ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌


"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ. ಪಾತ್ರಗಳನ್ನು ಆಹ್ವಾನಿಸಿಕೊಂಡು ಪರಕಾಯ ಪ್ರವೇಶ ಮಾಡುವ ಇವರ ನಿರೂಪಣೆ ನಿಜಕ್ಕೂ ಆಕರ್ಷಕವಾಗಿದೆ. ನಿರೂಪಣೆ ಸರಳ ಮತ್ತು ಅಷ್ಟೆ ‌ಕುತೂಹಲಭರಿತ; ಸಂಭಾಷಣೆಗಳು ತುಂಬ ಸಹಜವಾಗಿ ಕಥೆಯ ಮನೋಭಾವಗಳಿಗೆ ಪೂರಕವಾಗಿವೆ‌‌‌," ಎನ್ನುತ್ತಾರೆ ಉದಯಕುಮಾರ ಹಬ್ಬು. ಅವರು ಜಯಾನಂದ ಕಾಸರಗೋಡು ಅವರ ‘ಕಾರಣಿಕ’ ಕೃತಿ ಕುರಿತು ಬರೆದಿರುವ ವಿಮರ್ಶೆ.

ನನ್ನ ಹಿರಿಯ ಮಿತ್ರ ಮಾನ್ಯ ಜಯಾನಂದ ಕಾಸರಗೋಡು ಅವರ ಈ ಅನನ್ಯ ಕಥಾ ಸಂಕಲನ "ಕಾರಣಿಕ". ಜೀವನದಲ್ಲಿ ನಡೆದಿರಬಹುದಾದ ವಾಸ್ತವದ ನೈಜ ಘಟನೆಗಳಿಗೆ ಸುಂದರ ಕಥಾ ಹಂದರವನ್ನು ಕಟ್ಟಿದ ಇವರ ಪ್ರತ್ಯುತ್ಯುತ್ಪನ್ನ ಮತಿ, ಬದುಕಿನ ಸಂಕಥನಗಳ ಮನುಷ್ಯ ಲೋಕದ ಎಲ್ಲ ಸಣ್ಣ ಸಣ್ಣ ಮತ್ತು ಅಷ್ಟೆ ಮಹತ್ವದ ಘಟನೆಗಳ ಪಾತ್ರಗಳ ಸೂಕ್ಷ್ಮ ಅಂತರ್ರದೃಷ್ಟಿಯಿಂದ ನೋಡುವ ಸೂಕ್ಷ್ಮಜ್ಞತೆ ಇವರ ಕಥೆಗಳ ಧನಾತ್ಮಕ ಗುಣಗಳಾಗಿವೆ.

ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ. ಪಾತ್ರಗಳನ್ನು ಆಹ್ವಾನಿಸಿಕೊಂಡು ಪರಕಾಯ ಪ್ರವೇಶ ಮಾಡುವ ಇವರ ನಿರೂಪಣೆ ನಿಜಕ್ಕೂ ಆಕರ್ಷಕವಾಗಿದೆ. ನಿರೂಪಣೆ ಸರಳ ಮತ್ತು ಅಷ್ಟೆ ‌ಕುತೂಹಲಭರಿತ; ಸಂಭಾಷಣೆಗಳು ತುಂಬ ಸಹಜವಾಗಿ ಕಥೆಯ ಮನೋಭಾವಗಳಿಗೆ ಪೂರಕವಾಗಿವೆ‌‌‌. ಇದು ಇವರ ಮೊದಲ ಕಥಾ ಸಂಕಲನ. ಆದರೂ ಪ್ರಬುದ್ಧವಾದ ಜೀವನಾನುಭವಗಳಿಂದ ಕಿಡಿಕಿರಿದ ಅತ್ಯುತ್ತಮ ಕಥೆಗಳ ಸಂಕಲನ. ಒಟ್ಟೂ ಹತ್ತು ಕಥೆಗಳಿವೆ‌‌.

ಮೊದಲ ಕಥೆ "ಹೀಗೊಂದೊಂದು ದಿನವೂ. ಹೆಣ್ಣೊಬ್ಬಳು ತನ್ನನ್ನು ನೋಡಲು ಬರುವ ಹುಡುಗನ ನಿರೀಕ್ಷೆಯಲ್ಲಿದ್ದು, ಆ ಸಂದರ್ಭದಲ್ಲಿ ಆ ಹುಡುಗಿಯ ಮನದಲ್ಲಿ ಹುಟ್ಟಿದ ಮನೋಗತವನ್ನು, ಮನಸ್ಸಿನಲ್ಲಿ ಉಂಟಾಗಬಹುದಾದ ಅನಿಸಿಕೆಗಳನ್ನು ಭಾವನೆಗಳನ್ನು ಕಥೆಗಾರರು ಎಷ್ಟೊಂದು ಸೂಕ್ಷ್ಮವಾಗಿ ಕಂಡಿದ್ದಾರೆ ಎಂದರೆ ಹುಡುಗಿ ಹುಡುಗನನ್ನು ನೋಡುವ ಧೈರ್ಯದ ತೀರ್ಮಾನಕ್ಕೆ ಬರುವ ಅವಳ ಸ್ವಾಯತ್ತತೆ ಎಷ್ಟು ಸಹಜವೆನಿಸುತ್ತದೆ‌ ಹುಡುಗಿಯ ಪಾತ್ರವನ್ನು ಕಥೆಗಾರ ಆಹ್ವಾನಿಸಿಕೊಂಡು ಪರಕಾಯ ಪ್ರವೇಶ ಮಾಡುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ‌‌‌. "ಹುಡಗಿಯಾದವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಹುಡುಗನನ್ನು ಕಣ್ಣೆತ್ತಿ ನೋಡಲೂ ಬಾರದು. ಹೇಗಾದರೂ ಮಾಡಿ ಇವತ್ತು ಹುಡುಗನನ್ನು ನೋಡಲೇಬೇಕು‌ ಆದರೆ ಬಂದವರಿಗೆ ಅತಿರೇಕವೆನಿಸಿದರೆ?" ಪುಟ ಸಂಖ್ಯೆ3.

ಕೊನೆಗೂ ಹುಡುಗಿ ಹುಡುಗಿಯ ಮನೆಯವರು ಕಾದೂ ಕಾದೂ ಅವರ ಆ ದಿನ‌ ಬರದೆ ಇನ್ನೊಂದು ದಿನ ಬಂದು ನೋಡುವ ಭರವಸೆ ಸಿಕ್ಕಿ ನಿರಾಶೆಯಿಂದ ಹುಡುಗಿ ಕನಲುವುದರೊಂದಿಗೆ ಕತೆ ಮುಕ್ತಾಯಗೊಳ್ಳುತ್ತದೆ ‌ಮುನ್ನುಡಿಕಾರರಾದ ಜಯಪ್ರಕಾಶ ಮಾವಿನಕುಳಿ ಹೇಳುವ ಹಾಗೆ, ಈ ಕಥೆಯಲ್ಲಿ ಆಕೆಯ ಜೀವನದ ಗತಿಗಳನ್ನೂ ಪ್ರತಿಬಿಂಬಿಸುವ ಹಗ್ಗ, ಕೊಡ, ಬಾವಿ ಇವೆಲ್ಲ ನಿಮ್ಮ ಸೂಕ್ಷ್ಮ ಗ್ರಹಿಕೆಯನ್ನು ಮತ್ತು ಸಾಂಕೇತಿಕವಾಗಿ ಹೇಳುವ ಕಥಾಕೌಶಲ್ಯಕ್ಕೆ ಸಾಕ್ಷಿಯಾಗಿದೆ‌.

ಎರಡನೆಯ ಕಥೆ "ದೇವಮ್ಮನ ನಾಳೆಗಳು" ಕುಡುಕನ‌ ಹೆಂಡತಿ ಮಕ್ಕಳ ದುರಂತದ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ‌. ಆಕ್ಸಿಡೆಂಟ್ ಮೂರನೆಯ ಕಥೆ‌. ಈ ಕಥೆ ಆಧುನಿಕ ನಗರದ ಬದುಕಿನ ಚಿತ್ರಣವನ್ನು ಹೂಬೆ ಹೂಬೆಯಾಗಿ ಕೊಡುವುದರ ಜೊತೆಯಲ್ಲಿ ಈ ಗಡಿಬಿಡಿಯ ಅವಸರದ ನಗರದ ಪಯಣದಲ್ಲಿ ನೌಕರನೊಬ್ಬ ತನ್ನ ಮೊದಲ ಸಂಬಳವನ್ನು ಕಿಸೆಯಲ್ಲಿಟ್ಟು ಹಣವನ್ನು ಯಾರ್ಯಾರಿದೆ ಕೊಡಬೇಕು, ಹೇಗೆ ಮನೆಯವರಿಗೆ ಸಂತೋಷಪಡಿಸಬೇಕು ಎಂದು ಲೆಕ್ಕ ಹಾಕುತ್ತ ಮನೆಗೆ ಬರುವಾಗ ಅವನು ಕಿಸೆಗೆ ಕೈ ಹಾಕುವಾಗ ಯಾರೊ ಅವನ ಪರ್ಸನ್ನು ಪಿಕ್ ಪೊಕೆಟ್ ಮಾಡಿರುತ್ತಾರೆ. ಇದೊಂದು ನಗರದಲ್ಲಿ ನಿತ್ಯ ನಡೆಯಬಹುದಾದ ಘಟನೆ‌ ಆದರೆ ಗೋಪಾಲನಿಗೆ ಹಣವನ್ನು ಕಳೆದುಕೊಂಡದ್ದು ಬದುಕಿನಲ್ಲಿ ದೊಡ್ಡ ಅಕ್ಸಿಡೆಂಟ್.

ಮುಂದಿನ ಕಥೆ "ಸಂಬಂಧ" ಇದು ಇನ್ನೊಬ್ಬರ ಏಳ್ಗೆಯನ್ನು ಕಂಡು ಮತ್ಸರದಿಂದ ಗಾಳಿ ಮಾತನ್ನು ಇಲ್ಲ ಸಲ್ಲದ ಚಾಡಿ ಮಾತುಗಳನ್ನು ಸುತ್ತ ಹರಡಿ ತೇಜೋವಧೆ ಮಾಡುವ ವ್ಯಕ್ತಿಗಳು ಸಮಾಜದ ಮುಳ್ಳುಗಳಾಗಿ ಇದ್ದು ಅವರಿಂದಲೆ ಎಷ್ಟೋ ಸಂಬಂಧಗಳು ಮುರಿದು ಹೋಗುತ್ತವೆ‌ ಎಂದು ಈ ಕಥೆ ಕರುಣಾಕರನ್ ನಾಯರ್ ಎಂಬ ದುಷ್ಟ ವ್ಯಕ್ತಿಯ ಪಾತ್ರನಿರೂಪಣೆಯಲ್ಲಿ ವ್ಯಕ್ತವಾಗುತ್ತದೆ‌ ಓರ್ವ ಬಡ ನೌಕರಳ ತೇಜೋವಧೆ ಮಾಡುವುದರಲ್ಲಿ ‌ಕರುಣಾಕರನ್ ನಾಯರ್ ಮೊದ ಮೊದಲು ಯಶಸ್ವಿಯಾದರೂ ಕೊನೆಗೆ ಸತ್ಯ ಗೊತ್ತಾಗಿ ಅವನ ಚಾಡಿ ಮಾತಿಗೆ ಬೆಲೆ ಇಲ್ಲದಂತಾಗುತ್ತದೆ‌.

#ಒಗಟು ಈ ಕಥೆ ತಂತಿ ಇಲಾಖೆಯ ತಪ್ಪು ಸಂದೇಶ ಇಡಿ ಕುಟುಂಬದವರ ಮನಸ್ಸಿನ ನೆಮ್ಮದಿಯನ್ನು ಕೆಡಿಸಿಬಿಡುವ ಘಟನೆಯ ಸುತ್ತ ಕಟ್ಟಿದ ಕಥೆ‌‌ ಇದರಲ್ಲಿ ಹೆಣ್ಣು ಹೆತ್ತವರು ಗಂಡಿನ ಬೀಗರೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಂಡರೂ ಗಂಡಿನ ತಂದೆ ಡೈಮಂಡ್ ನೆಕ್ಲೇಸ್ ಹಾಗೂ ಇನ್ನೂ ಅನೇಕ ವಸ್ತುಗಳನ್ನು ಕೇಳುತ್ತಾರೆ‌ ಇವರಿಬ್ಬರ ನಡುವಣ ಪ್ರತಿಷ್ಠೆಯ ಸಂಘರ್ಷ ತುಂಬ ಸಹಜವಾಗಿ ಮೂಡಿ ಬಂದಿದೆ.

ದ್ವಿಪಾತ್ರದಲ್ಲಿ ಮೇಷ್ಟ್ರು ಈ ಕಥೆ ಇಂದಿನ ಶಿಕ್ಷಣ ಪದ್ಧತಿಯ ಅಪಸವ್ಯಗಳ ಸಂಕಥನವಾಗಿದೆ‌ ಸರಕಾರಿ ಶಾಲೆ ಶಿಕ್ಷಕ ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯುವುದು ತನ್ನ ಉದ್ಯೋಗದ ಸುರಕ್ಷಿತಕ್ಕಾಗಿ‌ ಮಗನನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳಿಸಿರುತ್ತಾನೆ. "#ನಡುಮನೆಗುತ್ತು #ಅಂಗಳದಲ್ಲಿ" ಜಮೀಂದಾರರ ಕೂಲಿಕಾರರ ಶೋಷಣೆ, ಜಮೀಂದಾರರು ಮಾಡಿದ ಒಂದು ಕಾರ್ ಎಕ್ಸಿಡೆಂಟ್ ಕೇಸನ್ನು ಸುರೇಂದ್ರ ಎಂಬ ನಿಯತ್ತಿನಿಂದಕೆಲಸ ಮಾಡಿದ. ವ್ಯಕ್ತಿಯ ಮೇಲೆ ಹಾಕಿ ತಾವು ಪಾರಾಗುವುದು. ಇವನು ಜಮೀಂದಾರರ ವಿರುದ್ದ ದಂಗೆ ಏಳುವ ಕತೆ ತುಂಬ ಮಾರ್ಮಿಕವಾಗಿದೆ. ಸಂಜಯ ಎಂಬ ಸುರೇಂದ್ರನ ತಮ್ಮನಿಗೆ ಇಂಥದ್ದೊಂದು ಕೆಟ್ಟಕನಸು ಅಣ್ಣನ ಬಗ್ಗೆ ಬಿದ್ದು ಅದು ದಿಟವಾಗಿದ್ದುದೆ ಈ ಕಥೆಯ ಸ್ವಾರಸ್ಯ. ಇದು ಸುದೀರ್ಘವಾದ ಕಥೆ‌ ಒಂದು ಕಾದಂಬರಿಗೆ ವಸ್ತುವಿಷಯವಾದೀತು.

#ಕಾರಣಿಕ ಈ ಕಥಾಸಂಕಲನದ ಮಹತ್ವದ ಕಥೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆಚರಿಸುವ ಭೂತಾರಾಧನೆಗೆ ಸಂಬಂಧಪಟ್ಟ ಕಥೆ ಇದು. ನಲ್ಕೆಯವನು ದೈವವನ್ನು ಆಹ್ವಾನಿಸಿಕೊಂಡು ಜನರ ಕಷ್ಟಗಳನ್ನು ಪರಿಹಾರ ಮಾಡುವ ಅಭಯವನ್ನು ಕೊಡುವಾಗ ನಿಷ್ಪಕ್ಷಪಾತವಾಗಿ ಕೊಡುತ್ತದೆ ಎಂಬ ದೃಢ ನಂಬಿಗೆ ಈ ಜಿಲ್ಲೆಗಳ ಜನರ ಗಾಢ ನಂಬಿಕೆ ಮತ್ತು ವಿಶ್ವಾಸ‌. "ಊರಲ್ಲಿ ಕೊಯ್ಲು ಕೊಯ್ಲು ಮುಗಿದು, ಕೆಲಸ ಕಾರ್ಯಗಳಿಗೆ ಆರಾಮವಿರುವ ತಿಂಗಳು ಎಪ್ರಿಲ್. ಆ ತಿಂಗಳ ‌ನಿರ್ದಿಷ್ಟ ದಿನದಂದೇ ಊರಸಮಸ್ತರು ಸೇರಿ ಎರಡು ದಿನದ ಕೋಲವನ್ನು ವಿಜೃಂಭಣೆಯಿಂದಲೇ ಮಾಡಿಸುವುದು ಪದ್ಧತಿ" ಪುಟ ಸಂಖ್ಯೆ 76

ಭೂತ ಅಥವಾ ದೈವವನ್ನು ಆಹ್ವಾನಿಸಿಕೊಂಡ ‌ನಲ್ಕೆಯವನು ತನ್ನ ಸಂಬಂಧಿಕರೆ ಅನ್ಯಾಯ ಮಾಡಿದಾಗ ಅದರಿಂದ ತನ್ನ ಕುಟುಂಬಕ್ಕಾಗುವ ಹಾನಿಯನ್ನೂ ಲಕ್ಷ್ಯಿಸದೆ, ಇಲ್ಲಿನ ನಲ್ಕೆಯವನೊಬ್ಬನು ನ್ಯಾಯ ತೀರ್ಮಾನ ಕೊಡುವುದು ಈ ಕತೆಯ ತಿರುಳಾಗಿದೆ‌. ಈ ಕಥೆಗೆ ಸಾಂಸ್ಕೃತಿಕ ಮಹತ್ವವೂ ಇದೆ. ಭೂತಾರಾಧನೆಯ ಎಲ್ಲ ವಿವರಗಳೂ ಈ ಕಥೆಯಲ್ಲಿ ಸೇಂದ್ರೀಯವಾಗಿ ಅಡಕವಾಗಿದ್ದು ಆ ವಿವರಗಳೆಲ್ಲ ಕಥೆಯ ಅವಿಭಾಜ್ಯ ಅನಿವಾರ್ಯ ಅಂಶಗಳೇ ಆಗುತ್ತವೆ‌‌. #ಹಾಗೊಂದು #ಪ್ರಸಂಗದೊಳಗೆ ತುಂಬ ಸ್ವಾರಸ್ಯಕರ ಕಥೆಯಾಗಿದೆ‌. ಹಳ್ಳಿಯಲ್ಲಿ ಒಂದು ದಿನ ಕಳೆಯಬೇಕೆಂಬ ನಿರೂಪಕನ ಬಯಕೆಗೆ ಗೋವಿಂದನೆಂಬ ಗೆಳೆಯ ಇಂಬು ಕೊಡುತ್ತಾನೆ‌‌. ಗೋವಿಂದ ಆ ನೆಪದಲ್ಲಿ ‌ತಾನು ವಿವಾಹವಾಗ ಬಯಸುವ ಸೋದರ ಮಾವನ ಮಗಳನ್ನು ನೋಡುವ ಕಾರಣಕ್ಕಾಗಿಯೂ ಅಲ್ಲಿಗೆ ಬಂದಿರುತ್ತಾನೆ. ಆದರೆ ಆ ಹುಡುಗಿ ನಿರೂಪಕನಲ್ಲಿಗೆ ಬಂದು ತನಗೆ ಗೋವಿಂದನನ್ನು ಮದುವೆಯಾಗುವ ಇಚ್ಛೆ ಇಲ್ಲ‌, ಕೊಡಗಿನ ಓರ್ವ ಹುಡುಗನನ್ನು ಪ್ರೀತಿಸುತ್ತಿದ್ದೇನೆ‌ ಹೇಗಾದರೂ ಮಾಡಿ ಈ ವಿವಾಹವನ್ನು ತಪ್ಪಿಸಿ ಎಂದು ಕೇಳಿಕೊಳ್ಳುತ್ತಾಳೆ. ಅಂತೆಯೆ ಗೋವಿಂದನಲ್ಲಿ ಈ ಹುಡುಗಿ ನಿನಗೆ ತಕ್ಕವಳಲ್ಲ ಎಂದು ಹೇಳಿ ಮದುವೆಯನ್ನು ತಪ್ಪಿಸುತ್ತಾನೆ‌. ಈ ಕಥೆಯ ವಿಶೇಷತೆ ಇರುವುದು ಕಥೆಗಾರನ ಹಳ್ಳಿಯ ವಿಶಿಷ್ಟ ವರ್ಣನೆಯಲ್ಲಿ. ನಿಜಕ್ಕೂ ಈ ಕಥಾ ಸಂಕಲನ ಪ್ರತಿಭಾವಂತ ಪರ್ತ್ಯುತ್ಪನ್ನ ಮತಿಯ ಕಥಾಗಾರನ ಕೌಶಲ್ಯಗಳಿಂದಲೆ ಮೂಡಿ ಬಂದಿದೆ‌. ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠ ಎಂದು ಧ್ವನಿಸುತ್ತವೆ‌.

- ಉದಯಕುಮಾರ ಹಬ್ಬು

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ

06-10-2024 ಬೆಂಗಳೂರು

"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದ...

ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ

06-10-2024 ಬೆಂಗಳೂರು

“ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ. ಇಲ್ಲಿನ ಕಥೆಗಳನ್ನು ಬರೆದ ಕಾಲಮಾನದಲ್ಲಿ ಮುಂದೆ ಮುಂದೆ ಬಂದಂತೆಲ್ಲ...