ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..


"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳುವುದು, ದೂರದ ಪೂರ್ವ ತೀರದ ಬಂಗಾಳದ ನೆಲದಲ್ಲಿ ಘಟಿಸುವ ಮಹಾರಾಜರ ಅಕಾಲಿಕ ಸಾವಿನ ದುರ್ಘಟನೆಯೊಂದಿಗೆ. ಅಲ್ಲಿ ನಡೆಯುವ ಸನ್ನಿವೇಶಗಳನ್ನು, ಹತ್ತೆಂಟು ದಿನಗಳ ಒಳಗಾಗಿ ಘಟಿಸುವ ಅಷ್ಟೂ ಘಟನಾವಳಿಗಳನ್ನು ಇಲ್ಲಿ ಚಿತ್ರಿಸಿರುವ ರೀತಿ ಖಂಡಿತಕ್ಕೂ ಶಬ್ದಗಳಲ್ಲಿ ಹೇಳಲಾಗದ್ದು,"ಎನ್ನುತ್ತಾರೆ ಹರ್ಷ ಹೆಗಡೆ ಕೊಂಡದಕುಳಿ. ಅವರು ಗಜಾನನ ಶರ್ಮ ಅವರ ‘ರಾಜಮಾತೆ ಕೆಂಪನಂಜಮ್ಮಣ್ಣಿ’ ಕೃತಿ ಕುರಿತು ಬರೆದ ವಿಮರ್ಶೆ.

ನನ್ನ ಅತ್ಯಂತ ನೆಚ್ಚಿನ ಬರಹಗಾರರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಡಾ. ಗಜಾನನ ಶರ್ಮಾ ಅವರು. ಬಹುಶಃ ನನ್ನನ್ನು ಅವರು ಪ್ರಭಾವಿಸಿದಷ್ಟು, ಆವರಿಸಿದಷ್ಟು ಮತ್ಯಾರೂ ಕಾಡಿಲ್ಲ. ಅಷ್ಟರ ಮಟ್ಟಿಗೆ ನಾನು ಅವರ ಬರಹಗಳಿಗೆ, ಅಕ್ಷರ ಕೆತ್ತನೆಗಳಿಗೆ ಅಭಿಮಾನಿ. ಭಾವಗಳನ್ನು ಅವರು ಪದಗಳಲ್ಲಿ ಕಟ್ಟಿಕೊಡುವ ರೀತಿ ನಿಜಕ್ಕೂ ಅದ್ಭುತ. ಅದರಲ್ಲೂ ಭಾವನಾತ್ಮಕವೇ ಆದ ಸನ್ನಿವೇಶವಾದರಂತೂ ಮುಗಿದೇ ಹೋಯಿತು. ಜೀವವಿಲ್ಲದ ಅಕ್ಷರಗಳೂ ಭಾವಪರವಶವಾಗುವಷ್ಟು ಜೀವ ತುಂಬುವ ಶಕ್ತಿ ಅವರ ಪದ ಜೋಡಣೆಗಳಿಗಿದೆ. ಜೊತೆಗೆ ಕಥೆಯೊಂದನ್ನು ಅವರು ಕಟ್ಟಿಕೊಡುವ ರೀತಿ ಯಾವತ್ತಿಗೂ ಅನನ್ಯ. ಎಲ್ಲೂ ಬಿಟ್ಟು ಹೋಗದ, ದಾರಿ ತಪ್ಪದ, ಕಥಾವಸ್ತುವಿನ ಮೂಲ ಆಶಯಕ್ಕೆ ಹೊರತಾಗದ, ಆಡಂಬರವಿಲ್ಲದ ಕಥೆ ಹೆಣೆಯುವ ಶೈಲಿ ಸದಾ ಅನುಸರಣೀಯ. ಇಂತಿರ್ಪ ಬರಹಗಾರರದು ಹೊಸ ಪುಸ್ತಕ ಬಂದಾಗ ಓದದೇ ಇದ್ದರೇ ಅದು ಎಂಥದನ್ನೋ ಕಳೆದುಕೊಂಡಂತೆ. ಓದಿದ ಬಳಿಕ ಅದರ ಬಗ್ಗೆ ಒಂದೆರಡಕ್ಷರ ಬರೆಯದೆ ಹೋದರೆ ಅದು ಉಂಡದ್ದು ಜೀರ್ಣವಾಗದಂತೆ.

ರಾಜಮಾತೆ ಕೆಂಪನಂಜಮ್ಮಣ್ಣಿ - ಮಾದರಿ ಮೈಸೂರಿನ ತಾಯಿಬೇರು - ಈ ಪುಸ್ತಕ ಕೊಂಡು ವಾರವೇ ಆದರೂ ರೇಷ್ಮೆ ಬಟ್ಟೆಯ ಓದು ಚಾಲ್ತಿಯಲ್ಲಿದುದರಿಂದ ಓದಲಾಗಿರಲಿಲ್ಲ. ಆದರೆ ಒಮ್ಮೆ ಹಿಡಿದ ಮೇಲೆ ಬಿಡಲಾಗಲಿಲ್ಲ. ಅಷ್ಟರ ಮಟ್ಟಿಗೆ ಹಿಡಿದಿಟ್ಟುಕೊಳ್ಳುವ ಪುಸ್ತಕವಿದು ಎಂದು ನಿರ್ಭಿಡೆಯಿಂದ ಹೇಳಬಲ್ಲೆ. ಈ ನಡುವೆ ಇದೇ ಪುಸ್ತಕದ ಬಗೆಗೆ ವಿದ್ವಾನ್ ಜಗದೀಶ್ ಶರ್ಮ ಸಂಪ ಅವರು ಹಂಚಿಕೊಂಡಿದ್ದ ಅನಿಸಿಕೆಯನ್ನೂ ಓದಿದ್ದೆ. ಆಗಲೇ ಕುತೂಹಲವೆಂಬುದು ಬೆಟ್ಟದೆತ್ತರಕ್ಕೆ ಬೆಳೆದಿತ್ತು. ಓದಿ ಮುಗಿಸುವ ತವಕ ಹೆಚ್ಚಾಗಿತ್ತು. ಈಗ ಓದಿ ಮುಗಿಸಿ ಹದಿನೈದು ದಿನಗಳ ಮೇಲಾಗಿದೆ, ಅಷ್ಟಾದ ಮೇಲಿನ ನನ್ನ ಓದಿನ ಅನುಭವ ಇಲ್ಲಿದೆ.

ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳುವುದು, ದೂರದ ಪೂರ್ವ ತೀರದ ಬಂಗಾಳದ ನೆಲದಲ್ಲಿ ಘಟಿಸುವ ಮಹಾರಾಜರ ಅಕಾಲಿಕ ಸಾವಿನ ದುರ್ಘಟನೆಯೊಂದಿಗೆ. ಅಲ್ಲಿ ನಡೆಯುವ ಸನ್ನಿವೇಶಗಳನ್ನು, ಹತ್ತೆಂಟು ದಿನಗಳ ಒಳಗಾಗಿ ಘಟಿಸುವ ಅಷ್ಟೂ ಘಟನಾವಳಿಗಳನ್ನು ಇಲ್ಲಿ ಚಿತ್ರಿಸಿರುವ ರೀತಿ ಖಂಡಿತಕ್ಕೂ ಶಬ್ದಗಳಲ್ಲಿ ಹೇಳಲಾಗದ್ದು. ಸಾಮಾಜಿಕ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದ ಕುಟುಂಬವೂ ತನ್ನೊಳಗಿನ ಸಂಬಂಧಗಳನ್ನು ಹೇಗೆ ಸಾಮಾನ್ಯರಂತೆಯೇ ನಿಭಾಯಿಸುತ್ತದೆ ಎಂಬುದನ್ನು ಸರಳಾದೇವಿಯ ಮೂಲಕ ಮನದಟ್ಟು ಮಾಡಿರುವ ಲೇಖಕರು, ಮಹಾರಾಜರ ಮೃತ್ಯುವಿನ ಸನಿಹದಲ್ಲಿ ಅವರಿಂದಾಡಿಸುವ ಮಾತುಗಳಿಂದ, ಮೈಸೂರು ಹೇಗೆ ಹೊಸತನಕ್ಕೆ ಚಾಚಿದ ತೋಳುಗಳಿಂದ ಸ್ವಾಗತ ನೀಡಬೇಕು ಎಂದು ಸೂಚ್ಯವಾಗಿ ವಿವರಿಸಿದ್ದಾರೆ. ಜೊತೆಗೆ ಮಹಾರಾಜರ ಸಾವಿನ ನಂತರದ ಕೆಲವು ಸಂದರ್ಭಗಳನ್ನು ನಿರೂಪಿಸಿರುವ ಪರಿ ನಿಜಕ್ಕೊ ಕಣ್ಣೆದುರಿಗೆ ಬಂದು ಸ್ಥಾಪಿತವಾಗುವಂತಿದೆ. ನೀವು ಬೇಡ ಬೇಡವೆಂದರೂ ಆ ಸನ್ನಿವೇಶದ ಕಲ್ಪನೆಯ ಬಾಹುಗಳ ಬಂಧಕ್ಕೆ ಒಳಗಾಗುತ್ತೀರಿ, ಆ ಕ್ಷಣವನ್ನು ಅಲ್ಲಿರುವ ಜನರೊಟ್ಟಿಗೆ ಜತೆಯಲ್ಲಿ ನಿಂತು ಜೀವಿಸುತ್ತೀರಿ.

ಇನ್ನು ಪತಿಯ ಮರಣಾ ಬಳಿಕ ವೈರಾಗ್ಯ ಭಾವಕ್ಕೆ ತೆರಳುವ ಮಹಾರಾಣಿಯವರನ್ನು ರೀಜೆಂಟ ಆಗಲು ಒಪ್ಪಿಸುವ ಭಾಗಗಳು, ರೀಜೆಂಟ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ತೆಗೆದುಕೊಂಡ ನಿರ್ಣಯಗಳು, ವ್ಯಾವಹಾರಿಕವಾಗಿ ನಡೆದುಕೊಂಡ ರೀತಿ - ನೀತಿಗಳು, ನಾಡಿಗೆ ಸಮರ್ಥ ಆಡಳಿತಗಾರನ್ನಷ್ಟೇ ಅಲ್ಲದೆ ಸುಭದ್ರ ನಾಡನ್ನೂ ಕಟ್ಟಿಕೊಂಡಬೇಕೆಂಬ ದೂರದರ್ಶಿತ್ವ, ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಎಲ್ಲರ ಬಳಿಯೂ ಸಲಹೆ ಕೇಳುವ, ಅದರಲ್ಲಿ ಸರಿಯಾದದ್ದನ್ನು ಅನುಷ್ಠಾನಕ್ಕೆ ತರುವ ಸಂದಿಗ್ದತೆ ಮತ್ತು ಪ್ರಬುದ್ಧತೆ, ಸಮಷ್ಟಿಯನ್ನು ಗಮದಲ್ಲಿರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಜಾಣ್ಮೆ , ಅದರ ಒಟ್ಟೊಟ್ಟಿಗೆ ವಯಕ್ತಿಕ ಜೀವನದಲ್ಲಿಯೂ ಎದುರಾಗುವ ಸಾಂದರ್ಭಿಕಗಳು, ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ನೈಪುಣ್ಯತೆ - ಹೀಗೆ ಪ್ರತೀ ಸಂಗತಿಗಳನ್ನೂ ಅಷ್ಟು ಸರಳವಾಗಿ, ಸ್ಪಷ್ಟವಾಗಿ ಕಟೆದು ನಿಲ್ಲಿಸಿದ್ದಾರೆ. ಬಹುಶ: ಬರೆಯುವ ಕೈಗಳಿಗೆ ತಾನೇನು ಹೇಳಬೇಕೆಂಬ ನಿಖರತೆ ಇಲ್ಲದಿದ್ದರೆ ಇಷ್ಟು ಸಾದ್ಯಂತವಾಗಿ ಕಥೆಯೊಳಗೆ ಹೂರಣ ತುಂಬುವುದು ಕಷ್ಟವೆನ್ನುವುದು ನನ್ನ ಭಾವನೆ.

ಪರ್ಸನಲಿ ನನಗೆ, ಇದರಾಚೆಗೆ ಒಂದಷ್ಟು ವಿಚಾರಗಳು ಭಾರೀ ಖುಷಿ ಕೊಟ್ಟವು. ಕೇವಲ ರಾಜಮಾತೆ ವಾಣೀವಿಲಾಸ ಸನ್ನಿಧಾನದವರನ್ನು ಮಾತ್ರವೇ ವಿಜೃಂಭಿಸದೇ, ಅಲ್ಲಿನ ಅರಮನೆಯ ಭಾಗವಾಗಿರುವ ಸಣ್ಣ ಸಣ್ಣ ಪಾತ್ರಗಳಿಗೂ ಗಟ್ಟಿ ಚಿತ್ರಣ ಕಲ್ಪಿಸಿರುವುದು. ಅರಮನೆಗೆ ಬೆಂಕಿ ಬಿದ್ದಾಗ ಪ್ರಜೆಗಳು, ಪ್ರಜಾ ಪರಿವಾರದವರು ತೋರಿದ ನಿಷ್ಠೆ, ಜೀವ(ನ)ವನ್ನೇ ಅರಮನೆಗಾಗಿ ಅರ್ಪಿಸಿದ ಅಬ್ಬೆ, ಬ್ರಿಟೀಷರ ಆಡಳಿತ, ಅವರ ಎಲ್ಲವೂ ತಮ್ಮ ಮೂಗಿನಡಿಯಲ್ಲಿಯೇ ನಡೆಯಬೇಕೆಂಬ ಷರತ್ತುಗಳು, ಅದರ ನಡುವೆಯೂ ಒಂದಷ್ಟು ಮಂದಿ ಪರದೇಶಿಗಳು ಇಲ್ಲಿನ ಜನರ ಒಳಿತಿಗಾಗಿ ಯಾವ ಅನ್ಯಾರ್ಥಗಳಿಲ್ಲದೆ ಕೆಲಸ ಮಾಡಿದ ಬಗೆ, ಪ್ಲೇಗ್ ರೋಗವನ್ನು ನಿಭಾಯಿಸಲು ಪಟ್ಟ ಹರಸಾಹಸ, ನರಬಲಿಯಂತಹ ಅನಿಷ್ಟವನ್ನು ಇನ್ನೂ ನಂಬುವ ಮುಗ್ಧ ಜನರಿಗೆ ತಿಳಿಹೇಳಲಾಗದ ಸಂಕಟ, ಅನುಭವದ ಗಣಿಯಾದ ಹಿರಿಯ ಅಂಬಿಲ್ಲರು, ಅವರು ಬೈಸಿಕೊಳ್ಳುವಾಗಲೂ ಸುಮ್ಮನೆ ಮುದುರಿ ಕುಳಿತು ಪಾಪ ಎನಿಸುವ ಚಿತ್ರಣ, ದಿವಾನರು, ಪಲ್ಪುರವರಂತಹ ನಿಸ್ವಾರ್ಥ ಸೇವೆ, ಕೊನೆಯಲ್ಲಿ ಬರುವ ಅವಧೂತರೊಬ್ಬರ ಮೂಲಕ ಹೇಳಿಸುವ ಜೀವನ ಪಾಠಗಳು, ಅಧಿಕಾರವನ್ನು ಕೃಷ್ಣರಾಜರಿಗೊಪ್ಪಿಸುವಾಗ ತೋರಿದ ನಿಸ್ಪ್ರಹತೆ, ಕೋಲಾರದ ಚಿನ್ನದ ಗಣಿಯ ಕುರಿತಾಗಿ ನಡೆಯುವ ಒಂದಷ್ಟು ಸಂಭಾಷಣೆಗಳು - ಉಫ್... ಪಟ್ಟಿ ಮಾಡುತ್ತಾ ಸಾಗಿದರೆ ಹನುಮನ ಬಾಲದಂತಾದೀತು. ಅದರಲ್ಲೂ ಸ್ವಾಮೀ ವಿವೇಕಾನಂದರ ಕುರಿತಾಗಿ, ದಿವಾನರ ಬಾಯಿಂದ ಹೇಳಿಸುವಾಗಲಂತೂ ಮೈಯಲ್ಲಿ ರೋಮಾಂಚನ ಉಂಟಾಗದೇ ಇರಲಾರದು. ಮತ್ತೂ ಒಂದು ವಿಶೇಷ ನಾನು ಗಮನಿಸಿದ್ದೆಂದರೆ ಹೇಗೆ ವ್ಯಕ್ತಿಯೊಬ್ಬನ ವಯಕ್ತಿಕ ಅಭಿಪ್ರಾಯಗಳು, ನಂಬುಗೆಗಳು, ಸಿದ್ಧಾಂತಗಳು ಇಡಿಯ ಸಮಷ್ಟಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು. ಇದನ್ನು ಲೇಖಕರು ಹೇಳಬೇಕೆಂದು ಹೇಳಿದ್ದಾರೋ, ಅರಿವಿಲ್ಲದೆ ಅದಾಗದೆ ಬಂದು ಪದಗಳ ನಡುವೆ ಅವಿತು ಕುಳಿತಿದೆಯೋ ಅಥವಾ ನನಗಷ್ಟೇ ಹಾಗನಿಸಿದ್ದೊ ಗೊತ್ತಿಲ್ಲ.

ಹಾಗಂತ ಎಲ್ಲವೂ ಇಲ್ಲಿ ಒಪ್ಪ ಓರಣ ಎಂದು ಹೇಳುವುದಿಲ್ಲ. ಕೆಲವು ಕಡೆಗಳಲ್ಲಿ ಮತ್ತೊಂದಿಷ್ಟು ವಿವರಣೆಗಳು ಇದ್ದರೆ ಚೆನ್ನಾಗಿತ್ತು ಎಂದೆನಿಸುತ್ತದೆ. ಸುಮ್ಮನೆ ಓಡಿಸಿಕೊಂಡು ಹೋದರಾ ಛೆ! ಎನಿಸುತ್ತದೆ. ಕೆಲವು ಕಡೆ ಅನಾವಶ್ಯವಾಗಿ ಬ್ರಿಟೀಷರನ್ನು ವೈಭವೀಕರಿಸಿದ್ದಾರೆ ಎನಿಸಲೂ ಬಹುದು. (ಇದು ನನ್ನ ಪೂರ್ವಾಗ್ರಹವೂ ಇರಬಹುದು) ನನಗೆ ಬೇಜಾರೆನಿಸಿದ್ದು ಇವಿಷ್ಟೇ. ಹಾಂ, ಇನ್ನೊಂದೆಂದರೆ ಕಾಡುವುದಲ್ಲಿ ಇದು ಪುನರ್ವಸುವನ್ನು ಹಿಂದೆ ಹಾಕಿಲ್ಲ ಎಂಬುದೂ ಕೂಡ ಒಂದು.

ಇನ್ನು ಪುಸ್ತಕದುದ್ದಕ್ಕೂ ಅದೆಷ್ಟು ಬರೆದಿಟ್ಟುಕೊಳ್ಳುವಂತಹ ಸಾಲುಗಳು ಸಿಗುತ್ತವೆ ಎಂದರೆ ಅಬ್ಬಾ, ವೈರಾಗ್ಯದ ಬಗೆಗೆ, ರಾಜಕೀಯದ ಬಗ್ಗೆ, ಸಮಷ್ಟಿ ಪ್ರಜ್ಞೆಯ ಬಗ್ಗೆ, ಗೆಲುವಿನ ಬಗ್ಗೆ, ಸಂಬಂಧಗಳ ಬಗ್ಗೆ, ಸಾವಿನ ಬಗ್ಗೆ, ಬದುಕಿನ ಬಗ್ಗೆ, ತಾಯ್ತನದ ಬಗ್ಗೆ - ಹುಹ್ಹ್ ! ಅದರಲ್ಲಿ ರಾಜಮಾತೆಯವರ ಬಾಯಿಂದ ಅವರ ಪದವಿಯ ಕೊನೆಯ ಘಳಿಗೆಯಲ್ಲಿ ಹೇಳಿಸುವ " ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ, ನಮ್ಮ ಪ್ರತೀ ಮಾತು, ವರ್ತನೆಗಳಿಗೆ ಸಮರ್ಥನೆ ಬೇಕಿಲ್ಲ. ಸಹಜವಾಗಿ ಎದೆಯೊಳಗೆ ಬದ್ಧತೆ ಮತ್ತು ಪ್ರಾಮಾಣಿಕತೆಗಳಿದ್ದರೆ ಸಾಕು. ಅಂತರಂಗ ಬಹಿರಂಗ ಎರಡಾಗದಿದ್ದರಾಯಿತು, ನಮ್ಮನ್ನು ನಾವೆಷ್ಟೇ ಒಳ್ಳೆಯವರೆಂದು ಭಾವಿಸಿದರೂ, ಅಂತಿಮವಾಗಿ ನಾವೂ ಕೇವಲ ಮನುಷ್ಯರು." ಎಂಬ ಸಾಲಂತೂ ಆಪ್ಯಾಯ ಎನಿಸುತ್ತದೆ. ಇದರೊಟ್ಟಿಗೆ ಆರ್ದ್ರತೆ, ತೇವಭಾವ ಹೊತ್ತಿಗೆಯುದ್ದಕ್ಕೂ ಜೊತೆ ಹೆಜ್ಜೆ ಹಾಕುವ ಯಾವತ್ತೂ ಸಾಥಿಗಳು.

ಪುಸ್ತಕವೋ, ಬರಹವೋ, ಮತ್ತೊಂದೋ ಅದು ಗೆಲ್ಲುವುದು ಅದನ್ನು ಓದಿ ಮುಗಿಸಿ ಬಹಳ ದಿನಗಳ ಬಳಿಕವೂ ನಮ್ಮನ್ನು ಕಾಡಿದಾಗ ಮಾತ್ರ. ತನ್ನಿರವನ್ನು ಸರ್ವಕಾಲಕ್ಕೂ ಸಾದರ ಪಡಿಸಿಕೊಳ್ಳುವ ಸತ್ವ ಅದರೊಳಗಿದೆ ಎಂಬುದು ಅದರರ್ಥ. ಅಲ್ಲಿಗೆ ಇಳಿಸಿದ ಪ್ರತೀ ಶಬ್ದವೂ ಅ-ಕ್ಷರವೇ !! ಅಂತಹ ಅಪರೂಪದ ಸಾತ್ವಿಕ ಶಕ್ತಿಯ ಹೊತ್ತಿಗೆಯಿದು.

ಅಂಕಿತ ಪುಸ್ತಕ ಪ್ರಕಟಿಸಿರುವ ನಮ್ಮ ನೆಲದ ಘನತೆಯನ್ನು ಸಾರುವ ಈ ಪುಸ್ತಕ ಪ್ರತೀ ಕನ್ನಡಿಗನ ಮನೆಯಲ್ಲಿರಲಿ, ಇತಿಹಾಸದ ಪ್ರಮುಖ ಘಟ್ಟವೊಂದು ಪ್ರತೀ ಕನ್ನಡಿಗನ ಮನದಲ್ಲಿರಲಿ...ಪ್ರಾತಃಸ್ಮರಣೀಯ ರಾಜಮಾತೆ ಚಿರಸ್ಥಾಯಿಯಾಗಲಿ... ಓದಿರದಿದ್ದರೆ, ನಿಧಾನಕ್ಕೆ ಅನುಭವಿಸಿ ಓದಿ ಎಂಬುದಷ್ಟೇ ಪ್ರಾರ್ಥನೆ.

- ಹರ್ಷ ಹೆಗಡೆ ಕೊಂಡದಕುಳಿ

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ಶಿವಾಜಿ ಟೆಂಟ್ʼನಲ್ಲಿ ನನ್ನನ್ನು ಬಹಳವಾಗಿ ಸೆಳೆದದ್ದು ಪದ ಬಳಕೆ

20-11-2024 ಬೆಂಗಳೂರು

“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...