"ಸರ್ವೆನಂಬರ್ 97 ಈ ಕಥಾ ಸಂಕಲನ ಶೀರ್ಷಿಕೆಯ ಕಥೆ, ಇಲ್ಲಿರುವ ಕತೆಗಳಲ್ಲಿ ತುಸು ದೊಡ್ಡ ಕತೆ. ತನ್ನ ಜಮೀನಿನ ಸರ್ವೇ ಮಾಡಿಸಿಕೊಡಿ ಎಂದು ಪ್ರತಿ ದಿನ ಪೀಡಿಸುವ ಅಜ್ಜ ಲ್ಯಾಂಬ್ಟನ್ ನ ಜಮೀನಿನ ಹಿಂದಿನ ದೊಡ್ಡ ಕಥೆ. ಓದುತ್ತಾ ಹೋದಂತೆ ನಿಗೂಡಗಳನ್ನು, ವ್ಯವಸ್ಥೆಯ ಕರಾಳ ಮುಖಗಳನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ," ಎನ್ನುತ್ತಾರೆ ಸಮುದ್ಯತಾ ಕಂಜರ್ಪಣೆ. ಅವರು ಅನಿಲ್ ಕುಮಾರ್ ಗುನ್ನಾಪೂರ ಅವರ ‘ಸರ್ವೇ ನಂಬರ್ 97’ ಕೃತಿ ಕುರಿತು ಬರೆದ ವಿಮರ್ಶೆ.
ತಂದ ಕೂಡಲೇ ಓದದೇ ಇದ್ದರೆ ಮತ್ತೆ ಸಮಯ ಸಿಗೋದು ಕಷ್ಟ ಎಂದುಕೊಂಡೇ ಓದಿ ಮುಗಿಸಿದ್ದು ಅನಿಲ್ ಕುಮಾರ್ ಗುನ್ನಾಪೂರ ಅವರ ಸರ್ವೇ ನಂಬರ್ 97.
ಆರು ಕತೆಗಳನ್ನು ಹೊಂದಿದ ಕಥಾ ಸಂಕಲನ. ವಿಭಿನ್ನ ಕಥಾವಸ್ತುಗಳ ಜೊತೆಗೆ ಕುತೂಹಲದಿಂದ ಹಿಡಿದಿರಿಸಿಕೊಂಡು ಓದಿಸಿಕೊಂಡು ಹೋಯಿತು. ಆರೂ ಕತೆಗಳು ಸಮಾಜದ ವಿವಿಧ ಆಯಾಮಗಳನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿವೆ.
ಮೊದಲ ಕತೆ ʼಲಿಂಗಾಯತ ಖಾನಾವಳಿʼ ಕುವೆಂಪು ವಿಶ್ವವಿದ್ಯಾಲಯದ ಪಠ್ಯವಾಗಿರುವುದಕ್ಕೆ ಅಭಿನಂದನೆಗಳು. ದೇವದಾಸಿಯ ಮಗನಾದ ಮಾದ್ಯಾ ಊರು ಬಿಟ್ಟು ಬಂದು ಬದುಕು ಕಟ್ಟಿಕೊಳ್ಳುವ ಹೊತ್ತಲ್ಲಿ ಖಾನವಾಳಿಯ ಕಾಕಾ ಧರೆಪ್ಪನ ಒಡನಾಟದೊಂದಿಗೆ ಮಾದೇವ ಆಗುವುದು ಕಥಾ ಹಂದರ. ಅವಮಾನದ, ನೋವಿನ ಬದುಕುಗಳಿಗೆ ಧರೆಪ್ಪನಂತಹವರು ತರಬಹುದಾದ ಬದಲಾವಣೆ ಆಳಕ್ಕಿಳಿಯುತ್ತದೆ.
ಸರ್ವೆನಂಬರ್ 97 ಈ ಕಥಾ ಸಂಕಲನ ಶೀರ್ಷಿಕೆಯ ಕಥೆ, ಇಲ್ಲಿರುವ ಕತೆಗಳಲ್ಲಿ ತುಸು ದೊಡ್ಡ ಕತೆ. ತನ್ನ ಜಮೀನಿನ ಸರ್ವೇ ಮಾಡಿಸಿಕೊಡಿ ಎಂದು ಪ್ರತಿ ದಿನ ಪೀಡಿಸುವ ಅಜ್ಜ ಲ್ಯಾಂಬ್ಟನ್ ನ ಜಮೀನಿನ ಹಿಂದಿನ ದೊಡ್ಡ ಕಥೆ. ಓದುತ್ತಾ ಹೋದಂತೆ ನಿಗೂಡಗಳನ್ನು, ವ್ಯವಸ್ಥೆಯ ಕರಾಳ ಮುಖಗಳನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ.
ರೋಗಗ್ರಸ್ಥ ವ್ಯವಸ್ಥೆಯ ಭಾಗವಾದ ಲಂಚ ಬದುಕನ್ನು ಹೇಗೆಲ್ಲ ಬದಲಾಯಿಸುತ್ತಾ ಹೋಗಬಹುದು, ಅದರಲ್ಲೂ ಆತ್ಮಸಾಕ್ಷಿ ಚುಚ್ಚಲಾರಂಭಿಸಿದರೆ, ಸಂದರ್ಭಗಳು ಕೈಮೀರಿ ಹೋದಾಗ ಆಗುವ ಬದಲಾವಣೆಗಳ ಕುರಿತ ಸೂಚ್ಯವಾಗಿ ʼಆತ್ಮಸಾಕ್ಷಿʼ ಯಲ್ಲಿ ಕಟ್ಟಿಕೊಟ್ಟಿದ್ದಾರೆ ಅನಿಲ್.
ಗೋಲ್ ಗುಂಬಜ್ ಎಕ್ಸ್ಪ್ರೆಸ್ ನನಗೆ ಸ್ವಲ್ಪ ಹೆಚ್ಚೇ ಮೆಚ್ಚಿಗೆಯಾದ ಕಥೆ, ರೈಲು ಪ್ರಯಾಣದ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ, ಹೋಗುವ ಪ್ರಯಾಣಿಕನಿಗೆ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬಳು ತನ್ನ ಬಾಲ್ಯದ ಆತ್ಮೀಯ ಗೆಳೆಯನನ್ನು ನೆನಪಿಸುತ್ತಾಳೆ. ಒರಟಾಗಿ ನಡೆದುಕೊಳ್ಳುವ ಪ್ರಯಾಣಿಕನ ಅಪರಾಧಿ ಪ್ರಜ್ಞೆ ಮಾಸಲು ಬಿಡದ ಹಾಗೆ ಗೆಳೆಯ ರಮೇಶನ ಅಸಹಾಯಕ ಕಣ್ಣುಗಳು ಓದುಗರನ್ನೂ ಹಿಡಿದಿಡುತ್ತವೆ.
ಹಳದಿ ಬಣ್ಣದ ಹರಳಿನುಂಗುರ ಕೂಡ ಸಮಾಜಕ್ಕೆ ಹಿಡಿದ ಕನ್ನಡಿ. ಎಷ್ಟೆಲ್ಲ ಸಮಸ್ಯೆಗಳಿಗೆ ಶಾಸ್ತ್ರ, ಕಲ್ಲು, ಹರಳು, ಜನ್ಮಾಂತರ ಎನ್ನುವುದರ ಮೂಲಕವೇ ಪರಿಹಾರ ಕಂಡುಹುಡುಕುವ ಸಮಾಜದ ವಾಸ್ತವ ಬೇರೆಯೇ ಅಗಿರುತ್ತದೆ. ವಿಚಿತ್ರ ನಂಬಿಕೆಗಳಿಗೆ ಮಾರುಹೋಗಿ ತಾವು ಕೂತ ಕಾಂಡವನ್ನೇ ಕಡಿಯುವಷ್ಟು ಮೂರ್ಖರಾಗಿ ಜನ ಬದಲಾಗಿರುತ್ತಾರೆ. ಹರಳಿನುಂಗುರ ಎಲ್ಲವನ್ನು ಬದಲಾಯಿಸುತ್ತದೆ ಎಂದು ನಂಬಿ ಬದುಕಿನ ಸ್ತಿಮಿತವೇ ಇಲ್ಲದಂತೆ ಹಾರಾಡುವ ತಂದೆಯೊಬ್ಬನ ಮಗ ಅದೇ ವರ್ತುಲಕ್ಕೆ ಬಲಿಯಾಗುವುದು ಸ್ವಲ್ಪ ಹೆಚ್ಚೇ ಕಾಡುತ್ತದೆ.
ಕಸ್ತೂರಿ ಕ್ಯಾಂಟೀನ್ ಎಲ್ಲೋ ಕೇಳಿದ ಸುದ್ದಿಗಳ ಜೊತೆಗೆ ಸ್ವಲ್ಪ ಗೊಂದಲ ಕೂಡ ಉಂಟು ಮಾಡಿದ ಕಥೆ. ಭಾರತದಲ್ಲಿ ಮಗಳ ಮದುವೆ ಎನ್ನುವುದು ಮಾಡಿ ಮುಗಿಸಲೇ ಬೇಕಾದ ಕೆಲಸ ಎನ್ನುವಂತೆ ಪೋಷಕರ ಮನಸಲ್ಲಿ ಕೂತಿರುತ್ತದೆ. ಕೊನೆಗೆ ಯಾರಿಗೋ ಒಟ್ಟಿನಲ್ಲಿ ಮದುವೆ ಮಾಡಿ ಕಳಿಸಬೇಕು ಎಂದುಕೊಂಡು ಮಕ್ಕಳನ್ನು ಇನ್ಯಾವುದೋ ಕೂಪಕ್ಕೆ ತಳ್ಳಿರುತ್ತಾರೆ. ವಿವರಗಳು ಸ್ವಲ್ಪ ಸಿನಿಮೀಯವಾಗಿ ಕಂಡರೂ, ವಾಸ್ತವದಲ್ಲಿ ಬಲಿಯಾಗುವವರ ಕುರಿತು ಯೋಚನೆಗೆ ಹಚ್ಚುವುದಂತೂ ಹೌದು.
ದೇವದಾಸಿ ವ್ಯವಸ್ಥೆ, ಜಾತಿ ಪದ್ಧತಿ, ಲಂಚ, ದುರಾಸೆ, ಲೈಂಗಿಕ ಅಲ್ಪಸಂಖ್ಯಾತರ ಸಂದಿಗ್ಧಗಳು, ಮೂಡನಂಭಿಕೆ, ಹೆಣ್ಣುಮಕ್ಕಳ ಶೋಷಣೆ ಹೀಗೆ ಸಮಾಜದ ಹಲವಾರು ಆಯಾಮಗಳನ್ನು ಸೂಕ್ಷ್ಮವಾಗಿ ಎಲ್ಲೂ ವಾಚ್ಯವಾಗಿಸದೇ ಯಶಸ್ವಿಯಾಗಿ ಚಿತ್ರಿಸಿದ್ದಾರೆ ಅನಿಲ್ ಗುನ್ನಾಪೂರರವರು. ಅವರ Dialect ನಲ್ಲೇ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತಾ ಎನ್ನುವ ಒಂದು ಕುತೂಹಲದ ಎಳೆಯೂ ಹಾದುಹೋಯಿತಾದರೂ, ಆಪ್ತವಾಗಿ ಓದಿಸಿಕೊಂಡು ಹೋದ ಕಥೆಗಳಿಗೆ ಮತ್ತು ಒಂದಿಷ್ಟು ಚಿಂತನೆಗೆ ದೂಡಿದ ಅನಿಲ್ ಕುಮಾರ್ ರವರಿಗೆ ಥ್ಯಾಂಕ್ಯೂ
"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...
“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...
"ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ...
©2025 Book Brahma Private Limited.