ಸಾಹಿತ್ಯ ಸೂರ್ಯೋದಯಕ್ಕೆ ಸಾಕ್ಷಿಯಾದ ಪುಸ್ತಕ ಮಳಿಗೆ

Date: 22-12-2024

Location: ಮಂಡ್ಯ


ಮಂಡ್ಯ: ಮಳೆ ತೇವವನ್ನು ಹೊತ್ತಿಟ್ಟ ದಾರಿ, ಕಾಲುಜಾರಿ ಬಿದ್ದ ಪುಟಗಳ ಕಥೆಗಳಂತಿದ್ದವು. ಜನರು ಗಲುಬೆ ಗದ್ದಲಗಳ ನಡುವೆ ಪುಸ್ತಕಗಳನ್ನು ಎತ್ತಿಕೊಂಡು ಓಡುತ್ತಿದ್ದ ದೃಶ್ಯವು ಸಾಹಿತ್ಯದ ಪ್ರೀತಿ ಹೇಗೆ ಜನರನ್ನು ಏಕರೂಪವಾಗಿ ಆಕರ್ಷಿಸುತ್ತದೆ ಎಂಬುದನ್ನು ತೋರಿಸಿತು. “ನಿಮ್ಮ ಮಕ್ಕಳಿಗೆ ಈ ಪುಸ್ತಕ ಓದಲು ಕೊಡಿ ಸಾರ್,” ಎಂದು ಮಾರಾಟಗಾರರು ಪಾಠ ಹೇಳಿದ ರೀತಿ, ಮತ್ತೊಬ್ಬ ಮಳಿಗೆಯಲ್ಲಿ “ನೀವು ತಾತ್ವಿಕ ಚಿಂತನೆಗೆ ಆಸಕ್ತರಾಗಿದ್ದರೆ, ಇವನ್ನೇ ಖಂಡಿತಾ ಓದಿ,” ಎಂಬ ಸಲಹೆ, ಒಬ್ಬರ ಕೈಯಲ್ಲಿ ಮಕ್ಕಳ ಕಥೆಗಳ ಸಂಕಲನ, ಇನ್ನೊಬ್ಬರ ಕೈಯಲ್ಲಿ ಶ್ರೇಷ್ಠ ಕಾದಂಬರಿ, ಜನಪ್ರಿಯ ಲೇಖಕರ ಸಹಿಯನ್ನು ಬಯಸಿದವರ ಸಾಲು, ಹೊಸ ಲೇಖಕರನ್ನು ಬೆಂಬಲಿಸಿದ ಓದುಗರ ಗುಂಪು—ಎಲ್ಲವೂ ಮಂಡ್ಯದಲ್ಲಿ ನೆಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆಲದ ಮೇಲೆ ಕಾಣ ಸಿಕ್ಕ ದೃಶ್ಯ.

ಸಾಹಿತ್ಯ ಸಮ್ಮೇಳನದ ಮೈಮಾಟ ಕೇವಲ ಸಾಹಿತ್ಯದ ಕುರಿತಲ್ಲ, ಅದು ಜನರ ಆತ್ಮೀಯತೆ ಮತ್ತು ಪುಸ್ತಕ ಸಾಹಿತ್ಯಗಳ ಮೌಲ್ಯದ ನಡುವೆ ಬೆಸೆದ ಬಂಧದ ಸಂಭ್ರಮದ ಹಬ್ಬ. ಅದು ಕನ್ನಡದ ಶ್ರೇಷ್ಠತೆಗೆ ಮತ್ತು ಓದುಗರ ಹೃದಯಕ್ಕೆ ಆಗ್ರಹಿಸಿದ ನೇರ ಸಂಪರ್ಕ. ಈ ಸಾಹಿತ್ಯ ಸುರ್ಯೋದಯಕ್ಕೆ ಸಾಕ್ಷಿಯಾಗಿತ್ತು 491 ಪುಸ್ತಕಗಳ ಮಳಿಗೆ.

ಹೊನ್ನಹೊರತಾದ ಪುಸ್ತಕಗಳ ಮಧ್ಯೆ ಕೆಲಸ ಮಾಡುತ್ತಿದ್ದವರ ಉತ್ಸಾಹವೇ ಬೇರೆ. ಪ್ರತಿ ಕಾರ್ಮಿಕನೂ ತನ್ನ ಮಳಿಗೆಯಲ್ಲಿರುವ ಪುಸ್ತಕಗಳನ್ನು ಮಾರಲು ಹಂಬಲದಿಂದಲೇ ತೊಡಗಿಕೊಂಡಿದ್ದನು. ಪ್ರತಿ ಮಳಿಗೆಯಲ್ಲೂ ಬೇರೆಯೇ ಕಥೆ, ಬೇರೆಯೇ ವಿವರಣೆ, ಓದುಗರಿಗೆ ತನ್ನದೇ ಆದ ರೀತಿಯಲ್ಲಿ ಆಕರ್ಷಣೆ ಮೂಡಿಸುತ್ತಿತ್ತು. ಅಲ್ಲಿ ಕೇವಲ ಕಾದಂಬರಿಗಳು ಮಾತ್ರವಲ್ಲ, ಕವಿತೆಗಳ ಸಂಕಲನ, ತಾತ್ವಿಕ ಗ್ರಂಥಗಳು, ಮಕ್ಕಳ ಕಥೆಗಳು, ವಿಜ್ಞಾನ ಮತ್ತು ಇತಿಹಾಸದ ಮೇಲೆ ಬರೆಯಲಾದ ಪುಸ್ತಕಗಳೂ, ಲಭ್ಯವಿದ್ದವು. ಎಲ್ಲವೂ ಕನ್ನಡದ ವಿವಿಧ ಲೇಖಕರಿಂದ ಹೊರಬಂದ ಅಮೂಲ್ಯ ಕೃತಿಗಳು.

ಮಳೆಯಿಂದ ಕೆಸರಾದ ನೆಲ, ಹೊರಟ ಹೆಜ್ಜೆಗೆ ಕೆಸರನ್ನು ಮೆತ್ತುತ್ತಿತ್ತು. ಆದರೂ ಜನರ ಹರಟೆಯಲ್ಲಿ, ಅವರ ಆಸೆಗಳಲ್ಲಿ, ತಮ್ಮ ಪ್ರಿಯ ಲೇಖಕರ ಕೃತಿಗಳನ್ನು ಹುಡುಕುವಲ್ಲಿ ಇದರ ಪರಿವೇ ಇಲ್ಲದೆ ಬಿಜಿಯಾಗಿದ್ದರು. ಒಂದು ಮಳಿಗೆಯಿಂದ ಇನ್ನೊಂದು ಮಳಿಗೆಯವರೆಗೆ ಓಡಾಡುತ್ತಿದ್ದ ಜನರ ಮೇಲೆ ಕಾಣುತ್ತಿದ್ದ ಉತ್ಸಾಹವೇ ಇನ್ನಷ್ಟು ಅದ್ಭುತ. ತಾವಿದ್ದಲ್ಲೆಲ್ಲಾ ಯಾರಿಗೋ ಹೇಳುತ್ತಿದ್ದ ಕತೆಗಳು, ತಲೆದೋರಿಸುತ್ತಿದ್ದ ಪ್ರಶ್ನೆಗಳು, ಪ್ರಿಯ ಕೃತಿಯನ್ನು ಕಂಡು ಕೈಗೆ ಪಡೆದ ತಕ್ಷಣ ತೋರಿಸುತ್ತಿದ್ದ ಸಂತೋಷ… ಎಷ್ಟು ಅಪರೂಪದ ಅನುಭವ! ಮಿತಿಯಾಚೆ ಹೋಗುವ ಈ ಅನುಭವ, ಮಳೆ, ನೆಲದ ಸೊಗಸು, ಪುಸ್ತಕಗಳ ಪರಿಮಳ, ಮತ್ತು ಸಾಹಿತ್ಯಾಸಕ್ತ ಜನರ ಮಧ್ಯೆ ಮೂಡಿದ ಆತ್ಮೀಯತೆ ಎಲ್ಲವೂ ಸೇರಿ ಒಂದು ನಳಪಾಕವೇ ಆಗಿತ್ತು.

ಅಕಾಲಿಕ ಮಳೆಯ ಕಾರಣ ಕೆಲವು ಸಮಸ್ಯಗಳು ಕಾಣಿಸಿಕೊಂಡರು ಜನರ ಮತ್ತು ಮಾರಟಗಾರರ ಉತ್ಸಾಹಕ್ಕೇನು ಕೊರತೆ ಬರಲಿಲ್ಲ. ಹೆಚ್ಚಿನ ಜನರು ಬಂದು ಪುಸ್ತಕ ಮಳಿಗೆಗಳಲ್ಲಿ ತುಂಬಿಕೊಂಡ ಕಾರಣ ಸ್ಥಳೀಯ ಇಂಟರ್‌ನೆಟ್ ಸಮಸ್ಯೆಯಿಂದ ಕೆಲವು ಡಿಜಿಟಲ್ ಪಾವತಿಗಳು ವಿಳಂಬಗೊಂಡು ಜನರ ಮುಖದಲ್ಲಿ ಸಣ್ಣ ಬೇಸರದ, ನಿರಾಸೆಯ ಭಾವ ಎದ್ದು ಕಾಣುತ್ತಿತ್ತು.

ಆ ನೆನೆಗಳು, ನೆಲದ ಒರಟು, ಪುಸ್ತಕಗಳ ಘಮಲು, ಜನರ ಆನಂದ… ಇವೆಲ್ಲವೂ ಸಾಹಿತ್ಯ ಸಮ್ಮೇಳನದ ಅಗಾಧತೆಯನ್ನು ಮನುಷ್ಯನೊಳಗೇ ಮುಟ್ಟಿಸುತ್ತವೆ. ಇದು ಕೇವಲ ಒಂದು ಸಮ್ಮೇಳನವಲ್ಲ, ಕನ್ನಡ ಭಾಷೆಗೆ, ಅದರ ಸಾಹಿತ್ಯಕ್ಕೆ, ಓದುಗರಿಗೆ ಕೊಡುವ ಗೌರವದ ಹಬ್ಬ.

 

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...