ವ್ಯಕ್ತಿಚಿತ್ರಗಳನ್ನು ಬರೆಯುವಲ್ಲಿ ಲಕ್ಷ್ಮಣ ರಾಯರು ಸಿದ್ದಹಸ್ತರು...


"ಲಕ್ಷ್ಮಣ ರಾಯರ ಒಡನಾಡಿಗಳ ಲೇಖನ ಅವರ ಪ್ರಿಯ ಮಿತ್ರ ಹಾ.ಮಾ.ನಾಯಕರ ಲೇಖನದಿಂದಲೇ ಆರಂಭವಾಗುತ್ತದೆ. ಬರಹಗಾರರಾಗಿ, ಪ್ರಾಧ್ಯಾಪಕರಾಗಿ, ಸಂಘಟಕರಾಗಿ ಹೀಗೆ ಅವರ ಬೇರೆ ಬೇರೆ ಮುಖಗಳು ಇಲ್ಲಿ ಬಂದಿವೆ. ಅವರ ಬಗ್ಗೆ ಬರೆಯುವಾಗ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಬಾಲವಿಜ್ಞಾನದ ಉಲ್ಲೇಖ ಸಾಕಷ್ಟು ಕಡೆ ಸಹಜವಾಗಿ ಬಂದಿದೆ," ಎನ್ನುತ್ತಾರೆ ಎನ್.ಎಸ್.ಶ್ರೀಧರ ಮೂರ್ತಿ. ಅವರು ಡಾ.ಟಿ.ಆರ್. ಅನಂತರಾಮು ಸಂಪಾದಿತ ‘ವಿಜ್ಞಾನ ರಸಯಾತ್ರಿ’ ಪ್ರೊ.ಜೆ.ಆರ್.ಲಕ್ಷ್ಮಣ ರಾವ್ ಅವರ ಸ್ಮರಣ ಸಂಚಿಕೆ ಕುರಿತು ಬರೆದ ವಿಮರ್ಶೆ.

ಪ್ರೊ.ಜೆ.ಆರ್.ಲಕ್ಷ್ಮಣ ರಾವ್ ಅವರಿಗೂ ನಮ್ಮ ಕುಟುಂಬಕ್ಕೂ ನಿಕಟ ಸಂಬಂಧವಿತ್ತು. ನಮ್ಮ ತಂದೆಯ ಹಿರಿಯ ಮಿತ್ರು, ವೈಯಕ್ತಿಕವಾಗಿ ನನಗೆ ಮಾರ್ಗದರ್ಶಕರು. ಅವರ ಮಕ್ಕಳು ಇಂದಿಗೂ ನನ್ನ ಕುರಿತು ಅದೇ ಅಭಿಮಾನವನ್ನು ಇಟ್ಟು ಕೊಂಡಿದ್ದಾರೆ. ಅವರ ಜನ್ಮ ಶತಮಾನೋತ್ಸವಕ್ಕೆ (2021) ಸಿದ್ದವಾಗ ಬೇಕಿದ್ದು ‘ವಿಜ್ಞಾನ ರಸಯಾತ್ರಿ’ ನವಂಬರ್ 7ರಂದು ಬಿಡುಗಡೆಯಾಯಿತು. ಟಿ.ಆರ್.ಅನಂತ ರಾಮು ಅವರು ಸಂಪಾದಿಸಿರುವ ಕೃತಿಯಲ್ಲಿ ಎಂಟು ವಿಭಾಗಗಳಲ್ಲಿ ಒಟ್ಟು 113 ಲೇಖನಗಳು ಸಂಕಲಿತಗೊಂಡಿದ್ದು ಜೆ.ಆರ್.ಎಲ್ ಅವರ ವ್ಯಕ್ತಿತ್ವದ ವೈವಿಧ್ಯತೆಯನ್ನು ಬಹುಮುಖಿತ್ವವನ್ನು ತೋರಿಸುವಂತಿವೆ.

ಲಕ್ಷ್ಮಣ ರಾಯರ ಒಡನಾಡಿಗಳ ಲೇಖನ ಅವರ ಪ್ರಿಯ ಮಿತ್ರ ಹಾ.ಮಾ.ನಾಯಕರ ಲೇಖನದಿಂದಲೇ ಆರಂಭವಾಗುತ್ತದೆ. ಬರಹಗಾರರಾಗಿ, ಪ್ರಾಧ್ಯಾಪಕರಾಗಿ, ಸಂಘಟಕರಾಗಿ ಹೀಗೆ ಅವರ ಬೇರೆ ಬೇರೆ ಮುಖಗಳು ಇಲ್ಲಿ ಬಂದಿವೆ. ಅವರ ಬಗ್ಗೆ ಬರೆಯುವಾಗ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಬಾಲವಿಜ್ಞಾನದ ಉಲ್ಲೇಖ ಸಾಕಷ್ಟು ಕಡೆ ಸಹಜವಾಗಿ ಬಂದಿದೆ. ಇನ್ನೊಂದು ಕಡೆ ಅವರ ಕುಟುಂಬ ವರ್ಗದವರ ಲೇಖನಗಳಿವೆ. ಅದು ಲಕ್ಷ್ಮಣ ರಾಯರ ವಾತ್ಯಲ್ಯ ಮುಖಿ ವ್ಯಕ್ತಿತ್ವವನ್ನು ತೋರುತ್ತದೆ. ಅವರಿಗೆ ಬೆಂಬಲವಾಗಿದ್ದ ಮಡದಿ ಜೀವೂಬಾಯಿಯವರ ಕುರಿತೂ ಲೇಖನವಿರುವುದು ಅರ್ಥಪೂರ್ಣವಾಗಿದೆ. ಕುಟುಂಬದ ಮೂರು ತಲೆಮಾರುಗಳ ಬರಹಗಳು ಇನ್ನಷ್ಟು ಮಹತ್ವದ್ದಾಗುತ್ತವೆ.

ಲಕ್ಷ್ಮಣ ರಾಯರ ಪ್ರಮುಖ ಬರಹಗಳೂ ಇಲ್ಲಿವೆ. ಅದರಲ್ಲಿ ಸಾಮಾಜಿಕ ಲೇಖನಗಳು, ಜನಪ್ರಿಯ ವಿಜ್ಞಾನ ಲೇಖನಗಳು, ಶುದ್ಧ ವಿಜ್ಞಾನ ಲೇಖನಗಳು, ಭಾಷೆಯ ಕುರಿತ ಲೇಖನಗಳು ಹೀಗೆ ವಿಂಗಡಿಸಲಾಗಿದೆ. ಇದೇ ಲಕ್ಷ್ಮಣ ರಾಯರ ಮಹತ್ವವನ್ನೂ ಸೂಚಿಸುತ್ತದೆ. ಅವರು ಸಮಾಜಮುಖಿ ಚಿಂತನೆಗಳನ್ನು ಹೊಂದಿದ್ದರು. ಮಲೆನಾಡಿನ ಹೆಣ್ಣು ಮಕ್ಕಳು ಆ ಕಾಲದಲ್ಲಿ ಸೌದೆ ಒಲೆಯ ಹೊಗೆಯಿಂದ ಪಡುತ್ತಿದ್ದ ಬಾಧೆಯನ್ನು ತಪ್ಪಿಸಲು ಅಸ್ತ್ರ ಒಲೆಗಳ ವಿನ್ಯಾಸಕ್ಕೆ ಅವರು ಮುಂದಾಗಿದ್ದರು. ಅಂತಹ ಹಲವು ಮಾನವೀಯ ಮುಖಗಳು ಇಲ್ಲಿವೆ. ದೋಸೆಯಲ್ಲಿ ವಿಜ್ಞಾನವಂತೂ ಅವರ ವಿಶಿಷ್ಟ ಲೇಖನ (ನಮ್ಮ ಮನೆಯಲ್ಲಿ ದೋಸೆ ತಿನ್ನತ್ತಲೇ ಈ ವಿಷಯವನ್ನು ವಿಸ್ತಾರವಾಗಿ ಮಾತನಾಡಿದ್ದನ್ನು ಹೇಗೆ ಮರೆಯಲಿ) ಸಂಗೀತ ಮತ್ತು ಅವರಿಗೂ ನಿಕಟ ಸಂಬಂಧ. ಅವರು ಉತ್ತಮ ಕೇಳುಗರು ಮಾತ್ರವಲ್ಲ ಸಂಗೀತವನ್ನು ಆಳವಾಗಿ ಬಲ್ಲವರು ‘ಸಂಗೀತದಲ್ಲಿ ವಿಜ್ಞಾನ’ವನ್ನು ಹಿಂದೆ ಓದಿದ್ದರೂ ಈಗ ಮತ್ತೊಮ್ಮೆ ಓದುವಾಗ ಇನ್ನಷ್ಟು ಸ್ಪಷ್ಟವಾಯಿತು. (ಮಾಯಾಮಾಳವ ಗೌಳ ರಾಗದ ಕುರಿತು ಅವರ ವಿಶಿಷ್ಟ ಲೇಖನವೊಂದಿದೆ. ನಮ್ಮ ತಂದೆಯವರಿಗೂ ಅವರಿಗೂ ಖರಹರ ಪ್ರಿಯ ರಾಗದ ಕುರಿತು ನಡೆದ ಪತ್ರ ವ್ಯವಹಾರ ಎಂದಿಗೂ ಮರೆಯಲಾರೆ) ಫಲ ಜ್ಯೋತಿಷ, ಹೋಮಿಯೋಪತಿ ಎಷ್ಟು ವೈಜ್ಞಾನಿಕ ಎನ್ನುವ ಲೇಖನಗಳೂ ಇಲ್ಲಿವೆ. ಭಾಷೆಗೆ ಸಂಬಂಧಿಸಿದ ಲೇಖನಗಳಲ್ಲಿ ಅವರು ನನಗೆ ಪ್ರೀತಿಯಿಂದ ನೀಡಿದ್ದ ಮಲ್ಲಿಗೆಯಲ್ಲಿ ನಾನು ಹೆಮ್ಮೆಯಿಂದ ಪ್ರಕಟಿಸಿದ್ದ ‘ಬರವಣಿಗೆಯ ವ್ಯಾಧಿಗಳು’ ಮಾಲಿಕೆಯ ನಾಲ್ಕೂ ಕಂತುಗಳು ಇಲ್ಲಿರುವುದು ಸಂತೋಷ ಕೊಟ್ಟಿತು.

ವ್ಯಕ್ತಿಚಿತ್ರಗಳನ್ನು ಬರೆಯುವಲ್ಲಿ ಲಕ್ಷ್ಮಣ ರಾಯರು ಸಿದ್ದಹಸ್ತರು, ಅವರು ಬರೆದ ಕುವೆಂಪು, ಜಿ.ಪಿ.ರಾಜರತ್ನಂ, ದೊರೆಸ್ವಾಮಿ ಅಯ್ಯಂಗಾರ್, ಪುತಿನ ಮೊದಲಾದವರ ಸೊಗಸಾದ ವ್ಯಕ್ತಿ ಚಿತ್ರಗಳಿವೆ. ನಾವೆಲ್ಲಾ ಓದಲು ಬಯಸುವ ಕುವೆಂಪು ಲಕ್ಷ್ಮಣ ರಾಯರ ಬರಹಗಳ ಅಭಿಮಾನಿಗಳಾಗಿದ್ದರು. ‘ಕನ್ನಡದಲ್ಲಿ ವಿಜ್ಞಾನವನ್ನು ಹೇಗೆ ಬರೆಯ ಬೇಕು ಎನ್ನುವುದನ್ನು ಲಕ್ಷ್ಮಣರಾಯರನ್ನು ನೋಡಿ ಕಲಿಯ ಬೇಕು’ ಎಂದಿದ್ದರು. ಇಂಟರ್ ಮೀಡಿಯಟ್ ನಲ್ಲಿ ಅವರ ವಿದ್ಯಾರ್ಥಿಯಾಗಿ ಮುಂದೆ ಸಹೋದ್ಯೋಗಿ ಕೂಡ ಆಗುವ ಚಿತ್ರಣವನ್ನು ನಾನು ಮತ್ತೆ ಮತ್ತೆ ಓದಿದ್ದೇನೆ. (ಜೆ.ಆರ್.ಎಲ್ ನನ್ನ ತಂದೆಯವರ ಕುರಿತು ನನಗೆ ಬರೆದ ಪತ್ರದಲ್ಲಿ ತಂದೆಯವರ ವ್ಯಕ್ತಿಚಿತ್ರವನ್ನು ಬರೆದಿದ್ದರು. ಅದು ತಂದೆಯವರು ನಮ್ಮನ್ನು ಅಗಲಿದಾಗ ಬರೆದ ಸಾಂತ್ವನ ಪತ್ರದಲ್ಲಿ. ಇಂದಿಗೂ ಅದು ಅಮೂಲ್ಯ ಆಸ್ತಿಯಾಗಿ ನನ್ನ ಬಳಿ ಇದೆ. )

ಈ ಕೃತಿಯಲ್ಲಿ ಲಕ್ಷ್ಮಣ ರಾಯರ ಸಂದರ್ಶನಗಳಿವೆ. ಅವರ ಎಲ್ಲಾ 38 ಪುಸ್ತಕಗಳ ಕಿರು ಪರಿಚಯವಿದೆ. ‘ಬ್ರೇಕ್ ಥ್ರೂ ಸೈನ್ಸ್ ಅಕಾಡಮಿ’ ಅವರ ಜನ್ಮ ಶತಮಾನೋತ್ಸವದಲ್ಲಿ ಮೈಸೂರಿನಲ್ಲಿ ಏರ್ಪಡಿಸಿದ್ದ ಉಪನ್ಯಾಸಗಳನ್ನು ಕ್ಯೂ. ಆರ್.ಕೋಡ್ ಮೂಲಕ ಪಡೆಯುವ ಆಧುನಿಕ ಸೌಲಭ್ಯವಿದೆ. ಅಪರೂಪದ ಚಿತ್ರಗಳಿವೆ, ಅಮೂಲ್ಯರೆಡ್ಡಿಯವರಿಂದ ಹಿಡಿದು ಮೊಮ್ಮಗಳು ಪೂರ್ವಿಯವರೆಗೆ ಬರೆದ ವಿಶಿಷ್ಟ ಪತ್ರಗಳೂ ಇವೆ. ಜೆ.ಆರ್.ಲಕ್ಷ್ಮಣ ರಾಯರ ಮೈಸೂರಿನ ಸರಸ್ವತಿ ಪುರಂ ಮನೆಗೆ ಹೋದರೆ ತುಟಿಗೂ ಮತ್ತು ಮಿದುಳಿಗೆ ಸುಗ್ರಾಸ ಭೋಜನ ಎಂದಿಗೂ ತಪ್ಪಿದ್ದಲ್ಲ. 560 ಪುಟಗಳ ಈ ಪುಸ್ತಕ ಕೂಡ ಅಂತಹ ಸುಗ್ರಾಸ ಭೋಜನವೇ! ನಾನಂತೂ ಒಂದೇ ರಾತ್ರಿಯಲ್ಲಿ ಓದಿ ಮುಗಿಸಿದೆ. ಕನಸಿನಲ್ಲಿ ಮನಸಿನಲ್ಲೂ ಈಗ ಲಕ್ಷ್ಮಣ ರಾಯರೇ.

ಕಾಡಿದ ಭಾವಗಳು ಎರಡು, ಇಂತಹ ಮಹತ್ವದ ಕೃತಿ ಬಂದ ಕಾಲಕ್ಕೆ ನನ್ನ ತಂದೆ ಇರಬೇಕಿತ್ತು ಎನ್ನುವ ಸಂಕಟ. ಅವರ ಪ್ರತಿನಿಧಿಯಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದೆ, ಜೆ.ಆರ್.ಎಲ್ ಕುಟುಂಬದವರ, ಸಂಪಾದಕ ಟಿ.ಆರ್.ಅನಂತ ರಾಮು ಅವರ ವಾತ್ಯಲ್ಯವನ್ನು ಅನುಭವಿಸಿದೆ ಎನ್ನುವ ಸಮಾಧಾನ.

- ಎನ್.ಎಸ್.ಶ್ರೀಧರ ಮೂರ್ತಿ

MORE FEATURES

ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’; ಸು. ರುದ್ರಮೂರ್ತಿ ಶಾಸ್ತ್ರಿ

14-11-2024 ಬೆಂಗಳೂರು

"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ...

ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ     

14-11-2024 ಬೆಂಗಳೂರು

"ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ...

ನಿರ್ಲಿಪ್ತ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು

13-11-2024 ಬೆಂಗಳೂರು

"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...