ಓದುತ್ತಿರುವ ಸಾಲನ್ನೇ ಮತ್ತೆ ಮೊದಲಿನಿಂದ ಓದಿಸುತ್ತವೆ...


"ಕಲೆ ಮತ್ತು ಕಾಲದ ಸೌಂದರ್ಯವಿರುವುದೇ ಅಲ್ಲಿ. ಅದು ಎಂದಿಗೂ ನವನವೀನ ಮತ್ತು ಅತ್ಯಂತ ಪುರಾತನ. ಈ‌ ಸಂಕಲನದಲ್ಲಿರುವ ಹತ್ತು ಕಥೆಗಳು ತಮ್ಮ ವಸ್ತುವಿನಿಂದ ಹಳೆಯವೇ ಆದರೂ ಕಾಲದ‌ ನಿಕಷಕ್ಕೊಳಪಟ್ಟು ಸಂಪೂರ್ಣ ಹೊಸ ಕಾಲದ ಕಥೆಗಳಾಗಿವೆ. ಅಭಿವ್ಯಕ್ತಿಯಲ್ಲಿ ಕೂಡ ತನ್ನ ತೀವ್ರ ಪ್ರಾಮಾಣಿಕತೆಯಿಂದಾಗಿ ಜೀವವನ್ನು ಆರ್ದ್ರಗೊಳಿಸುತ್ತವೆ," ಎನ್ನುತ್ತಾರೆ ನಂದಿನಿ ಹೆದ್ದುರ್ಗ. ಅವರು ವಿಕ್ರಮ ಹತ್ವಾರ ಅವರ ‘ಹಮಾರಾ ಬಜಾಜ್’ ಕೃತಿಗೆ ಬರೆದ ವಿಮರ್ಶೆ.

‘ನೆನಪು ಎನ್ನುವುದು ಮನುಷ್ಯನಲ್ಲಿರುವ ಅತ್ಯಂತ ಪ್ರಬಲ ಸಂಗತಿ. ಪ್ರಾಣಿಗಳಲ್ಲೂ ಇದೆಯಾದರೂ ಮನುಷ್ಯನಿಗೆ ಈ ನೆನಪುಗಳಿಂದಾಗಿ ತನ್ನ ಅಂತಃಕರಣವನ್ನು ರೂಪಿಸಿಕೊಳ್ಳುವ ಸಾಧ್ಯತೆ ಇದೆ. ನೆನಪಿನಾಳಕ್ಕೆ ಇಳಿಯುತ್ತಾ ಇಳಿಯುತ್ತಾ ಮನುಷ್ಯನಿಗೆ ತನ್ನ ಮೂಲವನ್ನು ನೆನಪಿಸಿಕೊಳ್ಳುವ ಅವಕಾಶವಿದೆ. ಮರೆಯುವುದರಿಂದಲೇ ನೆನಪಾಗುವುದು ಮತ್ತು ನೆನಪಿನಿಂದಲೇ ಗೊತ್ತಿರುವುದು.ಇದು ಮನುಷ್ಯನಲ್ಲಿರುವ ನೆನಪಿನ ಅಸಾಧ್ಯ ಶಕ್ತಿ’

ಇದು ವಿಕ್ರಮ್ ಹತ್ವಾರ್ ಅವರ ಹಮಾರಾ ಬಜಾಜ್ ಸಂಕಲನದ ಕಥೆಯೊಂದರ ಮಾತುಗಳು. 2019ರಲ್ಲಿ ಪ್ರಕಟವಾದ ಈ ಸಂಕಲನವನ್ನು ನಾನು ಓದ್ತಿರುವುದು ಈಗ!

ಕಲೆ ಮತ್ತು ಕಾಲದ ಸೌಂದರ್ಯವಿರುವುದೇ ಅಲ್ಲಿ. ಅದು ಎಂದಿಗೂ ನವನವೀನ ಮತ್ತು ಅತ್ಯಂತ ಪುರಾತನ. ಈ‌ ಸಂಕಲನದಲ್ಲಿರುವ ಹತ್ತು ಕಥೆಗಳು ತಮ್ಮ ವಸ್ತುವಿನಿಂದ ಹಳೆಯವೇ ಆದರೂ ಕಾಲದ‌ ನಿಕಷಕ್ಕೊಳಪಟ್ಟು ಸಂಪೂರ್ಣ ಹೊಸ ಕಾಲದ ಕಥೆಗಳಾಗಿವೆ. ಅಭಿವ್ಯಕ್ತಿಯಲ್ಲಿ ಕೂಡ ತನ್ನ ತೀವ್ರ ಪ್ರಾಮಾಣಿಕತೆಯಿಂದಾಗಿ ಜೀವವನ್ನು ಆರ್ದ್ರಗೊಳಿಸುತ್ತವೆ. ಓದುತ್ತಿರುವ ಸಾಲನ್ನೇ ಮತ್ತೆ ಮೊದಲಿನಿಂದ ಓದಿಸುತ್ತವೆ.

ಕಥಾನಾಯಕನ ನಾಸ್ಟಾಲ್ಜಿಯದಂತಿರುವ ಇಲ್ಲಿರುವ ಕಥೆಗಳು ಕಾಮ ಪ್ರೇಮ ಮಮಕಾರಗಳನ್ನು ಶ್ರದ್ಧೆಯಿಂದ ಹೇಳುತ್ತಿರುವಂತೆ, ಮತ್ತೂ ಬೇರೆ ಏನೋ ಹೇಳಲಿಕ್ಕಿದೆ ನನಗೆ ಅಂತನಿಸುವಂತೆ ಅಭಿವ್ಯಕ್ತಿಯಾಗಿವೆ. ಇಲ್ಲಿನ ಎರಡು ಕಥೆಗಳು ಒಂದಿನ್ನೊಂದರ ಮುಂದುವರಿಕೆಯಂತೆ ಕಂಡರೂ ತಮ್ಮ ಅಸ್ಮಿತೆಯಿಂದಾಗಿ ಯಶಸ್ವಿಯಾಗಿವೆ. ಕಥೆಗಾರನ ನೋಟದಿಂದ ಬಯಾಗ್ರಫಿಯಂತೆ, ಅಪ್ಪನ ನೋಟದಿಂದ ನೆನಪುಗಳಂತೆ ಕಾಣುವ ಇಲ್ಲಿನ ಕಥೆಗಳಲ್ಲಿ ಸಂಸಾರವೇ ಪ್ರಧಾನ.

ಕಟ್ಟುವಿಕೆಯ ಸಂಕಟದಿಂದ ,ಬುದ್ದಿಪೂರ್ವಕ ಕೌಶಲದ ಕಷ್ಟದಿಂದ ತಪ್ಪಿರುವ ಈ ಕಥೆಗಳಿಗೆ ಸಹಜತೆಯೇ ಅಭರಣ. ಹಸಿವು ತೃಷೆಯಷ್ಟೆ ಸಹಜವಾಗಿರುವ ಲೈಂಗಿಕತೆ ಇಲ್ಲಿನ ಮೂರು ಕಥೆಗಳಲ್ಲಿ ಧಾರಾಳವಾಗಿದ್ದರೂ ಎಲ್ಲೂ ಸಭ್ಯತೆಯ ಗಡಿದಾಟಿಲ್ಲ. ಸೌಜನ್ಯದ ಸೆರಗಿನೊಳಗೇ ಶೃಂಗಾರವಿಡುವ ಶೈಲಿ ಸೆಳೆಯುತ್ತದೆ.

ಇಲ್ಲಿನ ಬಹುತೇಕ ಕಥೆಗಳು ಮತ್ತೆಮತ್ತೆ ಮನುಷ್ಯನ ಸುಷುಮ್ನಾವಸ್ಥೆಯ ಚಿತ್ರಗಳನ್ನು ಕಟ್ಟಿಕೊಡುತ್ತವೆ ಅಸಂಗತತೆಯ ಭಿನ್ನ ದೃಶ್ಯಗಳು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ಬಂದಿವೆ.

‘ಈ ಖಾಲಿತನ ,ಈ ನಿರ್ವಾತ!! ಇದು ನನ್ನನ್ನು ಎಳೆದೊಯ್ದ ಮೇಲೂ ಈ ಜಗತ್ತು ಹೀಗೇ ಮುಂದುವರೆಯಲಿದೆ. ನಾನಿರುವುದಕ್ಕು ಇಲ್ಲದಿರುವುದಕ್ಕೂ ಇಲ್ಲಿ ವ್ಯತ್ಯಾಸವೇ ಇಲ್ಲ. ಇರುವಂತೆಯೂ ಇಲ್ಲವಾಗುವ ಘಳಿಗೆಯ ತುಡಿತವನ್ನು ,ಪ್ರಜ್ಞೆಯಿಂದಲೇ ಅಪ್ರಜ್ಞೆಯನ್ನು ಆಹ್ವಾನಿಸುವುದನ್ನು ಏನೆನ್ನಬೇಕು?’

ಇಂತಹ ಚಿತ್ರಣಗಳು ಇಡೀ ಸಂಕಲನವನ್ನು ಆವರಿಸಿವೆ.

ತಾನು ಪ್ರೀತಿಸಿದ ಹೆಣ್ಣಿಗೆ ಯಾವ ಉಡುಗೊರೆ ನೀಡಿದರೆ ಸರಿಯಾದೀತು ಎನ್ನುವ ತಾಕಲಾಟದಲ್ಲಿಯೇ ಮುಗಿಯುವ ‘ಯಾವ ಉಡುಗೊರೆ ನೀಡಲಿ’ ಕಥೆ ಈ ಸಂಕಲನದ ಬೆಸ್ಟ್ ಕಥೆ ಅನಿಸಿತ್ತು. ಆದರೆ ‘ಹಮಾರಾ ಬಜಾಜ್’ ನೀಳ್ಗತೆ ತನ್ನ ಪ್ರಾಮಾಣಿಕತೆಯಿಂದಾಗಿ ಸರಳತೆಯಿಂದಾಗಿ ಸಂಕೀರ್ಣತೆ ಯಿಂದಾಗಿ ಬೆಸ್ಟ್.

ಈ ಸುರಿಯುವ ಮಳೆಯಲ್ಲಿ ಅದಕ್ಕಿಂತಲೂ‌ ಧೋಗುಟ್ಟು ಸುರಿದ ಕಂಬನಿಯೊಂದಿಗೆ ಈ ಕಥೆ ಓದಿಸಿಕೊಂಡಿದ್ದು‌ ವಿಶೇಷ. ಕಲೆಯ ಮೂಲ ಉದ್ದೇಶವೇ ಮನುಷ್ಯನಲ್ಲಿರುವ ನೋವಿನ ಭಾವವನ್ನು ಶೀಘ್ರ ಚಾಲೂಗೊಳಿಸುವುದು. ಕೊನೆಯಲ್ಲಿ ಎಲ್ಲರೂ ಸುಖವಾಗಿದ್ದರು ಎನ್ನುವ ಕಥೆ ಓದುಗನಿಗೆ ಎಂದೂ ಸಮಾಧಾನ ಕೊಡದು.

ಕಲೆಯ ನೋವಿನಿಂದಾಗಿ ಓದಿದ ಜೀವ ತಲ್ಲಣಗೊಂಡು ಅಂತಃಕರಣ ಮಿಡಿದು ‘ಎಲ್ಲರಿಗೂ ಒಳಿತಾಗಲಿ ಎಲ್ಲವೂ ಕ್ಷೇಮವಾಗಲಿ’ ಎನ್ನುವ ಭಾವ ಜಾಗ್ರತವಾಗಿಸುವುದು ಕಲೆಯ ಉದ್ದೇಶ. ಅದು ಈ‌ ಸಂಕಲನದಲ್ಲಿ ಸಫಲವಾಗಿದೆ.ಕಥಾಸಕ್ತರು ಓದಲೇಬೇಕಾದ ಕಥೆಗಳು ಇಲ್ಲಿವೆ.

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ

06-10-2024 ಬೆಂಗಳೂರು

"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದ...

ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌

06-10-2024 ಬೆಂಗಳೂರು

"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ...