ಸ್ವಾಮಿರಾವ್ ಕುಲಕರ್ಣಿ ಅವರು ಬಹುಮುಖ ಪ್ರತಿಭಾವಂತರು


“ಸ್ವಾಮಿರಾವ್ ಕುಲಕರ್ಣಿ ಅವರು ಕನ್ನಡ ಭಾಷೆ ಸಾಹಿತ್ಯ ನುಡಿಗಾಗಿ ತಮ್ಮದೇ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸರಳ, ಹಾಸ್ಯ, ವಿಡಂಬನೆ ಇವುಗಳ ಮೂಲಕ ಗಮನ ಸೆಳೆದ ವ್ಯಕ್ತಿ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಕೃಷಿಯನ್ನು ಮಾಡಿದ್ದಾರೆ” ಎನ್ನುತ್ತಾರೆ ಡಾ. ಶರಣಬಸಪ್ಪ ವಡ್ಡನಕೇರಿ. ಅವರು ಡಾ. ವಿಜಯಕುಮಾರ ಬಿ. ಬೀಳಗಿ ಅವರ ‘ಸ್ವಾಮಿರಾವ್ ಕುಲಕರ್ಣಿ’ ವಾಚಿಕೆ 13ಕ್ಕೆ ಬರೆದ ಅನಿಸಿಕೆ ಇಲ್ಲಿದೆ.

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಚೆ ನೆರವೇರುವಲ್ಲಿ ಡಾ. ವಿಜಯಕುಮಾರ ಬಿ. ಬೀಳಗಿ ಅವರು ಡಾ. ಸ್ವಾಮಿರಾವ ಕುಲಕರ್ಣಿಯವರ ಕುರಿತು ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಸ್ವಾಮಿರಾವ್ ಕುಲಕರ್ಣಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಬಂದಿವೆ. ಕನಕಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ

ಸ್ವಾಮಿರಾವ್ ಕುಲಕರ್ಣಿ ಅವರು ಬಹುಮುಖ ಪ್ರತಿಭಾವಂತರು. ಅವರು ಗುಲ್ಬರ್ಗಾದ ಪ್ರತಿಷ್ಠಿತ ನೂತನ ಪದವಿ ಮಹಾವಿದ್ಯಾಲಯದಲ್ಲಿ 1979ರಿಂದ ಕನ್ನಡ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2012ರ ಫೆಬ್ರವರಿಯಲ್ಲಿ ನಿವೃತ್ತಿಯನ್ನು ಹೊಂದಿದರು. ಅವರು ಕನ್ನಡ ಭಾಷೆ ಸಾಹಿತ್ಯ ನುಡಿಗಾಗಿ ತಮ್ಮದೇ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸರಳ, ಹಾಸ್ಯ, ವಿಡಂಬನೆ ಇವುಗಳ ಮೂಲಕ ಗಮನ ಸೆಳೆದ ವ್ಯಕ್ತಿ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಕೃಷಿಯನ್ನು ಮಾಡಿದ್ದಾರೆ. ಅವರು ಕಾವ್ಯ, ಕಥೆ, ದಾಸ ಸಾಹಿತ್ಯ, ನಾಟಕ, ಕಾದಂಬರಿ, ಪ್ರಬಂಧಗಳು, ಜೀವನ ಚರಿತ್ರೆಗಳು, ಸಂಪಾದನೆ ಹೀಗೆ ಹತ್ತಾರು ಸಾಹಿತ್ಯ ಪ್ರಕಾರದಲ್ಲಿ ಕೃಷಿಯನ್ನು ಮಾಡಿರುವ ಸ್ವಾಮಿರಾವ್ ಕುಲಕರ್ಣಿ ಅವರು ಒಬ್ಬ ಸೃಜನಶೀಲ ಚಿಂತನ ಲೇಖಕರು.

ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಬರವಣಿಗೆ, ಸಂಘಟನೆ, ಅಭಿನಯ, ಭಾಷಣ, ಜನಪದ ಸಾಹಿತ್ಯ ಸಂಗ್ರಹಕಾರ, ದೂರದರ್ಶನ, ಆಕಾಶವಾಣಿಗಳಲ್ಲಿ ತಾತ್ಕಾಲಿಕ ಉದ್ಯೋಷಕರಾಗಿ, ಪತ್ರಿಕೋದ್ಯಮಿಯಾಗಿ, ಜನಸಂಖ್ಯಾ ಶಿಕ್ಷಣದ ಅಧಿಕಾರಿಯಾಗಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರು. 1975ರಿಂದ 1995ರವರೆಗೆ ನಿರಂತರವಾಗಿ ಮಕ್ಕಳ ರಂಗ ನಾಟಕ ಶಿಬಿರ, ವಿದ್ಯಾರ್ಥಿಗಳಿಗೆ ನಾಟಕೋತ್ಸವ ಸಂಘಟನೆ, ನಟರಾಗಿ, ಕಲಾವಿದರಾಗಿ, ರಂಗ ನಿರ್ದೇಶಕರಾಗಿ, ಮೂರು ದಶಕಗಳ ಕಾಲ ಅವಿರತ ಸೇವೆ ಸಲ್ಲಿಸಿದ್ದಾರೆ.

ಇಲ್ಲಿಯವರೆಗೆ ಅರವತ್ತು ನಾಲ್ಕು ಪುಸ್ತಕಗಳನ್ನು ರಚಿಸಿ ಪ್ರಕಟವಾಗಿವೆ. ವಿಶ್ವವಿದ್ಯಾಲಯದ ಐದು ಪಠ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಪರಾಮರ್ಶಕ ಸಮಿತಿ ಸದಸ್ಯರಾಗಿ, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಉಪಾಧ್ಯಕ್ಷರಾಗಿ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾಗಿದ್ದಾರೆ.

- ಡಾ ಶರಣಬಸಪ್ಪ ವಡ್ಡನಕೇರಿ

MORE FEATURES

ನಾಲಿಗೆ ಸಪ್ಪೆ ಸಪ್ಪೆ ಅನಿಸಿದಾಗೆಲ್ಲ ಓದೋಕೆ ಇಷ್ಟ ಪಡೋ ಲೇಖಕರ ಕಾದಂಬರಿಯಿದು

21-09-2024 ಬೆಂಗಳೂರು

“ಚಿದಂಬರ ರಹಸ್ಯ ಮುಖ್ಯವಾಗಿ ರಹಸ್ಯಗಳ ಸುತ್ತ ನಡೆಯೋ ಕಾದಂಬರಿಯಾದರೂ ಕೊನೆಗೆ ಇದರ ಕೊನೆ ಹೆಚ್ಚು ನೆನಪಲ್ಲಿ ಉಳಿಯು...

ಹುಚ್ಚು ಮನಸ್ಸಿನ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನ ಇಲ್ಲಿದೆ

21-09-2024 ಬೆಂಗಳೂರು

""ಕನಸೇ ಕಾಡುಮಲ್ಲಿಗೆ" ಆರಂಭವಾಗುವುದು ಹೀಗೆ. ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಓದುವ ಹಾರ್ಮೋನ್ ಏರುಪ...

ಯುವ ಜನಾಂಗ ಹೇಗಿರಬಾರದು ಎಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೃತಿ ‘ಬೇವಾಚ್’

21-09-2024 ಬೆಂಗಳೂರು

"ಕತ್ತಲಾಗುತ್ತಿದ್ದಂತೆ ನಗರದ ಚಿತ್ರಣ ಬದಲಾಗುವುದು ಸಹಜ, ಯಾವ್ಯಾವುದೊ ಉದ್ದೇಶಗಳಿಗೆ ಲೈವ್ ಬ್ಯಾಂಡಿಗೆ ಜನರು ಭೇಟಿ...