ಪಾತ್ರಗಳ ಪಯಣವೂ, ಬರೆಯುವವಳಾಗಿ ನನ್ನ ಪಯಣವೂ ಹೌದು : ಎನ್.ಸಂಧ್ಯಾ ರಾಣಿ


“ಪ್ರೀತಿ, ಪ್ರೇಮ, ಸಂಬಂಧಗಳು ಮತ್ತು ಅವು ಬದಲಾಗುವ, ಒಮ್ಮೊಮ್ಮೆ ಇಲ್ಲವಾಗುವ ಬಗೆ ನನ್ನನ್ನು ಯಾವಾಗಲೂ ಕಾಡುತ್ತದೆ. ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಪ್ರತಿದಿನ ಮುಂಜಾನೆಯಲ್ಲಿ ಇರುವಂತೆಯೇ ನಾವು ಸಂಜೆಯೂ ಇದ್ದೇವೆ ಎಂದರೆ ಆದಿನ ನಮ್ಮ ಬದುಕಿನಲ್ಲಿ ಏನೂ ಘಟಿಸಿಲ್ಲ ಎಂದೇ ಅರ್ಥ” ಎನ್ನುತ್ತಾರೆ ಲೇಖಕಿ ಎನ್.ಸಂಧ್ಯಾ ರಾಣಿ. ಅವರು ತಮ್ಮ ಇಷ್ಟುಕಾಲ ಒಟ್ಟಿಗಿದ್ದು ಕೃತಿಯಲ್ಲಿ ಬರೆದ ಲೇಖಕಿಯ ಮಾತು ನಿಮ್ಮ ಓದಿಗಾಗಿ...


ಪುಟ ತಿರುಗಿಸುವ ಮುನ್ನ..

ಈ ಕಾದಂಬರಿಯ ಹುಟ್ಟುವಿಕೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣ ಸಾವಣ್ಣ ಪ್ರಕಾಶನದ ಜಮೀಲ್ ಅವರು. ಪ್ರತ್ಯಕ್ಷ ಕಾರಣ ಹೇಗೆಂದರೆ, ನಾನು ಚಿತ್ರಕಥೆ, ಸಂಭಾಷಣೆ ಬರೆದ ‘ನಾತಿಚರಾಮಿ’ ಚಿತ್ರ ನೋಡಿದ ಅವರು, ಇಂತಹುದೇ ದಿಟ್ಟತನದ ವಿಷಯವನ್ನಿಟ್ಟುಕೊಂಡು ಒಂದು ಕಾದಂಬರಿ ಬರೆಯಿರಿ ಮೇಡಂ ಎಂದು ಹೇಳುತ್ತಲೇ ಇದ್ದರು. ಆದರೆ ನನಗೇ ಹಿಂಜರಿಕೆ ಇತ್ತು. ಕಾದಂಬರಿಯ ಹರಹನ್ನು ಹೊಂದಬಲ್ಲ ವಸ್ತುವಿನ ಹುಡುಕಾಟ ನನ್ನಲ್ಲಿತ್ತು, ಅದು ನಡೆಯುತ್ತಲೇ ಇತ್ತು. ಪರೋಕ್ಷವಾಗಿ ಅದಕ್ಕೂ ಜಮೀಲ್ ಅವರೇ ಕಾರಣರಾದರು. ಸದಾ ಹೊಸತನದ ಹುಡುಕಾಟದಲ್ಲಿರುವ ಅವರು 16 ಬರಹಗಾರ್ತಿಯರನ್ನು ಒಟ್ಟುಗೂಡಿಸಿ ‘ಏನೋ ಹೇಳುತ್ತಿದ್ದಾರೆ’ ಎನ್ನುವ ಕಥನವನ್ನು ಬರೆಸಿದರು. ಅದಕ್ಕಾಗಿ ಲೇಖನ ಬರೆಯುವಾಗ ನಾನೆಂದೋ ಬಾಲ್ಯದಲ್ಲಿ ಕೇಳಿದ್ದ ಶಾಪದ ಕಥೆಯೊಂದು ನೆನಪಾಯಿತು. ಅದನ್ನು ಬರೆದು ಮುಗಿಸಿದ ಮೇಲೂ ನನ್ನೊಳಗಿನ ಕಥೆ ಮುಗಿಯಲಿಲ್ಲ. ನಾನು ‘ಅವಧಿ’ಯಲ್ಲಿ ಕೆಲಸ ಮಾಡುತ್ತಿದ್ದಾಗ ಜಿಎನ್ ಮೋಹನ್ ಅವರು ಗುಲ್ಜಾರ್ ಬರೆದ ಕಥೆಗಳ ಸಂಗ್ರಹವೊಂದನ್ನು ಕೊಟ್ಟು, ‘ಕಥೆಯೊಂದು ನಿನ್ನನ್ನು ಪೀಡಿಸಿ, ನಿನ್ನಿಂದ ಬರೆಸಿಕೊಳ್ಳಲಿ’ ಎಂದು ಹಾರೈಸಿದ್ದರು. ಈ ಶಾಪದ ಕಥೆ ಅಕ್ಷರಶಃ ನನ್ನನ್ನು ಹಾಗೆಯೇ ಪೀಡಿಸಿ, ಬರೆಸಿಕೊಂಡಿತು. ಈ ಕಾದಂಬರಿ ಹಾಗೆ ಕಣ್ಣುಬಿಟ್ಟಿತು.

ಕಥೆಯ ಹಿನ್ನೆಲೆ ತಲೆತಲಾಂತರಗಳ ಹೆಣ್ಣುಜೀವಗಳ ಬದುಕು. ಅದು ಬಾಯಿಮಾತಿನ ಕಥೆ, ಪುರಾಣ ಅಥವಾ ಅಜ್ಜಿಯಿಂದ ಮೊಮ್ಮಗಳಿಗೆ ಹರಿದು ಬಂದ ನೆನಪು. ಕಥೆಯ ಆವರಣ ಇರುವುದು ಇಂದಿನ ದಿನಮಾನದಲ್ಲಿ. ಬೆಂಗಳೂರಿನ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ನಾಲ್ಕು ಜನ ಸ್ನೇಹಿತರ – ಗೌರಿ, ಇನಾಯ, ಅರುಂಧತಿ ಮತ್ತು ರಾಮಚಂದ್ರ – ಬದುಕು, ಬವಣೆ, ಬದಲಾವಣೆ ಕಾದಂಬರಿಯ ವಸ್ತು. ಅಷ್ಟೇ ಪ್ರಧಾನವಾಗಿರುವುದು ಅವರಲ್ಲಿ ಒಬ್ಬಳ ತಾಯಿಯ ಕಥೆ. ಅವಳೇ ಸರೋಜಿನಿ, ಭೂತ ಮತ್ತು ವರ್ತಮಾನಕ್ಕೆ ಕೊಂಡಿಯಾದವಳು.

ಪ್ರೀತಿ, ಪ್ರೇಮ, ಸಂಬಂಧಗಳು ಮತ್ತು ಅವು ಬದಲಾಗುವ, ಒಮ್ಮೊಮ್ಮೆ ಇಲ್ಲವಾಗುವ ಬಗೆ ನನ್ನನ್ನು ಯಾವಾಗಲೂ ಕಾಡುತ್ತದೆ. ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಪ್ರತಿದಿನ ಮುಂಜಾನೆಯಲ್ಲಿ ಇರುವಂತೆಯೇ ನಾವು ಸಂಜೆಯೂ ಇದ್ದೇವೆ ಎಂದರೆ ಆದಿನ ನಮ್ಮ ಬದುಕಿನಲ್ಲಿ ಏನೂ ಘಟಿಸಿಲ್ಲ ಎಂದೇ ಅರ್ಥ. ಆದರೆ ಯಾವ ಬದುಕು ಹಾಗಿರುವುದಿಲ್ಲ. ಮುಂಜಾವಿನಿಂದ ಸಂಜೆಗೆ ನಾವು ಇನ್ನೂ ಸ್ವಲ್ಪ ಜಾಣರೋ, ದಡ್ಡರೋ, ಪಡೆದವರೋ, ಕಳೆದುಕೊಂಡವರೋ, ಕೊಟ್ಟವರೋ, ಕಸಿದುಕೊಂಡವರೋ ಏನೋ ಆಗಿರುತ್ತೇವೆ. ಸಂಬಂಧಗಳೂ ಹಾಗೆಯೇ. ಈ ಕಾದಂಬರಿಯಲ್ಲಿ ನಾನು ಅವುಗಳನ್ನು ಹುಡುಕಾಡುವ ಪ್ರಯತ್ನ ಮಾಡಿದ್ದೇನೆ. ಯಾವುದೋ ಹಳ್ಳಿಯ ಮೂಲೆಯೊಂದರಲ್ಲಿ ಶುರುವಾಗುವ ಕಥೆ ಮುಂದುವರೆಯುವುದು ಬೆಂಗಳೂರು ಎನ್ನುವ ಮಹಾನಗರದಲ್ಲಿ. ಜಾಗತೀಕರಣ ಹೊಸಹೊಸ ಅವಕಾಶಗಳ ಜೊತೆಯಲ್ಲಿ ಆರ್ಥಿಕ ಬದಲಾವಣೆಗಳನ್ನೂ ಹೊತ್ತುತಂದಿತು. ತಂದೆ ನಿವೃತ್ತರಾಗುವಾಗ ಪಡೆಯುತ್ತಿದ್ದ ಸಂಬಳಕ್ಕಿಂತಾ ಹೆಚ್ಚಿನ ಸಂಬಳವನ್ನು ಮಕ್ಕಳು ಮೊದಲ ಸಂಬಳವಾಗಿ ಪಡೆದರು. ತಿಳಿದೋ ತಿಳಿಯದೆಯೋ ಅದು ಸಮೀಕರಣದ ಹಲವು ನಿಯಮಗಳನ್ನು ಬದಲಾಯಿಸಿತು. ಹೆಣ್ಣುಮಕ್ಕಳ ಮಟ್ಟಿಗೂ ಈ ಬದಲಾವಣೆ ಸವಾಲು ಮತ್ತು ಬಲ ಎರಡನ್ನೂ ತಂದಿತು. ಸಮಸಮವಾದ ಕೆಲಸ ಮತ್ತು ಸಂಬಳ ಹೊಸ ಧೈರ್ಯ ಮತ್ತು ಹೊಣೆಯನ್ನು ಎದುರಿಗಿಟ್ಟಿತು. ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಈ ಪರ್ವದಲ್ಲಿ ಎದುರಾದ ಸವಾಲುಗಳು ಗಂಡಹೆಣ್ಣಿನ ಸಂಬಂಧವನ್ನು ಹೊಸತೇ ದೃಷ್ಟಿಕೋನದಲ್ಲಿ ನೋಡಬೇಕಾದ ಅಗತ್ಯವನ್ನು ತಂದೊಡ್ಡಿದವು. ಇದೆಲ್ಲದರಿಂದ ‘ಮದುವೆ’ ಎನ್ನುವ ಸಂಸ್ಥೆ ಸಹ ಹಲವಾರು ಹೊಸಹೊಸ ಸವಾಲುಗಳನ್ನು ಎದುರಿಸಬೇಕಾಯಿತು. ಕಾಲದಿಂದ ಕಾಲಕ್ಕೆ ಇದು ಬದಲಾಗಿದೆ, ಒಮ್ಮೊಮ್ಮೆ ತನ್ನನ್ನು ಹಿಗ್ಗಿಸಿಕೊಂಡೋ, ಕುಗ್ಗಿಸಿಕೊಂಡೋ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡಿದೆ, ಕೆಲವೊಮ್ಮೆ ಒಗ್ಗಿಸಿದೆ ಕೂಡಾ. ಮದುವೆಯಲ್ಲಿ ಗಂಡು ಮತ್ತು ಹೆಣ್ಣಿಗೆ ಇದೇ ಪಾತ್ರಗಳಿರಬೇಕು ಎನ್ನುತ್ತಿದ್ದ ಕಟುನಿಯಮದ ಕಾಲ ಈಗಿಲ್ಲ. ಹೊರಗೆ ಹೋಗಿ ದುಡಿಯುತ್ತಿರುವ ಹೆಣ್ಣುಮಕ್ಕಳ ಜೊತೆಜೊತೆಯಲ್ಲಿ ಮನೆಯಲ್ಲಿ ಉಳಿದು, ಮನೆವಾಳ್ತೆ ನೋಡಿಕೊಳ್ಳುವ ಗಂಡಂದಿರು ಇದ್ದಾರೆ. ಮದುವೆಯ ಗೊಡವೆಯೇ ಬೇಡವೆಂದು ಸಹಬಾಳ್ವೆಯ ಸಂಬಂಧಗಳೂ ಇವೆ. ಬದಲಾವಣೆಯ ಈ ಮಜಲುಗಳು ಸಹ ನನ್ನ ಕಾದಂಬರಿಯ ವಸ್ತು ಆಗಿದೆ. ಸಮಸ್ಯೆಯಾದರೆ ಹೊಂದಿಕೊಂಡು ಹೋಗು ಎನ್ನುವ ಪಿಸುಮಾತು ಒಂದೆಡೆಯಾದರೆ, ಕೂಡಲೇ ಬಿಟ್ಟು ನಡಿ ಎನ್ನುವ ಕೂಗು ಇನ್ನೊಂದೆಡೆ. ಈ ಎಲ್ಲಾ ಸವಾಲುಗಳ ನಡುವೆ ಹೆಣ್ಣು ತನ್ನ ಲಯ ಕಂಡುಕೊಳ್ಳುತ್ತಲೇ ಇದ್ದಾಳೆ. ಮತ್ತು ಅದು ಆಕೆಯೇ ಕಂಡುಕೊಳ್ಳಬೇಕಾದ ಲಯ. ಪ್ರತಿಯೊಂದು ದಾಂಪತ್ಯವೂ ಭಿನ್ನ, ಹಾಗಾಗಿಯೇ ಅಲ್ಲಿ ಸಿದ್ಧ ಪರಿಹಾರಗಳು ಸಿಗುವುದಿಲ್ಲ.

ಇಷ್ಟೆಲ್ಲಾ ಮಾತನಾಡಿದ ಮೇಲೂ, ಒಡನಾಡಿದ ಮೇಲೂ ಸಂಪೂರ್ಣವಾಗಿ ಅರ್ಥವಾಯಿತು ಎನ್ನಲಾಗದ್ದು ಗಂಡು ಹೆಣ್ಣಿನ ನಡುವಣ ಸಂಬಂಧ. ಎಚ್ ಎಸ್ ವೆಂಕಟೇಶ ಮೂರ್ತಿಯವರ ಕವನದ ಒಂದು ಸಾಲು ಅದನ್ನು ಅತ್ಯಂತ ಕಡಿಮೆ ಪದಗಳಲ್ಲಿ, ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ‘ಇಷ್ಟುಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ, ಅರಿತೆವೇನು ನಾನು ನಮ್ಮ ಅಂತರಾಳವ?’ ಇದು ನಾನು ಆಗಾಗ ಗುನುಗಿಕೊಳ್ಳುವ ಗೀತೆ. ಅದೇ ಗುಂಗಿನಲ್ಲಿ ಈ ಪುಸ್ತಕಕ್ಕಿಟ್ಟ ಹೆಸರು, ‘ಇಷ್ಟುಕಾಲ ಒಟ್ಟಿಗಿದ್ದು...’

ಇದು ವಸ್ತುವಿನ ಬಗೆಗಾಯಿತು. ಇನ್ನು ವಿನ್ಯಾಸ ಅಥವಾ ನಾನು ಬಳಸಿಕೊಂಡ ತಂತ್ರದ ಬಗ್ಗೆ ಎರಡು ಮಾತು. ಇಲ್ಲಿನ ಪಾತ್ರಗಳು ಮತ್ತು ನಾನು ಹಲವಾರು ದಿನ-ರಾತ್ರಿ ಸಹಬಾಳ್ವೆಯನ್ನು ನಡೆಸಿದ್ದೇವೆ, ಕಾದಂಬರಿಯ ಒಳಗೂ ಮತ್ತು ಹೊರಗೂ. ಹಾಗಾಗಿಯೇ ನನ್ನ ಮತ್ತು ಕಾದಂಬರಿಯ ಲೋಕದ ನಡುವಿನ ಗೆರೆ ಕೆಲವು ಕಡೆ ತೆಳುವಾಗಿದೆ, ಕೆಲವು ಕಡೆ ಅಳಿಸಿಯೇಹೋಗಿದೆ. ಇದನ್ನು ನಾನು ಕಾದಂಬರಿಯಲ್ಲೂ ಹಾಗೆಯೇ ಉಳಿಸಿಕೊಂಡಿದ್ದೇನೆ. ಒಂದು ರೀತಿಯಲ್ಲಿ ಇದು ಈ ಪಾತ್ರಗಳ ಪಯಣವೂ ಹೌದು, ಬರೆಯುವವಳಾಗಿ ನನ್ನ ಪಯಣವೂ ಹೌದು.

-ಎನ್.ಸಂಧ್ಯಾ ರಾಣಿ
ಸಂಧ್ಯಾ ರಾಣಿ ಅವರ ಲೇಖಕ ಪರಿಚಯ

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...