ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’; ಸು. ರುದ್ರಮೂರ್ತಿ ಶಾಸ್ತ್ರಿ


"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ಕೋತಿಗೆ ರಾಜ ಆ ಹಣ್ಣನ್ನು ನೀಡಿದ. ಅದು ಹಣ್ಣನ್ನು ತಿನ್ನುತ್ತಿರಲು ಅದರೊಳಗಿನಿಂದ ಒಂದು ಅಮೂಲ್ಯ ರತ್ನ ಹೊರಬಿತ್ತು. ಅದನ್ನು ಕಂಡು ರಾಜನಿಗೆ ಅಚ್ಚರಿಯಾಯಿತು," ಎನ್ನುತ್ತಾರೆ ಸು. ರುದ್ರಮೂರ್ತಿ ಶಾಸ್ತ್ರಿ. ಮಕ್ಕಳ ದಿನಾಚರಣೆಯ ಅಂಗವಾಗಿ ಅವರ ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’ ಕೃತಿಯ ಆಯ್ಧ ಭಾಗ..

ಗೋದಾವರಿ ನದಿಯ ತೀರದಲ್ಲಿ ಪ್ರತಿಷ್ಠಾನ ಎಂಬ ನಗರವಿತ್ತು. ಅಲ್ಲಿ ತ್ರಿವಿಕ್ರಮಸೇನ ಎಂಬ ರಾಜ ಆಳುತ್ತಿದ್ದ. ಅವನು ರಾಜಸಭೆಗೆ ಬಂದ ಕೂಡಲೇ ಒಬ್ಬ ತಪಸ್ವಿ ನಿತ್ಯ ಅವನಿಗೆ ಒಂದು ಹಣ್ಣಿನ ಕಾಣಿಕೆ ನೀಡುತ್ತಿದ್ದ. ಅದನ್ನು ರಾಜ ತನ್ನ ಕೋಶಾಧಿಕಾರಿಗೆ ಕೊಡುತ್ತಿದ್ದ. ಅವನು ಅದನ್ನು ಭಂಡಾರಕ್ಕೆ ಸೇರಿಸುತ್ತಿದ್ದ. ಹೀಗೆ ಹತ್ತು ವರ್ಷ ನಡೆಯಿತು.

ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ಕೋತಿಗೆ ರಾಜ ಆ ಹಣ್ಣನ್ನು ನೀಡಿದ. ಅದು ಹಣ್ಣನ್ನು ತಿನ್ನುತ್ತಿರಲು ಅದರೊಳಗಿನಿಂದ ಒಂದು ಅಮೂಲ್ಯ ರತ್ನ ಹೊರಬಿತ್ತು. ಅದನ್ನು ಕಂಡು ರಾಜನಿಗೆ ಅಚ್ಚರಿಯಾಯಿತು. ಅವನು ಕೂಡಲೇ ಕೋಶಾಧಿಕಾರಿಯನ್ನು ಕರೆಸಿ, ಆ ಹಣ್ಣುಗಳನ್ನೆಲ್ಲ ಏನು ಮಾಡಿದೆ? ಎಂದು ಕೇಳಿದ.

ಅವನು ಆ ಹಣ್ಣುಗಳನ್ನು ಒಂದು ಕಡೆ ಭಂಡಾರದಲ್ಲಿ ಹಾಕಿದ್ದ. ಹಣ್ಣುಗಳೆಲ್ಲ ಕೊಳೆತು ಹೋಗಿ ರತ್ನಗಳು ಹೊಳೆಯುತ್ತಿದ್ದವು. ಅವುಗಳನ್ನು ತಂದುಕೊಡಲು, ಸಂತೋಷಗೊಂಡ ರಾಜ, ಆ ರತ್ನಗಳನ್ನು ಆ ಕೋಶಾಧಿಕಾರಿಗೇ ಕೊಟ್ಟುಬಿಟ್ಟ.

ಮಾರನೆಯ ದಿನ ಆ ತಪಸ್ವಿ ಬಂದ. ಮತ್ತೆ ಹಣ್ಣು ಕೊಡಲು ಮುಂದಾದ. ಆಗ ರಾಜ ಕೇಳಿದ, “ಅಯ್ಯಾ, ನೀನು ನನಗೆ ರತ್ನ ಕಾಣಿಕೆ ನೀಡಲು ಕಾರಣವೇನು?”

“ಮಹಾರಾಜ, ನನ್ನ ಮಂತ್ರಸಾಧನೆಯಲ್ಲಿ ಒಬ್ಬ ವೀರನ ಸಹಾಯ ಬೇಕಾಗಿದೆ, ಆ ವೀರ ನೀನೇ” ಎಂದ ತಪಸ್ವಿ,

“ಆಗಲಿ, ನಾನೇನು ಮಾಡಬೇಕು ಹೇಳು” ಎಂದ ರಾಜ.

“ಬಹುಳ ಚತುರ್ದಶಿಯ ದಿನ ನೀನು ಸ್ಮಶಾನಕ್ಕೆ ಬಾ, ಅಲ್ಲಿ ನಾನು ಒಂದು ಆಲದ ಮರದ ಕೆಳಗಿರುತ್ತೇನೆ. ನೀನು ಬರುವುದು ರಹಸ್ಯವಾಗಿರಲಿ” ಎಂದ ತಪಸ್ವಿ

ಅದರಂತೆ ಆ ರಾತ್ರಿ, ರಾಜ ವಿಕ್ರಮಸೇನ, ಗುರುತು ಸಿಗದಂತೆ ಕರಿಯ ಬಟ್ಟೆಯನ್ನು ಹೊದ್ದುಕೊಂಡು, ಕೈಯಲ್ಲಿ ಕತ್ತಿ ಹಿಡಿದು ಸ್ಮಶಾನದ ಆಲದ ಮರದ ಬಳಿಗೆ ಹೋದ.

ತಪಸ್ವಿಗೆ ಸಂತೋಷವಾಯಿತು, “ಮಹಾರಾಜ, ನೀನು ದಕ್ಷಿಣ ದಿಕ್ಕಿಗೆ ಹೋಗು. ಅಲ್ಲೊಂದು ಮುಳ್ಳು ಮುತ್ತುಗದ ಮರವಿದೆ. ಅದರ ಕೊಂಬೆಯಲ್ಲಿ ಒಂದು ಶವ ನೇತಾಡುತ್ತಿದೆ. ಮಾತಾಡದೆ ಅದನ್ನು ತೆಗೆದುಕೊಂಡು ಬಾ, ನೆನಪಿರಲಿ, ಶವವನ್ನು ಮೌನವಾಗಿ ಹೊತ್ತು ತರಬೇಕು. ಏನೇ ಆದರೂ ಮಾತಾಡಲೇಬಾರದು” ಎಂದು ಹೇಳಿದ.

ರಾಜ ಆ ಮರದ ಬಳಿಗೆ ಹೋದ, ಕಟ್ಟಿದ್ದ ಹಗ್ಗವನ್ನು ಕತ್ತಿಯಿಂದ ಕತ್ತರಿಸಿದ. ಕೆಳಗೆ ಬಿದ್ದ ಶವ ಕೂಗಿಕೊಂಡು ಗಹಗಹಿಸಿ ನಕ್ಕಿತು. ಅದು ಬೇತಾಳವೆಂದು ಅವನಿಗೆ ಅರ್ಥವಾಯಿತು.

“ಏಕೆ ನಗುತ್ತಿರುವೆ?” ಎಂದು ರಾಜ ಕೇಳಿದ.

ಪ್ರತಿಕ್ರಿಯೆ ನೀಡದೆ ಆ ಶವ ಮತ್ತೆ ಮರದ ಕೊಂಬೆಗೆ ನೇತುಹಾಕಿಕೊಂಡಿತು. ರಾಜ ಬಿಡದೆ ಮರ ಹತ್ತಿ, ಆ ಶವವನ್ನು ಕೆಳಗಿಳಿಸಿದ. ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮಾತಿಲ್ಲದೆ ನಡೆದ. ಸ್ವಲ್ಪ ದೂರ ಹೋಗುವಷ್ಟರಲ್ಲಿ, ಶವದೊಳಗಿದ್ದ ಬೇತಾಳ “ಅಯ್ಯಾ ರಾಜ, ಸುಮ್ಮನೆ ಶ್ರಮ ಪಡುತ್ತಿರುವೆ. ಹೋಗಲಿ, ಬೇಸರ ಕಳೆಯಲು ನಿನಗೊಂದು ಕಥೆ ಹೇಳುತ್ತೇನೆ ಕೇಳು” ಎಂದು ಕಥೆ

ಹೇಳಲು ಆರಂಭಿಸಿತು.

*********************************************

ಮಂದಾರವತಿಯ ಕಥೆ

ರಾಜ ತ್ರಿವಿಕ್ರಮಸೇನ ಮತ್ತೆ ಮುಳ್ಳುಮುತ್ತುಗದ ಮರದ ಬಳಿಗೆ ಬಂದಾಗ, ಬೇತಾಳ ನೆಲದ ಮೇಲೆ ಬಿದ್ದು ಕೂಗಿಕೊಳ್ಳುತ್ತಿತ್ತು. ರಾಜ ಮತ್ತೆ ಎತ್ತಿ ಹೆಗಲ ಮೇಲೆ ಹಾಕಿಕೊಂಡು ನಡೆಯತೊಡಗಿದ ಆಗ ಬೇತಾಳ “ಅಯ್ಯಾ ರಾಜ, ನಿನಗೇಕೆ ಈ ಕಷ್ಟ? ಆದರೂ ಬೇಸರ ಕಳೆಯಲು ಒಂದು ಕಥೆ ಹೇಳುತ್ತೇನೆ ಕೇಳು" ಎಂದು ಹೇಳತೊಡಗಿತು:

ಕಾಳಿಂದೀ ಎಂಬ ನದಿ. ಅದರ ತೀರದಲ್ಲಿ ಬ್ರಹ್ಮಸ್ಥಲ ಎಂಬ ಅಗ್ರಹಾರ. ಅಲ್ಲಿ ಅಗ್ನಿ ಸ್ವಾಮಿ ಎಂಬ ಬ್ರಾಹ್ಮಣನಿದ್ದ. ಅವನಿಗೆ ರೂಪವತಿಯಾದ ಮಂದಾರವತಿ ಎಂಬ ಮಗಳಿದ್ದಳು. ಅವಳು ಮದುವೆಯ ವಯಸ್ಸಿಗೆ ಬಂದಾಗ ಕನ್ಯಾಕುಬ್ಜದಿಂದ ಮೂವರು ಬ್ರಾಹ್ಮಣ ತರುಣರು ಬಂದರು. ಅವರು ಗುಣವಂತರಾಗಿದ್ದರು, ವಿದ್ಯಾವಂತರಾಗಿದ್ದರು. ಅವರು ಮಂದಾರವತಿಯನ್ನು ಮದುವೆ ಮಾಡಿಕೊಡಬೇಕೆಂದು ಕೇಳಿದರು. ಆದರೆ ಮೂವರೂ ಅವಳನ್ನು ತಾವೇ ಮದುವೆಯಾಗಬೇಕೆಂದು ಹಟ ಹಿಡಿದರು.

ಅಗ್ನಿಸ್ವಾಮಿ ಗೊಂದಲಗೊಂಡ. ಇದೆಲ್ಲಿಯ ತಾಪತ್ರಯ, ಎಂದುಕೊಂಡು ಯಾರೊಬ್ಬರಿಗೂ ಮಗಳನ್ನು ಕೊಡಲು ಒಪ್ಪಲಿಲ್ಲ. ಆದರೆ ಆ ಮೂವರು ಹಗಲು ರಾತ್ರಿ ಮಂದಾರವತಿಯನ್ನು ನೋಡುತ್ತ ಅಲ್ಲಿಯೇ ಇದ್ದುಬಿಟ್ಟರು.

ಅಷ್ಟರಲ್ಲಿ ಮಂದಾರವತಿ ತೀವ್ರವಾದ ಜ್ವರ ಬಂದು ಸತ್ತುಹೋದಳು. ದಹನ ಕ್ರಿಯೆಯೂ ನಡೆದು ಹೋಯಿತು. ಆ ಮೂವರಲ್ಲಿ ಒಬ್ಬ ಅವಳ ಅಸ್ಥಿಗಳನ್ನು ತೆಗೆದುಕೊಂಡು ವಿಸರ್ಜಿಸಲು ಗಂಗಾ ನದಿಯ ಕಡೆಗೆ ಹೋದ. ಇನ್ನೊಬ್ಬ ಆ ಬೂದಿಯ ಮೇಲೇ ಗುಡಿಸಲು ಕಟ್ಟಿಕೊಂಡು ಅಲ್ಲೇ ವಾಸ ಮಾಡತೊಡಗಿದ. ಮತ್ತೊಬ್ಬ ತಾಪಸನಾಗಿ ದೇಶಾಂತರ ಹೊರಟುಹೋದ.

ಅವನು ಸಿಕ್ಕಿದ ಕಡೆ ಅಲೆದಾಡುತ್ತ ವಕ್ರೋಲಕ ಎಂಬ ಗ್ರಾಮಕ್ಕೆ ಬಂದ. ಅಲ್ಲಿ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡ.

ಅವನ ಮನೆಯಲ್ಲಿ ಊಟ ಮಾಡುತ್ತಿರುವಾಗ, ಅವರ ಮಗು ರಚ್ಚೆ ಹಿಡಿದು ಚಾವಣಿ ಹಾರಿ ಹೋಗುವಂತೆ ಅಳತೊಡಗಿತು. ಎಷ್ಟು ಸಂತೈಸಿದರೂ ಮಗು ಶಾಂತವಾಗಲಿಲ್ಲ. ಆಗ ಮನೆಯ ಯಜಮಾನಿ ಕೋಪಗೊಂಡು ಆ ಮಗುವನ್ನು ಎತ್ತಿ ಉರಿಯುವ ಬೆಂಕಿಯಲ್ಲಿ ಹಾಕಿಬಿಟ್ಟಳು. ಮಗು ಉರಿದು ಬೂದಿಯಾಯಿತು.

ತಾಪಸಿ ವಿಪರೀತ ಭಯಗೊಂಡ. ತಾನು ಬ್ರಹ್ಮರಾಕ್ಷಸನ ಮನೆಗೆ ಬಂದುಬಿಟ್ಟೆನೆಂದು ಕಳವಳಿಸಿದ. "ಇಂಥ ಪಾಪಕರ್ಮ ಮಾಡಿದ ಈ ಮನೆಯಲ್ಲಿ ಊಟ ಮಾಡುವುದಿಲ್ಲ” ಎಂದು ಮೇಲೇಳತೊಡಗಿದ. ಆಗ ಮನೆಯ ಯಜಮಾನ ಎದ್ದು ತೊಲೆಯ ಮೇಲೆ ಬಟ್ಟೆಯಿಂದ ಕಟ್ಟಿದ್ದ ಒಂದು ಗ್ರಂಥವನ್ನು ತೆಗೆದುಕೊಂಡ. ಅದನ್ನು ತೆರೆದು ಅದರಲ್ಲಿರುವ ಕೆಲವು ಮಂತ್ರಗಳನ್ನು ಹೇಳುತ್ತ, ಮಂತ್ರಿಸಿದ ಒಂದು ಚಿಟಿಕೆ ಮಣ್ಣನ್ನು ಬೆಂಕಿಯಲ್ಲಿ ಹಾಕಿದ. ಮಗು ಜೀವಂತವಾಗಿ ಹೊರಬಂತು.

ತಾಪಸಿ ಬಹಳ ಆಶ್ಚರಗೊಂಡ. ಕೂಡಲೇ ಏನು ಮಾಡಬೇಕೆಂದು ಅವನಿಗೆ ಉಪಾಯ ಹೊಳೆಯಿತು. ಅವನು ನಡುರಾತ್ರಿ ಎಲ್ಲ ನಿದ್ರೆ ಹೋಗುತ್ತಿರುವಾಗ ತೊಲೆಯ ಮೇಲಿನಿಂದ ಆ ಗ್ರಂಥವನ್ನು ಕದ್ದುಕೊಂಡು ಬೆಳಗಾಗುವಷ್ಟರಲ್ಲಿ ಬಹಳ ದೂರ ಪ್ರಯಾಣ ಮಾಡಿದ. ಹಗಲು ರಾತ್ರಿ ಒಂದೇ ಸಮನೆ ನಡೆದ ಮಂದಾರವತಿ ಸುಟ್ಟು ಬೂದಿಯಾಗಿದ್ದ ಸ್ಥಳಕ್ಕೆ ಬಂದ.

ಅದೇ ವೇಳೆಗೆ ಅಸ್ಥಿ ವಿಸರ್ಜಿಸಲು ಗಂಗಾನದಿಗೆ ಹೋದವನೂ ಬಂದ. ಒಬ್ಬ ಮೊದಲೇ ಅಲ್ಲಿದ್ದ. ಮೂರನೆಯವನು ತಾನು ಮಂದಾರವತಿಯನ್ನು ಬದುಕಿಸುವುದಾಗಿ ಹೇಳಿ ಗುಡಿಸಲನ್ನು ತೆರವು ಮಾಡಿಸಿದ. ಬ್ರಾಹ್ಮಣ ಮಾಡಿದಂತೆ ಅವನು ಮಂತ್ರಪುಸ್ತಕವನ್ನು ತೆರೆದು, ಆ ಮಂತ್ರಗಳನ್ನು ಹೇಳಿ ಒಂದು ಚಿಟಿಕೆ ಮಣ್ಣನ್ನು ಮಂತ್ರಿಸಿ ಬೂದಿಯ ಮೇಲೆ ಹಾಕಿದ. ಕೂಡಲೇ ಮಂದಾರವತಿ ಇನ್ನಷ್ಟು ಸುಂದರಿಯಾಗಿ ಹೊರಬಂದಳು.

ಅವಳನ್ನು ಕಂಡು ಮೂವರೂ ಮಂತ್ರಮುಗ್ಧರಾದರು. ಆದರೆ ಮಂದಾರವತಿ ಬದುಕಿ ಬಂದಳೆಂಬ ಸಂತೋಷ ಬಹಳ ಹೊತ್ತು ಉಳಿಯಲಿಲ್ಲ. ಏಕೆಂದರೆ ಮೂವರೂ 'ಮಂದಾರವತಿ ನನಗೆ ಸೇರಬೇಕು, ನನಗೆ ಸೇರಬೇಕು' ಎಂದು ಕಿತ್ತಾಡತೊಡಗಿದರು.

“ನನ್ನ ಮಂತ್ರ ಬಲದಿಂದ ಇವಳು ಬದುಕಿ ಬಂದಳು. ಆದ್ದರಿಂದ ಇವಳು ನನಗೆ ಸೇರಬೇಕು” ಎಂದ ತಾಪಸಿಯ ವೇಷದವನು.

“ನಾನು ತೀರ್ಥಯಾತ್ರೆ ಮಾಡಿ ಇವಳ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಿದೆ. ಅದರ ಫಲವಾಗಿ ಇವಳು ಬದುಕಿ ಬಂದಿದ್ದಾಳೆ. ಆದ್ದರಿಂದ ಇವಳು ನನಗೆ ಸೇರಬೇಕು” ಎಂದ ಇನ್ನೊಬ್ಬ.

“ನಾನು ಇವಳ ಬೂದಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಪಾಡಿಕೊಂಡು ಇದ್ದುದರಿಂದ ಇವಳು ಜೀವಂತವಾಗಿ ಬರಲು ಸಾಧ್ಯವಾಯಿತು. ಆದ್ದರಿಂದ ಇವಳು ನನಗೆ ಸೇರಬೇಕು” ಎಂದ ಮತ್ತೊಬ್ಬ.

ಕಥೆ ಹೇಳಿ ಮುಗಿಸಿದ ಬೇತಾಳ “ಅಯ್ಯಾ ರಾಜ, ಮಂದಾರವತಿ ಆ ಮೂವರಲ್ಲಿ ಯಾರಿಗೆ ಸೇರಬೇಕು? ತಿಳಿದೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುತ್ತದೆ” ಎಂದಿತು.

ಅದಕ್ಕೆ ರಾಜ ಹೇಳಿದ, “ಕಷ್ಟಪಟ್ಟು ಮಂತ್ರಶಕ್ತಿಯಿಂದ ಅವಳಿಗೆ ಜೀವ ಕೊಟ್ಟವನು ಅವಳ ತಂದೆಯಾದಂತಾಯಿತು. ಅಸ್ಥಿಯನ್ನು ತೆಗೆದುಕೊಂಡು ಹೋಗಿ ಗಂಗೆಯಲ್ಲಿ ಬಿಟ್ಟವನು ಮಗನಾದಂತಾಯಿತು. ಆದರೆ ಅವಳ ಮೇಲಿನ ಪ್ರೀತಿಯಿಂದ ಅವಳ ಬೂದಿಯ ಮೇಲೇ ಗುಡಿಸಲು ಕಟ್ಟಿಕೊಂಡು ಮಲಗಿದ್ದವನೇ ಅವಳ ಗಂಡ” ಎಂದ.

ಮೌನ ಮುರಿದು ಮಾತಾಡಿದ್ದರಿಂದ ಬೇತಾಳ ವಿಕ್ರಮಸೇನ ರಾಜನ ಹೆಗಲಿನಿಂದ ಹಾರಿಹೋಯಿತು.

- ಸು. ರುದ್ರಮೂರ್ತಿ ಶಾಸ್ತ್ರಿ

MORE FEATURES

ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ     

14-11-2024 ಬೆಂಗಳೂರು

"ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ...

ನಿರ್ಲಿಪ್ತ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು

13-11-2024 ಬೆಂಗಳೂರು

"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...

ಮನುಷ್ಯನ ಜೀವನ ಅತ್ಯಂತ ಅಮೂಲ್ಯವಾದುದು

12-11-2024 ಬೆಂಗಳೂರು

"ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಚರಿತ್ರೆಗಳಿಗೆ ಒಂದು ಶತಮಾನದ ಇತಿಹಾಸವಿದೆ. ಅದು ಜೀವನ ಚರಿತ್ರೆ ಅಥವಾ ಆತ...