ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನದ ನುಡಿಗಳಿಂದ ವಿನೀತನಾಗಿದ್ದೇನೆ


"'ಪಂಪ ಪ್ರಶಸ್ತಿ' ಎನ್ನುವುದು ಕನ್ನಡ ಸಾಹಿತಿಯೊಬ್ಬರಿಗೆ ಕರ್ನಾಟಕ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ. ಗೌರವದ ದೃಷ್ಟಿಯಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಇದರಿಂದ ದೊಡ್ಡ ಪ್ರಶಸ್ತಿ ಇಲ್ಲ," ಎನ್ನುತ್ತಾರೆ ಬಿ.ಎ. ವಿವೇಕ ರೈ. ಅವರು ತಮಗೆ ಸಂದ ‘ಪಂಪ ಪ್ರಶಸ್ತಿ’ ಕುರಿತು ಬರೆದ ಕೃತಜ್ಞತೆಯ ನುಡಿಗಳು.

ಕರ್ನಾಟಕ ಸರಕಾರವು ಕೊಡಮಾಡುವ 2024-25 ರ 'ಪಂಪ ಪ್ರಶಸ್ತಿ' ಯನ್ನು ಘೋಷಣೆ ಮಾಡಿದ ಕ್ಷಣದಿಂದ ಕನ್ನಡ ನಾಡಿನ ಒಳಗಿನಿಂದ ಮತ್ತು ಹೊರಗಿನಿಂದ ನಿಮ್ಮ ಸಹಿತ ನೂರಾರು ಹಿರಿಯರು, ಸಾಹಿತಿಗಳು, ಸ್ನೇಹಿತರು, ವಿದ್ಯಾರ್ಥಿಗಳು ಫೋನ್ ಮಾಡಿ, ಸಂದೇಶಗಳನ್ನು ಕಳುಹಿಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಮನೆಗೆ ಬಂದು ವೈಯಕ್ತಿಕವಾಗಿ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನದ ನುಡಿಗಳಿಂದ ವಿನೀತನಾಗಿದ್ದೇನೆ. ನಿಮಗೆ 'ಕೃತಜ್ಞತೆಗಳು' ಎಂದು ಹೇಳುವ ಮಾತು ತೀರಾ ಸಾಮಾನ್ಯ ಆಗುತ್ತದೆ. ನಿಮ್ಮ ಎಲ್ಲಾ ಶುಭದ ನುಡಿಗಳಿಗೆ ನಾನು ತಲೆಬಾಗಿ ವಂದಿಸುತ್ತೇನೆ.

'ಪಂಪ ಪ್ರಶಸ್ತಿ' ಎನ್ನುವುದು ಕನ್ನಡ ಸಾಹಿತಿಯೊಬ್ಬರಿಗೆ ಕರ್ನಾಟಕ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ. ಗೌರವದ ದೃಷ್ಟಿಯಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಇದರಿಂದ ದೊಡ್ಡ ಪ್ರಶಸ್ತಿ ಇಲ್ಲ. ಕರ್ನಾಟಕ ಸರಕಾರ 1987ರಲ್ಲಿ 'ಪಂಪ ಪ್ರಶಸ್ತಿ,' ಯ ಪರಂಪರೆ ಆರಂಭ ಮಾಡಿತು. ಅದರ ಮೊದಲ ಪ್ರಶಸ್ತಿಯನ್ನು 1987ರಲ್ಲಿ ಪಡೆದವರು 'ಕುವೆಂಪು' ಅವರು. 38ಮಾಡಿದ ನಿಯಮ ಎಂದರೆ ಹಿರಿಯ ಕನ್ನಡ ಸಾಹಿತಿಯ ಒಂದು ಮಹತ್ವದ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಒಂದು ವರ್ಷ 'ಸೃಜನಶೀಲ' ಕೃತಿಗೆ, ಮರುವರ್ಷ 'ಸಂಶೋಧನೆ- ವಿಮರ್ಶೆ' ಯ ಕೃತಿಗೆ ಪ್ರಶಸ್ತಿ ಕೊಡುವುದು. ಈ ಸಂಪ್ರದಾಯದಂತೆ ಕುವೆಂಪು ಅವರ 'ಶ್ರೀ ರಾಮಾಯಣ ದರ್ಶನಂ', ಮರುವರ್ಷ ತೀನಂ ಶ್ರೀಕಂಠಯ್ಯ ಅವರ 'ಭಾರತೀಯ ಕಾವ್ಯಮೀಮಾಂಸೆ' ಗೆ ಪಂಪ ಪ್ರಶಸ್ತಿ ದೊರೆಯಿತು. ಇದೇ ಶಿವರಾಮ ಕಾರಂತ, ಸಂ ಶಿ ಭೂಸನೂರಮಠ, ಪು ತಿ ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣಭಟ್ಟ( ವಿಚಾರ ಪ್ರಪಂಚ), ಕೆ ಎಸ್ ನರಸಿಂಹ ಸ್ವಾಮಿ( ದುಂಡುಮಲ್ಲಿಗೆ) ವರೆಗೆ ಸೃಜನಶೀಲ ಮತ್ತು ಸಂಶೋಧನೆ- ವಿಮರ್ಶೆ ಕೃತಿಗಳಿಗೆ ಆವರ್ತನ ರೂಪದಲ್ಲಿ ಪಂಪ ಪ್ರಶಸ್ತಿ ಕೊಡಲಾಯಿತು. ಬಳಿಕ ಈ ಪದ್ಧತಿಯನ್ನು ಬದಲಿಸಿ ಹಿರಿಯ ಸಾಹಿತಿಯ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ 1995 ರಲ್ಲಿ ಎಂ ಎಂ ಕಲಬುರ್ಗಿ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪರಂಪರೆ ಮುಂದುವರಿದು ಕಳೆದ ವರ್ಷ ಸೃಜನಶೀಲ ಸಾಹಿತ್ಯ ಕೊಡುಗೆಯನ್ನು ಪರಿಗಣಿಸಿ ನಾ ಡಿಸೋಜ ಅವರಿಗೆ 37ನೆಯ ಪಂಪ ಪ್ರಶಸ್ತಿಯನ್ನು ಕೊಡಲಾಯಿತು. ಈಗ ಯ ಪಂಪ ಪ್ರಶಸ್ತಿಯನ್ನು ಸಂಶೋಧನೆ- ವಿಮರ್ಶೆ ಸಹಿತ ಕನ್ನಡದ ಕೊಡುಗೆಗಾಗಿ 2024-25ನೇ ಸಾಲಿನಲ್ಲಿ ನನಗೆ ಕೊಡುವ ನಿರ್ಧಾರವನ್ನು ಕರ್ನಾಟಕ ಸರಕಾರ ಪ್ರಕಟಿಸಿದೆ.ಪಂಪ ಪ್ರಶಸ್ತಿಯ ಆಯ್ಕೆಯನ್ನು ಹಿರಿಯ ಸಾಹಿತಿಯೊಬ್ಬರ ಅಧ್ಯಕ್ಷತೆಯ ತಜ್ಞ ಸಾಹಿತಿಗಳು ಸದಸ್ಯರು ಆಗಿರುವ ಸಮಿತಿ ಮಾಡುತ್ತದೆ.ಇದರ ಶಿಫಾರಸನ್ನು ಕರ್ನಾಟಕ ಸರಕಾರ ಯಥಾವತ್ತಾಗಿ ಸ್ವೀಕರಿಸುತ್ತದೆ. ಸರಕಾರದ ಹಸ್ತಕ್ಷೇಪ ಇರುವುದಿಲ್ಲ.ಹಂಪನಾ ಅವರಿಗೆ ಪಂಪ ಪ್ರಶಸ್ತಿ ದೊರೆತಾಗ ಅದರ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಇದರ ಪಾರದರ್ಶಕತೆಯನ್ನು ನಾನು ಮನಗಂಡಿದ್ದೇನೆ.

'ಪಂಪ ಪ್ರಶಸ್ತಿ' ಗೂ ಪಂಪ ಕವಿಯ ಅಧ್ಯಯನ ಅಧ್ಯಾಪನಕ್ಕೂ ನೇರ ಸಂಬಂಧ ಇಲ್ಲ. ಕನ್ನಡದಲ್ಲಿ ಸಂಶೋಧನೆ- ವಿಮರ್ಶೆ- ಅಧ್ಯಯನ-ಅಧ್ಯಾಪನ : ಎಲ್ಲವೂ ಇಲ್ಲಿ ಗಣನೆಗೆ ಬರುತ್ತವೆ. ಆದರೆ ನನ್ನ ಪಾಲಿಗೆ ಕನ್ನಡದ ಈ ಕೆಲಸಗಳ ಜೊತೆಗೆ ಪಂಪನ ಕಾವ್ಯಗಳ ಅಧ್ಯಯನ ಮತ್ತು ಅಧ್ಯಾಪನ ಜೊತೆಗೂಡಿದ್ದು ನನ್ನ ಪಾಲಿನ ವಿದ್ವತ್ ಭಾಗ್ಯ.ನಾನು ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ 1968ರಲ್ಲಿ ಮೊದಲ ವರ್ಷದ ಎಂಎ ವಿದ್ಯಾರ್ಥಿ ಆಗಿದ್ದಾಗ ನನಗೆ ಆದಿಪುರಾಣ ಮತ್ತು ಪಂಪಭಾರತ ಎರಡೂ ಸಂಪೂರ್ಣ ಪಠ್ಯಗಳಾಗಿದ್ದವು.ಪ್ರೊ.ಎಸ್ ವಿ ಪರಮೇಶ್ವರ ಭಟ್ಟರು 'ಆದಿಪುರಾಣ' ವನ್ನು, ಎಚ್ ಜೆ ಲಕ್ಕಪ್ಪ ಗೌಡರು 'ಪಂಪಭಾರತ' ವನ್ನು ಪಾಠ ಮಾಡಿದರು. ಮುಂದೆ ಅದೇ ಮಂಗಳಗಂಗೋತ್ರಿಯ ಕನ್ನಡ ವಿಭಾಗದಲ್ಲಿ ಅಧ್ಯಾಪಕನಾಗಿ ಆದಿಪುರಾಣ ಮತ್ತು ಪಂಪಭಾರತ ಕಾವ್ಯಗಳಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶ ದೊರೆಯಿತು. ಮುಂದೆ 1980ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆದ ಬಳಿಕವೂ ಪಂಪಭಾರತವನ್ನು ಪಾಠಮಾಡುವ ಅವಕಾಶವನ್ನು ನಾನು ಉಳಿಸಿಕೊಂಡೆ.ಬಳಿಕ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಕುಲಪತಿ ಆಗಿ ಹೋದಾಗ, ಅಲ್ಲಿ ಕನ್ನಡ ಎಂಎ ಸಂಯೋಜಿತ ಪದವಿಗೆ ಪಂಪಭಾರತದ ಉತ್ತರಾರ್ಧ ಭಾಗ ಪಠ್ಯವಾಗಿತ್ತು. ವಿದ್ಯಾರ್ಥಿಗಳ ಕೋರಿಕೆಯಂತೆ ಪ್ರತೀ ವಾರ ಅದನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡಿದೆ.ಮುಂದೆ 2009ರಲ್ಲಿ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗಕ್ಕೆ ಅತಿಥಿ.ಪ್ರಾಧ್ಯಾಪಕನಾಗಿ ಹೋಗಿ ಅಲ್ಲಿ ಬೇಸಗೆ ಶಿಬಿರಗಳನ್ನು ನಡೆಸಿದಾಗ, ಶಾಸ್ತ್ರೀಯ ಕನ್ನಡ ಪಠ್ಯ ಗಳಲ್ಲಿ ಪಂಪಭಾರತವನ್ನು ಪಾಠ ಮಾಡುವ ಅವಕಾಶವನ್ನು ಕಲ್ಪಿಸಿಕೊಂಡೆ. ಜರ್ಮನಿಯಲ್ಲಿ ಪಂಪನ ಕಾವ್ಯಗಳ ಬಗ್ಗೆ ಉಪನ್ಯಾಸಗಳನ್ನು ಕೊಡುವ ಸಂದರ್ಭಗಳು ದೊರಕಿದವು.

ನಾನು ಮಾಡಿದ ಕನ್ನಡದ ಅಧ್ಯಯನ ಅಧ್ಯಾಪನ ಸಂಶೋಧನೆಯ ಕೆಲಸಗಳಿಗೆ ಆಡುಂಬೊಲವಾದದ್ದು ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ (1970-80) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ (1980-2004).ಈ ಕನ್ನಡ ವಿಭಾಗದ ನನ್ನ ಎಲ್ಲಾ ಸಹೋದ್ಯೋಗಿಗಳ ನೆರವು ಪ್ರೋತ್ಸಾಹವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಹಾಗೆಯೇ ಮಂಗಳಗಂಗೋತ್ರಿಯ ಕನ್ನಡ ವಿಭಾಗದಲ್ಲಿ 34 ವರ್ಷಗಳ ಕಾಲ ನನ್ನ ವಿದ್ಯಾರ್ಥಿಗಳು ತೋರಿಸಿದ ಪ್ರೀತಿ, ಅಭಿಮಾನ ,ನನ್ನ ಪಾಠಗಳಿಗೆ ಅವರು ತುಂಬಿದ ಪ್ರತಿಕ್ರಿಯೆ: ಹೀಗೆ ನನ್ನ ವಿದ್ಯಾರ್ಥಿಗಳು ನನ್ನ ದೊಡ್ಡ ಬೌದ್ಧಿಕ ಆಸ್ತಿ ಆಗಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಹಂಪಿ - ನನ್ನ ಕನ್ನಡದ ಅರಿವನ್ನು ವಿಸ್ತರಿಸಿದೆ. ಕನ್ನಡ ಸಂಶೋಧನೆಯ ವಿಶ್ವದ ಹೊಸ ಬಾಗಿಲುಗಳನ್ನು ತೆರೆದು ನಾನು ಬಹುಮಖಿಯಾಗಿ ಕನ್ನಡ ಸಂಶೋಧನೆಯ ಕೆಲಸಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ಅಲ್ಲಿನ‌ ಅಧ್ಯಾಪಕರ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯವರ ಸಹಕಾರದಿಂದ ನನ್ನ ಅವಧಿಯಲ್ಲಿ ಕನ್ನಡ ಸಂಬಂಧಿ ಯೋಜನೆಗಳು ವಿದ್ವತ್ ವಲಯದ ಮೆಚ್ಚುಗೆಗೆ ಪಾತ್ರವಾಗಿವೆ.

ಜರ್ಮನಿಯ ವ್ಯೂರ್ತ್ಸ್ ಬುರ್ಗ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕನಾಗಿ ನನಗೆ ದೊರೆತ ಅವಕಾಶದಿಂದ ಅಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಲು ಸಾಧ್ಯ ಆದದ್ದು ನನಗೆ ಧನ್ಯತೆಯ ಅಂಶ. ಇವೆಲ್ಲವೂ ಸಾಧ್ಯ ಆದದ್ದು ಆಗ ವಿಭಾಗದ ಮುಖ್ಯಸ್ಥರಾಗಿ ಇದ್ದ ಪ್ರೊ.ಡಾ.ಹೈಡ್ರೂನ್ ಬ್ರೂಕ್ನರ್ ಅವರ ಸ್ನೇಹ, ಮಾರ್ಗದರ್ಶನ ಮತ್ತು ಕನ್ನಡ ಪ್ರೀತಿಯಿಂದ. ಅಲ್ಲಿನ ಜರ್ಮನ್ ವಿದ್ಯಾರ್ಥಿಗಳನ್ನು ಗಮನಿಸಿಕೊಂಡು ಪ್ರೊ.ಸಿ.ಎನ್ .ರಾಮಚಂದ್ರನ್ ಅವರ ಜೊತೆಗೆ ಪ್ರಕಟಿಸಿದ ' Classical Kannada Poetry and Prose ' ' Medieval Kannada Literature' ಇವು ನನಗೆ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ತಂದುಕೊಟ್ಟಿತು. ಈ ಸಂದರ್ಭದಲ್ಲಿ ಪ್ರೊ.ಸಿ ಎನ್ ರಾಮಚಂದ್ರನ್ ಅವರ ಮಾರ್ಗದರ್ಶನ ಮತ್ತು ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಹಾಗೆಯೇ ತೇಜಸ್ವಿ ಅವರ 'ಕರ್ವಾಲೋ' ಕಾದಂಬರಿಯನ್ನು ಕನ್ನಡದಿಂದ ಜರ್ಮನ್ ಭಾಷೆಗೆ ನೇರವಾಗಿ ಅನುವಾದ ಮಾಡುವಾಗ ನನಗೆ ಜೊತೆಯಾದ ಡಾ.ಕತ್ರಿನ್ ಬಿಂದರ್ ಅವರ ಸಹಯೋಗ ಸಹಕಾರ ಅಪಾರವಾದದ್ದು.

ಹೀಗೆ ಸುಮಾರು 54 ವರ್ಷಗಳ ಕಾಲ ನನ್ನ ಕನ್ನಡದ ನಡೆ ನನ್ನ ಮಿತಿಯಲ್ಲಿ ಸಾಗಿದೆ.ನನ್ನ ಸಾಹಿತ್ಯ ರಚನೆಗಳು ಸಂಶೋಧನೆ, ಸಂಸ್ಕೃತಿ ವಿಮರ್ಶೆ, ಪ್ರಾದೇಶಿಕ ಅಧ್ಯಯನ, ಜಾನಪದ ಶೋಧ, ಅನುವಾದ, ಅಂಕಣ ಬರಹ: ಹೀಗೆಲ್ಲ ಹಂಚಿಹೋಗಿವೆ. ಆದರೆ ಜೀವಮಾನದ ಮಹತ್ವದ ಒಂದು ಕೃತಿ ನನ್ನಿಂದ ಬಂದಿಲ್ಲ ಎನ್ನುವ ಅರಕೆಯ ಭಾವ ನನ್ನನ್ನು ಕಾಡುತ್ತಿದೆ.

ಪಂಪನ ಕಾವ್ಯಗಳನ್ನು ಒಂದು ಬಹುಮುಖಿ ಅಧ್ಯಯನ ಗ್ರಂಥವೊಂದನ್ನು ರಚಿಸುವ ಬಯಕೆ ಅನೇಕ ವರ್ಷಗಳಿಂದ ಹಾಗೆಯೇ ಉಳಿದಿದೆ. ಈಗಲಾದರೂ ಅದನ್ನು ಮಾಹೇಶ್ವರ ನಿಷ್ಠೆಯಿಂದ ಮಾಡಿ ಮುಗಿಸಬೇಕು. ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ದೈಹಿಕ ಪಲ್ಲಟದ ಜೊತೆಗೆ ಬದುಕುವ ಸಮಾಲಿನ ನಡುವೆ ಈಗ ದೊರೆತ ಪಂಪ ಪ್ರಶಸ್ತಿ ಮತ್ತು ಅದನ್ನು ನೀವೆಲ್ಲರೂ ಸಂಭ್ರಮಿಸಿರುವುದು ನನಗೆ ಹೊಸ ಚೈತನ್ಯವನ್ನು ಕೊಟ್ಟಿದೆ.

MORE FEATURES

ಉತ್ತರ ಕರ್ನಾಟಕದ ಅಮಾಯಕ ಹೆಣ್ಮಕ್ಕಳನ್ನು ಪ್ರತಿನಿಧಿಸುತ್ತಾ ನಿಲ್ಲುತ್ತವೆ

16-03-2025 ಬೆಂಗಳೂರು

"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂ...

ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು

16-03-2025 ಬೆಂಗಳೂರು

"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...

ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು

16-03-2025 ಬೆಂಗಳೂರು

"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...