೇಶ್ ಅವರಿಗೆ ಹಾಗೂ ಅರಸರಿಗೆ ಕೃತಜ್ಞನಾಗಿದ್ದೇನೆ.
ಚಿತ್ರದುರ್ಗ ಪ್ರದೇಶದ ಅನೇಕ ಅಂಶಗಳು ಡಾಬ್‌ನ ವರದಿಯಲ್ಲಿರುವುದರಿಂದ, ಈ ಬಗ್ಗೆ ಚಿತ್ರದುರ್ಗದ ಇತಿಹಾಸದ ಬಗ್ಗೆ ಅಧಿಕೃತವಾದ ಕೆಲಸ ಮಾಡಿರುವ ಡಾ.ಲಕ್ಷ್ಮಣ್ ತೆಲಗಾವಿ ಅವರನ್ನು ಕೇಳುವುದು ಒಳಿತು ಎಂದು ನನ್ನ ಪರಮಾಪ್ತ ಬಂಧು ಡಾ.ಮೀರಾಸಾಬಿಹಳ್ಳಿ ಶಿವಣ್ಣನವರ ಸಲಹೆಯ ಮೇರೆಗೆ ಅವರನ್ನು ಕೇಳಿಕೊಳ್ಳಲಾಯಿತು. ಆದರೆ ಅವರು ನನಗೆ ಕನಿಷ್ಟ ಒಂದೆರಡು ತಿಂಗಳ ಸಮಯ ಕೊಟ್ಟರೆ ಬರೆಯುತ್ತೇನೆ ಎಂದರು. ಅವರು ಬರೆಯುವುದು ಮುಖ್ಯವಾಗಿದ್ದರಿಂದ
ನಾವು ಒಪ್ಪಿದೆವು. ಅದಕ್ಕೋಸ್ಕರ ಅವರು ಅತ್ಯಂತ ಶ್ರಮವಹಿಸಿ, ನೂರಾರು ಪುಟಗಳ ಆಕರ ಮಾಹಿತಿಯನ್ನು ತರಿಸಿಕೊಂಡು ಅಧ್ಯಯನ ಮಾಡಿ, ಅತ್ಯಂತ ವಿಸ್ತಾರವಾದ ಪ್ರವೇಶಿಕೆಯಂತಹ ಅದ್ಭುತವಾದ ಮುನ್ನುಡಿಯನ್ನು ಬರೆದುಕೊಟ್ಟ ಅವರ ಪ್ರೀತಿಗೆ ಮೂಕನಾಗಿದ್ದೇನೆ; ಅವರಿಗೆ ನಾನು ಅತ್ಯಂತ ಕೃತಜ್ಞ, ಈ ಎರಡೆರಡು ಮುನ್ನುಡಿಗಳಿಂದ ಕೃತಿ ಸಮೃದ್ಧವಾಗಿದೆ ಎಂಬುದು ನನ್ನ ನಂಬಿಕೆ.
ಈ ಅನುವಾದಿತ ಕೃತಿಗೆ ಸಾಂದರ್ಭಿಕವಾದ ರೇಖಾಚಿತ್ರಗಳನ್ನು ರಚಿಸಿಕೊಟ್ಟ ಕವಿ, ಕಲಾವಿದರಾದ ಜಬೀವುಲ್ಲಾ ಎಂ. ಅಸದ್ ಅವರನ್ನು ಹಾಗೂ ನಾನು ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ತುಮಕೂರು, ದೇವರಾಯನದುರ್ಗ, ಗುಬ್ಬಿ, ನಿಟ್ಟೂರು, ಕಡಬ ಸ್ಥಳಗಳಿಗೆ ಜೊತೆಯಾಗಿ ಬಂದು ಸಹಕರಿಸಿದ ಲೇಖಕರು ಹಾಗೂ ಅಧ್ಯಾಪಕ ಮಿತ್ರರಾದ ಡಾ. ಕೆ.ವಿ. ಮುದ್ದವೀರಪ್ಪ ಮತ್ತು ವಿದ್ಯಾರ್ಥಿ ಮಿತ್ರ ತೀರ್ಥಪುರದ ಉದಯ್ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.
ಡಾಬ್ಸ್ - ಕಬ್ಬನ್, ಬೌರಿಂಗ್ ಮತ್ತು ಕನ್ನಿಂಗ್‌ಹ್ಯಾಮ್ ಅವರನ್ನು ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸುತ್ತಾರೆ. ಅವರ ಬಗೆಗಿನ ವಿಶೇಷ ತಿಳುವಳಿಕೆಗಾಗಿ ವಿಕಿಪೀಡಿಯಾ ಮತ್ತು ಅಂತರ್ಜಾಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕನ್ನಡಕ್ಕೆ ಅನುವಾದಿಸಿ ಅನುಬಂಧಗಳಲ್ಲಿ ಹಂಚಿಕೊಂಡಿದ್ದೇನೆ. ಇವರ ಬಗೆಗಿನ ಹೆಚ್ಚುವರಿ ಮಾಹಿತಿಯನ್ನು ಆಶಿಸುವ ಕುತೂಹಲಿಗಳಿಗೆ ಇದರಿಂದ ಉಪಯೋಗವಾಗುತ್ತದೆ ಎಂದು ಭಾವಿಸಿದ್ದೇನೆ.
ಓದುಗರ ಅನುಕೂಲಕ್ಕೆ ಅಧ್ಯಾಯಗಳಿಗೆ ಶೀರ್ಷಿಕೆ ನೀಡುವ ಸ್ವಾತಂತ್ರ್ಯ ವಹಿಸಿದ್ದೇನೆ ಎಂಬುದು ತಮ್ಮ ಗಮನದಲ್ಲಿರಲಿ. ಹಾಗೂ ಡಾಟ್ಸ್‌ರವರ ಅಂದಿನ ತುಮಕೂರಿನ ಜಿಲ್ಲಾಧಿಕಾರಿಗಳ ಕಛೇರಿಯ ಛಾಯಾಚಿತ್ರವನ್ನು ಒದಗಿಸಿದ ಬಂಡಾಯ ಸಾಹಿತಿಗಳಾದ ಪ್ರೊ. ರಾಜಪ್ಪ ದಳವಾಯಿ ಅವರಿಗೆ ಕೃತಜ್ಞನಾಗಿದ್ದೇನೆ.
- ಪ್ರೊ.ಎಂ.ಜಿ. ರಂಗಸ್ವಾಮಿ
"ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ...
“ಶ್ರೀ ಶಾಂತಿನಾಥ ದಿಬ್ಬದ ಅವರು ಮಾಡಿರುವ ಈ ಕೆಲಸವನ್ನು ಕನ್ನಡ ಸಾಹಿತ್ಯ ಲೋಕ ಹೆಮ್ಮೆಯಿಂದ ಸ್ಮರಿಸುತ್ತದೆ,&rdqu...
"ಸರ್ವೆನಂಬರ್ 97 ಈ ಕಥಾ ಸಂಕಲನ ಶೀರ್ಷಿಕೆಯ ಕಥೆ, ಇಲ್ಲಿರುವ ಕತೆಗಳಲ್ಲಿ ತುಸು ದೊಡ್ಡ ಕತೆ. ತನ್ನ ಜಮೀನಿನ ...
©2025 Book Brahma Private Limited.